Saturday, 19 August 2017

ಮದ್ರಸ ಶಿಕ್ಷಣ ಆರಂಭ ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ಭಾಗ 03 ✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸಹಕಾರ : V.A ಮುಹಮ್ಮದ್ ಸಖಾಫಿ ವಳವೂರು


---------------------------------------------------

ಪೂರ್ವಕಾಲ ವಿದ್ವಾಂಸರೊಬ್ಬರ ನಾಣ್ಣುಡಿಯಂತೆ ವಿದ್ಯೆ ಎಂಬುದು ತೊಟ್ಟಿಲಿನಿಂದ ಮಂಚದ ತನಕವಾಗಿದೆ. ಜನಿಸಿದ ನವಜಾತ ಶಿಶುವಿನಿಂದ ಮರಣದ ತನಕ ವಿದ್ಯೆ ಎಂಬುದು ನಿರಂತರ ಹರಿಯುತ್ತಿರುವ ನದಿಯಂತಾಗಬೇಕು. ಮನೆಯಲ್ಲಿ ತಂದೆ ತಾಯಿ ಹಾಗು ಮನೆ ಸದಸ್ಯರಿಂದ ಕಲಿತ ಬಾಲ ವಿದ್ಯೆ ಮದ್ರಸದಲ್ಲಿ ಅದರ ಮುಂದಿನ ಘಟ್ಟ ಅಧ್ಯಾಪಕರಿಂದ ಮುಂದುವರಿಯಬೇಕು. ಅಲ್ಲಾಹನ ಕುರಿತಿರುವ ಜ್ಞಾನ, ಪ್ರವಾದಿ ಸ.ಅ ರವರ ಕುರಿತಿರುವ ಅರಿವು ಅದು ಮಕ್ಕಳು ಮದ್ರಸ ಅಧ್ಯಾಪಕರಿಂದ ಪ್ರಾರಂಭಿಕವಾಗಿ ಕಲಿಯುವಂತಾಗಬೇಕು. ಪ್ರವಾದಿ ಸ.ಅ ರವರ ಹೆಸರು, ಅವರ ಮಾತಾಪಿತರ ಹೆಸರು, ಜನಿಸಿದ ಸ್ಥಳ, ವಫಾತಾದ ಸ್ಥಳ ಮುಂತಾದ ತಂದೆ ತಾಯಿಯಿಂದ ಆರಂಭಗೊಂಡ ಕಲಿಕೆ ಮದ್ರಸ ಉಸ್ತಾದರುಗಳಿಂದಲೂ ಪ್ರಾರಂಭ ಹಂತದಲ್ಲಿ ಮುಂದುವರಿಯಬೇಕು. ಮದ್ರಸದಲ್ಲಿ ಉಸ್ತಾದ್ ಮಕ್ಕಳಿಗೆ ಕಲಿಸಿಕೊಡುವ ಪ್ರತಿಯೊಂದು ಅಕ್ಷರಕ್ಕೂ ಪ್ರತಿಫಲವಿದೆ. ಅದು ಮಕ್ಕಳು ಕಲಿತರಾದರೆ ಅದರ ಮೂಲಕ ಆ ಮಗುವಿಗೆ, ತನ್ನ ತಂದೆ ತಾಯಿಗೆ, ತನ್ನ ಉಸ್ತಾದರಿಗೆ ಅಲ್ಲಾಹು ಪ್ರತಿಫಲವನ್ನು ದಾಖಲಿಸುತ್ತಾನೆ. ಒಮ್ಮೆ ಈಸಾ ನೆಬಿ ಅ.ಸ ರವರು ದಫನ ಭೂಮಿಯ ಬಳಿಯಿಂದ ಸಾಗುತ್ತಿದ್ದಾಗ ಒಂದು ಖಬ್ರ್ ನಲ್ಲಿರುವ ವ್ಯಕ್ತಿ ಖಬರಿನೊಳಗೆ ಕಠಿಣವಾಗಿ ಶಿಕ್ಷಿಸಲ್ಪಡುತ್ತಿದ್ದನು. ಇದನ್ನು ಕಂಡ ಈಸಾ ನೆಬಿ ಅ.ಸ ತೀವ್ರ ದುಃಖಿತರಾದರು. ಮುಂದೆ ಸಾಗಿ ಅವರ ಕೆಲಸ ಪೂರ್ತಿಗೊಳಿಸಿ ಬಳಿಕ ಅದೇ ದಫನ ಭೂಮಿಯ ಸಮೀಪದಿಂದ ಅವರು ಹಿಂತಿರುಗಿ ಬರುತ್ತಿದ್ದಾಗ ಆ ಖಬರ್ ನ ವ್ಯಕ್ತಿ ತುಂಬಾ ಹರ್ಷದಿಂದ ಸಂತೋಷದಲ್ಲಿದ್ದಾನೆ. ಅವನ ಖಬರಿನ ಸುತ್ತಲೂ ರಹ್ಮತ್ತಿನ ಮಲಕುಗಳು ಅವನೊಂದಿಗೆ ಜತೆಯಾಗಿದ್ದಾರೆ. ಇದನ್ನು ಕಂಡು ಆಶ್ಚರ್ಯಭರಿತರಾಗಿ ಈಸಾ ನೆಬಿ ಅ.ಸ ರವರು ಎರಡು ರಕಅತ್ ನಮಾಝ್ ನಿರ್ವಹಿಸಿ ಕುತೂಹಲದಿಂದ ಇದರ ಹಿನ್ನೆಲೆಯ ಕುರಿತು ಮನವರಿಕೆ ಮಾಡಿ ಕೊಡುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಅಲ್ಲಾಹನು ಈಸಾ ನೆಬಿ ಅ.ಸ ರವರ ಪ್ರಾರ್ಥನೆಗೆ ಉತ್ತರ ನೀಡುವನು : ಓ ಈಸಾ, ಆ ಖಬರಿನಲ್ಲಿರುವ ವ್ಯಕ್ತಿ ಮಹಾಪಾಪಿಯಾಗಿದ್ದನು. ಅದರ ನಿಮಿತ್ತ ಮರಣಹೊಂದಿದ ದಿನದಿಂದ ಆತ ಖಬರಿನಲ್ಲಿ ಕಠಿಣ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತ ಮರಣ ಹೊಂದುವಾಗ ಆತನ ಪತ್ನಿ ಗರ್ಭಿಣಿಯಾಗಿದ್ದಳು. ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ಮಗುವನ್ನು ಪ್ರೀತಿ, ವಾತ್ಸಲ್ಯ ಮಮಕಾರದಿಂದ ಲಾಲಿಸಿ ಮುದ್ದಿಸಿ ಇಸ್ಲಾಮಿನ ಶಿಷ್ಠಾಚಾರದೊಂದಿಗೆ ಬೆಳೆಸಿ ನಂತರ ಉಸ್ತಾದರ ಬಳಿ ದೀನ್ ಕಲಿಯಲು ಮದ್ರಸಕ್ಕೆ ಸೇರಿಸಿದಳು. ಉಸ್ತಾದರು ಮಗುವಿಗೆ ಬಿಸ್ಮಿಲ್ಲಾಹಿ ಎಂಬ ವಚನವನ್ನು ಕಲಿಸಿಕೊಟ್ಟರು. ಮಗು ಅದನ್ನು ಕಲಿಯಿತು. ಭೂಮಿಯ ಮೇಲ್ಭಾಗದಲ್ಲಿ ನನ್ನ ಹೆಸರನ್ನು ಉಚ್ಚರಿಸಿದ ಒಂದು ಮಗುವಿನ ತಂದೆಯನ್ನು ಭೂಮಿಯ ಅಡಿಭಾಗದಲ್ಲಿ ಶಿಕ್ಷಿಸುವುದು ನನಗೆ ನಾಚಿಕೆಯಾಯಿತು. ಆ ಮಗುವಿನ ತಂದೆಯ ಶಿಕ್ಷೆಯನ್ನು ಮುಂದುವರಿಸುವುದು ಸರಿಯಲ್ಲ. ಆದುದರಿಂದ ಆತನನ್ನು ಶಿಕ್ಷೆಯಿಂದ ವಿಮುಕ್ತಿಗೊಳಿಸಿದೆಯೆಂದು ಅಲ್ಲಾಹನು ಈಸಾ ನೆಬಿ ಅ.ಸ ರವರಿಗೆ ದಿವ್ಯವಾಣಿಯ ಮೂಲಕ ತಿಳಿಸಿದನು. 
    ಪ್ರವಾದಿ ಸ.ಅ ರವರಿಂದ ಇಬ್ನು ಅಬ್ಬಾಸ್ ರ.ಅ ನಿವೇದಿಸುತ್ತಾರೆ : ""ಓರ್ವ ಮುಅಲ್ಲಿಮ್ ಒಂದು ಮಗುವಿಗೆ ಬಿಸ್ಮಿ ಕಲಿಸಿಕೊಟ್ಟರೆ ಅದನ್ನು ಹೇಳುವ ಮಗು, ಅವನ ಮಾತಾಪಿತರು ಹಾಗು ಕಲಿಸಿಕೊಟ್ಟ ಮುಅಲ್ಲಿಂಗೆ ಅಲ್ಲಾಹನು ನರಕ ವಿಮೋಚನೆಯನ್ನು ದಾಖಲಿಸುತ್ತಾನೆ."" ಇದು  ಓರ್ವ ಉಸ್ತಾದ್ ಮಕ್ಕಳಿಗೆ ನೀಡುವ ಧಾರ್ಮಿಕ ಜ್ಞಾನದಿಂದ ಮಕ್ಕಳಿಗೆ, ಮಾತಾಪಿತರಿಗೆ ಹಾಗು ಉಸ್ತಾದರಿಗೆ ಸಿಗುವ ಮಹತ್ತರ ಪ್ರತಿಫಲವಾಗಿದೆ.
              ನಾವು ಮದ್ರಸ ಶಿಕ್ಷಣದ ಬಗ್ಗೆ ಚಿಂತಿಸಿದ್ದೇವೆಯೇ? ನಮ್ಮ ಮಕ್ಕಳನ್ನು ಮದ್ರಸಕ್ಕೆ ಕಳುಹಿಸುತ್ತೇವೆಯೇ? ಎಷ್ಟೊಂದು ತಂದೆ ತಾಯಂದಿರು ಮದ್ರಸ ಶಿಕ್ಷಣದ ಬಗ್ಗೆ ಉತ್ಸುಕರಾಗಿದ್ದಾರೆ? ನಮ್ಮ ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ಎಂಬುದನ್ನು ಮನಃ ಗಂಡಿದ್ದೇವೆಯೇ? ಮಕ್ಕಳಿಗೆ ಮದ್ರಸ ಶಿಕ್ಷಣವನ್ನು ನೀಡದ ಎಷ್ಟೊಂದು ತಂದೆ ತಾಯಂದಿರು ನಮ್ಮೆಡೆಯಲ್ಲಿದ್ದಾರೆ? ಮದ್ರಸ ಪ್ರಾರಂಭವಾಗುತ್ತಿದೆ. ಯಾವುದೇ ಗೌಜಿ ಗದ್ದಲವಿಲ್ಲ. ಯಾವುದೇ ಉತ್ಸಾಹ ಉತ್ಸುಕತೆ ಇಲ್ಲ. ಆದರೆ ಇದೇ ಸಮಯದಲ್ಲಿ ಶಾಲಾ ಪ್ರಾರಂಭವಾಗುವ ಜೂನ್ ತಿಂಗಳ ಮುಂಚೆನೇ ನಮ್ಮ ಮನೆಗಳಲ್ಲಿ ಶಾಲಾ ಬ್ಯಾಗ್ ಖರೀದಿ, ಯುನಿಫಾರ್ಮ್ ಹೊಲಿಸುವಿಕೆ, ಶಾಲಾ ಪುಸ್ತಕ ಖರೀದಿ, ಶಾಲಾ ಫೀಸು ಭರಿಸುವಿಕೆ ಇತ್ಯಾದಿ ಮಾತುಕತೆಗಳು, ಪ್ರಕ್ರಿಯೆಗಳು ಭರಾಟೆಯಿಂದ ನಡೆಯುತ್ತದೆ. ಮಕ್ಕಳ ಲೌಕಿಕ ಶಿಕ್ಷಣದ ಗುಂಗಿನಲ್ಲಿ ಮಾತಾಪಿತರು ಬ್ಯುಸಿಯೇ ಬ್ಯುಸಿ. ಆದರೆ ಪವಿತ್ರ ರಮಳಾನ್ ಕಳೆದು ಮದ್ರಸ ಪ್ರಾರಂಭದ ತಿಂಗಳಾದ ಶವ್ವಾಲ್ ಮಾಸ ಆಗಮಿಸಿದೆ. ಮಾತಾಪಿತರಿಗೆ ಮದ್ರಸದ ಪ್ರಾರಂಭದ ದಿವಸದ ಕುರಿತು ಮಾಹಿತಿಯಿಲ್ಲ. ಮದ್ರಸದ ಪ್ರಾಧಾನ್ಯತೆ ಅವರಿಗೆ ತಿಳಿದಿಲ್ಲ. ನನ್ನ ಮಗ (ಳ) ನನ್ನು ಮದ್ರಸಕ್ಕೆ ಸೇರಿಸಬೇಕು. ನನ್ನ ಮಕ್ಕಳಿಗೆ ಮದ್ರಸ ಪ್ರಾರಂಭವಾಗುತ್ತಿದೆ. ಅವರಿಗೆ ಯುನಿಫಾರ್ಮ್ ಹೊಲಿಸಿ ಕೊಡಬೇಕು, ಅವರಿಗೆ ಕಿತಾಬ್ ಖರೀದಿಸಿ ಕೊಡಬೇಕು ಎಂಬ ಚಿಂತೆ ಇದೆಯೇ? ಮಕ್ಕಳ ಕಲಿಕೆಗೆ ಸಂಬಂಧಿಸಿ ಯಾವತ್ತಾದರೂ ಉಸ್ತಾದರುಗಳೊಂದಿಗೆ ಸಮಾಲೋಚನೆ ನಡೆಸಿದ್ದು ಇದೆಯೇ? ನನ್ನ ಮಗ ಮದ್ರಸಕ್ಕೆ ಹೋಗುತ್ತಿದ್ದಾನೆ, ಆತನಿಗೆ ಮನೆಯಲ್ಲಿ ನಿರ್ವಹಿಸಲು ಉಸ್ತಾದ್ ಏನಾದರೂ ಹೋಮ್ ವರ್ಕ್ ಕೊಟ್ಟಿದ್ದಾರೆಯೇ? ಅರಬಿಯಲ್ಲಿರುವ ಇಪ್ಪತ್ತೆಂಟು ಅಕ್ಷರಗಳನ್ನು ಸರಾಗವಾಗಿ ಉಚ್ಚರಿಸುತ್ತಾನೆಯೇ? ಅಲ್ಲಾಹನ ಕುರಿತು ಅವನ ಪ್ರವಾದಿ ಸ.ಅ ರವರ ಕುರಿತು ಏನು ಕಲಿತಿದ್ದಾನೆ, ಇಸ್ಲಾಂ, ಈಮಾನ್ ಕಾರ್ಯಗಳು ಯಾವುವು ಅಂತ ಮಗನಿ (ಳಿ) ಗೆ ತಿಳಿದಿದೆಯೇ? ವುಳೂ, ನಮಾಜು, ಅದರ ಶರತ್ತು ಫರ್ಳುಗಳ ಬಗ್ಗೆ ಕಲಿತಿದ್ದಾನೆಯೇ, ಮದ್ರಸ ಶಿಕ್ಷಣದಿಂದ ಮಕ್ಕಳ ಕಾರ್ಯಚಟುವಟಿಕೆಗಳಲ್ಲಿ, ಸ್ವಭಾವ ಗುಣಗಳಲ್ಲಿ ಬದಲಾವಣೆ ಉಂಟಾಗಿದೆಯಾ ಎಂದು ನೋಡಿದ್ದು ಉಂಟೇ? ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವಾಗ ಯಾವ್ಯಾವ ದ್ಸಿಕ್ರ್ ಹೇಳಬೇಕು ಎಂದು ಯಾವತ್ತಾದರೂ ಮಕ್ಕಳ ರಕ್ಷಕರು, ತಂದೆ ತಾಯಂದಿರು ಮಕ್ಕಳ ಕಲಿಕೆಯ ಕಡೆ ಗಮನ ಹರಿಸಿದ್ದು ಇದೆಯಾ? 
            ಕೆಲವೊಂದು ತಂದೆ ತಾಯಂದಿರು  ಶಾಲೆಯಲ್ಲಿ ಇಸ್ಲಾಮಿಕ್ ಎಜ್ಯುಕೇಶನ್ ನೀಡಲಾಗುತ್ತಿದೆ ಎಂಬ ನೆಪವೊಡ್ಡಿ ಮದ್ರಸ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂದು ಮುಸ್ಲಿಮರು ನಡೆಸುತ್ತಿರುವ ಸ್ಕೂಲುಗಳಲ್ಲಿ ಮದ್ರಸ ಶಿಕ್ಷಣದ ಕುರಿತು ಕಲಿಯಲು ಒಂದು ಪಿರೇಡನ್ನು ಮೀಸಲಿರಿಸಲಾಗಿದೆ. ನಿಜಕ್ಕೂ ಈ ಒಂದು ಪಿರೇಡ್ ನಲ್ಲಿ ಐವತ್ತಕ್ಕಿಂತಲೂ ಅಧಿಕ ಇರುವ ಮಕ್ಕಳು ಇಸ್ಲಾಮಿನ ಸುಂದರಾಶಯಾದರ್ಶವನ್ನು ಕಲಿಯಲು ಸಾಧ್ಯವೇ? ಪ್ರೀತಿಯ ರಕ್ಷಕರೇ, ಮಾತಾಪಿತರೇ, ನಿಜಕ್ಕೂ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ ಮಾತ್ರವಲ್ಲ ಇದರಿಂದ ಮಕ್ಕಳು ಉಭಯಲೋಕದಲ್ಲೂ ಪರಾಜಿತರಾಗಲು ಕಾರಣೀಕರ್ತರಾಗುತ್ತಿದ್ದೀರಿ. ಪರಲೋಕದಲ್ಲಿ ತಮಗೆ ತಮ್ಮ ಮಕ್ಕಳು ಅಮೂಲ್ಯವಾದ ನಿಧಿಯಾಗಬೇಡವೇ? ಬಹುತೇಕ ಮುಸ್ಲಿಂ ಶಾಲೆಗಳಲ್ಲಿ ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ವಿದ್ಯೆ ನೀಡುವಿಕೆ ಎಂಬುದು ಕೇವಲ ತೋರ್ಪಡಿಕೆ ಮತ್ತು ಮುಸ್ಲಿಂ ಮಕ್ಕಳನ್ನು ಆ ಶಾಲೆಗೆ ಸೇರಿಸಿ ಹಣ ಗಳಿಸುವ ನಿಗೂಢ ತಂತ್ರ ಮಾತ್ರವಾಗಿದೆ. ಆದುದರಿಂದ ಮದ್ರಸಕ್ಕೆ ಕಳುಹಿಸದೆ ಇಂತಹ ಶಾಲೆಗಳಿಗೆ ಸೇರಿಸಿ ಕೈ ಕಟ್ಟಿ ಕುಳಿತರೆ ಮುಂದಕ್ಕೆ ಇಹದಲ್ಲೂ ನಾಳೆ ಪರಲೋಕದಲ್ಲೂ ಕೈ ಕಡಿಯುವ ದುಸ್ಥಿತಿ ಬಂದೆರಗಬಹುದು. ಅಲ್ಲಾಹು ಇಂತಹ ದುಸ್ಥಿತಿಯಿಂದ ನಮ್ಮನ್ನು ಕಾಪಾಡಲಿ. ಆಮೀನ್.
     ಪ್ರೀತಿಯ ರಕ್ಷಕರೇ, ತಮ್ಮ ಐದು ವರ್ಷ ತುಂಬಿದ ಮಕ್ಕಳನ್ನು ಕಡ್ಡಾಯವಾಗಿ ಮದ್ರಸಕ್ಕೆ ಸೇರಿಸಿ. ತಮ್ಮ ಮಕ್ಕಳು ಚಿಕ್ಕಪುಟ್ಟ ಕಾರಣಗಳಿಗೆ ರಜೆ ಮಾಡದಂತೆ ಜಾಗ್ರತೆ ವಹಿಸಿ, ರಜೆ ಮಾಡಲೇಬೇಕಾದ ಸಂದರ್ಭ ಬಂದರೆ ತಮ್ಮ ಮಕ್ಕಳ ಸಮ್ಮುಖದಲ್ಲಿ ಉಸ್ತಾದರೊಂದಿಗೆ ರಜೆ ಮಾಡುವಿಕೆಯ ಅನುಮತಿಯನ್ನು ಪಡೆಯಿರಿ. ಇದರಿಂದ ಕಲಿಕೆಗಿರುವ ಪ್ರಾಧಾನ್ಯತೆ ಏನು ಎಂಬುದು ಮಕ್ಕಳಿಗೆ ತಿಳಿಯುತ್ತದೆ. ಧಾರ್ಮಿಕ ವಿದ್ಯಾಭ್ಯಾಸ ಕಲಿಯುವಿಕೆಗೆ ಬೇಕಾಗುವ  ಎಲ್ಲಾ ವ್ಯವಸ್ಥೆಗಳನ್ನು ಮಕ್ಕಳಿಗೆ ಮಾಡಿಕೊಡಿ. ಕಲಿಯುವಿಕೆ ಎಂಬುದು ಮಕ್ಕಳಿಗೆ ಭಾರವಾಗದ ರೀತಿಯಲ್ಲಿ ಮಕ್ಕಳ ಕಲಿಯುವಿಕೆಗೆ ಹುರಿದುಂಬಿಸಿ. ತಿಂಗಳಿಗೊಮ್ಮೆಯಾದರೂ ಮಕ್ಕಳ ವಿದ್ಯಾಭ್ಯಾಸದ ಅಭಿವ್ರದ್ಧಿಯ ಕುರಿತು ಮಕ್ಕಳ ಸಮ್ಮುಖದಲ್ಲಿ ಉಸ್ತಾದರೊಂದಿಗೆ ಸಮಾಲೋಚನೆ ನಡೆಸಿ. ಈ ಸಂದರ್ಭದಲ್ಲಿ ಮಕ್ಕಳ ಮನಃ ಬೇಸರವಾಗುವ ಯಾವುದೇ ಮಾತು, ಕ್ರತಿ ಉಸ್ತಾದರುಗಳಿಂದಲೋ, ರಕ್ಷಕರಿಂದಲೋ ಉಂಟಾಗದಿರಲಿ. ಉಸ್ತಾದರುಗಳಿಂದ ಏನಾದರೂ ಎಡವಟ್ಟು, ತಪ್ಪು ಸಂಭವಿಸಿದ್ದರೆ ಮಕ್ಕಳ ಸಮ್ಮುಖದಲ್ಲಿ ಉಸ್ತಾದರುಗಳೊಂದಿಗೆ ತರಾಟೆಗೆ ಇಳಿಯಬೇಡಿ, ಮದ್ರಸ ಉಸ್ತುವಾರಿ ಸಮಿತಿಗಳ ಗಮನಕ್ಕೆ ತಂದು ಅವರ ಮುಖಾಂತರ ಸುಲಲಿತವಾದ ಪರಿಹಾರ ಮಾರ್ಗವನ್ನು ಕಂಡುಕೊಳ್ಳಿರಿ.
ಮದ್ರಸ ಉಸ್ತುವಾರಿ ಸಮಿತಿಗಳು ತಮ್ಮ ಮೊಹಲ್ಲಾದ ಮದ್ರಸ ಉಸ್ತಾದರುಗಳ ನಿರಂತರ ಸಂಪರ್ಕವನ್ನಿಟ್ಟುಕೊಳ್ಳಬೇಕು. ಮದ್ರಸ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವ್ರದ್ಧಿಗೆ ಪೂರಕವಾಗುವ ವ್ಯವಸ್ಥೆಗಳನ್ನು ಮಾಡಬೇಕು. ಮಸೀದಿ ಮದ್ರಸಕ್ಕೆ ಭದ್ರತೆಗೋಸ್ಕರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮದ್ರಸ ಉಸ್ತಾದರುಗಳಿಗೆ ಸೂಕ್ತ ಸಂಬಳವನ್ನು ನಿಗದಿಪಡಿಸಿ ಸಮಯಕ್ಕೆ ಸರಿಯಾಗಿ ಅದನ್ನು ಅವರ ಹಸ್ತ ತಲುಪಿಸುವಂತೆ ಮಾಡಬೇಕು. ಊಟ ಮತ್ತು ಭದ್ರತೆಯ ವಸತಿ ವ್ಯವಸ್ಥೆಯನ್ನು ಮಾಡಿ ಕೊಡಬೇಕು.
       ಮದ್ರಸ ವಿದ್ಯಾರ್ಥಿಗಳೇ, ನಿಮ್ಮನ್ನು ತಂದೆ ತಾಯಂದಿರು, ರಕ್ಷಕರು ಮದ್ರಸಕ್ಕೆ ಕಳುಹಿಸುವುದು ನಿಮ್ಮ ಮೇಲಿನ ಅಪಾರ ಪ್ರೀತಿಯಿಂದಾಗಿದೆ. ನಿಮ್ಮ ಮುಂದಿನ ಬದುಕು ಹಸನಾಗಲಿ, ಪಾರತ್ರಿಕ ಲೋಕದಲ್ಲಿ ವಿಜಯಿಯಾಗಲಿ ಎಂಬ ಏಕೈಕ ಉದ್ಧೇಶದಿಂದಾಗಿದೆ. ನೀವು ಸ್ವರ್ಗ ಪಡೆಯುವುದರೊಂದಿಗೆ ನಿಮ್ಮಕಾರಣದಿಂದ ಅವರೂ ಸ್ವರ್ಗ ಪ್ರವೇಶಿಸುವವರಾಗಬೇಕು ಎಂಬ ಉದ್ಧೇಶ ಅವರಲ್ಲಿದೆ. ಆದುದರಿಂದ ಮಕ್ಕಳೇ... ಮದ್ರಸದಲ್ಲಿ ಉಸ್ತಾದರು ಹೇಳಿ ಕೊಡುವ ಪಾಠಗಳನ್ನು ಕಲಿತು ಅದನ್ನು ಜೀವನದಲ್ಲಿ ಅಳವಡಿಸುವವರಾಗಿರಿ, ತಂದೆ ತಾಯಿ ಉಸ್ತಾದರುಗಳಿಗೆ ಗೌರವಾದರ ನೀಡುವವರಾಗಿರಿ, ಮದ್ರಸ ಕಲಿಕೆಯ ಬಳಿಕ ಪಳ್ಳಿದರ್ಸಿಗೆ ಸೇರಿ ಉತ್ತಮ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿ. ಮುಂದಕ್ಕೆ ಮೊಹಲ್ಲಾದ ಚುಕ್ಕಾಣಿ ಹಿಡಿಯುವವರು ನೀವಾಗಬೇಕು, ಬಹುತೇಕ ಮಸೀದಿ ಮದ್ರಸಗಳ ಅಧಿಕಾರ ಪಡುಜಾಹಿಲ್ ಗಳು ಕೈವಶ ಮಾಡುತ್ತಿರುವುದು ಇಂದಿನ ಯುಗದಲ್ಲಿ ನಾವು ಕಾಣುತ್ತಿದ್ದೇವೆ. ಇಂದಿನ ಮಕ್ಕಳು ಮುಂದಿನ ನಾಯಕರು ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ. ಅದರಂತೆಯೇ ಮದ್ರಸ, ಪಳ್ಳಿ ದರ್ಸ್ ಗಳಲ್ಲಿ ಉತ್ತಮವಾಗಿ ಕಲಿತು ಅದನ್ನು ಜೀವನದಲ್ಲಿ ರೂಪಿಸಿ ತಂದೆ ತಾಯಿ, ರಕ್ಷಕರ, ಉಸ್ತಾದರುಗಳ, ನೆರೆಕರೆ ಹಾಗು ಊರವರ ಪ್ರಶಂಸೆಗೆ ಪಾತ್ರರಾಗಿ ನಿಮ್ಮೂರಿನ ಮದ್ರಸ ಮಸೀದಿಗಳ ನಾಯಕತ್ವವನ್ನು ಪಡೆದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆಶಯಾದರ್ಶವನ್ನು ನಿಮ್ಮ ನಂತರದ ತಲೆಮಾರುಗಳಿಗೆ ನೀಡುವತ್ತ ದಾಪುಗಾಲಿಟ್ಟು ಅವರನ್ನು ಉತ್ತಮರನ್ನಾಗಿ ಮಾಡಲು ಕಾರಣೀಕರ್ತರಾಗಿರಿ.

ಕೊನೆಯದಾಗಿ ನನ್ನ ಕಡೆಯಿಂದ ಮದ್ರಸ ವಿದ್ಯಾರ್ಥಿಗಳಿಗೆ ತುಂಬು ಹ್ರದಯದ ಶುಭಾಶಂಶೆಗಳನ್ನು ತಿಳಿಸುತ್ತಾ...
ಅಲ್ಲಾಹು ಅವರ ಮುಂದಿನ ಜೀವನ ಉಜ್ವಲಗೊಳಿಸಲಿ ಎಂದು ಪ್ರಾರ್ಥಿಸುತ್ತಾ.....
ನನ್ನ ಈ ಪುಟ್ಟ ಲೇಖನಕ್ಕೆ ತಾತ್ಕಾಲಿಕ ಬ್ರೇಕ್.

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಸಹಕಾರ : V.A ಮುಹಮ್ಮದ್ ಸಖಾಫಿ ವಳವೂರು

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...