ಕರ್ನಾಟಕ ಸಖಾಫೀಸ್ ಕೌನ್ಸಿಲ್ ಆಶ್ರಯದಲ್ಲಿ ಮರ್ಕಝ್ ರೂಬಿ ಜ್ಯುಬಿಲಿ ಸಮ್ಮೇಳನ ಪ್ರಚಾರಾರ್ಥ ಸ್ವಾಗತ ಸಮಿತಿ ರಚನೆ, ಸಖಾಫೀಸ್ ಕೌನ್ಸಿಲ್ ವಾರ್ಷಿಕ ಮಹಾಸಭೆ ಹಾಗು ನಮ್ಮಿಂದ ಅಗಲಿದ ಉಮರಾ ನೇತಾರ ಕೊಡಾಜೆ ಸುಲ್ತಾನ್ ಹಾಜಿ ಸಂಸ್ಮರಣೆ ಸಭೆ ಮಾಣಿ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಉದ್ಘಾಟಿಸಿದರು. ಎಸ್ ಪಿ ಹಂಝ ಸಖಾಫಿ ಹಾಗು ಜಿ ಎಂ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಎಸ್ ವೈ ಎಸ್ ಕೇರಳ ರಾಜ್ಯಾಧ್ಯಕ್ಷರೂ, ಸಿರಾಜುಲ್ ಹುದಾ ಕುಟ್ಯಾಡಿ ಇದರ ಸಾರಥಿಯೂ ಆದ ಬಹು ಪೇರೋಡ್ ಉಸ್ತಾದ್ ಅರ್ಥ ಗರ್ಭಿತ ಸಾರವತ್ತಾದ ತರಗತಿಯನ್ನು ನಡೆಸಿಕೊಟ್ಟರು.
ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ರವರ ಉದ್ಧರಣಿ ವಾಚಿಸುತ್ತಾ ಅಧಿಕಾರ, ಅಂತಸ್ತು, ಧನಮೋಹವನ್ನು ಬಯಸಿ ತಾಳಕ್ಕೆ ತಕ್ಕಂತೆ ಕುಣಿಯುವ ನಾಮಧಾರಿ ಮೌಲವಿಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಅಧಿಕಾರ, ಅಂತಸ್ತು, ಧನಮೋಹ ಬಯಸುವವರು ಅತ್ಯಂತ ಕೆಟ್ಟ ವಿದ್ವಾಂಸರುಗಳಾಗಿದ್ದಾರೆ. ಅವರು ನೈಜ ವಿದ್ವಾಂಸರಾಗಲು ಸಾಧ್ಯವಿಲ್ಲ.
ಜ್ಞಾನ ಎಂಬುದು ಸೊತ್ತಿಗಿಂತ ಉತ್ತಮವಾಗಿದೆ. ಇಲ್ಮ್ ನಿನಗೆ ರಕ್ಷೆಯಾಗಿದೆ. ಸಂಪತ್ತಿಗೆ ನೀನು ಕಾವಲು ನಿಲ್ಲಬೇಕಾಗಿ ಬರಬಹುದು. ಕಾರಣ ಸಂಪತ್ತು ಎಂಬುದು ಶ್ರದ್ಧೆ ಇಲ್ಲದಿದ್ದರೆ ಕದಿಯಲ್ಪಡಬಹುದು. ಯಾವುದೇ ಅನಾಹುತ ಸಂಭವಿಸದಂತೆ ಸರಿಯಾದ ದಾರಿಯಲ್ಲಿ ಕೊಂಡು ಹೋಗುವ ಕಾರ್ಯವಾಗಿದೆ ಇಲ್ಮ್. ಸಂಪತ್ತು ಖರ್ಚು ಮಾಡಿದಂತೆ ಕಡಿಮೆಯಾಗುತ್ತದೆ. ಇಲ್ಮ್ ಖರ್ಚು ಮಾಡಿದಂತೆ ವರ್ಧಿಸುತ್ತವೆ. ನಮಾಜು, ನೋಂಬು ಹಾಗು ಸದಾ ಸಮಯ ಪರಿಶ್ರಮಪಟ್ಟು ಆರಾಧನೆಗಳಲ್ಲಿ ತಲ್ಲೀನನಾಗುವವನಿಗಿಂತ ಎಷ್ಟೋ ಪಟ್ಟು ಉತ್ತಮನಾದವನು ಆಲಿಮನಾಗಿದ್ದಾನೆ. ಒಬ್ಬ ಆಲಿಂ ಮರಣಹೊಂದಿದರೆ ಇಸ್ಲಾಮಿನಲ್ಲಿ ಅದೊಂದು ಅನಾಹುತ ಸಂಭವಿಸಿದಂತೆ. ಅದು ಪರಿಹರಿಸಲು ಅಂತದೇ ಒಬ್ಬ ಆಲಿಂ ಜೀವಿಸಿ ಬಂದರೆ ಮಾತ್ರ ಸಾಧ್ಯ. ಸನ್ಮಾರ್ಗದ ಹಾದಿ ಆವಶ್ಯಪಡುವವರಿಗೆ ಸನ್ಮಾರ್ಗ ಹಾದಿ ತೋರಿಸಿ ಕೊಡುವವರಾಗಿದ್ದಾರೆ ಆಲಿಂ ಗಳು. ಅರಿವಿರುವವರು ಅಜ್ಞಾನಿಗಳ ಶತ್ರುಗಳಾಗಿದ್ದಾರೆ. ಕಾರಣ ಅವರಿಗೆ ಇಸ್ಲಾಮಿನ ಆಚಾರ ವಿಚಾರಗಳು ತಿಳಿದಿಲ್ಲ. ಅವರು ಅರಿವಿರುವವರೊಂದಿಗೆ ಶತ್ರುತ್ವದೊಂದಿಗೆ ಇರಬಹುದು. ಅರಿವಿಲ್ಲದವರಿಗೆ ತಿಳಿಯದ ಕಾರ್ಯವನ್ನು ಸೌಮ್ಯವಾಗಿ ತಿಳಿಸಿಕೊಟ್ಟು ಅವರ ಶತ್ರುತ್ವವನ್ನು ಹೋಗಲಾಡಿಸಿ ಅವರ ಸ್ನೇಹವನ್ನು ಕರಗತ ಮಾಡುವವನೇ ಆಲಿಂ.
ಇಲ್ಮ್ ನ ಮುಖಾಂತರ ವಿಜಯ ಸಾಧಿಸಲು ಸಕ್ರಿಯನಾಗಿ ಇರಬೇಕು. ಜನರು ಏನೂ ತಿಳಿಯದವರು. ಜೀವ ಇದ್ದರೂ ಜೀವ ಇಲ್ಲದವರಂತೆ ಇರುವರು. ಆಲಿಮ್ ಗಳು ಯಾವತ್ತೂ ಸಜೀವನಾಗಿರಬೇಕು.
ಅಲ್ಲಾಹನು ಹೇಳುತ್ತಾನೆ : ""ನಮ್ಮ ( ಅಲ್ಲಾಹನ ) ವಿಷಯದಲ್ಲಿ ಯಾರೂ ಶ್ರಮಿಸುತ್ತಾರೋ ನಿಶ್ಚಯವಾಗಿಯೂ ನಮ್ಮ ಹಾದಿಗೆ ಅವರನ್ನು ತಿರುಗಿಸುತ್ತೇವೆ. ಆದರೆ ಯಾರೂ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಬಯಸಿ ಕೆಲಸ ನಿರ್ವಹಿಸುತ್ತಾರೋ ಅವರ ಜೊತೆ ಅಲ್ಲಾಹನ ಸಹಾಯವಿದೆ""
ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ತನ್ನ ಇಹ್ಯಾ ಉಲೂಮಿದ್ದೀನ್ ಗ್ರಂಥದಲ್ಲಿ ಇಲ್ಮಿನ ಆಪತ್ತುಗಳು, ಅನಾಹುತಗಳು ತಿಳಿಸುವ ಅಧ್ಯಾಯದಲ್ಲಿ ದುನ್ಯಾವಿನ ಮತ್ತು ಆಖಿರತಿನ ಆಲಿಮುಗಳನ್ನು ಬೇರ್ಪಡಿಸಿ ತಿಳಿಸುತ್ತಾರೆ.
ಅಲ್ಲಾಹನ ಬಳಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುವವರು ದುನ್ಯಾದ ಮೋಹವಿರುವ ಆಲಿಮುಗಳಾಗಿದ್ದಾರೆ ಎಂದು ವಿವರಿಸುತ್ತಾರೆ. ದುನ್ಯಾದ ಆಲಿಮುಗಳು ಅಂದರೆ ದುನ್ಯಾದಲ್ಲಿ ಆಡಂಭರದೊಂದಿಗೆ ಜೀವಿಸುವುದು. ಅಧಿಕಾರ ಪ್ರಾಪ್ತಿಗಾಗಿ ಕಸರತ್ತು ನಡೆಸುವುದು, ಜನರೆಡೆಯಲ್ಲಿ ಅಧಿಕಾರವನ್ನು ಬಯಸುವುದು. ಇಂತಹ ಕೆಲವು ಆಲಿಮುಗಳಿದ್ದಾರೆ. ಬೆಳಿಗ್ಗೆ ಹೇಳಿದ್ದು ಸಂಜೆಗಿಲ್ಲ. ಸಂಜೆ ಹೇಳಿದ್ದು ರಾತ್ರಿಗಿಲ್ಲ. ಹೀಗೆ ಜನರ ಒತ್ತಾಸೆಗೋಸ್ಕರ ಇಸ್ಲಾಮಿನ ಆಚಾರ ವಿಚಾರವನ್ನು ಬದಲಿಸುವವರು. ಇಂತಹ ದುನ್ಯಾದ ಮೋಹವಿರುವ, ದುನ್ಯಾದ ಆಡಂಭರವನ್ನು ಆಶಿಸುವ, ಜನರ ಮಧ್ಯೆ ಅಧಿಕಾರ ಅಂತಸ್ತನ್ನು ಬಯಸುವ ಕೆಟ್ಟ ಆಲಿಮುಗಳಾಗಬಾರದೆಂದಾಗಿದೆ ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ತನ್ನ ಗ್ರಂಥದಲ್ಲಿ ತಿಳಿಸಿದ್ದು.
ಅಧಿಕಾರ, ಅಂತಸ್ತು, ಧನಮೋಹ ಬಯಸುವವರು ಅತ್ಯಂತ ಕೆಟ್ಟ ವಿದ್ವಾಂಸರುಗಳಾಗಿದ್ದಾರೆ. ಅವರು ನೈಜ ವಿದ್ವಾಂಸರಾಗಲು ಸಾಧ್ಯವಿಲ್ಲ. ತನ್ನ ವಿದ್ಯೆಯಿಂದ ಫಲಶೂನ್ಯವಾಗಿದ್ದರೆ, ಯಾರಿಗೂ ಉಪಕಾರವಿಲ್ಲದಿದ್ದರೆ ಆತನಾಗಿದ್ದಾನೆ ಅಲ್ಲಾಹನ ಬಳಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುವವನು.
ಇತರ ಆಲಿಮುಗಳೊಂದಿಗೆ ತರ್ಕಿಸಲು ಇಲ್ಮ್ ಕಲಿಯಬಾರದು, ಇತರ ಆಲಿಮುಗಳಿಗಿಂತ ನಾನೊಬ್ಬ ಉನ್ನತನಾದವನಾಗಬೇಕೆಂದು ಇಲ್ಮ್ ಕಲಿಯಬಾರದು. ಜನರೆಲ್ಲರೂ ನನ್ನ ಕಡೆ ಆಕರ್ಷಿತರಾಗಬೇಕು ಎಂಬ ನೆಲೆಯಲ್ಲೂ ಇಲ್ಮ್ ಕಲಿಯಬಾರದು. ಈ ನಿಯ್ಯತ್ ನೊಂದಿಗೆ ಯಾರೂ ಇಲ್ಮ್ ಕಲಿಯುತ್ತಾರೋ ಆತ ನರಕವಾಸಿಯಾಗಿದ್ದಾನೆ.
ತನ್ನ ಸ್ವಂತ ದುನ್ಯಾವಿನ ಕಾರ್ಯಲಾಭಕ್ಕಾಗಿ ಮತ್ತು ಇತರರ ದುನ್ಯಾವಿನ ಕಾರ್ಯ ಲಾಭಕ್ಕಾಗಿ ದೀನನ್ನು ಪಣಕ್ಕಿಡುವುದು, ಇಸ್ಲಾಮ್ ಧರ್ಮದ ಆಚಾರ ವಿಚಾರ, ಆಶಯಾದರ್ಶಗಳನ್ನು ಗಾಳಿಗೆ ತೂರುವುದು. ಉದಾಹರಣೆಗೆ ಒಬ್ಬನಿಗೆ ಪಂಚಾಯತ್ ಅಧ್ಯಕ್ಷನಾಗಬೇಕು, ಅಥವಾ MLA, MP ಆಗಬೇಕು. ಅದಕ್ಕಾಗಿ ಅವರ ದುನ್ಯಾದ ಕಾರ್ಯ ಸಫಲೀಕರಣಕ್ಕಾಗಿ ಒಬ್ಬ ಆಲಿಮ್ ಎಂದು ಕರೆಯಲ್ಪಡುವವನು ತನ್ನ ದೀನನ್ನು ಮಾರುವುದು. ಇದು ಒಮ್ಮೆಯೂ ಆಲಿಮಾದವನಿಗೆ ಯೋಜಿಸಿದ್ದಲ್ಲ.
ವಿದ್ವಾಂಸರು ಯಾವುದೇ ರಾಜಕೀಯ ಪಕ್ಷದ ವಕ್ತಾರರಾಗಬಾರದು. ಯಾವುದೇ ಪಕ್ಷದಲ್ಲಿ ತಾನು ಗುರುತಿಸಿಕೊಳ್ಳಬಾರದು. ಈ ರೀತಿಯಾದರೆ ಇಸ್ಲಾಂ ಧರ್ಮಕ್ಕೆ ಕಪ್ಪುಚುಕ್ಕೆ ಉಂಟಾಗುವ ಸಾಧ್ಯತೆ ಬರಬಹುದು. ವಿದ್ವಾಂಸನು ಮಾರ್ಗದರ್ಶಿಯಾಗಿರಬೇಕು. ಅನುಸರಿಸುವ ಹಿಂಬಾಲಕರಲ್ಲಿ ನಾನಾ ಪಕ್ಷದ ಜನರಿರಬಹುದು.
ಎಲ್ಲರಿಗೂ ಇಸ್ಲಾಂ ಧರ್ಮವನ್ನು ಒಂದೇ ರೀತಿ ಬೋಧಿಸಿ ಅವರನ್ನು ಸನ್ಮಾರ್ಗದತ್ತ ಕೊಂಡು ಬರುವ ಮಾರ್ಗದರ್ಶಿಗಳಾಗಬೇಕು. ಅದು ಬಿಟ್ಟು ಯಾವುದಾದರೂ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವುದು, ಆ ಪಕ್ಷದ ಉನ್ನತಿಗಾಗಿ, ಆ ಪಕ್ಷದ ನಾಯಕನ ಕಾರ್ಯ ಲಾಭಕ್ಕಾಗಿ ಪ್ರವರ್ತಿಸುವುದು ಇದು ಒಮ್ಮೆಯೂ ವಿದ್ವಾಂಸನಾದವನಿಗೆ ಯೋಜಿಸಿದ್ದಲ್ಲ. ಕಾರಣ ಇಂದು ಇರುವ ಎಲ್ಲಾ ರಾಜಕೀಯ ಪಾರ್ಟಿಗಳು ಬ್ಯಾಂಕ್ ಚುನಾವಣೆ, ಬಡ್ಡಿ ಮುಂತಾದ ಹಲವಾರು ನಿಷಿದ್ಧ ಕಾರ್ಯಗಳಲ್ಲಿ ಏರ್ಪಡುತ್ತವೆ.
ಆಲಿಮ್ ಎಂದು ಕರೆಯಲ್ಪಡುವ ಎಲ್ಲರ ಬಳಿ ಕುಳಿತುಕೊಳ್ಳಬಾರದು. ಎಲ್ಲಾ ವಿದ್ವಾಂಸರು ಒಂದೇ ರೀತಿಯಿರುವುದಿಲ್ಲ. ಐದು ಕಾರ್ಯಗಳಿಂದ ಮುಕ್ತಿಗೊಳಿಸಿ ಐದು ಕಾರ್ಯಗಳಿಗೆ ಆಹ್ವಾನಿಸುವ ಆಲಿಮನೊಂದಿಗೆ ಮಾತ್ರ ಸಹವಾಸ ಬೆಳೆಸಬೇಕು.
1- ಸಂಶಯಗಳನ್ನು ನೀಗಿಸಿ ಖಚಿತತೆಗೆ ಆಹ್ವಾನಿಸುವ ಆಲಿಂ, ಅಲ್ಲಾಹನ ಕುರಿತು, ಇಸ್ಲಾಂ ದೀನಿನ ಆಚಾರ ವಿಚಾರಗಳಲ್ಲಿ ಉಂಟಾಗುವ ಸಂಶಯಗಳನ್ನು ನಿವಾರಿಸಿ ಜನರನ್ನು ಖಚಿತತೆಗೆ ಕೊಂಡುಹೋಗುವ ಆಲಿಂ.
2- ಜನರು ಕಾಣಬೇಕು, ಜನರ ಪ್ರಶಂಸೆ ಗಿಟ್ಟಿಸಿಕೊಳ್ಳಬೇಕು ಎಂಬುವುದರಿಂದ ಮುಕ್ತಿಗೊಳಿಸಿ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಮಾಡುವ ನಿಷ್ಕಳಂಕ ಆರಾಧನೆಗೆ ಆಹ್ವಾನಿಸುವ ಆಲಿಂ.
3- ಇಹದ ವ್ಯಾಮೋಹವೋ, ಇಹದ ಕಾರ್ಯಲಾಭವೋ ಸಿಗಬೇಕು ಎಂಬುದರ ಬದಲಾಗಿ ಅದರಿಂದ ಮುಕ್ತಿಗೊಳಿಸಿ ಪಾರತ್ರಿಕ ಚಿಂತೆಯತ್ತ ಆಹ್ವಾನಿಸುವ ಆಲಿಂ.
4- ಅಹಂಕಾರದಿಂದ ಮುಕ್ತಿಗೊಳಿಸಿ ವಿನಯ ತಾಳ್ಮೆಗೆ ಆಹ್ವಾನಿಸುವ ಆಲಿಂ.
5- ಶತ್ರುತ್ವದಿಂದ ಮುಕ್ತಿಗೊಳಿಸಿ ಮಿತ್ರತ್ವಕ್ಕೆ, ಪರ ಹಿತವನ್ನು ಬಯಸುವುದರತ್ತ ಆಹ್ವಾನಿಸುವ ಆಲಿಂ.
ಇಂತಹ ಐದು ಕಾರ್ಯಗಳಿರುವ ಆಲಿಮನೊಂದಿಗೆ ಮಾತ್ರ ಸಹವಾಸ ಬೆಳೆಸಿಕೊಳ್ಳಬೇಕು. ಒಬ್ಬ ಆಲಿಮ್ ಇನ್ನೊಬ್ಬ ಆಲಿಮ್,ಸಯ್ಯಿದ್ ಅಥವಾ ಇತರರೊಂದಿಗೆ ಶತ್ರುತ್ವ ಬೆಳೆಸಲು ತಿಳಿಸುವುದಾದರೆ ಅಂತಹ ಆಲಿಮನೊಂದಿಗೆ ಸಹವಾಸ ಬೆಳೆಸಬಾರದು. ಬದಲಾಗಿ ಶತ್ರುತ್ವದಿಂದ ಮುಕ್ತಿಗೊಳಿಸಿ ಮಿತ್ರತ್ವ, ಪರಹಿತ ಕ್ಕೆ ಆಹ್ವಾನಿಸುವ ಆಲಿಂ ಯಾರಿದ್ದಾರೋ ಅವರೊಂದಿಗೆ ಮಾತ್ರ ಸಹವಾಸ ಬೆಳೆಸಬೇಕು. ಹೇಳುವಂತೆ ನಡೆಯುವ ಆಲಿಂ ಉತ್ತಮ ಆಲಿಮುಗಳಾಗಿದ್ದಾರೆ. ತನ್ನ ಇಹದ ಲಾಭಗೋಸ್ಕರ, ಜನರು ತನ್ನತ್ತ ಆಕರ್ಷಿತರಾಗಬೇಕು ಎಂಬ ದ್ರಷ್ಟಿಯಲ್ಲಿ ಇತರ ಆಲಿಮುಗಳನ್ನು ಆಕ್ಷೆಪಿಸಿ ಉಪದೇಶಿಸುವವನು ನರಕವಾಸಿಯಾಗಿರುವನು. ವಿದ್ವಾಂಸನಾದವನು ರಾಜಕೀಯದಿಂದ ಎಷ್ಟು ಸಾಧ್ಯವೋ ಅಷ್ಟು ದೂರ ನಿಲ್ಲಬೇಕು. ಕಾರಣ ದುನ್ಯಾ ಎಂಬುದು ಹಸಿರಾಗಿದೆ. ಮಾಧುರ್ಯದಿಂದ ಕೂಡಿದೆ. ಅದರ ಕಡಿವಾಣ ರಾಜಕೀಯ ನಾಯಕರ ಕೈಯಲ್ಲಾಗಿದೆ. ಆದುದರಿಂದ ರಾಜಕೀಯದಿಂದ ಸಂಪೂರ್ಣವಾಗಿ ದೂರ ನಿಲ್ಲಬೇಕು. ಇದು ಒಬ್ಬ ಉತ್ತಮ ವಿದ್ವಾಂಸನ ಲಕ್ಷಣವೂ ಆಗಿದೆ.
ಪ್ರೀತಿಯ ಮಿತ್ರರೇ : ಬಹುಮಾನ್ಯ ಪೇರೋಡ್ ಉಸ್ತಾದ್ ರವರು ಸಖಾಫಿಗಳ ಸಂಗಮದಲ್ಲಿ ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ರವರ ಪವಿತ್ರ ಗ್ರಂಥದಿಂದ ಉದ್ಧರಿಸಿದ ಕೆಲವು ವಿಷಯಗಳು ಮಾತ್ರ ಇಲ್ಲಿ ತಿಳಿಸಿದ್ದೇನೆ.
ವಿದ್ವಾಂಸರು ದೀನಿನ ವಿಷಯದಲ್ಲಿ ಸಕ್ರಿಯರಾಗಬೇಕು. ಸದಾ ಸಮಯ ಇಸ್ಲಾಂ ಧರ್ಮದ ನೈಜ ಆಶಯಾದರ್ಶಗಳು ಪಸರಿಸಿ ದುರ್ಮಾರ್ಗಿಗಳನ್ನು ಸನ್ಮಾರ್ಗಿಗಳನ್ನಾಗಿ ಬದಲಿಸುವ ಪ್ರಯತ್ನ ಮಾಡಬೇಕು. ನಮಾಜು ಮಾಡದವನನ್ನು ನಮಾಜಿಗನನ್ನಾಗಿ ಮಾಡಬೇಕು, ಮದ್ಯಪಾನ ಮಾಡುವವನನ್ನು ಅದರಿಂದ ವಿರಮಿಸುವಂತೆ ಮಾಡಬೇಕು, ಬಡ್ಡಿ ಸಂಬಂಧ ಕಾರ್ಯಗಳಲ್ಲಿ ಏರ್ಪಡುವವನನ್ನು ಅದರಿಂದ ಮುಕ್ತನನ್ನಾಗಿಸಬೇಕು, ಮುಜಾಹಿದ್, ಸಲಫಿ, ನೂತನವಾದಿಯನ್ನು ಹೇಗೆ ಸುನ್ನಿ ಮಾಡಬಹುದು, ಹೇಗೆ ಸರಿದಾರಿಗೆ ಕೊಂಡು ಬರಬಹುದು, ಭಯೋತ್ಪಾದಕ, ವರ್ಗೀಯವಾದಿ ಮುಂತಾದವರನ್ನು ಹೇಗೆ ಉತ್ತಮ ಪ್ರಜೆಯನ್ನಾಗಿ ಮಾರ್ಪಡಿಸಬಹುದು, ನೆರೆಕರೆ ದ್ರೋಹಿಯನ್ನು ನೆರೆಕರೆ ಪ್ರೇಮಿಯನ್ನಾಗಿ ಹೇಗೆ ಮಾರ್ಪಡಿಸಬಹುದು, ಕುಟುಂಬ ಸಂಬಂಧ ಮುರಿದವನನ್ನು ಕುಟುಂಬ ಸಂಬಂಧ ಇರುವವನನ್ನಾಗಿ ಹೇಗೆ ಮಾಡಬಹುದು, ಸುಳ್ಳು, ಕಳ್ಳತನ, ಮಾದಕ ಚಟ ಇರುವವನನ್ನು ಹೇಗೆ ಅದರಿಂದ ಮುಕ್ತನನ್ನಾಗಿಸಬಹುದು, ಹೀಗೆ ಮನುಷ್ಯನ ಸಂಸ್ಕರಣೆಗಾಗಿ, ಮನುಷ್ಯನ ಪಾರತ್ರಿಕ ವಿಜಯಕ್ಕಾಗಿ ಏನು ಮಾಡಲು ಸಾಧ್ಯವೋ ಆ ಶ್ರಮ ವಿದ್ವಾಂಸರಿಂದಾಗಬೇಕು.
ಪ್ರಗಲ್ಭ ವಿದ್ವಾಂಸರುಗಳು ಮರ್ಕಝ್, ಸಅದಿಯ್ಯಃ, ಮದನಿ, ಮಅದಿನ್, ಅಲ್ ಮದೀನಾ, ಸಿರಾಜುಲ್ ಹುದಾ, ಮರ್ಕಝುಲ್ ಹುದಾ, ದಾರುಲ್ ಇರ್ಷಾದ್ ಮುಂತಾದ ಸಂಸ್ಥೆಗಳನ್ನು ನಿರ್ಮಿಸಿದ್ದು ಇಲ್ಲಿ ಧಾರ್ಮಿಕವಾದ ವಿಭಾಗವನ್ನು, ಆತ್ಮ ಸಂಶುದ್ಧಿ ಇರುವ ವಿಭಾಗವನ್ನು, ದೇಶಕ್ಕೆ ಉಪಕಾರ ಸಿಗುವ ವಿಭಾಗವನ್ನು ಸ್ರಷ್ಟಿ ಮಾಡುವುದಕ್ಕೋಸ್ಕರವಾಗಿದೆ. ಅದೇರೀತಿ ನಮ್ಮ ಮಕ್ಕಳು, ನಮ್ಮ ಯುವ ಜನತೆ ದಾರಿ ತಪ್ಪಬಾರದು ಎಂಬ ನಿಟ್ಟಿನಲ್ಲಿ ಎಸ್ ಎಸ್ ಎಫ್, ಎಸ್ ಬಿ ಎಸ್, ಎಸ್ ವೈ ಎಸ್ ಮುಂತಾದ ಸುನ್ನೀ ಸಂಘಟನೆಗಳನ್ನು ಉಂಟು ಮಾಡಬೇಕು, ಅವರನ್ನು ವಿದ್ವಾಂಸರಾದ ನಾವು ಸಂಘಟನಾ ರಂಗಕ್ಕೆ ಕೊಂಡು ಬರಬೇಕು. ಇಲ್ಲದಿದ್ದರೆ ಅವರು ಇತರ ದಾರಿ ತಪ್ಪಿಸುತ್ತಿರುವ ಸಂಘಟನೆಗಳಿಗೆ ಸೇರಿ ದಾರಿ ತಪ್ಪುವ ಸಾಧ್ಯತೆ ಇದೆ. ಆದುದರಿಂದ ವಿದ್ವಾಂಸರು ಸಂಘಟನಾ ರಂಗದಲ್ಲಿ ಸಕ್ರಿಯತೆ ಕಾಣಬೇಕು, ಪ್ರತಿನಿಧಿಸುವ ಮೊಹಲ್ಲಾಗಳಲ್ಲಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ತಿಳಿಸಿ ವಿಜಯ ಕರಗತ ಮಾಡಬೇಕು.
ಸಮಯ, ಸಂದರ್ಭ ನೋಡಿ ತಂತ್ರಗಾರಿಕೆಯನ್ನು ಯೂಸ್ ಮಾಡಿ ಜನರನ್ನು ಒಳಿತಿಗೆ ಆಹ್ವಾನಿಸುವವರಾಗಬೇಕು ಎಂದು ಪೇರೋಡ್ ಉಸ್ತಾದ್ ರವರು ಸಾಂದರ್ಭಿಕವಾಗಿ ತಿಳಿಸಿದರು.
*ಮರ್ಕಝ್ ರೂಬಿ ಜ್ಯುಬಿಲಿ ಸಮ್ಮೇಳನ ಸಂಪೂರ್ಣ ಯಶಸ್ವಿಗೆ ಸಖಾಫಿಗಳು, ಸಅದಿಗಳು, ಮದನಿಗಳು, ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗು ಇತರ ಎಲ್ಲಾ ಸುನ್ನೀ ಸಂಘಟನೆಗಳು ಕಾರ್ಯೋನ್ಮುಖರಾಗಬೇಕು* ಎಂದು ತಿಳಿಸಿ ತ್ರಿವಳಿ ತಲಾಕಿನ ಕುರಿತು ಸ್ಪಷ್ಟವಾಗಿ ವಿವರಣೆ ನೀಡಿದರು.
ಮೂರು ತ್ವಲಾಖ್ ಒಟ್ಟಿಗೆ ಹೇಳಬಾರದೆಂದು ನಾಲ್ಕು ಮದ್ ಹಬಿನಲ್ಲೂ ಸ್ಥಿರಪಟ್ಟ ಕಾರ್ಯವಾಗಿದೆ. ಆದರೆ ಮೂರು ತ್ವಲಾಕ್ ಹೇಳಿದರೆ ತ್ವಲಾಖ್ ಸಂಭವಿಸುತ್ತದೆ. ಇಸ್ಲಾಮಿನಲ್ಲಿ ನಿರುತ್ಸಾಹಗೊಳಿಸಲ್ಪಟ್ಟ ಕಾರ್ಯವಾಗಿದೆ ತ್ವಲಾಕ್. ತ್ವಲಾಕ್ ಹೇಳದೆ ನಿರ್ವಾಹವಿಲ್ಲದ ಸಂದಿಗ್ಧ ಪರಿಸ್ಥಿತಿಯಲ್ಲಿ ತ್ವಲಾಖ್ ಹೇಳಬಹುದು. ಅದೂ ಕೂಡಾ ಒಟ್ಟಿಗೆ ಮೂರು ತ್ವಲಾಖ್ ಹೇಳಬಾರದೆಂದಾಗಿದೆ ಇಸ್ಲಾಮಿನ ನಿಯಮ. ಆ ಇಸ್ಲಾಮಿನ ನಿಯಮವನ್ನು ಯಾವುದೇ ರೀತಿಯಲ್ಲಿ ಪ್ರಶ್ನಿಸಲು ಇಲ್ಲಿ ಯಾರಿಗೂ ಅಧಿಕಾರವಿಲ್ಲ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.
✍ *ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*
No comments:
Post a Comment