Saturday, 1 July 2017

📖  ಮದ್ರಸ ಮತ್ತೆ ಶುಭಾರಂಭ 📖 ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ಭಾಗ - 01

📖  ಮದ್ರಸ ಮತ್ತೆ ಶುಭಾರಂಭ 📖

ಮಕ್ಕಳು ಪಾರತ್ರಿಕ ಲೋಕದ ಸಂಪತ್ತು

ಭಾಗ - 01

✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ*

*ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು*

ಮಾನವ ಸಮೂಹದ ಅತ್ಯಂತ ಅಮೂಲ್ಯವಾದ ಕಾಲ ಬಾಲ್ಯವಾಗಿದೆ. ಅತ್ಯಂತ ವರ್ಣನಾತೀತ ಸಮಯವಾಗಿದೆ ಅದು. ಶರೀರದ ಸುರಕ್ಷೆ, ಅಪಾಯಗಳ ಬಗ್ಗೆ ಚಿಂತಿಸದೆ ಹಾಯಾಗಿ ವಿಹರಿಸುವ ಕಾಲವದು. ತೊದಲು ಮಾತು, ನಗು ಹಾಗು ತುಂಟಾಟಗಳ ಮೂಲಕ ಇಡೀ ಕುಟುಂಬ ಹರ್ಷಗೊಳ್ಳುವ ಕಾಲವದು. ಬಾಲ್ಯವನ್ನು ಕಳೆದು ದೊಡ್ಡವನಾದ ಯಾವನೇ ಒಬ್ಬನು ಬಾಲ್ಯದ ಸವಿ ನೆನಪುಗಳ ಕನಸು ಕಾಣುತ್ತಾ ಮಗದೊಮ್ಮೆ ಬಾಲ್ಯ ಕಾಲ ಮರುಕಳಿಸಿದರೆ ಉತ್ತಮವಾಗಿತ್ತು ಎಂದು ಆಶೆಪಡದೇ ಇರಲಾರ. ಬಾಲ್ಯದಲ್ಲಿ ಪ್ರತಿಯೊಂದು ಜೀವಿಯು ಪ್ರೀತಿ, ಮಮತೆ, ವಾತ್ಸಲ್ಯ, ಅನುಕಂಪವನ್ನು ಬಯಸುತ್ತದೆ. ಮನುಷ್ಯನ ಸುದೀರ್ಘವಾದ ಬಾಲ್ಯ ಕಾಲವು ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಮನುಷ್ಯನ ಸರ್ವತೋಮುಖ ಅಭಿವ್ರದ್ಧಿ, ಏಳಿಗೆ ಹಾಗು ಭವಿಷ್ಯದಲ್ಲಿ ಉದ್ಭವಿಸುವ ಸರ್ವ ಎಡರು ತೊಡರುಗಳಿಂದ ಪಾರಾಗಿ ಯಶಸ್ವೀ ಜೀವನ ಸಾಗಿಸಲು ಇರುವ ತರಬೇತಿಯ ಸಮಯವಾಗಿದೆ. ಬಾಲ್ಯ ಕಾಲದಲ್ಲಿ ಮಗುವಿಗೆ ಲಭಿಸುವ ಅನುಭವ, ಜ್ಞಾನ, ತರಬೇತಿಗಳು ಆ ಮಗುವಿನ ಮುಂದಿನ ಬದುಕಿನ ಪ್ರಯಾಣಕ್ಕೆ ಸುಖಕರವಾಗಿರುತ್ತದೆ. ಅಲ್ಲಾಹನು ನಹ್ಲ್ ಅಧ್ಯಾಯದ 78 ನೇ ಸೂಕ್ತದಲ್ಲಿ ಹೇಳುತ್ತಾನೆ : ""ಅಲ್ಲಾಹನು ನಿಮ್ಮನ್ನು ನಿಮ್ಮ ತಾಯಿಯ ಉದರದಿಂದ ಏನೆಂದೂ ತಿಳಿಯದ ಸ್ಥಿತಿಯಲ್ಲಿ ಹೊರ ಬರುವಂತೆ ಮಾಡಿದನು""
     ನವಜಾತ ಶಿಶುವಿನ ಬಲ ಕಿವಿಯಲ್ಲಿ ಬಾಂಗ್ ಮತ್ತು ಎಡ ಕಿವಿಯಲ್ಲಿ ಇಖಾಮತ್ ಕೇಳಿಸಬೇಕು. ಬೇರೆ ಯಾವುದೇ ಶಬ್ದಗಳು, ಮಾತುಗಳು ಕೇಳಿಸುವುದಕ್ಕಿಂತ ಮುಂಚೆ ಇದನ್ನು ಮಾಡಬೇಕು. ಜಿನ್ನ್ ಗಳ ಒಂದು ವರ್ಗವಾಗಿದೆ ಉಮ್ಮುಸ್ಸಿಬಿಯಾನ್. ಇದರ ಉಪಟಳ ಮಗುವಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಪುಟ್ಟ ಮಕ್ಕಳಲ್ಲಿ ಗೋಚರಿಸುವ ಅಪಸ್ಮಾರ ಮುಂತಾದ ಕಾಯಿಲೆಗಳು ಈ ಉಮ್ಮುಸ್ಸಿಬಿಯಾನಿನ ಉಪಟಳವಾಗಿದೆ. ಈ ತೊಂದರೆಯಿಂದ ಪಾರು ಮಾಡಲು ಮಗುವಿನ ಕಿವಿಯಲ್ಲಿ ಬಾಂಗ್ ಕೇಳಿಸಲಾಗುತ್ತದೆ. ಮರಣ ಹೊಂದುವಾಗ ಕೊನೆಯ ಮಾತು ಲಾಇಲಾಹ ಇಲ್ಲಲ್ಲಾಹ್ ಎಂದಾದರೆ ಮಗು ತಾಯಿ ಉದರದಿಂದ ಹೊರ ಬಂದ ತಕ್ಷಣ ಮಗುವಿಗೆ ಬಾಂಗ್ ಮತ್ತು ಇಖಾಮತ್ ಕೇಳಿಸಬೇಕು. ಮಗುವಿಗೆ ಇಸ್ಲಾಮಿನ ಉತ್ತಮ ಹೆಸರುಗಳನ್ನಿಡಬೇಕು. ಅಬ್ದುಲ್ಲಾಹ್, ಅಬ್ದುರ್ರಹ್ಮಾನ್, ಮುಹಮ್ಮದ್ ಅತ್ಯುತ್ತಮ ಹೆಸರುಗಳಾಗಿವೆ. ಪೂರ್ವಕಾಲ ಇಸ್ಲಾಮಿನ ವಿದ್ವಾಂಸರುಗಳ, ಮಹಾನರುಗಳ ಹೆಸರು ಉತ್ತಮವಾಗಿದೆ. ಇಸ್ಲಾಮಿಕವಲ್ಲದ, ಶುಭಸೂಚಕವಲ್ಲದ, ಉತ್ತಮ ಅರ್ಥ ನೀಡದ ಹೆಸರುಗಳನ್ನು ಮಗುವಿಗೆ ಹಾಕಬಾರದು. ಮಗುವಿಗೆ ಉತ್ತಮ ಹೆಸರುಗಳನ್ನು ಹಾಕಬೇಕು, ಶುಭ ಸೂಚಕವಲ್ಲದ ಹೆಸರುಗಳನ್ನು ಹಾಕಬಾರದೆಂದು ನೆಬಿ ಸ.ಅ ಹೇಳಿದ್ದಾರೆ. ಇಸ್ಲಾಮಿನ ನಾಲ್ಖನೇ ಖಲೀಫ ಅಲಿಯ್ಯುಬ್ನು ಅಬೀ ತಾಲಿಬ್ ರ.ಅ ತಮ್ಮ ಪುತ್ರನಿಗೆ ""ಯುದ್ಧ"" ಎಂಬ ಅರ್ಥವಿರುವ ""ಹರ್ಬ್"" ಎಂಬ ನಾಮಕರಣ ಮಾಡಿದ್ದರು. ಒಮ್ಮೆ ನೆಬಿ ಸ.ಅ ರವರು ಅಲಿಯ್ಯುಬ್ನು ಅಬೀ ತಾಲಿಬ್ ರ.ಅ ರವರೊಂದಿಗೆ ಪುತ್ರನ ಕುರಿತು ಅವನಿಗೆ ಯಾವ ಹೆಸರಿಟ್ಟಿದ್ದೀರಿ ಎಂದು ಕೇಳಿದರು. ಅಲಿಯ್ಯ್ ರ.ಅ ಹೇಳಿದರು : ನಾನು ಹರ್ಬ್ ಎಂಬ ನಾಮಕರಣ ಮಾಡಿದ್ದೇನೆ. ಆಗ ನೆಬಿ ಸ.ಅ ರವರು ಹಾಗಲ್ಲ, ಅವನು ""ಹಸನ್"" ಆಗಿದ್ದಾನೆ ಅಂದರು. ( ಅಲಿಯ್ಯ್ ರ.ಅ ನಿವೇದನೆ )
         ನವಜಾತ ಶಿಶುವಿನಲ್ಲಿ ಅಳು ಮಾತ್ರ ಕಾಣಲು ಸಾಧ್ಯ. ಬಳಿಕ ಮಗುವಿನ ಮೆದುಳು ಕ್ರಿಯಾಶೀಲವಾಗಲು ಪ್ರಾರಂಭವಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ಸುತ್ತಮುತ್ತಲ ಪರಿಸರದ ಬಗ್ಗೆ ಪ್ರಜ್ಞೆ ಮೂಡುತ್ತದೆ. ಈ ಪ್ರಜ್ಞೆಯಿಂದ ಮಗು ನಾನೋರ್ವ ವ್ಯಕ್ತಿ, ನಾನು ಕುಟುಂಬದ ಓರ್ವ ಸದಸ್ಯ ಎಂದು ತಿಳಿದುಕೊಳ್ಳುತ್ತದೆ. ಹೆತ್ತ ಮಗು ಅಳುತ್ತದೆ. ದಿನಗಳು ಕಳೆದಂತೆ ಕೈಕಾಲುಗಳು ಬಡಿಯುವುದು, ಅಳುವುದು, ನಗುವುದು, ಮಾಡುತ್ತದೆ. ಮಗುವಿಗೆ ಹಸಿವು, ಬಾಯಾರಿಕೆ, ನಿದ್ರೆ, ನೋವು, ಮಲಮೂತ್ರ ವಿಸರ್ಜನೆ, ಭಯ ಮುಂತಾದುವುಗಳು ಅಳುವಿನಿಂದಲೇ ತಿಳಿಸುತ್ತದೆ, ಏನಾದರೊಂದು ವಸ್ತುವನ್ನು ಪಡೆಯಲು ಅಥವಾ ನಿರಾಕರಿಸಲು ಅಳುವಿನ ಮೂಲಕವೇ ತಿಳಿಸುತ್ತದೆ. ಮಗುವಿಗೆ ಮೂರು ತಿಂಗಳೊಳಗೆ ತನ್ನ ತಾಯಿಯ ಪರಿಚಯವಾಗುವುದು. ಬಳಿಕ ಮನೆಯ ಸದಸ್ಯರೆಲ್ಲರ ಪರಿಚಯವಾಗುತ್ತದೆ. ತಾಯಿಯ ಶಬ್ದ ಕೇಳಿದಾಗ, ತಾಯಿಯನ್ನು ಕಂಡಾಗ ಮಗು ಅಳು ನಿಲ್ಲಿಸುವುದು ಅಥವಾ ಅಳು ಪ್ರಾರಂಭಿಸುವುದು ಆ ಮಗುವಿಗೆ ತಾಯಿಯ ಗುರುತಿಸುವಿಕೆ ಉಂಟಾಗಿದೆ ಎಂಬುವುದರ ಸೂಚನೆಯಾಗಿದೆ. ಮಗುವಿನ ನೋಟ, ನಗು ಪ್ರಾರಂಭವಾಗುವುದರೊಂದಿಗೆ ಯೋಚನಾ ಶಕ್ತಿ ಬೆಳೆಯುತ್ತದೆ. ಯೋಚನಾ ಶಕ್ತಿ ಮೆಲ್ಲಮೆಲ್ಲನೆ ಅಭಿವ್ರದ್ದಿಹೊಂದುತ್ತಿರುವಾಗ ಮಗು ಅಸ್ಪಷ್ಟವಾದ ತೊದಲು ಮಾತುಗಳನ್ನಾಡಲು ಪ್ರಾರಂಭಿಸುತ್ತದೆ. ಮಗು ಮೊತ್ತ ಮೊದಲಾಗಿ ಸಾಮಾನ್ಯವಾಗಿ ಉಚ್ಚರಿಸುವ ಪದವಾಗಿದೆ ಉಮ್ಮಾ ..ಉಮ್ಮಾ... ಬಳಿಕ ಬಾಪಾ.. ಬಾಪಾ... ಎಂದಾಗಿದೆ. ಮಗು ಮಾತನಾಡಲು ಶುರು ಮಾಡಿದೊಡನೆ ತಂದೆ ತಾಯಿಯಂದಿರು ತುಂಬಾ ಅಲರ್ಟಾಗಿರಬೇಕು. ನೆಬಿ ಸ.ಅ ಹೇಳುತ್ತಾರೆ : ""ನಿಮ್ಮ ಮಕ್ಕಳ ಮಾತಿನ ಪ್ರಾರಂಭ 'ಲಾಇಲಾಹ ಇಲ್ಲಲ್ಲಾಹ್' ಎಂದಾಗಿರಲಿ"" ( ನಿವೇದನೆ : ಇಬ್ನು ಅಬ್ಬಾಸ್ ರ.ಅ ) ಈ ತೌಹೀದಿನ ವಚನವನ್ನು ತಂದೆ ತಾಯಂದಿರು ನಿರಂತರ ಮಗುವಿಗೆ ಕೇಳಿಸಿ ಕಲಿಸಿ ಕೊಡಬೇಕು, ಮಗುವಿನ ಮನಃದಲ್ಲಿ ಈ ವಚನ ನಾಟುವಂತೆ ಮಾಡಬೇಕು. ಮುಂದೆ ಮಗು ಒಂದೊಂದೇ ವಸ್ತುಗಳ ಹೆಸರುಗಳು, ಮನೆಯಲ್ಲಿರುವ ಇತರರ ಹೆಸರುಗಳನ್ನು ಕಲಿತು ಬಿಡುತ್ತವೆ. ಕಲಿಕೆ ಎಂಬುದು ತೊಟ್ಟಿಲಿನಿಂದ ಮಂಚದ ತನಕ ಎಂದು ಪೂರ್ವಕಾಲ ವಿದ್ವಾಂಸರೊಬ್ಬರ ನುಡಿ ಇದೆ. ಅಂದರೆ ಕಲಿಕೆ ಎಂಬುದು ಚಿಕ್ಕಂದಿನಿಂದಲೇ ಪ್ರಾರಂಭಗೊಂಡು ಮರಣದ ತನಕವಾಗಿರುತ್ತದೆ ಎಂದಾಗಿದೆ. ಮಗುವಿಗೆ ಐದು ವರ್ಷದವರೆಗೆ ತಂದೆ ತಾಯಿಯಂದಿರು ಉತ್ತಮ ಮಾತುಗಳನ್ನು, ಉತ್ತಮ ವಾಕ್ಯಗಳನ್ನು ಪ್ರೀತಿ, ಮಮತೆ, ವಾತ್ಸಲ್ಯದಿಂದ ಕಲಿಸಿಕೊಡಬೇಕು. ತಾಯಿಯಂದಿರು ಹೆಚ್ಚು ಗಮನವಹಿಸುವುದು ಅನಿವಾರ್ಯವಾಗಿದೆ. ಮಗು ತಾಯಿಯೊಂದಿಗೆ ಅಧಿಕವಾಗಿ ಹೊಂದಿಕೊಂಡಿರುತ್ತದೆ. ತಾಯಿಯ ಸ್ವಭಾವ ಹೇಗಿದೆಯೋ ಅದೇ ರೀತಿ ಮಗುವಿನ ಸ್ವಭಾವವಿರುತ್ತದೆ.
"ನೀನು ವಿವಾಹವಾಗುವುದಾದರೆ ಉತ್ತಮ ಧರ್ಮ ನಿಷ್ಠೆಯುಳ್ಳ ಸ್ತ್ರೀಯನ್ನು ವಿವಾಹವಾಗು"" ಎಂಬ ಪ್ರವಾದಿ ಸ.ಅ ರವರ ವಚನ ಇಲ್ಲಿ ಎಷ್ಟೊಂದು ಪ್ರಸ್ತುತವೆನಿಸುತ್ತದೆ. ಕಾರಣ ಮಗು ಹೆಚ್ಚು ತಾಯಿಯ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತದೆ. ತಾಯಿಯ ಸ್ವಭಾವ ಉತ್ತಮವಾಗಿದ್ದರೆ ಮಗು ಉತ್ತಮ ಸ್ವಭಾವದವನಾಗಿ ಮುಂದೆ ವಿಜಯಿಯಾಗುತ್ತಾನೆ. ತಾಯಿಯ ಸ್ವಭಾವ ಕೆಟ್ಟದಾಗಿದ್ದರೆ ಮಗು ಅದನ್ನು ಅನುಗಮಿಸಿ ಮುಂದೆ ಕೆಟ್ಟವನಾಗಿ ಉಭಯಲೋಕದಲ್ಲೂ ಪರಾಜಿತನಾಗುವ ಸಾಧ್ಯತೆ ಹೆಚ್ಚಾಗಿದೆ. ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿ ಇದೆ. ಮನೆಯ ವಾತಾವರಣ ಉತ್ತಮವಾದುದನ್ನು ಕಲಿಯಲು ಮತ್ತು ಜೀವನದಲ್ಲಿ ಅಳವಡಿಸಲು ಸೂಕ್ತವಾದುದಾಗಿರಬೇಕು. ಮಗು ಐದು ವರ್ಷಗಳ ಕಾಲ ತಂದೆ ತಾಯಿಯಂದಿರ ಮತ್ತು ಮನೆಯ ಇತರರ ಪ್ರೀತಿ, ಮಮತೆ, ಲಾಲನೆ ಪೋಷಣೆಯಲ್ಲಿಯೇ ಬೆಳೆದು ಬರುವಂತಾಗಬೇಕು. ಐದು ವರ್ಷದೊಳಗಿನ ಮಕ್ಕಳಿಗಾಗಿ ಇಂದು ವಿವಿಧ ಹೆಸರುಗಳಲ್ಲಿ ಕಿಡ್ಸ್ ಸ್ಕೂಲ್ ಕಾರ್ಯಾಚರಿಸುತ್ತಿವೆ. ಇದು ಕೇವಲ ಹಣ ಮಾಡುವ ದಂಧೆ ಮಾತ್ರವಾಗಿದೆ. ಇದರಿಂದ ತಂದೆ ತಾಯಿ ಹಾಗು ಮನೆಯ ಸದಸ್ಯರಿಂದ ಮಗುವಿಗೆ ಸಿಗಬೇಕಾದ ಪ್ರೀತಿ ವಾತ್ಸಲ್ಯ ಇಲ್ಲವಾಗುತ್ತದೆ. ತುಂಟಾಟದೊಂದಿಗೆ ಮಗು ಮನೆಯಲ್ಲಿ ಕಳೆಯಲು ಅವಕಾಶ ಇಲ್ಲದಾಗುತ್ತದೆ ಮಾತ್ರವಲ್ಲ ಮಗುವಿನ ಮುಂದಿನ ಜೀವನದಲ್ಲಿ ಭಾರೀ ಪರಿಣಾಮ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ..

-----------------------------------------------

ಮುಂದುವರಿಯುವುದು ಇಂಶಾ ಅಲ್ಲಾಹ್

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...