Thursday, 9 May 2019

ಕಣ್ಮರೆಯಾದ ಉಳ್ಳಾಲದ ಮತ್ತೊಂದು ಮುತ್ತು

*ಕಣ್ಮರೆಯಾದ ಉಳ್ಳಾಲದ ಮತ್ತೊಂದು ಮುತ್ತು*

ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರಾರಂಭವಾದಂದಿನಿಂದ ತನ್ನ ಆಯುಷ್ಯದ ಕೊನೆಯವರೆಗೂ ಸೇವೆಗೈಯ್ಯುತ್ತಿದ್ದ ಅಗಾಧ ಪಾಂಡಿತ್ಯದ ಒಡೆಯರಾದ ನಮ್ಮೆಲ್ಲರ ಪ್ರೀತಿಯ ಶೈಖುನಾ ಬಾವಾ ಉಸ್ತಾದ್ ರವರು ಇದ್ದಿನಬ್ಬ ಹಾಗು ಖದೀಜಃ ದಂಪತಿಗಳ ಪುತ್ರನಾಗಿ 1942 ರಲ್ಲಿ ಉಳ್ಳಾಲದಲ್ಲಿ ಜನ್ಮ ತಾಳಿದರು. ಜನ್ಮ ನಾಡಿನಲ್ಲೇ ಪ್ರಾಥಮಿಕ ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದ ಅಹ್ಮದ್ ಬಾವಾ ಉಸ್ತಾದರು ಶೈಖುನಾ ತಾಜುಲ್ ಉಲಮಾ ಖ.ಸಿ ರವರ ಬಳಿ ಸರಿ ಸುಮಾರು ಹನ್ನೆರಡು ವರ್ಷಗಳ ಕಾಲ ಉಳ್ಳಾಲದ ದರ್ಸಿನಲ್ಲಿ ವಿದ್ಯಾರ್ಜನೆ ಪಡೆದರು. ನಂತರ ಉನ್ನಂತ ವ್ಯಾಸಂಗಕ್ಕಾಗಿ ವೆಲ್ಲೂರು ಬಾಖಿಯಾತುಸ್ಸಾಲಿಹಾತಿಗೆ ತೆರಳಿ ಬಾಖವಿ ಬಿರುದುದಾರಿಯಾಗಿ ಹೊರಬಂದು, ತದನಂತರ ದಯೂಬಂದ್ ನಿಂದ ಖಾಸಿಮಿ ಬಿರುದನ್ನೂ ಪಡೆದರು. ಧಾರ್ಮಿಕ ವಿಜ್ಞಾನದ ವಿವಿಧ ಮಜಲುಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಉಸ್ತಾದರು ಬಜಪೆ, ಕನ್ನಂಗಾರ್, ಮೊಗ್ರಾಲ್ ಮೊದಲಾದ ಸ್ಥಳಗಳಲ್ಲಿ ಮುದರ್ರಿಸರಾಗಿ ಕಾರ್ಯ ನಿರ್ವಹಿಸಿ ತನ್ನ ಅರಿವನ್ನು ವಿದ್ಯಾದಾಹಿಗಳಿಗೆ ಪಸರಿಸಿ, ಬಳಿಕ ತನ್ನ ಹುಟ್ಟೂರಾದ ಉಳ್ಳಾಲದಲ್ಲಿ ಮುದರ್ರಿಸಾಗಿ ನೇಮಕಗೊಂಡರು. ಸುದೀರ್ಘ ಆರು ದಶಕಗಳ ಕಾಲ ಇಸ್ಲಾಮಿನ ಸುಜ್ಞಾನದ ಪ್ರಭೆ ಹರಡಿಸಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿದ ಬಾವಾ ಉಸ್ತಾದರು ಜ್ಞಾನ ಭಂಡಾರದ ಎಲ್ಲಾ ವಿಷಯಗಳ ಸರ್ವ ಮಜಲುಗಳಲ್ಲಿಯೂ ಅಗ್ರಗಣ್ಯ ವಿದ್ವಾಂಸರಾಗಿದ್ದರು.ಮಾತ್ರವಲ್ಲ ತನ್ನಲ್ಲಿರುವ ವಿದ್ಯೆಯನ್ನು ಇತರರಿಗೆ ಪಸರಿಸಲು ತುಂಬಾನೇ ಉತ್ಸುಕರಾಗಿದ್ದರು. ತನ್ನಿಂದ ವಿಜ್ಞಾನದ ದಾಹವನ್ನು ನೀಗಿಸಿದ ಅಪಾರ ವಿದ್ವಾಂಸರು ಕರ್ನಾಟಕ ಮತ್ತು ಕೇರಳದ ವಿವಿಧ ಊರುಗಳಲ್ಲಿದ್ದಾರೆ. ಬಾವಾ ಉಸ್ತಾದರ ನಿಮಿತ್ತ ಇಸ್ಲಾಮಿನ ಸುಂದರ ಆಶಯಾದರ್ಶಗಳು ವಿವಿಧ ಊರುಗಳಲ್ಲಿ ಹರಡಿದವು.ಪ್ರಗಲ್ಭ ವಿದ್ವಾಂಸರುಗಳ ಸ್ರಷ್ಟಿಯಾಯಿತು.ಅನ್ಯಾಯ,ಅಕ್ರಮ,ಅಜ್ಞಾನದ ಇರುಳು ಇಲ್ಲವಾಯಿತು.

ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶ ನಾಯಕರಾಗಿ ಮುಸ್ಲಿಂ ಸಮೂಹಕ್ಕೆ ಇಸ್ಲಾಮಿನ ನೈಜ ಸುನ್ನೀ ಆಶಯಾದರ್ಶಗಳನ್ನು ತಿಳಿಸಿಕೊಡುತ್ತಾ ಮುಂದೆ ಸಾಗಿದರು. ಸುನ್ನತ್ ಜಮಾಅತಿನ ನೈಜ ವಿಶ್ವಾಸಾಚಾರಗಳನ್ನು ತಿಳಿಸಿ ಇಸ್ಲಾಮನ್ನು ಭದ್ರಗೊಳಿಸಿದರು. ನಕಲಿ ತ್ವರೀಕತ್ ಗಾರರ ವಿರುದ್ಧ ಗುಡುಗಿದರು. ಧಾರ್ಮಿಕ ವಿಷಯದಲ್ಲಿ ಯಾವುದೇ ಆಕ್ಷೇಪ,ಆರೋಪಗಳಿಗೆ ಎದೆಗುಂದದೇ ಮುಂದೆ ಸಾಗಿದರು.

ಹಿಜಿರಾ ವರ್ಷ 1440 ರಮಳಾನ್ 02 ಮಂಗಳವಾರ, ಇಸವಿ ವರ್ಷ 2019 ಮೇ ತಿಂಗಳ ಏಳರಂದು ವಫಾತಾದರು. *ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್* ಬಾವಾ ಉಸ್ತಾದರ ಮರಣ ವಾರ್ತೆ ಹರಡುತ್ತಿದ್ದಂತೆ ಜಗತ್ತಿನಾದ್ಯಂತವಿರುವ ಸುನ್ನೀ ಸಮೂಹ ಸ್ತಬ್ದವಾಯಿತು.

*ಇನ್ನು ನಮಗೆ ಯಾರು* ಹೌದು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಬಾವಾ ಉಸ್ತಾದಾದರೂ ಇದ್ದಾರಲ್ವಾ ಎಂದು ಸುನ್ನೀ ಸಮೂಹ ಸಮಾಧಾನಪಟ್ಟುಕೊಂಡಿದ್ದರು. ಆದರೆ ಇಂದು ಆ ಜ್ಞಾನ ಜ್ಯೋತಿಯೂ ನಂದಿತು. ಅತೀವ ದುಃಖಿತರಾದರು.ಊರಿಗೆ ಊರೇ ಮೌನವಾಯಿತು. ಸಾವಿರಾರು ಉಲಮಾಗಳನ್ನು ಸಮೂಹಕ್ಕೆ ಅರ್ಪಿಸಿದ ಮಹಾನ್ ತ್ಯಾಗಿ. ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು. ವಿವಿಧ ಊರುಗಳಿಂದ ಬಾವಾ ಉಸ್ತಾದ್ ರವರ ಅಂತಿಮ ದರ್ಶನ ಪಡೆಯಲು ಅವರು ವಫಾತಾದ ಉಳ್ಳಾಲಕ್ಕೆ ನಾಲ್ದೆಸೆಯಿಂದಲೂ ಜನರು ಹರಿದು ಬಂದರು.ಜನಸಾಗರವೇ ಅಲ್ಲಿ ತುಂಬಿಹೋಯಿತು. ರಸ್ತೆಗಳು ಜನರಿಂದ ತುಂಬಿ ತುಳುಕಿದವು.ಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯ ಉಲಮಾ ಉಮರಾಗಳ ದಂಡೇ ಅಲ್ಲಿ ಆಗಮಿಸಿತ್ತು. ಇದುವೇ ಜನರೆಡೆಯಲ್ಲಿ ಅಹ್ಮದ್ ಬಾವಾ ಉಸ್ತಾದ್ ರವರ ಅಂಗೀಕಾರಕ್ಕೆ ಉತ್ತಮ ಉದಾಹರಣೆ. ಅಹ್ಮದ್ ಬಾವಾ ಉಸ್ತಾದ್ ರವರ ಮೇಲೆ ಗೌರವಾನ್ವಿತ ಉಳ್ಳಾಲ ಖಾಝಿಯೂ, ಬಾವಾ ಉಸ್ತಾದರ ಪ್ರಧಾನ ಶಿಷ್ಯರೂ ಆದ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿಯವರ ನೇತ್ರತ್ವದಲ್ಲಿ ಮಯ್ಯಿತ್ ನಮಾಜು ನೆರವೇರಿಸಲಾಯಿತು. ಬಳಿಕ ಹಂತಹಂತವಾಗಿ ಅವರ ಮೇಲೆ ಮಯ್ಯಿತ್ ನಮಾಜು ನಿರ್ವಹಿಸಿ ದಫನ ಕಾರ್ಯ ನಿರ್ವಹಿಸಲಾಯಿತು.

ಅಲ್ಲಾಹು ಉಸ್ತಾದರ ದರಜ ಉನ್ನತಿಗೇರಿಸಲಿ.ಆಮೀನ್

✍ *ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...