ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.
ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.
ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ ಸಂಬಂಧವಾದ ಕಾರ್ಯಗಳು ನೋಡಿದ್ದು ಶಿಫಾಉ ಮತ್ತು ಪರಿಚಾರಕಿ ಉಮ್ಮು ಐಮನ್ ಆಗಿದ್ದಾರೆ.ಗರ್ಭಕಾಲದಲ್ಲಿ ಮತ್ತು ಪ್ರಸವ ಕಾಲದಲ್ಲಿ ಸಾಮಾನ್ಯವಾಗಿ ಸ್ತ್ರೀಯರಿಗೆ ಉಂಟಾಗುವ ನೋವು ಯಾತನೆಗಳು ಯಾವುದೂ ಕೂಡ ಆಮಿನ ಬೀವಿ ರ.ಅ ರವರಿಗೆ ಉಂಟಾಗಲಿಲ್ಲ.
ನೆಬಿ ಸ.ಅ ರವರ ಜನನ ವಿವರ ತಿಳಿದು ಬಂದು ಮುಟ್ಟಿದ ಅಬ್ದುಲ್ ಮುತ್ತಲಿಬ್ ಮಗುವಿಗೆ ಮುಹಮ್ಮದ್ ಎಂದು ನಾಮಕರಣ ಮಾಡಿದರು.ಅಂದು ಚಾಲ್ತಿಯಲ್ಲಿದ್ದ ಹೆಸರಾಗಿರಲಿಲ್ಲ ಅದು.ಅಬ್ದುಲ್ ಮುತ್ತಲಿಬ್ ಅಲ್ಲಾಹನ ನಿರ್ದೇಶ ಪ್ರಕಾರವಾಗಿದೆ ಆ ಹೆಸರು ಕರೆದದ್ದು.ನೆಬಿ ಸ.ಅ ರವರ ಜನನ ಸಮಯದಲ್ಲಿ ಹಲವು ಅದ್ಭುತ ಘಟನೆಗಳು ಸಂಭವಿಸಿದವು.ನೆಬಿ ಸ.ಅ ( ಮಗು ) ಜನಿಸಿ ಬಂದದ್ದು ಸುಜೂದ್ ಮಾಡುವ ರೀತಿಯಲ್ಲಾಗಿತ್ತು.ತಕ್ಷಣ ಸುಜೂದಿನಿಂದ ತಲೆ ಎತ್ತಿ ತನ್ನ ಎರಡು ಕೈ ಬೆರಳುಗಳನ್ನು ಆಕಾಶಕ್ಕೆ ಎತ್ತಿತು.ಮಗುವಿನಿಂದ ಹೊರಹೊಮ್ಮಿದ ಪ್ರಕಾಶದಿಂದ ಸಿರಿಯಾ ದೇಶದ ಅರಮನೆಗಳು ಗೋಚರಿಸಿದವು.ವಿಗ್ರಹಗಳು ತಲೆ ಕೆಳಗಾಗಿ ಬಿದ್ದವು.ಕಿಸ್ರಾದ ಅರಮನೆಗಳು ಅಲುಗಾಡಿದವು.ಅದರಿಂದ ಹದಿನಾಲ್ಕು ಬಾಲ್ಕನಿಗಳು ಉರುಳಿ ಬಿದ್ದವು.ತ್ವಬರಿಯ್ಯಃ,ಸಾವ ಎಂಬ ಎರಡು ನದಿಗಳು ಬತ್ತಿ ಹೋದವು.ಸಾವಿರ ವರುಷಗಳಿಂದ ಉರಿಯುತ್ತಿದ್ದ ಪರ್ಶಿಯನ್ನರ ಕೆಟ್ಟುಹೋಗದ ಅಗ್ನಿಕುಂಡ ಕೆಟ್ಟುಹೋಯಿತು.
ಜನನದ ಏಳನೇ ದಿನ ಅಬ್ದುಲ್ ಮುತ್ತಲಿಬ್ ಅಖೀಖಃ ಬಲಿದಾನ ಮಾಡಿದರು.ಕುರೈಶೀ ಪ್ರಮುಖರನ್ನು ಆಹ್ವಾನಿಸಿ ಗಮ್ಮತ್ತು ಮಾಡಿದರು.ಮಗುವಿಗೆ ಮುಹಮ್ಮದ್ ಎಂದು ನಾಮಕರಣ ಮಾಡಿದ್ದೇನೆಂದು ಹೇಳಿದಾಗ ಅವರಿಗೆ ಆಶ್ಚರ್ಯವಾಯಿತು.ಅಬ್ದುಲ್ ಮುತ್ತಲಿಬ್ ಹೇಳಿದರು ; ಅಲ್ಲಾಹನು ಆಕಾಶದಲ್ಲಿಯೂ ಸ್ರಷ್ಟಿಗಳು ಭೂಮಿಯಲ್ಲಿಯೂ ಅವನನ್ನು ( ಮಗುವನ್ನು ) ಪ್ರಶಂಸೆ ಮಾಡಬೇಕೆಂಬುದು ನನ್ನ ಅಭಿಲಾಷೆಯಾಗಿದೆ.
ಶೈಶವ ಕಾಲ.......
ನೆಬಿ ಸ.ಅ ರವರ ಶೈಶವ ಕಾಲ ಹಲವಾರು ಘಟನೆಗಳಿಗೆ ಸಾಕ್ಷಿಯಾದ ಕಾಲವಾಗಿದೆ.ಶಿಶುಗಳಿಗೆ ಮೊಲೆಯುಣಿಸಲು ಗ್ರಾಮೀಣ ಸ್ತ್ರೀಯರಿಗೆ ವಹಿಸಿಕೊಡುವುದು ಅರಬಿಗಳ ಸಂಪ್ರದಾಯವಾಗಿತ್ತು.ಅದನುಸರಿಸಿ ಮಗುವಿಗೆ ಮೊಲೆಯುಣಿಸಲು ಬನೂ ಸಅದ್ ಗೋತ್ರದ ಹಲೀಮ ಬೀವಿ ರ.ಅ ರವರಿಗೆ ವಹಿಸಿಕೊಡಲಾಯಿತು.ಮಗುವನ್ನು ಸ್ವೀಕರಿಸಿದ ಬಳಿಕ ಅವರಿಗೆ ಬರ್ಕತ್ತುಗಳು ವರ್ಧಿಸಿದವು.ಅದ್ಭುತಗಳು ಗೋಚರಿಸಿದವು.ಆ ಅದ್ಭುತ ಶಿಶು ಹಲೀಮ ಬೀವಿ ರ.ಅ ರವರ ಬಲಭಾಗದ ಮೊಲೆ ಹಾಲನ್ನು ಮಾತ್ರ ಕುಡಿದವು.ಎಡಭಾಗದ ಮೊಲೆಯನ್ನು ಹಲೀಮ ಬೀವಿ ರ.ಅ ರವರ ಮಗುವಿಗೆ ಬಿಟ್ಟುಕೊಟ್ಟಿತು.ಮಗುವಿನ ಆಗಮನದ ಬಳಿಕ ಹಲೀಮ ಬೀವಿ ರ.ಅ ರವರ ಆಡುಗಳು ದಷ್ಟಪುಷ್ಟವಾದವು.ಮಗುವಿನ ಸ್ಪರ್ಶದಿಂದ ರೋಗಗಳು ಶಮನವಾದವು.ಮಗು ಬಲುಬೇಗನೆ ಬೆಳೆಯಿತು ಮತ್ತು ನಡೆದಾಡಲು ಶುರುವಿಟ್ಟಿತು.ಮಾತನಾಡಲು ಪ್ರಾರಂಭಿಸಿತು.ನೈಪುಣ್ಯತೆ ಪಡೆದವು.ಸಮಯ ಸಿಕ್ಕಾಗಲೆಲ್ಲಾ ತಾಯಿ ಆಮಿನ ಬೀವಿ ರ.ಅ ರವರನ್ನು ಸಂದರ್ಶಿಸಲು ಹಲೀಮ ಬೀವಿ ರ.ಅ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರು.ಅಬ್ದುಲ್ ಮುತ್ತಲಿಬ್ ಸಮಯ ಸಿಕ್ಕಾಗಲೆಲ್ಲಾ ಮಗುವನ್ನು ಕಾಣಲು ಹಲೀಮ ಬೀವಿ ರ.ಅ ರವರ ಮನೆಗೂ ಬರುತ್ತಿದ್ದರು.ಮೊಲೆ ಹಾಲುಣಿಸುವಿಕೆಯ ಪ್ರಾಯ ಕಳೆದಾಗ ಹಲೀಮ ಬೀವಿ ರ.ಅ ಮಗುವನ್ನು ತಾಯಿ ಆಮಿನ ಬೀವಿ ರ.ಅ ರವರಿಗೆ ಒಲ್ಲದ ಮನಸ್ಸಿನಿಂದ ಬಿಟ್ಟು ಕೊಟ್ಟು ಬರಲು ಹೋದರು.ಅವರು ಮತ್ತೆಯೂ ಮಗುವನ್ನು ಪರಿಪಾಲಿಸಿ ಪೋಷಿಸುವ ಅಭಿಲಾಷೆ ಪ್ರಕಟಿಸಿದರು.ಮಕ್ಕಾದಲ್ಲಿ ಅಂದು ಪ್ಲೇಗ್ ರೋಗ ವ್ಯಾಪಕವಾಗಿ ಹರಡಿದ ಕಾಲವಾಗಿತ್ತು.ಆದುದರಿಂದ ತಾಯಿ ಆಮಿನ ಬೀವಿ ರ.ಅ ಮಗುವನ್ನು ಪುನಃ ಹಲೀಮ ಬೀವಿ ರ.ಅ ರವರ ಅಭಿಲಾಷೆಯಂತೆ ಪೋಷಿಸಲು ಬಿಟ್ಟುಕೊಟ್ಟರು........
ಇದರ ನಂತರವಾಗಿದೆ ಮಗು ಮಹಾ ಒಂದು ಘಟನೆಗೆ ವಿಧೇಯವಾಯಿತು....
ಏನದು ಆ ಘಟನೆ.....
ಹಲೀಮ ಬೀವಿ ರ.ಅ ರವರ ಪರಿಪಾಲನೆಯಲ್ಲಿ ಬೆಳೆಯುತ್ತಿದ್ದ ಮಗುವಿನ ( ನೆಬಿ ಸ.ಅ ರವರ ) ಹ್ರದಯ ಶಸ್ತ್ರಕ್ರಿಯೆ ನಡೆಸಿ ಶೈತಾನನ ಅಂಶವನ್ನು ಹೊರತೆಗೆದ ಘಟನೆ ನಡೆಯಿತು.
ಮಗುವಾಗಿದ್ದ ನೆಬಿ ಸ.ಅ ಮತ್ತು ಹಲೀಮ ಬೀವಿ ರ.ಅ ರವರ ಮಗು ಇಮ್ರಾನ್ ಮನೆ ಹತ್ತಿರದ ಬಯಲಲ್ಲಿ ಆಡು ಮೇಯಿಸುತ್ತಿದ್ದಾಗ ಬಿಳಿ ವಸ್ತ್ರಧಾರಿಗಳಾದ ಎರಡು ಮಲಕುಗಳು ಬಂದು ಮಗುವನ್ನು ಹಿಡಿದು ಬಟಾ ಬಯಲಲ್ಲಿ ಮಲಗಿಸಿ ಎದೆಯನ್ನು ಸೀಳಿ ಹ್ರದಯವನ್ನು ಶಸ್ತ್ರಕ್ರಿಯೆ ನಡೆಸಿ ಶೈತಾನನ ಅಂಶವನ್ನು ಹೊರತೆಗೆದು ಹ್ರದಯವನ್ನು ಶುಚಿಗೊಳಿಸಿದರು.ವಿವರ ತಿಳಿದು ಹಲೀಮ ಬೀವಿ ರ.ಅ ಮತ್ತು ಅವರ ಪತಿ ಓಡಿ ಬಂದರು.ಗಾಬರಿಗೊಂಡು ಮುಖದ ವರ್ಣ ಬದಲಾಗಿದ್ದ ಮಗುವಿನೊಂದಿಗೆ ನಡೆದ ಸಂಭವದ ಕುರಿತು ಕೇಳಿದರು.ಮಗು ಸಂಭವವನ್ನು ಸವಿಸ್ತಾರವಾಗಿ ವಿವರಿಸಿತು.ನಡೆದ ಘಟನೆ ಪೈಶಾಚಿಕ ತೊಂದರೆಯಾಗಿರಬಹುದೆಂಬ ಊಹೆಯಿಂದ ಹಲೀಮ ಬೀವಿ (ರ.ಅ) ಮಗುವನ್ನು ತಾಯಿ ಆಮಿನ ಬೀವಿ ರ.ಅ ರವರ ಬಳಿ ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನು ವಿವರಿಸಿದಾಗ ತಾಯಿ ಆಮಿನ ಬೀವಿ ರ.ಅ ಹೇಳಿದರು.ಏನು ಹೇಳುತ್ತಿದ್ದೀರಿ ಹಲೀಮ..ನನ್ನ ಮಗು ಸಾಮಾನ್ಯ ಮಗುವಲ್ಲ.ನನ್ನ ಮಗುವಿಗೆ ಪಿಶಾಚಿಯ ಉಪಟಳ ಸಂಭವಿಸಲಿಕ್ಕಿಲ್ಲ.ನಾನು ಗರ್ಭಿಣಿಯಾಗಿದ್ದಾಗ ಹಾಗು ಪ್ರಸವದ ಸಮಯದಲ್ಲಿ ಹಲವಾರು ಅದ್ಭುತ ಘಟನೆಗಳನ್ನು ನಡೆದಿದೆ.ಆದುದರಿಂದ ನೀವು ಭಯಪಡದಿರಿ..ನೀವು ನಿಶ್ಚಿಂತೆಯಿಂದ ಮರಳಿಹೋಗಿ...ಇದನ್ನು ಆಲಿಸಿದ ಹಲೀಮ ಬೀವಿ ರ.ಅ ಮಗುವನ್ನು ತಾಯಿ ಆಮಿನ ಬೀವಿ ರ.ಅ ರವರಿಗೆ ಒಪ್ಪಿಸಿ ಮರಳಿ ಹೋದರು.ಆಗ ಮಗುವಿಗೆ ನಾಲ್ಕು ವರ್ಷ ಪ್ರಾಯವಾಗಿತ್ತು..(ನಂತರದ ಕಾಲದಲ್ಲಿ ಹಲೀಮ ಬೀವಿ ರ.ಅ ಮತ್ತು ಅವರ ಪತಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.)
ಮಗು ಆಮಿನ ಬೀವಿ ರ.ಅ ರವರ ಲಾಲನೆ ಪೋಷಣೆಯಲ್ಲಿ ಬೆಳೆಯತೊಡಗಿತು.ಮಗುವಿಗೆ ಆರು ವರ್ಷ ಪ್ರಾಯವಾದಾಗ ಒಂದು ದಿನ ತಂದೆ ಅಬ್ದುಲ್ಲಾಹ್ (ರ.ಅ) ರವರ ಖಬರ್ ಸಂದರ್ಶನಕ್ಕೆಂದು ಆಮಿನ ಬೀವಿ ರ.ಅ ಪರಿಚಾರಕಿ ಉಮ್ಮುಐಮನ್ ರ.ಅ ರವರೊಂದಿಗೆ ಮಗುವನ್ನು ಮದೀನಕ್ಕೆ ಕರೆದು ಕೊಂಡು ಹೋದರು.ಮದೀನದಲ್ಲಿ ಖಬರ್ ಸಂದರ್ಶಿಸಿ ಮರಳಿ ಬರುವಾಗ ಮಕ್ಕಾ ಮದೀನದ ನಡುವೆ ಇರುವ ಅಬವಾಹ್ ಎಂಬ ಸ್ಥಳದಲ್ಲಿ ತಾಯಿ ಆಮಿನ ಬೀವಿ ರ.ಅ ವಫಾತಾದರು.ಉಮ್ಮುಐಮನ್ ಮಗುವನ್ನು ಕರೆದುಕೊಂಡು ಬಂದು ಅಬ್ದುಲ್ ಮುತ್ತಲಿಬರ ಸುಪರ್ದಿಗೆ ಮುಟ್ಟಿಸಿದರು.ಬಳಿಕ ಮಗು ಅಜ್ಜನ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತಿದ್ದಂತೆ ಅಬ್ದುಲ್ ಮುತ್ತಲಿಬ್ ಕೂಡಾ ಇಹಲೋಕ ತ್ಯಜಿಸಿದರು.ಆಗ ಮಗುವಿಗೆ ಎಂಟು ವರ್ಷ ಪ್ರಾಯವಾಗಿತ್ತು.ಬಳಿಕ ಪಿತ್ರ ಸಹೋದರನಾದ ಅಬೂತಾಲಿಬ್ ಮಗುವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.ಅವರು ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿ,ಶ್ರದ್ಧೆಯಿಂದ ನೆಬಿ ಸ.ಅ ರವರನ್ನು ಬೆಳೆಸಿದರು.
ನೆಬಿ ಸ.ಅ ರವರಿಗೆ ಹನ್ನೆರಡು ವರ್ಷವಾದಾಗ ಅಬೂತಾಲಿಬ್ ಸಿರಿಯಾ ದೇಶಕ್ಕೆ ವ್ಯಾಪಾರಕ್ಕೆ ಹೊರಟರು.ಗಾಢ ಪ್ರೀತಿಯಿಂದ ನೆಬಿ ಸ.ಅ ರವರನ್ನು ಬೇರ್ಪಟ್ಟು ಜೀವಿಸುವುದು ಅಬೂತಾಲಿಬರಿಗೆ ಕಷ್ಟಸಾಧ್ಯವಾದ ಕಾರಣ ತನ್ನ ಜತೆ ಸಿರಿಯಾಕ್ಕೆ ಕರೆದುಕೊಂಡು ಹೋದರು.ಅವರು ಬುಸ್ರಾ ಪಟ್ಟಣಕ್ಕೆ ತಲುಪಿದರು.ಅಲ್ಲಿ ಬಹೀರ ಎಂಬ ಕ್ರೈಸ್ತ ಪುರೋಹಿತ ತನ್ನ ಆರಾಧನಾಲಯದಲ್ಲಿ ಧ್ಯಾನ ನಿರತನಾಗಿದ್ದನು.ವ್ಯಾಪಾರ ಸಂಘದಲ್ಲಿದ್ದ ಓರ್ವ ಮಗುವಿಗೆ ಮಾತ್ರ ಆಕಾಶದಿಂದ ಮೋಡ ನೆರಳು ನೀಡುತ್ತಿದ್ದುದ್ದನ್ನು ಗಮನಿಸಿದ ಬಹೀರ ಆ ಮಗುವಿನ ಕುರಿತು ತಿಳಿಯಲಿಕ್ಕೋಸ್ಕರ ಭೋಜನಕೂಟವನ್ನು ಏರ್ಪಡಿಸಿ ಅವರಿಗೆ ಆಹ್ವಾನ ನೀಡಿದನು.ನೆಬಿ ಸ.ಅ ಚಿಕ್ಕ ಪ್ರಾಯದ ಬಾಲಕನಾಗಿದ್ದ ಕಾರಣ ಬಹೀರ ಏರ್ಪಡಿಸಿದ ಭೋಜನಕೂಟಕ್ಕೆ ವ್ಯಾಪಾರ ಸಂಘ ನೆಬಿ ಸ.ಅ ರವರನ್ನು ಕರೆದುಕೊಂಡು ಹೋಗಲಿಲ್ಲ.ಒಂದು ಕಡೆ ನೆಬಿ ಸ.ಅ ರವರನ್ನು ಕುಳ್ಳಿರಿಸಿ ಅವರು ಭೋಜನಕೂಟಕ್ಕೆ ಹೋದರು.ವ್ಯಾಪಾರ ಸಂಘದೊಂದಿಗೆ ಬಾಲಕನನ್ನು ಕಾಣದಾದಾಗ ಬಹೀರ ಅವರೊಂದಿಗೆ ವಿಚಾರಿಸಿ ಆ ಬಾಲಕನನ್ನೂ ಕರೆದುಕೊಂಡು ಬರುವಂತೆ ತಿಳಿಸಿದನು.ಬಹೀರನ ಇಚ್ಛೆಯಂತೆ ಬಾಲಕನಾದ ನೆಬಿ ಸ.ಅ ರವರನ್ನೂ ಭೋಜನಕೂಟಕ್ಕೆ ಅಬೂತಾಲಿಬ್ ಕರೆದು ಕೊಂಡು ಬಂದರು.ಆಹಾರ ಸೇವನೆಯ ಬಳಿಕ ಬಹೀರ ಬಾಲಕನೊಂದಿಗೆ ಮಾತನಾಡಿದನು.ಬಾಲಕನಿಂದ ಸಂಪೂರ್ಣ ಸ್ಥಿತಿ ವಿವರ,ಮಾಹಿತಿಗಳನ್ನು ಅರಿತ ಬಹೀರ ಈ ಬಾಲಕ ಎಲ್ಲರೂ ನಿರೀಕ್ಷಿಸುತ್ತಿರುವ ಅಂತ್ಯ ಪ್ರವಾದಿಯಾಗಿದ್ದಾರೆ ಎಂದು ತಿಳಿಯಿತು.ಬಾಲಕನನ್ನು ಜೂದರಿಂದ ( ಯಹೂದಿಗಳಿಂದ ) ಜಾಗ್ರತೆ ವಹಿಸಲು ಅಬೂತಾಲಿಬರಿಗೆ ಬಹೀರ ನಿರ್ದೇಶಿಸಿದನು.ಅಬೂತಾಲಿಬ್ ಆ ವರ್ಷ ಸಿರಿಯಾದಲ್ಲಿ ವ್ಯಾಪಾರವನ್ನು ಬೇಗನೇ ಮುಗಿಸಿ ನೆಬಿ ಸ.ಅ ರೊಂದಿಗೆ ಮಕ್ಕಾಕ್ಕೆ ಮರಳಿದರು.
ಲೋಕಾನುಗ್ರಹಿ ನೆಬಿ ಸ.ಅ ರವರ ವಿವಾಹ ಸಂಭ್ರಮ.
ಖುವೈಲಿದರ ಮಗಳು ಖದೀಜ ರ.ಅ ಕುಲೀನೆಯೂ,ವ್ಯಾಪಾರಸ್ಥೆಯೂ ಆಗಿದ್ದರು.ಆಳುಗಳನ್ನು ವೇತನ ನಿಗದಿಪಡಿಸಿ ವ್ಯಾಪಾರಕ್ಕಾಗಿ ಕಳುಹಿಸಿ ಕೊಡುವುದು ಅವರ ರೂಢಿಯಾಗಿತ್ತು.ಒಮ್ಮೆ ತನ್ನ ದಾಸನಾದ ಮೈಸರ ನೊಂದಿಗೆ ಸಿರಿಯಾ ದೇಶಕ್ಕೆ ವ್ಯಾಪಾರಕ್ಕೆ ಹೋಗಲು ನೆಬಿ ಸ.ಅ ರವರನ್ನು ಆಹ್ವಾನಿಸಿದರು.ಅಬೂತಾಲಿಬ್ ಆಗ ತೀರಾ ಬಡವರಾಗಿದ್ದರು.ಅವರ ಬಡತನ,ಸಂಕಷ್ಟ ಸಡಿಲೀಕರಿಸುವ ಉದ್ದೇಶದೊಂದಿಗೆ ನೆಬಿ (ಸ.ಅ) ಖದೀಜ ರ.ಅ ರವರ ಆಹ್ವಾನವನ್ನು ಸ್ವೀಕರಿಸಿದರು.ಅಂತೆಯೇ ನೆಬಿ ಸ.ಅ ಮತ್ತು ಮೈಸರ ವ್ಯಾಪಾರಕ್ಕಾಗಿ ಹೊರಟರು.ಅವರು ಬುಸ್ರಾ ಎಂಬ ಪಟ್ಟಣಕ್ಕೆ ತಲುಪಿದಾಗ ನಸ್ತೂರ ಎಂಬ ಪಾದ್ರಿಯನ್ನು ಕಾಣಲು ಸಾಧ್ಯವಾಯಿತು.ಪರಿಚಯ ವಿನಿಮಯದ ಬಳಿಕ ಮೈಸರನ ಮುಖಾಂತರ ನೆಬಿ ಸ.ಅ ರವರ ಶರೀರ ವಿಶೇಷತೆಗಳನ್ನು ಕೇಳಿ ತಿಳಿದುಕೊಂಡ ಪಾದ್ರಿ ನಿನ್ನ ಜತೆಯಲ್ಲಿರುವ ಯುವಕ ಪ್ರವಾದಿಯಾಗಿದ್ದಾರೆ ಎಂದು ಮೈಸರನಿಗೆ ತಿಳಿಸಿದನು.ಅವರ ಯಾತ್ರೆಯಲ್ಲಿ ಮೋಡ ನೆಬಿ ಸ.ಅ ರವರಿಗೆ ನೆರಳು ನೀಡಿದ ಮತ್ತು ಆ ಸಲದ ವ್ಯಾಪಾರದಲ್ಲಿ ನಿರೀಕ್ಷೆಗಿಂತಲೂ ಮಿಗಿಲು ಲಾಭಗಳಿಸಿದ್ದು ಮೈಸರನನ್ನು ಆಶ್ಚರ್ಯ ಚಕಿತಗೊಳಿಸಿತು.ಈ ಸಂಗತಿಯನ್ನು ಮೈಸರ ತನ್ನ ಯಜಮಾನಿಯಾದ ಖದೀಜ ರ.ಅ ರವರಿಗೆ ತಿಳಿಸಿದನು.ನೆಬಿ ಸ.ಅ ರವರು ಒಬ್ಬ ಅಸಾಮಾನ್ಯ ಮಹಾನ್ ಆಗಿದ್ದಾರೆ ಎಂದು ತಿಳಿದ ಖದೀಜ ರ.ಅ ವಿವಾಹಾಲೋಚನೆಯೊಂದಿಗೆ ನೆಬಿ ಸ.ಅ ರವರನ್ನು ಸಮೀಪಿಸಿದರು.ನೆಬಿ (ಸ.ಅ) ಖದೀಜ ರ.ಅ ರವರ ಮನದ ಇಂಗಿತವನ್ನು ಸ್ವೀಕರಿಸಿದರು.ಖದೀಜ ರ.ಅ ರವರ ಮನೆಯಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು.ಖದೀಜ ರ.ಅ ರವರ ಪಿತ್ರ ಸಹೋದರನಾದ ಅಮ್ರುಬ್ನು ಅಸದ್ ವಿವಾಹ ನಡೆಸಿಕೊಟ್ಟರು.ಅಂದು ನೆಬಿ ಸ.ಅ ರವರಿಗೆ 25 ವರ್ಷ ಪ್ರಾಯವೂ ಖದೀಜ ರ.ಅ ರವರಿಗೆ 40 ವರ್ಷ ಪ್ರಾಯವೂ ಆಗಿತ್ತು.
ಸಾಮೂಹಿಕ ಜೀವನ.
ನೆಬಿ ಸ.ಅ ಸಂಶುದ್ಧನಾಗಿ ಬೆಳೆದರು.ಅಲ್ಲಾಹನ ಸಂರಕ್ಷಣೆಯಲ್ಲಿ ಉತ್ತಮ ಸ್ವಭಾವಿಯೂ ಉತ್ತಮ ಗುಣ ನಡತೆಯುಳ್ಳವರಾಗಿಯೂ ಜೀವಿಸಿದರು.ಸತ್ಯಸಂಧತೆ,ವಾಗ್ದಾನ ಪಾಲಿಸುವಿಕೆ,ಕ್ರತಜ್ಞತಾ ಮನೋಭಾವ,ಲಜ್ಜೆ,ತಾಳ್ಮೆ,ಸಹನೆ,ನ್ಯಾಯ ನೀತಿ,ಧೀರತೆ,ವಿಶ್ವಾಸಾರ್ಹತೆ,ಮಾನವೀಯತೆ ಮೊದಲಾದ ಉತ್ತಮ ನಡತೆಗಳು ನೆಬಿ ಸ.ಅ ರವರಲ್ಲಿ ಮೇಲೈಸಿತ್ತು.ಪರಿಶ್ರಮಿಸಿ ಗಳಿಸಿದುದರಿಂದ ಜೀವಿಸಿದರು.ಆಡುಗಳನ್ನು ಮೇಯಿಸಿಯೂ ವ್ಯಾಪಾರದಲ್ಲಿ ತೊಡಗಿಸಿಕೊಂಡೂ ಬದುಕಿದರು.ಬಡ ನಿರ್ಗತಿಕರನ್ನು ಸಹಾಯಿಸಲು,ಕುಟುಂಬ ಸಂಬಂಧ ಬೆಳೆಸಲು,ಯಾತನಾ ಬದುಕನ್ನು ಅನುಭವಿಸುವರ ಆಶಾಕಿರಣವಾಗಲು,ವಿಪತ್ತುಗಳು ಸಂಭವಿಸಿದಾಗ ಸಹಾಯ ತಲುಪಿಸಲು ಮುಂದೆ ಇದ್ದರು.ಹೀಗೆ ನೆಬಿ ಸ.ಅ ರವರಿಗೆ ಸತ್ಯವಂತ,ನಂಬಿಗಸ್ಥ ಮೊದಲಾದ ಬಿರುದುನಾಮಗಳು ಲಭಿಸಿದವು.ಜಾಹಿಲಿಯ್ಯ (ತಿಳುವಳಿಕೆ ಇಲ್ಲದ) ಕಾಲದ ಕೆಡುಕುಗಳಿಂದ ಸಂಪೂರ್ಣವಾಗಿ ಮುಕ್ತನಾಗಿ ಜೀವಿಸಿದರು.ಮದ್ಯಪಾನ,ವಿಗ್ರಹರಾಧನೆ ಮುಂತಾದ ಕೆಡುಕುಗಳಿಂದ ದೂರ ನಿಂತರು.ಉತ್ಸವಗಳಲ್ಲಿ ಭಾಗವಹಿಸುವುದೋ ನಗ್ನತೆ ( ಔರತ್ ) ತೋರ್ಪಡಿಸುವುದೋ ಮಾಡಲಿಲ್ಲ.ಸರ್ವ ಕೆಡುಕುಗಳಿಂದ ನೆಬಿ ಸ.ಅ ರವರನ್ನು ಅಲ್ಲಾಹು ಸಂರಕ್ಷಿಸಿದನು.(ಇದಕ್ಕೊಂದು ಉದಾಹರಣೆ ) ನೆಬಿ ಸ.ಅ ಚಿಕ್ಕ ಬಾಲಕನಾಗಿದ್ದಾಗ ಒಂದು ವಿವಾಹ ಸತ್ಕಾರ ಕೂಟಕ್ಕೆ ರಾತ್ರಿ ಹೋದರು.ಅಲ್ಲಿ ಇಸ್ಲಾಮಿನಲ್ಲಿ ನಿಷಿದ್ಧವಿರುವ ಕಾರ್ಯಕ್ರಮ ಅಚಾನಕ್ ಪ್ರಾರಂಭವಾಯಿತು.ವೀಣೆ ಊದಲು ಪ್ರಾರಂಭವಾಯಿತು.ಅದಾಗಲೇ ಅಲ್ಲಾಹು ನೆಬಿ ಸ.ಅ ರವರಿಗೆ ಗಾಢವಾದ ನಿದ್ರೆಯನ್ನು ಬರಿಸಿ ಹರಾಮಾದ ಕಾರ್ಯ ಕೇಳುವುದರಿಂದ ಸಂರಕ್ಷಿಸಿದನು.ನೆಬಿ ಸ.ಅ ಮತ್ತೆ ಎಚ್ಚರವಾದದ್ದು ಬೆಳಿಗ್ಗೆ ಸೂರ್ಯೋದಯದ ಬಳಿಕವಾಗಿದೆ.
ಪವಿತ್ರ ಕಾಬಾ ಪುನರ್ ನಿರ್ಮಾಣ ವೇಳೆ ಜನರು ತಮ್ಮ ತಮ್ಮ ಲುಂಗಿಯನ್ನು ಕಳಚಿ ಅದನ್ನು ಮಡಚಿ ತಲೆ ಮೇಲಿಟ್ಟು ಕಲ್ಲುಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು.ಲುಂಗಿಯನ್ನು ಕಳಚಿದಾಗ ಔರತ್ ಕಾಣುತ್ತಿತ್ತು.ಅದು ಅವರಿಗೆ ದೊಡ್ಡ ವಿಷಯವಾಗಿರಲಿಲ್ಲ.ಪಿತ್ರ ಸಹೋದರ ಅಬ್ಬಾಸ್ ರ.ಅ ರವರ ನಿರ್ದೇಶ ಪ್ರಕಾರ ನೆಬಿ ಸ.ಅ ಲುಂಗಿ ಕಳಚಲು ರೆಡಿಯಾದಾಗ ಪ್ರಜ್ಞೆ ತಪ್ಪಿ ಬಿದ್ದರು.ಇದರಿಂದ ಕಲ್ಲು ಹೊರುವ ಕೆಲಸ ಇಲ್ಲವಾಯಿತು.ಕಲ್ಲು ಹೊರಲು ಲುಂಗಿ ಕಳಚುವುದು ಇಲ್ಲವಾಯಿತು.ನಗ್ನತೆ ಗೋಚರಿಸುವುದೂ ಇಲ್ಲವಾಯಿತು.
ಕಅಬಃ ಪುನರ್ ನಿರ್ಮಾಣ.
ಇಬ್ರಾಹಿಮ್ ನೆಬಿ ಅ.ಸ ಮತ್ತು ಪುತ್ರ ಇಸ್ಮಾಇಲ್ ನೆಬಿ ಅ.ಸ ಕಾಬಾ ಪುನರ್ ನಿರ್ಮಾಣಗೊಳಿಸಿದ ಬಳಿಕ ನೆಬಿ ಸ.ಅ ರವರ ಕಾಲದವರೆಗೆ ಹಾಗೆನೇ ಇತ್ತು.ಇದರ ಮಧ್ಯೆ ಅಗ್ನಿ ಬಾಧೆ ಮತ್ತು ಜಲ ಪ್ರವಾಹದ ಕಾರಣ ಪವಿತ್ರ ಕಾಬಾ ಅಲ್ಲಲ್ಲಿ ಜರಿದು ಬಿದ್ದಿತ್ತು.ಕಾಬಾದ ಗೋಡೆಗಳು ಹಾಳಾಗಿದ್ದವು.ನೆಬಿ ಸ.ಅ ರವರಿಗೆ ಈಗ ಪ್ರಾಯ 35.
ಕುರೈಶಿಗಳು ಪವಿತ್ರ ಕಾಬಾವನ್ನು ಪುನರ್ ನಿರ್ಮಿಸಲು ತೀರ್ಮಾನಿಸಿದರು.ಅದಕ್ಕಾಗಿ ಶುದ್ಧವಾದ ಹಣವನ್ನು ಮಾತ್ರ ಶೇಖರಿಸಿದರು.ಹದಿನೆಂಟು ಮೊಳದಷ್ಟು ಕಾಬಾವನ್ನು ಎತ್ತರಿಸಿ ಕಟ್ಟಿದರು.ಆದರೆ ಇಬ್ರಾಹಿಮ್ ನೆಬಿ ಅ.ಸ ನಿರ್ಮಿಸಿದ ಫೌಂಡೇಶನ್ ಸಂಪೂರ್ಣವಾಗಿ ಪೂರ್ತೀಕರಿಸಲು ಹಣ ಸಾಕಾಗಲಿಲ್ಲ.ಆದುದರಿಂದ ಹಿಜ್ರ್ ಇಸ್ಮಾಇಲನ್ನು ಕಾಬಾ ಕಟ್ಟಡದಿಂದ ಹೊರ ಭಾಗದಲ್ಲಾಗುವಂತೆ ಮಾಡಿ ನಿರ್ಮಾಣ ಕಾರ್ಯ ಪೂರ್ತಿಗೊಳಿಸಿದರು.ಅಲ್ಲಿ ನಿಶಾನೆಗಾಗಿ ಒಂದು ಚಿಕ್ಕ ಗೋಡೆಯನ್ನು ನಿರ್ಮಿಸಿದರು.
ಕಾಬಾದಲ್ಲಿರುವ ಹಜರುಲ್ ಅಸ್ವದ್ ಅದರ ಯಥಾಸ್ಥಾನದಲ್ಲಿರಿಸಬೇಕಾದ ವೇಳೆ ಗೋತ್ರಗಳ ನಾಯಕರೆಡೆಯಲ್ಲಿ ಭಾರೀ ತರ್ಕ ಉಂಟಾಯಿತು.ತರ್ಕ ಉಲ್ಫಣಿಸುವ ಸಾಧ್ಯತೆಯನ್ನು ಮನಗಂಡ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಯಾದ ಅಬೂ ಉಮಯ್ಯ ರವರ ನಿರ್ದೇಶ ಸ್ವೀಕರಿಸಿ ಪ್ರಥಮವಾಗಿ ಹಾದು ಬರುವ ವ್ಯಕ್ತಿ ಯಾರೋ ಅವರನ್ನು ಈ ವಿಷಯದಲ್ಲಿ ತೀರ್ಪುಗಾರನನ್ನಾಗಿಸುವ ಎಂದು ತೀರ್ಮಾನಿಸಿದರು.ಅಷ್ಟರಲ್ಲಿ ನೆಬಿ (ಸ.ಅ) ಪ್ರಥಮವಾಗಿ ಹಾದು ಬಂದರು.ಎಲ್ಲರಿಗೂ ತ್ರಪ್ತಿಯಾಯಿತು.ನೆಬಿ ಸ.ಅ ತನ್ನ ಶಾಲನ್ನು ನೆಲದಲ್ಲಿ ಹಾಸಿ ಹಜರುಲ್ ಅಸ್ವದ್ ಕಲ್ಲನ್ನು ಅದರಲ್ಲಿ ಇಟ್ಟರು.ಪ್ರತೀ ಗೋತ್ರಗಳ ನಾಯಕರೊಂದಿಗೆ ಆ ಶಾಲಿನ ಪ್ರತಿಯೊಂದು ತುದಿಯನ್ನು ಹಿಡಿದು ಎತ್ತಲು ಸೂಚಿಸಿದರು.ಅವರು ಎತ್ತಿ ಕೊಂಡು ಬಂದ ಪವಿತ್ರ ಹಜರುಲ್ ಅಸ್ವದ್ ಕಲ್ಲನ್ನು ನೆಬಿ ಸ.ಅ ತನ್ನ ಪವಿತ್ರ ಕೈಗಳಿಂದ ಅದರ ಯಥಾ ಸ್ಥಾನದಲ್ಲಿ ಸ್ಥಾಪಿಸಿದರು.ಇದರಿಂದ ಯುದ್ಧದ ಸನಿಹಕ್ಕೆ ತಲುಪಿದ ಭಾರೀ ತರ್ಕವೊಂದನ್ನು ಸುಲಳಿತವಾಗಿ ಇತ್ಯರ್ಥ ಮಾಡಿದರು ಅಲ್ಲದೆ ತನ್ನ ಪವಿತ್ರ ಕೈಗಳಿಂದ ಹಜರುಲ್ ಅಸ್ವದನ್ನು ಪವಿತ್ರ ಕಾಬಾಲಯದಲ್ಲಿ ಸ್ಥಾಪಿಸಿದರು.
ನುಬುವ್ವತ್ ಮತ್ತು ರಿಸಾಲತ್..
ನೆಬಿ ಸ.ಅ ರವರಿಗೆ 40 ವರ್ಷ ಪೂರ್ತಿಯಾಯಿತು.ಪ್ರವಾದಿ ಸ.ಅ ನೆಬಿಯಾಗಿಯೂ ರಸೂಲಾಗಿಯೂ ಆಯ್ಕೆಗೊಳ್ಳಲು ಸಮಯ ಸನಿಹವಾಯಿತು.ನೆಬಿ ಸ.ಅ ರವರಿಗೆ ಮಕ್ಕಾದಲ್ಲಿರುವ ಕಲ್ಲುಗಳು ಮರಗಳು ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್ ಎಂದು ಸಲಾಂ ಹೇಳಲು ಪ್ರಾರಂಭಿಸಿದವು.ನೆಬಿ ಸ.ಅ ರವರಿಗೆ ಕಾಣಲ್ಪಡುವ ಕನಸುಗಳು ಸತ್ಯವಾಗಿ ಗೋಚರಿಸ್ಪಡುತ್ತಿತ್ತು.ಇವುಗಳೆಲ್ಲವೂ ನೆಬಿ ಸ.ಅ ರವರಿಗೆ ಅಲ್ಲಾಹನ ಭಾಗದಿಂದ ದಿವ್ಯ ಸಂದೇಶ ಸಿಗಲಿರುವ ಸ್ಪಷ್ಟ ಮುನ್ಸೂಚನೆಯ ಪ್ರಾರಂಭ ಹಂತವಾಗಿತ್ತು.ಆರು ತಿಂಗಳುಗಳ ಕಾಲ ಇದು ಮುಂದುವರಿಯಿತು.ಬಳಿಕ ನೆಬಿ ಸ.ಅ ರವರಿಗೆ ಏಕಾಂತ ಜೀವನ ತುಂಬಾನೇ ಇಷ್ಟವಾಯಿತು.ಜನರಿಂದ ದೂರವಿರಲು ಬಯಸಿದರು.ಹಿರಾ ಪರ್ವತದ ( ಈಗ ಪರ್ವತ ಜಬಲುನ್ನೂರ್ ಎಂಬ ಹೆಸರಲ್ಲಿ ಪ್ರಸಿದ್ಧಿಯಾಗಿದೆ ) ತುದಿಯಲ್ಲಿರುವ ಹಿರಾ ಗುಹೆಯಲ್ಲಿ ಅಲ್ಲಾಹನ ಆರಾಧನೆಯಲ್ಲಿ ತಲ್ಲೀನರಾದರು.ಹಾಗಿರುವಾಗ ರಮಳಾನ್ ತಿಂಗಳ ಹದಿನೇಳು ಸೋಮವಾರ ಜಿಬ್ರೀಲ್ ಅ.ಸ ಹಿರಾ ಗುಹೆಯಲ್ಲಿ ನೆಬಿ ಸ.ಅ ರವರ ಸಮೀಪ ಪ್ರತ್ಯಕ್ಷರಾದರು.ಜಿಬ್ರೀಲ್ ಅ.ಸ ಹೇಳಿದರು : ಇಖ್ರಹ್ ( ಓದಿರಿ ).ಇಬಾದತ್ ನಲ್ಲಿ ತಲ್ಲೀನರಾಗಿದ್ದ ನೆಬಿ ಸ.ಅ ಹೇಳಿದರು : ನನಗೆ ಓದಲು ಗೊತ್ತಿಲ್ಲ.ಆಗ ಜಿಬ್ರೀಲ್ ಅ.ಸ ನೋವು ಉಂಟಾಗುವ ರೀತಿಯಲ್ಲಿ ಗಟ್ಟಿಯಾಗಿ ನೆಬಿ ಸ.ಅ ರವರನ್ನು ಎರಡು ಕೈಗಳಿಂದ ಸನಿಹ ಎಳೆದು ಅಪ್ಪಿ ಹಿಡಿದರು.ಬಳಿಕ ಬಿಟ್ಟು ಬಿಟ್ಟರು.ಮತ್ತೆ ಜಿಬ್ರೀಲ್ ಅ.ಸ ಹೇಳಿದರು : ಇಖ್ರಹ್ ( ಓದಿರಿ ).ನೆಬಿ ಸ.ಅ ಹೇಳಿದರು : ನನಗೆ ಓದಲು ಗೊತ್ತಿಲ್ಲ.ಜಿಬ್ರೀಲ್ ಅ.ಸ ಮತ್ತೆ ಗಟ್ಟಿಯಾಗಿ ಅಪ್ಪಿ ಹಿಡಿದರು.ಬಿಟ್ಟ ಬಳಿಕ ಪುನಃ ಹೇಳಿದರು : ಇಖ್ರಹ್ ( ಓದಿರಿ ).ನೆಬಿ ಸ.ಅ ಹೇಳಿದರು : ನನಗೆ ಓದಲು ಗೊತ್ತಿಲ್ಲ.ಮೂರನೇ ಸಲ ನೆಬಿ ಸ.ಅ ರವರನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಬಿಟ್ಟ ಬಳಿಕ ಜಿಬ್ರೀಲ್ ಅ.ಸ ಅಲ್ಲಾಹನ ಪ್ರಥಮವಾದ ದಿವ್ಯ ಸಂದೇಶ ( ವಹ್ಯ್ ) ಓದಿ ಕೊಟ್ಟರು.
اقرأ باسم ربك الذي خلق.خلق الإنسان من علق.إقرأ وربك الأكرم.الذي علم بالقلم.علم الإنسان ما لم يعلم.
ಇದು ಕುರಾನ್ ಅವತೀರ್ಣದ ಆರಂಭವಾಗಿತ್ತು.ಅಂದು ನೆಬಿ ಸ.ಅ ರವರಿಗೆ ನಲ್ವತ್ತು ವರ್ಷ ಆರು ತಿಂಗಳು ಆರು ದಿವಸ ಪ್ರಾಯವಾಗಿತ್ತು.ನೆಬಿ ಸ.ಅ ರವರಿಗೆ ಲಭಿಸಿದ ಮಹೋನ್ನತ ನುಬುವ್ವತಿನ ಪ್ರಥಮ ದಿವ್ಯ ಸಂದೇಶದ ಭಾರವನ್ನು ಹೊರಲಾಗದೆ ತೀವ್ರ ಆಯಾಸ ಪ್ರಯಾಸವನ್ನು ಅನುಭವಿಸುತ್ತಾ ಭಯದೊಂದಿಗೆ ಹಿರಾ ಪರ್ವತದ ಗುಹೆಯಿಂದ ಮನೆಯ ಕಡೆ ವೇಗ ವೇಗವಾಗಿ ಚಲಿಸಿದರು.ನನ್ನ ಮೇಲೆ ಹೊದಿಕೆ ಹಾಸು,ನನ್ನ ಮೇಲೆ ಹೊದಿಕೆ ಹಾಸು ಎಂದು ಪ್ರಿಯ ಪತ್ನಿ ಖದೀಜ ಬೀವಿ ರ.ಅ ರವರಲ್ಲಿ ನಡುಗುವ ಧ್ವನಿಯಲ್ಲಿ ಹೇಳಿದರು.ಅವರು ನೆಬಿ ಸ.ಅ ರವರ ಮೇಲೆ ಹೊದಿಕೆ ಹಾಸಿದರು.ಭಯ ನೀಗಿದ ನಂತರ ಖದೀಜ ಬೀವಿ ರ.ಅ ರವರೊಂದಿಗೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದರು.ಆಗ ಖದೀಜ ರ.ಅ ಹೇಳಿದರು : ಅಲ್ಲಾಹನಾಣೆ ಸತ್ಯ..ಅಲ್ಲಾಹು ತಮ್ಮನ್ನು ಕೈ ಬಿಡಲ್ಲ..ತಾವು ಕುಟುಂಬ ಸಂಬಂಧವನ್ನು ಬೆಳೆಸುತ್ತೀರಿ.ಯಾತನಾಮಯ ಬದುಕನ್ನು ಅನುಭವಿಸುವವರ ಆಶಾ ಕಿರಣವಾಗಿದ್ದೀರಿ.ಇಲ್ಲದವರಿಗೆ ಸಹಾಯ ನೀಡುತ್ತೀರಿ.ಅತಿಥಿಗಳನ್ನು ಸತ್ಕರಿಸುತ್ತೀರಿ.ವಿಪತ್ತುಗಳು ಸಂಭವಿಸಿದರೆ ಸಹಾಯ ಸಹಕಾರ ತಲುಪಿಸುತ್ತೀರಿ..ಪ್ರಿಯ ಪತ್ನಿ ಖದೀಜ ರ.ಅ ರವರ ಸಾಂತ್ವನದ ಮಾತು ಕೇಳಿ ಪ್ರವಾದಿ ಸ.ಅ ರವರಿಗೆ ತುಂಬಾ ಸಮಾಧಾನವಾಯಿತು.
ಬಳಿಕ ಖದೀಜ ( ರ.ಅ ) ನೆಬಿ ಸ.ಅ ರವರನ್ನು ಕರೆದುಕೊಂಡು ತನ್ನ ಪಿತ್ರ ಸಹೋದರನ ಮಗನಾದ ವರಖತುಬ್‍ನು ನೌಫಲ್ ರನ್ನು ಸಮೀಪಿಸಿದರು.ಅವರು ತೌರಾತ್ ಮತ್ತು ಇಂಜೀಲ್ ಅರಿತವರಾಗಿದ್ದರು.ಹಿರಾ ಗುಹೆಯಲ್ಲಿ ನಡೆದ ಘಟನೆಯ ಕುರಿತು ಖದೀಜ ರ.ಅ ರವರಿಂದ ಕೇಳಿ ತಿಳಿದುಕೊಂಡ ನಂತರ ವರಖತುಬ್ನು ನೌಫಲ್ ಹೇಳಿದರು : ಸಂಶಯವೇ ಇಲ್ಲ.ಅದು ಮೂಸಾ ನೆಬಿ ಅ.ಸ ರವರ ಬಳಿ ಬಂದ ಮಲಕ್ ಆಗಿದೆ.ಹಿರಾ ಗುಹೆಯಲ್ಲಿ ನಿಮ್ಮನ್ನು ಭೇಟಿಯಾದದ್ದು ಅಲ್ಲಾಹನ ಮಲಕ್ ಆಗಿದ್ದಾರೆ.ನಿಮಗೆ ಓದಿಕೊಟ್ಟದ್ದು ಅಲ್ಲಾಹನ ದಿವ್ಯ ಸಂದೇಶ ( ವಹ್ಯ್ ) ಆಗಿದೆ.ನೀವು ಪ್ರವಾದಿಯಾಗಿದ್ದೀರಿ.ಕೆಲವು ಕಾಲದ ಬಳಿಕ ನಿಮ್ಮ ಜನತೆ ನಿಮ್ಮನ್ನು ಮಕ್ಕಾದಿಂದ ಹೊರಗೆ ಹಾಕಲಿದ್ದಾರೆ.ಅಂದು ನಾನಿದ್ದರೆ ?? ( ವರಖತುಬ್ನು ನೌಫಲ್ ಈ ಮಾತು ಹೇಳುವ ಸಂದರ್ಭದಲ್ಲಿ ವಯಸ್ಸಾಗಿದ್ದರು ) ಆಗ ನೆಬಿ ಸ.ಅ ಆಶ್ಚರ್ಯದಿಂದ ಕೇಳಿದರು : ನನ್ನ ನಾಡಿನ ಜನ ನನ್ನನ್ನು ಹೊರ ಹಾಕುವರೇ ??!!
ವರಖತುಬ್ನು ನೌಫಲ್ ಹೇಳಿದರು : ಪ್ರವಾದಿಯಾಗಿ ಆಯ್ಕೆಯಾದವರು ಎಲ್ಲರೂ ಶತ್ರುತ್ವಕ್ಕೆ ವಿಧೇಯರಾಗಿದ್ದಾರೆ.ಎಲ್ಲ ಪ್ರವಾದಿಗಳಿಗೂ ಶತ್ರುಗಳು ಇದ್ದರು. ( ವರಖತುಬ್ನು ನೌಫಲ್ ಕೆಲವು ವರ್ಷದ ಬಳಿಕ ಮರಣ ಹೊಂದಿದರು.ನೆಬಿ ಸ.ಅ ರವರ ಮತ್ತು ಇಸ್ಲಾಮಿನ ಶತ್ರುಗಳ ಉಪಟಳ,ತೊಂದರೆ ಹೆಚ್ಚಾದಾಗ ಸ್ವಂತ ನಾಡಾದ ಮಕ್ಕಾವನ್ನು ಬಿಟ್ಟು ಹೋಗುವ ಸಂದರ್ಭ ಬಂದಿತ್ತು. ಆ ಸಮಯ ವರಖತುಬ್ನು ನೌಫಲ್ ಇರಲಿಲ್ಲ).
ಪ್ರಬೋಧನೆ
ಅಲ್ಲಾಹನ ಪ್ರಪ್ರಥಮ ವಹ್ಯ್ ಲಭಿಸಿದ ಬಳಿಕ ಅಲ್ಪ ಕಾಲ ಅಲ್ಲಾಹನ ದಿವ್ಯ ಸಂದೇಶ ಅವತೀರ್ಣವಾಗುವುದು ಸ್ಥಗಿತವಾಯಿತು.ನೆಬಿ ಸ.ಅ ರವರಿಗೆ ಅತೀವ ದುಃಖವಾಯಿತು.ಪ್ರಪ್ರಥಮವಾಗಿ ಅಲ್ಲಾಹನ ದಿವ್ಯ ಸಂದೇಶ ತಲುಪಿಸಿದ ಜಿಬ್ರೀಲ್ ಅ.ಸ ರವರನ್ನು ಮಗದೊಮ್ಮೆ ದರ್ಶಿಸಲು ಮನವು ಆಗ್ರಹಿಸಿತು.ಹೀಗಿರುವಾಗ ಒಂದು ದಿನ ಭೂಮಿ ಆಕಾಶಗಳ ಮಧ್ಯೆ ಅಂತರೀಕ್ಷದಲ್ಲಿ ಒಂದು ಕುರ್ಚಿಯಲ್ಲಿ ಜಿಬ್ರೀಲ್ ಅ.ಸ ಕುಳಿತಿರುವುದನ್ನು ಕಂಡರು.ನೆಬಿ ಸ.ಅ ಮಗದೊಮ್ಮೆ ಭಯಭೀತಗೊಂಡು ಪ್ರಿಯ ಪತ್ನಿ ಖದೀಜ ರ.ಅ ರವರ ಬಳಿ ಸಾಗಿ ತನ್ನ ಮೇಲೆ ಹೊದಿಕೆ ಹಾಸಲು ಹೇಳಿದರು.ಖದೀಜ ರ.ಅ ನೆಬಿ ಸ.ಅ ರವರಿಗೆ ಹೊದಿಕೆ ಹಾಸಿದರು.ನೆಬಿ ಸ.ಅ ಹೊದಿಕೆ ಹೊದ್ದು ಮಲಗಿದ್ದ ಸಮಯದಲ್ಲಿ ಎರಡನೇ ಬಾರಿಗೆ ಅಲ್ಲಾಹನ ದಿವ್ಯ ಸಂದೇಶ ಜಿಬ್ರೀಲ್ ಅ.ಸ ತಲುಪಿಸಿದರು.
ياأيهاالمدثر. قم فأنذر.
ಎಂಬ ಮುದ್ದಸ್ಸಿರ್ ಸೂರತಿನ ಆರಂಭದ ಕೆಲವು ಆಯತುಗಳು ಅವತೀರ್ಣವಾಯಿತು.ಓ ಹೊದಿಕೆ ಹೊದ್ದು ಮಲಗಿರುವ ನೆಬಿಯೇ.ಎದ್ದೇಳಿರಿ.ಇಸ್ಲಾಂ ಧರ್ಮ ಧಿಕ್ಕಾರಿಗಳಿಗೆ ಶಿಕ್ಷೆಯ ಭಯಾನಕತೆಯನ್ನು ವಿವರಿಸಿರಿ ಎಂಬ ಅರ್ಥ ಬರುವ ಆಯತುಗಳು ಅವತೀರ್ಣವಾಯಿತು.ಇದು ಇಸ್ಲಾಂ ಧರ್ಮದ ಪ್ರಬೋಧನೆಯನ್ನು ಆರಂಭಿಸಲಿಕ್ಕಿರುವ ಆಹ್ವಾನವಾಗಿತ್ತು.ಆ ಬಳಿಕ ನೆಬಿ ಸ.ಅ ಜನರನ್ನು ರಹಸ್ಯವಾಗಿ ಅಲ್ಲಾಹನ ಧರ್ಮದೆಡೆಗೆ ಆಹ್ವಾನಿಸಲು ಪ್ರಾರಂಭಿಸಿದರು.ವಿಶ್ವಾಸಯೋಗ್ಯರನ್ನು ಮಾತ್ರ ಮೊದಲು ಆಹ್ವಾನಿಸಿದರು.ಕೆಲವರು ಇಸ್ಲಾಂ ಧರ್ಮ ಸ್ವೀಕರಿಸಿದರು.
ಪ್ರಪ್ರಥಮವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದವರು.
ಪುರುಷರಲ್ಲಿ ತನ್ನ ಸಹಪಾಠಿ ಅಬೂಬಕರ್ ಸಿದ್ದೀಖ್ ರ.ಅ. ಸ್ತ್ರೀಯರಲ್ಲಿ ತನ್ನ ಪ್ರಿಯ ಪತ್ನಿ ಖದೀಜ ರ.ಅ. ಮಕ್ಕಳಲ್ಲಿ ಅಲಿಯ್ಯುಬ್ನು ಅಬೀ ತಾಲಿಬ್ ರ.ಅ. ದಾಸ್ಯಮುಕ್ತಿ ಪಡೆದವರಲ್ಲಿ ಝೈದುಬ್ನು ಹಾರಿಸಃ ರ.ಅ. ದಾಸರಲ್ಲಿ ಬಿಲಾಲುಬ್ನು ರಬಾಹ್ ರ.ಅ ಆಗಿದ್ದಾರೆ.
ತನ್ನ ಜತೆಗಾರ ಅಬೂಬಕರ್ ಸಿದ್ದೀಕ್ ರ.ಅ ರವರ ಆಹ್ವಾನದ ಮೇರೆಗೆ ಉಸ್ಮಾನ್ ರ.ಅ, ಝಬೈರುಬ್ನುಲ್ ಅವಾಮ್ಮ್ ರ.ಅ, ತ್ವಲ್ಹತು ಬ್ನು ಉಬೈದಿಲ್ಲಾಹ್ ರ.ಅ, ಅಬ್ದುರ್‍ರಹ್ಮಾನು ಬ್ನು ಔಫ್ ರ.ಅ, ಸಅದು ಬ್ನು ಅಬೀ ವಖ್ಖಾಸ್ ರ.ಅ, ಅಬೂ ಉಬೈದತಿ ಆಮಿರು ಬ್ನುಲ್ ಜರ್‍ರಾಹ್ ರ.ಅ ಎಂಬವರು ಇಸ್ಲಾಂ ಧರ್ಮ ಸ್ವೀಕರಿಸಿದರು.
ಜನರು ಇಸ್ಲಾಮಿಗೆ ಬರಲು ಶುರುಮಾಡಿದರು.ಅವರಲ್ಲಿ ಮಕ್ಕಳು,ಹಿರಿಯರು,ದಾಸರು,ಸ್ವತಂತ್ರರು,ಸ್ತ್ರೀಗಳು,ಪುರುಷರು ಹಾಗು ಕುಲೀನರು ಇದ್ದರು.ಇದರ ನಂತರ ಅವಿಶ್ವಾಸಿಗಳು ಮುಸ್ಲಿಮರ ಶತ್ರುಗಳಾಗಿ ಬದಲಾವಣೆಯಾದರು.ಧರ್ಮ ಧಿಕ್ಕಾರಿಗಳಾದ ಅವಿಶ್ವಾಸಿಗಳ ಉಪಟಳ ಕ್ಕೆ ಮುಸ್ಲಿಮರು ವಿಧೇಯರಾದರು.ಬಹಿರಂಗವಾಗಿ ಅಲ್ಲಾಹನನ್ನು ಆರಾಧಿಸಲು ಮುಸ್ಲಿಮರಿಗೆ ಅಸಾಧ್ಯವಾದಾಗ ಪರ್ವತ ಪ್ರದೇಶಗಳಲ್ಲಿ ರಹಸ್ಯವಾಗಿ ಆರಾಧನೆ ನಿರ್ವಹಿಸುವ ಪರಿಸ್ಥಿತಿಯೂ ಬಂದೆರಗಿತು.ಅಲ್ಲಿಯೂ ಅಕ್ರಮಿಗಳು ಬಿಡಲಿಲ್ಲ.ಅಲ್ಲಿಯೂ ತಮ್ಮ ಆಕ್ರಮಣವನ್ನು ಮುಂದುವರಿಸಿದರು.ಕೊನೆಗೆ ನೆಬಿ ಸ.ಅ ತನ್ನ ವಿಶ್ವಾಸೀ ಸಮೂಹದೊಂದಿಗೆ ದಾರುಲ್ ಅರ್‍ಖಮಿನಲ್ಲಿ ಅಡಗಿ ಕೂತರು.ಅಲ್ಲಿ ನೆಬಿ ಸ.ಅ ವಿಶ್ವಾಸಿಗಳಿಗೆ ಇಸ್ಲಾಮ್ ಧರ್ಮದ ಆಚಾರ ವಿಚಾರಗಳನ್ನು ಕಲಿಸಿಕೊಡುತ್ತಾ ಅವರೊಂದಿಗೆ ಇಬಾದತ್ ನಿರ್ವಹಿಸುತ್ತಿದ್ದರು.
ಮೂರು ವರ್ಷಗಳ ಕಾಲ ರಹಸ್ಯ ಪ್ರಬೋಧನೆ ಮುಂದುವರಿಯಿತು.ಇಸ್ಲಾಮಿನ ಮಹೋನ್ನತ ಸಂದೇಶ ಎಲ್ಲಾ ಕುರೈಶೀ ಕುಟುಂಬಗಳಿಗೆ ತಲುಪಿತು.ಮಕ್ಕಾದಲ್ಲಿ ಇಸ್ಲಾಮಿನ ಸಂದೇಶ ವ್ಯಾಪಕ ಪ್ರಚಾರ ಪಡೆಯಿತು.ಆಗ ಅಲ್ಲಾಹು ಬಹಿರಂಗ ಪ್ರಚಾರಕ್ಕೆ ನೆಬಿ ಸ.ಅ ರವರಿಗೆ ಆದೇಶಿಸಿದನು.ನೆಬಿ ಸ.ಅ ಸ್ವಫಾ ಪರ್ವತಕ್ಕೆ ಹತ್ತಿ ನಿಂತು ಕುರೈಶಿಗಳನ್ನು ಕರೆದರು.ಅವರೊಂದಿಗೆ ನೆಬಿ ಸ.ಅ ಕೇಳಿದರು : ಈ ಸ್ವಫಾ ಪರ್ವತದ ಆಚೆ ಬದಿಯಿಂದ ಒಂದು ಸೈನ್ಯ ನಿಮ್ಮನ್ನು ಆಕ್ರಮಿಸಲು ಧಾವಿಸಿ ಬರುತ್ತಿದೆ ಅಂತ ನಾನು ನಿಮ್ಮಲ್ಲಿ ಹೇಳಿದರೆ ನೀವು ನನ್ನ ಮಾತನ್ನು ನಂಬುವಿರೇ ?.
ಕುರೈಶಿಗಳು ಹೇಳಿದರು : ಹಾ. ನಾವು ನಂಬುತ್ತೇವೆ.ಕಾರಣ ನೀನು ಇದುವರೆಗೂ ಯಾರೊಂದಿಗೂ ಸುಳ್ಳು ಹೇಳಿದ್ದು ಕೇಳಿಲ್ಲ.
ನನ್ನ ಮಾತನ್ನು ಕುರೈಶಿಗಳು ನಂಬುತ್ತಾರೆ ಎಂದು ನೆಬಿ ಸ.ಅ ರವರಿಗೆ ಮನದಟ್ಟಾದ ಬಳಿಕ ಹೇಳಿದರು : ಹಾಗಾದರೆ ಕೇಳಿರಿ ಕುರೈಶಿಗಳೇ..
ನಿಮಗೆ ಬರಲಿರುವ ಕಠೋರವಾದ ಶಿಕ್ಷೆಯ ಕುರಿತು ಮುನ್ಸೂಚನೆ ನೀಡಲು ನಾನು ನೆಬಿಯಾಗಿ ನಿಯೋಗಿಸಲ್ಪಟ್ಟಿದ್ದೇನೆ.
ಬಳಿಕ ನೆಬಿ ಸ.ಅ ಅವರನ್ನು ತೌಹೀದಿನೆಡೆಗೆ ಆಹ್ವಾನಿಸಿದರು.
ಆಗ ಅಬೂಲಹಬ್ ದ್ವೇಷದಿಂದ ಹೇಳಿದನು : ನಿನಗೆ ನಾಶವಾಗಲು ....ನಮ್ಮನ್ನು ಇಲ್ಲಿ ನೀನು ಒಗ್ಗೂಡಿಸಿದ್ದು ಇದಕ್ಕಾಗಿಯಾ ?
ಆಗ ನೆಬಿ ಸ.ಅ ರವರಿಗೆ ಅಲ್ಲಹಬ್ ಎಂಬ ಸೂರತ್ ಅವತೀರ್ಣವಾಯಿತು.ಆ ಸೂರತಿನಲ್ಲಿ ಅಬೂಲಹಬ್ ಮತ್ತು ಆತನ ಕುಟುಂಬ ಸರ್ವನಾಶವಾಗಲಿವೆ ಎಂದು ಅಲ್ಲಾಹನು ಪ್ರಖ್ಯಾಪಿಸಿದನು.
ಪೀಡನೆಗಳು.
ನೆಬಿ ಸ.ಅ ಪ್ರಬೋಧನೆಯೊಂದಿಗೆ ಮುಂದುವರಿದರು.ಹಗಲು ರಾತ್ರಿಯೆನ್ನದೆ ರಹಸ್ಯವಾಗಿಯೂ ಬಹಿರಂಗವಾಗಿಯೂ ಜನರನ್ನು ಇಸ್ಲಾಮಿಗೆ ಆಹ್ವಾನಿಸಿದರು.ಮುಶ್ರಿಕುಗಳ ಉಪಟಳ ಹೆಚ್ಚಾಯಿತು.
ಅತ್ಯಂತ ಹೆಚ್ಚಾಗಿ ನೆಬಿ ಸ.ಅ ರವರಿಗೆ ಉಪದ್ರವಿಸಿದವರು.ಅವರ ಮನಸ್ಸನ್ನು ನೋಯಿಸಿದವರು ಈ ಕೆಳಗಿನವರು....
1- ಅಬೂ ಜಹಲ್ : ಅಬೂಜಹಲ್ ನೆಬಿ ಸ.ಅ ನಮಾಜು ಮಾಡುವುದನ್ನು ತಡೆದ.ಒಂದು ದಿವಸ ನೆಬಿ ಸ.ಅ ನಮಾಜು ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ದೊಡ್ಡ ಕಲ್ಲು ತೆಗೆದು ನೆಬಿ ಸ.ಅ ರವರ ತಲೆಗೆ ಹಾಕಲು ಬಂದಾಗ ನೆಬಿ ಸ.ಅ ಸನಿಹ ಜಿಬ್ರೀಲ್ ಅ.ಸ ಒಂದು ದೊಡ್ಡ ಭಯಂಕರ ಒಂಟೆಯ ರೂಪದಲ್ಲಿ ಪ್ರತ್ಯಕ್ಷರಾದರು.ಇದನ್ನು ಕಂಡು ಹೈರಾಣಾದ ಅಬೂಜಹಲ್ ಎದ್ದು ಬಿದ್ದು ಮರಳಿ ಓಡಿ ಹೋದ.
2 - ಉಖ್ಬತುಬ್ನು ಅಬೀ ಮುಐತ್ : ಇವನು ಒಮ್ಮೆ ನೆಬಿ ಸ.ಅ ಸುಜೂದಿನಲ್ಲಿದ್ದ ಸಂದರ್ಭದಲ್ಲಿ ಒಂಟೆಯ ಕರುಳು ಬಳ್ಳಿ ಗಳನ್ನು ತಂದು ಕುತ್ತಿಗೆಗೆ ಹಾಕಿದನು.ಅದನ್ನು ಫಾತಿಮ ರ.ಅ ತೆಗೆದು ನಿವಾರಿಸಿದರು.
3 - ಅಬೂಲಹಬ್ : ನೆಬಿ ಸ.ಅ ರವರ ಪಿತ್ರ ಸಹೋದರನಾದ ಅಬುಲಹಬ್ ಮತ್ತು ಆತನ ಪತ್ನಿ ನೆಬಿ ಸ.ಅ ರವರನ್ನು ಮಾತುಗಳ ಮೂಲಕ ನಿಂದನೆ ಅಪಹಾಸಗೈಯ್ಯತ್ತಾ ನೆಬಿ ಸ.ಅ ಮನೆಯ ಅಂಗಳಕ್ಕೆ ಕಸಕಡ್ಡಿ,ಮಾಲಿನ್ಯಗಳನ್ನು ತಂದು ಸುರಿಯುತ್ತಿದ್ದರು.
4 - ಅಸ್ವದು ಬ್ನು ಅಬ್ದು ಯಗೂಸ್ : ಇಂದು ಆಕಾಶದಿಂದ ಯಾರೂ ನಿನ್ನೊಡನೆ ಮಾತನಾಡಲಿಲ್ಲವೇ ? ಎಂದು ಹೇಳಿ ನೆಬಿ ಸ.ಅ ರವರನ್ನು ಪ್ರತಿನಿತ್ಯ ಈತ ಅಪಹಾಸ್ಯ ಮಾಡುತ್ತಿದ್ದ.
5 - ವಲೀದುಬ್ನುಲ್ ಮುಗೀರಃ ನೆಬಿ ಸ.ಅ ರವರನ್ನು ಜಾದೂಗಾರ ನೆಂದೂ ಕುರಾನ್ ಸಿಹ್ರ್ ಎಂದು ವಾದಿಸಿದನು.
6 - ನಳರುಬ್ನುಲ್ ಹಾರಿಸ್ : ನೆಬಿ ಸ.ಅ ಹೇಳುತ್ತಿದ್ದುದು ಕಟ್ಟುಕತೆಗಳಾಗಿವೆ ಎಂದು ಪ್ರಚಾರ ಮಾಡುತ್ತಿದ್ದ.
ಹೀಗೆ ನೆಬಿ ಸ.ಅ ರವರಿಗೆ ನಾನಾ ರೀತಿಯಲ್ಲಿ ತೊಂದರೆ ನೀಡುತ್ತಿದ್ದರು.ನೆಬಿ ಸ.ಅ ಮಾತ್ರವಲ್ಲ.ಸ್ವಹಾಬಿಗಳೂ ಪೀಡನೆಗೊಳಗಾದರು.ಕೆಲವರು ಕಠಿಣವಾದ ಆಕ್ರಮಣಗಳಿಗೆ ವಿಧೇಯರಾದರು.ಅವುಗಳಲ್ಲಿ ಕೆಲವೊಂದು ಇಲ್ಲಿ ವಿವರಿಸುತ್ತಿದ್ದೇನೆ.
ಒಮ್ಮೆ ಸ್ವಹಾಬಿ ಪ್ರಮುಖರಾದ ಅಬೂಬಕರ್ ಸಿದ್ದೀಖ್ ರ.ಅ ಜನರನ್ನು ಇಸ್ಲಾಮಿಗೆ ಆಹ್ವಾನಿಸಿ ಭಾಷಣ ಮಾಡುತ್ತಿದ್ದರು.ಆ ಸಂದರ್ಭದಲ್ಲಿ ಅವರನ್ನು ಕುರೈಶಿಗಳು ಹಿಡಿದೆಳೆದು ಹೊಡೆದರು.ಕೆಲವರು ತುಳಿದರು. ಮುಖ ಪರಿಚಯ ಸಿಗದ ಹಾಗೆ ಹೊಡೆದು ವಿಕ್ರತಿಗೊಳಿಸಿದರು.ಪ್ರಜ್ಞೆ ತಪ್ಪಿದ ಬಳಿಕ ಅಬೂಬಕರ್ ಸಿದ್ದೀಖ್ ರ.ಅ ರವರನ್ನು ಕುರೈಶಿಗಳು ಬಿಟ್ಟು ಹೋದರು.ಮತ್ತೆ ಅವರಿಗೆ ಪ್ರಜ್ಞೆ ಮರಳಿ ಬಂದದ್ದು ಸಂಜೆಯ ಸಮಯದಲ್ಲಾಗಿತ್ತು.ಅಬೂಬಕರ್ ಸಿದ್ದೀಖ್ ರ.ಅ ಇಸ್ಲಾಮಿನ ಪ್ರಥಮ ಪ್ರಭಾಷಕರಾಗಿದ್ದರು.
ಉಸ್ಮಾನ್ ರ.ಅ ರವರನ್ನು ಹಕಮುಬ್ನುಲ್ ಆಸಿ ಎಂಬ ದುಷ್ಟ ಕಟ್ಟಿಹಾಕಿ ಹಿಂಸಿಸಿದನು.ಅವರ ಇಸ್ಲಾಮಿನ ಮೇಲಿದ್ದ ಅಚಲ ವಿಶ್ವಾಸವನ್ನು ಕಂಡು ನಿರ್ವಾಹವಿಲ್ಲದೆ ಆತ ಬಿಡುಗಡೆ ಮಾಡಿದನು.
ಝುಬೈರುಬ್ನುಲ್ ಅವಾಮ್ಮ್ ರ.ಅ ರವರನ್ನು ತನ್ನ ಪಿತ್ರ ಸಹೋದರ ಒಂದು ರೂಮಿನಲ್ಲಿ ಬಂಧನದಲ್ಲಿಟ್ಟು ಹೊಗೆ ಹಾಕಿದನು.
ಬಿಲಾಲ್ ರ.ಅ ರವರನ್ನು ತನ್ನ ಯಜಮಾನ ಉಮಯ್ಯತುಬ್ನು ಖಲಫ್ ನಡು ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಕಾದ ಮರಳಿನಲ್ಲಿ ಮಲಗಿಸಿ ಎದೆಯ ಮೇಲೆ ಭಾರವಾದ ಬಂಡೆಕಲ್ಲನ್ನು ಇಟ್ಟನು.ಬಿಲಾಲ್ ರ.ಅ "ಅಹದ್ ಅಹದ್" ಅಲ್ಲಾಹನು ಏಕೈಕನು ಏಕೈಕನು ಎನ್ನುತ್ತಾ ಇಸ್ಲಾಮಿನ ಮೇಲಿರುವ ತನ್ನ ಗಟ್ಟಿ ನಿರ್ಧಾರವನ್ನು ತೋರ್ಪಡಿಸಿದರು.ಇಸ್ಲಾಂ ಧರ್ಮ ಸ್ವೀಕರಿಸಿದ ಬಿಲಾಲ್ ರ.ಅ ರವರಿಗೆ ತನ್ನ ಯಜಮಾನ ಕ್ರೂರವಾಗಿ ಹಿಂಸೆ ನೀಡುತ್ತಿದ್ದುದ್ದನ್ನು ಗಮನಿಸಿದ ಆ ದಾರಿಯಲ್ಲಿ ಸಾಗುತ್ತಿದ್ದ ಅಬೂಬಕರ್ ಸಿದ್ದೀಖ್ ರ.ಅ ಬಿಲಾಲ್ ರ.ಅ ರವರನ್ನು ಬೆಲೆ ಕೊಟ್ಟು ಖರೀದಿಸಿ ದಾಸ್ಯಮುಕ್ತಿಗೊಳಿಸಿ ಸ್ವತಂತ್ರ ಗೊಳಿಸಿದರು.
ಯಾಸಿರ್ ರ.ಅ,ಅವರ ಪ್ರಿಯ ಪತ್ನಿ ಸುಮಯ್ಯ ರ.ಅ ಹಾಗು ಮಗ ಅಮ್ಮಾರ್ ರ.ಅ ಶತ್ರುಗಳಿಂದ ಕ್ರೂರ ಹಿಂಸೆಗೆ ಗುರಿಯಾದರು.ಸುಡು ಬಿಸಿಲಿನಲ್ಲಿ ಕಾದ ಮರಳಿನಲ್ಲಿ ಅವರನ್ನು ಶಿಕ್ಷಿಸಿದರು.ಇದನ್ನು ಕಂಡ ನೆಬಿ ಸ.ಅ ತೀವ್ರ ದುಃಖದಿಂದ ಅವರಲ್ಲಿ ಹೇಳಿದರು : ಯಾಸಿರ್ ಕುಟುಂಬವೇ.ಸಹನೆ ಕೈಗೊಳ್ಳಿರಿ.ತಾಳ್ಮೆಯಿಂದಿರಿ.ನಿಮಗೆ ಸ್ವರ್ಗವಿದೆ.
ಸುಮಯ್ಯ ರ.ಅ ರವರನ್ನು ಇಸ್ಲಾಮಿನ ಶತ್ರು ಅಬೂಜಹಲ್ ಕಬ್ಬಿಣದ ಸಲಾಕೆಯಿಂದ ಗುಪ್ತಾಂಗಕ್ಕೆ ಕುತ್ತಿ ಅತಿಕ್ರೂರವಾಗಿ ಹಿಂಸಿಸಿದನು.ಸುಮಯ್ಯ ರ.ಅ ರಕ್ತ ಸಾಕ್ಷಿಯಾದರು.ಇಸ್ಲಾಮಿನ ಚರಿತ್ರೆಯಲ್ಲಿ ಪ್ರಥಮವಾಗಿ ರಕ್ತ ಸಾಕ್ಷಿಯಾದ ವನಿತೆ ಸುಮಯ್ಯ ರ.ಅ ಆಗಿದ್ದರು.ಯಾಸಿರ್ ರ.ಅ ರವರಿಗೆ ಬೆಂಕಿಯಿಂದ ಕಾದ ಯುದ್ಧ ಅಂಗಿಯನ್ನು ತೊಡಿಸಿದರು.ಅವರೂ ಶಹೀದಾದರು.ಅಮ್ಮಾರ್ ರ.ಅ ರವರನ್ನು ಕ್ರೂರವಾಗಿ ಶತ್ರುಗಳು ಹಿಂಸಿಸುತ್ತಿದ್ದಾಗ ಶಿಕ್ಷೆ ತಾಳಲಾರದೆ ಅವರ ಬಾಯಿಯಿಂದ ಅವಿಶ್ವಾಸವನ್ನು ಪ್ರಕಟಿಸುವ ಮಾತುಗಳು ಹೊರಬಿದ್ದವು.ಆದುದರಿಂದ ಶತ್ರುಗಳು ಅವರನ್ನು ಬಿಟ್ಟು ಬಿಟ್ಟರು.ಅವರು ನೇರವಾಗಿ ನೆಬಿ ಸ.ಅ ರವರನ್ನು ಸಮೀಪಿಸಿ ನಾನು ಅನಿರೀಕ್ಷಿತವಾಗಿ ಅವಿಶ್ವಾಸವನ್ನು ತಿಳಿಯಪಡಿಸುವ ಮಾತನ್ನು ಹೇಳಿದುದರಿಂದ ಶತ್ರುಗಳು ನನ್ನನ್ನು ಬಿಟ್ಟು ಬಿಟ್ಟರು.ನಾನು ಇಸ್ಲಾಮಿನಲ್ಲಿ ದ್ರಢವಾಗಿದ್ದೇನೆ.ಇಸ್ಲಾಮಿನ ಅಚಂಚಲ ವಿಶ್ವಾಸ ನನ್ನ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ಸಮಜಾಯಿಷಿ ನೀಡಿದರು.ಅವರು ಮಸ್ಲಿಮರಾಗಿಯೇ ಮುಂದುವರಿದರು.
ಝಿನ್ನೀರಃ ರ.ಅ ಪೀಡನೆಗೆ ಗುರಿಯಾಗಿ ಶಾಶ್ವತ ಅಂಧರಾದರು.ಖಬ್ಬಾಬ್ ರ.ಅ ರವರನ್ನು ಬೆಂಕಿಯಿಂದ ಹಿಂಸಿಸಿದರು.ಮಿಸ್ಅಬ್ ರ.ಅ ರವರನ್ನು ಬಂಧಿಸಿದರು.ಸಅದುಬ್ನು ಅಬೀ ವಖ್ಖಾಸ್ ರ.ಅ ರವರಿಗೆ ಹೊಡೆದು ಅನ್ನಪಾನೀಯವನ್ನು ನಿಷೇಧಿಸಿದರು.ಹೀಗೆ ನಾನಾತರದ ಹಿಂಸೆಗೆ ಗುರಿಯಾದರೂ ಯಾರೂ ಕಿಂಚಿತ್ತೂ ಸತ್ಯಧರ್ಮದಿಂದ ಹಿಂದೆ ಸರಿಯಲಿಲ್ಲ.ಹಿಂಸೆಯನ್ನು ಸಹಿಸಿ ಇಸ್ಲಾಂ ಧರ್ಮದಲ್ಲಿ ದ್ರಢ ವಿಶ್ವಾಸದೊಂದಿಗೆ ಮುಂದುವರಿದರು.
ದುಃಖ ವರ್ಷ
ನೆಬಿ ಸ.ಅ ರವರಿಗೆ ಕುರೈಶಿಗಳಲ್ಲಿ ರಕ್ಷಣೆ ನೀಡುತ್ತಿದ್ದುದು ಅಬೂತಾಲಿಬ್ ಆಗಿದ್ದರು.ನೆಬಿ ಸ.ಅ ಬಹಿರಂಗವಾಗಿ ಇಸ್ಲಾಂ ಧರ್ಮದ ಪ್ರಚಾರಕ್ಕೆ ಇಳಿದಾಗ ಕುರೈಶಿಗಳು ಅಬೂತಾಲಿಬರನ್ನು ಸಮೀಪಿಸಿ ತಾಕೀತು ನೀಡಿದರು.ತಮ್ಮ ಧರ್ಮವನ್ನು ಆಕ್ಷೇಪಿಸುವುದು ತಡೆಯಬೇಕು ಅಥವಾ ನೆಬಿ ಸ.ಅ ರವರನ್ನು ಕುರೈಶಿಗಳ ಕೈಗೆ ಒಪ್ಪಿಸಬೇಕು ಎಂದು ಅವರು ಅಬೂತಾಲಿಬರೊಂದಿಗೆ ಆವಶ್ಯಪಟ್ಟರು.ಅಬೂತಾಲಿಬ್ ಅವರನ್ನು ತಂತ್ರಪೂರ್ವಕ ಮಧುರ ಮಾತುಗಳಿಂದ ಸಮಾಧಾನಿಸಿ ಮರಳಿ ಕಳುಹಿಸಿದರು.ಕೆಲವು ದಿನಗಳ ಬಳಿಕ ಮತ್ತೆ ಕುರೈಶಿಗಳು ಅಬೂತಾಲಿಬರ ಬಳಿ ಬಂದು ಹೇಳಿದರು.ನೀವು ಅವನನ್ನು ತಡೆಯಬೇಕು.ಇಸ್ಲಾಂ ಧರ್ಮದ ಪ್ರಬೋಧನೆಯಿಂದ ಹಿಂದೆ ಸರಿಯುವಂತೆ ಮಾಡಬೇಕು.ಇಲ್ಲದಿದ್ದರೆ ನಿಮ್ಮನ್ನು ಮತ್ತು ಅವನನ್ನು ಬಹಿಷ್ಕರಿಸಬೇಕಾಗಿ ಬರಬಹುದು ಎಂದು ಅಂತಿಮ ತೀರ್ಪು ಪ್ರಖ್ಯಾಪಿಸಿದರು.ಕುರೈಶಿಗಳನ್ನು ಬಿಟ್ಟು ನಿಲ್ಲುವುದು ಅಬೂತಾಲಿಬರಿಗೆ ತುಂಬಾ ಕಷ್ಟಕರವಾಗಿತ್ತು.ಅವರು ನೆಬಿ ಸ.ಅ ರವರನ್ನು ಹತ್ತಿರ ಕರೆದು ವಾಸ್ತವ ಸಂಗತಿಯನ್ನು ವಿವರಿಸಿದರು.ನನ್ನೊಂದಿಗೆ ಕಿಂಚಿತ್ತಾದರೂ ಅನುಕಂಪ ತೋರಿಸಬೇಕು.ನನಗೆ ಕಷ್ಟಸಾಧ್ಯವಾದ ಕೆಲಸಕ್ಕೆ ನಿರ್ಬಂಧಿಸಬಾರದು.ಕುರೈಶಿಗಳನ್ನು ಬಿಟ್ಟು ನಿಲ್ಲುವುದು ನನಗೆ ಸಾಧ್ಯವಿಲ್ಲ.ಆದುದರಿಂದ ನನ್ನ ಮೇಲೆ ಕರುಣೆ ತೋರಿಸಬೇಕು.ಇಸ್ಲಾಂ ಧರ್ಮ ಪ್ರಚಾರವನ್ನು ಸ್ಥಗಿತಗೊಳಿಸಬೇಕು ಎಂದು ಅಬೂತಾಲಿಬ್ ಹೇಳಿದಾಗ ನೆಬಿ ಸ.ಅ ಹೇಳಿದರು.ಅಲ್ಲಾಹನಾಣೆ ಸತ್ಯ..ನನ್ನ ಬಲ ಕೈಯಲ್ಲಿ ಸೂರ್ಯನನ್ನೂ ಎಡ ಕೈಯಲ್ಲಿ ಚಂದ್ರನನ್ನೂ ಇಟ್ಟುಕೊಟ್ಟರೂ ನನ್ನ ದೌತ್ಯದಿಂದ ನಾನು ಹಿಂದೆ ಸರಿಯಲಾರೆ.ಅಲ್ಲಾಹು ನನ್ನ ಈ ಕಾರ್ಯಕ್ಕೆ ಖಂಡಿತ ಜಯ ನೀಡುತ್ತಾನೆ.ಅಥವಾ ಆ ಮಾರ್ಗದಲ್ಲಿ ನಾನು ಮರಣ ಹೊಂದುವೆ ಎನ್ನುತ್ತಾ ನೆಬಿ ಸ.ಅ ಅಳುತ್ತಾ ಮನೆಯಿಂದ ಹೊರಹೋದರು.ತನ್ನ ಸಹೋದರನ ಮಗನಾದ ನೆಬಿ ಸ.ಅ ರವರೊಂದಿಗೆ ಮನಸ್ಸಿನಂತರಾಳದಿಂದ ಬಂದ ಅನುಕಂಪದಿಂದ ಅಬೂತಾಲಿಬ್ ನೆಬಿ ಸ.ಅ ರವರನ್ನು ಕರೆದು ಹೇಳಿದರು.ನಿನಗೆ ಇಷ್ಟವಿರುವ ಕಾರ್ಯವನ್ನು ಜನರ ಮುಂದೆ ಹೇಳು.ಅಲ್ಲಾಹನಾಣೆ ಸತ್ಯ..ನಿನ್ನನ್ನು ನಾನು ಕುರೈಶೀಗಳಿಗೆ ವಹಿಸಿ ಕೊಡಲಾರೆನು.
ಹಜ್ಜಿನ ಸಮಯವಾಗಿತ್ತು.ಹಜ್ ನಿರ್ವಹಿಸಲು ನಾನಾ ದಿಕ್ಕಿನಿಂದ ಬರುತ್ತಿದ್ದವರೊಂದಿಗೆ ಮುಶ್ರಿಕುಗಳು ನೆಬಿ ಸ.ಅ ರವರ ಕುರಿತು ಮುನ್ನೆಚ್ಚರಿಕೆ ನೀಡತೊಡಗಿದರು.ಇದು ಅರೇಬಿಯದ ನಾನಾ ದಿಕ್ಕುಗಳಿಗೂ ನೆಬಿ ಸ.ಅ ರವರ ಕುರಿತಿರುವ ಇಸ್ಲಾಂ ಧರ್ಮದ ಪ್ರಚಾರಕ್ಕೆ ಇನ್ನಷ್ಟು ನಿಮಿತ್ತವಾಯಿತೇ ಹೊರತು ಮುಶ್ರಿಕುಗಳ ಕುತಂತ್ರ ಫಲಿಸದೇ ಹೋಯಿತು.ಆಗ ಶತ್ರುಗಳ ಆಕ್ರಮಣ ಇನ್ನಷ್ಟು ತೀವ್ರವಾಯಿತು.ಆದುದರಿಂದ ನೆಬಿ ಸ.ಅ ಸ್ವಹಾಬಿಗಳಿಗೆ ವಲಸೆ ( ಹಿಜ್ರಾ ) ಹೋಗಲು ಅನುಮತಿ ನೀಡಿದರು.
ನುಬುವ್ವತಿನ ಐದನೇ ವರ್ಷ ಹತ್ತು ಪುರುಷರು ಮತ್ತು ನಾಲ್ಕು ಸ್ತ್ರೀಯರು ಹಬಶ ( ಇಥಿಯೋಪಿಯ ) ಕ್ಕೆ ಹಿಜ್ರಃ ಹೋದರು.ಇಥಿಯೋಪಿಯದಲ್ಲಿ ನಜ್ಜಾಶೀ ರಾಜನ ರಕ್ಷಣೆಯಲ್ಲಿ ಭಯಮುಕ್ತರಾಗಿ ಜೀವಿಸಿದರು.ಮಕ್ಕಾ ನಿವಾಸಿಗಳೆಲ್ಲರೂ ಇದೀಗ ಮುಸ್ಲಿಮರಾಗಿದ್ದಾರೆ ಎಂಬ ಗಾಳಿ ಸುದ್ಧಿ ತಿಳಿದು ಇವರು ಮತ್ತೆ ಮಕ್ಕಾಕ್ಕೆ ಮರಳಿದರು.ಇದು ಗಾಳಿ ಸುದ್ದಿಯಾಗಿತ್ತು ಎಂದು ಮಕ್ಕಾಕ್ಕೆ ಮರಳಿದ ಬಳಿಕವೇ ತಿಳಿಯಲು ಸಾಧ್ಯವಾಯಿತು.ಮಾತ್ರವಲ್ಲ ಶತ್ರುಗಳ ಉಪಟಳ,ಹಿಂಸೆ ಮೊದಲಿಗಿಂತಲೂ ಈಗ ಇಮ್ಮಡಿಯಾಗಿತ್ತು.ನೆಬಿ ಸ.ಅ ರವರ ಅನುಮತಿಯೊಂದಿಗೆ 83 ಪುರುಷರು ಮತ್ತು 18 ಸ್ತ್ರೀಯರು ಮತ್ತೆ ಹಬಶಕ್ಕೆ ಪಲಾಯನ ಮಾಡಿದರು.
ಕುರೈಶಿಗಳ ಕುತಂತ್ರಗಳು ಫಲಿಸದೇ ಬಂದಾಗ ನೆಬಿ ಸ.ಅ ರವರನ್ನು ಬಿಟ್ಟು ಕೊಡುವ ವರೆಗೆ ಬನೂ ಹಾಶಿಂ, ಬನೂ ಮುತ್ತಲಿಬ್ ಕುಟುಂಬವನ್ನು ಬಹಿಷ್ಕರಿಸಲು ತೀರ್ಮಾನಿಸಿದರು.ಬಹಿಷ್ಕಾರ ಪತ್ರವನ್ನು ಕಾಬಾ ದ ಬಾಗಿಲಿನಲ್ಲಿ ನೇತು ಹಾಕಿದರು.ಇದರಿಂದ ಮುಸ್ಲಿಮರು ಅಬೂತಾಲಿಬ್ ಗುಡಾರದಲ್ಲಿ ತುಂಬಾ ಯಾತನಾಮಯ ಜೀವನವನ್ನು ಅನುಭವಿಸಿದರು.ಬಹಿಷ್ಕಾರವಿದ್ದುದರಿಂದ ಒಂದು ತುತ್ತು ಆಹಾರಕ್ಕಾಗಿಯೂ ಪರದಾಡಿದರು.ಹಸಿರೆಲೆಗಳನ್ನು ತಿಂದು ಬದುಕುವ ತೀರಾ ಶೋಚನೀಯ ಅವಸ್ಥೆಯೂ ಬಂದಿತ್ತು.ಮೂರು ವರ್ಷಗಳ ಕಾಲ ಅವರು ಅಲ್ಲಿ ಕಷ್ಟದಾಯಕವಾದ ಜೀವನ ನಡೆಸಿದರು.ಕೊನೆಗೆ ಕುರೈಶೀ ಪ್ರಮುಖರಲ್ಲಿ ಕೆಲವರಿಗೆ ಮುಸ್ಲಿಮರೊಂದಿಗೆ ಅಲ್ಪ ಸಡಿಲ ಮನೋಭಾವ ಬೆಳೆಯಿತು.ಅವರು ಕಾಬಾದಲ್ಲಿ ನೇತು ಹಾಕಿದ್ದ ಬಹಿಷ್ಕಾರದ ನೋಟೀಸ್ ತೆಗೆದು ಹಾಕಿದರು.ಸತ್ಯದಲ್ಲಿ ಅಲ್ಲಾಹನ ನಾಮ ಹೊರತು ಉಳಿದ ಭಾಗಗಳೆಲ್ಲವೂ ಗೆದ್ದಲು ಹಿಡಿದು ನಾಶವಾಗಿತ್ತು.
ನೆಬಿ ಸ.ಅ ಪ್ರಚಾರ ಕಾರ್ಯ ಮುಂದುವರಿಸಿದರು.ನಝ್ರಾನ್ ನಿಂದ ಆಗಮಿಸಿದ ಒಂದು ಕ್ರೈಸ್ತ ಸಂಘ ನೆಬಿ ಸ.ಅ ರವರನ್ನು ಭೇಟಿಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು.ನುಬುವ್ವತಿನ ಹತ್ತನೇ ವರ್ಷ ಮೊದಲು ಅಬೂತಾಲಿಬ್ ಬಳಿಕ ಪ್ರಿಯ ಪತ್ನಿ ಖದೀಜ ಬೀವಿ ರ.ಅ ವಫಾತಾದರು.ತನಗೆ ಹೆಚ್ಚು ಇಷ್ಟವಿರುವವರ ಅಗಲುವಿಕೆಯಲ್ಲಿ ತೀವ್ರ ದುಃಖಿತರಾದರು.ಅಬೂತಾಲಿಬ್ ಮರಣ ಹೊಂದಿದ ಬಳಿಕ ಮುಶ್ರಿಕರ ಉಪಟಳ ಹೆಚ್ಚಾಯಿತು.ಆಗ ನೆಬಿ ಸ.ಅ ತ್ವಾಯಿಫಿನ ಸಖೀಫ್ ಗೋತ್ರದವರ ಬಳಿ ಹೋದರು.ಅವರು ಅಭಯ ನೀಡುವರು ಎಂದು ನಿರೀಕ್ಷಿಸಿದರೂ ಅದು ಉಂಟಾಗಲಿಲ್ಲ.ಬದಲು ಅವರು ಪುಂಡು ಪೋಕರಿ ಮಕ್ಕಳನ್ನೂ ಬಚ್ಚಾಲಿ ಯುವಕರನ್ನೂ ನೆಬಿ ಸ.ಅ ರವರ ನೇರ ಛೂ ಬಿಟ್ಟರು.ಅವರ ಆಕ್ರಮಣದಿಂದ ನೆಬಿ ಸ.ಅ ರವರಿಗೆ ಗಾಯವಾಯಿತು.ಆಗ ಜಿಬ್ರೀಲ್ ಅ.ಸ ನೆಬಿ ಸ.ಅ ರವರ ಮುಂದೆ ಪ್ರತ್ಯಕ್ಷರಾಗಿ ಅವರನ್ನು ಶಿಕ್ಷಿಸಲು ಅನುಮತಿ ಕೇಳಿದರು.ನೆಬಿ ಸ.ಅ ಹೇಳಿದರು.ಓ ಜಿಬ್ರೀಲ್.ಅವರು ಅಜ್ಞಾನಿಗಳಾಗಿದ್ದಾರೆ.ಅವರನ್ನು ಶಿಕ್ಷಿಸುವುದು ನನಗೆ ಇಷ್ಟವಿಲ್ಲ.ಅವರಲ್ಲಿ ಯಾವನಾದರೊಬ್ಬ ಇಸ್ಲಾಂ ಧರ್ಮ ಸ್ವೀಕರಿಸಿದರೆ ಅದುವಾಗಿದೆ ಒಳಿತು.ಬಳಿಕ ದುವಾ ಮಾಡಿದರು.ಅಲ್ಲಾಹುವೇ, ನನ್ನ ಜನತೆಗೆ ನೀನು ಸನ್ಮಾರ್ಗದ ಹಾದಿ ತೋರಿಸು.ಅವರು ತಿಳುವಳಿಕೆ ಇಲ್ಲದವರಾಗಿದ್ದಾರೆ.
ನೆಬಿ ಸ.ಅ ತೀವ್ರ ನಿರಾಶೆಯಿಂದ ತ್ವಾಯಿಫ್ ನಿಂದ ಹಿಂದಿರುಗಿದರು.ದಾರಿ ಮಧ್ಯೆ ಅದ್ದಾಸ್ ಎಂಬವರು ನೆಬಿ ಸ.ಅ ರವರನ್ನು ಸಮೀಪಿಸಿದರು.ಕ್ರೈಸ್ತನಾದ ಅದ್ದಾಸ್ ಎಂಬ ನೀನವಾ ನಿವಾಸಿ ನೆಬಿ ಸ.ಅ ರವರನ್ನು ಅರಿತು ಇಸ್ಲಾಂ ಧರ್ಮ ಸ್ವೀಕರಿಸಿದರು.
ನಖ್ಲ ಎಂಬ ಸ್ಥಳಕ್ಕೆ ಮುಟ್ಟಿದಾಗ ಜಿನ್ನ್ ವರ್ಗದ ಒಂದು ಗುಂಪು ನೆಬಿ ಸ.ಅ ರವರಿಂದ ಕುರಾನ್ ಕೇಳಿಸಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಿದರು.ಬಳಿಕ ಆ ಜಿನ್‍ನ್ ವರ್ಗವು ಅವರ ಜನತೆಗೆ ಇಸ್ಲಾಂ ಧರ್ಮದ ಪ್ರಬೋಧನೆ ತಲುಪಿಸಲು ಹೊರಟುಹೋದರು.
ಆಕಾಶರೋಹಣ
ನುಬುವ್ವತಿನ ಹನ್ನೊಂದನೇ ವರ್ಷ ನೆಬಿ ಸ.ಅ ರವರನ್ನು ಅಲ್ಲಾಹು ಇತರ ಅಂಬಿಯಾಗಳಿಗೆ ನೀಡದ ವಿಶಿಷ್ಟವಾದ ಕಾರ್ಯಕ್ರಮದ ಮೂಲಕ ತನ್ನೆಡೆಗೆ ಆಹ್ವಾನಿಸಿ ಗೌರವಿಸಿದನು.ರಜಬ್ ಇಪ್ಪತ್ತೇಳನೆಯ ರಾತ್ರಿ ಸೋಮವಾರದಂದು ಇಸ್ರಾಹ್ ಮಿಹ್ರಾಜ್ ಎಂಬ ಮಹೋನ್ನತ ಚಾರಿತ್ರಿಕ ಸಂಭವ ಉಂಟಾಯಿತು.ಮಕ್ಕಾದ ಮಸ್ಜಿದುಲ್ ಹರಾಮಿನಿಂದ ಪ್ಯಾಲೆಸ್ತೀನಿನಲ್ಲಿರುವ ಮಸ್ಜಿದುಲ್ ಅಖ್ಸಾ ವರೆಗಿನ ಪ್ರಯಾಣಕ್ಕೆ ಇಸ್ರಾಹ್ ಎಂದೂ ಅಲ್ಲಿಂದ ಏಳನೇ ಆಕಾಶ ದಾಟಿ ಆಚೆಗಿರುವ ಸಿದ್ರತುಲ್ ಮುಂತಹಾ ವರೆಗಿನ ಪ್ರಯಾಣಕ್ಕೆ ಮಿಹ್ರಾಜ್ ಎಂದೂ ಹೇಳಲಾಗುತ್ತದೆ.
ನೆಬಿ ಸ.ಅ ರವರು ಉಮ್ಮು ಹಾನೀ ರವರ ಮನೆಯಲ್ಲಿ ರಾತ್ರಿಯ ನಿದ್ದೆಯಲ್ಲಿರುವಾಗ ಜಿಬ್ರೀಲ್ ಅ.ಸ ಬುರಾಖ್ ಎಂಬ ವಿಶಿಷ್ಠ ವಾಹನದೊಂದಿಗೆ ಬಂದರು. ( ಬುರಾಖ್ ಎಂಬ ವಾಹನದ ವೇಗವು ಅದ್ಬುತವಾಗಿದೆ.ಅದರ ಪ್ರತಿಯೊಂದು ಹೆಜ್ಜೆಯು ಮನುಷ್ಯನ ಕಣ್ಣು ದ್ರಷ್ಠಿಗೆ ಎಷ್ಟು ವಿದೂರದ ತನಕವಿರುವ ವಸ್ತುಗಳು ಗೋಚರಿಸುತ್ತವೆಯೋ ಅಲ್ಲಿಯ ತನಕವಾಗಿದೆ ) ನೆಬಿ ಸ.ಅ ಅದರಲ್ಲಿ ಏರಿ ಬೈತುಲ್ ಮುಖದ್ದಸ್ ( ಮಸ್ಜಿದುಲ್ ಅಖ್ಸಾ ) ಗೆ ಹೋದರು.ಅಲ್ಲಿ ಇಬ್ರಾಹಿಂ ನೆಬಿ ಅ.ಸ, ಮೂಸಾ ನೆಬಿ ಅ.ಸ, ಈಸಾ ನೆಬಿ ಅ.ಸ ಮೊದಲಾದ ಒಂದು ಗುಂಪು ಪ್ರವಾದಿಗಳನ್ನು ಕಂಡರು.ಅವರು ನೆಬಿ ಸ.ಅ ರವರನ್ನು ಆದರದಿಂದ ಸ್ವಾಗತಿಸಿದರು.ಅವರಿಗೆ ನೆಬಿ ಸ.ಅ ಇಮಾಮಾಗಿ ನಿಂತು ನಮಾಜು ನಿರ್ವಹಿಸಿದರು.ಬಳಿಕ ಅಲ್ಲಿಂದ ( ಮಿಹ್ರಾಜ್ ) ಆಕಾಶರೋಹಣ ಯಾತ್ರೆ ಪ್ರಾರಂಭವಾಯಿತು.ಮಿಂಚಿನ ವೇಗದಲ್ಲಿ ಯಾತ್ರೆಗೈದು ಒಂದನೇ ಆಕಾಶ,ಎರಡನೇ ಆಕಾಶ ಹೀಗೆ ಏಳನೇ ಆಕಾಶ ತಲುಪಿದರು.ಪ್ರತಿಯೊಂದು ಆಕಾಶದಲ್ಲಿಯೂ ಮಲಕುಗಳು ಮತ್ತು ಪ್ರವಾದಿಗಳು ನೆಬಿ ಸ.ಅ ರವರನ್ನು ಸ್ವಾಗತಿಸಿದರು.ಒಂದನೇ ಆಕಾಶದಲ್ಲಿ ಆದಂ ನೆಬಿ ಅ.ಸ, ಎರಡನೇ ಆಕಾಶದಲ್ಲಿ ಈಸಾ ನೆಬಿ ಅ.ಸ, ಮೂರನೇ ಆಕಾಶದಲ್ಲಿ ಯೂಸುಫ್ ನೆಬಿ ಅ.ಸ, ನಾಲ್ಕರಲ್ಲಿ ಇದ್ರೀಸ್ ನೆಬಿ ಅ.ಸ, ಐದರಲ್ಲಿ ಹಾರೂನ್ ನೆಬಿ ಅ.ಸ, ಆರರಲ್ಲಿ ಮೂಸಾ ನೆಬಿ ಅ.ಸ, ಏಳರಲ್ಲಿ ಇಬ್ರಾಹಿಂ ನೆಬಿ ಅ.ಸ ನೆಬಿ ಸ.ಅ ರವರನ್ನು ಸ್ವೀಕರಿಸಿದರು.ಏಳನೇ ಆಕಾಶದಲ್ಲಿ ಬೈತುಲ್ ಮಹ್ಮೂರ್ ಎಂಬ ವಿಶೇಷ ಭವನಕ್ಕೆ ಇಬ್ರಾಹಿಮ್ ನೆಬಿ ಅ.ಸ ಒರಗಿ ಕುಳಿತಿರುವುದನ್ನು ನೆಬಿ ಸ.ಅ ಕಂಡರು.ಪ್ರತೀದಿನ ಆ ಭವನದೊಳಗೆ ಎಪ್ಪತ್ತು ಸಾವಿರ ಮಲಕುಗಳು ಪ್ರವೇಶಿಸುತ್ತಾರೆ.ಒಮ್ಮೆ ಪ್ರವೇಶಿಸಿದ ಮಲಕುಗಳು ಮತ್ತೆ ಪ್ರವೇಶಿಸುವುದಿಲ್ಲ.ಜಿಬ್ರೀಲ್ ಅ.ಸ ರವರ ನಿಜರೂಪದಲ್ಲಿ ಆರುನೂರು ರೆಕ್ಕೆಗಳೊಂದಿಗೆ ನೆಬಿ ಸ.ಅ ದರ್ಶಿಸಿದ್ದು ಅಲ್ಲಿಯಾಗಿತ್ತು.ಬೈತುಲ್ ಮಹ್ಮೂರಿನಿಂದ ಆಚೆಗೆ ಸಿದ್ರತುಲ್ ಮುಂತಹಾ ವರೆಗೆ ಜಿಬ್ರೀಲ್ ಅ.ಸ ಜೊತೆಯಾಗಿದ್ದರು.ಅದರ ಆಚೆಗೆ ಜಿಬ್ರೀಲ್ ಅ.ಸ ರವರ ಪ್ರವೇಶಕ್ಕೆ ಅನುಮತಿಯಿರಲಿಲ್ಲ.ಬಳಿಕ ನೆಬಿ ಸ.ಅ ಒಬ್ಬಂಟಿಗರಾಗಿ ಯಾತ್ರೆ ನಡೆಸಿ ಅಲ್ಲಾಹನನ್ನು ದರ್ಶಿಸಿ ಅಭಿಮುಖ ಸಂಭಾಷಣೆ ನಡೆಸಿದರು.ಕಡ್ಡಾಯಗೊಳಿಸಲ್ಪಟ್ಟ ಐವತ್ತು ವಖ್ತ್ ನಮಾಜಿನೊಂದಿಗೆ ನೆಬಿ ಸ.ಅ ಮರಳಿದರು.ಮರಳಿ ಬರುವಾಗ ಮೂಸಾ ನೆಬಿ ಅ.ಸ ರವರ ನಿರ್ದೇಶ ಮೇರೆಗೆ ಐವತ್ತು ವಖ್ತ್ ನಮಾಜಿನಲ್ಲಿ ಕಡಿತಗೊಳಿಸಲು ಅಲ್ಲಾಹನೊಂದಿಗೆ ಬೇಡಿಕೆಯಿಟ್ಟರು.ಅಲ್ಲಾಹು ಐವತ್ತರಿಂದ ಐದು ವಖ್ತನ್ನು ಕಡಿತಗೊಳಿಸಿದನು.ಒಂಭತ್ತು ಬಾರಿ ಇದು ಆವರ್ತನೆಯಾಯಿತು.ಹೀಗೆ ಐವತ್ತು ವಖ್ತ್ ನಮಾಜು ಐದು ವಖ್ತ್ ಆಯಿತು.
ನೆಬಿ ಸ.ಅ ಅಂದು ರಾತ್ರಿಯೇ ಮಕ್ಕಾಕ್ಕೆ ಮರಳಿ ತಲುಪಿದರು.ಕುರೈಶಿಗಳೊಂದಿಗೆ ನಡೆದ ಸತ್ಯಸಂಗತಿಯನ್ನು ವಿವರಿಸಿದರು.ಅವರು ನೆಬಿ ಸ.ಅ ರವರನ್ನು ಗೇಲಿಮಾಡಿ ಕೇಕೆಹಾಕಿ ಅಪಹಾಸ್ಯ ಮಾಡಿದರು.ಕೆಲವರು ಅಪಹಾಸ್ಯದೊಂದಿಗೆ ಚಪ್ಪಾಳೆ ತಟ್ಟಿದರು.ಇಸ್ಲಾಂ ಧರ್ಮ ಸ್ವೀಕರಿಸಿದ್ದ ಕೆಲವು ದುರ್ಬಲ ವಿಶ್ವಾಸಿಗಳು ಅವಿಶ್ವಾಸಿಗಳಾದರು.ನೈಜ ವಿಶ್ವಾಸಿಗಳಿಗೆ ಯಾವುದೇ ಸಂಶಯ ಉಂಟಾಗಲಿಲ್ಲ.ನೆಬಿ ಸ.ಅ ರವರ ಇಸ್ರಾಹ್ ಮಿಹ್ರಾಜನ್ನು ಪ್ರಪ್ರಥಮವಾಗಿ ಅಂಗೀಕರಿಸಿದ ಅಬೂಬಕರ್ ರ.ಅ. "ಸಿದ್ದೀಖ್" ಎಂಬ ಗೌರವ ನಾಮಕ್ಕೆ ಅರ್ಹರಾದರು.
ಅವಿಶ್ವಾಸಿಗಳು ನೆಬಿ ಸ.ಅ ರವರನ್ನು ಪರೀಕ್ಷಿಸಲು ಹಲವಾರು ಪ್ರಶ್ನೆಗಳನ್ನು ಕೇಳಿದರು.ನೆಬಿ ಸ.ಅ ಎಲ್ಲದಕ್ಕೂ ಸ್ಪಷ್ಟ ಉತ್ತರ ನೀಡಿದರು.ಬೈತುಲ್ ಮುಖದ್ದಸ್ ಮತ್ತು ಅದರ ಬಾಗಿಲುಗಳ ಕುರಿತು ಪ್ರಶ್ನಿಸಿದರು.ಸ್ಪಷ್ಟವಾಗಿ ಉತ್ತರಿಸಿದರು.ಮಾತ್ರವಲ್ಲ ಕುರೈಸಿಗಳ ವ್ಯಾಪಾರ ಸಂಘ ಅಲ್ಲಿ ತಲುಪಿದೆಯೆಂದೂ ಅದರಲ್ಲಿ ಎಷ್ಟು ಒಂಟೆಗಳಿವೆಯೆಂದೂ ಅವರು ಯಾವಾಗ ಊರಿಗೆ ಮರಳಿ ಬರುವರು ಎಂದೂ ವಿವರಿಸಿದರು.ನೆಬಿ ಸ.ಅ ರವರ ವಿವರಣೆ ಕೇಳಿ ಅವಿಶ್ವಾಸಿಗಳು ತಬ್ಬಿಬ್ಬಾದರು.ಮತ್ತೆ ಅವರಿಂದ ಮಾತು ಹೊರಡಲಿಲ್ಲ.
ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಜ್ರಾ.
ಅಖಬಃ ಕರಾರು..
ನೆಬಿ ಸ.ಅ ರವರು ಇಸ್ಲಾಮಿನ ಪ್ರಬೋಧನೆ ಪ್ರಾರಂಭಿಸಿ ಹತ್ತು ವರ್ಷ ಉರುಳಿತು.ಹಜ್ಜಿಗೆ ಬರುವ ಯಾತ್ರಿಕರನ್ನು ನೆಬಿ ಸ.ಅ ಸಮೀಪಿಸಿ ಇಸ್ಲಾಮಿನ ಪ್ರಬೋಧನೆ ನೀಡುತ್ತಿದ್ದರು.ಅರಬೀ ಗೋತ್ರಗಳಲ್ಲಿ ಹಲವು ಗೋತ್ರಗಳನ್ನು ಇಸ್ಲಾಮಿಗೆ ಆಹ್ವಾನಿಸಿದರು.ಕೆಲವರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು.ಇನ್ನೂ ಕೆಲವರು ಕೆಟ್ಟ ರೀತಿಯಲ್ಲಿ ಪ್ರತಿಕ್ರಯಿಸಿದರು.ಕೆಲವರಂತೂ ಇಸ್ಲಾಮಿಗೆ ಬರಲು ಶರತ್ತುಗಳನ್ನು ಮುಂದಿಟ್ಟರು.ಬನೂಆಮಿರ್ ನೆಬಿ ಸ.ಅ ರವರ ನಂತರ ಅಧಿಕಾರ ನೀಡಬೇಕೆಂದಾಗಿತ್ತು ಶರತ್ತು ಮುಂದಿಟ್ಟದ್ದು.ಅಧಿಕಾರ ಅಲ್ಲಾಹನದ್ದಾಗಿದೆ.ಅವನು ಇಚ್ಚಿಸಿದವರಿಗೆ ಅಧಿಕಾರವನ್ನು ನೀಡುತ್ತಾನೆ ಎಂದಾಗಿತ್ತು ನೆಬಿ ಸ.ಅ ರವರ ಮರು ಪ್ರತಿಕ್ರಿಯೆ.
ಅತ್ತ ಮದೀನದಲ್ಲಿ ಪ್ರಸಿದ್ಧವಾದ ಅವ್ಸ್ ಖಝ್ರಜ್ ಎಂಬ ಎರಡು ಗೋತ್ರಗಳಿತ್ತು.ಅವರ ನೆರೆಹೊರೆಯವರಾಗಿ ಬನೂ ಖೈನುಖಾಹ್, ಬನೂ ಖುರೈಲಃ, ಬನೂನ್ನಳೀರ್ ಎಂಬ ಯಹೂದಿ ಗೋತ್ರಗಳು ವಾಸಿಸುತ್ತಿದ್ದರು. " ಒಬ್ಬ ಪ್ರವಾದಿಯ ಆಗಮನವಾಗಲಿದೆ.ಆದ್ ಮತ್ತು ಇರಮ್ ನನ್ನು ವಧಿಸಿದಂತೆ ನಾವು ಆ ಪ್ರವಾದಿಯ ಜತೆಗೆ ನಿಂತು ನಿಮ್ಮನ್ನು ನಾವು ವಧಿಸಲಿದ್ದೇವೆ " ಎಂದು ಯಹೂದಿಗಳು ಜಂಭ ಕೊಚ್ಚುತ್ತಿದ್ದರು.
ನುಬುವ್ವತಿನ ಹನ್ನೊಂದನೇ ವರ್ಷ ಹಜ್ಜಿಗೆ ಮದೀನದಿಂದ ಮಕ್ಕಾಕ್ಕೆ ಬಂದ ಖಜ್ರಜ್ ಗೋತ್ರದ ಆರು ಮಂದಿಯನ್ನು ನೆಬಿ ಸ.ಅ ಕಂಡು ಮಾತನಾಡಿದರು.ಇಸ್ಲಾಮಿನ ಕುರಿತು ತಿಳಿದ ಅವರು ಯಹೂದಿಗಳು ಹೇಳಿದ ಮಾತನ್ನು ನೆನಪಿಸಿ ಇಸ್ಲಾಂ ಧರ್ಮ ಸ್ವೀಕರಿಸಿದರು.ಅವರು ಹಜ್ ಕರ್ಮ ಮುಗಿದ ಬಳಿಕ ಮದೀನಕ್ಕೆ ಹೋಗಿ ಜನರನ್ನು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಪ್ರಾರಂಭಿಸಿದರು.ಧಾರಾಳ ಜನರು ಇಸ್ಲಾಂ ಧರ್ಮದ ಅನುಯಾಯಿಗಳಾದರು.
ನುಬುವ್ವತಿನ ಹನ್ನೆರಡನೇ ವರ್ಷ ಹಜ್ ವೇಳೆಯಲ್ಲಿ ಖಝ್ರಜ್ ಗೋತ್ರದ ಹತ್ತು ಮಂದಿ ಅವ್ಸ್ ಗೋತ್ರದ ಎರಡು ಮಂದಿ ಅಖಬಃದ ಸಮೀಪ ನೆಬಿ ಸ.ಅ ರವರೊಂದಿಗೆ ಒಪ್ಪಂದ ಮಾಡಿದರು. " ಅಲ್ಲಾಹನಿಗಲ್ಲದೆ ಆರಾಧಿಸುವುದಿಲ್ಲ.ಶಿರ್ಕ್ ಮಾಡುವುದಿಲ್ಲ.ಕಳ್ಳತನ, ವ್ಯಭಿಚಾರ ಮಾಡುವುದಿಲ್ಲ.ಮಕ್ಕಳನ್ನು ವಧಿಸುವುದಿಲ್ಲ. ಸುಳ್ಳು ಹೇಳುವುದಿಲ್ಲ.ಉತ್ತಮ ಕಾರ್ಯಗಳಲ್ಲಿ ನೆಬಿ ಸ.ಅ ರವರನ್ನು ಧಿಕ್ಕರಿಸುವುದಿಲ್ಲ." ಎಂದು ಅವರು ಸತ್ಯ ಪ್ರತಿಜ್ಞೆಯಲ್ಲಿ ಕರಾರು ಮಾಡಿದರು.ಇದು ಪ್ರಥಮ ಅಖಬಃ ಒಪ್ಪಂದ ಎಂಬ ಹೆಸರಿನಲ್ಲಿ ಅರಿಯಲ್ಪಡುತ್ತದೆ.
ಬೈಅತ್ ಮಾಡಿದವರು ಮದೀನಕ್ಕೆ ಮರಳುವಾಗ ಮಿಸ್ಅಬುಬ್ನು ಉಮೈರ್ ರ.ಅ ರವರನ್ನು ಕರ್ಮಶಾಸ್ತ್ರ ಕಲಿಸುವ ಸಲುವಾಗಿ ಅವರೊಂದಿಗೆ ನೆಬಿ ಸ.ಅ ಕಳುಹಿಸಿಕೊಟ್ಟರು.ಮಿಸ್ಅಬುಬ್ನು ಉಮೈರ್ ರ.ಅ ರವರ ಮುಖಾಂತರ ಸಅದು ಬ್ನು ಮುಆದ್ ರ.ಅ, ಉಸೈದು ಬ್ನು ಹುಲೈರ್ ರ.ಅ ಎಂಬ ಪ್ರಮುಖರು ಇಸ್ಲಾಂ ಸ್ವೀಕರಿಸಿದರು.ಮದೀನದಲ್ಲಿ ಇಸ್ಲಾಂ ವ್ಯಾಪಕ ಪ್ರಚಾರ ಪಡೆಯಿತು.
ನುಬುವ್ವತಿನ ಹದಿಮೂರನೇ ವರ್ಷ ಮದೀನದಿಂದ ಹಜ್ ಗೆ ಬಂದವರಲ್ಲಿ 73 ಪುರುಷರು 2 ಸ್ತ್ರೀಯರು ಇದ್ದರು.ಅವರು ರಾತ್ರಿ ವೇಳೆ ಅಖಬಃದ ಸಮೀಪ ನೆಬಿ ಸ.ಅ ರವರನ್ನು ಸಮೀಪಿಸಿದರು.ತಾವು ಮದೀನಕ್ಕೆ ಬರುವುದಾದರೆ ನಮ್ಮ ಪತ್ನಿ ಮಕ್ಕಳನ್ನು ಸಂರಕ್ಷಿಸುವ ಹಾಗೆ ತಮ್ಮನ್ನು ಸಂರಕ್ಷಿಸುತ್ತೇವೆ ಎಂದು ನೆಬಿ ಸ.ಅ ರವರೊಂದಿಗೆ ಬೈಅತ್ ಮಾಡಿದರು.ನೆಬಿ ಸ.ಅ ಅವರಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು 12 ನಾಯಕರನ್ನು ಆಯ್ಕೆ ಮಾಡಿದರು.ಇದಾಗಿದೆ ಎರಡನೇ ಅಖಬಃ ಒಪ್ಪಂದ.
ಮುಸ್ಲಿಮರ ಪಲಾಯನ..
ರಾತ್ರಿ ನಡೆದ ರಹಸ್ಯ ಒಪ್ಪಂದ ಬೆಳಿಗ್ಗೆಯಾಗುವಷ್ಟರಲ್ಲಿ ಕುರೈಶಿಗಳು ಹೇಗೋ ಅರಿತರು.ಅವರು ಮದೀನದಿಂದ ಬಂದ ಹಾಜಿಗಳೊಂದಿಗೆ ಹೇಳಿದರು : ನೀವು ಮುಹಮ್ಮದ್ ನನ್ನು ಕೊಂಡು ಹೋಗಲು ಬಂದವರು.ನಮ್ಮ ವಿರುದ್ಧ ಯುದ್ಧ ಮಾಡಲು ನೀವು ಅವನೊಂದಿಗೆ ಗೂಢಾಲೋಚನೆ ನಡೆಸಿದ್ದೀರಿ.ಇದು ಕೇಳಿದ ಮುಶ್ರಿಕುಗಳಾದ ಮದೀನ ನಿವಾಸಿಗಳು ಹೇಳಿದರು. : ಅಂತಹ ವಿಷಯವೇ ಇಲ್ಲ.ನಿಮ್ಮೊಂದಿಗೆ ಯುದ್ಧ ಮಾಡಲು ನಾವು ಒಪ್ಪಂದ ಮಾಡಲೇ ಇಲ್ಲ.
ಇದರ ಬಳಿಕ ಮಕ್ಕಾ ಮುಶ್ರಿಕರ ಉಪಟಳ ತುಂಬಾ ಹೆಚ್ಚಾಯಿತು.ಆಗ ನೆಬಿ ಸ.ಅ ಮುಸ್ಲಿಮರೊಂದಿಗೆ ಮದೀನಕ್ಕೆ ಹಿಜ್ರ ಹೋಗಲು ಆದೇಶಿಸಿದರು.ಅವರು ಗುಂಪುಗುಂಪಾಗಿಯೂ ಒಬ್ಬಂಟಿಗರಾಗಿಯೂ ಮದೀನಕ್ಕೆ ಹಿಜ್ರಾ (ವಲಸೆ) ಹೋದರು.ಇಸ್ಲಾಮ್ ದೀನಿಗಾಗಿ ಸ್ವಂತ ಊರು,ಮನೆ ಸಂಪತ್ತನ್ನು ಉಪೇಕ್ಷಿಸಿ ತಂದೆ ತಾಯಿ ಮಕ್ಕಳು,ಕುಟುಂಬಸ್ಥರನ್ನು ಬಿಟ್ಟು ಮದೀನಕ್ಕೆ ಪಲಾಯನ ಮಾಡಿದರು.ಅಂತಿಮವಾಗಿ ಮಕ್ಕಾದಲ್ಲಿ ಅಬೂಬಕರ್ ಸಿದ್ದೀಖ್ ರ.ಅ, ಅಲಿ ರ.ಅ ಮತ್ತು ಕೆಲವೊಂದು ದುರ್ಬಲರು ಮಾತ್ರ ಬಾಕಿಯಾದರು.
ಕುರೈಶಿಗಳು ಎಚ್ಚೆತ್ತರು.ಮಕ್ಕಾದಿಂದ ಮದೀನಕ್ಕೆ ಹಿಜ್ರಾ ಹೋದ ಮುಹಾಜಿರ್ ಗಳೊಂದಿಗೆ ನೆಬಿ ಸ.ಅ ರವರು ಕೂಡಾ ಹೋಗುವರು ಎಂದು ಹೆದರಿದರು.ಮಕ್ಕಾ ಮುಶ್ರಿಕರು ದಾರುನ್ನದ್ವಾ ದಲ್ಲಿ ಒಗ್ಗೂಡಿದರು.ವಿಷಯಾವಲೋಕನ ಮಾಡಿದರು.ಕಾವೇರಿದ ಚರ್ಚೆ ನಡೆಯಿತು.ಸೆರೆಮನೆಯಲ್ಲಿ ಬಂಧನದಲ್ಲಿರಿಸುವಾ.ಊರಿನಿಂದ ಗಡೀಪಾರು ಮಾಡುವಾ.ಕೊಂದು ಬಿಡುವಾ ಎಂಬ ಅಭಿಪ್ರಾಯಗಳು ಒಬ್ಬೊಬ್ಬರಿಂದ ಬಂತು.ಕೊನೆಗೆ ನೆಬಿ ಸ.ಅ ರವರನ್ನು ಕೊಂದು ಬಿಡುವಾ ಎಂಬ ಅಭಿಪ್ರಾಯಕ್ಕೆ ಅವರೆಲ್ಲರೂ ಬಂದರು.ಪ್ರತಿಯೊಂದು ಗೋತ್ರಗಳಿಂದ ಶಕ್ತರಾದ ಒಬ್ಬೊಬ್ಬ ಯುವಕರನ್ನು ಆರಿಸುವುದು.ರಾತ್ರಿ ಖಡ್ಗದೊಂದಿಗೆ ನೆಬಿ ಸ.ಅ ರವರ ಮನೆಯನ್ನು ಸುತ್ತುವರಿಯುವುದು.ಮನೆಯಿಂದ ಹೊರಬರುವಾಗ ಎಲ್ಲರೂ ಒಟ್ಟಿಗೆ ಸೇರಿ ಕೊಲ್ಲುವುದು ಎಂಬುದಾಗಿತ್ತು ಅವರ ತೀರ್ಮಾನ.ಆದರೆ ಅಲ್ಲಾಹನು ಮುಂಚೆಯೇ ನೆಬಿ ಸ.ಅ ರವರಿಗೆ ಶತ್ರುಗಳ ತೀರ್ಮಾನವನ್ನು ತಿಳಿಸಿ ಕೊಟ್ಟಿದ್ದನು.ನೆಬಿ ಸ.ಅ ಮತ್ತು ಅಬೂಬಕರ್ ಸಿದ್ದೀಖ್ ರ.ಅ ಯಾತ್ರೆಗೆ ಮೊದಲೇ ರೆಡಿಯಾಗಿದ್ದರು.ಶತ್ರುಗಳು ತೀರ್ಮಾನದಂತೆ ರಾತ್ರಿ ನೆಬಿ ಸ.ಅ ರವರ ಮನೆ ಸುತ್ತುವರಿದರು.ಮನೆಯಲ್ಲಿ ನೆಬಿ ಸ.ಅ ರವರೊಂದಿಗೆ ಅಲಿ ರ.ಅ ಇದ್ದರು.ತನ್ನ ಮಂಚದಲ್ಲಿ ತನ್ನ ಕಂಬಳಿ ಹೊದ್ದು ಮಲಗಲು ನೆಬಿ ಸ.ಅ ಅಲಿ ರ.ಅ ರವರಿಗೆ ನಿರ್ದೇಶಿಸಿದರು.ನೆಬಿ ಸ.ಅ ಒಂದು ಹಿಡಿ ಮಣ್ಣು ತೆಗೆದು ಯಾಸೀನ್ ಸೂರತಿನ وجعلنا من بين أيديهم سدا ಎಂದು ಆರಂಭಗೊಳ್ಳುವ ಆಯತ್ ಓದಿ ಅವರ ನೇರ ಎಸೆದರು.ಆ ಮಣ್ಣು ಶತ್ರುಗಳ ಕಣ್ಣಿಗೆ ಹೋಗಿ ಬಿತ್ತು.ಎಲ್ಲರೂ ಕಣ್ಣು ಉಜ್ಜಿ ಕೊಳ್ಳುತ್ತಿರುವ ಮಧ್ಯೆ ನೆಬಿ ಸ.ಅ ಅವರ ಎದುರಿನಿಂದಲೇ ಮನೆಯಿಂದ ಹೊರ ಸಾಗಿ ಅಬೂಬಕರ್ ರ.ಅ ರವರ ಮನೆ ತಲುಪಿದರು.
ನೆಬಿ ಸ.ಅ ಮನೆಯಿಂದ ಹೊರ ಬಂದು ಶತ್ರುಗಳಿಂದ ಪಾರಾಗಿ ಅಬೂಬಕರ್ ರ.ಅ ರವರ ಮನೆ ತಲುಪಿದರು.ಅಲ್ಲಿಂದ ಯಾತ್ರೆಗೆ ಬೇಕಾದ ಆಹಾರ ಪಾನೀಯಗಳನ್ನು ತೆಗೆದು ಅಬೂಬಕರ್ ರ.ಅ ರವರ ಜೊತೆಯಾಗಿ ಯಾತ್ರೆ ಪ್ರಾರಂಭಿಸಿದರು.ಮಕ್ಕಾದ ಸವ್ರ್ ಗುಹೆ ತಲುಪಿದರು.ನೆಬಿ ಸ.ಅ ರವರನ್ನು ವಧಿಸಲು ಮನೆ ಸುತ್ತುವರಿದಿದ್ದ ಕುರೈಶೀ ಯುವಕರು ಮಂಚದಲ್ಲಿ ಮಲಗಿರುವುದು ನೆಬಿ ಸ.ಅ ಆಗಿರುವರು ಎಂದು ಭಾವಿಸಿದರು.ಸುಬಹಿ ಆದಾಗ ಅಲೀ ರ.ಅ ನಿದ್ರೆಯಿಂದ ಎದ್ದರು.ನೆಬಿ ಸ.ಅ ಇಲ್ಲಿಂದ ರಾತ್ರಿಯೇ ಹೊರಟು ಹೋಗಿದ್ದಾರೆ ಎಂದು ಆವಾಗಲೇ ಕುರೈಶಿಗಳು ತಿಳಿದದ್ದು.ಕುರೈಶಿಗಳ ಕೋಪ ನೆತ್ತಿಗೇರಿತು.ನಾಲ್ಕು ದಿಕ್ಕುಗಳಿಗೂ ನೆಬಿ ಸ.ಅ ರವರನ್ನು ಹುಡುಕಿ ಕೊಂಡು ತರಲು ಜನರನ್ನು ಛೂ ಬಿಟ್ಟರು.ಹುಡುಕಿ ಕೊಂಡು ಬರುವವರಿಗೆ ನೂರು ಒಂಟೆಯನ್ನು ಬಹುಮಾನವಾಗಿ ನೀಡಲಾಗುವುದೆಂದು ಪ್ರಖ್ಯಾಪಿಸಿದರು.ಶತ್ರುಗಳು ನಾಲ್ಕು ದೆಸೆಯಿಂದಲೂ ಹುಡುಕಲು ಆರಂಭಿಸಿದರು.ಕೆಲವರು ನೆಬಿ ಸ.ಅ ಮತ್ತು ಅಬೂಬಕರ್ ರ.ಅ ಅಡಗೀ ಕೂತ ಸವ್ರ್ ಗುಹೆ ಯ ಸನಿಹಕ್ಕೂ ಬಂದರು.ಇದನ್ನು ನೋಡುತ್ತಿದ್ದ ಅಬೂಬಕರ್ ರ.ಅ ಭಯಭೀತರಾದರು.ನೆಬಿ ಸ.ಅ ಅವರನ್ನು ಸಮಾಧಾನಿಸಿದರು.ದುಃಖಿಸಬೇಡ.ಅಲ್ಲಾಹು ನಮ್ಮೊಂದಿಗಿದ್ದಾನೆ.ಅಬೂಬಕರ್ ರ.ಅ ಹೇಳಿದರು : ಶತ್ರುಗಳು ಗುಹೆಯ ಕೆಳಭಾಗ ನೋಡಿದರೆ ನಮ್ಮನ್ನು ಅವರು ಕಾಣುವರು.ನೆಬಿ ಸ.ಅ ಹೇಳಿದರು : ನಾವು ಎರಡು ಮಂದಿಯ ಕುರಿತು ನೀವು ಏನು ಭಾವಿಸಿದ್ದೀರಿ.ಮೂರನೆಯವನಾಗಿ ಅಲ್ಲಾಹು ನಮ್ಮ ಸಹಾಯಕ್ಕಿದ್ದಾನೆ.ಅಲ್ಲಾಹು ಶತ್ರುಗಳನ್ನು ಅವರಿಂದ ದೂರ ಮಾಡಿದನು.ಗುಹೆಯ ಮೇಲ್ಭಾಗದಲ್ಲಿ ಜೇಡರ ಬಲೆಯನ್ನು ಮತ್ತು ಎರಡು ಪಾರಿವಾಳಗಳು ಗೂಡುಕಟ್ಟಿ ಮೊಟ್ಟೆ ಇಟ್ಟಿದ್ದನ್ನು ನೋಡಿದ ಶತ್ರುಗಳು ಈ ಗುಹೆಯೊಳಗೆ ಯಾರೂ ಅಡಗಿ ಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂದು ಭಾವಿಸಿ ತಿರುಗಿ ಹೋದರು.
ಅಬೂಬಕರ್ ರ.ಅ ರವರ ಮಗನಾದ ಅಬ್ದುಲ್ಲಾಹ್ ರ.ಅ ರವರನ್ನು ಶತ್ರುಗಳ ವಿವರಗಳನ್ನು ತಿಳಿದು ರಾತ್ರಿ ಅವರಿಗೆ ತಿಳಿಸಲು ಏರ್ಪಾಟು ಮಾಡಿದ್ದರು.ಪುತ್ರಿ ಅಸ್ಮಾ ರ.ಅ ಆಹಾರ ಪಾನೀಯಗಳನ್ನು ಅವರಿಗೆ ಕೊಂಡುಹೋಗಿ ಮುಟ್ಟಿಸುತ್ತಿದ್ದರು.ಮೂರು ದಿವಸಗಳ ಬಳಿಕ ಅಂದರೆ ಶತ್ರುಗಳ ಹುಡುಕಾಟ ಸ್ವಲ್ಪ ಸ್ಥಗಿತವಾದ ನಂತರ ಮುಂಚೆಯೇ ನಿರ್ಧರಿಸಿದ ತೀರ್ಮಾನದಂತೆ ಗುರುವಾರದಂದು ಮದೀನಕ್ಕೆ ಹೋಗುವ ಹಾದಿ ತೋರಿಸುವ ಅಬ್ದುಲ್ಲಾಹಿ ಇಬ್ನು ಉರೈಖಿಳ್ ಎರಡು ಒಂಟೆಗಳೊಂದಿಗೆ ಆಗಮಿಸಿದರು.ನೆಬಿ ಸ.ಅ ಮತ್ತು ಅಬೂಬಕರ್ ಸಿದ್ದೀಖ್ ರ.ಅ ರವರನ್ನು ಒಂಟೆಯ ಮೇಲೇರಿಸಿ ಸಮುದ್ರ ಕಿನಾರೆಯ ಮೂಲಕ ಮದೀನಕ್ಕೆ ಯಾತ್ರೆ ಆರಂಭಿಸಿದರು.ಸಹಾಯಕನಾಗಿ ಆಮಿರುಬ್ನು ಫುಹೈರ ಕೂಡಾ ಜತೆಗಿದ್ದರು.
ದಾರಿ ಮಧ್ಯೆ ಸುರಾಖತು ಇಬ್ನು ಮಾಲಿಕ್ ಎಂಬ ದುಷ್ಟ ತನ್ನ ಕುದುರೆಯ ಮೂಲಕ ಇವರನ್ನು ಹಿಂಬಾಲಿಸಲು ಶುರು ಮಾಡಿದನು.ಸ್ವಲ್ಪ ಮುಂದೆ ಸಾಗಿದಂತೆ ಕುದುರೆ ಎಡರಿ ಬಿತ್ತು.ಕುದುರೆಯನ್ನು ಎದ್ದು ನಿಲ್ಲಿಸಿ ಮತ್ತೆ ಹಿಂಬಾಲಿಸಿದಾಗ ಕುದುರೆಯ ಕಾಲುಗಳು ಈವಾಗ ಮಣ್ಣಿನಡಿಗೆ ಹುದುಗಿ ಹೋಯಿತು.ಕುದುರೆಯನ್ನು ಎಬ್ಬಿಸಲು ಆಗದೆ ಸುರಾಖ ಚಡಪಡಿಸಿದನು.ನೆಬಿ ಸ.ಅ ರವರನ್ನು ಹಿಂಬಾಲಿಸಲು ಸಾಧ್ಯವಿಲ್ಲವೆಂಬುದನ್ನು ಆತ ಅರಿತ ಬಳಿಕ ನೆಬಿ ಸ.ಅ ಆತನಿಗೆ ಅಭಯ ಹಸ್ತ ನೀಡಿದರು.ಆತ ಮತ್ತೆ ಹಿಂಬಾಲಿಸಲಿಲ್ಲ.
ನೆಬಿ ಸ.ಅ ಪವಿತ್ರ ಮದೀನದಲ್ಲಿ...
ಮದೀನಾ ನಿವಾಸಿಗಳು ನೆಬಿ ಸ.ಅ ಮಕ್ಕಾದಿಂದ ಹೊರಟ ವಿಷಯ ಅರಿತರು.ಪ್ರತೀ ದಿನ ಬೆಳಿಗ್ಗೆ ಮದೀನದ ಗಡಿ ಪ್ರದೇಶದಲ್ಲಿ ಅವರು ರಸೂಲ್ ಸ.ಅ ರವರನ್ನು ಆಕಾಂಕ್ಷೆಯಿಂದ ಕಾಯುತ್ತಿದ್ದರು.ಮಧ್ಯಾಹ್ನದ ಸಮಯದಲ್ಲಿ ಅವರು ಮರಳಿ ಹೋಗುತ್ತಿದ್ದರು.ಒಂದು ದಿನ ಒಬ್ಬ ಯಹೂದಿ ಜೋರಾಗಿ ಕರೆದು ಹೇಳಿತ್ತಿದ್ದುದು ಅವರು ಆಲಿಸಿದರು : ಬನೂ ಖೈಲದವರೇ. ಇದೋ ನೋಡಿ.ನಿಮ್ಮ ಸೌಭಾಗ್ಯ ಆಗತವಾಗಿದೆ.ನೀವು ಕಾಯುತ್ತಿದ್ದ ಪ್ರವಾದಿ ಆಗಮಿಸುತ್ತಿದ್ದಾರೆ.ಇದು ಆಲಿಸಿದ ಕ್ಷಣ ಮಾತ್ರದಲ್ಲಿ ಅವರು ಆಯುಧಗಳೊಂದಿಗೆ ದೌಡಾಯಿಸಿ ಹರ್‍ರಃ ಎಂಬ ಸ್ಥಳದಲ್ಲಿ ನೆಬಿ ಸ.ಅ ಮತ್ತು ಅಬೂಬಕರ್ ರ.ಅ ರವರನ್ನು ಸ್ವಾಗತಿಸಿ ಸ್ವೀಕರಿಸಿದರು.
ನೆಬಿ ಸ.ಅ ಮತ್ತು ಸಂಘವು ಸಂಚರಿಸಿ ಮದೀನ ಸಮೀಪದ ಖುಬಾಹ್ ಎಂಬ ಪ್ರದೇಶಕ್ಕೆ ತಲುಪಿದರು.ರಬೀವುಲ್ ಅವ್ವಲ್ ಎಂಟು ಸೋಮವಾರವಾಗಿತ್ತು.ನೆಬಿ ಸ.ಅ ರವರಿಗೆ 53 ವರ್ಷ ಪ್ರಾಯವಾಗಿತ್ತು.ಬನೂ ಅಮ್ರುಬ್ನು ಅವ್ಫ್ ಎಂಬವರ ಮನೆಯಲ್ಲಿ ನಾಲ್ಕು ದಿನ ತಂಗಿದರು.ಅಲ್ಲಿ ಮಸ್ಜಿದು ಖುಬಾಹ್ ನಿರ್ಮಾಣವಾಯಿತು.ಮಕ್ಕಾದಲ್ಲಿದ್ದ ಸಂದರ್ಭದಲ್ಲಿ ನೆಬಿ ಸ.ಅ ರವರ ಬಳಿ ಸೂಕ್ಷಿಸಲು ನೀಡಲ್ಪಟ್ಟಿದ್ದ ಸೊತ್ತುಗಳನ್ನು ಅದರ ಅವಕಾಶಿಗಳಿಗೆ ನೀಡುವ ಜವಾಬ್ದಾರಿಯನ್ನು ಅಲೀ ರ.ಅ ರವರಿಗೆ ನೆಬಿ ಸ.ಅ ವಹಿಸಿದ್ದರು.ಅಂತೆಯೇ ಆ ಸೊತ್ತುಗಳನ್ನು ಅದರ ಅವಕಾಶಿಗಳಿಗೆ ನೀಡಿದ ಬಳಿಕ ಅಲೀ ರ.ಅ ನೆಬಿ ಸ.ಅ ರವರ ಜತೆ ಸೇರಿಕೊಂಡರು.
ನಾಲ್ಕು ದಿನಗಳ ಬಳಿಕ ಶುಕ್ರವಾರದಂದು ಬೆಳಿಗ್ಗೆ ಖುಬಾಹ್ ನಿಂದ ಯಾತ್ರೆ ಮುಂದುವರಿಸಿದರು.ಬನೂ ಸಾಲಿಮುಬ್ನು ಅವ್ಫ್ ಎಂಬವರ ಜಾಗದಲ್ಲಿ ಪ್ರಥಮ ಜುಮುಅಃ ನಮಾಜು ನಿರ್ವಹಿಸಿದರು.ಆವಾಗ ನೆಬಿ ಸ.ಅ ರವರೊಂದಿಗೆ ನೂರು ಮುಸ್ಲಿಮರಿದ್ದರು.ಮುಂದುವರಿದು ಒಂದು ದೊಡ್ಡ ಗುಂಪಿನೊಂದಿಗೆ ಮದೀನಃ ದ ಮಣ್ಣಿಗೆ ಪ್ರವೇಶಿಸಿದರು.ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನ ಪ್ರವೇಶಿಸುತ್ತಿದ್ದಂತೆಯೇ ಪುಳಕಿತಗೊಂಡು ಮದೀನ ನಿವಾಸಿಗಳು ಹರ್ಷೋಲ್ಲಸಿತರಾಗಿ ದಫ್ಫ್ ಬಾರಿಸಿ ಹಾಡಿಹೊಗಳಿ ಸ್ವಾಗತಿಸಿ ಸ್ವೀಕರಿಸಿದರು.
طلع البدر علينا.من ثنيات الوداع
وجب الشكر علينا.ما دعا لله داع
أيهاالمبعوث فينا.جئت بالأمر المطاع
ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನದ ಒಂದೊಂದೇ ಮನೆಗಳನ್ನು ಹಾದು ಹೋಗುತ್ತಿದ್ದರು.ಒಂಟೆಯ ಮೂಗುದಾರವನ್ನು ಹಿಡಿದು ಮದೀನದ ಪ್ರತೀ ಅನ್ಸಾರಿಯೂ ನಮ್ಮ ಮನೆಗೆ ಬರಬೇಕೆಂದು ಆಹ್ವಾನ ನೀಡಿದರು.ನೆಬಿ ಸ.ಅ ಹೇಳಿದರು : ಒಂಟೆಯನ್ನು ಬಿಟ್ಟು ಬಿಡಿರಿ. ಅದು ಎಲ್ಲಿ ನಿಲ್ಲಬೇಕೆಂದು ಅದಕ್ಕೆ ನಿರ್ದೇಶ ಇದೆ.ಒಂಟೆಯು ಮುಂದೆ ಸಾಗುತ್ತಾ ಕೊನೆಗೆ ಅಬೂ ಅಯ್ಯೂಬುಲ್ ಅನ್ಸಾರಿ ರ.ಅ ರವರ ಮನೆಯ ಮುಂದೆ ಒಂಟೆ ಮೊಣ ಕಾಲೂರಿದವು.ಇಂಶಾ ಅಲ್ಲಾಹ್..ಇಲ್ಲಿಯಾಗಿದೆ ನಮ್ಮ ವಾಸ ಸ್ಥಳ.
رب أنزلني منزلا مباركا وأنت خير المنزلين
ಎಂದು ಹೇಳುತ್ತಾ ನೆಬಿ ಸ.ಅ ಇಳಿದರು.ನೆಬಿ ಸ.ಅ ರವರ ಒಂಟೆ ನಿಂತ ಸ್ಥಳದಲ್ಲಿ ಮಸ್ಜಿದು ನಬವೀ ನಿರ್ಮಿಸಲಾಯಿತು.ಒಂದು ವರ್ಷದಲ್ಲಿ ಮಸೀದಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಯಿತು.ಈ ಒಂದು ವರ್ಷ ನೆಬಿ ಸ.ಅ ಅಬೂ ಅಯ್ಯೂಬಿಲ್ ಅನ್ಸಾರಿ ರ.ಅ ರವರ ಮನೆಯಲ್ಲಿ ವಾಸಿಸಿದರು.
ಮುಹಾಜಿರುಗಳು ಮಕ್ಕಾದಿಂದ ಮದೀನಕ್ಕೆ ಬರುತ್ತಲೇ ಇದ್ದರು.ಸೆರೆಹಿಡಿಯಲ್ಪಟ್ಟವರು ಮತ್ತು ಕೆಲವೊಂದು ಬಲಹೀನರು ಮಾತ್ರ ಮಕ್ಕಾದಲ್ಲಿ ಬಾಕಿಯಾಗಿದ್ದರು.ಮದೀನಕ್ಕೆ ಬಂದವರಲ್ಲಿ ಹಲವರಿಗೆ ವಾತಾವರಣ ಬದಲಾದುದರಿಂದ ಜ್ವರ ಬಾಧಿಸಿತು.ಮದೀನದ ವಾತಾವರಣ ದೊಂದಿಗೆ ಹೊಂದಿಕೊಳ್ಳಲು ಅವರಿಗೆ ಕೊಂಚ ಸಮಯ ಹಿಡಿಯಿತು.ನೆಬಿ ಸ.ಅ ಪ್ರಾರ್ಥಿಸಿದರು.
أللهم حبب إلينا المدينة كما حببت إلينا مكة أو أشد وبارك لنا في مدها وفي صاعها
ಅಲ್ಲಾಹನೇ . ನಮಗೆ ಮಕ್ಕಾ ಹೇಗೆ ಇಷ್ಟವಾಗಿತ್ತೋ ಅದೇರೀತಿ ನಮಗೆ ಮದೀನವನ್ನು ಇಷ್ಟಗೊಳಿಸು.ಮದೀನದ ಪ್ರತಿಯೊಂದರಲ್ಲಿ ಬರ್ಕತನ್ನು ನೀಡು.
ನೆಬಿ ಸ.ಅ ರವರ ಪ್ರಾರ್ಥನೆಯ ಫಲವಾಗಿ ಮದೀನ ಭೂಮಿಯಲ್ಲಿಯೇ ಅತ್ಯಂತ ಉತ್ತಮ ಸ್ಥಳವಾಗಿ ಬದಲಾಯಿತು.
( ಗಮನಿಸಿ -ಮುಜಾಜಿರ್ ಅಂದರೆ ಮಕ್ಕಾದಿಂದ ಮದೀನಕ್ಕೆ ಹಿಜ್ರ ಬಂದವರು.
ಅನ್ಸಾರಿ ಅಂದರೆ ಮಕ್ಕಾದಿಂದ ಮದೀನಕ್ಕೆ ಬಂದ ಮುಹಾಜಿರುಗಳಿಗೆ ತಮ್ಮ ಎಲ್ಲವನ್ನು ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳು ).
ಅನ್ಸಾರಿಗಳು..
ಪವಿತ್ರ ಮದೀನದ ಪ್ರಮುಖ ಎರಡು ಗೋತ್ರಗಳಾಗಿತ್ತು ಅವ್ಸ್ ಮತ್ತು ಖಝ್ರಜ್.ಹಾರಿಸತು ಇಬ್ನು ಸಅಲಬಃ ಮತ್ತು ಖೈಲ ಬಿಂತ್ ಕಾಹಿಲ್ ರವರ ಮಕ್ಕಳಾದ ಅವ್ಸ್ ಮತ್ತು ಖಝ್ರಜ್ ರವರ ಸಂತಾನ ಪರಂಪರೆಯಾಗಿರುವರು ಅವರು.ನಂತರದ ಕಾಲದಲ್ಲಿ ಮಕ್ಕಳು ಮೊಮ್ಮಕ್ಕಳಾಗಿ ಒಂದು ದೊಡ್ಡ ಸಮೂಹವಾಗಿ ಬೆಳೆದರು.ಅವ್ಸ್ ನ ಸಂತಾನ ಪರಂಪರೆ ಅವ್ಸ್ ಗೋತ್ರವಾಗಿ ಖಝ್ರಜ್ ನ ಸಂತಾನ ಪರಂಪರೆ ಖಝ್ರಜ್ ಗೋತ್ರವಾಗಿ ಪ್ರಸಿದ್ಧರಾದರು.ಈ ಎರಡು ಗೋತ್ರಗಳ ಮಧ್ಯೆ ಶತ್ರುತ್ವ ಹೊಗೆಯಾಡುತ್ತಿತ್ತು.ನಿರಂತರ ಯುದ್ಧಗಳು ನಡೆಯುತ್ತಿತ್ತು.ಈ ಒಂದು ಸಂದರ್ಭದಲ್ಲಾಗಿದೆ ಪವಿತ್ರ ಮದೀನಕ್ಕೆ ನೆಬಿ ಸ.ಅ ರವರ ಆಗಮನವಾಗಿದ್ದು.
ಇಸ್ಲಾಂ ಧರ್ಮ ಸ್ವೀಕರಿಸಿದ ಬಳಿಕ ಅವರು ಪರಸ್ಪರ ಸೌಹಾರ್ದತೆ ಬೆಳೆಯಿತು.ಒಂದೇ ತಾಯಿಯ ಮಕ್ಕಳೆಂಬಂತೆ ಪರಸ್ಪರ ಸಾಹೋದರ್ಯತೆಯಿಂದ ಪ್ರೀತಿ ವಿಶ್ವಾಸದಿಂದ ಜೀವಿಸಲು ಪ್ರಾರಂಭಿಸಿದರು.ಇದರ ಕುರಿತು ಕುರಾನ್ ಹೇಳುವುದು ಹೀಗೆ..
" ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳನ್ನು ಸ್ಮರಿಸಿರಿ.ನೀವು ಪರಸ್ಪರ ಶತ್ರುಗಳಾಗಿದ್ದೀರಿ.ಆಗ ಅಲ್ಲಾಹು ನಿಮ್ಮ ಹ್ರದಯಗಳನ್ನು ಒಂದುಗೂಡಿಸಿದನು.ಆದುದರಿಂದ ಅವನ ಅನುಗ್ರಹದಿಂದ ನೀವು ಪರಸ್ಪರ ಸಹೋದರರಾದಿರಿ". ( ಆಲ ಇಮ್ರಾನ್ 103 )
ಪರಸ್ಪರ ಸಹೋದರರಂತೆ ಒಗ್ಗೂಡಿದ ಅವ್ಸ್ ಖಝ್ರಜ್ ಗೋತ್ರದವರು ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನಕ್ಕೆ ಹಿಜ್ರಾ ಬಂದ ಬಳಿಕ ಅನ್ಸಾರಿಗಳು ( ಸಹಾಯಿಗಳು ) ಎಂಬ ಹೆಸರಿನಲ್ಲಿ ಅರಿಯಲ್ಪಟ್ಟರು.ಮಕ್ಕಾದಿಂದ ಬಂದ ನೆಬಿ ಸ.ಅ ಸಹಿತವಿರುವ ಮುಹಾಜಿರುಗಳಿಗೆ ಅಭಯಹಸ್ತ ಚಾಚಿ ಸಹಾಯ ಸಹಕಾರ ನೀಡಿದ ನಿಮಿತ್ತವಾಗಿದೆ ಅವರು ಅನ್ಸಾರಿ ಎಂಬ ನಾಮದಿಂದ ಹೆಸರುವಾಸಿಯಾದದ್ದು.
ಉದಾತ್ತವಾದ ಸಾಹೋದರ್ಯತೆ.
ನೆಬಿ ಸ.ಅ ರವರು ಒಂದೊಂದೇ ಮುಹಾಜಿರರನ್ನು ಅನ್ಸಾರಿಗಳಿಗೆ ವಹಿಸಿಕೊಡುತ್ತಿದ್ದರು.ಪ್ರತೀಯೋರ್ವ ಮುಹಾಜಿರರನ್ನು ವಹಿಸಿ ಕೊಡುವಾಗ ಅನ್ಸಾರಿಗಳು ಮುಗಿಬೀಳುತ್ತಿದ್ದರು.ಕೊನೆಗೆ ಚೀಟಿ ಹಾಕುವ ಮೂಲಕವಾಗಿದೆ ಮುಹಾಜಿರರನ್ನು ಅವರಿಗೆ ವಹಿಸಿ ಕೊಟ್ಟದ್ದು.ಪರಸ್ಪರ ಸಹಾಯ ಸಹಕಾರ ಹಾಗೂ ವಾರೀಸು ಸೊತ್ತಿನ ಅವಕಾಶಿ ಹೀಗೆ ಎಲ್ಲದರಲ್ಲೂ ಮುಹಾಜಿರುಗಳನ್ನು ಸಹೋದರರಂತೆ ಅನ್ಸಾರಿಗಳು ಪರಿಗಣಿಸಿದರು.
ಫಲ ಕೊಡುವ ವ್ರಕ್ಷಗಳನ್ನು ಎರಡೂ ವಿಭಾಗಗಳ ಮಧ್ಯೆ ಸಮಪಾಲು ಮಾಡಲು ಅನ್ಸಾರಿಗಳು ಆವಶ್ಯಪಟ್ಟರು.ನೆಬಿ ಸ.ಅ ಅದು ನಿರಾಕರಿಸಿದಾಗ ಫಲಗಳನ್ನು ಸಮಪಾಲು ಮಾಡಲು ಅವರು ಹೇಳಿದರು.ಇದರ ನಂತರ ಅನ್ಸಾರಿಗಳು ಮತ್ತು ಮುಹಾಜಿರುಗಳು ಜತೆಯಾಗಿ ತೋಟಗಳ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು ಮತ್ತು ಅದರ ಫಲಗಳನ್ನು ಸಮಪಾಲಾಗಿ ತೆಗೆಯುತ್ತಿದ್ದರು.
ಮುಹಾಜಿರುಗಳು ಅನ್ಸಾರಿಗಳಿಗೆ ಭಾರವಾಗದ ರೀತಿಯಲ್ಲಿ ಜೀವಿಸಲು ಇಷ್ಟಪಟ್ಟರು.ಅವರು ವ್ಯಾಪಾರದಲ್ಲಿಯೂ ಕ್ರಷಿಯಲ್ಲಿಯೂ ಏರ್ಪಟ್ಟರು.ಸ್ವಂತವಾಗಿ ಬದುಕಲು ಜೀವನಮಾರ್ಗವನ್ನು ಕಂಡರು.ಸಅದು ಬ್ನು ರಬೀಇನುಲ್ ಅನ್ಸಾರಿ ರ.ಅ ತನ್ನ ಮುಹಾಜಿರ್ ಸಹೋದರನಾದ ಅಬ್ದುರ್‍ರಹ್ಮಾನು ಬ್ನು ಅವ್ಫ್ ಎಂಬವರೊಂದಿಗೆ ಹೇಳಿದರು : ಸಹೋದರಾ..ನಾನು ಮದೀನದ ದೊಡ್ಡ ಶ್ರೀಮಂತನಾಗಿದ್ದೇನೆ.ನನ್ನ ಸೊತ್ತಿನ ಅರ್ಧದಷ್ಟು ನಾನು ನಿಮಗೆ ನೀಡುತ್ತೇನೆ.ನನಗೆ ಎರಡು ಪತ್ನಿಯರಿದ್ದಾರೆ.ನಿಮಗೆ ಇಷ್ಟಪಟ್ಟವಳು ಯಾರೆಂದು ನೋಡಿರಿ.ಅವಳನ್ನು ನಾನು ವಿವಾಹ ವಿಮೋಚನೆ ನಡೆಸಿ ನಿಮಗೆ ವಿವಾಹ ಮಾಡಿ ಕೊಡುತ್ತೇನೆ. " ನಿಮ್ಮ ಕುಟುಂಬದಲ್ಲಿಯೂ ಸಂಪತ್ತಿನಲ್ಲಿಯೂ ಅಲ್ಲಾಹು ಬರ್ಕತ್ ನೀಡಲಿ" ಎಂದು ಪ್ರಾರ್ಥಿಸಿ ಆ ನಿರ್ದೇಶವನ್ನು ಸಂತೋಷದಿಂದ ಅಬ್ದುರ್‍ರಹ್ಮಾನುಬ್ನು ಅವ್ಫ್ ತಿರಸ್ಕರಿಸಿದರು.ಬಳಿಕ ಅವರು ನನಗೆ ಮಾರುಕಟ್ಟೆ ತೋರಿಸಿ ಕೊಡಿರಿ.ನಾನು ನನ್ನ ಜೀವನ ಮಾರ್ಗಕ್ಕಾಗಿ ಸ್ವಂತವಾಗಿ ಕೆಲಸ ಮಾಡುವೆ ಎಂದು ಹೇಳಿದರು.ಹೇಳಿದಂತೆಯೇ ಅವರು ಬಿಸಿನೆಸ್ ಪ್ರಾರಂಭಿಸಿದರು.ಕೆಲವು ದಿನಗಳ ಬಳಿಕ ಖರ್ಜೂರದ ಬೀಜದಷ್ಟು ಬಂಗಾರ ನೀಡಿ ಅಬ್ದುರ್‍ರಹ್ಮಾನುಬ್ನು ಅವ್ಫ್ ಅನ್ಸಾರೀ ವನಿತೆಯನ್ನು ಮದುವೆಯಾದರು.ಒಂದು ಆಡನ್ನು ಕೊಯ್ದು ವಿವಾಹ ಭೋಜನಕೂಟವನ್ನೂ ಏರ್ಪಡಿಸಿದರು.
ಅನ್ಸಾರಿಗಳ ಮತ್ತು ಮುಹಾಜಿರುಗಳ ಸಾಹೋದರ್ಯತಾ ಬಾಂಧವ್ಯದ ಮಹತ್ವವು ವಿವರಣಾತೀತ.ಅಲ್ಲಾಹು ಅವರ ಕುರಿತು ಹೇಳಿದ್ದು ಹೀಗೆ..."ಇಸ್ಲಾಮಿಗೆ ಪ್ರಪ್ರಥಮವಾಗಿ ಪ್ರವೇಶಿಸಿದ ಮುಹಾಜಿರುಗಳ ಮತ್ತು ಅನ್ಸಾರಿಗಳ ಹಾಗು ಅವರನ್ನು ಒಳಿತಿನಲ್ಲಿ ಅನುಸರಿಸಿದವರ ಕುರಿತು ಅಲ್ಲಾಹು ಸಂತ್ರಪ್ತನಾಗಿರುವನು.ಅಲ್ಲಾಹನ ಕುರಿತು ಅವರೂ ಸಂತ್ರಪ್ತರಾಗಿರುವರು.ಅವರಿಗೆ ಅವನು ಕೆಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನವನ್ನು ರೆಡಿ ಮಾಡಿಟ್ಟಿರುವನು.ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದಾಗಿದೆ ಮಹಾ ವಿಜಯ"
ಅಲ್ಲಾಹು ನಮ್ಮನ್ನು ಈ ಮಹಾನರುಗಳನ್ನು ಅನುಸರಿಸುವವರ ವಿಭಾಗದಲ್ಲಿ ಸೇರಿಸಲಿ..
ಆಮೀನ್..
ಇಸ್ಲಾಮಿಕ್ ರಾಷ್ಟ್ರದ ಉದಯ..
ಖಝ್ರಜ್ ಅವ್ಸ್ ಗೋತ್ರಗಳಾದ ಅನ್ಸಾರಿಗಳು ಸಹಿತ ಮಕ್ಕಾದಿಂದ ತಲುಪಿದ ಮುಹಾಜಿರುಗಳು ಮತ್ತು ಬನೂ ಖುರೈಲಃ, ಬನೂ ಖೈನುಖಾಹ್ ಹಾಗು ಬನೂನ್ನಳೀರ್ ಎಂಬ ಯಹೂದಿ ಗೋತ್ರಗಳಾಗಿದ್ದರು ಮದೀನ ನಿವಾಸಿಗಳು.ಮದೀನದಲ್ಲಿ ಇಸ್ಲಾಂ ಆಗಮನವಾಗುವುದಕ್ಕಿಂತ ಮುಂಚೆ ಸಹೋದರ ಗೋತ್ರಗಳಾಗಿದ್ದ ಅವ್ಸ್ ಮತ್ತು ಖಝ್ರಜ್ ಪರಸ್ಪರ ಕಚ್ಚಾಟದಲ್ಲಿ ತಲ್ಲೀನರಾಗಿದ್ದರು.ಅಂತಿಮವಾಗಿ ಅವರ ನಾಯಕರಲ್ಲಿ ಅಬ್ದುಲ್ಲಾಹಿಬ್ನು ಸಲೂಲ್ ಮಾತ್ರ ಬಾಕಿಯಾದ.ಅವನನ್ನು ಎರಡೂ ಗೋತ್ರದವರೂ ಸೇರಿ ರಾಜನನ್ನಾಗಿ ಮಾಡಿದರು.ಈ ಸಂದರ್ಭದಲ್ಲಿಯಾಗಿದೆ ಮದೀನಕ್ಕೆ ಪವಿತ್ರ ಇಸ್ಲಾಮಿನ ಆಗಮನವಾಗುವುದು.ಪವಿತ್ರ ಇಸ್ಲಾಮಿನ ಸುಂದರ ಸಂದೇಶ ತಲುಪುವುದರೊಂದಿಗೆ ಅವ್ಸ್ ಮತ್ತು ಖಝ್ರಜ್ ಗೋತ್ರಗಳು ಪರಸ್ಪರ ಸಾಹೋದರ್ಯತೆಯಿಂದ ಒಗ್ಗೂಡಿದರು.ಎಲ್ಲರೂ ಇಸ್ಲಾಂ ಧರ್ಮ ಸ್ವೀಕರಿಸಿದಾಗ ಅಬ್ದುಲ್ಲಾಹಿ ಬ್ನು ಸಲೂಲ್ ಬೇರೆ ದಾರಿಯಿಲ್ಲದೆ ಪ್ರತ್ಯಕ್ಷಕ್ಕೆ ಮುಸ್ಲಿಮನಾದರೂ ಆತ ಮತ್ತು ಆತನ ಕೆಲವು ಅನುಯಾಯಿಗಳು ಮುನಾಫಿಖುಗಳಾಗಿದ್ದರು.ಅವರು ಅವಿಶ್ವಾಸಿಗಳಿಗಿಂತ ಹೆಚ್ಚಾಗಿ ಮುಸ್ಲಿಮರಿಗೆ ಭಾರವಾದರು.ಒಳಗಿಂದೊಳಗೆ ಮುಸ್ಲಿಮರಿಗೆ ತೊಂದರೆ ನೀಡಲು ಶುರು ಮಾಡಿದರು.ಆದರೆ ನೆಬಿ ಸ.ಅ ಅವರ ಬಹಿರಂಗ ವರ್ತನೆಯನ್ನು ಪರಿಗಣಿಸಿ ಬಹಳ ತಂತ್ರಪೂರ್ವಕವಾಗಿ ಮುಂದೆ ಸಾಗಿದರು.
ಯಹೂದಿ ಗೋತ್ರಗಳೊಂದಿಗೆ ನೆಬಿ ಸ.ಅ ಶಾಂತಿ ಒಪ್ಪಂದವನ್ನು ಮಾಡಿಕೊಂಡರು.ಹೀಗೆ ಮದೀನದಲ್ಲಿ ಶಾಂತವಾದ ವಾತಾವರಣ ನಿರ್ಮಾಣವಾಯಿತು.ಇಸ್ಲಾಂ ಮದೀನದಲ್ಲೆಡೆ ಪಸರಿಸಿತು.ಇಸ್ಲಾಮಿಗೆ ಶಕ್ತಿ ಹೆಚ್ಚಾಯಿತು.ಹಿಜ್ರಾ ಒಂದನೇ ವರ್ಷ ಜುಮುಅಃ ಮತ್ತು ಜಮಾಅತ್ ಹಾಗು ಬಾಂಗ್ ಮತ್ತು ಇಖಾಮತ್ ಇಸ್ಲಾಮಿನಲ್ಲಿ ಶರಈಗೊಳಿಸಲಾಯಿತು.ಎರಡನೇ ವರ್ಷ ರಮಳಾನ್ ಉಪವಾಸ,ಫಿತ್ರ್ ಝಕಾತ್ ಹಾಗು ಸಂಪತ್ತಿನ ಝಕಾತ್ ಕಡ್ಡಾಯಗೊಳಿಸಲಾಯಿತು.ಉಳುಹಿಯ್ಯತ್ ಮತ್ತು ಪೆರ್ನಾಳ್ ನಮಾಜುಗಳು ಸುನ್ನತಾಯಿತು.ಹದಿನಾರು ತಿಂಗಳುಗಳ ಕಾಲ ಬೈತುಲ್ ಮುಖದ್ದಸಿಗೆ ತಿರುಗಿ ನಮಾಜು ಮಾಡುತ್ತಿದ್ದರು.ಬಳಿಕ ಕಅಬಾಲಯಕ್ಕೆ ತಿರುಗಿ ನಮಾಜು ಮಾಡಲು ಆದೇಶ ಬಂತು.ತನ್ನ ಪಿತಾಮಹರಾದ ಇಬ್ರಾಹಿಂ ನೆಬಿ ಅ.ಸ ರವರ ಮತ್ತು ಇಸ್ಮಾಇಲ್ ನೆಬಿ ಅ.ಸ ರವರ ಕಿಬ್ಲಃ ಆಗಿದ್ದಂತಹ ಕಅಬಃ ತನ್ನ ಕಿಬ್ಲಃ ಆಗಿ ಸಿಗಲು ನೆಬಿ ಸ.ಅ ರವರು ಆಗ್ರಹಿಸಿದ್ದರು.ಹಾಗೆಯೇ ಹಿಜರಾದ ಎರಡನೇ ವರ್ಷ ರಜಬ್ ತಿಂಗಳಲ್ಲಿ ಕಾಬಾಲಯಕ್ಕೆ ತಿರುಗಿ ನಮಾಜು ಮಾಡಲು ಆದೇಶವಿರುವ ವಹ್ಯ್ ಅವತೀರ್ಣವಾಯಿತು.ನೆಬಿ ಸ.ಅ ರವರಿಗೆ ತುಂಬಾನೇ ಸಂತೋಷವಾಯಿತು.
ಮದೀನದಲ್ಲಿ ನಿರ್ಮಾಣಗೊಂಡ ಮಸ್ಜಿದುನ್ನಬವಿ ಕೇಂದ್ರವಾಗಿರಿಸಿ ನೆಬಿ ಸ.ಅ ಮದೀನದ ಆಡಳಿತವನ್ನು ನಡೆಸಿದರು.ನ್ಯಾಯ ನೀತಿ ಜಾರಿಗೆ ತಂದರು.ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಪ್ರೀತಿ ವಿಶ್ವಾಸದಿಂದ ಕೂಡಿದ ಸಮೂಹವನ್ನು ಸ್ರಷ್ಠಿ ಮಾಡಿದರು.ಉದಾತ್ತವಾದ ಕುಟುಂಬ ವ್ಯವಸ್ಥೆಯನ್ನು ಉಂಟು ಮಾಡಿದರು.ಬಡ ನಿರ್ಗತಿಕರಿಗೆ ಆಶಾಕಿರಣವಾದರು.ಕೊಲೆ, ಜೂಜು, ಮದ್ಯಪಾನ, ವ್ಯಭಿಚಾರ, ಬಡ್ಡಿ ವ್ಯವಹಾರ, ಕಳ್ಳತನ, ದರೋಡೆ, ಜೀವಂತ ಹೂಳುವಿಕೆ, ವಂಚನೆ ಮುಂತಾದ ನೀಚ ಪ್ರವರ್ತನೆಗಳನ್ನು ಕಠಿಣವಾಗಿ ವಿರೋಧಿಸಿದರು.ಇವುಗಳಿಗೆ ಬಲವಾದ ಶಿಕ್ಷೆಯನ್ನು ಜಾರಿಗೆ ತಂದರು.ಮಾನವೀಯತೆಯನ್ನು ಗಟ್ಟಿಗೊಳಿಸಿದರು.ಯುದ್ಧದ ಸಮಯದಲ್ಲೂ ಮಾನವೀಯತೆಯನ್ನು ಕಾಪಾಡಲು ನಿರ್ದೇಶಿಸಿದರು.ಸ್ತ್ರೀಯರ ನೆಲೆ ಭದ್ರಗೊಳಿಸಿದರು.ಅವರನ್ನು ಪೀಡನೆಯಿಂದ ಮುಕ್ತಗೊಳಿಸಿದರು.ವಾರೀಸು ಸೊತ್ತವಕಾಶವನ್ನು ನೀಡಿದರು.ಎಲ್ಲಾ ವಿಧದ ಪೀಡನೆಗಳಿಂದಲೂ ಸಮೂಹವನ್ನು ಮುಕ್ತಗೊಳಿಸಿದರು.ಪ್ರಜಾ ಪ್ರಭುತ್ವ ಸಂವಿಧಾನವನ್ನು ಜಾರಿಗೊಳಿಸಿದರು.ಹೀಗೆ ಮದೀನದಲ್ಲಿ ಆರೋಗ್ಯಕರವಾದ ಶಾಂತಿ ಸಮಾಧಾನದ ಸೌಹಾರ್ದತೆಯಿಂದ ಕೂಡಿದ ಕ್ಷೇಮ ರಾಷ್ಟ್ರವು ಸ್ಥಾಪಿತವಾಯಿತು.
ಪ್ರತಿರೋಧ.....
ಸಲಾಂ ಎಂಬ ಪವಿತ್ರ ನಾಮವಿರುವ ಅಲ್ಲಾಹನ ಶಾಂತಿಯ ಸಂದೇಶವಾಗಿದೆ ಪವಿತ್ರ ಇಸ್ಲಾಂ.ಪ್ರವಾದಿ ಸ.ಅ ರವರು ಜನರಿಗೆ ಉದಾತ್ತವಾದ ಶಾಂತಿಯ ಹಾದಿಯನ್ನು ತೋರಿಸಿದರು.ಮುಸ್ಲಿಮರು ಪರಸ್ಪರ ಕಾಣುವಾಗ ವಿನಿಮಯ ಮಾಡುವ ಮಾತು "ಅಸ್ಸಲಾಮು ಅಲೈಕುಂ" ( ನಿಮಗೆ ಅಲ್ಲಾಹನ ರಕ್ಷಣೆ ಇರಲಿ ) ಎಂದಾಗಿದೆ.ಇಸ್ಲಾಂ ಶಾಂತಿ ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ.
ನೆಬಿ ಸ.ಅ ಜನರನ್ನು ಇಸ್ಲಾಮಿಗೆ ಆಹ್ವಾನಿಸುತ್ತಾ 13 ವರ್ಷ ಮಕ್ಕಾದಲ್ಲಿ ವಾಸಿಸಿದ್ದರು. ನೆಬಿ ಸ.ಅ ರವರನ್ನು ಮತ್ತು ವಿಶ್ವಾಸಿಗಳಾದ ಅನುಯಾಯಿಗಳನ್ನು ಕುರೈಶಿಗಳು ಕಠಿಣವಾಗಿ ಹಿಂಸಿಸಿದರು.ಕೊನೆಗೆ ಸ್ವಂತ ಊರಾದ ಮಕ್ಕಾದಿಂದ ಹೊರಹಾಕಿದರು.ಸ್ವಂತ ಊರು,ಮನೆ,ಕುಟುಂಬ ಹಾಗು ಸಂಪತ್ತನ್ನು ಉಪೇಕ್ಷಿಸಿ ಮದೀನ ತಲುಪಿದ ಅವರೊಂದಿಗೆ ಕುರೈಶಿಗಳು ಮತ್ತೆ ಶತ್ರುತ್ವ ಬೆಳೆಸಿದರು.ಅವರ ಕಡೆಯಿಂದ ಆಕ್ರಮಣಗಳು ಮುಂದುವರಿಯಿತು.ಶಾಂತವಾದ ವಾತಾವರಣ ನಿರ್ಮಾಣ ಮಾಡುವುದು ಅನಿವಾರ್ಯತೆಯಾದುದರಿಂದ ಅಲ್ಲಾಹು ನೆಬಿ ಸ.ಅ ರವರಿಗೆ ಯುದ್ಧಕ್ಕೆ ಅನುಮತಿ ನೀಡಿ ಆಯತ್ ಅವತೀರ್ಣಗೊಳಿಸಿದನು.ಹಿಜ್ರಾ ಎರಡನೇ ವರ್ಷದ ಸಫರ್ ತಿಂಗಳಲ್ಲಿಯಾಗಿದೆ ಈ ಅನುಮತಿ ಲಭಿಸಿದ್ದು.
ಅಲ್ಲಾಹು ಹೇಳಿದನು.
ಯುದ್ಧಕ್ಕೆ ವಿಧೇಯರಾದವರಿಗೆ ಯುದ್ಧ ಮಾಡಲು ಅನುಮತಿ ನೀಡಿರುತ್ತೇನೆ.ಕಾರಣ ಅವರು ಆಕ್ರಮಣಕ್ಕೊಳಗಾದವರಾಗಿದ್ದಾರೆ.ಖಂಡಿತವಾಗಿಯೂ ಅಲ್ಲಾಹು ಅವರಿಗೆ ಸಹಾಯ ಮಾಡಲು ಸಾಮರ್ಥ್ಯವುಳ್ಳವನಾಗಿದ್ದಾನೆ.
ಈ ಆಯತ್ ಅವತೀರ್ಣವಾಗುವುದಕ್ಕಿಂತ ಮೊದಲು 70 ಕ್ಕಿಂತಲೂ ಅಧಿಕ ಆಯತುಗಳಲ್ಲಿ ಯುದ್ಧವನ್ನು ನಿಷೇಧಿಸಿ ಆದೇಶ ಬಂದಿತ್ತು.
ಯಹೂದಿಗಳು ನೆಬಿ ಸ.ಅ ರವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.ಅವರು ಒಪ್ಪಂದವನ್ನು ಮುರಿದು ವಂಚನೆ ನಡೆಸಿದಾಗ ಅಲ್ಲಾಹು ಅವರೊಂದಿಗೆ ಯುದ್ಧಕ್ಕೆ ಅನುಮತಿ ನೀಡಿದನು.ಮುಶ್ರಿಕರೆಲ್ಲರೂ ಒಗ್ಗಟ್ಟಾಗಿ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಬಂದಾಗ ಅವರೆಲ್ಲರೊಂದಿಗೂ ಯುದ್ಧ ಮಾಡಲು ಅಲ್ಲಾಹು ಆದೇಶವಿತ್ತನು.
"ಬಹು ದೈವಾರಾಧಕರೊಂದಿಗೆ ಎಲ್ಲರೂ ಒಗ್ಗಟ್ಟಾಗಿ ಯುದ್ಧ ಮಾಡಿರಿ.ಅವರು ನಿಮ್ಮೊಂದಿಗೆ ಒಗ್ಗಟ್ಟಾಗಿ ಯುದ್ಧ ಮಾಡುವಂತೆ."
ಚುಟುಕಾಗಿ ಹೇಳುವುದಾದರೆ ಯುದ್ಧಕ್ಕೆ ಬಂದವರೊಂದಿಗೆ ಮಾತ್ರ ಯುದ್ಧವಿರುವುದು.
ಯುದ್ಧಕ್ಕೆ ಅನುಮತಿ ಲಭಿಸಿದುದರಿಂದ ಶಾಂತಿ ಸ್ರಷ್ಟಿಸಲು ನೆಬಿ ಸ.ಅ ಹಲವು ಯುದ್ಧಗಳು ನಡೆಸಿದರು.ಅದಕ್ಕೆ ಬೇಕಾದ ತಯಾರಿಯನ್ನು ನಡೆಸಿದರು.27 ಯುದ್ಧಗಳು ನೆಬಿ ಸ.ಅ ರವರ ನೇತ್ರತ್ವದಲ್ಲಿಯಾಗಿತ್ತು.ಈ ಯುದ್ಧಕ್ಕೆ ಗಝ್ವಃ ಎಂದು ಕರೆಯಲಾಗುತ್ತದೆ.ಈ 27 ಯುದ್ಧಗಳಲ್ಲಿ ಕೇವಲ 8 ರಲ್ಲಿ ಮಾತ್ರವಾಗಿದೆ ಪರಸ್ಪರ ಕಾಳಗ,ಘರ್ಷಣೆ ಉಂಟಾದದ್ದು.ಬದರ್, ಉಹುದ್, ಖಂದಕ್, ಮುರೈಸಿಹ್, ಬನೂ ಖುರೈಲಃ, ಖೈಬರ್, ಹುನೈನ್, ತ್ವಾಯಿಫ್ ಎಂಬ ಎಂಟು ಯುದ್ಧಗಳು...
ನೆಬಿ ಸ.ಅ ಉಹುದ್ ನಲ್ಲಿ ಮಾತ್ರ ಯುದ್ಧ ಮಾಡಿದ್ದರು.ನೆಬಿ ಸ.ಅ ರವರ ಪವಿತ್ರ ಹಸ್ತದಿಂದ " ಉಬಯ್ಯು ಬ್ನು ಖಲಫ್ " ಎಂಬ ನಿರ್ಭಾಗ್ಯವಂತ ಮಾತ್ರ ಸಾವನ್ನಪ್ಪಿದ್ದು. ನೆಬಿ ಸ.ಅ 47 ಯುದ್ಧ ಸಂಘಗಳನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿದ್ದರು.ಈ ಯುದ್ಧಗಳಿಗೆ " ಸರಿಯ್ಯಃ " ಎಂದು ಕರೆಯಲಾಗುತ್ತದೆ.ಇಸ್ಲಾಮಿನ ಈ ಎಲ್ಲಾ ಯುದ್ಧಗಳಲ್ಲಿ 1018 ಮಂದಿ ಮಾತ್ರ ಸಾವನ್ನಪ್ಪಿದರು.259 ಮುಸ್ಲಿಮರು ಮತ್ತು 759 ಅಮುಸ್ಲಿಮರು.ಯುದ್ಧಗಳ ಚರಿತ್ರೆಯಲ್ಲಿಯೇ ಅತೀ ಕಡಿಮೆ ಸಾವು ನೋವುಗಳು ಸಂಭವಿಸಿದ್ದು ಇಸ್ಲಾಮಿನ ಯುದ್ಧಗಳಲ್ಲಿಯಾಗಿದೆ. ಪ್ರತಿರೋಧ ಮತ್ತು ಪ್ರಬೋಧನೆ ಈ ಎರಡು ಗುರಿಯನ್ನಿಟ್ಟು ಯುದ್ಧ ಮಾಡಿದ ಕಾರಣದಿಂದಾಗಿದೆ ಹೀಗೆ ಸಂಭವಿಸಿದ್ದು.ಆದುದರಿಂದಲೇ ನೆಬಿ ಸ.ಅ ಮಕ್ಕಾ ಕುರೈಶಿಗಳ ವಿರುದ್ಧ ನೇರವಾಗಿ ಯುದ್ಧ ಮಾಡದೇ ಕುರೈಶೀ ವ್ಯಾಪಾರ ಸಂಘದ ವಿರುದ್ಧ ಸೈನ್ಯವನ್ನು ಕಳುಹಿಸಿದ್ದು. ಮುಸ್ಲಿಮರಿಗೆ ಧೈರ್ಯ ನೀಡಲು ಮತ್ತು ಮಕ್ಕಾ ಮುಶ್ರಿಕರನ್ನು ದುರ್ಬಲಗೊಳಿಸಲು ಹಾಗು ಮುಹಾಜಿರುಗಳಿಗೆ ನಷ್ಟವಾಗಿ ಹೋದ ಸಂಪತ್ತನ್ನು ಪುನಃ ಮತ್ತೆ ಪಡೆಯುವ ಸಲುವಾಗಿತ್ತು.ಮುಶ್ರಿಕರನ್ನು ಒಪ್ಪಂದಕ್ಕೆ ಪ್ರೇರೇಪಿಸುವ ಸಲುವಾಗಿ ಈ ಎಲ್ಲಾ ತಂತ್ರಗಳನ್ನು ನೆಬಿ ಸ.ಅ ಉಪಯೋಗಿಸಿದ್ದರು.
ಆದರೆ....
ಅವರು ಅದಕ್ಕೆ ತಯ್ಯಾರಾಗದ ಕಾರಣ ಯುದ್ಧವಲ್ಲದೆ ಬೇರೇನೂ ದಾರಿ ಇಲ್ಲವಾಯಿತು..
ಬದರ್ ಯುದ್ಧ...
ಹಿಜರಿ ಎರಡನೆಯ ವರ್ಷ ರಮಳಾನ್ ತಿಂಗಳ 17 ರಂದು ನಡೆದ ಐತಿಹಾಸಿಕ ಬದರ್ ಯುದ್ಧ ಚಾರಿತ್ರಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.ಈ ಯುದ್ಧದ ಮುಂಚೆಯೋ ನಂತರವೋ ಅಂತಹ ಒಂದು ಯುದ್ಧ ನಡೆದಿಲ್ಲ.ಅಬೂ ಸುಫ್ಯಾನುಬ್ನು ಹರ್ಬ್ ಕುರೈಶಿಗಳ ವ್ಯಾಪಾರ ಸಂಘಕ್ಕೆ ನೇತ್ರತ್ವವನ್ನು ನೀಡಿ ಸಿರಿಯಾ ಕ್ಕೆ ಹೋದರು.ವ್ಯಾಪಾರ ಸಂಘದಲ್ಲಿ 27 ಮಂದಿಯಿದ್ದರು.ಅವರು ಸಿರಿಯಾದಿಂದ ಮರಳಿ ಬರುವಾಗ ನೆಬಿ ಸ.ಅ 313 ಸ್ವಹಾಬಿಗಳೊಂದಿಗೆ ಅವರನ್ನು ಸೆರೆ ಹಿಡಿಯಲು ಹೊರಟರು.ಈ ವಿಷಯವನ್ನು ಅರಿತ ಅಬೂ ಸುಫ್ಯಾನ್ ಕುರೈಶಿಗಳಿಗೆ ವಿಷಯ ಮುಟ್ಟಿಸಲು ಲಂಲಮುಬ್ನು ಅಮ್ರಿನಿಲ್ ಗಿಫಾರಿಯನ್ನು ಕಳುಹಿಸಿದರು.
ಈ ವಾರ್ತೆ ಕೇಳಿ ಮಕ್ಕಾ ನಿವಾಸಿಗಳೆಲ್ಲರೂ ಎಚ್ಚೆತ್ತರು.ಅವರು ಅಬೂಜಹಲನ ನೇತ್ರತ್ವದಲ್ಲಿ ಹೊರಟರು.ಈ ಸಂಘದಲ್ಲಿ ಸಾವಿರ ಸೈನಿಕರು, ನೂರು ಕುದುರೆಗಳು, ಏಳು ನೂರು ಒಂಟೆಗಳು ಇದ್ದವು.ವಾದ್ಯಮೇಳಗಳು ನರ್ತಕಿಗಳಾದ ಸ್ತ್ರೀಯರು ಒಳಗೊಂಡ ಈ ಸಂಘವು ಕುಣಿದು ಕುಪ್ಪಳಿಸುತ್ತಾ ಕೇಕೆಹಾಕುತ್ತಾ ಯುದ್ಧಕ್ಕೆ ಬೇಕಾದ ಸರ್ವ ಸಜ್ಜೀಕರಣದೊಂದಿಗೆ ಸಾಗುತ್ತಿತ್ತು.ಆದರೆ ನೆಬಿ ಸ.ಅ ರವರ ಸಂಘದಲ್ಲಿ ಕೇವಲ ಎರಡು ಕುದುರೆಗಳು ಮತ್ತು ಎಪ್ಪತ್ತು ಒಂಟೆಗಳು ಮಾತ್ರ ಇದ್ದವು.ಹೀಗಿರಲು ಅಬೂ ಸುಫ್ಯಾನ್ ಮತ್ತು ವ್ಯಾಪಾರ ಸಂಘ ಕಡಲು ಕಿನಾರೆಯ ದಾರಿ ಮೂಲಕ ಸುರಕ್ಷಿತರಾಗಿ ಮಕ್ಕಾ ತಲುಪಿದರು.ಅಬೂ ಜಹಲನ ನೇತ್ರತ್ವದಲ್ಲಿ ಹೊರಟ ಸೈನ್ಯದೊಂದಿಗೆ ಮರಳಿ ಹೋಗಲು ಅಬೂಸುಫ್ಯಾನ್ ತಿಳಿಸಿದರು.ನಾವು ಮಕ್ಕಾ ತಲುಪಿದ್ದೇವೆ.ನೀವು ಯುದ್ಧ ಮಾಡುವುದು ಬೇಡ.ಹಿಂದಕ್ಕೆ ಮರಳಿ ಬನ್ನಿ ಎಂದು ಅಬೂಸುಫ್ಯಾನ್ ತಿಳಿಸಿದರೂ ಅಬೂಜಹಲ್ ಇದನ್ನು ಸಮ್ಮತಿಸಲಿಲ್ಲ.ಬದರ್ ಭೂಮಿಗೆ ತಲುಪಿ ಮೂರು ದಿವಸ ಅಲ್ಲಿ ಒಂಟೆಗಳನ್ನು ಕೊಯ್ದು ಮಾಂಸ ಮಾಡಿ ತಿಂದು ತೇಗಿ ಎಲ್ಲರಿಗೂ ನೀಡಿ ಮದ್ಯವನ್ನು ಕುಡಿಯುತ್ತಾ ತಂಗುವೆವು ಎಂದು ಅಬೂ ಜಹಲ್ ಅಹಂಕಾರದಿಂದ ಪ್ರಖ್ಯಾಪಿಸಿದನು.ಅರಬಿಗಳು ನಮ್ಮನ್ನು ಕಂಡು ಹೆದರಿ ಬದುಕಲು ಹೀಗೆ ಮಾಡುವುದು ಅನಿವಾರ್ಯವಾಗಿದೆ ಎಂದು ಅಬೂಜಹಲ್ ಅಭಿಪ್ರಾಯಪಟ್ಟನು.ಅಬೂಜಹಲನ ಈ ನಿರ್ಧಾರ ಸರಿ ಕಾಣದ ಬನೂಝುಹರ ಗೋತ್ರದ ನೂರು ಮಂದಿ ಹಿಂದೆ ಸರಿದು ಅವರು ಮರಳಿ ಮಕ್ಕಾಕ್ಕೆ ಹೋದರು.
ನೆಬಿ ಸ.ಅ ಮತ್ತು ಸ್ವಹಾಬಿಗಳು ಬದರ್ ತಲುಪಿದರು.ಸ್ವಹಾಬಿಗಳೊಂದಿಗೆ ನೆಬಿ ಸ.ಅ ಹೇಳಿದರು.ಇದೋ ನೋಡಿ ನಿಮ್ಮ ಮುಂದೆ ಮಕ್ಕಾದ ನಿಮ್ಮ ಪ್ರೀತಿಪಾತ್ರರು.ನಿಮ್ಮ ಬಂಧುಗಳು.ನೆಬಿ ಸ.ಅ ಮತ್ತು ಸ್ವಹಾಬಿಗಳು ಬದರಿನ ನೀರಿನ ಒರತೆಯಿರುವ ಜಾಗದಲ್ಲಿ ಟೆಂಟ್ ಹಾಕಿದರು.ಮುಶ್ರಿಕರಿಗೆ ನೀರು ಸಿಗದಿರಲು ಬಾಕಿ ಇರುವ ಎಲ್ಲಾ ನೀರಿನ ಗುಂಡಿಗಳನ್ನು ಮುಚ್ಚಿದರು.ಯುದ್ಧ ರಣರಂಗವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಿರುವ ಎತ್ತರದ ಸ್ಥಳದಲ್ಲಿ ನೆಬಿ ಸ.ಅ ರವರಿಗೆ ವಿಶ್ರಾಂತಿಗಾಗಿ ಟೆಂಟನ್ನು ಹಾಕಲಾಯಿತು.
ನೆಬಿ ಸ.ಅ ಹಾಗು ಸ್ವಹಾಬಿಗಳು ಪ್ರಾರ್ಥನೆಯಲ್ಲಿ ನಿರತರಾಗಿ ರಾತ್ರಿಯನ್ನು ಕಳೆದರು.ನೆಬಿ ಸ.ಅ ಸುಜೂದಿನಲ್ಲಿ " ಯಾ ಹಯ್ಯುನ್ ಯಾ ಖಯ್ಯೂಂ " ಎಂದು ಹೇಳುತ್ತಿದ್ದರು. ರಾತ್ರಿ ಕಳೆದು ಹಗಲಾದಾಗ ಎರಡು ವಿಭಾಗಗಳು ಪರಸ್ಪರ ರಣರಂಗಕ್ಕಿಳಿದರು.ಮುಶ್ರಿಕರ ಭಾಗದಿಂದ ಅಸ್ವದುಲ್ ಮಖ್ಝೂಮಿ ಎರಗಿ ಬಂದು ಮುಸ್ಲಿಮರ ವಶದಲ್ಲಿರುವ ನೀರಿನ ಹೌಲಿನಿಂದ ನೀರು ಕುಡಿಯುವೆನೆಂದೂ ಅಥವಾ ಅದನ್ನು ಧ್ವಂಸಗೈಯ್ಯುವೆನೆಂದೂ ಆ ಮಾರ್ಗದಲ್ಲಿ ಸಾಯುವೆನೆಂದೂ ಶಪಥ ಮಾಡಿ ಮುನ್ನುಗ್ಗಿದ.ಅದೇ ರಭಸದಲ್ಲಿ ಹಂಝ ರ.ಅ ಮುನ್ನುಗ್ಗಿ ಅವನ ಕಾಲಿಗೆ ಬೀಸಿದರು.ಕಾಲಿಗೆ ಗಾಯವಾದರೂ ಅವನು ಮತ್ತೆ ಮುಸ್ಲಿಮರ ಹೌಲಿನ ಕಡೆ ಧಾವಿಸಿದಾಗ ಹಂಝ ರ.ಅ ಅವನನ್ನು ಅಲ್ಲಿ ಕೊಂದು ಹಾಕಿದರು.ಬಳಿಕ ದ್ವಂದ್ವ ಯುದ್ಧ ಆರಂಭವಾಯಿತು.ಕುರೈಶಿಗಳಲ್ಲಿ ಉತ್ಬತು ಇಬ್ನು ರಬೀಅಃ, ಸಹೋದರ ಶೈಬಃ ಹಾಗು ಮಗ ವಲೀದನೊಂದಿಗೆ ಕ್ರಮವಾಗಿ ಉಬೈದ ರ.ಅ, ಹಂಝ ರ.ಅ ಹಾಗು ಅಲೀ ರ.ಅ ಹೋರಾಡಿದರು.ಘೋರವಾದ ಯುದ್ಧ ನಡೆಯಿತು.ಹಂಝ ರ.ಅ ಮತ್ತು ಅಲೀ ರ.ಅ ಕೈಯಿಂದ ಶೈಬ ಮತ್ತು ವಲೀದ್ ಸಾವನ್ನಪ್ಪಿದರು.ಉಬೈದ ರ.ಅ ಮತ್ತು ಉತ್ಬತ್ ಪರಸ್ಪರ ಕಾದಾಡಿದರು.ಇಬ್ಬರಿಗೂ ತೀವ್ರ ಗಾಯಗಳಾಗಿದ್ದವು.ಇದನ್ನು ಕಂಡ ಹಂಝ ರ.ಅ ಮತ್ತು ಅಲಿ ರ.ಅ ಧಾವಿಸಿ ಬಂದು ಉತ್ಬತ್ ನನ್ನು ಕೊಂದು ಹಾಕಿದರು.ತೀವ್ರ ಗಾಯವಾಗಿದ್ದ ಉಬೈದ ರ.ಅ ರವರನ್ನು ನೆಬಿ ಸ.ಅ ರವರ ಸಮೀಪ ಕರೆದು ಕೊಂಡು ಹೋಗಲಾಯಿತು.( ಯುದ್ಧ ಮುಗಿದ ನಂತರ ಮದೀನಕ್ಕೆ ಮರಳಿ ಹೋಗುವಾಗ ಉಬೈದ ರ.ಅ ಶಹೀದಾದರು.)
ಈಗ ಶತ್ರು ಪಾಳಯದಿಂದ ನಾಲ್ಕು ಮಂದಿ ಹತರಾದರು.ಮುಸ್ಲಿಂ ಪಾಳಯದಲ್ಲಿ ಉಬೈದ ರ.ಅ ತೀವ್ರ ಗಾಯವಾಗಿದ್ದಾರೆ.ಇದಾದ ಬಳಿಕ ನೆಬಿ ಸ.ಅ ಸ್ವಹಾಬಿಗಳನ್ನು ಸಾಲಾಗಿ ನಿಲ್ಲಿಸಿ ಧರ್ಮ ಯುದ್ಧದ ಪ್ರಾಧಾನ್ಯತೆಯನ್ನು ವಿವರಿಸಿ ಕೊಟ್ಟರು.ನೆಬಿ ಸ.ಅ ತನ್ನ ಎರಡು ಕೈಗಳನ್ನೆತ್ತಿ ಪ್ರಾರ್ಥಿಸಿದರು."" ಅಲ್ಲಾಹನೇ, ಮುಸ್ಲಿಮರು ಇಂದು ನಾಶ ಹೊಂದಿದರೆ ಭೂಮಿ ಮೇಲೆ ನಿನ್ನನ್ನು ಆರಾಧಿಸಲು ಬೇರೆ ಯಾರೂ ಇರಲಾರರು.ಶತ್ರುಗಳು ಪರಾಜಯ ಹೊಂದಲಿರುವರೆಂಬ ನಿನ್ನ ಮಾತನ್ನು ಪೂರ್ತಿಗೊಳಿಸು ಅಲ್ಲಾಹುವೇ "" ಬಳಿಕ ನೆಬಿ ಸ.ಅ ಸ್ವಹಾಬಿಗಳೊಂದಿಗೆ ಅವರು ಪರಾಜಯ ಹೊಂದಲಿರುವರು ಎಂದು ಪ್ರಖ್ಯಾಪಿಸಿದರು.
ಮುಸ್ಲಿಮರು ಮತ್ತು ಶತ್ರುಗಳೆಡೆಯಲ್ಲಿ ಪರಸ್ಪರ ಯುದ್ಧ ಶುರುವಾಯಿತು.ಘೋರ ಯುದ್ಧ ನಡೆಯಿತು.ಅಲ್ಲಾಹು ಮಲಕುಗಳನ್ನು ಧರೆಗೆ ಇಳಿಸಿ ಮುಸ್ಲಿಮರನ್ನು ಸಹಾಯಿಸಿದನು.ಮುಶ್ರಿಕರಾದ ಶತ್ರುಗಳು ಪರಾಜಯ ಹೊಂದಿದರು.ಅಬೂ ಜಹಲ್, ಉಮಯ್ಯಃ ಒಳಗೊಂಡ ನೇತಾರರು ಸೇರಿ ಎಪ್ಪತ್ತು ಮಂದಿ ಸಾವನ್ನಪ್ಪಿದರು.ಎಪ್ಪತ್ತು ಮಂದಿ ಶತ್ರುಗಳು ಬಂಧನಕ್ಕೊಳಗಾದರು.ಮುಸ್ಲಿಮರಲ್ಲಿ 14 ಮಂದಿ ರಕ್ತ ಸಾಕ್ಷಿಗಳಾದರು.ಆರು ಮುಹಾಜಿರುಗಳು ಮತ್ತು ಎಂಟು ಅನ್ಸಾರಿಗಳು.
ಸತ್ಯ ಮತ್ತು ಅಸತ್ಯ ಬೇರ್ಪಟ್ಟ ಬದರ್ ಯುದ್ಧ ದಿನವು " ಯೌಮುಲ್ ಫುರ್ಖಾನ್ " ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು.ಆದುದರಿಂದಲೇ ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರ್ ಶುಹದಾಗಳಿಗೆ ಅತ್ಯಂತ ಮಹತ್ತರವಾದ ಪದವಿ ಲಭಿಸಿತು.ಅವರ ಕಳೆದು ಹೋದ ಪಾಪಗಳನ್ನು ಮತ್ತು ಮುಂದಿನ ಪಾಪಗಳನ್ನು ಮನ್ನಿಸಿದ್ದೇನೆ ಎಂದು ಅಲ್ಲಾಹನು ತಿಳಿಸಿದನು.ಎಲ್ಲಾ ವರ್ಷದ ರಮಳಾನ್ ಹದಿನೇಳರಂದು ಮತ್ತು ಇತರ ದಿವಸಗಳಲ್ಲಿಯೂ ಮುಸ್ಲಿಮರು ಬದರೀಙಳನ್ನು ಅನುಸ್ಮರಿಸುತ್ತಾರೆ.ಅವರ ಬರ್ಕತ್ತಿನಿಂದ ಅಲ್ಲಾಹು ನಮ್ಮನ್ನು ಇಹಪರದಲ್ಲಿ ವಿಜಯಗೊಳಿಸಲಿ.ಆಮೀನ್..
ಉಹುದ್ ಯುದ್ಧ...
ಬದರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲು ಕುರೈಶಿಗಳು ತೀರ್ಮಾನಿಸಿದರು.ಅಬೂಸುಫ್ಯಾನ್ ನೇತ್ರತ್ವದ ವ್ಯಾಪಾರ ಸಂಘದ ಲಾಭ ಪೂರ್ತಿ ಬದರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲಿಕ್ಕೆ ವಿನಿಯೋಗಿಸಲು ಅವರು ಒಮ್ಮತಾಭಿಪ್ರಾಯಕ್ಕೆ ಬಂದರು.ಅಬೂಸುಫ್ಯಾನನ ನೇತ್ರತ್ವದಲ್ಲಿ 200 ಕುದುರೆಗಳೊಂದಿಗೆ ಸರ್ವ ಸನ್ನಾಹಗಳೊಂದಿಗೆ 3,000 ಯುದ್ಧ ಸೇನಾನಿಗಳು ಹೊರಟರು.ನೆಬಿ ಸ.ಅ ಸ್ವಹಾಬಿಗಳೊಂದಿಗೆ ಸೇರಿ ಆಲೋಚಿಸಿ ಕುರೈಶಿಗಳನ್ನು ಎದುರಿಸಲು ಸಾವಿರ ಸೈನಿಕರೊಂದಿಗೆ ರೆಡಿಯಾದರು.ಇದು ಹಿಜ್ರಾ ಮೂರನೇ ವರ್ಷ ಶವ್ವಾಲ್ ಹದಿನೈದರಂದಾಗಿತ್ತು.ದಾರಿ ಮಧ್ಯೆ ಮುಸ್ಲಿಂ ಸೈನ್ಯದಿಂದ ಮುನಾಫಿಖಾದ ಅಬ್ದುಲ್ಲಾಹಿ ಇಬ್ನು ಸಲೂಲ್ ಮತ್ತು ಆತನ ಮುನ್ನೂರು ಅನುಯಾಯಿಗಳು ತಿರುಗಿ ಹೋದರು.
ನೆಬಿ ಸ.ಅ ಉಹುದ್ ಪರ್ವತದ ಬಳಿ ತಲುಪಿದರು.ಪರ್ವತದ ಹತ್ತಿರವಿರುವ ರುಮಾತ್ ಬೆಟ್ಟದ ಮೇಲೆ ಬಿಲ್ಲು ಎಸೆಯುವಿಕೆಯಲ್ಲಿ ನೈಪುಣ್ಯತೆ ಇರುವ ಐವತ್ತು ಮಂದಿಯನ್ನು ಕಾವಲು ನಿಲ್ಲಿಸಿದರು.ಆದೇಶ ಬಂದ ಮೇಲೆಯೇ ಅಲ್ಲಿಂದ ಇಳಿದು ಬರಬೇಕೆಂದು ನೆಬಿ ಸ.ಅ ಅವರೊಂದಿಗೆ ಸೂಚಿಸಿದರು.ಯುದ್ಧ ಪ್ರಾರಂಭವಾಯಿತು.ಕುರೈಶಿಗಳು ಪರಾಜಿತರಾದರು.ಚೆಲ್ಲಾಪಿಲ್ಲಿಯಾಗಿ ಕುರೈಶಿಗಳು ಓಡ ತೊಡಗಿದರು.ಇದನ್ನು ಕಂಡು ರುಮಾತ್ ಬೆಟ್ಟದ ಮೇಲಿದ್ಧ ಅಧಿಕ ಮಂದಿಯೂ ಕೆಳಗೆ ಇಳಿದು ಬಂದರು.ಆಗ ಕುರೈಶಿಗಳು ಖಾಲಿದು ಇಬ್ನು ವಲೀದನ ನೇತ್ರತ್ವದಲ್ಲಿ ಹಿಂದಿನಿಂದ ಬಂದು ಬೆಟ್ಟದಲ್ಲಿದ್ದ ಉಳಿದವರನ್ನು ವಧಿಸಿದರು.ಮುಸ್ಲಿಮರ ವಿರುದ್ಧ ಆಕ್ರಮಣ ತೀವ್ರ ಸ್ವರೂಪ ಪಡೆಯಿತು.ಪರಿಂಭ್ರಾತರಾದ ಮುಸ್ಲಿಮರು ಛಿನ್ನಭಿನ್ನವಾಗಿ ಓಡಿದರು.ಆದರೆ ನೆಬಿ ಸ.ಅ ಮತ್ತು ಕೆಲವು ಸ್ವಹಾಬಿಗಳು ವೀರಾವೇಶದಿಂದ ಹೋರಾಡಿದರು.ನೆಬಿ ಸ.ಅ ರವರ ಪವಿತ್ರ ಮುಖಕ್ಕೆ ಗಾಯವಾಯಿತು.ಮುಂದಿನ ಹಲ್ಲು ಸೀಳಿ ಹೋದವು.ಹಂಝ ರ.ಅ ಸೇರಿ ಎಪ್ಪತ್ತು ಮುಸ್ಲಿಮರು ಶಹೀದಾದರು.ಕುರೈಶಿಗಳಲ್ಲಿ ಇಪ್ಪತ್ತಮೂರು ಮಂದಿ ಸಾವನ್ನಪ್ಪಿದರು.ನೆಬಿ ಸ.ಅ ಆದೇಶವನ್ನು ಪಾಲಿಸದೆ ರುಮಾತ್ ಬೆಟ್ಟದಿಂದ ಇಳಿದು ಬಂದದ್ದೇ ಮುಸ್ಲಿಮರ ಪರಾಜಯಕ್ಕೆ ಹೇತುವಾಯಿತು..
ಹಿಜ್ರಾ ಎರಡನೆಯ ವರ್ಷ ಬನೂ ಖೈನುಖಾಹ್ ಗೋತ್ರದವರನ್ನು ನೆಬಿ ಸ.ಅ ಸಿರಿಯಾದ ಅಝ್ರಿಆತ್ ಗೆ ಗಡೀಪಾರು ಮಾಡಿದ್ದರು.ಅವರು ಶಾಂತಿ ಒಪ್ಪಂದವನ್ನು ಮುರಿದ ಕಾರಣದಿಂದ ಗಡೀಪಾರು ಮಾಡಲಾಗಿತ್ತು.ನೆಬಿ ಸ.ಅ ರವರನ್ನು ವಧಿಸಲು ಗೂಢಾಲೋಚನೆ ಮಾಡಿದ ಕಾರಣದಿಂದ ಹಿಜ್ರಾ ನಾಲ್ಕನೆಯ ವರ್ಷ ಬನುನ್ನಳೀರ್ ಗೋತ್ರದವರನ್ನು ಗಡೀಪಾರು ಮಾಡಲಾಯಿತು.ಅವರಲ್ಲಿ ಕೆಲವರು ಅಝ್ರಿಆತ್ ನಲ್ಲಿ ಮತ್ತು ಇನ್ನೂ ಕೆಲವರು ಖೈಬರ್ ನಲ್ಲಿ ವಾಸಿಸಿದರು.ಇದರ ಮಧ್ಯೆ ಬನುನ್ನಳೀರ್ ಗೋತ್ರದ ಒಂದು ಗುಂಪು ಕುರೈಶೀ ಮುಶ್ರಿಕರನ್ನು ಸಮೀಪಿಸಿ ನೆಬಿ ಸ.ಅ ರವರ ವಿರುದ್ಧ ಯುದ್ಧ ಹೂಡಲು ಪ್ರೇರೇಪಿಸಿದರು.ಕುರೈಶಿಗಳು ಓಕೆ ಅಂದರು.ಹೀಗೆ ಕುರೈಶಿಗಳು ಮತ್ತು ಗತಫಾನ್ ಗೋತ್ರದವರು ಅಬೂಸುಫ್ಯಾನನ ನೇತ್ರತ್ವದಲ್ಲಿ ಹತ್ತು ಸಾವಿರ ಬ್ರಹತ್ ಸೈನಿಕ ಪಡೆಯೊಂದಿಗೆ ಮದೀನವನ್ನು ಗುರಿಯಾಗಿಸಿ ಸಾಗಿದರು.ನೆಬಿ ಸ.ಅ ಸ್ವಹಾಬಿಗಳೊಂದಿಗೆ ಸೇರಿ ಒಂದು ತೀರ್ಮಾನಕ್ಕೆ ಬಂದು ಅವರನ್ನು ಪ್ರತಿರೋಧಿಸಲು ಮದೀನದ ಸುತ್ತಲೂ ಹೊಂಡವನ್ನು ನಿರ್ಮಿಸಿದರು.ಮೂರು ಸಾವಿರ ಧೀರ ಯೋಧರೊಂದಿಗೆ ನೆಬಿ ಸ.ಅ ಹೊಂಡದ ಈಚೆ ಕಡೆ ನಿಂತರು.ಇದು ಹಿಜ್ರಾ ಐದನೆಯ ವರ್ಷ ಶವ್ವಾಲ್ ತಿಂಗಳಲ್ಲಿಯಾಗಿತ್ತು.ಮುಶ್ರಿಕುಗಳು ಮದೀನದ ಸುತ್ತ ನಿರ್ಮಿಸಿದ ಹೊಂಡದ ಬಳಿ ತಲುಪಿದರು.ಮದೀನ ಪ್ರವೇಶಿಸಲಾಗದೆ ಚಡಪಡಿಸಿದರು.ಹದಿನೈದು ದಿವಸ ಹೊಂಡದ ಸಮೀಪ ನೆಲೆಯೂರಿದರು.ಹೊಂಡವನ್ನು ದಾಟಿ ಬರಲು ಯತ್ನಿಸಿದ ಕೆಲವರು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದರು.ಗುಂಡಿಯನ್ನು ದಾಟಿದ ಕೆಲ ಮುಶ್ರಿಕರನ್ನು ಮುಸ್ಲಿಮರು ಕೊಂದು ಹಾಕಿದರು.ಈ ಮಧ್ಯೆ ಬನೂ ಖುರೈಲ ಗೋತ್ರದವರು ಶಾಂತಿ ಕರಾರು ಮುರಿದು ಮಿತ್ರ ಪಾರ್ಟಿಯನ್ನು ಸಹಾಯಿಸಿದ್ದು ಮುಸ್ಲಿಮರನ್ನು ಪರಿಂಭ್ರಾತಗೊಳಿಸಿತು.ಈ ಸಂದರ್ಭದಲ್ಲಿ ಮುಸ್ಲಿಂ ಸೈನ್ಯದೊಂದಿಗಿದ್ದ ಮುನಾಫಿಖುಗಳು ಅವರವರ ಮನೆಗಳಿಗೆ ಹಿಂತಿರುಗಲು ಅನುಮತಿಯನ್ನು ಕೇಳಿದರು.ನೈಜ ಮುಸ್ಲಿಮರು ತೀವ್ರ ಸಂಕಷ್ಟದಲ್ಲಿ ಸಿಲುಕಿದರು.
ಹೀಗಿರಲು ಶತ್ರು ಪಾಳಯದಲ್ಲಿದ್ದ ಗತಫಾನ್ ಗೋತ್ರದ ನುಐಮುಬ್ನು ಮಸ್ಊದ್ ಪವಿತ್ರ ಇಸ್ಲಾಂ ಸ್ವೀಕರಿಸಿದ್ದರು.ಇದು ಯಾರು ಕೂಡಾ ತಿಳಿದಿರಲಿಲ್ಲ.ಅವರು ನೆಬಿ ಸ.ಅ ರವರೊಂದಿಗೆ ರಹಸ್ಯ ಮಾತುಕತೆ ನಡೆಸಿ ಒಂದು ಸಂಚನ್ನು ರೂಪಿಸಿದರು.ನುಐಮುಬ್ನು ಮಸ್ಊದ್ ಯಹೂದಿ ಗೋತ್ರವಾದ ಬನೂ ಖುರೈಲ ರ ಬಳಿ ತೆರಳಿ ಮುಸ್ಲಿಮರ ವಿರುದ್ಧ ಕಾರ್ಯಾಚರಿಸಿದ ಕಾರಣ ಬೇರೆ ಯಹೂದಿ ಗೋತ್ರಗಳಿಗೆ ಉಂಟಾದ ಪರಿಸ್ಥಿತಿಯನ್ನು ನೆನಪಿಸಿ ಒಂದು ವೇಳೆ ಹಾಗೆ ಉಂಟಾದಲ್ಲಿ ಸಹಾಯ ( ಅಭಯ )ನಾವು ನೀಡುತ್ತೇವೆ ಎಂದು ಕುರೈಶಿಗಳೊಂದಿಗೆ ಮತ್ತು ಗತಫಾನ್ ಗೋತ್ರದವರೊಂದಿಗೆ ಒಪ್ಪಂದವನ್ನು ಸ್ವೀಕರಿಸಬೇಕು ಎಂದು ನಿರ್ದೇಶಿಸಿದರು.ಅಲ್ಲಿಂದಲೇ ಸೀದಾ ಕುರೈಶಿಗಳ ಮತ್ತು ಗತಫಾನ್ ಗೋತ್ರದವರ ಬಳಿ ತೆರಳಿ ಬನೂ ಖುರೈಲ ಗೋತ್ರದವರು ನಿಮ್ಮೊಂದಿಗೆ ಸೇರಿದ ಕಾರಣ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ತೀವ್ರ ದುಃಖಿತರಾಗಿದ್ದಾರೆ.ಇದೀಗ ತಮ್ಮ ಶರೀರವನ್ನು ರಕ್ಷಿಸಲು ನಿಮ್ಮ ನಾಯಕರನ್ನು ಮುಸ್ಲಿಮರಿಗೆ ಒಪ್ಪಿಸಲು ಅವರು ಮುಸ್ಲಿಮರೊಂದಿಗೆ ಒಪ್ಪಂದವನ್ನು ಮಾಡಿದ್ದಾರೆ ಎಂದು ನುಐಮುಬ್ನು ಮಸ್ಊದ್ ತಿಳಿಸಿದರು.ನುಐಮುಬ್ನು ಮಸ್ಊದರ ತಂತ್ರಗಾರಿಕೆಯ ಮಾತಿನಿಂದ ಕುರೈಶಿಗಳು ಮತ್ತು ಬನೂಖುರೈಲ ಗೋತ್ರದವರು ಪರಸ್ಪರ ಯುದ್ಧ ಮಾಡುವ ಸ್ಥಿತಿಗೆ ತಲುಪಿದರು.ಶನಿವಾರ ರಾತ್ರಿ ಅಬೂಸುಫ್ಯಾನ್ ಯಹೂದಿಯರನ್ನು ಮುಸ್ಲಿಮರೊಂದಿಗೆ ಯುದ್ಧ ಮಾಡಲು ಆಹ್ವಾನಿಸಿದನು.ಅವರು ಶನಿವಾರ ನಾವು ಯುದ್ಧ ಮಾಡುವುದಿಲ್ಲವೆಂದೂ ನಿಮ್ಮ ಎಪ್ಪತ್ತು ನಾಯಕರನ್ನು ನಮ್ಮಲ್ಲಿ ಅಡವಿಟ್ಟರೆ ಮಾತ್ರ ನಾವು ನಿಮ್ಮೊಂದಿಗೆ ಸೇರಿ ಯುದ್ಧಕ್ಕೆ ಕೈಜೋಡಿಸುವೆವು ಅಂದರು.ಹೀಗೆ ಪರಸ್ಪರ ಅವರವರೇ ಜಗಳಕ್ಕಿಳಿದರು.ಅಷ್ಟರಲ್ಲಿ ಭಯಂಕರ ಬಿರುಗಾಳಿ ಬೀಸಲಾರಂಭಿಸಿತು.ಪರಸ್ಪರ ಒಬ್ಬರನ್ನೊಬ್ಬರು ಕಾಣದ ರೀತಿಯಲ್ಲಿ ಭಾರೀ ಶೀತ ಮಾರುತ ಆವರಿಸಿತು.ಗಾಢ ಇರುಳಿನ ಮರೆಯಲ್ಲಿ ಮುಸ್ಲಿಮರು ಮತ್ತು ಯಹೂದಿಗಳು ಒಟ್ಟಾಗಿ ಆಕ್ರಮಣಗೈಯ್ಯುವರು ಎಂದು ಹೆದರಿ ಅಬೂ ಸುಫ್ಯಾನನ ನೇತ್ರತ್ವದಲ್ಲಿ ಬಂದ ಮುಶ್ರಿಕ್ ಸೈನ್ಯವು ಮರಳಿ ಹೋಯಿತು.
ಖಂದಕ್ ಯುದ್ಧದಿಂದ ಮದೀನಕ್ಕೆ ಮರಳಿದ ತಕ್ಷಣ ನೆಬಿ ಸ.ಅ ವಂಚಕ ಯಹೂದಿ ಗೋತ್ರವಾದ ಬನೂಖುರೈಲ ರೊಂದಿಗೆ ಯುದ್ಧ ಮಾಡಿದರು.ಅವರ ಪುರುಷರುಗಳನ್ನು ಮುಸ್ಲಿಮರು ಕೊಂದು ಹಾಕಿದರು.ಸ್ತ್ರೀಯರನ್ನು ಮತ್ತು ಮಕ್ಕಳನ್ನು ಸೆರೆ ಹಿಡಿಯಲಾಯಿತು.
ಹುದೈಬಿಯ ಒಪ್ಪಂದ..
ನೆಬಿ ಸ.ಅ ಒಂದು ಕನಸು ಕಂಡರು.ಯಾವುದೇ ಭಯ ಆತಂಕವಿಲ್ಲದೆ ಸ್ವಹಾಬಿಗಳೊಂದಿಗೆ ಮಕ್ಕಾದ ಮಸ್ಜಿದುಲ್ ಹರಾಮಿಗೆ ಪ್ರವೇಶಿಸುವ ಕನಸು ಕಂಡರು.ಈ ಸಂತೋಷ ವಾರ್ತೆ ಅನುಯಾಯಿಗಳಿಗೆ ತಿಳಿಸಿದ ನೆಬಿ ಸ.ಅ ಹಿಜ್ರಾ ಆರನೆಯ ವರ್ಷ ದ್ಸುಲ್ ಕಅದಃ ತಿಂಗಳಲ್ಲಿ ಸಾವಿರದ ಐನೂರು ಮಂದಿಯೊಂದಿಗೆ ಉಮ್ರಃಕ್ಕೆ ಹೊರಟರು.ಅವರು ಉಸ್ಫಾನ್ ತಲುಪಿದಾಗ ಕುರೈಶಿಗಳು ಅವರನ್ನು ತಡೆಯಲು ಸಂಘಟಿತರಾದ ವಾರ್ತೆಯೂ ಲಭಿಸಿತು.ಮುಸ್ಲಿಮರು 200 ಕುದುರೆ ಸೈನ್ಯದೊಂದಿಗೆ ಖಾಲಿದು ಬ್ನು ವಲೀದರ ನೇತ್ರತ್ವದಲ್ಲಿ ಮೊದಲು ಹೋದರು.ನೆಬಿ ಸ.ಅ ಮತ್ತು ಬಾಕಿಯಿದ್ದವರು ಬೇರೊಂದು ದಾರಿಯ ಮೂಲಕ ಹುದೈಬಿಯ್ಯಃ ಎಂಬಲ್ಲಿ ತಲುಪಿದರು.
ಅಲ್ಲಿ ಕುರೈಶಿಗಳ ದೂತರಾದ ನಾಲ್ಕು ಸಹಚರರು ನೆಬಿ ಸ.ಅ ರವರನ್ನು ಸಂದರ್ಶಿಸಿದರು.ಬುದೈಲ್, ಮಿಕ್ರಝ್, ಹುಲೈಸ್, ಉರ್ವ ಎಂಬ ದೂತರಾಗಿದ್ದರು.ಅವರು ಒಬ್ಬೊಬ್ಬರಾಗಿ ನೆಬಿ ಸ.ಅ ರವರನ್ನು ಸಂದರ್ಶಿಸಿದರು.ಯುದ್ಧಕ್ಕಲ್ಲ..ಉಮ್ರ ನಿರ್ವಹಿಸುವ ಸಲುವಾಗಿ ಬಂದದ್ದು ಎಂದು ಅವರಿಗೆ ನೆಬಿ ಸ.ಅ ಮನದಟ್ಟು ಮಾಡಿದರು.ನೆಬಿ ಸ.ಅ ರವರನ್ನು ಮತ್ತು ಸ್ವಹಾಬಿಗಳನ್ನು ತಡೆಯಬಾರದೆಂದು ಎಲ್ಲಾ ನಾಲ್ಕು ದೂತರೂ ಕುರೈಶಿಗಳೊಂದಿಗೆ ಹೇಳಿದರು.
ಉರ್ವತುಬ್ನು ಮಸ್ಊದ್ ಎಂಬ ದೂತ ಹೇಳಿದನು.ಜನರೇ ..ನಾನು ಹಲವಾರು ರಾಜ ಮಹಾರಾಜರ ಬಳಿ ತೆರಳಿದ್ದೇನೆ.ಖೈಸರ್, ಕಿಸ್ರಾ, ನಜ್ಜಾಶೀ ಮುಂತಾದ ರಾಜರನ್ನು ಭೇಟಿಯಾಗಿದ್ದೇನೆ.ಅಲ್ಲಾಹನಾಣೆ ಸತ್ಯ!! ಮುಹಮ್ಮದನನ್ನು ಅನುಯಾಯಿಗಳು ಗೌರವಿಸುವ ಹಾಗೆ ಒಬ್ಬನೇ ಒಬ್ಬ ರಾಜನನ್ನು ಅನುಯಾಯಿಗಳು ಗೌರವಿಸುವುದು ನಾನು ಕಂಡಿಲ್ಲ.ಆ ಮುಹಮ್ಮದ್ ಉತ್ತಮ ನಿರ್ದೇಶನವನ್ನಾಗಿದೆ ನಮ್ಮ ಮುಂದೆ ಇಟ್ಟದ್ದು.ಅದನ್ನು ಸ್ವೀಕರಿಸಿರಿ..
ಆದರೆ ಕುರೈಶಿಗಳು ನೆಬಿ ಸ.ಅ ರವರನ್ನು ತಡೆಯುವ ತೀರ್ಮಾನಕ್ಕೆಯೇ ಬಂದರು.ಆಗ ನೆಬಿ ಸ.ಅ ಉಸ್ಮಾನ್ ರ.ಅ ರವರನ್ನು ಕುರೈಶಿಗಳ ಬಳಿ ಕಳುಹಿಸಿದರು.ದುರ್ಬಲರಾದ ನೈಜ ವಿಶ್ವಾಸಿಗಳ ವಿಜಯ ಸಮೀಪವಾಗಿದೆಯೆಂದು ತಿಳಿಸಿ ಕುರೈಶಿಗಳಿಗೆ ನೆಬಿ ಸ.ಅ ರವರು ಮತ್ತು ಅನುಯಾಯಿಗಳು ಬಂದ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿ ಕೊಡುವ ನಿಟ್ಟಿನಲ್ಲಿ ಉಸ್ಮಾನ್ ರ.ಅ ರವರ ನಿಯೋಗ ಅವರ ಬಳಿ ಹೋಗಿತ್ತು.ಕುರೈಶಿಗಳು ಉಸ್ಮಾನ್ ರ.ಅ ರವರೊಂದಿಗೆ ಹೇಳಿದರು.ನಿನ್ನ ಮುಹಮ್ಮದ್ ಶಕ್ತಿ ಪ್ರಯೋಗಿಸಿ ಇಲ್ಲಿ ಪ್ರವೇಶಿಸಲಾರ.ಮುಂದುವರಿದು ಕುರೈಶಿಗಳು ಉಸ್ಮಾನ್ ರ.ಅ ತಡೆ ಹಿಡಿದು ಬಂಧನದಲ್ಲಿಟ್ಟರು.ಈ ಮಧ್ಯೆ ಉಸ್ಮಾನ್ ರ.ಅ ಕೊಲ್ಲಲ್ಪಟ್ಟರು ಎಂಬ ವಾರ್ತೆ ಬಹಳ ರಭಸದಿಂದ ಮುಸ್ಲಿಮರೆಡೆಯಲ್ಲಿ ಹರಡಿತು.ಆಗ ನೆಬಿ ಸ.ಅ ಉಸ್ಮಾನ್ ರ.ಅ ರವರ ಮರಣಕ್ಕೆ ಪ್ರತೀಕಾರ ತೀರಿಸಲು ಸ್ವಹಾಬಿಗಳೊಂದಿಗೆ ಕರಾರು ಸ್ವೀಕರಿಸಿದರು.ಈ ಕರಾರಿಗೆ ಬೈಅತು ರಿಲ್ವಾನ್ ಎಂದು ಹೆಸರು.
ಈ ಬೈಅತಿನ ಕುರಿತು ತಿಳಿದ ಕುರೈಶಿಗಳು ಭಯಗೊಂಡರು.ಅವರು ಸುಹೈಲ್ ಇಬ್ನು ಅಮ್ರ್ ನನ್ನು ಮುಸ್ಲಿಮರ ಬಳಿ ಮಾತುಕತೆಗೆ ಕಳುಹಿಸಿದರು.ಕೊನೆಗೆ ಒಂದು ಒಪ್ಪಂದಕ್ಕೆ ಬರಲಾಯಿತು.ಆ ಒಪ್ಪಂದದ ವ್ಯವಸ್ಥೆಗಳು ಈ ಕೆಳಗಿನವುಗಳಾಗಿವೆ.
1 - ಈ ವರ್ಷ ನೆಬಿ ಸ.ಅ ಮತ್ತು ಅನುಯಾಯಿಗಳು ಉಮ್ರ ನಿರ್ವಹಿಸದೇನೇ ಮರಳಿ ಹೋಗಬೇಕು.ಮುಂದಿನ ವರ್ಷ ಬರಬಹುದು.ಅದೂ ಕೂಡಾ 3 ದಿವಸ ಮಾತ್ರ ಮಕ್ಕಾದಲ್ಲಿರಬೇಕು.
2 - ಹತ್ತು ವರ್ಷಗಳ ಕಾಲ ಎರಡು ವಿಭಾಗಗಳು ಯುದ್ಧವನ್ನು ಮಾಡಬಾರದು.
3 - ಕುರೈಶಿಗಳಲ್ಲಿ ಯಾರಾದರೂ ಮುಸ್ಲಿಮರ ಭಾಗಕ್ಕೆ ಹೋದರೆ ಅವರನ್ನು ಮರಳಿ ಕುರೈಶಿಗಳಿಗೆ ಒಪ್ಪಿಸಬೇಕು.ಮುಸ್ಲಿಮರ ಕಡೆಯಿಂದ ಯಾರಾದರೂ ಕುರೈಶಿಗಳ ಭಾಗಕ್ಕೆ ಹೋದರೆ ಅವರನ್ನು ಮರಳಿಸಿ ಮುಸ್ಲಿಮರಿಗೆ ಒಪ್ಪಿಸಲಿಕ್ಕಿಲ್ಲ.
4 - ನೆಬಿ ಸ.ಅ ರವರೊಂದಿಗೂ ಕುರೈಶಿಗಳೊಂದಿಗೂ ಮಿತ್ರತ್ವ ಬೆಳೆಸಬಹುದು.ಈ ಶರತ್ತನ್ನು ಅನುಸರಿಸಿ ಬನೂಬಕರ್ ವಂಶಸ್ಥರು ಕುರೈಶಿಗಳೊಂದಿಗೂ ಖುಝಾಅಃ ಗೋತ್ರದವರು ನೆಬಿ ಸ.ಅ ರವರೊಂದಿಗೂ ಮಿತ್ರತ್ವ ಬೆಳೆಸಿದರು.ಈ ಒಪ್ಪಂದವು ಹುದೈಬಿಯ್ಯಃ ಒಪ್ಪಂದ ಎಂಬ ಹೆಸರಿನಲ್ಲಿ ಅರಿಯಲ್ಪಟ್ಟಿತು.
ಒಪ್ಪಂದ ಪೂರ್ಣವಾಗುವುದರೊಂದಿಗೆ ಅದರ ವ್ಯವಸ್ಥೆಗಳನ್ನನುಸರಿಸಿ ನೆಬಿ ಸ.ಅ ಮದೀನಕ್ಕೆ ತಿರುಗಿ ಹೋದರು.ಒಂದು ವರ್ಷ ಕಳೆದು ದ್ಸುಲ್ ಕಅದಃ ತಿಂಗಳಿನಲ್ಲಿ ಬಂದು ಉಮ್ರತುಲ್ ಖಲಾಹ್ ನಿರ್ವಹಿಸಿದರು.ಹುದೈಬಿಯ್ಯಃ ಒಪ್ಪಂದದ ವ್ಯವಸ್ಥೆಗಳು ಮುಸ್ಲಿಮರಿಗೆ ತೀವ್ರ ಪ್ರಯಾಸಕರವಾಗಿದ್ದರೂ ಅದರಲ್ಲಿ ಅಡಕವಾಗಿದ್ದ ಪ್ರಯೋಜನಗಳು ತುಂಬಾ ಇದ್ದವು.ಕುರೈಶಿಗಳು ಮುಸ್ಲಿಮರ ಸ್ವಭಾವ ಗುಣ ಮಹಿಮೆಯನ್ನು ಕಂಡು ಅರಿತರು.ಶಾಂತಿ ಸಮಾಧಾನದ ವಾತಾವರಣ ನೆಲೆ ನಿಂತವು.ಎರಡೂ ವಿಭಾಗದವರು ಬೆರೆತು ಜೀವಿಸಲು ಸಮಯ ಲಭಿಸಿದುದರಿಂದ ಪವಿತ್ರ ಇಸ್ಲಾಮಿಗೆ ಹೆಚ್ಚು ಪ್ರಚಾರ ಲಭಿಸಿದವು.ಇಸ್ಲಾಂ ಧರ್ಮ ಬೋಧನೆಯ ಹಾದಿಯಲ್ಲಿದ್ದ ಸಂಕಷ್ಟಗಳ ತೊಡಕುಗಳು ನಿವಾರಣೆಯಾಯಿತು.ಅರಬ್ ಗೋತ್ರ ನಾಯಕರಿಗೂ ರಾಜರುಗಳಿಗೂ ಇಸ್ಲಾಮಿಗೆ ಆಹ್ವಾನಿಸಿ ಪತ್ರ ಬರೆದು ತನ್ನ ದೂತರ ಮೂಲಕ ರವಾನಿಸಲು ನೆಬಿ ಸ.ಅ ರವರಿಗೆ ಸಾಧ್ಯವಾಯಿತು.ಆದುದರಿಂದಾಗಿದೆ ಈ ಹುದೈಬಿಯ್ಯಃ ಒಪ್ಪಂದವನ್ನು ಕುರಾನ್ ಫತ್ಹುಲ್ ಮುಬೀನ್ ( ಸ್ಪಷ್ಟವಾದ ವಿಜಯ ) ಎಂದು ವಿಶ್ಲೇಶಿಸಿದ್ದು.
ಹುದೈಬಿಯ್ಯಃ ಒಪ್ಪಂದದ ಮೂಲಕ ಇಸ್ಲಾಂ ಧರ್ಮ ಬೋಧನೆಯ ಮಾರ್ಗ ಸುಖಕರವಾಗಿದ್ದರೂ ಖೈಬರ್ ನಲ್ಲಿ ವಾಸಿಸುತ್ತಿದ್ದ ಯಹೂದಿಗಳು ಸಮಸ್ಯೆಗಳನ್ನು ಸ್ರಷ್ಟಿಸುತ್ತಿದ್ದರು.ಆಗ ನೆಬಿ ಸ.ಅ ಅವರನ್ನು ಎದುರಿಸಲು ಹಿಜ್ರಾ ಏಳನೆಯ ವರ್ಷ ಮುಹರ್‍ರಂ ತಿಂಗಳಿನಲ್ಲಿ ಸಾವಿರದ ಆರು ನೂರು ಸ್ವಹಾಬಿಗಳೊಂದಿಗೆ ಖೈಬರಿಗೆ ಹೊರಟರು.ಖೈಬರ್ ಮತ್ತು ಇತರ ಯಹೂದಿ ಕೇಂದ್ರಗಳಾಗಿದ್ದ ಫದಕ್, ವಾದಿಲ್ ಖುರಾ, ತೈಮಾಹ್ ಇಸ್ಲಾಮಿನ ವಶವಾಯಿತು.
ಮಕ್ಕಾ ವಿಜಯ....
ಮುಸ್ಲಿಮರು ಹುದೈಬಿಯ್ಯಃ ಒಪ್ಪಂದದ ಕರಾರುಗಳು ಪಾಲಿಸಿ ಮುಂದುವರಿದರು. ಆದರೆ ಕುರೈಶಿಗಳು ಕರಾರು ಮುರಿದರು. ಖುಝಾಅಃ ಗೋತ್ರದ ವಿರುದ್ಧ ಬನೂಬಕರ್ ವಂಶಸ್ಥರಿಗೆ ಕುರೈಶಿಗಳು ಸಹಾಯ ಮಾಡಿದರು. ಆಗ ಖುಝಾಅಃ ಗೋತ್ರದವರು ನೆಬಿ ಸ.ಅ ರವರ ಬಳಿ ಸಹಾಯ ಕೇಳಿದರು. ನೆಬಿ ಸ.ಅ ಅವರನ್ನು ಸಹಾಯಿಸಲು ಹತ್ತು ಸಾವಿರ ಸ್ವಹಾಬಿಗಳೊಂದಿಗೆ ಹೊರಟರು. ಇದು ಹಿಜ್ರಾ ಎಂಟನೇ ವರ್ಷದ ರಮಳಾನಿನಲ್ಲಾಗಿತ್ತು. ಅವರು ಮರ್ರುಳ್ಳಹ್ರಾನಿಗೆ ಬಂದು ತಲುಪಿದರು. ಕುರೈಶಿಗಳು ಇದು ತಿಳಿದಿರಲಿಲ್ಲ. ರಹಸ್ಯ ಮಾಹಿತಿಯನ್ನು ಕಲೆ ಹಾಕಲು ಹೊರಟಿದ್ದ ಅಬೂಸುಫ್ಯಾನ್, ಬುದೈಲ್, ಹಕೀಂ ಎಂಬವರನ್ನು ಮುಸ್ಲಿಮರು ಕಂಡರು. ಅವರಿಗೆ ಅಬ್ಬಾಸ್ ರ.ಅ ಅಭಯ ಹಸ್ತ ಚಾಚಿದರು. ಅವರು ನೆಬಿ ಸ.ಅ ರವರ ಬಳಿ ಸಾಗಿ ಇಸ್ಲಾಂ ಧರ್ಮ ಸ್ವೀಕಾರ ಕೂಡಾ ಮಾಡಿದರು.
ನೆಬಿ ಸ.ಅ ಯಾತ್ರೆ ಮುಂದುವರಿಸಿದರು. ಖಾಲಿದುಬ್ನುಲ್ ವಲೀದ್ ರ.ಅ ರವರೊಂದಿಗೆ ಕೆಳಭಾಗದಿಂದ ಮಕ್ಕಾ ಪ್ರವೇಶಿಸಲು ನಿರ್ದೇಶಿಸಿದರು. ನೆಬಿ ಸ.ಅ ಸೈನ್ಯದೊಂದಿಗೆ ಮೇಲ್ಭಾಗದಿಂದ ಪ್ರವೇಶಿಸಿದರು. ಒಬ್ಬರನ್ನು ಕರೆದು ಈ ಕೆಳಗಿನ ಕಾರ್ಯಗಳನ್ನು ಹೇಳಲು ತಿಳಿಸಿದರು.
ಮಸ್ಜಿದುಲ್ ಹರಾಮಿಗೆ ಪ್ರವೇಶಿಸಿದವನು ನಿರ್ಭಯಿ,
ಅಬೂಸುಫ್ಯಾನರ ಮನೆ ಪ್ರವೇಶಿಸಿದವನು ನಿರ್ಭಯಿ,
ಸ್ವಂತ ಮನೆಯಲ್ಲಿ ವಾಸಿಸುವವನೂ ನಿರ್ಭಯಿಯಾಗಿದ್ದಾನೆ.
ಖಾಲಿದುಬ್ನುಲ್ ವಲೀದ್ ರ.ಅ ರವರನ್ನು ಕೆಲವರು ಆಯುಧದ ಮೂಲಕ ಎದುರಿಸಿದರೂ ಇಪ್ಪತ್ತೆಂಟು ಮಂದಿ ಸಾವಿಗೀಡಾಗುವುದರೊಂದಿಗೆ ಅವರಿಗೆ ಹಿಂತಿರುಗಿ ಓಡಬೇಕಾಯಿತು. ಈ ಸಂಘರ್ಷದಲ್ಲಿ ಎರಡು ಮುಸ್ಲಿಮರೂ ಮರಣ ಹೊಂದಿದರು. ನೆಬಿ ಸ.ಅ ರವರನ್ನು ಯಾರೂ ಎದುರಿಸಲು ಮುಂದೆ ಬರಲಿಲ್ಲ. ಹೀಗೆ ರಮಳಾನ್ ಇಪ್ಪತ್ತರಂದು ಶುಕ್ರವಾರ ನೆಬಿ ಸ.ಅ ಮಕ್ಕಾದಲ್ಲಿ ಪ್ರವೇಶಿಸಿದರು. ತಾಳ್ಮೆಯಿಂದ ವಿನಯದೊಂದಿಗೆ ಅಲ್ಲಾಹನನ್ನು ಸ್ತುತಿಸಿ ದ್ಸಿಕ್ರ್ ಹೇಳುತ್ತಾ ಪ್ರವೇಶಿಸಿದರು.
ನೆಬಿ ಸ.ಅ ಝಬೈರ್ ರ.ಅ ರವರೊಂದಿಗೆ ಧ್ವಜವನ್ನು ನಾಟಲು ತಿಳಿಸಿದರು. ಅನಂತರ ಅಲ್ಲಿ ಇಳಿದು ತವಾಫ್ ನಿರ್ವಹಿಸಿದರು. ಕಾಬಾದಲ್ಲಿದ್ದ ಚಿತ್ರಗಳನ್ನು ಒರೆಸಿ ಮಾಯಿಸಿದರು. ಅದರ ಎಲ್ಲಾ ಭಾಗಗಳಲ್ಲಿ ತಕ್ಬೀರ್ ಮೊಳಗಿಸಿದರು. ಇಬ್ರಾಹಿಂ ಮಖಾಮಿನ ಹತ್ತಿರ ನಮಾಜು ಮಾಡಿದರು. ಝಂಝಂ ನೀರು ಕುಡಿದರು. ಕಾಬಾದಲ್ಲಿದ್ದ ವಿಗ್ರಹಗಳನ್ನು ನಿವಾರಿಸಿ ಶುದ್ಧಗೊಳಿಸಿದರು. ಕಾಬಾದ ಬಾಗಿಲಿನ ಸಮೀಪ ನಿಂತು ಜನರೊಂದಿಗೆ ನೆಬಿ ಸ.ಅ ಮಾತನಾಡಿದರು. ಶತ್ರುಗಳಿಗೆ ಕ್ಷಮೆ ನೀಡಿದರು. ನೆಬಿ ಸ.ಅ ಹೇಳಿದರು : ನೀವು ಹೋಗಿರಿ..ನೀವು ಸ್ವತಂತ್ರರು.
ಬಿಲಾಲ್ ರ.ಅ ರವರೊಂದಿಗೆ ಕಾಬಾದ ಮೇಲ್ಭಾಗಕ್ಕೆ ಹತ್ತಿ ಬಾಂಗ್ ಕೊಡಲು ನೆಬಿ ಸ.ಅ ನಿರ್ದೇಶಿಸಿದರು.ಪವಿತ್ರ ಮಕ್ಕಾದಲ್ಲಿ ಬಿಲಾಲ್ ರ.ಅ ರವರ ಮಾಧುರ್ಯದಿಂದ ಕೂಡಿದ ಬಾಂಗ್ ಕರೆ ಮಾರ್ಧ್ವನಿಸಿದವು.ಜನರು ಗುಂಪು ಗುಂಪಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು.ಸ್ವಫಾದಲ್ಲಿ ಕುಳಿತು ನೆಬಿ ಸ.ಅ ಅವರೊಂದಿಗೆ ಪ್ರತಿಜ್ಞೆ ಸ್ವೀಕರಿಸಿದರು.ಮೊದಲಿಗೆ ವ್ರದ್ಧರು, ಬಳಿಕ ಮಕ್ಕಳು, ಪುರುಷರು ನಂತರ ಸ್ತ್ರೀಯರು ಪ್ರತಿಜ್ಞೆ ಮಾಡಿದರು.ಹದಿನೆಂಟು ದಿನ ನೆಬಿ ಸ.ಅ ಮಕ್ಕಾದಲ್ಲಿ ತಂಗಿದರು.ನಂತರ ಅತ್ತಾಬುಬ್ನು ಉಸೈದ್ ರ.ಅ ರವರಿಗೆ ಮಕ್ಕಾದ ಹೊಣೆಗಾರಿಕೆ ನೀಡಿ ಮದೀನಕ್ಕೆ ಮರಳಿದರು.
ಮಕ್ಕಾ ವಿಜಯದೊಂದಿಗೆ ಅರಬ್ ನಾಡಿನಲ್ಲಿ ಶಿರ್ಕಿನ ಕೋಟೆ ಉರುಳಿತು. ಜನರು ಇಸ್ಲಾಮಿನೆಡೆಗೆ ಗುಂಪು ಗುಂಪಾಗಿ ಧಾವಿಸಿ ಬರುತ್ತಿದ್ದರು. ಆದರೆ ಸಕೀಫ್, ಹವಾಝಿನ್ ಎಂಬ ಎರಡು ಗೋತ್ರಗಳು ನೆಬಿ ಸ. ಅ ರವರೊಂದಿಗೆ ಯುದ್ಧ ಮಾಡಲು 30,000 ಸಾವಿರದಷ್ಟು ಸೈನ್ಯಗಳನ್ನು ಸಜ್ಜುಗೊಳಿಸಿದರು.ಆಗ ನೆಬಿ ಸ.ಅ ರವರು 12,000 ಯೋಧರೊಂದಿಗೆ ಹಿಜ್ರಾ 8 ನೇ ವರ್ಷ ಶವ್ವಾಲ್ ತಿಂಗಳಲ್ಲಿ ಅವರನ್ನು ಹುನೈನಿನಲ್ಲಿ ಎದುರಿಸಿದರು.
ಈ ಯುದ್ಧದಲ್ಲಿ ಪ್ರಾರಂಭ ಹಂತದಲ್ಲಿ ಮುಸ್ಲಿಮರಿಗೆ ಪರಾಜಯ ಉಂಟಾದರೂ ಕೊನೆಯ ಹಂತದಲ್ಲಿ ಭರ್ಜರಿ ವಿಜಯ ದಾಖಲಾಯಿತು. ಈ ಯುದ್ಧಕ್ಕೆ ಗಝ್ವತ್ ಹುನೈನ್ ಎಂದು ಕರೆಯಲಾಗುತ್ತದೆ.
ಹಿಜ್ರಾ 9 ನೇ ವರ್ಷ ರೋಮರು ನೆಬಿ ಸ.ಅ ರವರೊಂದಿಗೆ ಯುದ್ಧ ಮಾಡಲು 40,000 ದಷ್ಟಿರುವ ಸೈನ್ಯವನ್ನು ಸಜ್ಜುಗೊಳಿಸಿದರು. ಆಗ ನೆಬಿ ಸ.ಅ ರವರು 30,000 ಅನುಯಾಯಿಗಳೊಂದಿಗೆ ಹೊರಟರು. ತಬೂಕ್ ಎಂಬಲ್ಲಿಗೆ ತಲುಪಿದರು. ಆದರೆ ಅಲ್ಲೆಲ್ಲಿಯೂ ಶತ್ರುಗಳನ್ನು ಕಾಣಲು ಸಾಧ್ಯವಾಗಲಿಲ್ಲ. ನೆಮ್ಮದಿಯೊಂದಿಗೆ ಮರಳಿದರು. ಇದಾಗಿದೆ ಗಝ್ವತ್ ತಬೂಕ್. ಇದು ಇಸ್ಲಾಮಿನ ಕೊನೆಯ ಯುದ್ಧ ಅಥವಾ ಗಝ್ವತ್ ಆಗಿದೆ.
ಹಿಜ್ರಾ 9 ನೇ ವರ್ಷ ನಾನಾ ಭಾಗಗಳಿಂದ ನೆಬಿ ಸ.ಅ ರವರ ಬಳಿ ಗುಂಪು ಗುಂಪಾಗಿ ಜನರು ಆಗಮಿಸುತ್ತಿದ್ದರು. ಆದುದರಿಂದ ಈ ವರ್ಷವನ್ನು ಆಮುಲ್ ವುಫೂದ್ ಎಂದು ಕರೆಯಲಾಗುತ್ತದೆ. ಈ ವರ್ಷದಲ್ಲಿ ಅಬೂಬಕರ್ ಸಿದ್ದೀಖ್ ರ.ಅ ರವರ ನೇತ್ರತ್ವದಲ್ಲಿ ಹಜ್ ನಿರ್ವಹಿಸಲಾಯಿತು. ಹಿಜ್ರಾ 10 ನೇ ವರ್ಷ ನೆಬಿ ಸ.ಅ ಹಜ್ಜತುಲ್ ವದಾಅ್ ನಿರ್ವಹಿಸಿದರು. ಒಂದು ಲಕ್ಷದ ಹದಿನಾಲ್ಕು ಸಾವಿರ ಸತ್ಯ ವಿಶ್ವಾಸಿಗಳು ನೆಬಿ ಸ.ಅ ರವರೊಂದಿಗಿದ್ದರು. ಅರಫಾ ದಿವಸ ನೆಬಿ ಸ.ಅ ರವರು ಖುತ್ಬತುಲ್ ವದಾಅ್ ಎಂಬ ಪ್ರಸಿದ್ಧವಾದ ಕೊನೆಯ ಪ್ರಭಾಷಣ ನಡೆಸಿದರು. ಇಸ್ಲಾಂ ಸಂಪೂರ್ಣವಾಯಿತು ಎಂದು ಪ್ರಖ್ಯಾಪಿಸುವ ಆಯತ್ ಆ ದಿನ ಅರಫಾದಲ್ಲಿ ಅವತೀರ್ಣವಾಯಿತು.
( الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا. )
ಇಂದು ನಿಮಗೆ ನಿಮ್ಮ ಧರ್ಮವನ್ನು ನಾನು ಸಂಪೂರ್ಣಗೊಳಿಸಿದೆ. ನನ್ನ ಅನುಗ್ರಹ ನಿಮಗೆ ನಾನು ಪೂರ್ತಿಗೊಳಿಸಿದೆ.
ಈ ಸಂತೋಷದಾಯಕ ಸಂದರ್ಭದಲ್ಲಿ ಅಲ್ಲಾಹು ತನ್ನ ಪ್ರವಾದಿಯನ್ನು ತನ್ನೆಡೆಗೆ ಆಹ್ವಾನಿಸಿದನು. ನೆಬಿ ಸ.ಅ ಅದಕ್ಕೆ ರೆಡಿಯಾದರು. ಬದುಕಿರುವವರೊಂದಿಗೆ ವಸಿಯ್ಯತ್ ಮಾಡಿ ಮರಣ ಹೊಂದಿದವರ ಝಿಯಾರತ್ ನಡೆಸಿ ಯಾತ್ರೆ ಕೇಳಿದರು. ಪವಿತ್ರ ಮದೀನದ ಜನ್ನತುಲ್ ಬಖೀಯಿನಲ್ಲಿ ಅಂತ್ಯ ವಿಶ್ರಮ ಹೊಂದಿದವರನ್ನೂ, ಉಹುದ್ ಶುಹದಾಗಳನ್ನೂ ಝಿಯಾರತ್ ನಡೆಸಿ ಅವರಿಗಾಗಿ ಪ್ರಾರ್ಥಿಸಿದರು.
ಹಿಜ್ರಾ ಹನ್ನೊಂದನೇ ವರ್ಷ ಸಫರ್ ತಿಂಗಳ ಕೊನೆಯಲ್ಲಿ ನೆಬಿ ಸ.ಅ ರವರಿಗೆ ರೋಗ ಬಾಧಿಸಿತು. ರೋಗವು ಹದಿಮೂರು ದಿವಸಗಳವರೆಗೆ ಬಾಧಿಸಿತು. ರೋಗವು ಕಠಿಣವಾದಾಗ ಉಳಿದ ಪತ್ನಿಯರ ಸಮ್ಮತದೊಂದಿಗೆ ಆಯಿಶ ರ.ಅ ರವರ ಮನೆಯಲ್ಲಿ ತಂಗಿದರು. ನಮಾಜಿಗೆ ಹೋಗಲು ಅಸಾಧ್ಯವಾದಾಗ ಅಬೂಬಕರ್ ಸಿದ್ದೀಕ್ ರ.ಅ ರವರನ್ನು ನಮಾಜಿಗೆ ಇಮಾಂ ಆಗಿ ನಿಲ್ಲಲು ನಿರ್ದೇಶಿಸಿದರು. ಸ್ವಹಾಬಿವರ್ಯರ ದುಃಖ ಬೇಜಾರು ಕಂಡಾಗ ನೆಬಿ ಸ.ಅ ರವರು ಎರಡು ಸ್ವಹಾಬಿಗಳ ಭುಜದ ಮೇಲೆ ಕೈ ಇಟ್ಟು ಮಸೀದಿಗೆ ಬಂದರು. ಮಿಂಬರಿನ ಕೊನೆಯ ಸ್ಟೆಪ್ಪಿನಲ್ಲಿ ಕುಳಿತು ತನ್ನ ಬದುಕಿನ ವಿದಾಯ ಭಾಷಣ ಮಾಡಿದರು. " ನಾನು ನಿಮಗಿಂತ ಮುಂಚೆ ಬದುಕಿಗೆ ವಿದಾಯ ಹೇಳುವವನಾಗಿದ್ದೇನೆ. ನನ್ನ ನಂತರ ನೀವು ಕೂಡಾ ನನ್ನನ್ನು ಹಿಂಬಾಲಿಸುವಿರಿ. ನಿಮಗೆ ವಾಗ್ದಾನ ಮಾಡಿದ ಸ್ಥಳ ಹೌಲ್ ಆಗಿದೆ. ಅಲ್ಲಿ ನನ್ನನ್ನು ಸಮೀಪಿಸಲು ಬಯಸುವವರು ತನ್ನ ಕೈ ಮತ್ತು ನಾಲಗೆಯನ್ನು ಅನಾವಶ್ಯವಾದ ಕಾರ್ಯಗಳಿಂದ ತಡೆದು ನಿಲ್ಲಿಸಲಿ."
ಒಂದು ಸುಬಹ್ ನಮಾಜಿನ ಸಮಯ. ಮುಸ್ಲಿಮರು ಸುಬಹ್ ನಮಾಜು ನಿರ್ವಹಿಸುತ್ತಿರುವಾಗ ನೆಬಿ ಸ.ಅ ರವರು ತನ್ನ ರೂಮಿನಿಂದ ಇಣುಕಿ ನೋಡಿದರು.
ನೆಬಿ ಸ.ಅ ರವರು ನಮಾಜಿಗೆ ಬರುತ್ತಾರೆ ಎಂದು ಭಾವಿಸಿ ಸ್ವಹಾಬಿಗಳು ತೀವ್ರ ಉಲ್ಲಸಿತರಾದರು. ಅಬೂಬಕರ್ ಸಿದ್ದೀಕ್ ರ.ಅ ಇಮಾಮತ್ ನಿಲ್ಲುವ ಜಾಗದಿಂದ ಹಿಂದೆ ಸರಿದರು. ಆದರೆ ಅದು ನೆಬಿ ಸ.ಅ ರವರ ಅಂತಿಮ ನೋಟವಾಗಿತ್ತು. ನಮಾಜು ಪೂರ್ತಿ ಮಾಡಲು ಕೈ ಸನ್ನೆ ಮಾಡಿ ನೆಬಿ ಸ.ಅ ರವರು ತನ್ನ ಮುಖವನ್ನು ರೂಮಿನ ಒಳಗೆಳೆದು ಪರದೆ ಕೆಳಗೆಳೆದರು. ಈ ದಿನ ಳುಹಾದ ಸಮಯವಾದಾಗ ನೆಬಿ ಸ.ಅ ವಫಾತಾದರು.
ಹಿಜ್ರಾ ಹನ್ನೊಂದನೇ ವರ್ಷ ರಬೀವುಲ್ ಅವ್ವಲ್ ಹನ್ನೆರಡು ಸೋಮವಾರವಾಗಿತ್ತು ಲೋಕ ನೇತಾರರಾದ ಅಂತ್ಯ ಪ್ರವಾದಿ ಮುಹಮ್ಮದ್ ಸ.ಅ ರವರ ವಫಾತ್. ವಫಾತಾಗುವಾಗ 63 ವರ್ಷ ಪ್ರಾಯವಾಗಿತ್ತು.
ವಫಾತಿನ ವಾರ್ತೆ ಕೇಳಿ ಮುಸ್ಲಿಮರು ತೀವ್ರ ದುಃಖಿತರಾದರು. ಉಮರು ಬ್ನುಲ್ ಖತ್ತಾಬ್ ರ.ಅ ರವರಿಗೆ ಬುದ್ಧಿ ಭ್ರಮಣೆ ಸಂಭವಿಸಿತು. ಉಸ್ಮಾನ್ ರ.ಅ ರವರಿಗೆ ಮಾತೇ ಹೊರಡದ ರೀತಿಯಲ್ಲಿ ನಿಶ್ಯಬ್ದರಾದರು. ಅಲಿಯ್ಯುಬ್ನು ಅಬೀ ತಾಲಿಬ್ ರ.ಅ ಮೌನಿಯಾದರು. ಅಬ್ದುಲ್ಲಾಹಿ ಉನೈಸ್ ರ.ಅ ಮರಣ ಹೊಂದಿದರು. ಪರಿಂಭ್ರಾತರಾದ ಜನರನ್ನು ಅಬೂಬಕರ್ ಸಿದ್ದೀಕ್ ರ.ಅ ಆಗಮಿಸಿ ಸಮಾಧಾನ ಪಡಿಸಿದರು. ಎಲ್ಲರೂ ಶಾಂತರಾದರು. ಅಬೂಬಕರ್ ಸಿದ್ದೀಕ್ ರ.ಅ ರವರನ್ನು ಅವರು ಖಲೀಫರಾಗಿ ಆರಿಸಿದರು. ಅದರ ನಂತರ ನೆಬಿ ಸ.ಅ ರವರ ಪವಿತ್ರ ಶರೀರವನ್ನು ಸ್ನಾನ ಮಾಡಿಸಿದರು. ಕಫನ್ ಮಾಡಿ ನಮಾಜು ನಿರ್ವಹಿಸಿದರು. ಮೊದಲು ಪುರುಷರು, ಬಳಿಕ ಸ್ತ್ರೀಯರು ನಂತರ ಮಕ್ಕಳು ನಮಾಜು ಮಾಡಿದರು. ಎಲ್ಲರೂ ಒಬ್ಬಂಟಿಗರಾಗಿಯಾಗಿದೆ ನಮಾಜು ನಿರ್ವಹಿಸಿದ್ದು. ಆಯಿಶಃ ಬೀವಿ ರ.ಅ ರವರ ಮನೆಯಲ್ಲಿ ನೆಬಿ ಸ.ಅ ವಫಾತಾದ ಸ್ಥಳದಲ್ಲೇ ದಫನ ಮಾಡಲಾಯಿತು. ಬುಧವಾರ ಬೆಳಿಗ್ಗೆಯಾಗಿತ್ತು ದಫನ ಕಾರ್ಯ ನೆರವೇರಿಸಿದ್ದು. ಭೂಮಿಯಲ್ಲಿ ಅತ್ಯಂತ ಪವಿತ್ರವಾದ ಈ ಸ್ಥಳಕ್ಕೆ ಹುಜ್ರತು ಶ್ಶರೀಫಃ ಎಂದು ಕರೆಯಲಾಗುತ್ತದೆ.
ಮುಗಿಯಿತು.