*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*
��ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
*ಭಾಗ - 02*
------------------------------
*ತಾಜುಲ್ ಉಲಮಾ ಖ.ಸಿ* ಜ್ಞಾನ ಭಂಡಾರದ ಎಲ್ಲಾ ವಿಷಯಗಳ ಸರ್ವ ಮಜಲುಗಳಲ್ಲಿಯೂ ಅಗ್ರಗಣ್ಯ ವಿದ್ವಾಂಸರಾಗಿದ್ದರು.ಮಾತ್ರವಲ್ಲ ತನ್ನಲ್ಲಿರುವ ವಿದ್ಯೆಯನ್ನು ಇತರರಿಗೆ ಪಸರಿಸಲು ತುಂಬಾನೇ ಉತ್ಸುಕರಾಗಿದ್ದರು.ಇದೇ ಕಾರಣದಿಂದ 1951 ರಲ್ಲಿ ಕರ್ನಾಟಕದ ಮಂಗಳೂರು ತಾಲೂಕಿನ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ಅಂತ್ಯವಿಶ್ರಮ ಹೊಂದಿರುವ ಉಳ್ಳಾಲಕ್ಕೆ ಬಂದು ಅವರ ಆಶೀರ್ವಾದ ಪಡೆದು *ಕಂಝುಲ್ ಉಲೂಂ* ಎಂಬ ಹೆಸರಿನಲ್ಲಿ ಪಳ್ಳಿ ದರ್ಸನ್ನು ಪ್ರಾರಂಭಿಸಿದರು.ವಿಜ್ಞಾನ ದಾಹಿಗಳಾದ ಮುತಅಲ್ಲಿಮರು ಕರ್ನಾಟಕ ಮತ್ತು ಕೇರಳದ ವಿವಿಧ ಊರುಗಳಿಂದ ಹರಿದು ಬರಲಾರಂಭಿಸಿದರು.ಬಳಿಕ ಸಯ್ಯಿದ್ ಮದನಿ ಶರೀಅತ್ ಕಾಲೇಜು ಆಗಿ ಪರಿವರ್ತಿತಗೊಂಡಿತು.ಇದರಿಂದ ಕರ್ನಾಟಕ ಭಾಗದಲ್ಲಿ ಇಸ್ಲಾಮಿನ ಸುಂದರ ಆಶಯಾದರ್ಶಗಳು ಹರಡಿದವು.ಪ್ರಗಲ್ಭ ವಿದ್ವಾಂಸರುಗಳ ಸ್ರಷ್ಟಿಯಾಯಿತು.ಅನ್ಯಾಯ,ಅಕ್ರಮ,ಅಜ್ಞಾನ ಅಂಧಕಾರದ ಕಗ್ಗತ್ತಲು ಇಲ್ಲವಾಯಿತು.
ತಾಜುಲ್ ಉಲಮಾ ಖ.ಸಿ ತನ್ನ ಆಯುಷ್ಯದ ಕೊನೆ ಗಳಿಗೆವರೆಗೂ ಸಯ್ಯಿದ್ ಮದನಿ ಶರೀಅತ್ ಕಾಲೇಜು ಇದರ ಪ್ರಾಂಶುಪಾಲರಾಗಿಯೂ ಮುದರ್ರಿಸರಾಗಿಯೂ ಉಳ್ಳಾಲ ಹಾಗೂ ಕರ್ನಾಟಕದ ನೂರಾರು ಮೊಹಲ್ಲಾಗಳ ಖಾಝಿಯಾಗಿಯೂ ಮುಂದುವರಿದಿದ್ದರು.1956 ಸೆಪ್ಟೆಂಬರ್ 20 ರಂದು ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಸದಸ್ಯರಾದರು.1976 ರಲ್ಲಿ ಉಪಾಧ್ಯಕ್ಷರಾದರು.1989 ರಲ್ಲಿ ಸುನ್ನೀ ಜಂಇಯ್ಯತುಲ್ ಉಲಮಾ ದ ಅಧ್ಯಕ್ಷರಾದರು.ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶ ನಾಯಕರಾಗಿ ಮುಸ್ಲಿಂ ಸಮೂಹಕ್ಕೆ ಇಸ್ಲಾಮಿನ ನೈಜ ಸುನ್ನೀ ಆಶಯಾದರ್ಶಗಳನ್ನು ತಿಳಿಸಿಕೊಡುತ್ತಾ ಮುಂದೆ ಸಾಗಿದರು.ಇದರೊಂದಿಗೆ ಎಲ್ಲಾ ತರದ ನೂತನವಾದಿಗಳ ನೀಚ ಕುಟಿಲ ತಂತ್ರಗಳ ಕಪಿಮುಷ್ಟಿಯಿಂದ ಮುಸ್ಲಿಂ ಸಮೂಹವನ್ನು ಸಡಿಲಿಸಿ ಅವರಿಗೆ ಸುನ್ನತ್ ಜಮಾಅತಿನ ನೈಜ ವಿಶ್ವಾಸಾಚಾರಗಳನ್ನು ತಿಳಿಸಿ ಇಸ್ಲಾಮನ್ನು ಭದ್ರಗೊಳಿಸಿದರು.ಧಾರ್ಮಿಕ ವಿಷಯದಲ್ಲಿ ಯಾವುದೇ ಆಕ್ಷೇಪ,ಆರೋಪಗಳಿಗೆ ಎದೆಗುಂದಲಿಲ್ಲ.ತಾಜುಲ್ ಉಲಮಾ ಹೇಳಿದಂತಹ ಮಾತು
*أنا على الحق ولو كنت وحدي*
ನಾನು ಸತ್ಯದ ಹಾದಿಯಲ್ಲಿದ್ದೇನೆ.ನಾನು ಏಕಾಂಗಿಯಾದರೂ ಸರಿ,ಇಸ್ಲಾಮಿನ, ಸುನ್ನತ್ ಜಮಾಅತಿನ ವಿಷಯದಲ್ಲಿ ಕಿಂಚಿತ್ತೂ ಸಡಿಲ ಮನೋಭಾವ ನನಗಿಲ್ಲ.
ವಿವಿಧ ಕಡೆಗಳಿಂದ ತಾಜುಲ್ ಉಲಮಾರ ಸನ್ನಿಧಿಗೆ ಜನರು ತಾಳ್ಮೆಯಿಂದ ಬಂದು ಅವರ ಮಾತು,ಕಲ್ಪನೆಯನ್ನು ಕೇಳಿ ಜೀವನದಲ್ಲಿ ಅನುಸರಿಸುತ್ತಿದ್ದರು.ತಾಜುಲ್ ಉಲಮಾ ಖ.ಸಿ ರವರ ಸನ್ನಿಧಿಗೆ ತಮ್ಮ ಕಷ್ಟ ಕಾರ್ಪಣ್ಯ ಗಳನ್ನು ಹೇಳಿ ಬರುತ್ತಿದ್ದ ಭಕ್ತಾದಿಗಳಿಗೆ ಅದಕ್ಕೆ ಪರಿಹಾರವನ್ನು ತಿಳಿಸುತ್ತಿದ್ದರು.ಉತ್ತಮ ಧರ್ಮಿಷ್ಟರೂ ಉತ್ತಮ ಸ್ವಭಾವದವರೂ ಆಗಿದ್ದರು.
ಮುಂದಿನ ಸಂಚಿಕೆಯಲ್ಲಿ ತಾಜುಲ್ ಉಲಮಾ ಖ.ಸಿ ರವರ ಕೆಲವೊಂದು *ಕರಾಮತ್* ಗಳನ್ನು ನಿರೀಕ್ಷಿಸಿ.
ಮುಂದುವರಿಯುವುದು
��ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
No comments:
Post a Comment