Tuesday, 20 June 2017

ಲೈಲತುಲ್ ಖದ್ರ್....ಶಮೂನುಲ್ ಘಾಝೀ ರ.ಅ ಚರಿತ್ರೆ

ಒಮ್ಮೆ ಜಿಬ್ರೀಲ್ ಅ.ಸ ನೆಬಿ ಸ.ಅ ರವರ ಬಳಿ ಬಂದು ಇಸ್ರಾಯೀಲ್ ಸಮುದಾಯದ ಅಲ್ಲಾಹನ ಇಷ್ಟದಾಸರುಗಳಲ್ಲೋರ್ವರಾದ ಶಮೂನುಲ್ ಗಾಝೀ ಎಂಬವರ ಧೀರ ಚರಿತ್ರೆಯನ್ನು ಹೇಳಿದರು. ಶಮೂನುಲ್ ಗಾಝೀ ಎಂಬ ಮಹಾನರು ಸಾವಿರ ತಿಂಗಳು ಕಾಲ ಸತ್ಯ ನಿಷೇಧಿಗಳೊಂದಿಗೆ ಹೋರಾಡಿದ ಒಬ್ಬ ಮಹಾ ಶೂರರಾಗಿದ್ದರು. ಒಂಟೆಯ ಗಡ್ಡ ಮೂಲೆಯ ಎಲುಬು ಅವರ ಒಂದೇ ಒಂದು ಆಯುಧವಾಗಿತ್ತು. ಬೇರೆ ಯಾವುದೇ ಯುದ್ಧಾಯುಧ ಅವರ ಬಳಿ ಇರಲಿಲ್ಲ. ಆ ಆಯುಧದಿಂದ ಸತ್ಯ ನಿಷೇಧಿಗಳಿಗೆ ಹೊಡೆದರೆ ಅಸಂಖ್ಯಾತ ಸತ್ಯ ನಿಷೇಧಿಗಳು ಹತರಾಗುತ್ತಿದ್ದರು. ಅವರಿಗೆ ಬಾಯಾರಿಕೆ, ದಾಹ ಉಂಟಾದರೆ ಅವರ ಹಲ್ಲುಗಳಿರುವ ಜಾಗದಿಂದ ಶುದ್ಧಜಲ ಪುಟಿದು ಒಸರುತ್ತಿತ್ತು. ಅದನ್ನು ಕುಡಿಯುತ್ತಿದ್ದರು. ಹಸಿವಾದಾಗ ಅದೇ ಜಾಗದಲ್ಲಿ ತಿನ್ನಲು ಯೋಗ್ಯವಾದ ಮಾಂಸ ಬೆಳೆಯುತ್ತಿತ್ತು. ಅದನ್ನು ತಿಂದು ಜೀವಿಸುತ್ತಿದ್ದರು. ಹೀಗೆ ದಿನಗಳು, ತಿಂಗಳುಗಳು ಉರುಳುತ್ತಿದ್ದವು. ಸಾವಿರ ತಿಂಗಳುಗಳ ಕಾಲ ಅಲ್ಲಾಹನ ಮಾರ್ಗದಲ್ಲಿ ಸತ್ಯ ನಿಷೇಧಿಗಳೊಂದಿಗೆ ಯುದ್ಧ ಮಾಡುತ್ತಾ ತನ್ನ ಬದುಕನ್ನು ಧನ್ಯಗೊಳಿಸುವಷ್ಟು ಮುಂದೆ ಸಾಗಿದರು. ಸತ್ಯ ನಿಷೇಧಿಗಳು ಶಮೂನುಲ್ ಗಾಝೀ ರ.ಅ ರವರನ್ನು ಎದುರಿಸಲು ಅಶಕ್ತರಾಗಿದ್ದರು. ಸಾವಿರ ತಿಂಗಳಿನಿಂದ ಅಂದರೆ ಎಂಭತ್ತಮೂರು ವರುಷ ನಾಲ್ಕು ತಿಂಗಳು ಅವರನ್ನು ಎದುರಿಸಿ ಪರಾಜಯ ಹೊಂದಿದ್ದರು. ಕೊನೆಗೊಂದು ತೀರ್ಮಾನಕ್ಕೆ ಬಂದರು. ಶಮೂನುಲ್ ಗಾಝೀ ರಹಿಮಹುಲ್ಲಾಹು ರವರ ಸತ್ಯ ನಿಷೇಧಿಯಾದ ಪತ್ನಿಯ ಮೂಲಕ ಅವರನ್ನು ಸಾಯಿಸುವುದು. ಪತ್ನಿಯೊಂದಿಗೆ ಹೇಳಿದರು. ನಿನ್ನ ಪತಿಯನ್ನು ನೀನು ಕೊಂದರೆ ನಿನಗೆ ಅಪಾರ ಸಂಪತ್ತು, ಧನ ನೀಡುವೆವು. ನಿನ್ನ ಅಭಿಪ್ರಾಯವೇನು. ಪತ್ನಿ ಹೇಳಿದಳು : ನನಗೆ ಅವರನ್ನು ಕೊಲ್ಲಲು ಸಾಧ್ಯವಿಲ್ಲ. ಸತ್ಯ ನಿಷೇಧಿಗಳ ಗುಂಪು ಹೇಳಿತು : ನಾವು ನಿನಗೆ ಹಗ್ಗವನ್ನು ತಂದು ಕೊಡುತ್ತೇವೆ. ನೀನು ಮಾಡಬೇಕಾದುದಿಷ್ಟೆ. ನಿನ್ನ ಪತಿ ನಿದ್ರೆಯಲ್ಲಿರುವಾಗ ಅವರ ಕೈ ಕಾಲುಗಳನ್ನು ಕಟ್ಟಬೇಕು. ಬಳಿಕ ನಮಗೆ ವಿಷಯ ಮುಟ್ಟಿಸಿದರಾಯಿತು. ಅವರ ಕಥೆಯನ್ನು ನಾವು ಮುಗಿಸುತ್ತೇವೆ. ಅಂತೆಯೇ ಕಪಟಿ ಪತ್ನಿ ಶಮೂನುಲ್ ಗಾಝೀ ರ.ಅ ನಿದ್ರೆಯಲ್ಲಿದ್ದಂತಹ ಸಂದರ್ಭ ನೋಡಿ ಅವರ ಕೈ ಕಾಲುಗಳನ್ನು ಗಟ್ಟಿಯಾಗಿ ಬಿಗಿದು ಕಟ್ಟಿದಳು. ತಕ್ಷಣ ಶಮೂನುಲ್ ಗಾಝೀ ರ.ಅ ನಿದ್ರೆಯಿಂದ ಎಚ್ಚೆತ್ತರು. ತನ್ನ ಕೈ ಕಾಲುಗಳು ಕಟ್ಟಲ್ಪಟ್ಟದ್ದು ಕಂಡು ಪತ್ನಿಯೊಂದಿಗೆ ಕೇಳಿದರು : ಯಾರು ನನ್ನನ್ನು ಕಟ್ಟಿದ್ದು?. ಪತ್ನಿ ತನ್ನ ಕಾಪಟ್ಯವನ್ನು ಮರೆಮಾಚಿ ಹೇಳಿದಳು : ಅದು ನಾನೇ ಕಟ್ಟಿದ್ದು. ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಕಟ್ಟಿದ್ದು. ತಾವು ಸಾವಿರ ತಿಂಗಳು ಯುದ್ಧ ಮಾಡಿ ಜಯಿಸಿದವರಲ್ಲವೇ? ತಮ್ಮನ್ನು ಎದುರಿಸುವ ತಾಕತ್ತು ಇಲ್ಲಿ ಯಾರಿಗೂ ಇಲ್ಲ. ಈಗ ನಾನು ಬಿಗಿದು ಕಟ್ಟಿದ ಹಗ್ಗವನ್ನು ತಾವು ತುಂಡರಿಸಿರಿ ನೋಡೋಣ. ತಮ್ಮ ಸಾಮರ್ಥ್ಯ ಎಷ್ಟಿದೆಯೆಂದು ನಾನೂ ಲೈವ್ ಆಗಿ ನೋಡೇ ಬಿಡ್ತೀನಿ. ತಕ್ಷಣ ಶಮೂನುಲ್ ಗಾಝಿ ರ.ಅ ತನ್ನ ಶರೀರವನ್ನು ಕೊಡವಿದರು. ಕಟ್ಟಲ್ಪಟ್ಟ ಹಗ್ಗಗಳು ತುಂಡರಿಸಲ್ಪಟ್ಟವು. ಪತ್ನಿ ಮರುದಿನ ಸತ್ಯನಿಷೇಧಿಗಳೊಂದಿಗೆ ನಡೆದ ಸಂಗತಿ ತಿಳಿಸಿದಾಗ ಅವರು ಕಬ್ಬಿಣದ ಚೈನ್ ತಂದು ಕೊಟ್ಟರು. ಇದರಿಂದ ನಿನ್ನ ಪತಿಯನ್ನು ಕಟ್ಟು. ಅಂತೆಯೇ ಎರಡನೇ ಬಾರಿಗೆ ಶಮೂನುಲ್ ಗಾಝೀ ರ.ಅ ಗಾಢ ನಿದ್ರೆಯಲ್ಲಿದ್ದಾಗ ಪತ್ನಿ ಕಬ್ಬಿಣದ ಚೈನ್ ಮೂಲಕ ಅವರನ್ನು ಕಟ್ಟಿದಳು. ಶಮೂನುಲ್ ಗಾಝೀ ರ.ಅ ನಿದ್ರೆಯಿಂದ ಎಚ್ಚೆತ್ತರು. ತನ್ನ ಕೈ ಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಂಧಿಸಲ್ಪಟ್ಟದ್ದು ಕಂಡು ಪತ್ನಿಯೊಂದಿಗೆ ಕೇಳಿದರು : ಯಾರು ನನ್ನನ್ನು ಬಂಧಿಸಿದ್ದು?. ಪತ್ನಿ ತನ್ನ ಕಾಪಟ್ಯವನ್ನು ಇಲ್ಲೂ ಮರೆಮಾಚಿ ಹೇಳಿದಳು : ಅದು ನಾನೇ ಕಟ್ಟಿದ್ದು. ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಕಟ್ಟಿದ್ದು. ಹಗ್ಗದ ಮೂಲಕ ಕಟ್ಟಿದ್ದನ್ಬು ನೀವು ತುಂಡರಿಸಿದಿರಿ. ಕಬ್ಬಿಣದ ಸಂಕೋಲೆಯಿಂದ ಈವಾಗ ನಾನು ತಮ್ಮನ್ನು ಬಂಧಿಸಿರುವೆ. ಈಗ ತಮ್ಮ ಸಾಮರ್ಥ್ಯ ತೋರಿಸಿರಿ ನೋಡೋಣ. ಶಮೂನುಲ್ ಗಾಝೀ ರ.ಅ ರವರು ತನ್ನ ಶರೀರ ಮತ್ತು ಎರಡು ಕೈಗಳನ್ನು ಶಕ್ತಿಯುತವಾಗಿ ಕೊಡವಿದರು. ಕಬ್ಬಿಣದ ಸಂಕೋಲೆಗಳು ತುಂಡರಿಸಲ್ಪಟ್ಟು ಬಂಧಮುಕ್ತಗೊಂಡರು.
    ತನ್ನ ಪತ್ನಿಯ ಕಾಪಟ್ಯವನ್ನು ತಿಳಿದಿದ್ದ ಶಮೂನುಲ್ ಗಾಝೀ ರ.ಅ ರವರು ಮೆಲ್ಲನೆ ಹೇಳಿದರು : ಓ ಹೆಣ್ಣೇ.... ನಾನು ಅಲ್ಲಾಹನ ಇಷ್ಟದಾಸರಾದ ಅವುಲಿಯಾಗಳಲ್ಲಿ ಒಬ್ಬನಾಗಿದ್ದೇನೆ. ನನ್ನನ್ನು ಕೊಲ್ಲಲು ನನ್ನ ತಲೆಯ ಕೂದಲು ಬಿಟ್ಟು ಈ ಭೂಮಿಯಲ್ಲಿರುವ ಯಾವುದೇ ಆಯುಧದಿಂದ ಸಾಧ್ಯವಿಲ್ಲ. ಶಮೂನುಲ್ ಗಾಝೀ ರ.ಅ ರವರು ಕೂದಲನ್ನು ತುಂಬಾ ಉದ್ದಕ್ಕೆ ಬೆಳೆಯಬಿಟ್ಟಿದ್ದರು. ಇದನ್ನು ಶಮೂನುಲ್ ಗಾಝೀ ರ.ಅ ರವರ ಕಾಫಿರಾದ ಪತ್ನಿ ಕೇಳಿದಳು. ಅಂದು ರಾತ್ರಿ ಶಮೂನುಲ್ ಗಾಝೀ ರ.ಅ ಎಂದಿನಂತೆ ಮಲಗಿದರು. ಗಾಢನಿದ್ರೆಯಲ್ಲಿರುವಾಗ ಶಮೂನುಲ್ ಗಾಝೀ ರ.ಅ ರವರ ತಲೆಯ ಎಂಟು ಉದ್ದದ ಕೂದಲುಗಳನ್ನು ಪತ್ನಿ ಕತ್ತರಿಸಿ ತೆಗೆದು ನಾಲ್ಕು ಕೂದಲುಗಳಿಂದ ಶಮೂನುಲ್ ಗಾಝೀ ರ.ಅ ರವರ ಎರಡು ಕೈಗಳನ್ನು ಮತ್ತು ನಾಲ್ಕು ಕೂದಲುಗಳಿಂದ ಎರಡು ಕಾಲುಗಳನ್ನೂ ಕಟ್ಟಿ ಬಂಧಿಸಿದಳು. ಶಮೂನುಲ್ ಗಾಝೀ ರ.ಅ ರವರು ನಿದ್ರೆಯಿಂದ ಎಚ್ಚೆತ್ತರು. ಕೇಳಿದರು ಯಾರು ಕಟ್ಟಿದ್ದು?. ಪತ್ನಿ ಮೊದಲಿನಂತೆಯೇ ತಮ್ಮನ್ನು ಪರೀಕ್ಷಿಸಲು ಕಟ್ಟಿದ್ದು ಎಂಬ ಉತ್ತರ ನೀಡಿದಳು. ಶಮೂನುಲ್ ಗಾಝೀ ರ.ಅ ಎಷ್ಟೇ ಪ್ರಯತ್ನಪಟ್ಟರೂ ಕೈ ಕಾಲುಗಳ ಕಟ್ಟುಗಳನ್ನು ಬಿಡಿಸಲಾಗಲಿಲ್ಲ. ಈ ಸಂದರ್ಭ ನೋಡಿ ಶಮೂನುಲ್ ಗಾಝೀ ರ.ಅ ರವರ ಪತ್ನಿ ಸತ್ಯ ನಿಷೇಧಿಗಳ ಗುಂಪಿಗೆ ವಿಷಯ ಮುಟ್ಟಿಸಿದಳು. ವಿಷಯ ತಿಳಿದದ್ದೇ ತಡ ಸತ್ಯ ನಿಷೇಧಿಗಳಾದ ಶತ್ರುಗಳು ಶಮೂನುಲ್ ಗಾಝೀ ರ.ಅ ರವರ ಮನೆ ಸಮೀಪ ಜಮಾವಣೆಗೊಂಡರು. ಬಳಿಕ ಅವರನ್ನು ಶತ್ರುಗಳು ಒಂದು ಕಟ್ಟಡದೊಳಗಿರುವ ಕೊಲ್ಲುವ ಜಾಗಕ್ಕೆ ಕೊಂಡು ಹೋಗಿ ನೇಣುಕಂಬಕ್ಕೆ ಕಟ್ಟಿ ಎರಡು ಕಿವಿ, ಕಣ್ಣು, ತುಟಿ, ನಾಲಗೆ, ಎರಡು ಕೈ ಕಾಲುಗಳನ್ನು ಇರಿದು ಶರೀರದಿಂದ ಬೇರ್ಪಡಿಸಿದರು. ಶತ್ರುಗಳೆಲ್ಲರೂ ಆ ಕಟ್ಟಡದ ಒಳಗೆ ತುಂಬಾ ಸಂತೋಷದಿಂದಿದ್ದರು. ಸಾವಿರ ತಿಂಗಳುಗಳ ಕಾಲ ಶಮೂನುಲ್ ಗಾಝಿಯನ್ನು ಕೊಲ್ಲಲು ಸಾಧ್ಯವಾಗದೆ ಶತ್ರುಗಳು ಚಡಪಡಿಸಿದ್ದರು. ಈವಾಗ ಕೊಲ್ಲುವ ಸಮಯ ಒದಗಿ ಬಂದ ಆಹ್ಲಾದದಲ್ಲಿದ್ದರು.
ಅಲ್ಲಾಹನು ಶಮೂನುಲ್ ಗಾಝೀ ರ.ಅ ರವರೊಂದಿಗೆ ಇಲ್ ಹಾಮ್ ಮೂಲಕ ಕೇಳಿದನು : ನಾನು ಈವಾಗ ಏನು ಮಾಡಬೇಕೆಂಬುದು ನಿನ್ನ ಇಚ್ಛೆಯಾಗಿದೆ?
ಶಮೂನುಲ್ ಗಾಝೀ ರ.ಅ ಅಸಾಮಾನ್ಯ ಶಕ್ತಿ ಪ್ರಾಪ್ತಿಗಾಗಿ ಅಲ್ಲಾಹನಲ್ಲಿ ಬೇಡಿ ಕೊಂಡರು. ಅಲ್ಲಾಹನು ಅಸಾಮಾನ್ಯ ಶಕ್ತಿ ಸಾಮರ್ಥ್ಯವನ್ನು ನೀಡಿದನು.  ಶಮೂನುಲ್ ಗಾಝೀ ರ.ಅ ತನ್ನ ಅಸಾಮಾನ್ಯ ಶಕ್ತಿಯಿಂದ ತನ್ನನ್ನು ಕಟ್ಟಿ ಇಟ್ಟಿದ್ದ ಕಂಬವನ್ನು ಒಂದೇ ಸಮನೆ ಅಲುಗಾಡಿಸಿದರು. ಆ ಕಟ್ಟಡ ಸಂಪೂರ್ಣವಾಗಿ ಶತ್ರುಗಳ ಮೇಲೆ ಕುಸಿಯಿತು.ಶಮೂನುಲ್ ಗಾಝೀ ರ.ಅ ರವರ ಕಪಟಿ ಪತ್ನಿ ಸಹಿತ ಶತ್ರುಗಳೆಲ್ಲರೂ ಕಟ್ಟಡದೊಳಗೆ ಸಿಲುಕಿ ನಾಶ ಹೊಂದಿದರು. ಅಲ್ಲಾಹನ ಅಪಾರ ಮಹಿಮೆಯಿಂದ ಶಮೂನುಲ್ ಗಾಝೀ ರ.ಅ ರವರನ್ನು ಅಲ್ಲಾಹು ಕಾಪಾಡಿದನು. ಅವರ ಶರೀರದಿಂದ ಬೇರ್ಪಡಿಸಲ್ಪಟ್ಟ ಅಂಗಾಂಗಗಳನ್ನು ಅಲ್ಲಾಹನು ಮತ್ತೆ ಜೋಡಣೆಗೊಳಿಸಿದನು.
ಇದು ಶಮೂನುಲ್ ಗಾಝೀ ರ.ಅ ರವರು ಒಂದು ಸಾವಿರ ತಿಂಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ನಡೆಸಿದ ಬಳಿಕ ನಡೆದ ಸಂಭವವಾಗಿದೆ. ನಂತರದ ಕಾಲದಲ್ಲಿ ಮತ್ತೂ ಒಂದು ಸಾವಿರ ತಿಂಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ ರಾತ್ರಿ ಸುನ್ನತ್ ನಮಾಜು ಹಾಗು ಹಗಲು ಉಪವಾಸದೊಂದಿಗೆ ತನ್ನ ಜೀವನವನ್ನು ಸಂಪೂರ್ಣವಾಗಿ ಧನ್ಯಗೊಳಿಸಿದರು. ಈ ಚರಿತ್ರೆಯನ್ನು ಜಿಬ್ರೀಲ್ ಅ.ಸ ನೆಬಿ ಸ.ಅ ರವರಿಗೆ ವಿವರಿಸಿದ್ದನ್ನು ನೆಬಿ ಸ.ಅ ಸ್ವಹಾಬಿಗಳಿಗೆ ಎಳೆಎಳೆಯಾಗಿ ವಿವರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ವಹಾಬಿಗಳು ಶಮೂನುಲ್ ಗಾಝೀ ರ.ಅ ರವರಿಗೆ ಅಲ್ಲಾಹನ ಬಳಿ ಲಭಿಸುವ ಪ್ರತಿಫಲವನ್ನು ಮತ್ತು ಅವರಿಗೆ ಅಲ್ಲಾಹನ ಬಳಿ ಎಷ್ಟೊಂದು ಉನ್ನತ ಪದವಿ ಲಭಿಸಬಹುದು ಎಂಬುದನ್ನು ಚಿಂತಿಸಿ ಕಣ್ಣೀರಿಡುತ್ತಾ ಪ್ರವಾದಿ ಸ.ಅ ರವರಲ್ಲಿ ಕೇಳಿದರು. ಶಮೂನುಲ್ ಗಾಝೀ ರ.ಅ ರವರಿಗೆ ಲಭಿಸುವ ಪ್ರತಿಫಲದಷ್ಟು ನಮಗೆ ಲಭಿಸುವುದೇ? ನೆಬಿ ಸ.ಅ ಹೇಳಿದರು : ಅದರ ಬಗ್ಗೆ ನಾನು ತಿಳಿದಿಲ್ಲ. ಈ ಸಮಯದಲ್ಲಿ ಅಲ್ಲಾಹನು ಜಿಬ್ರೀಲ್ ಅ. ಸ ಮುಖಾಂತರ ಲೈಲತುಲ್ ಖದ್ರಿನ ಮಹತ್ವವನ್ನು ಸಾರುವ ಖದ್ರ್ ಸೂರತ್ತನ್ನು ಅವತೀರ್ಣಗೊಳಿಸಿದನು. ಜಿಬ್ರೀಲ್ ಅ.ಸ ಖದ್ರ್ ಸೂರತ್ತನ್ನು ನೆಬಿ ಸ .ಅ ರವರಿಗೆ ಓದಿಕೊಡುತ್ತಾ ಹೇಳಿದರು : ಓ ಪ್ರವಾದಿಯವರೇ : ಅಲ್ಲಾಹು ತಮಗೆ ಮತ್ತು ತಮ್ಮ ಸಮುದಾಯಕ್ಕೆ ಲೈಲತುಲ್ ಖದ್ರ್ ಎಂಬ ಮಹೋನ್ನತ ರಾತ್ರಿಯನ್ನು ನೀಡಿದ್ದಾನೆ. ಆ ಒಂದು ರಾತ್ರಿ ಸಾವಿರ ತಿಂಗಳುಗಳಿಗಿಂತ ಉತ್ತಮವಾದುದಾಗಿದೆ. ಕೆಲವು ವಿದ್ವಾಂಸರು ಹೇಳುತ್ತಾರೆ : ಲೈಲತುಲ್ ಖದ್ರಿನ ರಾತ್ರಿ ಎರಡು ರಕಾತ್ ನಮಾಜು ನಿರ್ವಹಿಸುವುದು ಇಸ್ರಾಯಿಲ್ ಸಮುದಾಯದ ಕಾಲದಲ್ಲಿ ಒಂದು ಸಾವಿರ ತಿಂಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದುದಕ್ಕಿಂತಲೂ ಶ್ರೇಷ್ಠ ಪ್ರತಿಫಲವಾಗಿದೆ.

>>>>>>>>>>>>>>>>>>>>>>>>

ಲೈಲತುಲ್ ಖದ್ರಿನ ರಾತ್ರಿ ತಿಳಿಯದಾಗಲು ಕಾರಣವೇನು?
ಲೈಲತುಲ್ ಖದ್ರ್ ನ ರಾತ್ರಿಯ ವಿಷಯದಲ್ಲಿ ಹಲವು ಅಭಿಪ್ರಾಯಗಳಿವೆ. ಇವುಗಳಲ್ಲಿ ರಮಳಾನಿನ ಅಂತಿಮ ಹತ್ತರ ಒಂಟಿಗಳಲ್ಲಿಯಾಗಿದೆ ಎಂಬುದು ಪ್ರಬಲ ಅಭಿಪ್ರಾಯವಾಗಿದೆ. ಲೈಲತುಲ್ ಖದ್ರ್ ನ ರಾತ್ರಿ ನಿಖರವಾಗಿ ಹೇಳಲು ಸಾಧ್ಯವಾಗದಿರುವುದು ಎರಡು ವ್ಯಕ್ತಿಗಳ ಜಗಳದಿಂದಾಗಿದೆ.
ಉಬಾದತುಬ್ನುಸ್ಸಾಮಿತ್ ರ.ಅ ನಿವೇದನೆ.
""ಒಮ್ಮೆ ಪ್ರವಾದಿ ರಸೂಲುಲ್ಲಾಹಿ ಸ.ಅ ಲೈಲತುಲ್ ಖದ್ರಿನ ರಾತ್ರಿಯ ಕುರಿತು ನಮಗೆ ತಿಳಿಸಲು ಹೊರಟು ಬರುವಾಗ ಎರಡು ವ್ಯಕ್ತಿಗಳು ಪರಸ್ಪರ ತರ್ಕದಲ್ಲಿ ಏರ್ಪಟ್ಟಿದ್ದರು.
ನೆಬಿ ಸ.ಅ ಹೇಳುತ್ತಾರೆ : ನಾನು ಲೈಲತುಲ್ ಖದ್ರ್ ಯಾವಾಗ ಎಂದು ನಿಮಗೆ ತಿಳಿಸಲು ಹೊರಟು ಬರುವಾಗ ಇಂತಿಂತಹ ಎರಡು ವ್ಯಕ್ತಿಗಳು ಪರಸ್ಪರ ಜಗಳ ತರ್ಕದಲ್ಲಿದ್ದರು. ಈ ಕಾರಣದಿಂದ ಲೈಲತುಲ್ ಖದ್ರ್ ಯಾವಾಗ ಎಂದು ನನಗೆ ಮರೆತು ಹೋಯಿತು. ಅದು ನಿಮ್ಮ ಒಳಿತಿಗಾಗಿಯೇ ಆಗಿರಬಹುದು. ಆದುದರಿಂದ ನೀವು ರಮಳಾನಿನ 25, 27, 29 ರಲ್ಲಿ ನಿರೀಕ್ಷಿಸಿರಿ"".

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು

ಪ್ರೋತ್ಸಾಹ : ಗಫೂರ್ ಬಾಯಾರ್

Sunday, 18 June 2017

ಲೈಲತುಲ್ ಖದ್ರ್

ಲೈಲತುಲ್ ಖದ್ರ್ ರಮಳಾನಿನ ರಾತ್ರಿಗಳಲ್ಲಿ ಅತ್ಯಂತ ಮಹೋನ್ನತ ಒಂದು ರಾತ್ರಿಯಾಗಿದೆ. ಅಲ್ಲಾಹನು ಪ್ರವಾದಿ ಮುಹಮ್ಮದ್ ಸ.ಅ ರವರ ಮೇಲೆ ಪವಿತ್ರ ಕುರಾನ್ ಅವತೀರ್ಣಗೊಳಿಸಲು ಪ್ರಾರಂಭ ಮಾಡಿದ ರಾತ್ರಿಯಾಗಿದೆ. ರಕ್ಷೆ, ಅನುಗ್ರಹ, ಒಳಿತು ಹಾಗು ಪ್ರತಿಫಲದ ರಾತ್ರಿಯಾಗಿದೆ. ಲೈಲತುಲ್ ಖದ್ರ್ ಅಂದರೆ ಗೌರವದ ರಾತ್ರಿ, ಮಹೋನ್ನತ ರಾತ್ರಿ, ಶ್ರೇಷ್ಟತೆಯ ರಾತ್ರಿ ಎಂಬೀ ಅರ್ಥಗಳಿವೆ. ಆ ರಾತ್ರಿಯಲ್ಲಿ ಪ್ರಾರ್ಥನೆ ಸ್ವೀಕರಿಸಲ್ಪಡಲು, ಆಪತ್ತು, ಮುಸೀಬತ್ತು, ರೋಗ ರುಜಿನಗಳು ನೀಗಿ ಹೋಗಲು, ಸುಖ ಸಂತೋಷ, ಕ್ಷೇಮ, ಐಶ್ವರ್ಯ ಇಳಿಯಲು ಆಕಾಶದ ಬಾಗಿಲುಗಳು ತೆರೆಯಲಾಗುತ್ತದೆ. ಇದು ಲೈಲತುಲ್ ಖದ್ರಿನ ಮಹತ್ವವಾಗಿದೆ. ಈ ರಾತ್ರಿಯು ಅತ್ಯಂತ ಉನ್ನತ ರಾತ್ರಿಯಾಗಿದೆ.
ಇಮಾಮ್ ಅಬೂಬಕರಿನಿಲ್ ವರ್ರಾಖ್ ರಹಿಮಹುಲ್ಲಾಹು ಹೇಳುತ್ತಾರೆ : ""ನಿಶ್ಚಯವಾಗಿಯೂ ಈ ರಾತ್ರಿಯಲ್ಲಿ ಅತಿ ಮಹೋನ್ನತ ಗ್ರಂಥ ಪವಿತ್ರ ಕುರಾನ್ ಅತಿ ಮಹೋನ್ನತ ಮಲಕ್ ಜಿಬ್ರೀಲ್ ಅ.ಸ ರವರ ಮುಖಾಂತರ ಅತಿ ಮಹೋನ್ನತ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರ ಮೇಲೆ ಹಾಗು ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರ ಅತಿ ಮಹೋನ್ನತ ಸಮುದಾಯದ ಮೇಲೆ ಅವತೀರ್ಣವಾಯಿತು. ಈ ಕಾರಣದಿಂದಲೇ ಈ ರಾತ್ರಿಗೆ ಲೈಲತುಲ್ ಖದ್ರ್ ( ಅತಿ ಮಹೋನ್ನತ ರಾತ್ರಿ ) ಎಂಬ ಹೆಸರು ಬಂತು.
ಅಲ್ಲಾಹು ಪವಿತ್ರ ಕುರಾನಿನಲ್ಲಿ ತಿಳಿಸಿದ ಹಾಗೆ ""ಲೈಲತುಲ್ ಖದ್ರ್ ಸಾವಿರ ತಿಂಗಳುಗಳಿಗಿಂತ ಶ್ರೇಷ್ಟವಾಗಿದೆ"". ಸಾವಿರ ತಿಂಗಳು ಅಂದರೆ ಎಂಭತ್ತಮೂರು ವರುಷ ನಾಲ್ಕು ತಿಂಗಳು ಆಗುತ್ತದೆ. ಇದು ಇಹದಲ್ಲಿ ಜೀವಿಸುವ ಒಬ್ಬ ಮನುಷ್ಯನ ಒಟ್ಟಾರೆ ಆಯುಷ್ಯವಾಗಿದೆ. ಹೀಗೆ ನೋಡುವಾಗ ಲೈಲತುಲ್ ಖದರಿನ ಒಂದು ರಾತ್ರಿ ಒಬ್ಬ ಮನುಷ್ಯನ ಆಯುಷ್ಯಕ್ಕಿಂತಲೂ ಹೆಚ್ಚು ಶ್ರೇಷ್ಠವಾಗಿದೆ ಎಂದು ತಿಳಿಯಬಹುದು.
ಸಹೋದರಾ... ನಿಶ್ಚಯವಾಗಿಯೂ ಲೈಲತುಲ್ ಖದರಿನ ರಾತ್ರಿಗೆ ಅತ್ಯಂತ ಹೆಚ್ಚು ಮಹತ್ವವಿದೆ. ಅಲ್ಲಾಹನು ಅವನ ಪವಿತ್ರ ಕುರಾನಿನಲ್ಲಿ ಲೈಲತುಲ್ ಖದ್ರಿನ ವಿಶೇಷತೆಗಳನ್ನು ತಿಳಿಸುತ್ತಾನೆ. "" ನಿಶ್ಚಯವಾಗಿಯೂ ಲೈಲತುಲ್ ಖದರ್ ಬರ್ಕತ್ ( ಕ್ಷೇಮಾಭಿವ್ರದ್ಧಿ ) ನ ರಾತ್ರಿಯಾಗಿದೆ, ಅತ್ಯಂತ ಉನ್ನತ ರಾತ್ರಿಯಾಗಿದೆ, ಪವಿತ್ರ ಕುರಾನ್ ಅವತೀರ್ಣವಾದ ರಾತ್ರಿಯಾಗಿದೆ, ಸಾವಿರ ತಿಂಗಳುಗಳಿಗಿಂತ ಶ್ರೇಷ್ಠತೆ ಇರುವ ರಾತ್ರಿಯಾಗಿದೆ, ಮಲಕುಗಳು ಧರೆಗೆ ಇಳಿದು ಬರುವ ರಾತ್ರಿಯಾಗಿದೆ, ರಕ್ಷೆಯ ರಾತ್ರಿಯಾಗಿದೆ, ಫಜರ್ ನ ವೇಳೆಯ ತನಕ ಆ ರಾತ್ರಿಯು ನೀಳವಾಗಿರುತ್ತದೆ.""ಇದೆಲ್ಲವೂ ಅಲ್ಲಾಹನ ಪವಿತ್ರ ವಚನಗಳಿಂದ ತಿಳಿಯುವ ಕಾರ್ಯಗಳಾಗಿವೆ.

ಲೈಲತುಲ್ ಖದ್ರಿನ ಶ್ರೇಷ್ಟತೆ..

ನೆಬಿ ಸ.ಅ ಹೇಳಿದರು : ""ಯಾರಾದರೂ ಲೈಲತುಲ್ ಖದ್ರಿನ ರಾತ್ರಿ ದ್ರಢ ನಂಬಿಕೆಯೊಂದಿಗೆ ಹಾಗು ಪ್ರತಿಫಲಾಪೇಕ್ಷೆಯೊಂದಿಗೆ ಸುನ್ನತ್ ನಮಾಜು ಮಾಡಿದರೆ ಅವನ ಗತಕಾಲದ ಪಾಪಗಳನ್ನು ಮನ್ನಿಸಲಾಗುವುದು"" ( ವರದಿ : ಅಬೂಹುರೈರಾ ರ.ಅ ).
ಅಳ್ಳಹಾಕ್ ರಹಿಮಹುಲ್ಲಾಹ್ ಹೇಳುತ್ತಾರೆ "" ಲೈಲತುಲ್ ಖದ್ರಿನ ರಾತ್ರಿ ಅಲ್ಲಾಹನು ರಕ್ಷೆಯನ್ನು ಮಾತ್ರ ನೀಡುತ್ತಾನೆ, ಅಲ್ಲದ ರಾತ್ರಿಗಳಲ್ಲಿ ರಕ್ಷೆ ಮತ್ತು ಸಂಕಷ್ಟ ಎರಡನ್ನೂ ನೀಡುತ್ತಾನೆ""
ಮುಜಾಹಿದ್ ರಹಿಮಹುಲ್ಲಾಹ್ ಹೇಳುತ್ತಾರೆ ""ಲೈಲತುಲ್ ಖದ್ರಿನ ರಾತ್ರಿ ಶೈತಾನನಿಂದ ಕೆಡುಕು ಮತ್ತು ಉಪದ್ರವ ಉಂಟಾಗಲು ಸಾಧ್ಯವಿಲ್ಲ""

> ಲೈಲತುಲ್ ಖದ್ರಿನ ರಾತ್ರಿಯನ್ನು ಅಲ್ಲಾಹು ಗುಪ್ತವಾಗಿರಿಸಿದುದರ ರಹಸ್ಯಗಳು <

ಲೈಲತುಲ್ ಖದ್ರಿನ ರಾತ್ರಿಯ ವಿಚಾರದಲ್ಲಿ ವಿದ್ವಾಂಸರೆಡೆಯಲ್ಲಿ 23 ಅಭಿಪ್ರಾಯಗಳಿವೆ. ಲೈಲತುಲ್ ಖದ್ರ್ ರಮಳಾನ್ ತಿಂಗಳಲ್ಲಿಯಾಗಿದೆ, ರಮಳಾನ್ ತಿಂಗಳ ಅಂತಿಮ ಹತ್ತರಲ್ಲಿಯಾಗಿದೆ, ಅಂತಿಮ ಹತ್ತರ 21,23,25,27,29 ರ ರಾತ್ರಿಗಳಲ್ಲಿಯಾಗಿದೆ ಎಂಬುದು ಅವುಗಳಲ್ಲಿ ಮೂರು ಉನ್ನತ ಅಭಿಪ್ರಾಯಗಳು ಆಗಿದೆ. ಲೈಲತುಲ್ ಖದ್ರ್ ನ ಗೌಪ್ಯತೆಯಲ್ಲಿ ಹಲವಾರು ರಹಸ್ಯಗಳು, ತಂತ್ರಗಾರಿಕೆಗಳು ಅಡಗಿವೆ.ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

1- ಲೈಲತುಲ್ ಖದ್ರ್ ನಿರೀಕ್ಷಿಸುವ ಅಲ್ಲಾಹನ ದಾಸ ಎಲ್ಲಾ ರಾತ್ರಿಗಳಲ್ಲಿಯೂ ಅಲ್ಲಾಹನ ಆರಾಧನೆಯಲ್ಲಿ ಶ್ರಮಿಸಲು ಲೈಲತುಲ್ ಖದ್ರನ್ನು ಗುಪ್ತವಾಗಿರಿಸಲಾಯಿತು.ಇದೇ ಕಾರಣದಿಂದ ಪೂರ್ವ ಕಾಲ ಸಜ್ಜನರು ಎಲ್ಲಾ ರಾತ್ರಿಗಳಲ್ಲಿಯೂ ಅಲ್ಲಾಹನ ಇಬಾದತ್ ನಲ್ಲಿ ತಲ್ಲೀನರಾಗುತ್ತಿದ್ದರು.

2- ಹಲವು ಒಳಿತುಗಳು ನಿರ್ವಹಿಸಲು ಆಗಿದೆ. ದ್ಸಿಕ್ರ್, ಇಸ್ತಿಗ್ಫಾರ್, ಸ್ವಲಾತ್, ದುಆ ಮುಂತಾದ ಹಲವು ಒಳಿತುಗಳಲ್ಲಿ ಏರ್ಪಡಲು ಸಮಯವಕಾಶ ಒದಗಿಸಿದಂತಾಗುತ್ತದೆ.

3- ಇಮಾಮ್ ಫಖ್ರುರ್ರಾಝಿ ರಹಿಮಹುಲ್ಲಾಹ್ ತನ್ನ ತಫ್ಸೀರ್ ನಲ್ಲಿ ವಿವರಿಸುತ್ತಾರೆ. "" ಇತರ ಹಲವು ಕಾರ್ಯಗಳಲ್ಲಿ ಅಲ್ಲಾಹನು ಗೌಪ್ಯತೆ ಕಾಪಾಡಿದ ಹಾಗೆ ಲೈಲತುಲ್ ಖದ್ರಿನ ರಾತ್ರಿಯನ್ನು ಗುಪ್ತವಾಗಿರಿಸಿದನು. ಅಲ್ಲಾಹನ ದಾಸ ಸರ್ವ ಇಬಾದತುಗಳಲ್ಲಿ ಹಂಬಲಿಸುವವನಾಗಲು ಅಲ್ಲಾಹನಿಗೆ ಇಬಾದತ್ ನಿರ್ವಹಿಸಿದರೆ ಲಭಿಸುವ ಅಲ್ಲಾಹನ ತ್ರಪ್ತಿಯನ್ನು ಗೌಪ್ಯವಾಗಿರಿಸಿದನು. ಸರ್ವ ಪಾಪಗಳಿಂದ ಮುಕ್ತವಾಗಿ ಜೀವಿಸಲು ಅಲ್ಲಾಹನ ದಾಸ ಒಂದು ತಪ್ಪು ಮಾಡಿದರೆ ಅದರ ಶಿಕ್ಷೆಯನ್ನು ಅಲ್ಲಾಹನು ಗೌಪ್ಯವಾಗಿರಿಸಿದನು. ದುಆದಲ್ಲಿ ಇನ್ನಷ್ಟು ಶಕ್ತಿ ತುಂಬಿಸಲು ದುಆದಲ್ಲಿ ಅಲ್ಲಾಹು ಉತ್ತರ ನೀಡುವಿಕೆಯನ್ನು ಗೌಪ್ಯವಾಗಿರಿಸಿದನು. ಅಲ್ಲಾಹನ ಎಲ್ಲಾ ನಾಮಗಳನ್ನು ಗೌರವಿಸಲು ಅವನ ಪವಿತ್ರ ನಾಮವಾದ ಇಸ್ಮುಲ್ ಅಹ್ಲಂ ಯವುದೆಂದು ತಿಳಿಸದೆ ಗೌಪ್ಯವಾಗಿರಿಸಿದನು.   ಇದೇ ರೀತಿ ರಮಳಾನಿನ ಎಲ್ಲಾ ರಾತ್ರಿಗಳನ್ನು ಅಲ್ಲಾಹನ ದಾಸ ಗೌರವಿಸಲು ಲೈಲತುಲ್ ಖದ್ರಿನ ರಾತ್ರಿಯನ್ನು ಅಲ್ಲಾಹು ಗೌಪ್ಯವಾಗಿರಿಸಿದನು. ಯಾಕೆಂದರೆ ಒಬ್ಬ ದಾಸನಿಗೆ ರಮಳಾನಿನ ಯಾವ ರಾತ್ರಿ ಲೈಲತುಲ್ ಖದ್ರ್ ಎಂದು ತಿಳಿಯದಾದರೆ ಅವನು ರಮಳಾನಿನ ಎಲ್ಲಾ ರಾತ್ರಿಗಳಲ್ಲಿಯೂ ಲೈಲತುಲ್ ಖದ್ರನ್ನು ನಿರೀಕ್ಷಿಸಿ ಅದರ ಶ್ರೇಷ್ಟತೆಯನ್ನು ಮನಗಂಡು ಆರಾಧನೆಯಲ್ಲಿ ತಲ್ಲೀನನಾಗುವನು. ಆವಾಗ ಲೈಲತುಲ್ ಖದ್ರ್ ನಿರೀಕ್ಷಿಸಿ ಆರಾಧನೆ ನಿರ್ವಹಿಸಿದ ಮುಸ್ಲಿಮನಿಗೆ ಲೈಲತುಲ್ ಖದ್ರಿನ ಪ್ರತಿಫಲ ಲಭಿಸುವುದರಲ್ಲಿ ಸಂಶಯವಿಲ್ಲ""
ಈ ಕುರಿತು ಅಲ್ಲಾಹನು ತನ್ನ ಮಲಕುಗಳೊಂದಿಗೆ ತನ್ನ ದಾಸರ ಬಗ್ಗೆ ಪ್ರಶಂಸಿಸುವನು. ""ಮನುಷ್ಯರ ಸ್ರಷ್ಟಿ ಮಾಡುವ ಸಂದರ್ಭದಲ್ಲಿ ನೀವು ಹೇಳಿದಿರಿ. ಮನುಷ್ಯರು ಭೂಮಿಯಲ್ಲಿ ಕೆಡುಕುಗಳನ್ನುಂಟು ಮಾಡುವರು, ರಕ್ತ ಹರಿಸುವರು ಎಂದು. ಈವಾಗ ನೋಡಿದಿರಾ.. ಯಾವ ರಾತ್ರಿ ಲೈಲತುಲ್ ಖದ್ರ್ ಎಂದು ತಿಳಿಯದೇನೇ ಅವರು ಇಬಾದತ್ ನಿರ್ವಹಿಸುತ್ತಿದ್ದಾರೆ. ಅತಿ ಹೆಚ್ಚು ಶ್ರಮ ಪಡುತ್ತಿದ್ದಾರೆ. ಇನ್ನು ಅವರಿಗೆ ಲೈಲತುಲ್ ಖದ್ರ್ ಇಂತಿಂತಹ ರಾತ್ರಿ ಎಂದು ತಿಳಿಸಿಕೊಟ್ಟಿದ್ದರೆ ಅವರ ಆವೇಶ ಹೇಗಿರಬಹುದು. ಅವರು ಎಷ್ಟೊಂದು ಉತ್ಸಾಹದಿಂದ ಇಬಾದತ್ ಮಾಡುತ್ತಿದ್ದರು.

4- ಅಲ್ಲಾಹನು ಹೇಳುತ್ತಾನೆ. ""ಲೈಲತುಲ್ ಖದ್ರಿನ ರಾತ್ರಿ ಯಾವಾಗ ಎಂದು ತಿಳಿಯಲ್ಪಟ್ಟು ಅಂದಿನ ರಾತ್ರಿ ನಿನ್ನನ್ನು ಕೆಡುಕಿನತ್ತ ನಿನ್ನ ದೇಹೇಚ್ಚೆ ಕೊಂಡು ಹೋದರೆ ನೀನು ಲೈಲತುಲ್ ಖದ್ರಿನ ರಾತ್ರಿಯನ್ನು ಅರಿತು ಪಾಪ ಮಾಡಿದ ಹಾಗಾಗುತ್ತೆ. ಲೈಲತುಲ್ ಖದ್ರಿನ ರಾತ್ರಿಯನ್ನು ತಿಳಿಯದೆ ಕೆಡುಕು ಮಾಡುವುದಕ್ಕಿಂತ ತಿಳಿದು ಕೆಡುಕು ಮಾಡುವುದು ಘೋರ ಪಾಪವಾಗಿದೆ. ಆದುದರಿಂದ ಲೈಲತುಲ್ ಖದ್ರಿನ ರಾತ್ರಿಯನ್ನು ನಾನು ಗೌಪ್ಯವಾಗಿರಿಸಿದೆ""
ತನ್ನ ದಾಸರ ಮೇಲೆ ಅಲ್ಲಾಹನ ಕರುಣೆ ಅಪಾರವಾದುದಾಗಿದೆ. ಲೈಲತುಲ್ ಖದ್ರಿನ ರಾತ್ರಿಯೆಂದು ತಿಳಿದು ಅಂದಿನ ರಾತ್ರಿ ನೀನು ಒಳಿತು ಕಾರ್ಯಗಳು ನಿರ್ವಹಿಸಿದರೆ ಸಾವಿರ ತಿಂಗಳು ಒಳಿತು ನಿರ್ವಹಿಸಿದ ಪ್ರತಿಫಲವಾಗಿದೆ. ಆದರೆ ಲೈಲತುಲ್ ಖದ್ರಿನ ರಾತ್ರಿಯೆಂದು ತಿಳಿದು ಕೆಡುಕು ಮಾಡಿದರೂ  ಸಾವಿರ ತಿಂಗಳು ಕೆಡುಕು ಮಾಡಿದ ಶಿಕ್ಷೆಯು ಲಭಿಸುತ್ತದೆ. ಆದುದರಿಂದ ಲೈಲತುಲ್ ಖದ್ರಿನ ರಾತ್ರಿಯನ್ನು ಗೌಪ್ಯವಾಗಿರಿಸಿ ಶಿಕ್ಷೆಯನ್ನು ತಡೆಯುವುದು ಪ್ರತಿಫಲ ಪ್ರಾಪ್ತಿಗಿಂತಲೂ ಅತ್ಯಂತ ಉತ್ತಮವಾಗಿದೆ..

ಲೈಲತುಲ್ ಖದ್ರಿನ ರಾತ್ರಿಯನ್ನು ಧನ್ಯಗೊಳಿಸುವುದು ಹೇಗೆ..

ಲೈಲತುಲ್ ಖದ್ರ್ ಮುಸ್ಲಿಮನಿಗೆ ಲಭಿಸಿದ ಮಹೋನ್ನತ ಸೌಭಾಗ್ಯವಾಗಿದೆ ಎಂದು ತಿಳಿಯುವುದು ಆತನ ಮೇಲೆ ಅನಿವಾರ್ಯವಾಗಿದೆ. ಕಾರಣ ಮುಂದಿನ ವರ್ಷದ ಲೈಲತುಲ್ ಖದ್ರಿನ ಆಗಮನವಾಗುವಾಗ ಆತ ಜೀವಿಸಿರುವನೋ ಅಲ್ಲ ಮರಣಹೊಂದಿರುವನೋ ಎಂದು ತಿಳಿದಿರುವುದಿಲ್ಲ. ಆದುದರಿಂದ ಸತ್ಯ ವಿಶ್ವಾಸಿಯು ಲೈಲತುಲ್ ಖದ್ರನ್ನು ನಿರೀಕ್ಷಿಸಿ ಇಸ್ತಿಗ್ಫಾರ್, ತೌಬಾ, ದುವಾ ಹೆಚ್ಚಿಸಬೇಕು, ದ್ಸಿಕ್ರ್, ತಸ್ಬೀಹ್ ಹಾಗು ನೆಬಿ ಸ.ಅ ರವರ ಮೇಲೆ ಸ್ವಲಾತ್ ಅಧಿಕಗೊಳಿಸಬೇಕು. ಅಲ್ಲಾಹು ಸತ್ಯ ವಿಶ್ವಾಸಿಗೆ ನೀಡಿದ ಸಂಪತ್ತಿನಲ್ಲಿ ಆತ ದಾನಧರ್ಮ ನೀಡಬೇಕು. ಪಾಪಗಳಿಂದ ಆತ ಅವನ ಅಂಗಾಂಗಗಳನ್ನು ಮುಕ್ತವಾಗಿರಿಸಬೇಕು. ತಹಜ್ಜುದ್ ನಮಾಜ್ ನಿರ್ವಹಿಸಬೇಕು. ಅಲ್ಲಾಹನ ಆರಾಧನೆಯಲ್ಲಿ ರಾತ್ರಿ ಜೀವಂತಿಕೆಗೊಳಿಸಬೇಕು. ಅಂದು ಅತ ಹೆಚ್ಚಾಗಿ ದುಆ ಮಾಡಬೇಕಾದುದು ಪಾಪ ವಿಮೋಚನೆಗೆ ಆಗಿರಬೇಕು.
ಆಯಿಶ ರ.ಅ ನೆಬಿ ಸ.ಅ ರವರೊಂದಿಗೆ ಕೇಳಿದರು : ಅಲ್ಲಾಹನ ಪ್ರವಾದಿಯವರೇ.. ಲೈಲತುಲ್ ಖದ್ರಿನ ರಾತ್ರಿ ನಾನು ಯಾವ ದುಆ ನಿರ್ವಹಿಸಬೇಕು. ಆಗ ನೆಬಿ ಸ.ಅ ಈ ಕೆಳಗಿನ ದುಆ ನಿರ್ವಹಿಸಲು ವಸಿಯ್ಯತ್ ಮಾಡಿದರು :
( اللهم إنك عفو  تحب العفو فأعف عنا )

ಅಲ್ಲಾಹುಮ್ಮ ಇನ್ನಕ ಅಫುವ್ವುನ್ ತುಹಿಬ್ಬುಲ್ ಅಫ್ವ ಫಹ್ಫು ಅನ್ನಾ..

ಲೈಲತುಲ್ ಖದ್ರ್ ನಿರೀಕ್ಷಿತ ರಾತ್ರಿಯ ನಮಾಜಿನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲದವನು ಹೆಚ್ಚು ಪೃತಿಫಲ ಲಭಿಸುವ ಸೂರತ್ ಗಳು ಅಥವಾ ಆಯತ್ ಗಳು ಓದಬೇಕು. ಉದಾಹರಣೆಗೆ ಕುರಾನಿನ ಆಯತುಗಳಲ್ಲಿ ಅತ್ಯಂತ ಶ್ರೇಷ್ಟ ಆಯತ್ ಆದ ಆಯತುಲ್ ಕುರ್ಸಿಯ್ಯ್,
ಅಲ್ ಬಖರ ಸೂರತಿನ ಅಂತಿಮ 3 ಆಯತುಗಳು, ಯಾರಾದರೂ ಆಯತುಲ್ ಕುರ್ಸಿಯ್ಯ್ ಮತ್ತು ಅಲ್ ಬಖರ ಸೂರತಿನ ಅಂತಿಮ ಆಯತುಗಳು ಒಂದು ರಾತ್ರಿ ಓದಿದರೆ ಅಂದು ಕಾವಲು ಆಗಿ ಆ ಆಯತುಗಳೇ ಸಾಕು.
ಕುರಾನಿನ ಅರ್ಧ ಭಾಗದಷ್ಟು ಓದಿದ ಪ್ರತಿಫಲ ಲಭಿಸುವ '' ಝಿಲ್ ಝಾಲ್  '' ಸೂರತ್,
ಕುರಾನಿನ ನಾಲ್ಕನೇ ಒಂದರಷ್ಟು ಓದಿದ ಪ್ರತಿಫಲ ಸಿಗುವ ಕಾಫಿರೂನ ಸೂರತ್,
ಕುರಾನಿನ ಮೂರನೇ ಒಂದರಷ್ಟು ಓದಿದ ಪ್ರತಿಫಲ ಲಭಿಸುವ ಇಖ್ಲಾಸ್ ಸೂರತ್,
ಕುರಾನಿನ ಹ್ರದಯವಾದ ಮತ್ತು ಯಾವ ಉದ್ಧೇಶಕ್ಕಾಗಿ ಓದುತ್ತೇವೆಯೋ ಅದು ಈಡೇರಲ್ಪಡುವ ಯಾಸೀನ್ ಸೂರತ್ ಮುಂತಾದ ಹೆಚ್ಚು ಪ್ರತಿಫಲ ಲಭಿಸುವ ಆಯತುಗಳು ಮತ್ತು ಸೂರತುಗಳು ಲೈಲತುಲ್ ಖದರ್ ನಿರೀಕ್ಷಿತ ರಾತ್ರಿ ಓದಬೇಕು.
ಯಾರಾದರೂ  لا اله الا الله الحليم الكريم , سبحان الله رب السماوات السبع ورب العرش العظيم

ಎಂದು ಮೂರುಸಲ ಹೇಳಿದರೆ ಲೈಲತುಲ್ ಖದರಿನ ಭಾಗ್ಯ ಲಭಿಸಿದಂತೆ ಆಗಿದೆ ಎಂಬ ವರದಿಯಿದೆ. ಆದುದರಿಂದ ಈ ದ್ಸಿಕ್ರನ್ನು ಎಲ್ಲಾ ದಿವಸವೂ ಕೊಂಡು ಬರಬೇಕು.

>>>>>>>>>>

ತಪ್ಪುಗಳೇನಾದರೂ ಇದ್ದಲ್ಲಿ ತಿಳಿಸಿ >>>>>>

Tuesday, 13 June 2017

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಜಾನ್ ಭಾಗ - 04

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಜಾನ್

ಭಾಗ - 04

ರಮಳಾನ್ ಉಪವಾಸದ ನಿಯ್ಯತ್

نويت صوم غد عن أداء فرض رمضان هذه السنة لله تعالى

ನವಯ್ತು ಸೌಮ ಗದಿನ್ ಅನ್ ಅದಾಇ ಫರ್ಳಿ ರಮಳಾನಿ ಹಾದ್ಸಿಹಿ ಸ್ಸನಥಿ ಲಿಲ್ಲಾಹಿ ತಆಲಾ

ಅರ್ಥ : ಈ ವರ್ಷದ ಅದಾಹ್ ಆದ ಕಡ್ಡಾಯವಾದ ರಮಳಾನ್ ಮಾಸದ ನಾಳೆಯ ಉಪವಾಸವನ್ನು ಅಲ್ಲಾಹನಿಗಾಗಿ ಅನುಷ್ಠಿಸಲು ನಾನು ನಿಯ್ಯತ್ ಮಾಡಿದೆ.

ಇಫ್ತಾರ್ ಬಳಿಕ

أللهم لك صمت وعلى رزقك أفطرت.  ذهب الظمأ وابتلت العروق وثبت الأجر إن شاء الله

ಅಲ್ಲಾಹುಮ್ಮ ಲಕ ಸುಮ್ತು ವಅಲಾ ರಿಝ್ಖಿಕ ಅಫ್ತರ್ತು. ದ್ಸಹಬ ಳ್ಳಮವು ವಬ್ತಲ್ಲತಿಲ್ ಉರೂಖು ವಸಬತಲ್ ಅಜ್ರು ಇಂಶಾ ಅಲ್ಲಾಹ್..

ಅತ್ತಾಳದ ಬಳಿಕ ಏಳು ಸಲ ಹೇಳಬೇಕಾದ ಝಿಕ್ರ್

ألله لاإله إلا هو الحي القيوم القائم على كل نفس بما كسبت

ಅಲ್ಲಾಹು ಲಾಇಲಾಹ ಇಲ್ಲಾ ಹುವಲ್ ಹಯ್ಯುಲ್ ಖಯ್ಯೂಮ್ ಅಲ್ ಖಾಯಿಮು ಅಲಾ ಕುಲ್ಲಿ ನಫ್ಸಿನ್ ಬಿಮಾ ಕಸಬತ್

ಐದು ವಕ್ತ್ ನಮಾಝ್ ನಂತರದ ದುಅ

اَللَّهُمَّ اجْعَلْ هَذَا الشَّهْرَ الشَّرِيفَ الْعَظِيمَ شَاهِدًا لَنَا لآ شَاهِدًا عَلَيْنَا وَاجْعَلْهُ حُجَّةً لَنَا لاَ حُجَّةً عَلَيْنَا۞ اَللَّهُمَّ اعْتِقْ رِقَابَنَا وَرِقَابَ آبَائِنَا وَأُمَّهَاتِنَا وَمَشَائِخَنَا وَأَسَاتِيذِنَا مِنَ الدُّيُونِ وَالْمَظَالِمِ وَالنَّارِ۞

ಮುಂದುವರಿಯುವುದು ಇಂಶಾ ಅಲ್ಲಾಹ್

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಝಾನ್.. ಭಾಗ 03

ಸಕಲ ಸುಖಾಡಂಭರಗಳಿಂದ ತುಂಬಿಸಲ್ಪಟ್ಟ ಸ್ವರ್ಗೋದ್ಯಾನವನ್ನು ಜಗತ್ತಿನ ಸರ್ವ ಸತ್ಯ ವಿಶ್ವಾಸಿಗಳು ಆಶಿಸುತ್ತಾರೆ. ಇಹಲೋಕದಲ್ಲಿ ಮನುಷ್ಯನ ಕಣ್ಣು ಕಂಡಿರದ, ಮನುಷ್ಯನ ಮನದಲ್ಲಿ ಊಹಿಸಲಾಗದ ವಸ್ತುಗಳು ಸ್ವರ್ಗದಲ್ಲಿದೆ. ಸ್ವರ್ಗವನ್ನು ಆಶಿಸದವರು ಯಾರೂ ಇರಲಿಕ್ಕಿಲ್ಲ. ಅದೇ ಸ್ವರ್ಗವು ತನ್ನ ಒಡಲು ಸೇರಿಸಲು ನಾಲ್ಕು ವಿಭಾಗ ಜನರನ್ನು ಕಾತರದಿಂದ ಕಾಯುತ್ತಿದೆ. ಆ ನಾಲ್ಕು ವಿಭಾಗಗಳಲ್ಲಿ ಒಂದು ವಿಭಾಗವಾಗಿದೆ ರಮಳಾನ್ ತಿಂಗಳಲ್ಲಿ ಉಪವಾಸ ಆಚರಿಸುವವರು.
ಹೀಗೆ ರಮಳಾನ್ ತಿಂಗಳ ಮಹತ್ವ ಅಪಾರವಾದುದು. ನೆಬಿ ಸ.ಅ ಹೇಳಿದರು : "" ಯಾರಾದರೂ ಒಬ್ಬ ಮನುಷ್ಯನು ರಮಳಾನ್ ತಿಂಗಳಲ್ಲಿ ದ್ರಢ ವಿಶ್ವಾಸ ಹಾಗು ಪ್ರತಿಫಲಾಪೇಕ್ಷೆಯಿಂದ ಉಪವಾಸ ಆಚರಿಸಿದರೆ ಅವನ ಗತ ಕಾಲದ ಪಾಪಗಳನ್ನು ಮನ್ನಿಸಲಾಗುತ್ತದೆ.
ರಮಳಾನ್ ರಹ್ಮತಿನ ತಿಂಗಳು, ಮಗ್ಫಿರತಿನ ತಿಂಗಳು,ನರಕದಿಂದ ವಿಮೋಚನೆ ಲಭಿಸುವ ತಿಂಗಳು. ಸ್ವರ್ಗ ಪ್ರಾಪ್ತಿಯ ತಿಂಗಳು. ಆದುದರಿಂದ ರಮಳಾನ್ ತಿಂಗಳಿನಲ್ಲಿ ಕೆಲವೊಂದು ವಿಶೇಷ ಪ್ರಾರ್ಥನೆಗಳಿವೆ. ರಮಳಾನಿನಲ್ಲಿ ನಿರಂತರ ಹೇಳಬೇಕಾದ ಪ್ರಾರ್ಥನೆ :

أشهد أن لاإله إلاالله أستغفرالله أللهم إني أسألك الجنة وأعوذ بك من النار

' ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹ್ ಅಸ್ತಗ್ಫಿರುಲ್ಲಾಹ್ ಅಲ್ಲಾಹುಮ್ಮ ಇನ್ನೀ ಅಸ್ ಅಲುಕಲ್ ಜನ್ನತ ವಅಊದ್ಸು ಬಿಕ ಮಿನ ನ್ನಾರ್ '

ಅರ್ಥ : ಅಲ್ಲಾಹನಲ್ಲದೆ ಬೇರೆ ಯಾರೂ ಆರಾಧ್ಯನಿಲ್ಲ ಎಂದು ನಾನು ಸಾಕ್ಷ್ಯ ವಹಿಸುತ್ತೇನೆ. ನಾನು ಅಲ್ಲಾಹನೊಂದಿಗೆ ಪಾಪ ವಿಮೋಚನೆ ಬೇಡುತ್ತೇನೆ. ಅಲ್ಲಾಹನೇ, ನಾನು ನಿನ್ನಲ್ಲಿ ಸ್ವರ್ಗವನ್ನು ಬೇಡುವೆನು. ನಾನು ನಿನ್ನೊಂದಿಗೆ ನರಕದಿಂದ ರಕ್ಷೆ ಯಾಚಿಸುವೆನು.

ರಮಳಾನಿನ ಪ್ರಥಮ ಹತ್ತು ದಿನಗಳು ರಹ್ಮತಿನ ಹತ್ತು ಆಗಿದೆ. ಅಲ್ಲಾಹನ ಅಪಾರ ಅನುಗ್ರಹಗಳು ವರ್ಷಿಸುವ ಹತ್ತು ಆಗಿದೆ. ಈ ಹತ್ತರಲ್ಲಿ ಅಲ್ಲಾಹನೊಂದಿಗೆ ರಹ್ಮತ್ ಬೇಡುವ ಈ ಪ್ರಾರ್ಥನೆ ನಡೆಸುತ್ತಿರಬೇಕು.

أللهم ارحمني يا أرحم الراحمين

ಅಲ್ಲಾಹುಮ್ಮ ರ್ಹಮ್ ನೀ ಯಾ ಅರ್ಹಮರ್ರಾಹಿಮೀನ್.

ಅರ್ಥ : ಪರಮ ದಯಾಳು ಆದ ಅಲ್ಲಾಹನೇ ನನಗೆ ನೀನು ಕರುಣೆ ತೋರು.

ರಮಳಾನಿನ ದ್ವಿತೀಯ ಹತ್ತು ಮಗ್ಫಿರತಿನ ಹತ್ತು ಆಗಿದೆ. ಪಾಪಗಳನ್ನು ಮನ್ನಿಸಲ್ಪಡುವ ಹತ್ತು. ಈ ಹತ್ತರಲ್ಲಿ ಈ ಕೆಳಗಿನ ದುವಾ ನಡೆಸುತ್ತಿರಬೇಕು.

أللهم اغفر لي ذنوبي يا رب العالمين

ಅಲ್ಲಾಹುಮ್ಮ ಗ್ಫಿರ್ ಲೀ ದ್ಸುನೂಬೀ ಯಾ ರಬ್ಬಲ್ ಆಲಮೀನ್

ಲೋಕ ಪರಿಪಾಲಕನಾದ ಅಲ್ಲಾಹನೇ ನನ್ನ ಪಾಪಗಳನ್ನು ಕ್ಷಮಿಸು.

ರಮಳಾನ್ ತಿಂಗಳ ಕೊನೆಯ ಹತ್ತು ದಿನಗಳು ನರಕದಿಂದ ವಿಮೋಚಿಸಲ್ಪಡುವ ಮತ್ತು ಸ್ವರ್ಗ ಪ್ರವೇಶ ನೀಡಲ್ಪಡುವ ದಿನಗಳಾಗಿವೆ. ಈ ಹತ್ತರಲ್ಲಿ ಅಲ್ಲಾಹನು ತನ್ನ ಪಾಪಿಗಳಾದ ದಾಸರನ್ನು ನರಕದಿಂದ ವಿಮೋಚಿಸಿ ಸ್ವರ್ಗ ನೀಡುತ್ತಾನೆ. ಅದೇ ರೀತಿ ಅಪಾರ ಪ್ರಮಾಣದಲ್ಲಿ ಸತ್ಯ ವಿಶ್ವಾಸಿಗಳು ಸ್ವರ್ಗ ಪ್ರಾಪ್ತರಾಗುವ ಹತ್ತು ಆಗಿದೆ. ಆದುದರಿಂದ ಕೊನೆಯ ಹತ್ತರಲ್ಲಿ ಈ ಕೆಳಗಿನ ಪ್ರಾರ್ಥನೆ ನಡೆಸುತ್ತಿಬೇಕು.

أللهم أعتقني من النار وأدخلني الجنة يا رب العالمين

ಅಲ್ಲಾಹುಮ್ಮ ಅ ಅ್ ತಿಖ್ ನೀ ಮಿನ ನ್ನಾರ್ ವಅದ್ ಖಿಲ್ ನಿಲ್ ಜನ್ನತ ಯಾ ರಬ್ಬಲ್ ಆಲಮೀನ್.

ಅರ್ಥ : ಅಲ್ಲಾಹನೇ ನನ್ನನ್ನು ನರಕದಿಂದ ವಿಮೋಚಿಸು. ನನಗೆ ಸ್ವರ್ಗವನ್ನು ನೀಡು.

ಈ ಕೆಳಗಿನ ಪ್ರಾರ್ಥನೆಯನ್ನೂ ಕೊನೆಯ ಹತ್ತರಲ್ಲಿ ನಡೆಸುತ್ತಿರಬೇಕು.

أللهم إنك عفو تحب العفو فاعف عنى

ಅಲ್ಲಾಹುಮ್ಮ ಇನ್ನಕ ಅಫುವ್ವುನ್ ತುಹಿಬ್ಬುಲ್ ಅಫ್ವ ಫಹ್ಫು ಅನ್ನೀ

ಅರ್ಥ : ಅಲ್ಲಾಹನೇ ನಿಶ್ಚಯವಾಗಿಯೂ ನೀನು ಕ್ಷಮಾಶೀಲನಾಗಿರುವಿ. ಕ್ಷಮಾಶೀಲತೆಯನ್ನು ನೀನು ಇಷ್ಟ ಪಡುವೆ. ಆದುದರಿಂದ ನನಗೆ ನೀನು ಕ್ಷಮೆ ನೀಡು.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...