Monday, 3 July 2017

📖 *ಮದ್ರಸ ಮತ್ತೆ ಶುಭಾರಂಭ📖* *ಮಕ್ಕಳು ಪಾರತ್ರಿಕ ಲೋಕದ ಸಂಪತ್ತು - ಭಾಗ - 02* ✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ* *ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು*

ತಂದೆ ತಾಯಂದಿರು ಸಣ್ಣ ಪ್ರಾಯದ ಮಕ್ಕಳ ಬಗ್ಗೆ ಚೆನ್ನಾಗಿ ಬಲ್ಲವರಾಗಬೇಕು. ಅವರ ಒಡನಾಟ, ತುಂಟಾಟಗಳಿಗೆ ಹೊಂದಿ ಕೊಂಡಿರಬೇಕು. ನೆಬಿ ಸ.ಅ ಹೇಳಿದರು : ""ಒಬ್ಬಾತನಿಗೆ ಮಗುವಿದ್ದರೆ ಆ ಮಗುವನ್ನು ಸಂತೋಷಪಡಿಸಲು ಮಾತಿನಲ್ಲೂ ಕ್ರತಿಯಲ್ಲೂ ತುಂಟಾಟವನ್ನು ತೋರಿಸಲಿ"" ಮಗು ವನ್ನು ಸಂತೋಷಪಡಿಸಲು ಮಗು ಮಾತನಾಡುವಂತೆಯೇ ಮಾತನಾಡುವುದು, ಮಗು ಆಡುವಂತೆಯೇ ಆಟ ಆಡುವುದು, ಶಬ್ದ ಹೊರಡಿಸುವುದು. ಮಗುವನ್ನು ಲಾಲಿಸುವುದು, ಮುದ್ದಿಸುವುದು, ಮುತ್ತು ನೀಡುವುದು ಮಾಡಬೇಕು. ನೆಬಿ ಸ.ಅ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು, ಕರುಣೆ ತೋರಿಸುತ್ತಿದ್ದರು, ಲಾಲಿಸುತ್ತಿದ್ದರು. ಒಮ್ಮೆ ನೆಬಿ ಸ.ಅ ರವರು ತನ್ನ ಮೊಮ್ಮಗನಾದ ಹಸನ್ ರ.ಅ ರವರನ್ನು ಮುದ್ದಿಸುತ್ತಿದ್ದರು, ಚುಂಬಿಸುತ್ತಿದ್ದರು. ಇದನ್ನು ಕಂಡ ಅಖ್ರ ಬಿನ್ ಹಾಬಿಸ್ ಎಂಬ ಗ್ರಾಮೀಣನೋರ್ವ ಹೇಳಿದನು. ಪ್ರವಾದಿಯವರೇ : ನನಗೆ ಹತ್ತು ಮಕ್ಕಳಿದ್ದಾರೆ. ಆದರೆ ನಾನು ಯಾವನೇ ಒಬ್ಬ ಮಗನನ್ನು ಇಷ್ಟರವರೆಗೆ ಚುಂಬಿಸಿಲ್ಲ. ಆಗ ನೆಬಿ ಸ.ಅ ರವರು ಆತನ ಕಡೆ ನೋಟ ಬೀರುತ್ತಾ ಹೇಳಿದರು :  ನಿನ್ನ ಹ್ರದಯದಿಂದ ಕರುಣೆಯನ್ನು ಅಲ್ಲಾಹು ಊರಿ ತೆಗೆದಿದ್ದರೆ ನಾನೇನು ಮಾಡಲು ಸಾಧ್ಯ. ಯಾರೂ ಕರುಣೆ ತೋರಿಸುವುದಿಲ್ಲವೋ ಅವರ ಮೇಲೆ ಕರುಣೆ ತೋರಿಸಲ್ಪಡುವುದಿಲ್ಲ"" 
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಈ ಮೇಲೆ ತಿಳಿಸಿದವುಗಳು ಅನಿವಾರ್ಯವಾದುದಾಗಿದೆ.
ಒಂದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬವು ತುಂಬಾ ಜಾಗ್ರತೆ ಪಾಲಿಸಬೇಕಾದ ಒಂದು ಸಂಗತಿಯಾಗಿದೆ ಮಕ್ಕಳೆಡೆಯಲ್ಲಿ ಸಮಾನತೆ ಪಾಲಿಸುವುದು. ಮಕ್ಕಳೆಲ್ಲರಲ್ಲಿಯೂ ಒಂದೇ ರೀತಿಯ ಪ್ರೀತಿ, ಮಮಕಾರ, ವಾತ್ಸಲ್ಯ ತೋರಿಸಬೇಕು. ಸಾಮಾನ್ಯವಾಗಿ ಹಿರಿಯ ಮಕ್ಕಳಿಗಿಂತ ಕಿರಿಯ ಮಕ್ಕಳಲ್ಲಿ ಅಧಿಕ ಮಮತೆ ತೋರಿಸುತ್ತೇವೆ. ಇದು ಹಿರಿಯ ಮಕ್ಕಳಲ್ಲಿ ಖಿನ್ನತೆ ಉಂಟು ಮಾಡುವ ಸಾಧ್ಯತೆಯಿದೆ. ಆದುದರಿಂದ ಮಕ್ಕಳೆಲ್ಲರಲ್ಲಿಯೂ ಸಮಾನತೆ ಬರುವಂತೆ ನ್ಯಾಯಪಾಲನೆ ಅಗತ್ಯವಾಗಿದೆ.
ತಂದೆಯಾದವನು ತನ್ನ ಪುತ್ರನಿಗೆ ನೀಡಬಹುದಾದ ಮಹೋನ್ನತ ದಾನ ಉತ್ತಮ ಶಿಷ್ಠಾಚಾರವನ್ನು ಮೈಗೂಡಿಸುವಂತೆ ಮಾಡುವುದಾಗಿದೆ ಎಂದು ಪ್ರವಾದಿ ಸ.ಅ ಹೇಳಿದ್ದಾರೆ. ಆಹಾರ ಪಾನೀಯಗಳ ಸೇವನೆ, ಕಿರಿಯ, ಹಿರಿಯರೊಂದಿಗೆ ಹೇಗೆ ವ್ಯವಹರಿಸಬೇಕು, ಮನೆ ಮಂದಿಯೊಂದಿಗೆ ಹೇಗೆ ವ್ಯವಹರಿಸಬೇಕು, ಅವರಿಗೆ ಹೇಗೆ ಗೌರವಾದರ ನೀಡಬೇಕು, ನೆರೆಹೊರೆಯವರೊಂದಿಗೆ ಯಾವ ರೀತಿ ವ್ಯವಹರಿಸಬೇಕು, ಇತರ ಮಕ್ಕಳೊಂದಿಗೆ ಹೇಗಿರಬೇಕು, ಅಲ್ಲಾಹನ ಪರಿಚಯ, ಗೌರವಿಸಲ್ಪಡುವ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ಹೇಗೆ ಗೌರವಿಸಬೇಕು, ಇಸ್ಲಾಮಿನ ಪ್ರಾಥಮಿಕ ಬಾಲ್ಯ ವಿದ್ಯೆ ಮುಂತಾದ ವಿಷಯಗಳನ್ನು ಮಕ್ಕಳೊಂದಿಗೆ ಪ್ರಾಯೋಗಿಕವಾಗಿ ಸಂದರ್ಭೋಚಿತವಾಗಿ ತಿಳಿಸಿ ಕಲಿಸಿ ಕೊಡಬೇಕು. ಒಬ್ಬ ಮಗು ಉತ್ತಮನಾಗುವುದು ಅಲ್ಲಾಹನಿಂದಾದರೆ ಉತ್ತಮ ಶಿಷ್ಟಾಚಾರಗಳನ್ನು ಮೈಗೂಡಿಸಿಕೊಳ್ಳುವುದು ತಂದೆಯಿಂದಾಗಿದೆ. ಶಿಷ್ಟಾಚಾರ ( ಅದಬ್ )  ಎಂಬುದು ಸುದೀರ್ಘಾವಧಿಯಲ್ಲಿ ನಿರ್ವಹಿಸಲ್ಪಡುವ ಶ್ರಮದ ಆರಂಭಘಟ್ಟವಾಗಿದೆ. ಮಕ್ಕಳು ತನ್ನ ತಂದೆ ತಾಯಿ ಹಾಗು ಮನೆಯ ಸದಸ್ಯರಿಂದ ಅದಬ್ ಕಲಿಯಲು ಪ್ರೇರಣೆಯಾಗಬೇಕು. ಆ ರೀತಿಯ ವಾತಾವರಣವನ್ನು ಸ್ರಷ್ಠಿ ಮಾಡುವುದು ಮನೆ ಮಂದಿಯ ಕರ್ತವ್ಯವಾಗಿದೆ. ಒಮ್ಮೆ ಪ್ರವಾದಿ ಸ.ಅ ರವರ ಸಮೀಪ ಓರ್ವರು ತನ್ನ ಮಗನನ್ನು ಕರೆದುಕೊಂಡು ಬಂದು ಕೇಳಿದರು : ಪ್ರವಾದಿಯವರೇ, ನನ್ನ ಈ ಮಗುವಿನೊಂದಿಗೆ ನನ್ನ ಬಾಧ್ಯತೆಗಳೇನು, ಪ್ರವಾದಿ ಸ. ಅ ರವರು ಆ ವ್ಯಕ್ತಿಯೊಂದಿಗೆ ಈ ಮಗುವಿನ ಹೆಸರು ಉತ್ತಮವಾದುದಾಗಿರಲಿ, ಉತ್ತಮ ಶಿಷ್ಟಾಚಾರವನ್ನು ಕಲಿಸಿರಿ, ಈತನನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿರಿ ಎಂದು ಹೇಳಿದರು. 
     ಮಕ್ಕಳು ಒಳಿತಿಗಿಂತ ಕೆಡುಕಿನತ್ತ ವಾಲುವುದು ಸಾಮಾನ್ಯವಾಗಿದೆ. ಮಕ್ಕಳನ್ನು ಸರಿ ದಾರಿಗೆ ತರಬೇಕಾದುದು ಮಾತಾ ಪಿತರ ಕರ್ತವ್ಯವಾಗಿದೆ. ನೆಬಿ ಸ.ಅ ಹೇಳಿದರು : ""ಪ್ರತಿಯೊಬ್ಬ ಮಗುವು ಶುದ್ಧ ಪ್ರಕ್ರತಿಯಲ್ಲಿ ಜನಿಸುತ್ತವೆ. ಅವರನ್ನು ಯಹೂದಿಗಳನ್ನಾಗಿಯೋ, ನಸಾರಗಳನ್ನಾಗಿಯೋ ಅಗ್ನಿ ಆರಾಧಕರನ್ನಾಗಿಯೋ ಮಾಡುವುದು ಅವರ ಮಾತಾಪಿತರುಗಳಾಗಿದ್ದಾರೆ"" ಈ ಪ್ರವಾದಿ ನುಡಿಯಿಂದ ಮಕ್ಕಳು ನಿಷ್ಕಳಂಕವಾಗಿ ಹುಟ್ಟುತ್ತಾರೆ. ಅವರನ್ನು ದಾರಿ ತಪ್ಪುವವರಂತೆ ಮಾಡುವುದು ಮಾತಾಪಿತರುಗಳಾಗಿದ್ದಾರೆ ಎಂದು ತಿಳಿಯಬಹುದು. ಮಕ್ಕಳ ಭವಿಷ್ಯವು ಮಾತಾಪಿತರ ಹಸ್ತದಲ್ಲಿ ಭದ್ರವಾಗಿದೆ. ಅವರು ಮಕ್ಕಳಿಗೆ ಸರಿಯಾದ ದಾರಿ ಯಾವುದು ಕೆಟ್ಟ ದಾರಿ ಯಾವುದು ಎಂಬುದನ್ನು ಸಂದರ್ಭೋಚಿತವಾಗಿ ತಿಳಿಸಿದರೆ ಮಕ್ಕಳು ಅಡ್ಡ ದಾರಿ ಹಿಡಿಯುವ ಸಂದರ್ಭ ಬಹಳ ಕಡಿಮೆಯಾಗಿರುತ್ತದೆ. ಮಕ್ಕಳ ಮೇಲಿನ ಪ್ರೀತಿ ವ್ಯವಸ್ಥಿತವಾಗಿರಲಿ. ಜಗತ್ತಿನಲ್ಲಿರುವ ಸರ್ವ ಜೀವಿಗಳು ಅದರ ಮರಿಗಳನ್ನು ಪ್ರೀತಿಸುತ್ತವೆ. ಆದರೆ ಅವುಗಳಿಗೆ ಈ ಪ್ರೀತಿಯಿಂದ ಯಾವುದೇ ಒಂದು ಉದ್ಧೇಶ ಇರುವುದಿಲ್ಲ. ಆದರೆ ಮನುಷ್ಯನಾದವನ ಪ್ರೀತಿಯಲ್ಲಿ ಬಯಕೆಗಳು ಅಡಕವಾಗಿರುತ್ತದೆ. ಮನುಷ್ಯರು ತಮ್ಮ ಮಕ್ಕಳನ್ನು ಪ್ರೀತಿಸುವಾಗ ಆ ಪ್ರೀತಿ ಮರಳಿ ಸಿಗಬೇಕೆಂಬ ಉದ್ಧೇಶವು ಅವರಲ್ಲಿ ಅಡಕವಾಗಿರುತ್ತದೆ. ಮಕ್ಕಳ ಪ್ರಾಯ ಅನುಸರಿಸಿ ಅದಕ್ಕೆ ಅನುಗುಣವಾದ ಏನಿದೆಯೋ ಅದನ್ನು ಮಾತ್ರ ಕೊಡಬೇಕು. ಕೆಲವರು ಬೇಕಾಬಿಟ್ಟಿಯಾಗಿ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡುತ್ತಾರೆ. ಅದು ಮುಂದಕ್ಕೆ ವಿಪರೀತ ಪರಿಣಾಮ ಬೀರಬಹುದು. ಹೀಗೆ ಕೇಳಿದ್ದನ್ನೆಲ್ಲಾ ನೀಡುತ್ತಾ ಹೋದರೆ ಮುಂದೆ ಮಕ್ಕಳ ಬೇಡಿಕೆಗಳೂ ಹೆಚ್ಚಾಗುತ್ತವೆ. ಮಕ್ಕಳ ಬೇಡಿಕೆಗಳನ್ನು ಈಡೇರಿಸಲು ಅಸಾಧ್ಯವಾದಾಗ ಮಕ್ಕಳು ತಂದೆ ತಾಯಂದಿರ ಅಥವಾ ಪೋಷಕರ ಶತ್ರುವಾಗಿ ಮಾರ್ಪಡಲೂಬಹುದು. ಮಕ್ಕಳು ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಪ್ರೇರಣೆ ನೀಡಬೇಕು. ಮಕ್ಕಳಲ್ಲಿ ಒಳಿತು ಅನುಭವವಾದರೆ ಅವರನ್ನು ಪ್ರೋತ್ಸಾಹಿಸಬೇಕು. ಮಕ್ಕಳು ತಪ್ಪುದಾರಿ ಹಿಡಿಯುವುದನ್ನು ಕಂಡರೆ ಅದನ್ನು ತಿದ್ದಿ ಸರಿದಾರಿಗೆ ಬರುವಂತೆ ಮಾಡಬೇಕು. ಕೆಲವರು ಮಕ್ಕಳಲ್ಲಿ ತಪ್ಪು ಕಂಡರೂ ಅದನ್ನು ತಿದ್ದದೆ ಸುಮ್ಮನಿರುತ್ತಾರೆ. ಮಕ್ಕಳಲ್ಲವೇ ಎಂದು ಭಾವಿಸಿ ಅವರ ಮೇಲಿನ ಅತಿಯಾದ ಪ್ರೀತಿಯಿಂದ ಬೆಳೆಯಬಿಟ್ಟಿರುತ್ತಾರೆ. ಹೀಗಾದರೆ ಮಕ್ಕಳು ತಮ್ಮ ಕೆಟ್ಟ ನಡತೆಯನ್ನು ತಿದ್ದಿಕೊಳ್ಳದೆ ಹಾಗೆಯೇ ಬೆಳೆಯುತ್ತಾರೆ. ಇದು ಮುಂದಕ್ಕೆ ಬ್ರಹತ್ ಅಡ್ಡ ಪರಿಣಾಮಕ್ಕೆ ಹೇತುವಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಹಣ ನೀಡಬಾರದು. ಮೊಬೈಲ್ ಬಳಕೆಗೆ ಅವಕಾಶ ನೀಡಬಾರದು. ಮಗುವಿನ ಅಗತ್ಯತೆಗಳು ಏನಿದೆಯೋ ಅದನ್ನು ಅರಿತು ಪರಿಹಾರ ಕಾಣಬೇಕು.
ಒಮ್ಮೆ ಓರ್ವ ವ್ಯಕ್ತಿ ತನ್ನ ಮಗನ ದುರ್ನಡತೆಯ ಬಗ್ಗೆ ತನಗೆ ತೊಂದರೆ ನೀಡುತ್ತಿರುವ ಬಗ್ಗೆ ಉಮರ್ ರ.ಅ ರವರ ಬಳಿ ದೂರು ನೀಡಿದಾಗ ಉಮರ್ ರ.ಅ ಆತನ ಮಗನನ್ನು ಕರೆಯಿಸಿ ಆತನೊಂದಿಗೆ ಉಮರ್ ರ.ಅ  ತಂದೆಗೆ ತೊಂದರೆ ನೀಡುತ್ತಿದ್ದುದರ ಕುರಿತು ವಿಚಾರಿಸಿ ತನ್ನ ತಂದೆಗೆ ತಾನು ನೀಡಬೇಕಾದ ಬಾಧ್ಯತೆಗಳ ಕುರಿತು ತಿಳಿಹೇಳಿ ಎಚ್ಚರಿಸಿದರು. ಆಗ ಉಮರ್ ರ.ಅ ರವರೊಂದಿಗೆ ಆತ ಕೇಳಿದನು : ಓ ಅಮೀರುಲ್ ಮೂಮಿನೀನ್, ಮಗನಿಗೆ ನೀಡಬೇಕಾದ ಬಾಧ್ಯತೆಗಳು ತಂದೆಯ ಮೇಲೆ ಏನೂ ಇಲ್ಲವೇ? ಉಮರ್ ರ.ಅ ಹೇಳಿದರು : ತಂದೆಯಾದವನ ಮೇಲೆ ಮಗನಿಗೆ ನೀಡಬೇಕಾದ ಬಾಧ್ಯತೆಗಳೂ ಇವೆ. ಅವು ಯಾವುದು ಎಂದು ಆತ ಕೇಳಿದಾಗ ಉಮರ್ ರ.ಅ ರವರು ವಿವರಿಸಿದರು. ತಂದೆಯಾದವನು ಚಾರಿತ್ರ್ಯ ಶುದ್ಧಿಯಿರುವ ಹೆಣ್ಣನ್ನು ವಿವಾಹವಾಗುವುದು, ತನ್ನ ಮಗನಿಗೆ ಉತ್ತಮ ಹೆಸರನ್ನಿಡುವುದು ಮತ್ತು ಪವಿತ್ರ ಕುರಾನನ್ನು ಕಲಿಸುವುದು. ಆಗ ಆತ ಹೇಳುತ್ತಾನೆ : ಓ ಅಮೀರುಲ್ ಮೂಮಿನೀನ್, ನನ್ನ ತಂದೆ ಇದ್ಯಾವುದನ್ನು ಪಾಲಿಸಲಿಲ್ಲ. ನನ್ನ ತಾಯಿಯು ಅಗ್ನಿ ಆರಾಧಕನೊಂದಿಗೆ ಸಂಸಾರ ನಡೆಸುತ್ತಿದ್ದವಳಾಗಿದ್ದಳು, ಅವಳನ್ನು ನನ್ನ ತಂದೆ ಅಗ್ನಿ ಆರಾಧಕನಿಗೆ ಹಣ ನೀಡಿ ಖರೀದಿಸಿ ವಿವಾಹವಾಗಿರುವುದು, ನನಗೆ ನನ್ನ ತಂದೆ ನಾಮಕರಣ ಮಾಡಿದ್ದು ಜಿರಳೆ ಎಂಬ ಅರ್ಥ ಇರುವ ಖುಂಫಸಾಅ್ ಎಂದಾಗಿದೆ, ಕುರಾನ್ ಕಲಿಸುವುದು ಬಿಡಿ, ಅದರಿಂದ ಒಂದೇ ಒಂದು ಅಕ್ಷರ ನನಗೆ ಕಲಿಸಿ ಕೊಡಲಿಲ್ಲ. ಇಷ್ಟು ಕೇಳಿದ್ದೇ ತಡ ಉಮರ್ ರ.ಅ ರವರು ದೂರು ನೀಡಿದ ಆ ವ್ಯಕ್ತಿಯ ಕಡೆ ನೋಟ ಬೀರುತ್ತಾ ಕೇಳಿದರು : ನೀನು ನಿನ್ನ ಮಗನ ಕೆಟ್ಟ ನಡತೆಯ ಬಗ್ಗೆ ದೂರು ನೀಡಲು ಬಂದಿದ್ದೀಯಾ! ನಿನ್ನ ಮಗ ನಿನಗೆ ತೊಂದರೆ ನೀಡುತ್ತಿದ್ದಾನಲ್ವಾ! ನಿನಗೆ ನಿನ್ನ ಮಗ ತೊಂದರೆ ನೀಡುವುದಕ್ಕಿಂತ ಮುಂಚೆ ನೀನು ಅವನಿಗೆ ತೊಂದರೆ ನೀಡಿರುವಿ, ನೀನು ಅವನಿಗೆ ನೀಡಬೇಕಾದ ಬಾಧ್ಯತೆಗಳನ್ನು ಪೂರ್ತೀಕರಿಸಿಲ್ಲ, ನಿನ್ನೊಂದಿಗೆ ನಿನ್ನ ಮಗ ಕೆಟ್ಟ ನಡತೆ ತೋರಿಸುವುದಕ್ಕಿಂತ ಮೊದಲು ನೀನು ಅವನಿಗೆ ಕೆಡುಕನ್ನು ನೀಡಿರುವಿ.
ಈ ಘಟನೆಯಿಂದ ನಮಗೆ ವಿವಾಹವಾಗುವಾಗ ಧರ್ಮನಿಷ್ಠೆಯುಳ್ಳ ಚಾರಿತ್ರ್ಯ ಶುದ್ಧಿಯಿರುವ ಸ್ತ್ರೀಯನ್ನು ವಿವಾಹವಾಗಬೇಕು, ಮಕ್ಕಳಿಗೆ ಉತ್ತಮ ನಾಮಕರಣ ಮಾಡಬೇಕು ಮತ್ತು ಕುರಾನ್ ಕಲಿಸಿಕೊಡಬೇಕು ಎಂದು ತಿಳಿಯುತ್ತದೆ. ಕಾರಣ ಪ್ರಾರಂಭದಲ್ಲಿ ತಿಳಿಸಿದಂತೆ ಮಕ್ಕಳು ಹೆಚ್ಚಾಗಿ ತಾಯಿಯೊಂದಿಗೆ ಹೊಂದಿಕೊಂಡಿರುತ್ತಾರೆ. ಉತ್ತಮ ಗುಣ ನಡತೆಯ ತಾಯಿಯಾಗಿದ್ದರೆ ಮಕ್ಕಳು ಉತ್ತಮರಾಗುತ್ತಾರೆ. ದುರ್ನಡತೆಯ ತಾಯಿಯಾದರೆ ಮಕ್ಜಳು ದುರ್ಮಾರ್ಗಿಗಳಾಗುತ್ತಾರೆ. ಅದೇರೀತಿ ಶುಭಸೂಚಕವಲ್ಲದ ಹೆಸರುಗಳನ್ನು ಮಕ್ಕಳಿಗೆ ನಾಮಕರಣ ಮಾಡಿದರೆ ಅದು ಮಕ್ಕಳ ಮೇಲೆ ಪ್ರಭಾವ ಬೀಳುತ್ತದೆ ಮತ್ತು ಮಕ್ಕಳಿಗೆ ಅವರ ಪ್ರಾಯಕ್ಕನುಗುಣವಾಗಿ ಧಾರ್ಮಿಕ ವಿದ್ಯೆಯನ್ನು ನೀಡದಿದ್ದರೆ ಅದು ಮುಂದಕ್ಕೆ ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ.

ಮುಂದುವರಿಯುವುದು ಇಂಶಾ ಅಲ್ಲಾಹ್..

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...