Tuesday, 5 September 2017

ಇಲ್ಮ್, ಆಲಿಂ ಪೇರೋಡ್ ಉಸ್ತಾದ್

ಕರ್ನಾಟಕ ಸಖಾಫೀಸ್ ಕೌನ್ಸಿಲ್ ಆಶ್ರಯದಲ್ಲಿ ಮರ್ಕಝ್ ರೂಬಿ ಜ್ಯುಬಿಲಿ ಸಮ್ಮೇಳನ ಪ್ರಚಾರಾರ್ಥ ಸ್ವಾಗತ ಸಮಿತಿ ರಚನೆ, ಸಖಾಫೀಸ್ ಕೌನ್ಸಿಲ್ ವಾರ್ಷಿಕ ಮಹಾಸಭೆ ಹಾಗು ನಮ್ಮಿಂದ ಅಗಲಿದ ಉಮರಾ ನೇತಾರ ಕೊಡಾಜೆ ಸುಲ್ತಾನ್ ಹಾಜಿ ಸಂಸ್ಮರಣೆ ಸಭೆ ಮಾಣಿ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಉದ್ಘಾಟಿಸಿದರು. ಎಸ್ ಪಿ ಹಂಝ ಸಖಾಫಿ ಹಾಗು ಜಿ ಎಂ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಎಸ್ ವೈ ಎಸ್ ಕೇರಳ ರಾಜ್ಯಾಧ್ಯಕ್ಷರೂ, ಸಿರಾಜುಲ್ ಹುದಾ ಕುಟ್ಯಾಡಿ ಇದರ ಸಾರಥಿಯೂ ಆದ ಬಹು ಪೇರೋಡ್ ಉಸ್ತಾದ್ ಅರ್ಥ ಗರ್ಭಿತ ಸಾರವತ್ತಾದ ತರಗತಿಯನ್ನು ನಡೆಸಿಕೊಟ್ಟರು.
     ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ರವರ ಉದ್ಧರಣಿ ವಾಚಿಸುತ್ತಾ ಅಧಿಕಾರ, ಅಂತಸ್ತು, ಧನಮೋಹವನ್ನು ಬಯಸಿ ತಾಳಕ್ಕೆ ತಕ್ಕಂತೆ ಕುಣಿಯುವ ನಾಮಧಾರಿ ಮೌಲವಿಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಅಧಿಕಾರ, ಅಂತಸ್ತು, ಧನಮೋಹ ಬಯಸುವವರು ಅತ್ಯಂತ ಕೆಟ್ಟ ವಿದ್ವಾಂಸರುಗಳಾಗಿದ್ದಾರೆ. ಅವರು ನೈಜ ವಿದ್ವಾಂಸರಾಗಲು ಸಾಧ್ಯವಿಲ್ಲ.
ಜ್ಞಾನ ಎಂಬುದು ಸೊತ್ತಿಗಿಂತ ಉತ್ತಮವಾಗಿದೆ. ಇಲ್ಮ್ ನಿನಗೆ ರಕ್ಷೆಯಾಗಿದೆ. ಸಂಪತ್ತಿಗೆ ನೀನು ಕಾವಲು ನಿಲ್ಲಬೇಕಾಗಿ ಬರಬಹುದು. ಕಾರಣ ಸಂಪತ್ತು ಎಂಬುದು ಶ್ರದ್ಧೆ ಇಲ್ಲದಿದ್ದರೆ ಕದಿಯಲ್ಪಡಬಹುದು.  ಯಾವುದೇ ಅನಾಹುತ ಸಂಭವಿಸದಂತೆ ಸರಿಯಾದ ದಾರಿಯಲ್ಲಿ ಕೊಂಡು ಹೋಗುವ ಕಾರ್ಯವಾಗಿದೆ ಇಲ್ಮ್. ಸಂಪತ್ತು ಖರ್ಚು ಮಾಡಿದಂತೆ ಕಡಿಮೆಯಾಗುತ್ತದೆ. ಇಲ್ಮ್ ಖರ್ಚು ಮಾಡಿದಂತೆ ವರ್ಧಿಸುತ್ತವೆ. ನಮಾಜು, ನೋಂಬು ಹಾಗು ಸದಾ ಸಮಯ ಪರಿಶ್ರಮಪಟ್ಟು ಆರಾಧನೆಗಳಲ್ಲಿ ತಲ್ಲೀನನಾಗುವವನಿಗಿಂತ ಎಷ್ಟೋ ಪಟ್ಟು ಉತ್ತಮನಾದವನು ಆಲಿಮನಾಗಿದ್ದಾನೆ. ಒಬ್ಬ ಆಲಿಂ ಮರಣಹೊಂದಿದರೆ ಇಸ್ಲಾಮಿನಲ್ಲಿ ಅದೊಂದು ಅನಾಹುತ ಸಂಭವಿಸಿದಂತೆ. ಅದು ಪರಿಹರಿಸಲು ಅಂತದೇ ಒಬ್ಬ ಆಲಿಂ ಜೀವಿಸಿ ಬಂದರೆ ಮಾತ್ರ ಸಾಧ್ಯ. ಸನ್ಮಾರ್ಗದ ಹಾದಿ ಆವಶ್ಯಪಡುವವರಿಗೆ ಸನ್ಮಾರ್ಗ ಹಾದಿ ತೋರಿಸಿ ಕೊಡುವವರಾಗಿದ್ದಾರೆ ಆಲಿಂ ಗಳು. ಅರಿವಿರುವವರು ಅಜ್ಞಾನಿಗಳ ಶತ್ರುಗಳಾಗಿದ್ದಾರೆ. ಕಾರಣ ಅವರಿಗೆ ಇಸ್ಲಾಮಿನ ಆಚಾರ ವಿಚಾರಗಳು ತಿಳಿದಿಲ್ಲ. ಅವರು ಅರಿವಿರುವವರೊಂದಿಗೆ ಶತ್ರುತ್ವದೊಂದಿಗೆ ಇರಬಹುದು. ಅರಿವಿಲ್ಲದವರಿಗೆ ತಿಳಿಯದ ಕಾರ್ಯವನ್ನು ಸೌಮ್ಯವಾಗಿ ತಿಳಿಸಿಕೊಟ್ಟು ಅವರ ಶತ್ರುತ್ವವನ್ನು ಹೋಗಲಾಡಿಸಿ ಅವರ ಸ್ನೇಹವನ್ನು ಕರಗತ ಮಾಡುವವನೇ ಆಲಿಂ.
ಇಲ್ಮ್ ನ ಮುಖಾಂತರ ವಿಜಯ ಸಾಧಿಸಲು ಸಕ್ರಿಯನಾಗಿ ಇರಬೇಕು. ಜನರು ಏನೂ ತಿಳಿಯದವರು. ಜೀವ ಇದ್ದರೂ ಜೀವ ಇಲ್ಲದವರಂತೆ ಇರುವರು. ಆಲಿಮ್ ಗಳು ಯಾವತ್ತೂ ಸಜೀವನಾಗಿರಬೇಕು.

ಅಲ್ಲಾಹನು ಹೇಳುತ್ತಾನೆ : ""ನಮ್ಮ  ( ಅಲ್ಲಾಹನ ) ವಿಷಯದಲ್ಲಿ ಯಾರೂ ಶ್ರಮಿಸುತ್ತಾರೋ ನಿಶ್ಚಯವಾಗಿಯೂ ನಮ್ಮ ಹಾದಿಗೆ ಅವರನ್ನು ತಿರುಗಿಸುತ್ತೇವೆ. ಆದರೆ ಯಾರೂ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಬಯಸಿ ಕೆಲಸ ನಿರ್ವಹಿಸುತ್ತಾರೋ ಅವರ ಜೊತೆ ಅಲ್ಲಾಹನ ಸಹಾಯವಿದೆ""
ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ತನ್ನ  ಇಹ್ಯಾ ಉಲೂಮಿದ್ದೀನ್ ಗ್ರಂಥದಲ್ಲಿ ಇಲ್ಮಿನ ಆಪತ್ತುಗಳು, ಅನಾಹುತಗಳು ತಿಳಿಸುವ ಅಧ್ಯಾಯದಲ್ಲಿ ದುನ್ಯಾವಿನ ಮತ್ತು ಆಖಿರತಿನ ಆಲಿಮುಗಳನ್ನು ಬೇರ್ಪಡಿಸಿ ತಿಳಿಸುತ್ತಾರೆ.
ಅಲ್ಲಾಹನ ಬಳಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುವವರು ದುನ್ಯಾದ ಮೋಹವಿರುವ ಆಲಿಮುಗಳಾಗಿದ್ದಾರೆ ಎಂದು ವಿವರಿಸುತ್ತಾರೆ. ದುನ್ಯಾದ ಆಲಿಮುಗಳು ಅಂದರೆ ದುನ್ಯಾದಲ್ಲಿ ಆಡಂಭರದೊಂದಿಗೆ ಜೀವಿಸುವುದು. ಅಧಿಕಾರ ಪ್ರಾಪ್ತಿಗಾಗಿ ಕಸರತ್ತು ನಡೆಸುವುದು, ಜನರೆಡೆಯಲ್ಲಿ ಅಧಿಕಾರವನ್ನು ಬಯಸುವುದು. ಇಂತಹ ಕೆಲವು ಆಲಿಮುಗಳಿದ್ದಾರೆ. ಬೆಳಿಗ್ಗೆ ಹೇಳಿದ್ದು ಸಂಜೆಗಿಲ್ಲ. ಸಂಜೆ ಹೇಳಿದ್ದು ರಾತ್ರಿಗಿಲ್ಲ. ಹೀಗೆ ಜನರ ಒತ್ತಾಸೆಗೋಸ್ಕರ ಇಸ್ಲಾಮಿನ ಆಚಾರ ವಿಚಾರವನ್ನು ಬದಲಿಸುವವರು. ಇಂತಹ ದುನ್ಯಾದ ಮೋಹವಿರುವ, ದುನ್ಯಾದ ಆಡಂಭರವನ್ನು ಆಶಿಸುವ, ಜನರ ಮಧ್ಯೆ ಅಧಿಕಾರ ಅಂತಸ್ತನ್ನು ಬಯಸುವ ಕೆಟ್ಟ ಆಲಿಮುಗಳಾಗಬಾರದೆಂದಾಗಿದೆ ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ತನ್ನ ಗ್ರಂಥದಲ್ಲಿ ತಿಳಿಸಿದ್ದು.
ಅಧಿಕಾರ, ಅಂತಸ್ತು, ಧನಮೋಹ ಬಯಸುವವರು ಅತ್ಯಂತ ಕೆಟ್ಟ ವಿದ್ವಾಂಸರುಗಳಾಗಿದ್ದಾರೆ. ಅವರು ನೈಜ ವಿದ್ವಾಂಸರಾಗಲು ಸಾಧ್ಯವಿಲ್ಲ. ತನ್ನ ವಿದ್ಯೆಯಿಂದ ಫಲಶೂನ್ಯವಾಗಿದ್ದರೆ, ಯಾರಿಗೂ ಉಪಕಾರವಿಲ್ಲದಿದ್ದರೆ ಆತನಾಗಿದ್ದಾನೆ ಅಲ್ಲಾಹನ ಬಳಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುವವನು.
ಇತರ ಆಲಿಮುಗಳೊಂದಿಗೆ ತರ್ಕಿಸಲು ಇಲ್ಮ್ ಕಲಿಯಬಾರದು, ಇತರ ಆಲಿಮುಗಳಿಗಿಂತ ನಾನೊಬ್ಬ ಉನ್ನತನಾದವನಾಗಬೇಕೆಂದು ಇಲ್ಮ್ ಕಲಿಯಬಾರದು. ಜನರೆಲ್ಲರೂ ನನ್ನ ಕಡೆ ಆಕರ್ಷಿತರಾಗಬೇಕು ಎಂಬ ನೆಲೆಯಲ್ಲೂ ಇಲ್ಮ್ ಕಲಿಯಬಾರದು. ಈ ನಿಯ್ಯತ್ ನೊಂದಿಗೆ ಯಾರೂ ಇಲ್ಮ್ ಕಲಿಯುತ್ತಾರೋ ಆತ ನರಕವಾಸಿಯಾಗಿದ್ದಾನೆ.
ತನ್ನ ಸ್ವಂತ ದುನ್ಯಾವಿನ  ಕಾರ್ಯಲಾಭಕ್ಕಾಗಿ ಮತ್ತು ಇತರರ ದುನ್ಯಾವಿನ ಕಾರ್ಯ ಲಾಭಕ್ಕಾಗಿ ದೀನನ್ನು ಪಣಕ್ಕಿಡುವುದು, ಇಸ್ಲಾಮ್ ಧರ್ಮದ ಆಚಾರ ವಿಚಾರ, ಆಶಯಾದರ್ಶಗಳನ್ನು ಗಾಳಿಗೆ ತೂರುವುದು. ಉದಾಹರಣೆಗೆ ಒಬ್ಬನಿಗೆ ಪಂಚಾಯತ್ ಅಧ್ಯಕ್ಷನಾಗಬೇಕು, ಅಥವಾ MLA, MP ಆಗಬೇಕು. ಅದಕ್ಕಾಗಿ ಅವರ ದುನ್ಯಾದ ಕಾರ್ಯ ಸಫಲೀಕರಣಕ್ಕಾಗಿ ಒಬ್ಬ ಆಲಿಮ್ ಎಂದು ಕರೆಯಲ್ಪಡುವವನು ತನ್ನ ದೀನನ್ನು ಮಾರುವುದು. ಇದು ಒಮ್ಮೆಯೂ ಆಲಿಮಾದವನಿಗೆ ಯೋಜಿಸಿದ್ದಲ್ಲ.
ವಿದ್ವಾಂಸರು ಯಾವುದೇ ರಾಜಕೀಯ ಪಕ್ಷದ ವಕ್ತಾರರಾಗಬಾರದು. ಯಾವುದೇ ಪಕ್ಷದಲ್ಲಿ ತಾನು ಗುರುತಿಸಿಕೊಳ್ಳಬಾರದು. ಈ ರೀತಿಯಾದರೆ ಇಸ್ಲಾಂ ಧರ್ಮಕ್ಕೆ ಕಪ್ಪುಚುಕ್ಕೆ ಉಂಟಾಗುವ ಸಾಧ್ಯತೆ ಬರಬಹುದು.  ವಿದ್ವಾಂಸನು ಮಾರ್ಗದರ್ಶಿಯಾಗಿರಬೇಕು. ಅನುಸರಿಸುವ ಹಿಂಬಾಲಕರಲ್ಲಿ ನಾನಾ ಪಕ್ಷದ ಜನರಿರಬಹುದು.
ಎಲ್ಲರಿಗೂ ಇಸ್ಲಾಂ ಧರ್ಮವನ್ನು ಒಂದೇ ರೀತಿ ಬೋಧಿಸಿ ಅವರನ್ನು ಸನ್ಮಾರ್ಗದತ್ತ ಕೊಂಡು ಬರುವ ಮಾರ್ಗದರ್ಶಿಗಳಾಗಬೇಕು.  ಅದು ಬಿಟ್ಟು ಯಾವುದಾದರೂ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವುದು, ಆ ಪಕ್ಷದ ಉನ್ನತಿಗಾಗಿ, ಆ ಪಕ್ಷದ ನಾಯಕನ ಕಾರ್ಯ ಲಾಭಕ್ಕಾಗಿ ಪ್ರವರ್ತಿಸುವುದು ಇದು ಒಮ್ಮೆಯೂ ವಿದ್ವಾಂಸನಾದವನಿಗೆ ಯೋಜಿಸಿದ್ದಲ್ಲ. ಕಾರಣ ಇಂದು ಇರುವ ಎಲ್ಲಾ ರಾಜಕೀಯ ಪಾರ್ಟಿಗಳು ಬ್ಯಾಂಕ್ ಚುನಾವಣೆ, ಬಡ್ಡಿ ಮುಂತಾದ ಹಲವಾರು ನಿಷಿದ್ಧ ಕಾರ್ಯಗಳಲ್ಲಿ ಏರ್ಪಡುತ್ತವೆ.

ಆಲಿಮ್ ಎಂದು ಕರೆಯಲ್ಪಡುವ ಎಲ್ಲರ ಬಳಿ ಕುಳಿತುಕೊಳ್ಳಬಾರದು. ಎಲ್ಲಾ ವಿದ್ವಾಂಸರು ಒಂದೇ ರೀತಿಯಿರುವುದಿಲ್ಲ. ಐದು ಕಾರ್ಯಗಳಿಂದ ಮುಕ್ತಿಗೊಳಿಸಿ ಐದು ಕಾರ್ಯಗಳಿಗೆ ಆಹ್ವಾನಿಸುವ ಆಲಿಮನೊಂದಿಗೆ ಮಾತ್ರ ಸಹವಾಸ ಬೆಳೆಸಬೇಕು.
1- ಸಂಶಯಗಳನ್ನು ನೀಗಿಸಿ ಖಚಿತತೆಗೆ ಆಹ್ವಾನಿಸುವ ಆಲಿಂ, ಅಲ್ಲಾಹನ ಕುರಿತು, ಇಸ್ಲಾಂ ದೀನಿನ ಆಚಾರ ವಿಚಾರಗಳಲ್ಲಿ ಉಂಟಾಗುವ ಸಂಶಯಗಳನ್ನು ನಿವಾರಿಸಿ ಜನರನ್ನು ಖಚಿತತೆಗೆ ಕೊಂಡುಹೋಗುವ ಆಲಿಂ.
2- ಜನರು ಕಾಣಬೇಕು, ಜನರ ಪ್ರಶಂಸೆ ಗಿಟ್ಟಿಸಿಕೊಳ್ಳಬೇಕು ಎಂಬುವುದರಿಂದ ಮುಕ್ತಿಗೊಳಿಸಿ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಮಾಡುವ ನಿಷ್ಕಳಂಕ ಆರಾಧನೆಗೆ ಆಹ್ವಾನಿಸುವ ಆಲಿಂ.
3- ಇಹದ ವ್ಯಾಮೋಹವೋ, ಇಹದ ಕಾರ್ಯಲಾಭವೋ ಸಿಗಬೇಕು ಎಂಬುದರ ಬದಲಾಗಿ ಅದರಿಂದ ಮುಕ್ತಿಗೊಳಿಸಿ ಪಾರತ್ರಿಕ ಚಿಂತೆಯತ್ತ ಆಹ್ವಾನಿಸುವ ಆಲಿಂ.
4- ಅಹಂಕಾರದಿಂದ ಮುಕ್ತಿಗೊಳಿಸಿ ವಿನಯ ತಾಳ್ಮೆಗೆ ಆಹ್ವಾನಿಸುವ ಆಲಿಂ.
5- ಶತ್ರುತ್ವದಿಂದ ಮುಕ್ತಿಗೊಳಿಸಿ ಮಿತ್ರತ್ವಕ್ಕೆ, ಪರ ಹಿತವನ್ನು ಬಯಸುವುದರತ್ತ ಆಹ್ವಾನಿಸುವ ಆಲಿಂ.
ಇಂತಹ ಐದು ಕಾರ್ಯಗಳಿರುವ ಆಲಿಮನೊಂದಿಗೆ ಮಾತ್ರ ಸಹವಾಸ ಬೆಳೆಸಿಕೊಳ್ಳಬೇಕು. ಒಬ್ಬ ಆಲಿಮ್ ಇನ್ನೊಬ್ಬ ಆಲಿಮ್,ಸಯ್ಯಿದ್ ಅಥವಾ ಇತರರೊಂದಿಗೆ ಶತ್ರುತ್ವ ಬೆಳೆಸಲು ತಿಳಿಸುವುದಾದರೆ ಅಂತಹ ಆಲಿಮನೊಂದಿಗೆ ಸಹವಾಸ ಬೆಳೆಸಬಾರದು. ಬದಲಾಗಿ ಶತ್ರುತ್ವದಿಂದ ಮುಕ್ತಿಗೊಳಿಸಿ ಮಿತ್ರತ್ವ, ಪರಹಿತ ಕ್ಕೆ ಆಹ್ವಾನಿಸುವ ಆಲಿಂ ಯಾರಿದ್ದಾರೋ ಅವರೊಂದಿಗೆ ಮಾತ್ರ ಸಹವಾಸ ಬೆಳೆಸಬೇಕು. ಹೇಳುವಂತೆ ನಡೆಯುವ ಆಲಿಂ ಉತ್ತಮ ಆಲಿಮುಗಳಾಗಿದ್ದಾರೆ. ತನ್ನ ಇಹದ ಲಾಭಗೋಸ್ಕರ, ಜನರು ತನ್ನತ್ತ ಆಕರ್ಷಿತರಾಗಬೇಕು ಎಂಬ ದ್ರಷ್ಟಿಯಲ್ಲಿ ಇತರ ಆಲಿಮುಗಳನ್ನು ಆಕ್ಷೆಪಿಸಿ ಉಪದೇಶಿಸುವವನು ನರಕವಾಸಿಯಾಗಿರುವನು. ವಿದ್ವಾಂಸನಾದವನು ರಾಜಕೀಯದಿಂದ ಎಷ್ಟು ಸಾಧ್ಯವೋ ಅಷ್ಟು ದೂರ ನಿಲ್ಲಬೇಕು. ಕಾರಣ ದುನ್ಯಾ ಎಂಬುದು ಹಸಿರಾಗಿದೆ. ಮಾಧುರ್ಯದಿಂದ ಕೂಡಿದೆ. ಅದರ ಕಡಿವಾಣ ರಾಜಕೀಯ ನಾಯಕರ ಕೈಯಲ್ಲಾಗಿದೆ. ಆದುದರಿಂದ ರಾಜಕೀಯದಿಂದ ಸಂಪೂರ್ಣವಾಗಿ ದೂರ ನಿಲ್ಲಬೇಕು. ಇದು ಒಬ್ಬ ಉತ್ತಮ ವಿದ್ವಾಂಸನ ಲಕ್ಷಣವೂ ಆಗಿದೆ.

ಪ್ರೀತಿಯ ಮಿತ್ರರೇ : ಬಹುಮಾನ್ಯ ಪೇರೋಡ್ ಉಸ್ತಾದ್ ರವರು ಸಖಾಫಿಗಳ ಸಂಗಮದಲ್ಲಿ ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ರವರ ಪವಿತ್ರ ಗ್ರಂಥದಿಂದ ಉದ್ಧರಿಸಿದ ಕೆಲವು ವಿಷಯಗಳು ಮಾತ್ರ ಇಲ್ಲಿ ತಿಳಿಸಿದ್ದೇನೆ.
ವಿದ್ವಾಂಸರು ದೀನಿನ ವಿಷಯದಲ್ಲಿ ಸಕ್ರಿಯರಾಗಬೇಕು. ಸದಾ ಸಮಯ ಇಸ್ಲಾಂ ಧರ್ಮದ ನೈಜ ಆಶಯಾದರ್ಶಗಳು ಪಸರಿಸಿ ದುರ್ಮಾರ್ಗಿಗಳನ್ನು ಸನ್ಮಾರ್ಗಿಗಳನ್ನಾಗಿ ಬದಲಿಸುವ ಪ್ರಯತ್ನ ಮಾಡಬೇಕು. ನಮಾಜು ಮಾಡದವನನ್ನು ನಮಾಜಿಗನನ್ನಾಗಿ ಮಾಡಬೇಕು, ಮದ್ಯಪಾನ ಮಾಡುವವನನ್ನು ಅದರಿಂದ ವಿರಮಿಸುವಂತೆ ಮಾಡಬೇಕು, ಬಡ್ಡಿ ಸಂಬಂಧ ಕಾರ್ಯಗಳಲ್ಲಿ ಏರ್ಪಡುವವನನ್ನು ಅದರಿಂದ ಮುಕ್ತನನ್ನಾಗಿಸಬೇಕು, ಮುಜಾಹಿದ್, ಸಲಫಿ, ನೂತನವಾದಿಯನ್ನು ಹೇಗೆ ಸುನ್ನಿ ಮಾಡಬಹುದು, ಹೇಗೆ ಸರಿದಾರಿಗೆ ಕೊಂಡು ಬರಬಹುದು, ಭಯೋತ್ಪಾದಕ, ವರ್ಗೀಯವಾದಿ ಮುಂತಾದವರನ್ನು ಹೇಗೆ ಉತ್ತಮ ಪ್ರಜೆಯನ್ನಾಗಿ ಮಾರ್ಪಡಿಸಬಹುದು, ನೆರೆಕರೆ ದ್ರೋಹಿಯನ್ನು ನೆರೆಕರೆ ಪ್ರೇಮಿಯನ್ನಾಗಿ ಹೇಗೆ ಮಾರ್ಪಡಿಸಬಹುದು, ಕುಟುಂಬ ಸಂಬಂಧ ಮುರಿದವನನ್ನು ಕುಟುಂಬ ಸಂಬಂಧ ಇರುವವನನ್ನಾಗಿ ಹೇಗೆ ಮಾಡಬಹುದು, ಸುಳ್ಳು, ಕಳ್ಳತನ, ಮಾದಕ ಚಟ ಇರುವವನನ್ನು ಹೇಗೆ ಅದರಿಂದ ಮುಕ್ತನನ್ನಾಗಿಸಬಹುದು, ಹೀಗೆ ಮನುಷ್ಯನ ಸಂಸ್ಕರಣೆಗಾಗಿ, ಮನುಷ್ಯನ ಪಾರತ್ರಿಕ ವಿಜಯಕ್ಕಾಗಿ ಏನು ಮಾಡಲು ಸಾಧ್ಯವೋ ಆ ಶ್ರಮ ವಿದ್ವಾಂಸರಿಂದಾಗಬೇಕು.
ಪ್ರಗಲ್ಭ ವಿದ್ವಾಂಸರುಗಳು ಮರ್ಕಝ್, ಸಅದಿಯ್ಯಃ, ಮದನಿ, ಮಅದಿನ್, ಅಲ್ ಮದೀನಾ, ಸಿರಾಜುಲ್ ಹುದಾ, ಮರ್ಕಝುಲ್ ಹುದಾ, ದಾರುಲ್ ಇರ್ಷಾದ್ ಮುಂತಾದ ಸಂಸ್ಥೆಗಳನ್ನು ನಿರ್ಮಿಸಿದ್ದು ಇಲ್ಲಿ ಧಾರ್ಮಿಕವಾದ ವಿಭಾಗವನ್ನು, ಆತ್ಮ ಸಂಶುದ್ಧಿ ಇರುವ ವಿಭಾಗವನ್ನು, ದೇಶಕ್ಕೆ ಉಪಕಾರ ಸಿಗುವ ವಿಭಾಗವನ್ನು ಸ್ರಷ್ಟಿ ಮಾಡುವುದಕ್ಕೋಸ್ಕರವಾಗಿದೆ.  ಅದೇರೀತಿ ನಮ್ಮ ಮಕ್ಕಳು, ನಮ್ಮ ಯುವ ಜನತೆ ದಾರಿ ತಪ್ಪಬಾರದು ಎಂಬ ನಿಟ್ಟಿನಲ್ಲಿ ಎಸ್ ಎಸ್ ಎಫ್, ಎಸ್ ಬಿ ಎಸ್, ಎಸ್ ವೈ ಎಸ್ ಮುಂತಾದ ಸುನ್ನೀ ಸಂಘಟನೆಗಳನ್ನು ಉಂಟು ಮಾಡಬೇಕು, ಅವರನ್ನು ವಿದ್ವಾಂಸರಾದ ನಾವು ಸಂಘಟನಾ ರಂಗಕ್ಕೆ ಕೊಂಡು ಬರಬೇಕು. ಇಲ್ಲದಿದ್ದರೆ ಅವರು ಇತರ ದಾರಿ ತಪ್ಪಿಸುತ್ತಿರುವ ಸಂಘಟನೆಗಳಿಗೆ ಸೇರಿ ದಾರಿ ತಪ್ಪುವ ಸಾಧ್ಯತೆ ಇದೆ. ಆದುದರಿಂದ ವಿದ್ವಾಂಸರು ಸಂಘಟನಾ ರಂಗದಲ್ಲಿ ಸಕ್ರಿಯತೆ ಕಾಣಬೇಕು, ಪ್ರತಿನಿಧಿಸುವ ಮೊಹಲ್ಲಾಗಳಲ್ಲಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ತಿಳಿಸಿ ವಿಜಯ ಕರಗತ ಮಾಡಬೇಕು.
ಸಮಯ, ಸಂದರ್ಭ ನೋಡಿ ತಂತ್ರಗಾರಿಕೆಯನ್ನು ಯೂಸ್ ಮಾಡಿ ಜನರನ್ನು ಒಳಿತಿಗೆ ಆಹ್ವಾನಿಸುವವರಾಗಬೇಕು ಎಂದು ಪೇರೋಡ್ ಉಸ್ತಾದ್ ರವರು ಸಾಂದರ್ಭಿಕವಾಗಿ ತಿಳಿಸಿದರು.
*ಮರ್ಕಝ್ ರೂಬಿ ಜ್ಯುಬಿಲಿ ಸಮ್ಮೇಳನ ಸಂಪೂರ್ಣ ಯಶಸ್ವಿಗೆ ಸಖಾಫಿಗಳು, ಸಅದಿಗಳು, ಮದನಿಗಳು, ಎಸ್ಸೆಸ್ಸೆಫ್,  ಎಸ್ ವೈ ಎಸ್ ಹಾಗು ಇತರ ಎಲ್ಲಾ ಸುನ್ನೀ ಸಂಘಟನೆಗಳು ಕಾರ್ಯೋನ್ಮುಖರಾಗಬೇಕು* ಎಂದು ತಿಳಿಸಿ ತ್ರಿವಳಿ ತಲಾಕಿನ ಕುರಿತು ಸ್ಪಷ್ಟವಾಗಿ ವಿವರಣೆ ನೀಡಿದರು.
ಮೂರು ತ್ವಲಾಖ್ ಒಟ್ಟಿಗೆ ಹೇಳಬಾರದೆಂದು ನಾಲ್ಕು ಮದ್ ಹಬಿನಲ್ಲೂ ಸ್ಥಿರಪಟ್ಟ ಕಾರ್ಯವಾಗಿದೆ. ಆದರೆ ಮೂರು ತ್ವಲಾಕ್ ಹೇಳಿದರೆ ತ್ವಲಾಖ್ ಸಂಭವಿಸುತ್ತದೆ. ಇಸ್ಲಾಮಿನಲ್ಲಿ ನಿರುತ್ಸಾಹಗೊಳಿಸಲ್ಪಟ್ಟ ಕಾರ್ಯವಾಗಿದೆ ತ್ವಲಾಕ್. ತ್ವಲಾಕ್ ಹೇಳದೆ ನಿರ್ವಾಹವಿಲ್ಲದ ಸಂದಿಗ್ಧ ಪರಿಸ್ಥಿತಿಯಲ್ಲಿ ತ್ವಲಾಖ್ ಹೇಳಬಹುದು. ಅದೂ ಕೂಡಾ ಒಟ್ಟಿಗೆ ಮೂರು ತ್ವಲಾಖ್ ಹೇಳಬಾರದೆಂದಾಗಿದೆ ಇಸ್ಲಾಮಿನ ನಿಯಮ. ಆ ಇಸ್ಲಾಮಿನ ನಿಯಮವನ್ನು ಯಾವುದೇ ರೀತಿಯಲ್ಲಿ ಪ್ರಶ್ನಿಸಲು ಇಲ್ಲಿ ಯಾರಿಗೂ ಅಧಿಕಾರವಿಲ್ಲ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.

✍ *ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*

Saturday, 19 August 2017

ಮದ್ರಸ ಶಿಕ್ಷಣ ಆರಂಭ ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ಭಾಗ 03 ✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸಹಕಾರ : V.A ಮುಹಮ್ಮದ್ ಸಖಾಫಿ ವಳವೂರು


---------------------------------------------------

ಪೂರ್ವಕಾಲ ವಿದ್ವಾಂಸರೊಬ್ಬರ ನಾಣ್ಣುಡಿಯಂತೆ ವಿದ್ಯೆ ಎಂಬುದು ತೊಟ್ಟಿಲಿನಿಂದ ಮಂಚದ ತನಕವಾಗಿದೆ. ಜನಿಸಿದ ನವಜಾತ ಶಿಶುವಿನಿಂದ ಮರಣದ ತನಕ ವಿದ್ಯೆ ಎಂಬುದು ನಿರಂತರ ಹರಿಯುತ್ತಿರುವ ನದಿಯಂತಾಗಬೇಕು. ಮನೆಯಲ್ಲಿ ತಂದೆ ತಾಯಿ ಹಾಗು ಮನೆ ಸದಸ್ಯರಿಂದ ಕಲಿತ ಬಾಲ ವಿದ್ಯೆ ಮದ್ರಸದಲ್ಲಿ ಅದರ ಮುಂದಿನ ಘಟ್ಟ ಅಧ್ಯಾಪಕರಿಂದ ಮುಂದುವರಿಯಬೇಕು. ಅಲ್ಲಾಹನ ಕುರಿತಿರುವ ಜ್ಞಾನ, ಪ್ರವಾದಿ ಸ.ಅ ರವರ ಕುರಿತಿರುವ ಅರಿವು ಅದು ಮಕ್ಕಳು ಮದ್ರಸ ಅಧ್ಯಾಪಕರಿಂದ ಪ್ರಾರಂಭಿಕವಾಗಿ ಕಲಿಯುವಂತಾಗಬೇಕು. ಪ್ರವಾದಿ ಸ.ಅ ರವರ ಹೆಸರು, ಅವರ ಮಾತಾಪಿತರ ಹೆಸರು, ಜನಿಸಿದ ಸ್ಥಳ, ವಫಾತಾದ ಸ್ಥಳ ಮುಂತಾದ ತಂದೆ ತಾಯಿಯಿಂದ ಆರಂಭಗೊಂಡ ಕಲಿಕೆ ಮದ್ರಸ ಉಸ್ತಾದರುಗಳಿಂದಲೂ ಪ್ರಾರಂಭ ಹಂತದಲ್ಲಿ ಮುಂದುವರಿಯಬೇಕು. ಮದ್ರಸದಲ್ಲಿ ಉಸ್ತಾದ್ ಮಕ್ಕಳಿಗೆ ಕಲಿಸಿಕೊಡುವ ಪ್ರತಿಯೊಂದು ಅಕ್ಷರಕ್ಕೂ ಪ್ರತಿಫಲವಿದೆ. ಅದು ಮಕ್ಕಳು ಕಲಿತರಾದರೆ ಅದರ ಮೂಲಕ ಆ ಮಗುವಿಗೆ, ತನ್ನ ತಂದೆ ತಾಯಿಗೆ, ತನ್ನ ಉಸ್ತಾದರಿಗೆ ಅಲ್ಲಾಹು ಪ್ರತಿಫಲವನ್ನು ದಾಖಲಿಸುತ್ತಾನೆ. ಒಮ್ಮೆ ಈಸಾ ನೆಬಿ ಅ.ಸ ರವರು ದಫನ ಭೂಮಿಯ ಬಳಿಯಿಂದ ಸಾಗುತ್ತಿದ್ದಾಗ ಒಂದು ಖಬ್ರ್ ನಲ್ಲಿರುವ ವ್ಯಕ್ತಿ ಖಬರಿನೊಳಗೆ ಕಠಿಣವಾಗಿ ಶಿಕ್ಷಿಸಲ್ಪಡುತ್ತಿದ್ದನು. ಇದನ್ನು ಕಂಡ ಈಸಾ ನೆಬಿ ಅ.ಸ ತೀವ್ರ ದುಃಖಿತರಾದರು. ಮುಂದೆ ಸಾಗಿ ಅವರ ಕೆಲಸ ಪೂರ್ತಿಗೊಳಿಸಿ ಬಳಿಕ ಅದೇ ದಫನ ಭೂಮಿಯ ಸಮೀಪದಿಂದ ಅವರು ಹಿಂತಿರುಗಿ ಬರುತ್ತಿದ್ದಾಗ ಆ ಖಬರ್ ನ ವ್ಯಕ್ತಿ ತುಂಬಾ ಹರ್ಷದಿಂದ ಸಂತೋಷದಲ್ಲಿದ್ದಾನೆ. ಅವನ ಖಬರಿನ ಸುತ್ತಲೂ ರಹ್ಮತ್ತಿನ ಮಲಕುಗಳು ಅವನೊಂದಿಗೆ ಜತೆಯಾಗಿದ್ದಾರೆ. ಇದನ್ನು ಕಂಡು ಆಶ್ಚರ್ಯಭರಿತರಾಗಿ ಈಸಾ ನೆಬಿ ಅ.ಸ ರವರು ಎರಡು ರಕಅತ್ ನಮಾಝ್ ನಿರ್ವಹಿಸಿ ಕುತೂಹಲದಿಂದ ಇದರ ಹಿನ್ನೆಲೆಯ ಕುರಿತು ಮನವರಿಕೆ ಮಾಡಿ ಕೊಡುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಅಲ್ಲಾಹನು ಈಸಾ ನೆಬಿ ಅ.ಸ ರವರ ಪ್ರಾರ್ಥನೆಗೆ ಉತ್ತರ ನೀಡುವನು : ಓ ಈಸಾ, ಆ ಖಬರಿನಲ್ಲಿರುವ ವ್ಯಕ್ತಿ ಮಹಾಪಾಪಿಯಾಗಿದ್ದನು. ಅದರ ನಿಮಿತ್ತ ಮರಣಹೊಂದಿದ ದಿನದಿಂದ ಆತ ಖಬರಿನಲ್ಲಿ ಕಠಿಣ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತ ಮರಣ ಹೊಂದುವಾಗ ಆತನ ಪತ್ನಿ ಗರ್ಭಿಣಿಯಾಗಿದ್ದಳು. ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ಮಗುವನ್ನು ಪ್ರೀತಿ, ವಾತ್ಸಲ್ಯ ಮಮಕಾರದಿಂದ ಲಾಲಿಸಿ ಮುದ್ದಿಸಿ ಇಸ್ಲಾಮಿನ ಶಿಷ್ಠಾಚಾರದೊಂದಿಗೆ ಬೆಳೆಸಿ ನಂತರ ಉಸ್ತಾದರ ಬಳಿ ದೀನ್ ಕಲಿಯಲು ಮದ್ರಸಕ್ಕೆ ಸೇರಿಸಿದಳು. ಉಸ್ತಾದರು ಮಗುವಿಗೆ ಬಿಸ್ಮಿಲ್ಲಾಹಿ ಎಂಬ ವಚನವನ್ನು ಕಲಿಸಿಕೊಟ್ಟರು. ಮಗು ಅದನ್ನು ಕಲಿಯಿತು. ಭೂಮಿಯ ಮೇಲ್ಭಾಗದಲ್ಲಿ ನನ್ನ ಹೆಸರನ್ನು ಉಚ್ಚರಿಸಿದ ಒಂದು ಮಗುವಿನ ತಂದೆಯನ್ನು ಭೂಮಿಯ ಅಡಿಭಾಗದಲ್ಲಿ ಶಿಕ್ಷಿಸುವುದು ನನಗೆ ನಾಚಿಕೆಯಾಯಿತು. ಆ ಮಗುವಿನ ತಂದೆಯ ಶಿಕ್ಷೆಯನ್ನು ಮುಂದುವರಿಸುವುದು ಸರಿಯಲ್ಲ. ಆದುದರಿಂದ ಆತನನ್ನು ಶಿಕ್ಷೆಯಿಂದ ವಿಮುಕ್ತಿಗೊಳಿಸಿದೆಯೆಂದು ಅಲ್ಲಾಹನು ಈಸಾ ನೆಬಿ ಅ.ಸ ರವರಿಗೆ ದಿವ್ಯವಾಣಿಯ ಮೂಲಕ ತಿಳಿಸಿದನು. 
    ಪ್ರವಾದಿ ಸ.ಅ ರವರಿಂದ ಇಬ್ನು ಅಬ್ಬಾಸ್ ರ.ಅ ನಿವೇದಿಸುತ್ತಾರೆ : ""ಓರ್ವ ಮುಅಲ್ಲಿಮ್ ಒಂದು ಮಗುವಿಗೆ ಬಿಸ್ಮಿ ಕಲಿಸಿಕೊಟ್ಟರೆ ಅದನ್ನು ಹೇಳುವ ಮಗು, ಅವನ ಮಾತಾಪಿತರು ಹಾಗು ಕಲಿಸಿಕೊಟ್ಟ ಮುಅಲ್ಲಿಂಗೆ ಅಲ್ಲಾಹನು ನರಕ ವಿಮೋಚನೆಯನ್ನು ದಾಖಲಿಸುತ್ತಾನೆ."" ಇದು  ಓರ್ವ ಉಸ್ತಾದ್ ಮಕ್ಕಳಿಗೆ ನೀಡುವ ಧಾರ್ಮಿಕ ಜ್ಞಾನದಿಂದ ಮಕ್ಕಳಿಗೆ, ಮಾತಾಪಿತರಿಗೆ ಹಾಗು ಉಸ್ತಾದರಿಗೆ ಸಿಗುವ ಮಹತ್ತರ ಪ್ರತಿಫಲವಾಗಿದೆ.
              ನಾವು ಮದ್ರಸ ಶಿಕ್ಷಣದ ಬಗ್ಗೆ ಚಿಂತಿಸಿದ್ದೇವೆಯೇ? ನಮ್ಮ ಮಕ್ಕಳನ್ನು ಮದ್ರಸಕ್ಕೆ ಕಳುಹಿಸುತ್ತೇವೆಯೇ? ಎಷ್ಟೊಂದು ತಂದೆ ತಾಯಂದಿರು ಮದ್ರಸ ಶಿಕ್ಷಣದ ಬಗ್ಗೆ ಉತ್ಸುಕರಾಗಿದ್ದಾರೆ? ನಮ್ಮ ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ಎಂಬುದನ್ನು ಮನಃ ಗಂಡಿದ್ದೇವೆಯೇ? ಮಕ್ಕಳಿಗೆ ಮದ್ರಸ ಶಿಕ್ಷಣವನ್ನು ನೀಡದ ಎಷ್ಟೊಂದು ತಂದೆ ತಾಯಂದಿರು ನಮ್ಮೆಡೆಯಲ್ಲಿದ್ದಾರೆ? ಮದ್ರಸ ಪ್ರಾರಂಭವಾಗುತ್ತಿದೆ. ಯಾವುದೇ ಗೌಜಿ ಗದ್ದಲವಿಲ್ಲ. ಯಾವುದೇ ಉತ್ಸಾಹ ಉತ್ಸುಕತೆ ಇಲ್ಲ. ಆದರೆ ಇದೇ ಸಮಯದಲ್ಲಿ ಶಾಲಾ ಪ್ರಾರಂಭವಾಗುವ ಜೂನ್ ತಿಂಗಳ ಮುಂಚೆನೇ ನಮ್ಮ ಮನೆಗಳಲ್ಲಿ ಶಾಲಾ ಬ್ಯಾಗ್ ಖರೀದಿ, ಯುನಿಫಾರ್ಮ್ ಹೊಲಿಸುವಿಕೆ, ಶಾಲಾ ಪುಸ್ತಕ ಖರೀದಿ, ಶಾಲಾ ಫೀಸು ಭರಿಸುವಿಕೆ ಇತ್ಯಾದಿ ಮಾತುಕತೆಗಳು, ಪ್ರಕ್ರಿಯೆಗಳು ಭರಾಟೆಯಿಂದ ನಡೆಯುತ್ತದೆ. ಮಕ್ಕಳ ಲೌಕಿಕ ಶಿಕ್ಷಣದ ಗುಂಗಿನಲ್ಲಿ ಮಾತಾಪಿತರು ಬ್ಯುಸಿಯೇ ಬ್ಯುಸಿ. ಆದರೆ ಪವಿತ್ರ ರಮಳಾನ್ ಕಳೆದು ಮದ್ರಸ ಪ್ರಾರಂಭದ ತಿಂಗಳಾದ ಶವ್ವಾಲ್ ಮಾಸ ಆಗಮಿಸಿದೆ. ಮಾತಾಪಿತರಿಗೆ ಮದ್ರಸದ ಪ್ರಾರಂಭದ ದಿವಸದ ಕುರಿತು ಮಾಹಿತಿಯಿಲ್ಲ. ಮದ್ರಸದ ಪ್ರಾಧಾನ್ಯತೆ ಅವರಿಗೆ ತಿಳಿದಿಲ್ಲ. ನನ್ನ ಮಗ (ಳ) ನನ್ನು ಮದ್ರಸಕ್ಕೆ ಸೇರಿಸಬೇಕು. ನನ್ನ ಮಕ್ಕಳಿಗೆ ಮದ್ರಸ ಪ್ರಾರಂಭವಾಗುತ್ತಿದೆ. ಅವರಿಗೆ ಯುನಿಫಾರ್ಮ್ ಹೊಲಿಸಿ ಕೊಡಬೇಕು, ಅವರಿಗೆ ಕಿತಾಬ್ ಖರೀದಿಸಿ ಕೊಡಬೇಕು ಎಂಬ ಚಿಂತೆ ಇದೆಯೇ? ಮಕ್ಕಳ ಕಲಿಕೆಗೆ ಸಂಬಂಧಿಸಿ ಯಾವತ್ತಾದರೂ ಉಸ್ತಾದರುಗಳೊಂದಿಗೆ ಸಮಾಲೋಚನೆ ನಡೆಸಿದ್ದು ಇದೆಯೇ? ನನ್ನ ಮಗ ಮದ್ರಸಕ್ಕೆ ಹೋಗುತ್ತಿದ್ದಾನೆ, ಆತನಿಗೆ ಮನೆಯಲ್ಲಿ ನಿರ್ವಹಿಸಲು ಉಸ್ತಾದ್ ಏನಾದರೂ ಹೋಮ್ ವರ್ಕ್ ಕೊಟ್ಟಿದ್ದಾರೆಯೇ? ಅರಬಿಯಲ್ಲಿರುವ ಇಪ್ಪತ್ತೆಂಟು ಅಕ್ಷರಗಳನ್ನು ಸರಾಗವಾಗಿ ಉಚ್ಚರಿಸುತ್ತಾನೆಯೇ? ಅಲ್ಲಾಹನ ಕುರಿತು ಅವನ ಪ್ರವಾದಿ ಸ.ಅ ರವರ ಕುರಿತು ಏನು ಕಲಿತಿದ್ದಾನೆ, ಇಸ್ಲಾಂ, ಈಮಾನ್ ಕಾರ್ಯಗಳು ಯಾವುವು ಅಂತ ಮಗನಿ (ಳಿ) ಗೆ ತಿಳಿದಿದೆಯೇ? ವುಳೂ, ನಮಾಜು, ಅದರ ಶರತ್ತು ಫರ್ಳುಗಳ ಬಗ್ಗೆ ಕಲಿತಿದ್ದಾನೆಯೇ, ಮದ್ರಸ ಶಿಕ್ಷಣದಿಂದ ಮಕ್ಕಳ ಕಾರ್ಯಚಟುವಟಿಕೆಗಳಲ್ಲಿ, ಸ್ವಭಾವ ಗುಣಗಳಲ್ಲಿ ಬದಲಾವಣೆ ಉಂಟಾಗಿದೆಯಾ ಎಂದು ನೋಡಿದ್ದು ಉಂಟೇ? ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವಾಗ ಯಾವ್ಯಾವ ದ್ಸಿಕ್ರ್ ಹೇಳಬೇಕು ಎಂದು ಯಾವತ್ತಾದರೂ ಮಕ್ಕಳ ರಕ್ಷಕರು, ತಂದೆ ತಾಯಂದಿರು ಮಕ್ಕಳ ಕಲಿಕೆಯ ಕಡೆ ಗಮನ ಹರಿಸಿದ್ದು ಇದೆಯಾ? 
            ಕೆಲವೊಂದು ತಂದೆ ತಾಯಂದಿರು  ಶಾಲೆಯಲ್ಲಿ ಇಸ್ಲಾಮಿಕ್ ಎಜ್ಯುಕೇಶನ್ ನೀಡಲಾಗುತ್ತಿದೆ ಎಂಬ ನೆಪವೊಡ್ಡಿ ಮದ್ರಸ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂದು ಮುಸ್ಲಿಮರು ನಡೆಸುತ್ತಿರುವ ಸ್ಕೂಲುಗಳಲ್ಲಿ ಮದ್ರಸ ಶಿಕ್ಷಣದ ಕುರಿತು ಕಲಿಯಲು ಒಂದು ಪಿರೇಡನ್ನು ಮೀಸಲಿರಿಸಲಾಗಿದೆ. ನಿಜಕ್ಕೂ ಈ ಒಂದು ಪಿರೇಡ್ ನಲ್ಲಿ ಐವತ್ತಕ್ಕಿಂತಲೂ ಅಧಿಕ ಇರುವ ಮಕ್ಕಳು ಇಸ್ಲಾಮಿನ ಸುಂದರಾಶಯಾದರ್ಶವನ್ನು ಕಲಿಯಲು ಸಾಧ್ಯವೇ? ಪ್ರೀತಿಯ ರಕ್ಷಕರೇ, ಮಾತಾಪಿತರೇ, ನಿಜಕ್ಕೂ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ ಮಾತ್ರವಲ್ಲ ಇದರಿಂದ ಮಕ್ಕಳು ಉಭಯಲೋಕದಲ್ಲೂ ಪರಾಜಿತರಾಗಲು ಕಾರಣೀಕರ್ತರಾಗುತ್ತಿದ್ದೀರಿ. ಪರಲೋಕದಲ್ಲಿ ತಮಗೆ ತಮ್ಮ ಮಕ್ಕಳು ಅಮೂಲ್ಯವಾದ ನಿಧಿಯಾಗಬೇಡವೇ? ಬಹುತೇಕ ಮುಸ್ಲಿಂ ಶಾಲೆಗಳಲ್ಲಿ ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ವಿದ್ಯೆ ನೀಡುವಿಕೆ ಎಂಬುದು ಕೇವಲ ತೋರ್ಪಡಿಕೆ ಮತ್ತು ಮುಸ್ಲಿಂ ಮಕ್ಕಳನ್ನು ಆ ಶಾಲೆಗೆ ಸೇರಿಸಿ ಹಣ ಗಳಿಸುವ ನಿಗೂಢ ತಂತ್ರ ಮಾತ್ರವಾಗಿದೆ. ಆದುದರಿಂದ ಮದ್ರಸಕ್ಕೆ ಕಳುಹಿಸದೆ ಇಂತಹ ಶಾಲೆಗಳಿಗೆ ಸೇರಿಸಿ ಕೈ ಕಟ್ಟಿ ಕುಳಿತರೆ ಮುಂದಕ್ಕೆ ಇಹದಲ್ಲೂ ನಾಳೆ ಪರಲೋಕದಲ್ಲೂ ಕೈ ಕಡಿಯುವ ದುಸ್ಥಿತಿ ಬಂದೆರಗಬಹುದು. ಅಲ್ಲಾಹು ಇಂತಹ ದುಸ್ಥಿತಿಯಿಂದ ನಮ್ಮನ್ನು ಕಾಪಾಡಲಿ. ಆಮೀನ್.
     ಪ್ರೀತಿಯ ರಕ್ಷಕರೇ, ತಮ್ಮ ಐದು ವರ್ಷ ತುಂಬಿದ ಮಕ್ಕಳನ್ನು ಕಡ್ಡಾಯವಾಗಿ ಮದ್ರಸಕ್ಕೆ ಸೇರಿಸಿ. ತಮ್ಮ ಮಕ್ಕಳು ಚಿಕ್ಕಪುಟ್ಟ ಕಾರಣಗಳಿಗೆ ರಜೆ ಮಾಡದಂತೆ ಜಾಗ್ರತೆ ವಹಿಸಿ, ರಜೆ ಮಾಡಲೇಬೇಕಾದ ಸಂದರ್ಭ ಬಂದರೆ ತಮ್ಮ ಮಕ್ಕಳ ಸಮ್ಮುಖದಲ್ಲಿ ಉಸ್ತಾದರೊಂದಿಗೆ ರಜೆ ಮಾಡುವಿಕೆಯ ಅನುಮತಿಯನ್ನು ಪಡೆಯಿರಿ. ಇದರಿಂದ ಕಲಿಕೆಗಿರುವ ಪ್ರಾಧಾನ್ಯತೆ ಏನು ಎಂಬುದು ಮಕ್ಕಳಿಗೆ ತಿಳಿಯುತ್ತದೆ. ಧಾರ್ಮಿಕ ವಿದ್ಯಾಭ್ಯಾಸ ಕಲಿಯುವಿಕೆಗೆ ಬೇಕಾಗುವ  ಎಲ್ಲಾ ವ್ಯವಸ್ಥೆಗಳನ್ನು ಮಕ್ಕಳಿಗೆ ಮಾಡಿಕೊಡಿ. ಕಲಿಯುವಿಕೆ ಎಂಬುದು ಮಕ್ಕಳಿಗೆ ಭಾರವಾಗದ ರೀತಿಯಲ್ಲಿ ಮಕ್ಕಳ ಕಲಿಯುವಿಕೆಗೆ ಹುರಿದುಂಬಿಸಿ. ತಿಂಗಳಿಗೊಮ್ಮೆಯಾದರೂ ಮಕ್ಕಳ ವಿದ್ಯಾಭ್ಯಾಸದ ಅಭಿವ್ರದ್ಧಿಯ ಕುರಿತು ಮಕ್ಕಳ ಸಮ್ಮುಖದಲ್ಲಿ ಉಸ್ತಾದರೊಂದಿಗೆ ಸಮಾಲೋಚನೆ ನಡೆಸಿ. ಈ ಸಂದರ್ಭದಲ್ಲಿ ಮಕ್ಕಳ ಮನಃ ಬೇಸರವಾಗುವ ಯಾವುದೇ ಮಾತು, ಕ್ರತಿ ಉಸ್ತಾದರುಗಳಿಂದಲೋ, ರಕ್ಷಕರಿಂದಲೋ ಉಂಟಾಗದಿರಲಿ. ಉಸ್ತಾದರುಗಳಿಂದ ಏನಾದರೂ ಎಡವಟ್ಟು, ತಪ್ಪು ಸಂಭವಿಸಿದ್ದರೆ ಮಕ್ಕಳ ಸಮ್ಮುಖದಲ್ಲಿ ಉಸ್ತಾದರುಗಳೊಂದಿಗೆ ತರಾಟೆಗೆ ಇಳಿಯಬೇಡಿ, ಮದ್ರಸ ಉಸ್ತುವಾರಿ ಸಮಿತಿಗಳ ಗಮನಕ್ಕೆ ತಂದು ಅವರ ಮುಖಾಂತರ ಸುಲಲಿತವಾದ ಪರಿಹಾರ ಮಾರ್ಗವನ್ನು ಕಂಡುಕೊಳ್ಳಿರಿ.
ಮದ್ರಸ ಉಸ್ತುವಾರಿ ಸಮಿತಿಗಳು ತಮ್ಮ ಮೊಹಲ್ಲಾದ ಮದ್ರಸ ಉಸ್ತಾದರುಗಳ ನಿರಂತರ ಸಂಪರ್ಕವನ್ನಿಟ್ಟುಕೊಳ್ಳಬೇಕು. ಮದ್ರಸ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವ್ರದ್ಧಿಗೆ ಪೂರಕವಾಗುವ ವ್ಯವಸ್ಥೆಗಳನ್ನು ಮಾಡಬೇಕು. ಮಸೀದಿ ಮದ್ರಸಕ್ಕೆ ಭದ್ರತೆಗೋಸ್ಕರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮದ್ರಸ ಉಸ್ತಾದರುಗಳಿಗೆ ಸೂಕ್ತ ಸಂಬಳವನ್ನು ನಿಗದಿಪಡಿಸಿ ಸಮಯಕ್ಕೆ ಸರಿಯಾಗಿ ಅದನ್ನು ಅವರ ಹಸ್ತ ತಲುಪಿಸುವಂತೆ ಮಾಡಬೇಕು. ಊಟ ಮತ್ತು ಭದ್ರತೆಯ ವಸತಿ ವ್ಯವಸ್ಥೆಯನ್ನು ಮಾಡಿ ಕೊಡಬೇಕು.
       ಮದ್ರಸ ವಿದ್ಯಾರ್ಥಿಗಳೇ, ನಿಮ್ಮನ್ನು ತಂದೆ ತಾಯಂದಿರು, ರಕ್ಷಕರು ಮದ್ರಸಕ್ಕೆ ಕಳುಹಿಸುವುದು ನಿಮ್ಮ ಮೇಲಿನ ಅಪಾರ ಪ್ರೀತಿಯಿಂದಾಗಿದೆ. ನಿಮ್ಮ ಮುಂದಿನ ಬದುಕು ಹಸನಾಗಲಿ, ಪಾರತ್ರಿಕ ಲೋಕದಲ್ಲಿ ವಿಜಯಿಯಾಗಲಿ ಎಂಬ ಏಕೈಕ ಉದ್ಧೇಶದಿಂದಾಗಿದೆ. ನೀವು ಸ್ವರ್ಗ ಪಡೆಯುವುದರೊಂದಿಗೆ ನಿಮ್ಮಕಾರಣದಿಂದ ಅವರೂ ಸ್ವರ್ಗ ಪ್ರವೇಶಿಸುವವರಾಗಬೇಕು ಎಂಬ ಉದ್ಧೇಶ ಅವರಲ್ಲಿದೆ. ಆದುದರಿಂದ ಮಕ್ಕಳೇ... ಮದ್ರಸದಲ್ಲಿ ಉಸ್ತಾದರು ಹೇಳಿ ಕೊಡುವ ಪಾಠಗಳನ್ನು ಕಲಿತು ಅದನ್ನು ಜೀವನದಲ್ಲಿ ಅಳವಡಿಸುವವರಾಗಿರಿ, ತಂದೆ ತಾಯಿ ಉಸ್ತಾದರುಗಳಿಗೆ ಗೌರವಾದರ ನೀಡುವವರಾಗಿರಿ, ಮದ್ರಸ ಕಲಿಕೆಯ ಬಳಿಕ ಪಳ್ಳಿದರ್ಸಿಗೆ ಸೇರಿ ಉತ್ತಮ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿ. ಮುಂದಕ್ಕೆ ಮೊಹಲ್ಲಾದ ಚುಕ್ಕಾಣಿ ಹಿಡಿಯುವವರು ನೀವಾಗಬೇಕು, ಬಹುತೇಕ ಮಸೀದಿ ಮದ್ರಸಗಳ ಅಧಿಕಾರ ಪಡುಜಾಹಿಲ್ ಗಳು ಕೈವಶ ಮಾಡುತ್ತಿರುವುದು ಇಂದಿನ ಯುಗದಲ್ಲಿ ನಾವು ಕಾಣುತ್ತಿದ್ದೇವೆ. ಇಂದಿನ ಮಕ್ಕಳು ಮುಂದಿನ ನಾಯಕರು ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ. ಅದರಂತೆಯೇ ಮದ್ರಸ, ಪಳ್ಳಿ ದರ್ಸ್ ಗಳಲ್ಲಿ ಉತ್ತಮವಾಗಿ ಕಲಿತು ಅದನ್ನು ಜೀವನದಲ್ಲಿ ರೂಪಿಸಿ ತಂದೆ ತಾಯಿ, ರಕ್ಷಕರ, ಉಸ್ತಾದರುಗಳ, ನೆರೆಕರೆ ಹಾಗು ಊರವರ ಪ್ರಶಂಸೆಗೆ ಪಾತ್ರರಾಗಿ ನಿಮ್ಮೂರಿನ ಮದ್ರಸ ಮಸೀದಿಗಳ ನಾಯಕತ್ವವನ್ನು ಪಡೆದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆಶಯಾದರ್ಶವನ್ನು ನಿಮ್ಮ ನಂತರದ ತಲೆಮಾರುಗಳಿಗೆ ನೀಡುವತ್ತ ದಾಪುಗಾಲಿಟ್ಟು ಅವರನ್ನು ಉತ್ತಮರನ್ನಾಗಿ ಮಾಡಲು ಕಾರಣೀಕರ್ತರಾಗಿರಿ.

ಕೊನೆಯದಾಗಿ ನನ್ನ ಕಡೆಯಿಂದ ಮದ್ರಸ ವಿದ್ಯಾರ್ಥಿಗಳಿಗೆ ತುಂಬು ಹ್ರದಯದ ಶುಭಾಶಂಶೆಗಳನ್ನು ತಿಳಿಸುತ್ತಾ...
ಅಲ್ಲಾಹು ಅವರ ಮುಂದಿನ ಜೀವನ ಉಜ್ವಲಗೊಳಿಸಲಿ ಎಂದು ಪ್ರಾರ್ಥಿಸುತ್ತಾ.....
ನನ್ನ ಈ ಪುಟ್ಟ ಲೇಖನಕ್ಕೆ ತಾತ್ಕಾಲಿಕ ಬ್ರೇಕ್.

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಸಹಕಾರ : V.A ಮುಹಮ್ಮದ್ ಸಖಾಫಿ ವಳವೂರು

Monday, 3 July 2017

📖 *ಮದ್ರಸ ಮತ್ತೆ ಶುಭಾರಂಭ📖* *ಮಕ್ಕಳು ಪಾರತ್ರಿಕ ಲೋಕದ ಸಂಪತ್ತು - ಭಾಗ - 02* ✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ* *ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು*

ತಂದೆ ತಾಯಂದಿರು ಸಣ್ಣ ಪ್ರಾಯದ ಮಕ್ಕಳ ಬಗ್ಗೆ ಚೆನ್ನಾಗಿ ಬಲ್ಲವರಾಗಬೇಕು. ಅವರ ಒಡನಾಟ, ತುಂಟಾಟಗಳಿಗೆ ಹೊಂದಿ ಕೊಂಡಿರಬೇಕು. ನೆಬಿ ಸ.ಅ ಹೇಳಿದರು : ""ಒಬ್ಬಾತನಿಗೆ ಮಗುವಿದ್ದರೆ ಆ ಮಗುವನ್ನು ಸಂತೋಷಪಡಿಸಲು ಮಾತಿನಲ್ಲೂ ಕ್ರತಿಯಲ್ಲೂ ತುಂಟಾಟವನ್ನು ತೋರಿಸಲಿ"" ಮಗು ವನ್ನು ಸಂತೋಷಪಡಿಸಲು ಮಗು ಮಾತನಾಡುವಂತೆಯೇ ಮಾತನಾಡುವುದು, ಮಗು ಆಡುವಂತೆಯೇ ಆಟ ಆಡುವುದು, ಶಬ್ದ ಹೊರಡಿಸುವುದು. ಮಗುವನ್ನು ಲಾಲಿಸುವುದು, ಮುದ್ದಿಸುವುದು, ಮುತ್ತು ನೀಡುವುದು ಮಾಡಬೇಕು. ನೆಬಿ ಸ.ಅ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು, ಕರುಣೆ ತೋರಿಸುತ್ತಿದ್ದರು, ಲಾಲಿಸುತ್ತಿದ್ದರು. ಒಮ್ಮೆ ನೆಬಿ ಸ.ಅ ರವರು ತನ್ನ ಮೊಮ್ಮಗನಾದ ಹಸನ್ ರ.ಅ ರವರನ್ನು ಮುದ್ದಿಸುತ್ತಿದ್ದರು, ಚುಂಬಿಸುತ್ತಿದ್ದರು. ಇದನ್ನು ಕಂಡ ಅಖ್ರ ಬಿನ್ ಹಾಬಿಸ್ ಎಂಬ ಗ್ರಾಮೀಣನೋರ್ವ ಹೇಳಿದನು. ಪ್ರವಾದಿಯವರೇ : ನನಗೆ ಹತ್ತು ಮಕ್ಕಳಿದ್ದಾರೆ. ಆದರೆ ನಾನು ಯಾವನೇ ಒಬ್ಬ ಮಗನನ್ನು ಇಷ್ಟರವರೆಗೆ ಚುಂಬಿಸಿಲ್ಲ. ಆಗ ನೆಬಿ ಸ.ಅ ರವರು ಆತನ ಕಡೆ ನೋಟ ಬೀರುತ್ತಾ ಹೇಳಿದರು :  ನಿನ್ನ ಹ್ರದಯದಿಂದ ಕರುಣೆಯನ್ನು ಅಲ್ಲಾಹು ಊರಿ ತೆಗೆದಿದ್ದರೆ ನಾನೇನು ಮಾಡಲು ಸಾಧ್ಯ. ಯಾರೂ ಕರುಣೆ ತೋರಿಸುವುದಿಲ್ಲವೋ ಅವರ ಮೇಲೆ ಕರುಣೆ ತೋರಿಸಲ್ಪಡುವುದಿಲ್ಲ"" 
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಈ ಮೇಲೆ ತಿಳಿಸಿದವುಗಳು ಅನಿವಾರ್ಯವಾದುದಾಗಿದೆ.
ಒಂದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬವು ತುಂಬಾ ಜಾಗ್ರತೆ ಪಾಲಿಸಬೇಕಾದ ಒಂದು ಸಂಗತಿಯಾಗಿದೆ ಮಕ್ಕಳೆಡೆಯಲ್ಲಿ ಸಮಾನತೆ ಪಾಲಿಸುವುದು. ಮಕ್ಕಳೆಲ್ಲರಲ್ಲಿಯೂ ಒಂದೇ ರೀತಿಯ ಪ್ರೀತಿ, ಮಮಕಾರ, ವಾತ್ಸಲ್ಯ ತೋರಿಸಬೇಕು. ಸಾಮಾನ್ಯವಾಗಿ ಹಿರಿಯ ಮಕ್ಕಳಿಗಿಂತ ಕಿರಿಯ ಮಕ್ಕಳಲ್ಲಿ ಅಧಿಕ ಮಮತೆ ತೋರಿಸುತ್ತೇವೆ. ಇದು ಹಿರಿಯ ಮಕ್ಕಳಲ್ಲಿ ಖಿನ್ನತೆ ಉಂಟು ಮಾಡುವ ಸಾಧ್ಯತೆಯಿದೆ. ಆದುದರಿಂದ ಮಕ್ಕಳೆಲ್ಲರಲ್ಲಿಯೂ ಸಮಾನತೆ ಬರುವಂತೆ ನ್ಯಾಯಪಾಲನೆ ಅಗತ್ಯವಾಗಿದೆ.
ತಂದೆಯಾದವನು ತನ್ನ ಪುತ್ರನಿಗೆ ನೀಡಬಹುದಾದ ಮಹೋನ್ನತ ದಾನ ಉತ್ತಮ ಶಿಷ್ಠಾಚಾರವನ್ನು ಮೈಗೂಡಿಸುವಂತೆ ಮಾಡುವುದಾಗಿದೆ ಎಂದು ಪ್ರವಾದಿ ಸ.ಅ ಹೇಳಿದ್ದಾರೆ. ಆಹಾರ ಪಾನೀಯಗಳ ಸೇವನೆ, ಕಿರಿಯ, ಹಿರಿಯರೊಂದಿಗೆ ಹೇಗೆ ವ್ಯವಹರಿಸಬೇಕು, ಮನೆ ಮಂದಿಯೊಂದಿಗೆ ಹೇಗೆ ವ್ಯವಹರಿಸಬೇಕು, ಅವರಿಗೆ ಹೇಗೆ ಗೌರವಾದರ ನೀಡಬೇಕು, ನೆರೆಹೊರೆಯವರೊಂದಿಗೆ ಯಾವ ರೀತಿ ವ್ಯವಹರಿಸಬೇಕು, ಇತರ ಮಕ್ಕಳೊಂದಿಗೆ ಹೇಗಿರಬೇಕು, ಅಲ್ಲಾಹನ ಪರಿಚಯ, ಗೌರವಿಸಲ್ಪಡುವ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ಹೇಗೆ ಗೌರವಿಸಬೇಕು, ಇಸ್ಲಾಮಿನ ಪ್ರಾಥಮಿಕ ಬಾಲ್ಯ ವಿದ್ಯೆ ಮುಂತಾದ ವಿಷಯಗಳನ್ನು ಮಕ್ಕಳೊಂದಿಗೆ ಪ್ರಾಯೋಗಿಕವಾಗಿ ಸಂದರ್ಭೋಚಿತವಾಗಿ ತಿಳಿಸಿ ಕಲಿಸಿ ಕೊಡಬೇಕು. ಒಬ್ಬ ಮಗು ಉತ್ತಮನಾಗುವುದು ಅಲ್ಲಾಹನಿಂದಾದರೆ ಉತ್ತಮ ಶಿಷ್ಟಾಚಾರಗಳನ್ನು ಮೈಗೂಡಿಸಿಕೊಳ್ಳುವುದು ತಂದೆಯಿಂದಾಗಿದೆ. ಶಿಷ್ಟಾಚಾರ ( ಅದಬ್ )  ಎಂಬುದು ಸುದೀರ್ಘಾವಧಿಯಲ್ಲಿ ನಿರ್ವಹಿಸಲ್ಪಡುವ ಶ್ರಮದ ಆರಂಭಘಟ್ಟವಾಗಿದೆ. ಮಕ್ಕಳು ತನ್ನ ತಂದೆ ತಾಯಿ ಹಾಗು ಮನೆಯ ಸದಸ್ಯರಿಂದ ಅದಬ್ ಕಲಿಯಲು ಪ್ರೇರಣೆಯಾಗಬೇಕು. ಆ ರೀತಿಯ ವಾತಾವರಣವನ್ನು ಸ್ರಷ್ಠಿ ಮಾಡುವುದು ಮನೆ ಮಂದಿಯ ಕರ್ತವ್ಯವಾಗಿದೆ. ಒಮ್ಮೆ ಪ್ರವಾದಿ ಸ.ಅ ರವರ ಸಮೀಪ ಓರ್ವರು ತನ್ನ ಮಗನನ್ನು ಕರೆದುಕೊಂಡು ಬಂದು ಕೇಳಿದರು : ಪ್ರವಾದಿಯವರೇ, ನನ್ನ ಈ ಮಗುವಿನೊಂದಿಗೆ ನನ್ನ ಬಾಧ್ಯತೆಗಳೇನು, ಪ್ರವಾದಿ ಸ. ಅ ರವರು ಆ ವ್ಯಕ್ತಿಯೊಂದಿಗೆ ಈ ಮಗುವಿನ ಹೆಸರು ಉತ್ತಮವಾದುದಾಗಿರಲಿ, ಉತ್ತಮ ಶಿಷ್ಟಾಚಾರವನ್ನು ಕಲಿಸಿರಿ, ಈತನನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿರಿ ಎಂದು ಹೇಳಿದರು. 
     ಮಕ್ಕಳು ಒಳಿತಿಗಿಂತ ಕೆಡುಕಿನತ್ತ ವಾಲುವುದು ಸಾಮಾನ್ಯವಾಗಿದೆ. ಮಕ್ಕಳನ್ನು ಸರಿ ದಾರಿಗೆ ತರಬೇಕಾದುದು ಮಾತಾ ಪಿತರ ಕರ್ತವ್ಯವಾಗಿದೆ. ನೆಬಿ ಸ.ಅ ಹೇಳಿದರು : ""ಪ್ರತಿಯೊಬ್ಬ ಮಗುವು ಶುದ್ಧ ಪ್ರಕ್ರತಿಯಲ್ಲಿ ಜನಿಸುತ್ತವೆ. ಅವರನ್ನು ಯಹೂದಿಗಳನ್ನಾಗಿಯೋ, ನಸಾರಗಳನ್ನಾಗಿಯೋ ಅಗ್ನಿ ಆರಾಧಕರನ್ನಾಗಿಯೋ ಮಾಡುವುದು ಅವರ ಮಾತಾಪಿತರುಗಳಾಗಿದ್ದಾರೆ"" ಈ ಪ್ರವಾದಿ ನುಡಿಯಿಂದ ಮಕ್ಕಳು ನಿಷ್ಕಳಂಕವಾಗಿ ಹುಟ್ಟುತ್ತಾರೆ. ಅವರನ್ನು ದಾರಿ ತಪ್ಪುವವರಂತೆ ಮಾಡುವುದು ಮಾತಾಪಿತರುಗಳಾಗಿದ್ದಾರೆ ಎಂದು ತಿಳಿಯಬಹುದು. ಮಕ್ಕಳ ಭವಿಷ್ಯವು ಮಾತಾಪಿತರ ಹಸ್ತದಲ್ಲಿ ಭದ್ರವಾಗಿದೆ. ಅವರು ಮಕ್ಕಳಿಗೆ ಸರಿಯಾದ ದಾರಿ ಯಾವುದು ಕೆಟ್ಟ ದಾರಿ ಯಾವುದು ಎಂಬುದನ್ನು ಸಂದರ್ಭೋಚಿತವಾಗಿ ತಿಳಿಸಿದರೆ ಮಕ್ಕಳು ಅಡ್ಡ ದಾರಿ ಹಿಡಿಯುವ ಸಂದರ್ಭ ಬಹಳ ಕಡಿಮೆಯಾಗಿರುತ್ತದೆ. ಮಕ್ಕಳ ಮೇಲಿನ ಪ್ರೀತಿ ವ್ಯವಸ್ಥಿತವಾಗಿರಲಿ. ಜಗತ್ತಿನಲ್ಲಿರುವ ಸರ್ವ ಜೀವಿಗಳು ಅದರ ಮರಿಗಳನ್ನು ಪ್ರೀತಿಸುತ್ತವೆ. ಆದರೆ ಅವುಗಳಿಗೆ ಈ ಪ್ರೀತಿಯಿಂದ ಯಾವುದೇ ಒಂದು ಉದ್ಧೇಶ ಇರುವುದಿಲ್ಲ. ಆದರೆ ಮನುಷ್ಯನಾದವನ ಪ್ರೀತಿಯಲ್ಲಿ ಬಯಕೆಗಳು ಅಡಕವಾಗಿರುತ್ತದೆ. ಮನುಷ್ಯರು ತಮ್ಮ ಮಕ್ಕಳನ್ನು ಪ್ರೀತಿಸುವಾಗ ಆ ಪ್ರೀತಿ ಮರಳಿ ಸಿಗಬೇಕೆಂಬ ಉದ್ಧೇಶವು ಅವರಲ್ಲಿ ಅಡಕವಾಗಿರುತ್ತದೆ. ಮಕ್ಕಳ ಪ್ರಾಯ ಅನುಸರಿಸಿ ಅದಕ್ಕೆ ಅನುಗುಣವಾದ ಏನಿದೆಯೋ ಅದನ್ನು ಮಾತ್ರ ಕೊಡಬೇಕು. ಕೆಲವರು ಬೇಕಾಬಿಟ್ಟಿಯಾಗಿ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡುತ್ತಾರೆ. ಅದು ಮುಂದಕ್ಕೆ ವಿಪರೀತ ಪರಿಣಾಮ ಬೀರಬಹುದು. ಹೀಗೆ ಕೇಳಿದ್ದನ್ನೆಲ್ಲಾ ನೀಡುತ್ತಾ ಹೋದರೆ ಮುಂದೆ ಮಕ್ಕಳ ಬೇಡಿಕೆಗಳೂ ಹೆಚ್ಚಾಗುತ್ತವೆ. ಮಕ್ಕಳ ಬೇಡಿಕೆಗಳನ್ನು ಈಡೇರಿಸಲು ಅಸಾಧ್ಯವಾದಾಗ ಮಕ್ಕಳು ತಂದೆ ತಾಯಂದಿರ ಅಥವಾ ಪೋಷಕರ ಶತ್ರುವಾಗಿ ಮಾರ್ಪಡಲೂಬಹುದು. ಮಕ್ಕಳು ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಪ್ರೇರಣೆ ನೀಡಬೇಕು. ಮಕ್ಕಳಲ್ಲಿ ಒಳಿತು ಅನುಭವವಾದರೆ ಅವರನ್ನು ಪ್ರೋತ್ಸಾಹಿಸಬೇಕು. ಮಕ್ಕಳು ತಪ್ಪುದಾರಿ ಹಿಡಿಯುವುದನ್ನು ಕಂಡರೆ ಅದನ್ನು ತಿದ್ದಿ ಸರಿದಾರಿಗೆ ಬರುವಂತೆ ಮಾಡಬೇಕು. ಕೆಲವರು ಮಕ್ಕಳಲ್ಲಿ ತಪ್ಪು ಕಂಡರೂ ಅದನ್ನು ತಿದ್ದದೆ ಸುಮ್ಮನಿರುತ್ತಾರೆ. ಮಕ್ಕಳಲ್ಲವೇ ಎಂದು ಭಾವಿಸಿ ಅವರ ಮೇಲಿನ ಅತಿಯಾದ ಪ್ರೀತಿಯಿಂದ ಬೆಳೆಯಬಿಟ್ಟಿರುತ್ತಾರೆ. ಹೀಗಾದರೆ ಮಕ್ಕಳು ತಮ್ಮ ಕೆಟ್ಟ ನಡತೆಯನ್ನು ತಿದ್ದಿಕೊಳ್ಳದೆ ಹಾಗೆಯೇ ಬೆಳೆಯುತ್ತಾರೆ. ಇದು ಮುಂದಕ್ಕೆ ಬ್ರಹತ್ ಅಡ್ಡ ಪರಿಣಾಮಕ್ಕೆ ಹೇತುವಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಹಣ ನೀಡಬಾರದು. ಮೊಬೈಲ್ ಬಳಕೆಗೆ ಅವಕಾಶ ನೀಡಬಾರದು. ಮಗುವಿನ ಅಗತ್ಯತೆಗಳು ಏನಿದೆಯೋ ಅದನ್ನು ಅರಿತು ಪರಿಹಾರ ಕಾಣಬೇಕು.
ಒಮ್ಮೆ ಓರ್ವ ವ್ಯಕ್ತಿ ತನ್ನ ಮಗನ ದುರ್ನಡತೆಯ ಬಗ್ಗೆ ತನಗೆ ತೊಂದರೆ ನೀಡುತ್ತಿರುವ ಬಗ್ಗೆ ಉಮರ್ ರ.ಅ ರವರ ಬಳಿ ದೂರು ನೀಡಿದಾಗ ಉಮರ್ ರ.ಅ ಆತನ ಮಗನನ್ನು ಕರೆಯಿಸಿ ಆತನೊಂದಿಗೆ ಉಮರ್ ರ.ಅ  ತಂದೆಗೆ ತೊಂದರೆ ನೀಡುತ್ತಿದ್ದುದರ ಕುರಿತು ವಿಚಾರಿಸಿ ತನ್ನ ತಂದೆಗೆ ತಾನು ನೀಡಬೇಕಾದ ಬಾಧ್ಯತೆಗಳ ಕುರಿತು ತಿಳಿಹೇಳಿ ಎಚ್ಚರಿಸಿದರು. ಆಗ ಉಮರ್ ರ.ಅ ರವರೊಂದಿಗೆ ಆತ ಕೇಳಿದನು : ಓ ಅಮೀರುಲ್ ಮೂಮಿನೀನ್, ಮಗನಿಗೆ ನೀಡಬೇಕಾದ ಬಾಧ್ಯತೆಗಳು ತಂದೆಯ ಮೇಲೆ ಏನೂ ಇಲ್ಲವೇ? ಉಮರ್ ರ.ಅ ಹೇಳಿದರು : ತಂದೆಯಾದವನ ಮೇಲೆ ಮಗನಿಗೆ ನೀಡಬೇಕಾದ ಬಾಧ್ಯತೆಗಳೂ ಇವೆ. ಅವು ಯಾವುದು ಎಂದು ಆತ ಕೇಳಿದಾಗ ಉಮರ್ ರ.ಅ ರವರು ವಿವರಿಸಿದರು. ತಂದೆಯಾದವನು ಚಾರಿತ್ರ್ಯ ಶುದ್ಧಿಯಿರುವ ಹೆಣ್ಣನ್ನು ವಿವಾಹವಾಗುವುದು, ತನ್ನ ಮಗನಿಗೆ ಉತ್ತಮ ಹೆಸರನ್ನಿಡುವುದು ಮತ್ತು ಪವಿತ್ರ ಕುರಾನನ್ನು ಕಲಿಸುವುದು. ಆಗ ಆತ ಹೇಳುತ್ತಾನೆ : ಓ ಅಮೀರುಲ್ ಮೂಮಿನೀನ್, ನನ್ನ ತಂದೆ ಇದ್ಯಾವುದನ್ನು ಪಾಲಿಸಲಿಲ್ಲ. ನನ್ನ ತಾಯಿಯು ಅಗ್ನಿ ಆರಾಧಕನೊಂದಿಗೆ ಸಂಸಾರ ನಡೆಸುತ್ತಿದ್ದವಳಾಗಿದ್ದಳು, ಅವಳನ್ನು ನನ್ನ ತಂದೆ ಅಗ್ನಿ ಆರಾಧಕನಿಗೆ ಹಣ ನೀಡಿ ಖರೀದಿಸಿ ವಿವಾಹವಾಗಿರುವುದು, ನನಗೆ ನನ್ನ ತಂದೆ ನಾಮಕರಣ ಮಾಡಿದ್ದು ಜಿರಳೆ ಎಂಬ ಅರ್ಥ ಇರುವ ಖುಂಫಸಾಅ್ ಎಂದಾಗಿದೆ, ಕುರಾನ್ ಕಲಿಸುವುದು ಬಿಡಿ, ಅದರಿಂದ ಒಂದೇ ಒಂದು ಅಕ್ಷರ ನನಗೆ ಕಲಿಸಿ ಕೊಡಲಿಲ್ಲ. ಇಷ್ಟು ಕೇಳಿದ್ದೇ ತಡ ಉಮರ್ ರ.ಅ ರವರು ದೂರು ನೀಡಿದ ಆ ವ್ಯಕ್ತಿಯ ಕಡೆ ನೋಟ ಬೀರುತ್ತಾ ಕೇಳಿದರು : ನೀನು ನಿನ್ನ ಮಗನ ಕೆಟ್ಟ ನಡತೆಯ ಬಗ್ಗೆ ದೂರು ನೀಡಲು ಬಂದಿದ್ದೀಯಾ! ನಿನ್ನ ಮಗ ನಿನಗೆ ತೊಂದರೆ ನೀಡುತ್ತಿದ್ದಾನಲ್ವಾ! ನಿನಗೆ ನಿನ್ನ ಮಗ ತೊಂದರೆ ನೀಡುವುದಕ್ಕಿಂತ ಮುಂಚೆ ನೀನು ಅವನಿಗೆ ತೊಂದರೆ ನೀಡಿರುವಿ, ನೀನು ಅವನಿಗೆ ನೀಡಬೇಕಾದ ಬಾಧ್ಯತೆಗಳನ್ನು ಪೂರ್ತೀಕರಿಸಿಲ್ಲ, ನಿನ್ನೊಂದಿಗೆ ನಿನ್ನ ಮಗ ಕೆಟ್ಟ ನಡತೆ ತೋರಿಸುವುದಕ್ಕಿಂತ ಮೊದಲು ನೀನು ಅವನಿಗೆ ಕೆಡುಕನ್ನು ನೀಡಿರುವಿ.
ಈ ಘಟನೆಯಿಂದ ನಮಗೆ ವಿವಾಹವಾಗುವಾಗ ಧರ್ಮನಿಷ್ಠೆಯುಳ್ಳ ಚಾರಿತ್ರ್ಯ ಶುದ್ಧಿಯಿರುವ ಸ್ತ್ರೀಯನ್ನು ವಿವಾಹವಾಗಬೇಕು, ಮಕ್ಕಳಿಗೆ ಉತ್ತಮ ನಾಮಕರಣ ಮಾಡಬೇಕು ಮತ್ತು ಕುರಾನ್ ಕಲಿಸಿಕೊಡಬೇಕು ಎಂದು ತಿಳಿಯುತ್ತದೆ. ಕಾರಣ ಪ್ರಾರಂಭದಲ್ಲಿ ತಿಳಿಸಿದಂತೆ ಮಕ್ಕಳು ಹೆಚ್ಚಾಗಿ ತಾಯಿಯೊಂದಿಗೆ ಹೊಂದಿಕೊಂಡಿರುತ್ತಾರೆ. ಉತ್ತಮ ಗುಣ ನಡತೆಯ ತಾಯಿಯಾಗಿದ್ದರೆ ಮಕ್ಕಳು ಉತ್ತಮರಾಗುತ್ತಾರೆ. ದುರ್ನಡತೆಯ ತಾಯಿಯಾದರೆ ಮಕ್ಜಳು ದುರ್ಮಾರ್ಗಿಗಳಾಗುತ್ತಾರೆ. ಅದೇರೀತಿ ಶುಭಸೂಚಕವಲ್ಲದ ಹೆಸರುಗಳನ್ನು ಮಕ್ಕಳಿಗೆ ನಾಮಕರಣ ಮಾಡಿದರೆ ಅದು ಮಕ್ಕಳ ಮೇಲೆ ಪ್ರಭಾವ ಬೀಳುತ್ತದೆ ಮತ್ತು ಮಕ್ಕಳಿಗೆ ಅವರ ಪ್ರಾಯಕ್ಕನುಗುಣವಾಗಿ ಧಾರ್ಮಿಕ ವಿದ್ಯೆಯನ್ನು ನೀಡದಿದ್ದರೆ ಅದು ಮುಂದಕ್ಕೆ ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ.

ಮುಂದುವರಿಯುವುದು ಇಂಶಾ ಅಲ್ಲಾಹ್..

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...