Wednesday, 16 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ 14

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -14

ಬದರ್ ಯುದ್ಧ...

ಹಿಜರಿ ಎರಡನೆಯ ವರ್ಷ ರಮಳಾನ್ ತಿಂಗಳ 17 ರಂದು ನಡೆದ ಐತಿಹಾಸಿಕ ಬದರ್ ಯುದ್ಧ ಚಾರಿತ್ರಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.ಈ ಯುದ್ಧದ ಮುಂಚೆಯೋ ನಂತರವೋ ಅಂತಹ ಒಂದು ಯುದ್ಧ ನಡೆದಿಲ್ಲ.ಅಬೂ ಸುಫ್ಯಾನುಬ್ನು ಹರ್ಬ್ ಕುರೈಶಿಗಳ ವ್ಯಾಪಾರ ಸಂಘಕ್ಕೆ ನೇತ್ರತ್ವವನ್ನು ನೀಡಿ ಸಿರಿಯಾ ಕ್ಕೆ ಹೋದರು.ವ್ಯಾಪಾರ ಸಂಘದಲ್ಲಿ 27 ಮಂದಿಯಿದ್ದರು.ಅವರು ಸಿರಿಯಾದಿಂದ ಮರಳಿ ಬರುವಾಗ ನೆಬಿ ಸ.ಅ 313 ಸ್ವಹಾಬಿಗಳೊಂದಿಗೆ ಅವರನ್ನು ಸೆರೆ ಹಿಡಿಯಲು ಹೊರಟರು.ಈ ವಿಷಯವನ್ನು ಅರಿತ ಅಬೂ ಸುಫ್ಯಾನ್ ಕುರೈಶಿಗಳಿಗೆ ವಿಷಯ ಮುಟ್ಟಿಸಲು ಲಂಲಮುಬ್ನು ಅಮ್ರಿನಿಲ್ ಗಿಫಾರಿಯನ್ನು ಕಳುಹಿಸಿದರು.
       ಈ ವಾರ್ತೆ ಕೇಳಿ ಮಕ್ಕಾ ನಿವಾಸಿಗಳೆಲ್ಲರೂ ಎಚ್ಚೆತ್ತರು.ಅವರು ಅಬೂಜಹಲನ ನೇತ್ರತ್ವದಲ್ಲಿ ಹೊರಟರು.ಈ ಸಂಘದಲ್ಲಿ ಸಾವಿರ ಸೈನಿಕರು, ನೂರು ಕುದುರೆಗಳು, ಏಳು ನೂರು ಒಂಟೆಗಳು ಇದ್ದವು.ವಾದ್ಯಮೇಳಗಳು ನರ್ತಕಿಗಳಾದ ಸ್ತ್ರೀಯರು ಒಳಗೊಂಡ ಈ ಸಂಘವು ಕುಣಿದು ಕುಪ್ಪಳಿಸುತ್ತಾ ಕೇಕೆಹಾಕುತ್ತಾ ಯುದ್ಧಕ್ಕೆ ಬೇಕಾದ ಸರ್ವ ಸಜ್ಜೀಕರಣದೊಂದಿಗೆ ಸಾಗುತ್ತಿತ್ತು.ಆದರೆ ನೆಬಿ ಸ.ಅ ರವರ ಸಂಘದಲ್ಲಿ ಕೇವಲ ಎರಡು ಕುದುರೆಗಳು ಮತ್ತು ಎಪ್ಪತ್ತು ಒಂಟೆಗಳು ಮಾತ್ರ ಇದ್ದವು.ಹೀಗಿರಲು ಅಬೂ ಸುಫ್ಯಾನ್ ಮತ್ತು ವ್ಯಾಪಾರ ಸಂಘ ಕಡಲು ಕಿನಾರೆಯ ದಾರಿ ಮೂಲಕ ಸುರಕ್ಷಿತರಾಗಿ ಮಕ್ಕಾ ತಲುಪಿದರು.ಅಬೂ ಜಹಲನ  ನೇತ್ರತ್ವದಲ್ಲಿ ಹೊರಟ ಸೈನ್ಯದೊಂದಿಗೆ ಮರಳಿ ಹೋಗಲು ಅಬೂಸುಫ್ಯಾನ್ ತಿಳಿಸಿದರು.ನಾವು ಮಕ್ಕಾ ತಲುಪಿದ್ದೇವೆ.ನೀವು ಯುದ್ಧ ಮಾಡುವುದು ಬೇಡ.ಹಿಂದಕ್ಕೆ ಮರಳಿ ಬನ್ನಿ ಎಂದು ಅಬೂಸುಫ್ಯಾನ್ ತಿಳಿಸಿದರೂ ಅಬೂಜಹಲ್ ಇದನ್ನು ಸಮ್ಮತಿಸಲಿಲ್ಲ.ಬದರ್ ಭೂಮಿಗೆ ತಲುಪಿ ಮೂರು ದಿವಸ ಅಲ್ಲಿ ಒಂಟೆಗಳನ್ನು ಕೊಯ್ದು ಮಾಂಸ ಮಾಡಿ ತಿಂದು ತೇಗಿ ಎಲ್ಲರಿಗೂ ನೀಡಿ ಮದ್ಯವನ್ನು ಕುಡಿಯುತ್ತಾ ತಂಗುವೆವು ಎಂದು ಅಬೂ ಜಹಲ್ ಅಹಂಕಾರದಿಂದ ಪ್ರಖ್ಯಾಪಿಸಿದನು.ಅರಬಿಗಳು ನಮ್ಮನ್ನು ಕಂಡು ಹೆದರಿ ಬದುಕಲು ಹೀಗೆ ಮಾಡುವುದು ಅನಿವಾರ್ಯವಾಗಿದೆ ಎಂದು ಅಬೂಜಹಲ್ ಅಭಿಪ್ರಾಯಪಟ್ಟನು.ಅಬೂಜಹಲನ ಈ ನಿರ್ಧಾರ ಸರಿ ಕಾಣದ ಬನೂಝುಹರ ಗೋತ್ರದ ನೂರು ಮಂದಿ ಹಿಂದೆ ಸರಿದು ಅವರು ಮರಳಿ ಮಕ್ಕಾಕ್ಕೆ ಹೋದರು.
        ನೆಬಿ ಸ.ಅ ಮತ್ತು ಸ್ವಹಾಬಿಗಳು ಬದರ್ ತಲುಪಿದರು.ಸ್ವಹಾಬಿಗಳೊಂದಿಗೆ ನೆಬಿ ಸ.ಅ ಹೇಳಿದರು.ಇದೋ ನೋಡಿ ನಿಮ್ಮ ಮುಂದೆ ಮಕ್ಕಾದ ನಿಮ್ಮ ಪ್ರೀತಿಪಾತ್ರರು.ನಿಮ್ಮ ಬಂಧುಗಳು.ನೆಬಿ ಸ.ಅ ಮತ್ತು ಸ್ವಹಾಬಿಗಳು ಬದರಿನ ನೀರಿನ ಒರತೆಯಿರುವ ಜಾಗದಲ್ಲಿ ಟೆಂಟ್ ಹಾಕಿದರು.ಮುಶ್ರಿಕರಿಗೆ ನೀರು ಸಿಗದಿರಲು ಬಾಕಿ ಇರುವ ಎಲ್ಲಾ ನೀರಿನ ಗುಂಡಿಗಳನ್ನು ಮುಚ್ಚಿದರು.ಯುದ್ಧ ರಣರಂಗವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಿರುವ ಎತ್ತರದ ಸ್ಥಳದಲ್ಲಿ ನೆಬಿ ಸ.ಅ ರವರಿಗೆ ವಿಶ್ರಾಂತಿಗಾಗಿ ಟೆಂಟನ್ನು ಹಾಕಲಾಯಿತು.
ನೆಬಿ ಸ.ಅ ಹಾಗು ಸ್ವಹಾಬಿಗಳು ಪ್ರಾರ್ಥನೆಯಲ್ಲಿ ನಿರತರಾಗಿ ರಾತ್ರಿಯನ್ನು ಕಳೆದರು.ನೆಬಿ ಸ.ಅ ಸುಜೂದಿನಲ್ಲಿ " ಯಾ ಹಯ್ಯುನ್ ಯಾ ಖಯ್ಯೂಂ " ಎಂದು ಹೇಳುತ್ತಿದ್ದರು. ರಾತ್ರಿ ಕಳೆದು ಹಗಲಾದಾಗ ಎರಡು ವಿಭಾಗಗಳು ಪರಸ್ಪರ ರಣರಂಗಕ್ಕಿಳಿದರು.ಮುಶ್ರಿಕರ ಭಾಗದಿಂದ ಅಸ್ವದುಲ್ ಮಖ್ಝೂಮಿ ಎರಗಿ ಬಂದು ಮುಸ್ಲಿಮರ ವಶದಲ್ಲಿರುವ ನೀರಿನ ಹೌಲಿನಿಂದ ನೀರು ಕುಡಿಯುವೆನೆಂದೂ ಅಥವಾ ಅದನ್ನು ಧ್ವಂಸಗೈಯ್ಯುವೆನೆಂದೂ ಆ ಮಾರ್ಗದಲ್ಲಿ ಸಾಯುವೆನೆಂದೂ ಶಪಥ ಮಾಡಿ ಮುನ್ನುಗ್ಗಿದ.ಅದೇ ರಭಸದಲ್ಲಿ ಹಂಝ ರ.ಅ ಮುನ್ನುಗ್ಗಿ ಅವನ ಕಾಲಿಗೆ ಬೀಸಿದರು.ಕಾಲಿಗೆ ಗಾಯವಾದರೂ ಅವನು ಮತ್ತೆ ಮುಸ್ಲಿಮರ ಹೌಲಿನ ಕಡೆ ಧಾವಿಸಿದಾಗ ಹಂಝ ರ.ಅ ಅವನನ್ನು ಅಲ್ಲಿ ಕೊಂದು ಹಾಕಿದರು.ಬಳಿಕ ದ್ವಂದ್ವ ಯುದ್ಧ ಆರಂಭವಾಯಿತು.ಕುರೈಶಿಗಳಲ್ಲಿ ಉತ್ಬತು ಇಬ್ನು ರಬೀಅಃ, ಸಹೋದರ ಶೈಬಃ ಹಾಗು ಮಗ ವಲೀದನೊಂದಿಗೆ ಕ್ರಮವಾಗಿ ಉಬೈದ ರ.ಅ, ಹಂಝ ರ.ಅ ಹಾಗು ಅಲೀ ರ.ಅ ಹೋರಾಡಿದರು.ಘೋರವಾದ ಯುದ್ಧ ನಡೆಯಿತು.ಹಂಝ ರ.ಅ ಮತ್ತು ಅಲೀ ರ.ಅ ಕೈಯಿಂದ ಶೈಬ ಮತ್ತು ವಲೀದ್ ಸಾವನ್ನಪ್ಪಿದರು.ಉಬೈದ ರ.ಅ ಮತ್ತು ಉತ್ಬತ್ ಪರಸ್ಪರ ಕಾದಾಡಿದರು.ಇಬ್ಬರಿಗೂ ತೀವ್ರ ಗಾಯಗಳಾಗಿದ್ದವು.ಇದನ್ನು ಕಂಡ ಹಂಝ ರ.ಅ ಮತ್ತು ಅಲಿ ರ.ಅ ಧಾವಿಸಿ ಬಂದು ಉತ್ಬತ್ ನನ್ನು ಕೊಂದು ಹಾಕಿದರು.ತೀವ್ರ ಗಾಯವಾಗಿದ್ದ ಉಬೈದ ರ.ಅ ರವರನ್ನು ನೆಬಿ ಸ.ಅ ರವರ ಸಮೀಪ ಕರೆದು ಕೊಂಡು ಹೋಗಲಾಯಿತು.( ಯುದ್ಧ ಮುಗಿದ ನಂತರ ಮದೀನಕ್ಕೆ ಮರಳಿ ಹೋಗುವಾಗ ಉಬೈದ ರ.ಅ ಶಹೀದಾದರು.)
        ಈಗ ಶತ್ರು ಪಾಳಯದಿಂದ ನಾಲ್ಕು ಮಂದಿ ಹತರಾದರು.ಮುಸ್ಲಿಂ ಪಾಳಯದಲ್ಲಿ ಉಬೈದ ರ.ಅ ತೀವ್ರ ಗಾಯವಾಗಿದ್ದಾರೆ.ಇದಾದ ಬಳಿಕ ನೆಬಿ ಸ.ಅ ಸ್ವಹಾಬಿಗಳನ್ನು ಸಾಲಾಗಿ ನಿಲ್ಲಿಸಿ ಧರ್ಮ ಯುದ್ಧದ ಪ್ರಾಧಾನ್ಯತೆಯನ್ನು ವಿವರಿಸಿ ಕೊಟ್ಟರು.ನೆಬಿ ಸ.ಅ ತನ್ನ ಎರಡು ಕೈಗಳನ್ನೆತ್ತಿ ಪ್ರಾರ್ಥಿಸಿದರು."" ಅಲ್ಲಾಹನೇ, ಮುಸ್ಲಿಮರು ಇಂದು ನಾಶ ಹೊಂದಿದರೆ ಭೂಮಿ ಮೇಲೆ ನಿನ್ನನ್ನು ಆರಾಧಿಸಲು ಬೇರೆ ಯಾರೂ ಇರಲಾರರು.ಶತ್ರುಗಳು ಪರಾಜಯ ಹೊಂದಲಿರುವರೆಂಬ ನಿನ್ನ ಮಾತನ್ನು ಪೂರ್ತಿಗೊಳಿಸು ಅಲ್ಲಾಹುವೇ ""  ಬಳಿಕ ನೆಬಿ ಸ.ಅ ಸ್ವಹಾಬಿಗಳೊಂದಿಗೆ ಅವರು ಪರಾಜಯ ಹೊಂದಲಿರುವರು ಎಂದು ಪ್ರಖ್ಯಾಪಿಸಿದರು.
      ಮುಸ್ಲಿಮರು ಮತ್ತು ಶತ್ರುಗಳೆಡೆಯಲ್ಲಿ ಪರಸ್ಪರ ಯುದ್ಧ ಶುರುವಾಯಿತು.ಘೋರ ಯುದ್ಧ ನಡೆಯಿತು.ಅಲ್ಲಾಹು ಮಲಕುಗಳನ್ನು ಧರೆಗೆ ಇಳಿಸಿ ಮುಸ್ಲಿಮರನ್ನು ಸಹಾಯಿಸಿದನು.ಮುಶ್ರಿಕರಾದ ಶತ್ರುಗಳು ಪರಾಜಯ ಹೊಂದಿದರು.ಅಬೂ ಜಹಲ್, ಉಮಯ್ಯಃ ಒಳಗೊಂಡ ನೇತಾರರು ಸೇರಿ ಎಪ್ಪತ್ತು ಮಂದಿ ಸಾವನ್ನಪ್ಪಿದರು.ಎಪ್ಪತ್ತು ಮಂದಿ ಶತ್ರುಗಳು ಬಂಧನಕ್ಕೊಳಗಾದರು.ಮುಸ್ಲಿಮರಲ್ಲಿ 14 ಮಂದಿ ರಕ್ತ ಸಾಕ್ಷಿಗಳಾದರು.ಆರು ಮುಹಾಜಿರುಗಳು ಮತ್ತು ಎಂಟು ಅನ್ಸಾರಿಗಳು.
    ಸತ್ಯ ಮತ್ತು ಅಸತ್ಯ ಬೇರ್ಪಟ್ಟ ಬದರ್ ಯುದ್ಧ ದಿನವು " ಯೌಮುಲ್ ಫುರ್ಖಾನ್ " ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು.ಆದುದರಿಂದಲೇ ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರ್ ಶುಹದಾಗಳಿಗೆ ಅತ್ಯಂತ ಮಹತ್ತರವಾದ ಪದವಿ ಲಭಿಸಿತು.ಅವರ ಕಳೆದು ಹೋದ ಪಾಪಗಳನ್ನು ಮತ್ತು ಮುಂದಿನ ಪಾಪಗಳನ್ನು ಮನ್ನಿಸಿದ್ದೇನೆ ಎಂದು ಅಲ್ಲಾಹನು ತಿಳಿಸಿದನು.ಎಲ್ಲಾ ವರ್ಷದ ರಮಳಾನ್ ಹದಿನೇಳರಂದು ಮತ್ತು ಇತರ ದಿವಸಗಳಲ್ಲಿಯೂ ಮುಸ್ಲಿಮರು ಬದರೀಙಳನ್ನು ಅನುಸ್ಮರಿಸುತ್ತಾರೆ.ಅವರ ಬರ್ಕತ್ತಿನಿಂದ ಅಲ್ಲಾಹು ನಮ್ಮನ್ನು ಇಹಪರದಲ್ಲಿ ವಿಜಯಗೊಳಿಸಲಿ.ಆಮೀನ್..

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...