*** ಕುರಾನ್ ಕ್ರೋಢೀಕರಣ ***
*** ರಸ್ಮುಲ್ ಉಸ್ಮಾನಿ ***
✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
ಅಲ್ಲಾಹನು ಅವನ ನಾಲ್ಕು ಪ್ರವಾದಿಗಳಿಗೆ ನೀಡಿದ ನಾಲ್ಕು ಪವಿತ್ರ ಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಠವಾದ ಗ್ರಂಥ ಅದು ಪವಿತ್ರ ಕುರಾನ್ ಆಗಿದೆ..
ಗ್ರಂಥಗಳು ಪ್ರವಾದಿಗಳು
▪▪▪▪▪▪▪▪▪
1-ತೌರಾತ್ ಮೂಸಾ ನೆಬಿ ಅ.ಸ
2-ಝಬೂರ್ ದಾವೂದ್ ನೆಬಿ ಅ.ಸ
3-ಇಂಜೀಲ್ ಈಸಾ ನೆಬಿ ಅ.ಸ
4-ಕುರಾನ್ ಮುಹಮ್ಮದ್ ಮುಸ್ತಫ ಸ.ಅ
ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರಿಗೆ ಅಲ್ಲಾಹನು ನೀಡಿದ ಮುಹ್ಜಿಝತುಗಳಲ್ಲಿ ಅತ್ಯಂತ ದೊಡ್ಡ ಮುಹ್ಜಿಝತ್ ಆಗಿದೆ ಪವಿತ್ರ ಕುರಾನ್..
23 ವರ್ಷಗಳಲ್ಲಿ ಹಂತಹಂತವಾಗಿ ಅಲ್ಲಾಹನು ಪ್ರವಾದಿ (ಸ.ಅ) ರವರಿಗೆ ಕುರಾನ್ ಅವತೀರ್ಣಗೊಳಿಸಿದನು.ಹಂತಹಂತವಾಗಿ ಅಲ್ಲಾಹನಿಂದ ಜಿಬ್ರೀಲ್ ಅಲೈಹಿಸ್ಸಲಾಂ ಮೂಲಕ ಅವತೀರ್ಣವಾದ ಆಯತ್ ಗಳನ್ನು ನೆಬಿ (ಸ.ಅ) ಮತ್ತು ಸ್ವಹಾಬಿಗಳು ಕಂಠಪಾಠ ಮಾಡುತ್ತಿರುವವರಾಗಿದ್ದರು.ಬಳಿಕ ವಹ್ಯ್ ಬರೆದಿಡುವ ಸ್ವಹಾಬಿಗಳೊಂದಿಗೆ ಆ ಆಯತ್ ಗಳನ್ನು ಬರೆದಿಡಲು ಆದೇಶಿಸಿಸುತ್ತಿದ್ದರು.ಯಾವ ಯಾವ ಸೂಕ್ತ (ಆಯತ್) ಯಾವ ಅಧ್ಯಾಯ (ಸೂರತ್) ದ್ದಾಗಿದೆಯೆಂದು ಬರೆದಿಡಲು ಆದೇಶಿಸುವಾಗ ತಿಳಿಸುತ್ತಿದ್ದರು...ಬರವಣಿಗೆಯಲ್ಲಿ ನೈಪುಣ್ಯತೆ ಹೊಂದಿರುವ ಸ್ವಹಾಬಿಗಳು ಖರ್ಜೂರ ಮರದ ಓಲೆಗಳು,ಎಲುಬುಗಳು ಮುಂತಾದುವುಗಳಲ್ಲಿ ಬರೆದಿಡುತ್ತಿದ್ದರು...ಹೀಗೆ ನಿರಂತರ 23 ವರ್ಷಗಳಲ್ಲಿ ಹಂತಹಂತವಾಗಿ ಕುರಾನ್ ಸಂಪೂರ್ಣವಾಯಿತು.ಕುರಾನಿನ ಎಲ್ಲಾ ಸೂಕ್ತಗಳನ್ನು ಅಧ್ಯಾಯಗಳ ಸಮೇತ ಸಂಪೂರ್ಣವಾಗಿ ವಿವಿಧ ವಸ್ತುಗಳಲ್ಲಿ ಬರೆದಿಡಲಾಯಿತು...ಆದರೆ ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ರ ಕಾಲದಲ್ಲಿ ಒಂದೇ ಮುಸ್ಹಫ್ ನಲ್ಲಿ ಕುರಾನನ್ನು ಕ್ರೋಢೀಕರಿಸಲಾಗಿಲ್ಲ......
*ಒಂದನೇ ಖಲೀಫ ಅಬೂಬಕರ್ ಸಿದ್ದೀಖ್ (ರ.ಅ) ರವರ ಆಡಳಿತ ಕಾಲದಲ್ಲಿ ಒಂದೇ ಮುಸ್ಹಫ್ ನಲ್ಲಿ ಕುರಾನ್ ಕ್ರೋಢೀಕರಿಸುವಿಕೆ*
ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ರ ವಫಾತಿನ ಬಳಿಕ ಅಬೂಬಕರ್ ಸಿದ್ದೀಖ್ (ರ.ಅ) ಇಸ್ಲಾಮಿನ ಪ್ರಥಮ ಖಲೀಫರಾಗಿ ಅಧಿಕಾರ ವಹಿಸಿಕೊಂಡರು.ಅವರ ಕಾಲದಲ್ಲಿ ಹಿಜಿರಾದ 12 ನೇ ವರ್ಷ ನಡೆದ ಯಮಾಮ ಯುದ್ದದ ಸಂದರ್ಭದಲ್ಲಿ ಕುರಾನ್ ನಿಖರವಾಗಿ ಓದಲು ಅಗಾಧ ಜ್ಞಾನವಿರುವ ಮತ್ತು ಕುರಾನ್ ಸಂಪೂರ್ಣ ಕಂಠಪಾಠ ಮಾಡಿದ ಅನೇಕ ಸ್ವಹಾಬಿಗಳು ಶಹೀದಾದರು....
ಈ ಘಟನೆಯು ಮುಸ್ಲಿಮರೆಡೆಯಲ್ಲಿ ತೀವ್ರ ದುಃಖವನ್ನುಂಟು ಮಾಡಿತ್ತು.ಅಲ್ಲದೆ ಕುರಾನ್ ತಿಳಿದ ಮತ್ತು ಕುರಾನ್ ಸಂಪೂರ್ಣ ಹಿಫ್ಲ್ ಮಾಡಿದ ಅನೇಕ ಸ್ವಹಾಬಿಗಳು ಶಹೀದಾದುದರಿಂದ ಕುರಾನ್ ನಷ್ಟಹೊಂದಬಹುದೆಂಬ ಭಯ ಮುಸ್ಲಿಮರಲ್ಲಿ ಆವರಿಸಿತ್ತು...ಪ್ರಮುಖ ಸ್ವಹಾಬಿಯಾದ ಉಮರ್ (ರ.ಅ) ಈ ವಿಷಯವನ್ನು ವಿಶೇಷವಾಗಿ ಗಣನೆಗೆ ತೆಗೆದು ಖಲೀಫರಾದ ಅಬೂಬಕರ್ ಸಿದ್ದೀಖ್ (ರ.ಅ) ರವರೊಂದಿಗೆ ಸಮಾಲೋಚಿಸಿ ಕುರಾನ್ ಕ್ರೋಢೀಕರಿಸುವ ಪ್ರಸ್ತಾಪವನ್ನು ಮುಂದಿಟ್ಟರು.ಯಮಾಮ ಯುದ್ಧದಲ್ಲಿ ಅನೇಕ ಕುರಾನ್ ಬಲ್ಲ ಸ್ವಹಾಬಿಗಳು ಶಹೀದಾಗಿದ್ದಾರೆ..ಹೀಗೆ ಮುಂದುವರಿದರೆ ಮುಂದೆ ಕುರಾನ್ ನಷ್ಟಹೊಂದಬಹುದಾದ್ದರಿಂದ ಕುರಾನ್ ಒಂದೇ ಮುಸಹಫ್ ನಲ್ಲಿ ಕ್ರೋಢೀಕರಿಸುವುದು ಉತ್ತಮ ಎಂದು ಉಮರ್ ರ.ಅ ಹೇಳಿದರು...ಅಬೂಬಕರ್ ಸಿದ್ದೀಖ್ ರ.ಅ ಏನು ಮಾಡುವುದೆಂದೇ ತೋಚದೆ ತುಸು ಹೊತ್ತು ಆಲೋಚನಾ ಮಗ್ನರಾಗಿ ಬಳಿಕ ಹೇಳಿದರು...ನಾನು ಹೇಗೆ ಹೊಸತೊಂದನ್ನು ಜಾರಿಗೆ ಮಾಡಲಿ,....ರಸೂಲುಲ್ಲಾಹಿ ಸ.ಅ ಮಾಡದಂತಹ ಒಂದು ಹೊಸ ಕಾರ್ಯವನ್ನು ನಾನು ಹೇಗೆ ಕೊಂಡುಬರಲಿ...ಕುರಾನನ್ನು ಒಂದೇ ಮುಸಹಫ್ ನಲ್ಲಿಯಾಗುವಂತೆ ನೆಬಿ ಸ.ಅ ರ ಕಾಲದಲ್ಲಿ ಕ್ರೋಢೀಕರಿಸಲಾಗಿಲ್ಲ...ಈಗ ನನ್ನ ಆಡಳಿತ ಕಾಲದಲ್ಲಿ ನಾನದನ್ನು ಹೇಗೆ ಮಾಡಲಿ..ಉಮರ್ ರ.ಅ ಹೇಳಿದರು...ಇಲ್ಲ ಖಲೀಫರವರೇ ಕುರಾನ್ ಕ್ರೋಢೀಕರಿಸುವುದು ಉತ್ತಮವಾಗಿದೆ.ಅದರಿಂದ ಒಳಿತಿದೆ...ಪವಿತ್ರ ಕುರಾನ್ ನಷ್ಟಹೊಂದುವುದನ್ನು ಮತ್ತು ಅದನ್ನು ವ್ಯತ್ಯಾಸಗೊಳಿಸುವುದನ್ನು ತಡೆಗಟ್ಟಿ ಕುರಾನನ್ನು ಸಂರಕ್ಷಿಸಲು ಕ್ರೋಢೀಕರಿಸುವುದು ಪ್ರಯೋಜನಕಾರಿಯಾದ ಉತ್ತಮ ಮಾರ್ಗವಾಗಿದೆ...ಅದು ಕೆಟ್ಟ ಬಿದ್ಅತ್ ಆಗಲು ಸಾಧ್ಯವೇ ಇಲ್ಲ ಖಲೀಫರೇ......
ಉಮರ್ (ರ.ಅ) ರವರ ಅಭಿಪ್ರಾಯದಂತೆ ಕುರಾನ್ ಕ್ರೋಢೀಕರಿಸುವ ತೀರ್ಮಾನಕ್ಕೆ ಅಬೂಬಕರ್ ಸಿದ್ದೀಖ್ (ರ.ಅ) ಬಂದರು.ಅದಕ್ಕಾಗಿ ಹಿರಿಯ ಶ್ರೇಷ್ಠ ಸ್ವಹಾಬಿಗಳಲ್ಲೋರ್ವರಾದ ಝೈದ್ ಇಬ್ನು ಸಾಬಿತ್ (ರ.ಅ) ರವರನ್ನು ಆಯ್ಕೆ ಮಾಡಿದರು.ಝೈದುಬ್ನು ಸಾಬಿತ್ (ರ.ಅ) ಕುರಾನ್ ಕಂಠಪಾಠ ಮಾಡಿದ ಹಾಗು ರಸೂಲುಲ್ಲಾಹಿ (ಸ.ಅ) ರವರಿಗೆ ಅವತೀರ್ಣವಾಗುತ್ತಿದ್ದ ವಹ್ಯನ್ನು ಬರೆದಿಡುವ ಸ್ವಹಾಬಿಗಳಲ್ಲೋರ್ವರಾದ್ದರಿಂದ ಅವರನ್ನು ಅಬೂಬಕರ್ ಸಿದ್ದೀಖ್ (ರ.ಅ) ಆಯ್ಕೆ ಮಾಡಿದರು..ಮಾತ್ರವಲ್ಲ ಝೈದುಬ್ನು ಸಾಬಿತ್ (ರ.ಅ) ಅಪಾರ ಬುದ್ಧಿಶಾಲಿಯೂ ಉತ್ತಮ ಸ್ವಭಾವಿಯೂ ಆಗಿದ್ದರು.ಇಸ್ಲಾಮ್ ಧರ್ಮದಲ್ಲಿ ಅಚಂಚಲ ವಿಶ್ವಾಸಹೊಂದಿದ ಭಯಭಕ್ತಿಯಿಂದ ಕೂಡಿದ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದರು ಅವರು....
ಖಲೀಫ ಅಬೂಬಕರ್ ಸಿದ್ದೀಖ್ (ರ.ಅ) ಝೈದುಬ್ನು ಸಾಬಿತ್ ರ.ಅ ರವರೊಂದಿಗೆ ಕುರಾನ್ ಕ್ರೋಢೀಕರಿಸುವ ತನ್ನ ಮತ್ತು ಉಮರ್ ರಲಿಯಲ್ಲಾಹು ಅನ್ಹು ರವರ ಅಭಿಪ್ರಾಯವನ್ನು ತಿಳಿಸಿದರು..ವಿಷಯವನ್ನು ಆಲಿಸಿದ ಝೈದುಬ್ನು ಸಾಬಿತ್ ರಲಿಯಲ್ಲಾಹು ಅನ್ಹು ವಿಷಯದ ಗಂಭೀರತೆಯನ್ನು ಅರಿತು ಏನು ಮಾಡಬೇಕೆಂದು ತೋಚದೇ ಆಲೋಚನಾ ಮಗ್ನರಾದರು....
ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇಲ್ಲದ ಹೊಸತೊಂದು ಯೋಜನೆ?!!!
ಅದು ನನ್ನಿಂದ ಸಾಧ್ಯವಿಲ್ಲ...
ಮತ್ತೊಂದು ಕಡೆ ಇಸ್ಲಾಮಿನ ಖಲೀಫರಾದ ಅಬೂಬಕರ್ ಸಿದ್ದೀಕ್ ರ.ಅ ನನ್ನೊಂದಿಗೆ ಆದೇಶ ನೀಡಿದ್ದಾರೆ!!!!
ಖಲೀಫರ ಆದೇಶವನ್ನು ಧಿಕ್ಕರಿಸಲೂ ಸಾಧ್ಯವಿಲ್ಲ.....
ಏನು ಮಾಡುವುದು???
ಖಲೀಫರೊಂದಿಗೆ ಹೇಳಿದರು....
ಖಲೀಫರೇ....ತಾವು ನನ್ನೊಂದಿಗೆ ಯಾವುದಾದರೊಂದು ಪರ್ವತವನ್ನು ನೆಲಸಮ ಮಾಡಲು ತಿಳಿಸಿದರೆ ಅದು ನನಗೆ ಅಷ್ಟೊಂದು ಭಾರದ ಕೆಲಸವಾಗುತ್ತಿರಲಿಲ್ಲ.....
ಆದರೆ ತಾವೀಗ ಆದೇಶವಿತ್ತ ಕೆಲಸ ಉಂಟಲ್ಲಾ..!! ಅದಕ್ಕಿಂತಲೂ ಭಾರದ,ಕಷ್ಟದ ಕೆಲಸ ಬೇರೊಂದಿಲ್ಲ...
ನೆಬಿ ಸ.ಅ ಮರ ಕಾಲದಲ್ಲಿ ಇಲ್ಲದ ಹೊಸ ಒಂದು ಯೋಜನೆ ತಾವು ಮತ್ತು ತಮ್ಮ ಸಹಪಾಠಿ ಉಮರ್ ರ.ಅ ಹೇಗೆ ರೂಪಿಸಿದಿರಿ...
ಖಲೀಫರು ಹೇಳಿದರು.....
ಇಲ್ಲ.ಝೈದುಬ್ನು ಸಾಬಿತ್....ಇದರಲ್ಲಿ ಹೊಸತೇನೂ ಇಲ್ಲ....ಕುರಾನ್ ಕ್ರೋಢೀಕರಿಸುವುದರಿಂದ ಕುರಾನ್ ನಷ್ಟಹೊಂದುವುದನ್ನು ಮತ್ತು ವ್ಯತ್ಯಾಸಗೊಳಿಸುವುದನ್ನು ತಡೆಯಬಹುದು.ಇದರಿಂದ ಪ್ರಯೋಜನವಲ್ಲದೆ ಬೇರೇನೂ ಇಲ್ಲ ಎಂಬ ಸತ್ಯವನ್ನು ಖಲೀಫರವರು ಝೈದುಬ್ನು ಸಾಬಿತ್ ರ.ಅ ರವರಿಗೆ ಮನದಟ್ಟು ಮಾಡಿದಾಗ ಅವರು ಸಮಾಧಾನಗೊಂಡರು....ನಂತರ ಹಿರಿಯ ಸ್ವಹಾಬಿಗಳ ಸಹಾಯದೊಂದಿಗೆ ಕುರಾನಿನ ಎಲ್ಲಾ ಸೂರತ್ ಗಳೂ ಆಯತ್ ಗಳೂ ಒಂದೇ ಮುಸ್ಹಫಿನಲ್ಲಿ ಕ್ರೋಢೀಕರಿಸಿದರು....
ಅಲ್ಲಾಹನ ಅಪಾರ ಅನುಗ್ರಹದಿಂದ ಅವರು ಇಚ್ಛಿಸಿದ ಮಹಾತ್ಕಾರ್ಯ ಪೂರ್ಣಗೊಂಡಿತು.
*ಖಲೀಫ ಉಸ್ಮಾನ್ (ರ.ಅ) ರವರ ಅಧಿಕಾರಾವಧಿಯಲ್ಲಿ ಮತ್ತೆ ಕುರಾನ್ ಕ್ರೋಢೀಕರಿಸುವಿಕೆ*
ಖಲೀಫ ಅಬೂಬಕರ್ ಸಿದ್ದೀಖ್ ರ.ಅ ರವರ ಕಾಲದಲ್ಲಿ ಕುರಾನ್ ಕ್ರೋಢೀಕರಿಸಲ್ಪಟ್ಟ ಮುಸ್ಹಫ್ ಅವರ ವಫಾತಿನ ಬಳಿಕ ಇಸ್ಲಾಮಿನ ಎರಡನೇ ಖಲೀಫ ಉಮರ್ ರ.ಅ ರವರ ಬಳಿಯಿತ್ತು. ಬಳಿಕ ಅವರ ವಫಾತಿನ ನಂತರ ಉಮರ್ ರ.ಅ ರವರ ಪ್ರಿಯ ಸುಪುತ್ರಿ ಹಫ್ಸಃ ರಲಿಯಲ್ಲಾಹು ಅನ್ಹಾ ಆ ಮುಸ್ಹಫನ್ನು ಜೋಪಾನವಾಗಿ ತೆಗೆದಿಟ್ಟಿದ್ದರು.
ಇಸ್ಲಾಮಿನ ಮೂರನೇ ಖಲೀಫ ಉಸ್ಮಾನ್ ರ.ಅ ರವರ ಕಾಲದಲ್ಲಿ ನಡೆದ ಅರ್ಮೀನಿಯ್ಯ ಮತ್ತು ಅಝರ್ಬೈಜಾನ್ ಎಂಬ ಎರಡು ಯುದ್ಧಗಳಲ್ಲಿ ಭಾಗವಹಿಸಿದ ಹುಝೈಫತುಲ್ ಯಮಾನ್ ರ.ಅ ಅಬೂಬಕರ್ ಸಿದ್ದೀಖ್ ರ.ಅ ರವರ ಕಾಲದಲ್ಲಿ ಕ್ರೋಢೀಕರಿಸಲ್ಪಟ್ಟ ಕುರಾನಿನ ಖಿರಾಅತ್ ನಲ್ಲಿ ಕೆಲವೊಂದು ಲೋಪದೋಷಗಳನ್ನು ಕಂಡರು.ತಾನು ಕಂಡ ಲೋಪದೋಷಗಳನ್ನು ಖಲೀಫ ಉಸ್ಮಾನ್ ರ.ಅ ರವರಲ್ಲಿ ತಿಳಿಸಿದರು..ಈ ವಿಷಯವು ಸ್ವಹಾಬಿಗಳೆಡೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.ಕುರಾನಿನ ಕೆಲವೊಂದು ಕಡೆ ಲೋಪದೋಷಗಳು,ಅಕ್ಷರ ಜೋಡನೆಯಲ್ಲಿ ತಪ್ಪುಗಳು ಸಂಭವಿಸಿದೆ ಎಂದು ತಿಳಿದಾಗ ಕುರಾನ್ ಮತ್ತೆ ನಷ್ಟಹೊಂದಬಹುದು,ಅಥವಾ ವ್ಯತ್ಯಾಸಗೊಳ್ಳಬಹುದು ಎಂಬ ಭಯದಿಂದ ಹಫ್ಸಃ ರಲಿಯಲ್ಲಾಹು ಅನ್ಹಾ ರವರ ಬಳಿಯಿರುವ ಮುಸ್ಹಫನ್ನು ಕೊಂಡು ಬರಲು ಖಲೀಫ ಉಸ್ಮಾನ್ ರ.ಅ ತಿಳಿಸಿದರು.
ಹಫ್ಸಃ (ರ.ಅ) ಮುಸ್ಹಫನ್ನು ಉಸ್ಮಾನ್ ರ.ಅ ರವರಿಗೆ ಹಸ್ತಾಂತರಿಸಿದರು....
ಬಳಿಕ ಕುರೈಶಿಗಳಾದ ಝೈದು ಬ್ನು ಸಾಬಿತ್ ಅಲ್ ಅನ್ಸಾರಿ,ಅಬ್ದುಲ್ಲಾಹಿ ಬ್ನು ಝುಬೈರ್,ಸಈದುಬ್ನುಲ್ ಆಸೀ,ಹಾಗೂ ಅಬ್ದುರ್ರಹ್ಮಾನುಬ್ನುಲ್ ಹಾರಿಸ್ ರ.ಅ ಎಂಬವರೊಂದಿಗೆ ಮೊದಲಿನ ಮುಸ್ಹಫಿನ ತಪ್ಪುಗಳನ್ನು ಸರಿಪಡಿಸಿ ಬರೆಯಲು ಖಲೀಫ ಉಸ್ಮಾನ್ ರ.ಅ ಆದೇಶಿಸಿದರು...ಅದರಂತೆಯೇ ಅವರು ಸರಿಪಡಿಸಿ ಮತ್ತೆ ಕುರಾನನ್ನು ಕ್ರೋಢೀಕರಿಸಿದರು..ಅದರ ಒಂದು ಪ್ರತಿಯನ್ನು ಹಫ್ಸಃ ರ.ಅ ರವರಿಗೆ ಖಲೀಫ ನೀಡಿದರು ಹಾಗೂ ಜಗತ್ತಿನ ವಿವಿಧ ಭಾಗಗಳಿಗೆ ಕುರಾನಿನ ಒಂದೊಂದು ಪ್ರತಿಯನ್ನು ಕಳುಹಿಸಿಕೊಟ್ಟರು....ಉಸ್ಮಾನ್ ರ.ಅ ರವರ ಕಾಲದಲ್ಲಿ ಕ್ರೋಢೀಕರಿಸಲ್ಪಟ್ಟ ಮುಸ್ಹಫಿಗೆ ರಸ್ಮುಲ್ ಉಸ್ಮಾನಿ ಎಂದು ಕರೆಯಲಾಗುತ್ತದೆ.......
*ಮುಗಿಯಿತು*
✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760
No comments:
Post a Comment