Friday, 18 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ - 15

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -15

ಉಹುದ್ ಯುದ್ಧ...

ಬದರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲು ಕುರೈಶಿಗಳು ತೀರ್ಮಾನಿಸಿದರು.ಅಬೂಸುಫ್ಯಾನ್ ನೇತ್ರತ್ವದ ವ್ಯಾಪಾರ ಸಂಘದ ಲಾಭ ಪೂರ್ತಿ ಬದರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲಿಕ್ಕೆ ವಿನಿಯೋಗಿಸಲು ಅವರು ಒಮ್ಮತಾಭಿಪ್ರಾಯಕ್ಕೆ  ಬಂದರು.ಅಬೂಸುಫ್ಯಾನನ ನೇತ್ರತ್ವದಲ್ಲಿ 200 ಕುದುರೆಗಳೊಂದಿಗೆ ಸರ್ವ ಸನ್ನಾಹಗಳೊಂದಿಗೆ 3,000 ಯುದ್ಧ ಸೇನಾನಿಗಳು ಹೊರಟರು.ನೆಬಿ ಸ.ಅ ಸ್ವಹಾಬಿಗಳೊಂದಿಗೆ ಸೇರಿ ಆಲೋಚಿಸಿ ಕುರೈಶಿಗಳನ್ನು ಎದುರಿಸಲು ಸಾವಿರ ಸೈನಿಕರೊಂದಿಗೆ ರೆಡಿಯಾದರು.ಇದು ಹಿಜ್ರಾ ಮೂರನೇ ವರ್ಷ ಶವ್ವಾಲ್ ಹದಿನೈದರಂದಾಗಿತ್ತು.ದಾರಿ ಮಧ್ಯೆ ಮುಸ್ಲಿಂ ಸೈನ್ಯದಿಂದ ಮುನಾಫಿಖಾದ ಅಬ್ದುಲ್ಲಾಹಿ ಇಬ್ನು ಸಲೂಲ್ ಮತ್ತು ಆತನ ಮುನ್ನೂರು ಅನುಯಾಯಿಗಳು ತಿರುಗಿ ಹೋದರು.
      ನೆಬಿ ಸ.ಅ ಉಹುದ್ ಪರ್ವತದ ಬಳಿ ತಲುಪಿದರು.ಪರ್ವತದ ಹತ್ತಿರವಿರುವ ರುಮಾತ್ ಬೆಟ್ಟದ ಮೇಲೆ ಬಿಲ್ಲು ಎಸೆಯುವಿಕೆಯಲ್ಲಿ ನೈಪುಣ್ಯತೆ ಇರುವ ಐವತ್ತು ಮಂದಿಯನ್ನು ಕಾವಲು ನಿಲ್ಲಿಸಿದರು.ಆದೇಶ ಬಂದ ಮೇಲೆಯೇ ಅಲ್ಲಿಂದ ಇಳಿದು ಬರಬೇಕೆಂದು ನೆಬಿ ಸ.ಅ ಅವರೊಂದಿಗೆ ಸೂಚಿಸಿದರು.ಯುದ್ಧ ಪ್ರಾರಂಭವಾಯಿತು.ಕುರೈಶಿಗಳು ಪರಾಜಿತರಾದರು.ಚೆಲ್ಲಾಪಿಲ್ಲಿಯಾಗಿ ಕುರೈಶಿಗಳು ಓಡ ತೊಡಗಿದರು.ಇದನ್ನು ಕಂಡು ರುಮಾತ್ ಬೆಟ್ಟದ ಮೇಲಿದ್ಧ ಅಧಿಕ ಮಂದಿಯೂ ಕೆಳಗೆ ಇಳಿದು ಬಂದರು.ಆಗ ಕುರೈಶಿಗಳು ಖಾಲಿದು ಇಬ್ನು ವಲೀದನ ನೇತ್ರತ್ವದಲ್ಲಿ ಹಿಂದಿನಿಂದ ಬಂದು ಬೆಟ್ಟದಲ್ಲಿದ್ದ ಉಳಿದವರನ್ನು ವಧಿಸಿದರು.ಮುಸ್ಲಿಮರ ವಿರುದ್ಧ ಆಕ್ರಮಣ ತೀವ್ರ ಸ್ವರೂಪ ಪಡೆಯಿತು.ಪರಿಂಭ್ರಾತರಾದ ಮುಸ್ಲಿಮರು ಛಿನ್ನಭಿನ್ನವಾಗಿ ಓಡಿದರು.ಆದರೆ ನೆಬಿ ಸ.ಅ ಮತ್ತು ಕೆಲವು ಸ್ವಹಾಬಿಗಳು ವೀರಾವೇಶದಿಂದ ಹೋರಾಡಿದರು.ನೆಬಿ ಸ.ಅ ರವರ ಪವಿತ್ರ ಮುಖಕ್ಕೆ ಗಾಯವಾಯಿತು.ಮುಂದಿನ ಹಲ್ಲು ಸೀಳಿ ಹೋದವು.ಹಂಝ ರ.ಅ ಸೇರಿ ಎಪ್ಪತ್ತು ಮುಸ್ಲಿಮರು ಶಹೀದಾದರು.ಕುರೈಶಿಗಳಲ್ಲಿ ಇಪ್ಪತ್ತಮೂರು ಮಂದಿ ಸಾವನ್ನಪ್ಪಿದರು.ನೆಬಿ ಸ.ಅ ಆದೇಶವನ್ನು ಪಾಲಿಸದೆ ರುಮಾತ್ ಬೆಟ್ಟದಿಂದ ಇಳಿದು ಬಂದದ್ದೇ ಮುಸ್ಲಿಮರ ಪರಾಜಯಕ್ಕೆ ಹೇತುವಾಯಿತು..
                    ಹಿಜ್ರಾ ಎರಡನೆಯ ವರ್ಷ ಬನೂ ಖೈನುಖಾಹ್ ಗೋತ್ರದವರನ್ನು ನೆಬಿ ಸ.ಅ ಸಿರಿಯಾದ ಅಝ್ರಿಆತ್ ಗೆ ಗಡೀಪಾರು ಮಾಡಿದ್ದರು.ಅವರು ಶಾಂತಿ ಒಪ್ಪಂದವನ್ನು ಮುರಿದ ಕಾರಣದಿಂದ ಗಡೀಪಾರು ಮಾಡಲಾಗಿತ್ತು.ನೆಬಿ ಸ.ಅ ರವರನ್ನು ವಧಿಸಲು ಗೂಢಾಲೋಚನೆ ಮಾಡಿದ ಕಾರಣದಿಂದ ಹಿಜ್ರಾ ನಾಲ್ಕನೆಯ ವರ್ಷ ಬನುನ್ನಳೀರ್ ಗೋತ್ರದವರನ್ನು ಗಡೀಪಾರು ಮಾಡಲಾಯಿತು.ಅವರಲ್ಲಿ ಕೆಲವರು ಅಝ್ರಿಆತ್ ನಲ್ಲಿ ಮತ್ತು ಇನ್ನೂ ಕೆಲವರು ಖೈಬರ್ ನಲ್ಲಿ ವಾಸಿಸಿದರು.ಇದರ ಮಧ್ಯೆ ಬನುನ್ನಳೀರ್ ಗೋತ್ರದ ಒಂದು ಗುಂಪು ಕುರೈಶೀ ಮುಶ್ರಿಕರನ್ನು ಸಮೀಪಿಸಿ ನೆಬಿ ಸ.ಅ ರವರ ವಿರುದ್ಧ ಯುದ್ಧ ಹೂಡಲು ಪ್ರೇರೇಪಿಸಿದರು.ಕುರೈಶಿಗಳು ಓಕೆ ಅಂದರು.ಹೀಗೆ ಕುರೈಶಿಗಳು ಮತ್ತು ಗತಫಾನ್ ಗೋತ್ರದವರು ಅಬೂಸುಫ್ಯಾನನ ನೇತ್ರತ್ವದಲ್ಲಿ ಹತ್ತು ಸಾವಿರ ಬ್ರಹತ್ ಸೈನಿಕ ಪಡೆಯೊಂದಿಗೆ ಮದೀನವನ್ನು ಗುರಿಯಾಗಿಸಿ ಸಾಗಿದರು.ನೆಬಿ ಸ.ಅ ಸ್ವಹಾಬಿಗಳೊಂದಿಗೆ ಸೇರಿ ಒಂದು ತೀರ್ಮಾನಕ್ಕೆ ಬಂದು ಅವರನ್ನು ಪ್ರತಿರೋಧಿಸಲು ಮದೀನದ ಸುತ್ತಲೂ ಹೊಂಡವನ್ನು ನಿರ್ಮಿಸಿದರು.ಮೂರು ಸಾವಿರ ಧೀರ ಯೋಧರೊಂದಿಗೆ ನೆಬಿ ಸ.ಅ ಹೊಂಡದ ಈಚೆ ಕಡೆ ನಿಂತರು.ಇದು ಹಿಜ್ರಾ ಐದನೆಯ ವರ್ಷ ಶವ್ವಾಲ್ ತಿಂಗಳಲ್ಲಿಯಾಗಿತ್ತು.ಮುಶ್ರಿಕುಗಳು ಮದೀನದ ಸುತ್ತ ನಿರ್ಮಿಸಿದ ಹೊಂಡದ ಬಳಿ ತಲುಪಿದರು.ಮದೀನ ಪ್ರವೇಶಿಸಲಾಗದೆ ಚಡಪಡಿಸಿದರು.ಹದಿನೈದು ದಿವಸ ಹೊಂಡದ ಸಮೀಪ ನೆಲೆಯೂರಿದರು.ಹೊಂಡವನ್ನು ದಾಟಿ ಬರಲು ಯತ್ನಿಸಿದ ಕೆಲವರು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದರು.ಗುಂಡಿಯನ್ನು ದಾಟಿದ ಕೆಲ ಮುಶ್ರಿಕರನ್ನು ಮುಸ್ಲಿಮರು ಕೊಂದು ಹಾಕಿದರು.ಈ ಮಧ್ಯೆ ಬನೂ ಖುರೈಲ ಗೋತ್ರದವರು ಶಾಂತಿ ಕರಾರು ಮುರಿದು ಮಿತ್ರ ಪಾರ್ಟಿಯನ್ನು ಸಹಾಯಿಸಿದ್ದು ಮುಸ್ಲಿಮರನ್ನು ಪರಿಂಭ್ರಾತಗೊಳಿಸಿತು.ಈ ಸಂದರ್ಭದಲ್ಲಿ ಮುಸ್ಲಿಂ ಸೈನ್ಯದೊಂದಿಗಿದ್ದ ಮುನಾಫಿಖುಗಳು ಅವರವರ ಮನೆಗಳಿಗೆ ಹಿಂತಿರುಗಲು ಅನುಮತಿಯನ್ನು ಕೇಳಿದರು.ನೈಜ ಮುಸ್ಲಿಮರು ತೀವ್ರ ಸಂಕಷ್ಟದಲ್ಲಿ ಸಿಲುಕಿದರು.
          ಹೀಗಿರಲು ಶತ್ರು ಪಾಳಯದಲ್ಲಿದ್ದ ಗತಫಾನ್ ಗೋತ್ರದ ನುಐಮುಬ್ನು ಮಸ್ಊದ್ ಪವಿತ್ರ ಇಸ್ಲಾಂ ಸ್ವೀಕರಿಸಿದ್ದರು.ಇದು ಯಾರು ಕೂಡಾ ತಿಳಿದಿರಲಿಲ್ಲ.ಅವರು ನೆಬಿ ಸ.ಅ ರವರೊಂದಿಗೆ ರಹಸ್ಯ ಮಾತುಕತೆ ನಡೆಸಿ ಒಂದು ಸಂಚನ್ನು ರೂಪಿಸಿದರು.ನುಐಮುಬ್ನು ಮಸ್ಊದ್ ಯಹೂದಿ ಗೋತ್ರವಾದ ಬನೂ ಖುರೈಲ ರ ಬಳಿ ತೆರಳಿ ಮುಸ್ಲಿಮರ ವಿರುದ್ಧ ಕಾರ್ಯಾಚರಿಸಿದ ಕಾರಣ ಬೇರೆ ಯಹೂದಿ ಗೋತ್ರಗಳಿಗೆ ಉಂಟಾದ ಪರಿಸ್ಥಿತಿಯನ್ನು ನೆನಪಿಸಿ ಒಂದು ವೇಳೆ ಹಾಗೆ ಉಂಟಾದಲ್ಲಿ ಸಹಾಯ ( ಅಭಯ )ನಾವು ನೀಡುತ್ತೇವೆ ಎಂದು ಕುರೈಶಿಗಳೊಂದಿಗೆ ಮತ್ತು ಗತಫಾನ್ ಗೋತ್ರದವರೊಂದಿಗೆ ಒಪ್ಪಂದವನ್ನು ಸ್ವೀಕರಿಸಬೇಕು ಎಂದು ನಿರ್ದೇಶಿಸಿದರು.ಅಲ್ಲಿಂದಲೇ ಸೀದಾ ಕುರೈಶಿಗಳ ಮತ್ತು ಗತಫಾನ್ ಗೋತ್ರದವರ ಬಳಿ ತೆರಳಿ ಬನೂ ಖುರೈಲ ಗೋತ್ರದವರು ನಿಮ್ಮೊಂದಿಗೆ ಸೇರಿದ ಕಾರಣ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ತೀವ್ರ ದುಃಖಿತರಾಗಿದ್ದಾರೆ.ಇದೀಗ ತಮ್ಮ ಶರೀರವನ್ನು ರಕ್ಷಿಸಲು ನಿಮ್ಮ ನಾಯಕರನ್ನು ಮುಸ್ಲಿಮರಿಗೆ ಒಪ್ಪಿಸಲು ಅವರು ಮುಸ್ಲಿಮರೊಂದಿಗೆ ಒಪ್ಪಂದವನ್ನು ಮಾಡಿದ್ದಾರೆ ಎಂದು ನುಐಮುಬ್ನು ಮಸ್ಊದ್ ತಿಳಿಸಿದರು.ನುಐಮುಬ್ನು ಮಸ್ಊದರ ತಂತ್ರಗಾರಿಕೆಯ ಮಾತಿನಿಂದ ಕುರೈಶಿಗಳು ಮತ್ತು ಬನೂಖುರೈಲ ಗೋತ್ರದವರು ಪರಸ್ಪರ ಯುದ್ಧ ಮಾಡುವ ಸ್ಥಿತಿಗೆ ತಲುಪಿದರು.ಶನಿವಾರ ರಾತ್ರಿ ಅಬೂಸುಫ್ಯಾನ್ ಯಹೂದಿಯರನ್ನು ಮುಸ್ಲಿಮರೊಂದಿಗೆ ಯುದ್ಧ ಮಾಡಲು ಆಹ್ವಾನಿಸಿದನು.ಅವರು ಶನಿವಾರ ನಾವು ಯುದ್ಧ ಮಾಡುವುದಿಲ್ಲವೆಂದೂ ನಿಮ್ಮ ಎಪ್ಪತ್ತು ನಾಯಕರನ್ನು ನಮ್ಮಲ್ಲಿ ಅಡವಿಟ್ಟರೆ ಮಾತ್ರ ನಾವು ನಿಮ್ಮೊಂದಿಗೆ ಸೇರಿ ಯುದ್ಧಕ್ಕೆ ಕೈಜೋಡಿಸುವೆವು ಅಂದರು.ಹೀಗೆ ಪರಸ್ಪರ ಅವರವರೇ ಜಗಳಕ್ಕಿಳಿದರು.ಅಷ್ಟರಲ್ಲಿ ಭಯಂಕರ ಬಿರುಗಾಳಿ ಬೀಸಲಾರಂಭಿಸಿತು.ಪರಸ್ಪರ ಒಬ್ಬರನ್ನೊಬ್ಬರು ಕಾಣದ ರೀತಿಯಲ್ಲಿ ಭಾರೀ ಶೀತ ಮಾರುತ ಆವರಿಸಿತು.ಗಾಢ ಇರುಳಿನ ಮರೆಯಲ್ಲಿ ಮುಸ್ಲಿಮರು ಮತ್ತು ಯಹೂದಿಗಳು ಒಟ್ಟಾಗಿ ಆಕ್ರಮಣಗೈಯ್ಯುವರು ಎಂದು ಹೆದರಿ ಅಬೂ ಸುಫ್ಯಾನನ ನೇತ್ರತ್ವದಲ್ಲಿ ಬಂದ ಮುಶ್ರಿಕ್ ಸೈನ್ಯವು ಮರಳಿ ಹೋಯಿತು.
        ಖಂದಕ್ ಯುದ್ಧದಿಂದ ಮದೀನಕ್ಕೆ ಮರಳಿದ ತಕ್ಷಣ ನೆಬಿ ಸ.ಅ ವಂಚಕ ಯಹೂದಿ ಗೋತ್ರವಾದ ಬನೂಖುರೈಲ ರೊಂದಿಗೆ ಯುದ್ಧ ಮಾಡಿದರು.ಅವರ ಪುರುಷರುಗಳನ್ನು ಮುಸ್ಲಿಮರು ಕೊಂದು ಹಾಕಿದರು.ಸ್ತ್ರೀಯರನ್ನು ಮತ್ತು ಮಕ್ಕಳನ್ನು ಸೆರೆ ಹಿಡಿಯಲಾಯಿತು.

ಮುಂದುವರಿಯುವುದು.

® ನವಾಝ್ ಸಖಾಫಿ ಉಳ್ಳಾಲ
+918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...