ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಝಾನ್ ಮಾಸ ಮಗದೊಮ್ಮೆ ಮುಸ್ಲಿಂ ಸಮೂಹಕ್ಕೆ ಅತಿಥಿಯಾಗಿ ಆಗಮಿಸುತ್ತಿದೆ. ಸತ್ಯ ವಿಶ್ವಾಸಿಗಳ ಮನಃ ಸಂತೋಷದಿಂದ ಮಿಡಿಯುವ, ಮನಃ ಪರಿವರ್ತನೆಯ ತ್ಯಾಗ ಮನೋಭಾವದಿಂದ ಹರ್ಷ ಪುಳಕಿತಗೊಳ್ಳುವ ಮಾಸ. ಕಪ್ಪಡರಿದ ಹ್ರದಯವನ್ನು ಇಬಾದತ್ತುಗಳ ಮೂಲಕ ಪ್ರಕಾಶಮಯಗೊಳಿಸುವ ಮಾಸ. ಅಲ್ಲಾಹನ ಸಾಮೀಪ್ಯಕ್ಕೆ ಅನಿವಾರ್ಯವಾದ ಶುಭ್ರ ವ್ಯಕ್ತಿತ್ವ, ಪರಹಿತ ಚಿಂತನೆ, ಸಹನೆ, ತ್ಯಾಗ ಮುಂತಾದುವುಗಳನ್ನು ಬೆಳೆಸಿ ಮೈಗೂಡಿಸಿಕೊಳ್ಳುವ ಮಾಸ. ಅಲ್ಲಾಹನ ಆದೇಶ ನಿರ್ದೇಶಗಳನ್ನು ಪಾಲಿಸದ ಕಲ್ಲು ಹ್ರದಯಿಗಳ ಮನಃ ವನ್ನು ಮಂಜಿನಂತೆ ಕರಗಿಸುವ ಮಾಸ. ಅಧಾರ್ಮಿಕತೆಯಿಂದ ಧಾರ್ಮಿಕತೆಯೆಡೆಗೆ, ಅನ್ಯಾಯ, ಅನೈತಿಕತೆಯಿಂದ ನ್ಯಾಯ ನೀತಿಯ ಕಡೆ ಕೊಂಡೊಯ್ಯುವ ಮಾಸ. ಅನಾಚಾರ, ಭ್ರಷ್ಟಾಚಾರಗಳಿಗೆ ಕಡಿವಾಣ ಬೀಳುವ ಮಾಸ. ಚುಟುಕಾಗಿ ಹೇಳುವುದಾದರೆ ಓರ್ವ ಮುಸ್ಲಿಮನ ಸರ್ವಾಂಗೀಣ ಅಭಿವ್ರದ್ಧಿ, ವಿಜಯಕ್ಕೆ ಹೇತುವಾಗುವ ಪುಣ್ಯಗಳ ಕೊಯ್ಲು ಮಾಸ.
ರಮಳಾನ್ ತಿಂಗಳು ಒಳಿತಿನ ತಿಂಗಳು, ಸತ್ಕರ್ಮಗಳನ್ನು ಹೆಚ್ಚೆಚ್ಚು ನಿರ್ವಹಿಸಲು ಮುಸ್ಲಿಮನ ಮನಸ್ಸು ಆಶಿಸುವ ತಿಂಗಳು. ಈ ತಿಂಗಳಿನಲ್ಲಿ ನೈಜ ಮುಸ್ಲಿಮನ ಮನಃ ಕೆಡುಕಿನತ್ತ ವಾಲದು. ಪ್ರವಾದಿ ಸ.ಅ ಹೇಳಿದರು. "ರಮಳಾನ್ ಆಗತವಾದರೆ ಸ್ವರ್ಗದ ಕವಾಟಗಳು ತೆರೆಯಲ್ಪಡುವುದು, ನರಕದ ಕವಾಟಗಳು ಮುಚ್ಚಲ್ಪಡುವುದು, ಪಿಶಾಚಿಗಳು ಬಂಧಿತರಾಗುವರು" ಸತ್ಕರ್ಮಗಳನ್ನು ನಿರ್ವಹಿಸದಂತೆ ತಡೆಯುವ ಪಿಶಾಚಿಗಳ ಉಪಟಳ ತುಂಬಾ ಕಮ್ಮಿ ಇರುವ ಕಾರಣ ರಮಳಾನ್ ತಿಂಗಳಿನಲ್ಲಿ ಮುಸ್ಲಿಮನ ಮನಸ್ಸು ಅಲ್ಲಾಹನ ಸಾಮೀಪ್ಯ ಹೆಚ್ಚೆಚ್ಚು ಬಯಸುತ್ತದೆ. ರಮಳಾನ್ ತಿಂಗಳಿನ ವ್ರತ ಅದು ಪ್ರವಾದಿ ಸ.ಅ ರವರ ಸಮುದಾಯಕ್ಕೆ ಮಾತ್ರ ಸೀಮಿತವಾದುದಲ್ಲ. ಪ್ರವಾದಿ ಸ.ಅ ರವರಿಗಿಂತ ಮುಂಚಿನ ಪ್ರವಾದಿಗಳ ಸಮುದಾಯಕ್ಕೂ ವ್ರತ ಕಡ್ಡಾಯವಾಗಿತ್ತು. ಅದು ಕುರಾನಿನ ಅಲ್ ಬಖರ ಸೂರತಿನಲ್ಲಿ ಅಲ್ಲಾಹು ಸ್ಪಷ್ಟಪಡಿಸುತ್ತಾನೆ. " ಸತ್ಯ ವಿಶ್ವಾಸಿಗಳೇ, ನಿಮ್ಮ ಪೂರ್ವಿಕರಿಗೆ ವ್ರತವನ್ನು ಕಡ್ಡಾಯಗೊಳಿಸಿದಂತೆ ನಿಮಗೂ ವ್ರತವನ್ನು ಕಡ್ಡಾಯಗೊಳಿಸಲಾಗಿದೆ, ನೀವು ದೈವಭಕ್ತಿ ಉಳ್ಳವರಾಗಲು". ರಮಲಾನ್ ತಿಂಗಳ ಪ್ರಮುಖ ಆರಾಧನೆಯಾಗಿದೆ ವ್ರತಾನುಷ್ಠಿಸುವುದು. ರಮಳಾನ್ ವ್ರತದ ಮುಖ್ಯ ಗುರಿ ದೈವ ಭಕ್ತಿ ಉಂಟು ಮಾಡುವುದಾಗಿದೆಯೆಂದು ಮೇಲಿನ ಅಲ್ಲಾಹನ ಸೂಕ್ತದಿಂದ ಸ್ಪಷ್ಟವಾಗುತ್ತದೆ.
ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಟವೂ ಮಹತ್ತರವೂ ಆದ ತಿಂಗಳಾಗಿದೆ ಪವಿತ್ರ ರಮಳಾನ್. ರಮಳಾನ್ ತಿಂಗಳ ಆಗಮನವನ್ನು ಸತ್ಯ ವಿಶ್ವಾಸಿಯು ಕಾತರದಿಂದ ನಿರೀಕ್ಷಿಸುತ್ತಿರಬೇಕು. ರಜಬ್ ತಿಂಗಳ ಆಗಮನವಾದರೆ ಈ ಪ್ರಾರ್ಥನೆ ನಡೆಸಬೇಕೆಂದು ಪ್ರವಾದಿ ಸ.ಅ ಹೇಳಿದರು. "" ಅಲ್ಲಾಹನೇ.. ನಮಗೆ ರಜಬ್ ತಿಂಗಳು ಹಾಗು ಶಅಬಾನ್ ತಿಂಗಳಲ್ಲಿ ಸಮ್ರದ್ಧಿಯನ್ನು ನೀಡು, ರಮಳಾನ್ ತಿಂಗಳನ್ನು ನಮಗೆ ತಲುಪಿಸು. "" ರಮಳಾನ್ ಎಂಬುದು ಮಹೋನ್ನತ ಅತಿಥಿಯಾಗಿದೆ. ಆ ಅತಿಥಿಯ ಆಗಮನವನ್ನು ರಮಳಾನಿನ ಮುಂಚಿನ ತಿಂಗಳುಗಳಾದ ರಜಬ್ ಹಾಗು ಶಅಬಾನ್ ತಿಂಗಳಲ್ಲಿ ಪ್ರಾರ್ಥನೆ ನೆರವೇರಿಸುವ ಮೂಲಕ ನಿರೀಕ್ಷಿಸುತ್ತಿರಬೇಕೆಂದು ಮೇಲಿನ ಹದೀಸಿನಿಂದ ಸ್ಪಷ್ಟವಾಗುತ್ತದೆ.
ನಮಗೆ ಆಗತವಾಗುತ್ತಿರುವ ಅತಿಥಿಯನ್ನು ಸಂತೋಷಪೂರ್ವಕ ಮನಃ ಸಂತ್ರಪ್ತಿಯೊಂದಿಗೆ ಆಶಿಸುತ್ತಿರಬೇಕು. ಪ್ರವಾದಿ ಸ.ಅ ಹೇಳಿದರು : "" ಯಾರಾದರೂ ರಂಜಾನ್ ತಿಂಗಳ ಆಗಮನವನ್ನು ನಿರೀಕ್ಷಿಸಿ ಸಂತೋಷಗೊಂಡರೆ ಅವನ ಶರೀರ ನರಕ ಪ್ರವೇಶಿಸುವುದು ನಿಷಿದ್ಧವಾಗಿದೆ."" ಪ್ರತಿಯೊಬ್ಬ ಮುಸಲ್ಮಾನನು ಈ ಭೌತಿಕ ಲೋಕದಲ್ಲಿ ಆಶಿಸುವ ಒಂದಾಗಿದೆ ಸ್ವರ್ಗ ಸಿಗಬೇಕು, ನರಕ ಸಿಗಬಾರದು ಎಂದು. ಹಾಗಾದರೆ ಅವನು ರಂಜಾನ್ ತಿಂಗಳ ಬರುವಿಕೆಯನ್ನು ಸಂತೋಷದಿಂದ ಸ್ವೀಕರಿಸಿದರೆ ಮಾತ್ರ ರಂಜಾನ್ ತಿಂಗಳಲ್ಲಿ ಉಪವಾಸ, ಲೈಲತುಲ್ ಖದ್ರ್, ಇಅತಿಕಾಫ್, ದಾನಧರ್ಮ ಮುಂತಾದ ಸತ್ಕರ್ಮಗಳನ್ನು ದೈವ ಭಕ್ತಿಯೊಂದಿಗೆ ನಿರ್ವಹಿಸಲು ಸಾಧ್ಯ.
*ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
" ಮುಂದುವರಿಯುವುದು ಇಂಶಾ ಅಲ್ಲಾಹ್ "
No comments:
Post a Comment