Tuesday, 25 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ 11

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -11

                      ಅನ್ಸಾರಿಗಳು.....

ಪವಿತ್ರ ಮದೀನದ ಪ್ರಮುಖ ಎರಡು ಗೋತ್ರಗಳಾಗಿತ್ತು ಅವ್ಸ್ ಮತ್ತು ಖಝ್ರಜ್.ಹಾರಿಸತು ಇಬ್ನು ಸಅಲಬಃ ಮತ್ತು ಖೈಲ ಬಿಂತ್ ಕಾಹಿಲ್ ರವರ ಮಕ್ಕಳಾದ ಅವ್ಸ್ ಮತ್ತು ಖಝ್ರಜ್ ರವರ ಸಂತಾನ ಪರಂಪರೆಯಾಗಿರುವರು ಅವರು.ನಂತರದ ಕಾಲದಲ್ಲಿ ಮಕ್ಕಳು ಮೊಮ್ಮಕ್ಕಳಾಗಿ ಒಂದು ದೊಡ್ಡ ಸಮೂಹವಾಗಿ ಬೆಳೆದರು.ಅವ್ಸ್ ನ ಸಂತಾನ ಪರಂಪರೆ ಅವ್ಸ್ ಗೋತ್ರವಾಗಿ ಖಝ್ರಜ್ ನ ಸಂತಾನ ಪರಂಪರೆ ಖಝ್ರಜ್ ಗೋತ್ರವಾಗಿ ಪ್ರಸಿದ್ಧರಾದರು.ಈ ಎರಡು ಗೋತ್ರಗಳ ಮಧ್ಯೆ ಶತ್ರುತ್ವ ಹೊಗೆಯಾಡುತ್ತಿತ್ತು.ನಿರಂತರ ಯುದ್ಧಗಳು ನಡೆಯುತ್ತಿತ್ತು.ಈ ಒಂದು ಸಂದರ್ಭದಲ್ಲಾಗಿದೆ ಪವಿತ್ರ ಮದೀನಕ್ಕೆ ನೆಬಿ ಸ.ಅ ರವರ ಆಗಮನವಾಗಿದ್ದು.
        ಇಸ್ಲಾಂ ಧರ್ಮ ಸ್ವೀಕರಿಸಿದ ಬಳಿಕ ಅವರು ಪರಸ್ಪರ ಸೌಹಾರ್ದತೆ ಬೆಳೆಯಿತು.ಒಂದೇ ತಾಯಿಯ ಮಕ್ಕಳೆಂಬಂತೆ ಪರಸ್ಪರ ಸಾಹೋದರ್ಯತೆಯಿಂದ ಪ್ರೀತಿ ವಿಶ್ವಾಸದಿಂದ ಜೀವಿಸಲು ಪ್ರಾರಂಭಿಸಿದರು.ಇದರ ಕುರಿತು ಕುರಾನ್ ಹೇಳುವುದು ಹೀಗೆ..
" ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳನ್ನು ಸ್ಮರಿಸಿರಿ.ನೀವು ಪರಸ್ಪರ ಶತ್ರುಗಳಾಗಿದ್ದೀರಿ.ಆಗ ಅಲ್ಲಾಹು ನಿಮ್ಮ ಹ್ರದಯಗಳನ್ನು ಒಂದುಗೂಡಿಸಿದನು.ಆದುದರಿಂದ ಅವನ ಅನುಗ್ರಹದಿಂದ ನೀವು ಪರಸ್ಪರ ಸಹೋದರರಾದಿರಿ". ( ಆಲ ಇಮ್ರಾನ್ 103 )
        ಪರಸ್ಪರ ಸಹೋದರರಂತೆ ಒಗ್ಗೂಡಿದ ಅವ್ಸ್ ಖಝ್ರಜ್ ಗೋತ್ರದವರು ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನಕ್ಕೆ ಹಿಜ್ರಾ ಬಂದ ಬಳಿಕ ಅನ್ಸಾರಿಗಳು ( ಸಹಾಯಿಗಳು ) ಎಂಬ ಹೆಸರಿನಲ್ಲಿ ಅರಿಯಲ್ಪಟ್ಟರು.ಮಕ್ಕಾದಿಂದ ಬಂದ ನೆಬಿ ಸ.ಅ ಸಹಿತವಿರುವ ಮುಹಾಜಿರುಗಳಿಗೆ ಅಭಯಹಸ್ತ ಚಾಚಿ ಸಹಾಯ ಸಹಕಾರ ನೀಡಿದ ನಿಮಿತ್ತವಾಗಿದೆ ಅವರು ಅನ್ಸಾರಿ ಎಂಬ ನಾಮದಿಂದ ಹೆಸರುವಾಸಿಯಾದದ್ದು.

ಉದಾತ್ತವಾದ ಸಾಹೋದರ್ಯತೆ.

ನೆಬಿ ಸ.ಅ ರವರು ಒಂದೊಂದೇ ಮುಹಾಜಿರರನ್ನು ಅನ್ಸಾರಿಗಳಿಗೆ ವಹಿಸಿಕೊಡುತ್ತಿದ್ದರು.ಪ್ರತೀಯೋರ್ವ ಮುಹಾಜಿರರನ್ನು ವಹಿಸಿ ಕೊಡುವಾಗ ಅನ್ಸಾರಿಗಳು ಮುಗಿಬೀಳುತ್ತಿದ್ದರು.ಕೊನೆಗೆ ಚೀಟಿ ಹಾಕುವ ಮೂಲಕವಾಗಿದೆ ಮುಹಾಜಿರರನ್ನು ಅವರಿಗೆ ವಹಿಸಿ ಕೊಟ್ಟದ್ದು.ಪರಸ್ಪರ ಸಹಾಯ ಸಹಕಾರ ಹಾಗೂ ವಾರೀಸು ಸೊತ್ತಿನ ಅವಕಾಶಿ ಹೀಗೆ ಎಲ್ಲದರಲ್ಲೂ ಮುಹಾಜಿರುಗಳನ್ನು ಸಹೋದರರಂತೆ ಅನ್ಸಾರಿಗಳು ಪರಿಗಣಿಸಿದರು.
        ಫಲ ಕೊಡುವ ವ್ರಕ್ಷಗಳನ್ನು ಎರಡೂ ವಿಭಾಗಗಳ ಮಧ್ಯೆ  ಸಮಪಾಲು ಮಾಡಲು ಅನ್ಸಾರಿಗಳು ಆವಶ್ಯಪಟ್ಟರು.ನೆಬಿ ಸ.ಅ ಅದು ನಿರಾಕರಿಸಿದಾಗ ಫಲಗಳನ್ನು ಸಮಪಾಲು ಮಾಡಲು ಅವರು ಹೇಳಿದರು.ಇದರ ನಂತರ ಅನ್ಸಾರಿಗಳು ಮತ್ತು ಮುಹಾಜಿರುಗಳು ಜತೆಯಾಗಿ ತೋಟಗಳ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು ಮತ್ತು ಅದರ ಫಲಗಳನ್ನು ಸಮಪಾಲಾಗಿ ತೆಗೆಯುತ್ತಿದ್ದರು.
     ಮುಹಾಜಿರುಗಳು ಅನ್ಸಾರಿಗಳಿಗೆ ಭಾರವಾಗದ ರೀತಿಯಲ್ಲಿ ಜೀವಿಸಲು ಇಷ್ಟಪಟ್ಟರು.ಅವರು ವ್ಯಾಪಾರದಲ್ಲಿಯೂ ಕ್ರಷಿಯಲ್ಲಿಯೂ ಏರ್ಪಟ್ಟರು.ಸ್ವಂತವಾಗಿ ಬದುಕಲು ಜೀವನಮಾರ್ಗವನ್ನು ಕಂಡರು.ಸಅದು ಬ್ನು ರಬೀಇನುಲ್ ಅನ್ಸಾರಿ ರ.ಅ ತನ್ನ ಮುಹಾಜಿರ್ ಸಹೋದರನಾದ ಅಬ್ದುರ್‍ರಹ್ಮಾನು ಬ್ನು ಅವ್ಫ್ ಎಂಬವರೊಂದಿಗೆ ಹೇಳಿದರು : ಸಹೋದರಾ..ನಾನು ಮದೀನದ ದೊಡ್ಡ ಶ್ರೀಮಂತನಾಗಿದ್ದೇನೆ.ನನ್ನ ಸೊತ್ತಿನ ಅರ್ಧದಷ್ಟು ನಾನು ನಿಮಗೆ ನೀಡುತ್ತೇನೆ.ನನಗೆ ಎರಡು ಪತ್ನಿಯರಿದ್ದಾರೆ.ನಿಮಗೆ ಇಷ್ಟಪಟ್ಟವಳು ಯಾರೆಂದು ನೋಡಿರಿ.ಅವಳನ್ನು ನಾನು ವಿವಾಹ ವಿಮೋಚನೆ ನಡೆಸಿ ನಿಮಗೆ ವಿವಾಹ ಮಾಡಿ ಕೊಡುತ್ತೇನೆ. " ನಿಮ್ಮ ಕುಟುಂಬದಲ್ಲಿಯೂ ಸಂಪತ್ತಿನಲ್ಲಿಯೂ ಅಲ್ಲಾಹು ಬರ್ಕತ್ ನೀಡಲಿ" ಎಂದು ಪ್ರಾರ್ಥಿಸಿ ಆ ನಿರ್ದೇಶವನ್ನು ಸಂತೋಷದಿಂದ ಅಬ್ದುರ್‍ರಹ್ಮಾನುಬ್ನು ಅವ್ಫ್ ತಿರಸ್ಕರಿಸಿದರು.ಬಳಿಕ ಅವರು ನನಗೆ ಮಾರುಕಟ್ಟೆ ತೋರಿಸಿ ಕೊಡಿರಿ.ನಾನು ನನ್ನ ಜೀವನ ಮಾರ್ಗಕ್ಕಾಗಿ ಸ್ವಂತವಾಗಿ ಕೆಲಸ ಮಾಡುವೆ ಎಂದು ಹೇಳಿದರು.ಹೇಳಿದಂತೆಯೇ ಅವರು ಬಿಸಿನೆಸ್ ಪ್ರಾರಂಭಿಸಿದರು.ಕೆಲವು ದಿನಗಳ ಬಳಿಕ ಖರ್ಜೂರದ ಬೀಜದಷ್ಟು ಬಂಗಾರ ನೀಡಿ ಅಬ್ದುರ್‍ರಹ್ಮಾನುಬ್ನು ಅವ್ಫ್ ಅನ್ಸಾರೀ ವನಿತೆಯನ್ನು ಮದುವೆಯಾದರು.ಒಂದು ಆಡನ್ನು ಕೊಯ್ದು ವಿವಾಹ ಭೋಜನಕೂಟವನ್ನೂ ಏರ್ಪಡಿಸಿದರು.
      ಅನ್ಸಾರಿಗಳ ಮತ್ತು ಮುಹಾಜಿರುಗಳ ಸಾಹೋದರ್ಯತಾ ಬಾಂಧವ್ಯದ ಮಹತ್ವವು ವಿವರಣಾತೀತ.ಅಲ್ಲಾಹು ಅವರ ಕುರಿತು ಹೇಳಿದ್ದು ಹೀಗೆ..."ಇಸ್ಲಾಮಿಗೆ ಪ್ರಪ್ರಥಮವಾಗಿ ಪ್ರವೇಶಿಸಿದ ಮುಹಾಜಿರುಗಳ ಮತ್ತು ಅನ್ಸಾರಿಗಳ ಹಾಗು ಅವರನ್ನು ಒಳಿತಿನಲ್ಲಿ ಅನುಸರಿಸಿದವರ ಕುರಿತು ಅಲ್ಲಾಹು ಸಂತ್ರಪ್ತನಾಗಿರುವನು.ಅಲ್ಲಾಹನ ಕುರಿತು ಅವರೂ ಸಂತ್ರಪ್ತರಾಗಿರುವರು.ಅವರಿಗೆ ಅವನು ಕೆಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನವನ್ನು ರೆಡಿ ಮಾಡಿಟ್ಟಿರುವನು.ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದಾಗಿದೆ ಮಹಾ ವಿಜಯ"

ಅಲ್ಲಾಹು ನಮ್ಮನ್ನು ಈ ಮಹಾನರುಗಳನ್ನು ಅನುಸರಿಸುವವರ ವಿಭಾಗದಲ್ಲಿ ಸೇರಿಸಲಿ..
ಆಮೀನ್..

ಮುಂದುವರಿಯುವುದು...

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

Friday, 21 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -10

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -10

ನೆಬಿ ಸ.ಅ ಮನೆಯಿಂದ ಹೊರ ಬಂದು ಶತ್ರುಗಳಿಂದ ಪಾರಾಗಿ ಅಬೂಬಕರ್ ರ.ಅ ರವರ ಮನೆ ತಲುಪಿದರು.ಅಲ್ಲಿಂದ ಯಾತ್ರೆಗೆ ಬೇಕಾದ ಆಹಾರ ಪಾನೀಯಗಳನ್ನು ತೆಗೆದು ಅಬೂಬಕರ್ ರ.ಅ ರವರ ಜೊತೆಯಾಗಿ ಯಾತ್ರೆ ಪ್ರಾರಂಭಿಸಿದರು.ಮಕ್ಕಾದ ಸವ್ರ್ ಗುಹೆ ತಲುಪಿದರು.ನೆಬಿ ಸ.ಅ ರವರನ್ನು ವಧಿಸಲು ಮನೆ ಸುತ್ತುವರಿದಿದ್ದ ಕುರೈಶೀ ಯುವಕರು ಮಂಚದಲ್ಲಿ ಮಲಗಿರುವುದು ನೆಬಿ ಸ.ಅ ಆಗಿರುವರು ಎಂದು ಭಾವಿಸಿದರು.ಸುಬಹಿ ಆದಾಗ ಅಲೀ ರ.ಅ ನಿದ್ರೆಯಿಂದ ಎದ್ದರು.ನೆಬಿ ಸ.ಅ ಇಲ್ಲಿಂದ ರಾತ್ರಿಯೇ ಹೊರಟು ಹೋಗಿದ್ದಾರೆ ಎಂದು ಆವಾಗಲೇ ಕುರೈಶಿಗಳು ತಿಳಿದದ್ದು.ಕುರೈಶಿಗಳ ಕೋಪ ನೆತ್ತಿಗೇರಿತು.ನಾಲ್ಕು ದಿಕ್ಕುಗಳಿಗೂ ನೆಬಿ ಸ.ಅ ರವರನ್ನು ಹುಡುಕಿ ಕೊಂಡು ತರಲು ಜನರನ್ನು ಛೂ ಬಿಟ್ಟರು.ಹುಡುಕಿ ಕೊಂಡು ಬರುವವರಿಗೆ ನೂರು ಒಂಟೆಯನ್ನು ಬಹುಮಾನವಾಗಿ ನೀಡಲಾಗುವುದೆಂದು ಪ್ರಖ್ಯಾಪಿಸಿದರು.ಶತ್ರುಗಳು ನಾಲ್ಕು ದೆಸೆಯಿಂದಲೂ ಹುಡುಕಲು ಆರಂಭಿಸಿದರು.ಕೆಲವರು ನೆಬಿ ಸ.ಅ ಮತ್ತು ಅಬೂಬಕರ್ ರ.ಅ ಅಡಗೀ ಕೂತ ಸವ್ರ್ ಗುಹೆ ಯ ಸನಿಹಕ್ಕೂ ಬಂದರು.ಇದನ್ನು ನೋಡುತ್ತಿದ್ದ ಅಬೂಬಕರ್ ರ.ಅ ಭಯಭೀತರಾದರು.ನೆಬಿ ಸ.ಅ ಅವರನ್ನು ಸಮಾಧಾನಿಸಿದರು.ದುಃಖಿಸಬೇಡ.ಅಲ್ಲಾಹು ನಮ್ಮೊಂದಿಗಿದ್ದಾನೆ.ಅಬೂಬಕರ್ ರ.ಅ ಹೇಳಿದರು : ಶತ್ರುಗಳು ಗುಹೆಯ ಕೆಳಭಾಗ ನೋಡಿದರೆ ನಮ್ಮನ್ನು ಅವರು ಕಾಣುವರು.ನೆಬಿ ಸ.ಅ ಹೇಳಿದರು : ನಾವು ಎರಡು ಮಂದಿಯ ಕುರಿತು ನೀವು ಏನು ಭಾವಿಸಿದ್ದೀರಿ.ಮೂರನೆಯವನಾಗಿ ಅಲ್ಲಾಹು ನಮ್ಮ ಸಹಾಯಕ್ಕಿದ್ದಾನೆ.ಅಲ್ಲಾಹು ಶತ್ರುಗಳನ್ನು ಅವರಿಂದ ದೂರ ಮಾಡಿದನು.ಗುಹೆಯ ಮೇಲ್ಭಾಗದಲ್ಲಿ ಜೇಡರ ಬಲೆಯನ್ನು ಮತ್ತು ಎರಡು ಪಾರಿವಾಳಗಳು ಗೂಡುಕಟ್ಟಿ ಮೊಟ್ಟೆ ಇಟ್ಟಿದ್ದನ್ನು ನೋಡಿದ ಶತ್ರುಗಳು ಈ ಗುಹೆಯೊಳಗೆ ಯಾರೂ ಅಡಗಿ ಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂದು ಭಾವಿಸಿ ತಿರುಗಿ ಹೋದರು.
         ಅಬೂಬಕರ್ ರ.ಅ ರವರ ಮಗನಾದ ಅಬ್ದುಲ್ಲಾಹ್ ರ.ಅ ರವರನ್ನು ಶತ್ರುಗಳ ವಿವರಗಳನ್ನು ತಿಳಿದು ರಾತ್ರಿ ಅವರಿಗೆ ತಿಳಿಸಲು ಏರ್ಪಾಟು ಮಾಡಿದ್ದರು.ಪುತ್ರಿ ಅಸ್ಮಾ ರ.ಅ ಆಹಾರ ಪಾನೀಯಗಳನ್ನು ಅವರಿಗೆ ಕೊಂಡುಹೋಗಿ ಮುಟ್ಟಿಸುತ್ತಿದ್ದರು.ಮೂರು ದಿವಸಗಳ ಬಳಿಕ ಅಂದರೆ ಶತ್ರುಗಳ ಹುಡುಕಾಟ ಸ್ವಲ್ಪ ಸ್ಥಗಿತವಾದ ನಂತರ ಮುಂಚೆಯೇ ನಿರ್ಧರಿಸಿದ ತೀರ್ಮಾನದಂತೆ ಗುರುವಾರದಂದು ಮದೀನಕ್ಕೆ ಹೋಗುವ ಹಾದಿ ತೋರಿಸುವ ಅಬ್ದುಲ್ಲಾಹಿ ಇಬ್ನು ಉರೈಖಿಳ್ ಎರಡು ಒಂಟೆಗಳೊಂದಿಗೆ ಆಗಮಿಸಿದರು.ನೆಬಿ ಸ.ಅ ಮತ್ತು ಅಬೂಬಕರ್ ಸಿದ್ದೀಖ್ ರ.ಅ ರವರನ್ನು ಒಂಟೆಯ ಮೇಲೇರಿಸಿ ಸಮುದ್ರ ಕಿನಾರೆಯ ಮೂಲಕ ಮದೀನಕ್ಕೆ ಯಾತ್ರೆ ಆರಂಭಿಸಿದರು.ಸಹಾಯಕನಾಗಿ ಆಮಿರುಬ್ನು ಫುಹೈರ ಕೂಡಾ ಜತೆಗಿದ್ದರು.
      ದಾರಿ ಮಧ್ಯೆ ಸುರಾಖತು ಇಬ್ನು ಮಾಲಿಕ್ ಎಂಬ ದುಷ್ಟ ತನ್ನ ಕುದುರೆಯ ಮೂಲಕ ಇವರನ್ನು ಹಿಂಬಾಲಿಸಲು ಶುರು ಮಾಡಿದನು.ಸ್ವಲ್ಪ ಮುಂದೆ ಸಾಗಿದಂತೆ ಕುದುರೆ ಎಡರಿ ಬಿತ್ತು.ಕುದುರೆಯನ್ನು ಎದ್ದು ನಿಲ್ಲಿಸಿ ಮತ್ತೆ ಹಿಂಬಾಲಿಸಿದಾಗ ಕುದುರೆಯ ಕಾಲುಗಳು ಈವಾಗ ಮಣ್ಣಿನಡಿಗೆ ಹುದುಗಿ ಹೋಯಿತು.ಕುದುರೆಯನ್ನು ಎಬ್ಬಿಸಲು ಆಗದೆ ಸುರಾಖ ಚಡಪಡಿಸಿದನು.ನೆಬಿ ಸ.ಅ ರವರನ್ನು ಹಿಂಬಾಲಿಸಲು ಸಾಧ್ಯವಿಲ್ಲವೆಂಬುದನ್ನು ಆತ ಅರಿತ ಬಳಿಕ ನೆಬಿ ಸ.ಅ ಆತನಿಗೆ ಅಭಯ ಹಸ್ತ ನೀಡಿದರು.ಆತ ಮತ್ತೆ ಹಿಂಬಾಲಿಸಲಿಲ್ಲ.

ನೆಬಿ ಸ.ಅ ಪವಿತ್ರ ಮದೀನದಲ್ಲಿ...

ಮದೀನಾ ನಿವಾಸಿಗಳು ನೆಬಿ ಸ.ಅ ಮಕ್ಕಾದಿಂದ ಹೊರಟ ವಿಷಯ ಅರಿತರು.ಪ್ರತೀ ದಿನ ಬೆಳಿಗ್ಗೆ ಮದೀನದ ಗಡಿ ಪ್ರದೇಶದಲ್ಲಿ ಅವರು ರಸೂಲ್ ಸ.ಅ ರವರನ್ನು ಆಕಾಂಕ್ಷೆಯಿಂದ ಕಾಯುತ್ತಿದ್ದರು.ಮಧ್ಯಾಹ್ನದ ಸಮಯದಲ್ಲಿ ಅವರು ಮರಳಿ ಹೋಗುತ್ತಿದ್ದರು.ಒಂದು ದಿನ ಒಬ್ಬ ಯಹೂದಿ ಜೋರಾಗಿ ಕರೆದು ಹೇಳಿತ್ತಿದ್ದುದು ಅವರು ಆಲಿಸಿದರು : ಬನೂ ಖೈಲದವರೇ. ಇದೋ ನೋಡಿ.ನಿಮ್ಮ ಸೌಭಾಗ್ಯ ಆಗತವಾಗಿದೆ.ನೀವು ಕಾಯುತ್ತಿದ್ದ ಪ್ರವಾದಿ ಆಗಮಿಸುತ್ತಿದ್ದಾರೆ.ಇದು ಆಲಿಸಿದ ಕ್ಷಣ ಮಾತ್ರದಲ್ಲಿ ಅವರು ಆಯುಧಗಳೊಂದಿಗೆ ದೌಡಾಯಿಸಿ ಹರ್‍ರಃ ಎಂಬ ಸ್ಥಳದಲ್ಲಿ ನೆಬಿ ಸ.ಅ ಮತ್ತು ಅಬೂಬಕರ್ ರ.ಅ ರವರನ್ನು ಸ್ವಾಗತಿಸಿ ಸ್ವೀಕರಿಸಿದರು.
     ನೆಬಿ ಸ.ಅ ಮತ್ತು ಸಂಘವು ಸಂಚರಿಸಿ ಮದೀನ ಸಮೀಪದ ಖುಬಾಹ್ ಎಂಬ ಪ್ರದೇಶಕ್ಕೆ ತಲುಪಿದರು.ರಬೀವುಲ್ ಅವ್ವಲ್ ಎಂಟು ಸೋಮವಾರವಾಗಿತ್ತು.ನೆಬಿ ಸ.ಅ ರವರಿಗೆ 53 ವರ್ಷ ಪ್ರಾಯವಾಗಿತ್ತು.ಬನೂ ಅಮ್ರುಬ್ನು ಅವ್ಫ್ ಎಂಬವರ ಮನೆಯಲ್ಲಿ ನಾಲ್ಕು ದಿನ ತಂಗಿದರು.ಅಲ್ಲಿ ಮಸ್ಜಿದು ಖುಬಾಹ್ ನಿರ್ಮಾಣವಾಯಿತು.ಮಕ್ಕಾದಲ್ಲಿದ್ದ ಸಂದರ್ಭದಲ್ಲಿ ನೆಬಿ ಸ.ಅ ರವರ ಬಳಿ ಸೂಕ್ಷಿಸಲು ನೀಡಲ್ಪಟ್ಟಿದ್ದ ಸೊತ್ತುಗಳನ್ನು ಅದರ ಅವಕಾಶಿಗಳಿಗೆ ನೀಡುವ ಜವಾಬ್ದಾರಿಯನ್ನು ಅಲೀ ರ.ಅ ರವರಿಗೆ ನೆಬಿ ಸ.ಅ ವಹಿಸಿದ್ದರು.ಅಂತೆಯೇ ಆ ಸೊತ್ತುಗಳನ್ನು ಅದರ ಅವಕಾಶಿಗಳಿಗೆ ನೀಡಿದ ಬಳಿಕ ಅಲೀ ರ.ಅ ನೆಬಿ ಸ.ಅ ರವರ ಜತೆ ಸೇರಿಕೊಂಡರು.
      ನಾಲ್ಕು ದಿನಗಳ ಬಳಿಕ ಶುಕ್ರವಾರದಂದು ಬೆಳಿಗ್ಗೆ ಖುಬಾಹ್ ನಿಂದ ಯಾತ್ರೆ ಮುಂದುವರಿಸಿದರು.ಬನೂ ಸಾಲಿಮುಬ್ನು ಅವ್ಫ್ ಎಂಬವರ ಜಾಗದಲ್ಲಿ ಪ್ರಥಮ ಜುಮುಅಃ ನಮಾಜು ನಿರ್ವಹಿಸಿದರು.ಆವಾಗ ನೆಬಿ ಸ.ಅ ರವರೊಂದಿಗೆ ನೂರು ಮುಸ್ಲಿಮರಿದ್ದರು.ಮುಂದುವರಿದು ಒಂದು ದೊಡ್ಡ ಗುಂಪಿನೊಂದಿಗೆ ಮದೀನಃ ದ ಮಣ್ಣಿಗೆ ಪ್ರವೇಶಿಸಿದರು.ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನ ಪ್ರವೇಶಿಸುತ್ತಿದ್ದಂತೆಯೇ ಪುಳಕಿತಗೊಂಡು ಮದೀನ ನಿವಾಸಿಗಳು ಹರ್ಷೋಲ್ಲಸಿತರಾಗಿ ದಫ್ಫ್ ಬಾರಿಸಿ ಹಾಡಿಹೊಗಳಿ ಸ್ವಾಗತಿಸಿ ಸ್ವೀಕರಿಸಿದರು.

طلع البدر علينا.من ثنيات الوداع

وجب الشكر علينا.ما دعا لله داع

أيهاالمبعوث فينا.جئت بالأمر المطاع

ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನದ ಒಂದೊಂದೇ ಮನೆಗಳನ್ನು ಹಾದು ಹೋಗುತ್ತಿದ್ದರು.ಒಂಟೆಯ ಮೂಗುದಾರವನ್ನು ಹಿಡಿದು ಮದೀನದ ಪ್ರತೀ ಅನ್ಸಾರಿಯೂ ನಮ್ಮ ಮನೆಗೆ ಬರಬೇಕೆಂದು ಆಹ್ವಾನ ನೀಡಿದರು.ನೆಬಿ ಸ.ಅ ಹೇಳಿದರು : ಒಂಟೆಯನ್ನು ಬಿಟ್ಟು ಬಿಡಿರಿ. ಅದು ಎಲ್ಲಿ ನಿಲ್ಲಬೇಕೆಂದು ಅದಕ್ಕೆ ನಿರ್ದೇಶ ಇದೆ.ಒಂಟೆಯು ಮುಂದೆ ಸಾಗುತ್ತಾ ಕೊನೆಗೆ ಅಬೂ ಅಯ್ಯೂಬುಲ್ ಅನ್ಸಾರಿ ರ.ಅ ರವರ ಮನೆಯ ಮುಂದೆ ಒಂಟೆ ಮೊಣ ಕಾಲೂರಿದವು.ಇಂಶಾ ಅಲ್ಲಾಹ್..ಇಲ್ಲಿಯಾಗಿದೆ ನಮ್ಮ ವಾಸ ಸ್ಥಳ.

رب أنزلني منزلا مباركا وأنت خير المنزلين

ಎಂದು ಹೇಳುತ್ತಾ ನೆಬಿ ಸ.ಅ ಇಳಿದರು.ನೆಬಿ ಸ.ಅ ರವರ ಒಂಟೆ ನಿಂತ ಸ್ಥಳದಲ್ಲಿ ಮಸ್ಜಿದು ನಬವೀ ನಿರ್ಮಿಸಲಾಯಿತು.ಒಂದು ವರ್ಷದಲ್ಲಿ ಮಸೀದಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಯಿತು.ಈ ಒಂದು ವರ್ಷ ನೆಬಿ ಸ.ಅ ಅಬೂ ಅಯ್ಯೂಬಿಲ್ ಅನ್ಸಾರಿ ರ.ಅ ರವರ ಮನೆಯಲ್ಲಿ ವಾಸಿಸಿದರು.
        ಮುಹಾಜಿರುಗಳು ಮಕ್ಕಾದಿಂದ ಮದೀನಕ್ಕೆ ಬರುತ್ತಲೇ ಇದ್ದರು.ಸೆರೆಹಿಡಿಯಲ್ಪಟ್ಟವರು ಮತ್ತು ಕೆಲವೊಂದು ಬಲಹೀನರು ಮಾತ್ರ ಮಕ್ಕಾದಲ್ಲಿ ಬಾಕಿಯಾಗಿದ್ದರು.ಮದೀನಕ್ಕೆ ಬಂದವರಲ್ಲಿ ಹಲವರಿಗೆ ವಾತಾವರಣ ಬದಲಾದುದರಿಂದ ಜ್ವರ ಬಾಧಿಸಿತು.ಮದೀನದ ವಾತಾವರಣ ದೊಂದಿಗೆ ಹೊಂದಿಕೊಳ್ಳಲು ಅವರಿಗೆ ಕೊಂಚ ಸಮಯ ಹಿಡಿಯಿತು.ನೆಬಿ ಸ.ಅ ಪ್ರಾರ್ಥಿಸಿದರು.

أللهم حبب إلينا المدينة كما حببت إلينا مكة أو أشد وبارك لنا في مدها وفي صاعها

ಅಲ್ಲಾಹನೇ . ನಮಗೆ ಮಕ್ಕಾ ಹೇಗೆ ಇಷ್ಟವಾಗಿತ್ತೋ ಅದೇರೀತಿ ನಮಗೆ ಮದೀನವನ್ನು ಇಷ್ಟಗೊಳಿಸು.ಮದೀನದ ಪ್ರತಿಯೊಂದರಲ್ಲಿ ಬರ್ಕತನ್ನು ನೀಡು.
       ನೆಬಿ ಸ.ಅ ರವರ ಪ್ರಾರ್ಥನೆಯ ಫಲವಾಗಿ ಮದೀನ ಭೂಮಿಯಲ್ಲಿಯೇ ಅತ್ಯಂತ ಉತ್ತಮ ಸ್ಥಳವಾಗಿ ಬದಲಾಯಿತು.

( ಗಮನಿಸಿ -ಮುಜಾಜಿರ್ ಅಂದರೆ ಮಕ್ಕಾದಿಂದ ಮದೀನಕ್ಕೆ ಹಿಜ್ರ ಬಂದವರು.
ಅನ್ಸಾರಿ ಅಂದರೆ ಮಕ್ಕಾದಿಂದ ಮದೀನಕ್ಕೆ ಬಂದ ಮುಹಾಜಿರುಗಳಿಗೆ ತಮ್ಮ ಎಲ್ಲವನ್ನು ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳು ).

ಮುಂದುವರಿಯುವುದು.

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

Wednesday, 19 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -09

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

----------------------------
               ಸಂಚಿಕೆ -09

ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಜ್ರಾ.

ಅಖಬಃ ಕರಾರು..

ನೆಬಿ ಸ.ಅ ರವರು ಇಸ್ಲಾಮಿನ ಪ್ರಬೋಧನೆ ಪ್ರಾರಂಭಿಸಿ ಹತ್ತು ವರ್ಷ ಉರುಳಿತು.ಹಜ್ಜಿಗೆ ಬರುವ ಯಾತ್ರಿಕರನ್ನು ನೆಬಿ ಸ.ಅ ಸಮೀಪಿಸಿ ಇಸ್ಲಾಮಿನ ಪ್ರಬೋಧನೆ ನೀಡುತ್ತಿದ್ದರು.ಅರಬೀ ಗೋತ್ರಗಳಲ್ಲಿ ಹಲವು ಗೋತ್ರಗಳನ್ನು ಇಸ್ಲಾಮಿಗೆ ಆಹ್ವಾನಿಸಿದರು.ಕೆಲವರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು.ಇನ್ನೂ ಕೆಲವರು ಕೆಟ್ಟ ರೀತಿಯಲ್ಲಿ ಪ್ರತಿಕ್ರಯಿಸಿದರು.ಕೆಲವರಂತೂ ಇಸ್ಲಾಮಿಗೆ ಬರಲು ಶರತ್ತುಗಳನ್ನು ಮುಂದಿಟ್ಟರು.ಬನೂಆಮಿರ್ ನೆಬಿ ಸ.ಅ ರವರ ನಂತರ ಅಧಿಕಾರ ನೀಡಬೇಕೆಂದಾಗಿತ್ತು ಶರತ್ತು ಮುಂದಿಟ್ಟದ್ದು.ಅಧಿಕಾರ ಅಲ್ಲಾಹನದ್ದಾಗಿದೆ.ಅವನು ಇಚ್ಚಿಸಿದವರಿಗೆ ಅಧಿಕಾರವನ್ನು ನೀಡುತ್ತಾನೆ ಎಂದಾಗಿತ್ತು ನೆಬಿ ಸ.ಅ ರವರ ಮರು ಪ್ರತಿಕ್ರಿಯೆ.
        ಅತ್ತ ಮದೀನದಲ್ಲಿ ಪ್ರಸಿದ್ಧವಾದ ಅವ್ಸ್ ಖಝ್ರಜ್ ಎಂಬ ಎರಡು ಗೋತ್ರಗಳಿತ್ತು.ಅವರ ನೆರೆಹೊರೆಯವರಾಗಿ ಬನೂ ಖೈನುಖಾಹ್, ಬನೂ ಖುರೈಲಃ, ಬನೂನ್ನಳೀರ್ ಎಂಬ ಯಹೂದಿ ಗೋತ್ರಗಳು ವಾಸಿಸುತ್ತಿದ್ದರು. " ಒಬ್ಬ ಪ್ರವಾದಿಯ ಆಗಮನವಾಗಲಿದೆ.ಆದ್ ಮತ್ತು ಇರಮ್ ನನ್ನು ವಧಿಸಿದಂತೆ ನಾವು ಆ ಪ್ರವಾದಿಯ ಜತೆಗೆ ನಿಂತು ನಿಮ್ಮನ್ನು ನಾವು ವಧಿಸಲಿದ್ದೇವೆ " ಎಂದು ಯಹೂದಿಗಳು ಜಂಭ ಕೊಚ್ಚುತ್ತಿದ್ದರು.
     ನುಬುವ್ವತಿನ ಹನ್ನೊಂದನೇ ವರ್ಷ ಹಜ್ಜಿಗೆ ಮದೀನದಿಂದ ಮಕ್ಕಾಕ್ಕೆ ಬಂದ ಖಜ್ರಜ್ ಗೋತ್ರದ ಆರು ಮಂದಿಯನ್ನು ನೆಬಿ ಸ.ಅ ಕಂಡು ಮಾತನಾಡಿದರು.ಇಸ್ಲಾಮಿನ ಕುರಿತು ತಿಳಿದ ಅವರು ಯಹೂದಿಗಳು ಹೇಳಿದ ಮಾತನ್ನು ನೆನಪಿಸಿ ಇಸ್ಲಾಂ ಧರ್ಮ ಸ್ವೀಕರಿಸಿದರು.ಅವರು ಹಜ್ ಕರ್ಮ ಮುಗಿದ ಬಳಿಕ ಮದೀನಕ್ಕೆ ಹೋಗಿ ಜನರನ್ನು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಪ್ರಾರಂಭಿಸಿದರು.ಧಾರಾಳ ಜನರು ಇಸ್ಲಾಂ ಧರ್ಮದ ಅನುಯಾಯಿಗಳಾದರು.
         ನುಬುವ್ವತಿನ ಹನ್ನೆರಡನೇ ವರ್ಷ ಹಜ್ ವೇಳೆಯಲ್ಲಿ ಖಝ್ರಜ್ ಗೋತ್ರದ ಹತ್ತು ಮಂದಿ ಅವ್ಸ್ ಗೋತ್ರದ ಎರಡು ಮಂದಿ ಅಖಬಃದ ಸಮೀಪ ನೆಬಿ ಸ.ಅ ರವರೊಂದಿಗೆ ಒಪ್ಪಂದ ಮಾಡಿದರು. " ಅಲ್ಲಾಹನಿಗಲ್ಲದೆ ಆರಾಧಿಸುವುದಿಲ್ಲ.ಶಿರ್ಕ್ ಮಾಡುವುದಿಲ್ಲ.ಕಳ್ಳತನ, ವ್ಯಭಿಚಾರ ಮಾಡುವುದಿಲ್ಲ.ಮಕ್ಕಳನ್ನು ವಧಿಸುವುದಿಲ್ಲ. ಸುಳ್ಳು ಹೇಳುವುದಿಲ್ಲ.ಉತ್ತಮ ಕಾರ್ಯಗಳಲ್ಲಿ ನೆಬಿ ಸ.ಅ ರವರನ್ನು ಧಿಕ್ಕರಿಸುವುದಿಲ್ಲ." ಎಂದು ಅವರು ಸತ್ಯ ಪ್ರತಿಜ್ಞೆಯಲ್ಲಿ ಕರಾರು ಮಾಡಿದರು.ಇದು ಪ್ರಥಮ ಅಖಬಃ ಒಪ್ಪಂದ ಎಂಬ ಹೆಸರಿನಲ್ಲಿ ಅರಿಯಲ್ಪಡುತ್ತದೆ.
     ಬೈಅತ್ ಮಾಡಿದವರು ಮದೀನಕ್ಕೆ ಮರಳುವಾಗ ಮಿಸ್ಅಬುಬ್ನು ಉಮೈರ್ ರ.ಅ ರವರನ್ನು ಕರ್ಮಶಾಸ್ತ್ರ ಕಲಿಸುವ ಸಲುವಾಗಿ ಅವರೊಂದಿಗೆ ನೆಬಿ ಸ.ಅ ಕಳುಹಿಸಿಕೊಟ್ಟರು.ಮಿಸ್ಅಬುಬ್ನು ಉಮೈರ್ ರ.ಅ ರವರ ಮುಖಾಂತರ ಸಅದು ಬ್ನು ಮುಆದ್ ರ.ಅ, ಉಸೈದು ಬ್ನು ಹುಲೈರ್ ರ.ಅ ಎಂಬ ಪ್ರಮುಖರು ಇಸ್ಲಾಂ ಸ್ವೀಕರಿಸಿದರು.ಮದೀನದಲ್ಲಿ ಇಸ್ಲಾಂ ವ್ಯಾಪಕ ಪ್ರಚಾರ ಪಡೆಯಿತು.
     ನುಬುವ್ವತಿನ ಹದಿಮೂರನೇ ವರ್ಷ ಮದೀನದಿಂದ ಹಜ್ ಗೆ ಬಂದವರಲ್ಲಿ 73 ಪುರುಷರು 2 ಸ್ತ್ರೀಯರು ಇದ್ದರು.ಅವರು ರಾತ್ರಿ ವೇಳೆ ಅಖಬಃದ ಸಮೀಪ ನೆಬಿ ಸ.ಅ ರವರನ್ನು ಸಮೀಪಿಸಿದರು.ತಾವು ಮದೀನಕ್ಕೆ ಬರುವುದಾದರೆ ನಮ್ಮ ಪತ್ನಿ ಮಕ್ಕಳನ್ನು ಸಂರಕ್ಷಿಸುವ ಹಾಗೆ ತಮ್ಮನ್ನು ಸಂರಕ್ಷಿಸುತ್ತೇವೆ ಎಂದು ನೆಬಿ ಸ.ಅ ರವರೊಂದಿಗೆ ಬೈಅತ್ ಮಾಡಿದರು.ನೆಬಿ ಸ.ಅ ಅವರಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು 12 ನಾಯಕರನ್ನು ಆಯ್ಕೆ ಮಾಡಿದರು.ಇದಾಗಿದೆ ಎರಡನೇ ಅಖಬಃ ಒಪ್ಪಂದ.

ಮುಸ್ಲಿಮರ ಪಲಾಯನ..

ರಾತ್ರಿ ನಡೆದ ರಹಸ್ಯ ಒಪ್ಪಂದ ಬೆಳಿಗ್ಗೆಯಾಗುವಷ್ಟರಲ್ಲಿ ಕುರೈಶಿಗಳು ಹೇಗೋ ಅರಿತರು.ಅವರು ಮದೀನದಿಂದ ಬಂದ ಹಾಜಿಗಳೊಂದಿಗೆ ಹೇಳಿದರು : ನೀವು ಮುಹಮ್ಮದ್ ನನ್ನು ಕೊಂಡು ಹೋಗಲು ಬಂದವರು.ನಮ್ಮ ವಿರುದ್ಧ ಯುದ್ಧ ಮಾಡಲು ನೀವು ಅವನೊಂದಿಗೆ ಗೂಢಾಲೋಚನೆ ನಡೆಸಿದ್ದೀರಿ.ಇದು ಕೇಳಿದ ಮುಶ್ರಿಕುಗಳಾದ ಮದೀನ ನಿವಾಸಿಗಳು ಹೇಳಿದರು. : ಅಂತಹ ವಿಷಯವೇ ಇಲ್ಲ.ನಿಮ್ಮೊಂದಿಗೆ ಯುದ್ಧ ಮಾಡಲು ನಾವು ಒಪ್ಪಂದ ಮಾಡಲೇ ಇಲ್ಲ.
       ಇದರ ಬಳಿಕ ಮಕ್ಕಾ ಮುಶ್ರಿಕರ ಉಪಟಳ ತುಂಬಾ ಹೆಚ್ಚಾಯಿತು.ಆಗ ನೆಬಿ ಸ.ಅ ಮುಸ್ಲಿಮರೊಂದಿಗೆ ಮದೀನಕ್ಕೆ ಹಿಜ್ರ ಹೋಗಲು ಆದೇಶಿಸಿದರು.ಅವರು ಗುಂಪುಗುಂಪಾಗಿಯೂ ಒಬ್ಬಂಟಿಗರಾಗಿಯೂ ಮದೀನಕ್ಕೆ ಹಿಜ್ರಾ (ವಲಸೆ) ಹೋದರು.ಇಸ್ಲಾಮ್ ದೀನಿಗಾಗಿ ಸ್ವಂತ ಊರು,ಮನೆ ಸಂಪತ್ತನ್ನು ಉಪೇಕ್ಷಿಸಿ ತಂದೆ ತಾಯಿ ಮಕ್ಕಳು,ಕುಟುಂಬಸ್ಥರನ್ನು ಬಿಟ್ಟು ಮದೀನಕ್ಕೆ ಪಲಾಯನ ಮಾಡಿದರು.ಅಂತಿಮವಾಗಿ ಮಕ್ಕಾದಲ್ಲಿ ಅಬೂಬಕರ್ ಸಿದ್ದೀಖ್ ರ.ಅ, ಅಲಿ ರ.ಅ ಮತ್ತು ಕೆಲವೊಂದು ದುರ್ಬಲರು ಮಾತ್ರ ಬಾಕಿಯಾದರು.
     ಕುರೈಶಿಗಳು ಎಚ್ಚೆತ್ತರು.ಮಕ್ಕಾದಿಂದ ಮದೀನಕ್ಕೆ ಹಿಜ್ರಾ ಹೋದ ಮುಹಾಜಿರ್ ಗಳೊಂದಿಗೆ ನೆಬಿ ಸ.ಅ ರವರು ಕೂಡಾ ಹೋಗುವರು ಎಂದು ಹೆದರಿದರು.ಮಕ್ಕಾ ಮುಶ್ರಿಕರು ದಾರುನ್ನದ್ವಾ ದಲ್ಲಿ ಒಗ್ಗೂಡಿದರು.ವಿಷಯಾವಲೋಕನ ಮಾಡಿದರು.ಕಾವೇರಿದ ಚರ್ಚೆ ನಡೆಯಿತು.ಸೆರೆಮನೆಯಲ್ಲಿ ಬಂಧನದಲ್ಲಿರಿಸುವಾ.ಊರಿನಿಂದ ಗಡೀಪಾರು ಮಾಡುವಾ.ಕೊಂದು ಬಿಡುವಾ ಎಂಬ ಅಭಿಪ್ರಾಯಗಳು ಒಬ್ಬೊಬ್ಬರಿಂದ ಬಂತು.ಕೊನೆಗೆ ನೆಬಿ ಸ.ಅ ರವರನ್ನು ಕೊಂದು ಬಿಡುವಾ ಎಂಬ ಅಭಿಪ್ರಾಯಕ್ಕೆ ಅವರೆಲ್ಲರೂ ಬಂದರು.ಪ್ರತಿಯೊಂದು ಗೋತ್ರಗಳಿಂದ ಶಕ್ತರಾದ ಒಬ್ಬೊಬ್ಬ ಯುವಕರನ್ನು ಆರಿಸುವುದು.ರಾತ್ರಿ ಖಡ್ಗದೊಂದಿಗೆ ನೆಬಿ ಸ.ಅ ರವರ ಮನೆಯನ್ನು ಸುತ್ತುವರಿಯುವುದು.ಮನೆಯಿಂದ ಹೊರಬರುವಾಗ ಎಲ್ಲರೂ ಒಟ್ಟಿಗೆ ಸೇರಿ ಕೊಲ್ಲುವುದು ಎಂಬುದಾಗಿತ್ತು ಅವರ ತೀರ್ಮಾನ.ಆದರೆ ಅಲ್ಲಾಹನು ಮುಂಚೆಯೇ ನೆಬಿ ಸ.ಅ ರವರಿಗೆ ಶತ್ರುಗಳ ತೀರ್ಮಾನವನ್ನು ತಿಳಿಸಿ ಕೊಟ್ಟಿದ್ದನು.ನೆಬಿ ಸ.ಅ ಮತ್ತು ಅಬೂಬಕರ್ ಸಿದ್ದೀಖ್ ರ.ಅ ಯಾತ್ರೆಗೆ ಮೊದಲೇ ರೆಡಿಯಾಗಿದ್ದರು.ಶತ್ರುಗಳು ತೀರ್ಮಾನದಂತೆ ರಾತ್ರಿ ನೆಬಿ ಸ.ಅ ರವರ ಮನೆ ಸುತ್ತುವರಿದರು.ಮನೆಯಲ್ಲಿ ನೆಬಿ ಸ.ಅ ರವರೊಂದಿಗೆ ಅಲಿ ರ.ಅ ಇದ್ದರು.ತನ್ನ ಮಂಚದಲ್ಲಿ ತನ್ನ ಕಂಬಳಿ ಹೊದ್ದು ಮಲಗಲು ನೆಬಿ ಸ.ಅ ಅಲಿ ರ.ಅ ರವರಿಗೆ ನಿರ್ದೇಶಿಸಿದರು.ನೆಬಿ ಸ.ಅ ಒಂದು ಹಿಡಿ ಮಣ್ಣು ತೆಗೆದು ಯಾಸೀನ್ ಸೂರತಿನ وجعلنا من بين أيديهم سدا ಎಂದು ಆರಂಭಗೊಳ್ಳುವ ಆಯತ್ ಓದಿ ಅವರ ನೇರ ಎಸೆದರು.ಆ ಮಣ್ಣು ಶತ್ರುಗಳ ಕಣ್ಣಿಗೆ ಹೋಗಿ ಬಿತ್ತು.ಎಲ್ಲರೂ ಕಣ್ಣು ಉಜ್ಜಿ ಕೊಳ್ಳುತ್ತಿರುವ ಮಧ್ಯೆ ನೆಬಿ ಸ.ಅ ಅವರ ಎದುರಿನಿಂದಲೇ ಮನೆಯಿಂದ ಹೊರ ಸಾಗಿ ಅಬೂಬಕರ್ ರ.ಅ ರವರ ಮನೆ ತಲುಪಿದರು.

ಮುಂದೇನಾಯಿತು ನೋಡೋಣ ಮುಂದಿನ ಸಂಚಿಕೆಯಲ್ಲಿ....

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

Tuesday, 18 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -08


ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

----------------------------
               ಸಂಚಿಕೆ -08

             ಆಕಾಶರೋಹಣ
             -------------

ನುಬುವ್ವತಿನ ಹನ್ನೊಂದನೇ ವರ್ಷ ನೆಬಿ ಸ.ಅ ರವರನ್ನು ಅಲ್ಲಾಹು ಇತರ ಅಂಬಿಯಾಗಳಿಗೆ ನೀಡದ ವಿಶಿಷ್ಟವಾದ ಕಾರ್ಯಕ್ರಮದ ಮೂಲಕ ತನ್ನೆಡೆಗೆ ಆಹ್ವಾನಿಸಿ ಗೌರವಿಸಿದನು.ರಜಬ್ ಇಪ್ಪತ್ತೇಳನೆಯ ರಾತ್ರಿ ಸೋಮವಾರದಂದು ಇಸ್ರಾಹ್ ಮಿಹ್ರಾಜ್ ಎಂಬ ಮಹೋನ್ನತ ಚಾರಿತ್ರಿಕ ಸಂಭವ ಉಂಟಾಯಿತು.ಮಕ್ಕಾದ ಮಸ್ಜಿದುಲ್ ಹರಾಮಿನಿಂದ ಪ್ಯಾಲೆಸ್ತೀನಿನಲ್ಲಿರುವ ಮಸ್ಜಿದುಲ್ ಅಖ್ಸಾ ವರೆಗಿನ ಪ್ರಯಾಣಕ್ಕೆ ಇಸ್ರಾಹ್ ಎಂದೂ ಅಲ್ಲಿಂದ ಏಳನೇ ಆಕಾಶ ದಾಟಿ ಆಚೆಗಿರುವ ಸಿದ್ರತುಲ್ ಮುಂತಹಾ ವರೆಗಿನ ಪ್ರಯಾಣಕ್ಕೆ ಮಿಹ್ರಾಜ್ ಎಂದೂ ಹೇಳಲಾಗುತ್ತದೆ.
        ನೆಬಿ ಸ.ಅ ರವರು ಉಮ್ಮು ಹಾನೀ ರವರ ಮನೆಯಲ್ಲಿ ರಾತ್ರಿಯ ನಿದ್ದೆಯಲ್ಲಿರುವಾಗ ಜಿಬ್ರೀಲ್ ಅ.ಸ ಬುರಾಖ್ ಎಂಬ ವಿಶಿಷ್ಠ ವಾಹನದೊಂದಿಗೆ ಬಂದರು. ( ಬುರಾಖ್ ಎಂಬ ವಾಹನದ ವೇಗವು ಅದ್ಬುತವಾಗಿದೆ.ಅದರ ಪ್ರತಿಯೊಂದು ಹೆಜ್ಜೆಯು  ಮನುಷ್ಯನ ಕಣ್ಣು ದ್ರಷ್ಠಿಗೆ ಎಷ್ಟು ವಿದೂರದ ತನಕವಿರುವ ವಸ್ತುಗಳು ಗೋಚರಿಸುತ್ತವೆಯೋ ಅಲ್ಲಿಯ ತನಕವಾಗಿದೆ )  ನೆಬಿ ಸ.ಅ ಅದರಲ್ಲಿ ಏರಿ ಬೈತುಲ್ ಮುಖದ್ದಸ್ ( ಮಸ್ಜಿದುಲ್ ಅಖ್ಸಾ ) ಗೆ ಹೋದರು.ಅಲ್ಲಿ ಇಬ್ರಾಹಿಂ ನೆಬಿ ಅ.ಸ, ಮೂಸಾ ನೆಬಿ ಅ.ಸ, ಈಸಾ ನೆಬಿ ಅ.ಸ ಮೊದಲಾದ ಒಂದು ಗುಂಪು ಪ್ರವಾದಿಗಳನ್ನು ಕಂಡರು.ಅವರು ನೆಬಿ ಸ.ಅ ರವರನ್ನು ಆದರದಿಂದ ಸ್ವಾಗತಿಸಿದರು.ಅವರಿಗೆ ನೆಬಿ ಸ.ಅ ಇಮಾಮಾಗಿ ನಿಂತು ನಮಾಜು ನಿರ್ವಹಿಸಿದರು.ಬಳಿಕ ಅಲ್ಲಿಂದ ( ಮಿಹ್ರಾಜ್ ) ಆಕಾಶರೋಹಣ ಯಾತ್ರೆ ಪ್ರಾರಂಭವಾಯಿತು.ಮಿಂಚಿನ ವೇಗದಲ್ಲಿ ಯಾತ್ರೆಗೈದು ಒಂದನೇ ಆಕಾಶ,ಎರಡನೇ ಆಕಾಶ ಹೀಗೆ ಏಳನೇ ಆಕಾಶ ತಲುಪಿದರು.ಪ್ರತಿಯೊಂದು ಆಕಾಶದಲ್ಲಿಯೂ ಮಲಕುಗಳು ಮತ್ತು ಪ್ರವಾದಿಗಳು ನೆಬಿ ಸ.ಅ ರವರನ್ನು ಸ್ವಾಗತಿಸಿದರು.ಒಂದನೇ ಆಕಾಶದಲ್ಲಿ ಆದಂ ನೆಬಿ ಅ.ಸ, ಎರಡನೇ ಆಕಾಶದಲ್ಲಿ ಈಸಾ ನೆಬಿ ಅ.ಸ, ಮೂರನೇ ಆಕಾಶದಲ್ಲಿ ಯೂಸುಫ್ ನೆಬಿ ಅ.ಸ, ನಾಲ್ಕರಲ್ಲಿ ಇದ್ರೀಸ್ ನೆಬಿ ಅ.ಸ, ಐದರಲ್ಲಿ ಹಾರೂನ್ ನೆಬಿ ಅ.ಸ, ಆರರಲ್ಲಿ ಮೂಸಾ ನೆಬಿ ಅ.ಸ, ಏಳರಲ್ಲಿ ಇಬ್ರಾಹಿಂ ನೆಬಿ ಅ.ಸ ನೆಬಿ ಸ.ಅ ರವರನ್ನು ಸ್ವೀಕರಿಸಿದರು.ಏಳನೇ ಆಕಾಶದಲ್ಲಿ ಬೈತುಲ್ ಮಹ್ಮೂರ್ ಎಂಬ ವಿಶೇಷ ಭವನಕ್ಕೆ ಇಬ್ರಾಹಿಮ್ ನೆಬಿ ಅ.ಸ ಒರಗಿ ಕುಳಿತಿರುವುದನ್ನು ನೆಬಿ ಸ.ಅ ಕಂಡರು.ಪ್ರತೀದಿನ ಆ ಭವನದೊಳಗೆ ಎಪ್ಪತ್ತು ಸಾವಿರ ಮಲಕುಗಳು ಪ್ರವೇಶಿಸುತ್ತಾರೆ.ಒಮ್ಮೆ ಪ್ರವೇಶಿಸಿದ ಮಲಕುಗಳು ಮತ್ತೆ ಪ್ರವೇಶಿಸುವುದಿಲ್ಲ.ಜಿಬ್ರೀಲ್ ಅ.ಸ ರವರ ನಿಜರೂಪದಲ್ಲಿ ಆರುನೂರು ರೆಕ್ಕೆಗಳೊಂದಿಗೆ ನೆಬಿ ಸ.ಅ ದರ್ಶಿಸಿದ್ದು ಅಲ್ಲಿಯಾಗಿತ್ತು.ಬೈತುಲ್ ಮಹ್ಮೂರಿನಿಂದ ಆಚೆಗೆ ಸಿದ್ರತುಲ್ ಮುಂತಹಾ ವರೆಗೆ ಜಿಬ್ರೀಲ್ ಅ.ಸ ಜೊತೆಯಾಗಿದ್ದರು.ಅದರ ಆಚೆಗೆ ಜಿಬ್ರೀಲ್ ಅ.ಸ ರವರ ಪ್ರವೇಶಕ್ಕೆ ಅನುಮತಿಯಿರಲಿಲ್ಲ.ಬಳಿಕ ನೆಬಿ ಸ.ಅ ಒಬ್ಬಂಟಿಗರಾಗಿ ಯಾತ್ರೆ ನಡೆಸಿ ಅಲ್ಲಾಹನನ್ನು ದರ್ಶಿಸಿ ಅಭಿಮುಖ ಸಂಭಾಷಣೆ ನಡೆಸಿದರು.ಕಡ್ಡಾಯಗೊಳಿಸಲ್ಪಟ್ಟ ಐವತ್ತು ವಖ್ತ್ ನಮಾಜಿನೊಂದಿಗೆ ನೆಬಿ ಸ.ಅ ಮರಳಿದರು.ಮರಳಿ ಬರುವಾಗ ಮೂಸಾ ನೆಬಿ ಅ.ಸ ರವರ ನಿರ್ದೇಶ ಮೇರೆಗೆ ಐವತ್ತು ವಖ್ತ್ ನಮಾಜಿನಲ್ಲಿ ಕಡಿತಗೊಳಿಸಲು ಅಲ್ಲಾಹನೊಂದಿಗೆ ಬೇಡಿಕೆಯಿಟ್ಟರು.ಅಲ್ಲಾಹು ಐವತ್ತರಿಂದ ಐದು ವಖ್ತನ್ನು ಕಡಿತಗೊಳಿಸಿದನು.ಒಂಭತ್ತು ಬಾರಿ ಇದು ಆವರ್ತನೆಯಾಯಿತು.ಹೀಗೆ ಐವತ್ತು ವಖ್ತ್ ನಮಾಜು ಐದು ವಖ್ತ್ ಆಯಿತು.
      ನೆಬಿ ಸ.ಅ ಅಂದು ರಾತ್ರಿಯೇ ಮಕ್ಕಾಕ್ಕೆ ಮರಳಿ ತಲುಪಿದರು.ಕುರೈಶಿಗಳೊಂದಿಗೆ ನಡೆದ ಸತ್ಯಸಂಗತಿಯನ್ನು ವಿವರಿಸಿದರು.ಅವರು ನೆಬಿ ಸ.ಅ ರವರನ್ನು ಗೇಲಿಮಾಡಿ ಕೇಕೆಹಾಕಿ ಅಪಹಾಸ್ಯ ಮಾಡಿದರು.ಕೆಲವರು ಅಪಹಾಸ್ಯದೊಂದಿಗೆ ಚಪ್ಪಾಳೆ ತಟ್ಟಿದರು.ಇಸ್ಲಾಂ ಧರ್ಮ ಸ್ವೀಕರಿಸಿದ್ದ ಕೆಲವು ದುರ್ಬಲ ವಿಶ್ವಾಸಿಗಳು ಅವಿಶ್ವಾಸಿಗಳಾದರು.ನೈಜ ವಿಶ್ವಾಸಿಗಳಿಗೆ ಯಾವುದೇ ಸಂಶಯ ಉಂಟಾಗಲಿಲ್ಲ.ನೆಬಿ ಸ.ಅ ರವರ ಇಸ್ರಾಹ್ ಮಿಹ್ರಾಜನ್ನು ಪ್ರಪ್ರಥಮವಾಗಿ ಅಂಗೀಕರಿಸಿದ ಅಬೂಬಕರ್ ರ.ಅ. "ಸಿದ್ದೀಖ್" ಎಂಬ ಗೌರವ ನಾಮಕ್ಕೆ ಅರ್ಹರಾದರು.
                ಅವಿಶ್ವಾಸಿಗಳು ನೆಬಿ ಸ.ಅ ರವರನ್ನು ಪರೀಕ್ಷಿಸಲು ಹಲವಾರು ಪ್ರಶ್ನೆಗಳನ್ನು ಕೇಳಿದರು.ನೆಬಿ ಸ.ಅ ಎಲ್ಲದಕ್ಕೂ ಸ್ಪಷ್ಟ ಉತ್ತರ ನೀಡಿದರು.ಬೈತುಲ್ ಮುಖದ್ದಸ್ ಮತ್ತು ಅದರ ಬಾಗಿಲುಗಳ ಕುರಿತು ಪ್ರಶ್ನಿಸಿದರು.ಸ್ಪಷ್ಟವಾಗಿ ಉತ್ತರಿಸಿದರು.ಮಾತ್ರವಲ್ಲ ಕುರೈಸಿಗಳ ವ್ಯಾಪಾರ ಸಂಘ ಅಲ್ಲಿ ತಲುಪಿದೆಯೆಂದೂ ಅದರಲ್ಲಿ ಎಷ್ಟು ಒಂಟೆಗಳಿವೆಯೆಂದೂ ಅವರು ಯಾವಾಗ ಊರಿಗೆ ಮರಳಿ ಬರುವರು ಎಂದೂ ವಿವರಿಸಿದರು.ನೆಬಿ ಸ.ಅ ರವರ ವಿವರಣೆ ಕೇಳಿ ಅವಿಶ್ವಾಸಿಗಳು ತಬ್ಬಿಬ್ಬಾದರು.ಮತ್ತೆ ಅವರಿಂದ ಮಾತು ಹೊರಡಲಿಲ್ಲ.

ಮುಂದುವರಿಯುವುದು...

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

Sunday, 16 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -07

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

----------------------------------
               ಸಂಚಿಕೆ -07

                 ದುಃಖ ವರ್ಷ

ನೆಬಿ ಸ.ಅ ರವರಿಗೆ ಕುರೈಶಿಗಳಲ್ಲಿ ರಕ್ಷಣೆ ನೀಡುತ್ತಿದ್ದುದು ಅಬೂತಾಲಿಬ್ ಆಗಿದ್ದರು.ನೆಬಿ ಸ.ಅ ಬಹಿರಂಗವಾಗಿ ಇಸ್ಲಾಂ ಧರ್ಮದ ಪ್ರಚಾರಕ್ಕೆ ಇಳಿದಾಗ ಕುರೈಶಿಗಳು ಅಬೂತಾಲಿಬರನ್ನು ಸಮೀಪಿಸಿ ತಾಕೀತು ನೀಡಿದರು.ತಮ್ಮ ಧರ್ಮವನ್ನು ಆಕ್ಷೇಪಿಸುವುದು ತಡೆಯಬೇಕು ಅಥವಾ ನೆಬಿ ಸ.ಅ ರವರನ್ನು ಕುರೈಶಿಗಳ ಕೈಗೆ ಒಪ್ಪಿಸಬೇಕು ಎಂದು ಅವರು ಅಬೂತಾಲಿಬರೊಂದಿಗೆ ಆವಶ್ಯಪಟ್ಟರು.ಅಬೂತಾಲಿಬ್ ಅವರನ್ನು ತಂತ್ರಪೂರ್ವಕ ಮಧುರ ಮಾತುಗಳಿಂದ ಸಮಾಧಾನಿಸಿ ಮರಳಿ ಕಳುಹಿಸಿದರು.ಕೆಲವು ದಿನಗಳ ಬಳಿಕ ಮತ್ತೆ ಕುರೈಶಿಗಳು ಅಬೂತಾಲಿಬರ ಬಳಿ ಬಂದು ಹೇಳಿದರು.ನೀವು ಅವನನ್ನು ತಡೆಯಬೇಕು.ಇಸ್ಲಾಂ ಧರ್ಮದ ಪ್ರಬೋಧನೆಯಿಂದ ಹಿಂದೆ ಸರಿಯುವಂತೆ ಮಾಡಬೇಕು.ಇಲ್ಲದಿದ್ದರೆ ನಿಮ್ಮನ್ನು ಮತ್ತು ಅವನನ್ನು ಬಹಿಷ್ಕರಿಸಬೇಕಾಗಿ ಬರಬಹುದು ಎಂದು ಅಂತಿಮ ತೀರ್ಪು ಪ್ರಖ್ಯಾಪಿಸಿದರು.ಕುರೈಶಿಗಳನ್ನು ಬಿಟ್ಟು ನಿಲ್ಲುವುದು ಅಬೂತಾಲಿಬರಿಗೆ ತುಂಬಾ ಕಷ್ಟಕರವಾಗಿತ್ತು.ಅವರು ನೆಬಿ ಸ.ಅ ರವರನ್ನು ಹತ್ತಿರ ಕರೆದು ವಾಸ್ತವ ಸಂಗತಿಯನ್ನು ವಿವರಿಸಿದರು.ನನ್ನೊಂದಿಗೆ ಕಿಂಚಿತ್ತಾದರೂ ಅನುಕಂಪ ತೋರಿಸಬೇಕು.ನನಗೆ ಕಷ್ಟಸಾಧ್ಯವಾದ ಕೆಲಸಕ್ಕೆ ನಿರ್ಬಂಧಿಸಬಾರದು.ಕುರೈಶಿಗಳನ್ನು ಬಿಟ್ಟು ನಿಲ್ಲುವುದು ನನಗೆ ಸಾಧ್ಯವಿಲ್ಲ.ಆದುದರಿಂದ ನನ್ನ ಮೇಲೆ ಕರುಣೆ ತೋರಿಸಬೇಕು.ಇಸ್ಲಾಂ ಧರ್ಮ ಪ್ರಚಾರವನ್ನು ಸ್ಥಗಿತಗೊಳಿಸಬೇಕು ಎಂದು ಅಬೂತಾಲಿಬ್ ಹೇಳಿದಾಗ ನೆಬಿ ಸ.ಅ ಹೇಳಿದರು.ಅಲ್ಲಾಹನಾಣೆ ಸತ್ಯ..ನನ್ನ ಬಲ ಕೈಯಲ್ಲಿ ಸೂರ್ಯನನ್ನೂ ಎಡ ಕೈಯಲ್ಲಿ ಚಂದ್ರನನ್ನೂ ಇಟ್ಟುಕೊಟ್ಟರೂ ನನ್ನ ದೌತ್ಯದಿಂದ ನಾನು ಹಿಂದೆ ಸರಿಯಲಾರೆ.ಅಲ್ಲಾಹು ನನ್ನ ಈ ಕಾರ್ಯಕ್ಕೆ ಖಂಡಿತ ಜಯ ನೀಡುತ್ತಾನೆ.ಅಥವಾ ಆ ಮಾರ್ಗದಲ್ಲಿ ನಾನು ಮರಣ ಹೊಂದುವೆ ಎನ್ನುತ್ತಾ ನೆಬಿ ಸ.ಅ ಅಳುತ್ತಾ ಮನೆಯಿಂದ ಹೊರಹೋದರು.ತನ್ನ ಸಹೋದರನ ಮಗನಾದ ನೆಬಿ ಸ.ಅ ರವರೊಂದಿಗೆ ಮನಸ್ಸಿನಂತರಾಳದಿಂದ ಬಂದ ಅನುಕಂಪದಿಂದ ಅಬೂತಾಲಿಬ್ ನೆಬಿ ಸ.ಅ ರವರನ್ನು ಕರೆದು ಹೇಳಿದರು.ನಿನಗೆ ಇಷ್ಟವಿರುವ ಕಾರ್ಯವನ್ನು ಜನರ ಮುಂದೆ ಹೇಳು.ಅಲ್ಲಾಹನಾಣೆ ಸತ್ಯ..ನಿನ್ನನ್ನು ನಾನು ಕುರೈಶೀಗಳಿಗೆ ವಹಿಸಿ ಕೊಡಲಾರೆನು.
          ಹಜ್ಜಿನ ಸಮಯವಾಗಿತ್ತು.ಹಜ್ ನಿರ್ವಹಿಸಲು ನಾನಾ ದಿಕ್ಕಿನಿಂದ ಬರುತ್ತಿದ್ದವರೊಂದಿಗೆ ಮುಶ್ರಿಕುಗಳು ನೆಬಿ ಸ.ಅ ರವರ ಕುರಿತು ಮುನ್ನೆಚ್ಚರಿಕೆ ನೀಡತೊಡಗಿದರು.ಇದು ಅರೇಬಿಯದ ನಾನಾ ದಿಕ್ಕುಗಳಿಗೂ ನೆಬಿ ಸ.ಅ ರವರ ಕುರಿತಿರುವ ಇಸ್ಲಾಂ ಧರ್ಮದ ಪ್ರಚಾರಕ್ಕೆ ಇನ್ನಷ್ಟು ನಿಮಿತ್ತವಾಯಿತೇ ಹೊರತು ಮುಶ್ರಿಕುಗಳ ಕುತಂತ್ರ ಫಲಿಸದೇ ಹೋಯಿತು.ಆಗ ಶತ್ರುಗಳ ಆಕ್ರಮಣ ಇನ್ನಷ್ಟು ತೀವ್ರವಾಯಿತು.ಆದುದರಿಂದ ನೆಬಿ ಸ.ಅ ಸ್ವಹಾಬಿಗಳಿಗೆ ವಲಸೆ ( ಹಿಜ್ರಾ ) ಹೋಗಲು ಅನುಮತಿ ನೀಡಿದರು.
        ನುಬುವ್ವತಿನ ಐದನೇ ವರ್ಷ ಹತ್ತು ಪುರುಷರು ಮತ್ತು ನಾಲ್ಕು ಸ್ತ್ರೀಯರು ಹಬಶ ( ಇಥಿಯೋಪಿಯ ) ಕ್ಕೆ  ಹಿಜ್ರಃ ಹೋದರು.ಇಥಿಯೋಪಿಯದಲ್ಲಿ ನಜ್ಜಾಶೀ ರಾಜನ ರಕ್ಷಣೆಯಲ್ಲಿ ಭಯಮುಕ್ತರಾಗಿ ಜೀವಿಸಿದರು.ಮಕ್ಕಾ ನಿವಾಸಿಗಳೆಲ್ಲರೂ ಇದೀಗ ಮುಸ್ಲಿಮರಾಗಿದ್ದಾರೆ ಎಂಬ ಗಾಳಿ ಸುದ್ಧಿ ತಿಳಿದು ಇವರು ಮತ್ತೆ ಮಕ್ಕಾಕ್ಕೆ ಮರಳಿದರು.ಇದು ಗಾಳಿ ಸುದ್ದಿಯಾಗಿತ್ತು ಎಂದು ಮಕ್ಕಾಕ್ಕೆ ಮರಳಿದ ಬಳಿಕವೇ ತಿಳಿಯಲು ಸಾಧ್ಯವಾಯಿತು.ಮಾತ್ರವಲ್ಲ ಶತ್ರುಗಳ ಉಪಟಳ,ಹಿಂಸೆ ಮೊದಲಿಗಿಂತಲೂ ಈಗ ಇಮ್ಮಡಿಯಾಗಿತ್ತು.ನೆಬಿ ಸ.ಅ ರವರ ಅನುಮತಿಯೊಂದಿಗೆ 83 ಪುರುಷರು ಮತ್ತು 18 ಸ್ತ್ರೀಯರು ಮತ್ತೆ ಹಬಶಕ್ಕೆ ಪಲಾಯನ ಮಾಡಿದರು.
       ಕುರೈಶಿಗಳ ಕುತಂತ್ರಗಳು ಫಲಿಸದೇ ಬಂದಾಗ ನೆಬಿ ಸ.ಅ ರವರನ್ನು ಬಿಟ್ಟು ಕೊಡುವ ವರೆಗೆ ಬನೂ ಹಾಶಿಂ, ಬನೂ ಮುತ್ತಲಿಬ್ ಕುಟುಂಬವನ್ನು ಬಹಿಷ್ಕರಿಸಲು ತೀರ್ಮಾನಿಸಿದರು.ಬಹಿಷ್ಕಾರ ಪತ್ರವನ್ನು ಕಾಬಾ ದ ಬಾಗಿಲಿನಲ್ಲಿ ನೇತು ಹಾಕಿದರು.ಇದರಿಂದ ಮುಸ್ಲಿಮರು ಅಬೂತಾಲಿಬ್ ಗುಡಾರದಲ್ಲಿ ತುಂಬಾ ಯಾತನಾಮಯ ಜೀವನವನ್ನು ಅನುಭವಿಸಿದರು.ಬಹಿಷ್ಕಾರವಿದ್ದುದರಿಂದ ಒಂದು ತುತ್ತು ಆಹಾರಕ್ಕಾಗಿಯೂ ಪರದಾಡಿದರು.ಹಸಿರೆಲೆಗಳನ್ನು ತಿಂದು ಬದುಕುವ ತೀರಾ ಶೋಚನೀಯ ಅವಸ್ಥೆಯೂ ಬಂದಿತ್ತು.ಮೂರು ವರ್ಷಗಳ ಕಾಲ ಅವರು ಅಲ್ಲಿ ಕಷ್ಟದಾಯಕವಾದ ಜೀವನ ನಡೆಸಿದರು.ಕೊನೆಗೆ ಕುರೈಶೀ ಪ್ರಮುಖರಲ್ಲಿ ಕೆಲವರಿಗೆ ಮುಸ್ಲಿಮರೊಂದಿಗೆ ಅಲ್ಪ ಸಡಿಲ ಮನೋಭಾವ ಬೆಳೆಯಿತು.ಅವರು ಕಾಬಾದಲ್ಲಿ ನೇತು ಹಾಕಿದ್ದ ಬಹಿಷ್ಕಾರದ ನೋಟೀಸ್ ತೆಗೆದು ಹಾಕಿದರು.ಸತ್ಯದಲ್ಲಿ ಅಲ್ಲಾಹನ ನಾಮ ಹೊರತು ಉಳಿದ ಭಾಗಗಳೆಲ್ಲವೂ ಗೆದ್ದಲು ಹಿಡಿದು ನಾಶವಾಗಿತ್ತು.
        ನೆಬಿ ಸ.ಅ ಪ್ರಚಾರ ಕಾರ್ಯ ಮುಂದುವರಿಸಿದರು.ನಝ್ರಾನ್ ನಿಂದ ಆಗಮಿಸಿದ ಒಂದು ಕ್ರೈಸ್ತ ಸಂಘ ನೆಬಿ ಸ.ಅ ರವರನ್ನು ಭೇಟಿಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು.ನುಬುವ್ವತಿನ ಹತ್ತನೇ ವರ್ಷ ಮೊದಲು ಅಬೂತಾಲಿಬ್ ಬಳಿಕ ಪ್ರಿಯ ಪತ್ನಿ ಖದೀಜ ಬೀವಿ ರ.ಅ ವಫಾತಾದರು.ತನಗೆ ಹೆಚ್ಚು ಇಷ್ಟವಿರುವವರ ಅಗಲುವಿಕೆಯಲ್ಲಿ ತೀವ್ರ ದುಃಖಿತರಾದರು.ಅಬೂತಾಲಿಬ್ ಮರಣ ಹೊಂದಿದ ಬಳಿಕ ಮುಶ್ರಿಕರ ಉಪಟಳ ಹೆಚ್ಚಾಯಿತು.ಆಗ ನೆಬಿ ಸ.ಅ ತ್ವಾಯಿಫಿನ ಸಖೀಫ್ ಗೋತ್ರದವರ ಬಳಿ ಹೋದರು.ಅವರು ಅಭಯ ನೀಡುವರು ಎಂದು ನಿರೀಕ್ಷಿಸಿದರೂ ಅದು ಉಂಟಾಗಲಿಲ್ಲ.ಬದಲು ಅವರು ಪುಂಡು ಪೋಕರಿ ಮಕ್ಕಳನ್ನೂ ಬಚ್ಚಾಲಿ ಯುವಕರನ್ನೂ ನೆಬಿ ಸ.ಅ ರವರ ನೇರ ಛೂ ಬಿಟ್ಟರು.ಅವರ ಆಕ್ರಮಣದಿಂದ ನೆಬಿ ಸ.ಅ ರವರಿಗೆ ಗಾಯವಾಯಿತು.ಆಗ ಜಿಬ್ರೀಲ್ ಅ.ಸ ನೆಬಿ ಸ.ಅ ರವರ ಮುಂದೆ ಪ್ರತ್ಯಕ್ಷರಾಗಿ ಅವರನ್ನು ಶಿಕ್ಷಿಸಲು ಅನುಮತಿ ಕೇಳಿದರು.ನೆಬಿ ಸ.ಅ ಹೇಳಿದರು.ಓ ಜಿಬ್ರೀಲ್.ಅವರು ಅಜ್ಞಾನಿಗಳಾಗಿದ್ದಾರೆ.ಅವರನ್ನು ಶಿಕ್ಷಿಸುವುದು ನನಗೆ ಇಷ್ಟವಿಲ್ಲ.ಅವರಲ್ಲಿ ಯಾವನಾದರೊಬ್ಬ ಇಸ್ಲಾಂ ಧರ್ಮ ಸ್ವೀಕರಿಸಿದರೆ ಅದುವಾಗಿದೆ ಒಳಿತು.ಬಳಿಕ ದುವಾ ಮಾಡಿದರು.ಅಲ್ಲಾಹುವೇ, ನನ್ನ ಜನತೆಗೆ ನೀನು ಸನ್ಮಾರ್ಗದ ಹಾದಿ ತೋರಿಸು.ಅವರು ತಿಳುವಳಿಕೆ ಇಲ್ಲದವರಾಗಿದ್ದಾರೆ.
ನೆಬಿ ಸ.ಅ ತೀವ್ರ ನಿರಾಶೆಯಿಂದ ತ್ವಾಯಿಫ್ ನಿಂದ ಹಿಂದಿರುಗಿದರು.ದಾರಿ ಮಧ್ಯೆ ಅದ್ದಾಸ್ ಎಂಬವರು ನೆಬಿ ಸ.ಅ ರವರನ್ನು ಸಮೀಪಿಸಿದರು.ಕ್ರೈಸ್ತನಾದ ಅದ್ದಾಸ್ ಎಂಬ ನೀನವಾ ನಿವಾಸಿ ನೆಬಿ ಸ.ಅ ರವರನ್ನು ಅರಿತು ಇಸ್ಲಾಂ ಧರ್ಮ ಸ್ವೀಕರಿಸಿದರು.
ನಖ್ಲ ಎಂಬ ಸ್ಥಳಕ್ಕೆ ಮುಟ್ಟಿದಾಗ ಜಿನ್ನ್ ವರ್ಗದ ಒಂದು ಗುಂಪು ನೆಬಿ ಸ.ಅ ರವರಿಂದ ಕುರಾನ್ ಕೇಳಿಸಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಿದರು.ಬಳಿಕ ಆ ಜಿನ್‍ನ್ ವರ್ಗವು ಅವರ ಜನತೆಗೆ ಇಸ್ಲಾಂ ಧರ್ಮದ ಪ್ರಬೋಧನೆ ತಲುಪಿಸಲು ಹೊರಟುಹೋದರು.

ಮುಂದುವರಿಯುವುದು.....

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...