Sunday, 16 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -06

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

----------------------------------
               ಸಂಚಿಕೆ -06

ಪೀಡನೆಗಳು.

ನೆಬಿ ಸ.ಅ ಪ್ರಬೋಧನೆಯೊಂದಿಗೆ ಮುಂದುವರಿದರು.ಹಗಲು ರಾತ್ರಿಯೆನ್ನದೆ ರಹಸ್ಯವಾಗಿಯೂ ಬಹಿರಂಗವಾಗಿಯೂ ಜನರನ್ನು ಇಸ್ಲಾಮಿಗೆ ಆಹ್ವಾನಿಸಿದರು.ಮುಶ್ರಿಕುಗಳ ಉಪಟಳ ಹೆಚ್ಚಾಯಿತು.
ಅತ್ಯಂತ ಹೆಚ್ಚಾಗಿ ನೆಬಿ ಸ.ಅ ರವರಿಗೆ ಉಪದ್ರವಿಸಿದವರು.ಅವರ ಮನಸ್ಸನ್ನು ನೋಯಿಸಿದವರು ಈ ಕೆಳಗಿನವರು....

1- ಅಬೂ ಜಹಲ್ : ಅಬೂಜಹಲ್ ನೆಬಿ ಸ.ಅ ನಮಾಜು ಮಾಡುವುದನ್ನು ತಡೆದ.ಒಂದು ದಿವಸ ನೆಬಿ ಸ.ಅ ನಮಾಜು ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ದೊಡ್ಡ ಕಲ್ಲು ತೆಗೆದು ನೆಬಿ ಸ.ಅ ರವರ ತಲೆಗೆ ಹಾಕಲು ಬಂದಾಗ ನೆಬಿ ಸ.ಅ ಸನಿಹ ಜಿಬ್ರೀಲ್ ಅ.ಸ ಒಂದು ದೊಡ್ಡ ಭಯಂಕರ ಒಂಟೆಯ ರೂಪದಲ್ಲಿ ಪ್ರತ್ಯಕ್ಷರಾದರು.ಇದನ್ನು ಕಂಡು ಹೈರಾಣಾದ ಅಬೂಜಹಲ್ ಎದ್ದು ಬಿದ್ದು ಮರಳಿ ಓಡಿ ಹೋದ.

2 - ಉಖ್ಬತುಬ್ನು ಅಬೀ ಮುಐತ್ : ಇವನು ಒಮ್ಮೆ ನೆಬಿ ಸ.ಅ ಸುಜೂದಿನಲ್ಲಿದ್ದ ಸಂದರ್ಭದಲ್ಲಿ ಒಂಟೆಯ ಕರುಳು ಬಳ್ಳಿ ಗಳನ್ನು ತಂದು ಕುತ್ತಿಗೆಗೆ ಹಾಕಿದನು.ಅದನ್ನು ಫಾತಿಮ ರ.ಅ ತೆಗೆದು ನಿವಾರಿಸಿದರು.

3 - ಅಬೂಲಹಬ್ : ನೆಬಿ ಸ.ಅ ರವರ ಪಿತ್ರ ಸಹೋದರನಾದ ಅಬುಲಹಬ್ ಮತ್ತು ಆತನ ಪತ್ನಿ ನೆಬಿ ಸ.ಅ ರವರನ್ನು ಮಾತುಗಳ ಮೂಲಕ ನಿಂದನೆ ಅಪಹಾಸಗೈಯ್ಯತ್ತಾ ನೆಬಿ ಸ.ಅ ಮನೆಯ ಅಂಗಳಕ್ಕೆ ಕಸಕಡ್ಡಿ,ಮಾಲಿನ್ಯಗಳನ್ನು ತಂದು ಸುರಿಯುತ್ತಿದ್ದರು.

4 - ಅಸ್ವದು ಬ್ನು ಅಬ್ದು ಯಗೂಸ್ : ಇಂದು ಆಕಾಶದಿಂದ ಯಾರೂ ನಿನ್ನೊಡನೆ ಮಾತನಾಡಲಿಲ್ಲವೇ ? ಎಂದು ಹೇಳಿ ನೆಬಿ ಸ.ಅ ರವರನ್ನು ಪ್ರತಿನಿತ್ಯ ಈತ ಅಪಹಾಸ್ಯ ಮಾಡುತ್ತಿದ್ದ.

5 - ವಲೀದುಬ್ನುಲ್ ಮುಗೀರಃ ನೆಬಿ ಸ.ಅ ರವರನ್ನು ಜಾದೂಗಾರ ನೆಂದೂ ಕುರಾನ್ ಸಿಹ್ರ್ ಎಂದು ವಾದಿಸಿದನು.

6 - ನಳರುಬ್ನುಲ್ ಹಾರಿಸ್ : ನೆಬಿ ಸ.ಅ ಹೇಳುತ್ತಿದ್ದುದು ಕಟ್ಟುಕತೆಗಳಾಗಿವೆ ಎಂದು ಪ್ರಚಾರ ಮಾಡುತ್ತಿದ್ದ.

              ಹೀಗೆ ನೆಬಿ ಸ.ಅ ರವರಿಗೆ ನಾನಾ ರೀತಿಯಲ್ಲಿ ತೊಂದರೆ ನೀಡುತ್ತಿದ್ದರು.ನೆಬಿ ಸ.ಅ ಮಾತ್ರವಲ್ಲ.ಸ್ವಹಾಬಿಗಳೂ ಪೀಡನೆಗೊಳಗಾದರು.ಕೆಲವರು ಕಠಿಣವಾದ ಆಕ್ರಮಣಗಳಿಗೆ ವಿಧೇಯರಾದರು.ಅವುಗಳಲ್ಲಿ ಕೆಲವೊಂದು ಇಲ್ಲಿ ವಿವರಿಸುತ್ತಿದ್ದೇನೆ.

ಒಮ್ಮೆ ಸ್ವಹಾಬಿ ಪ್ರಮುಖರಾದ ಅಬೂಬಕರ್ ಸಿದ್ದೀಖ್ ರ.ಅ ಜನರನ್ನು ಇಸ್ಲಾಮಿಗೆ ಆಹ್ವಾನಿಸಿ ಭಾಷಣ ಮಾಡುತ್ತಿದ್ದರು.ಆ ಸಂದರ್ಭದಲ್ಲಿ ಅವರನ್ನು ಕುರೈಶಿಗಳು ಹಿಡಿದೆಳೆದು ಹೊಡೆದರು.ಕೆಲವರು ತುಳಿದರು. ಮುಖ ಪರಿಚಯ ಸಿಗದ ಹಾಗೆ ಹೊಡೆದು ವಿಕ್ರತಿಗೊಳಿಸಿದರು.ಪ್ರಜ್ಞೆ ತಪ್ಪಿದ ಬಳಿಕ ಅಬೂಬಕರ್ ಸಿದ್ದೀಖ್ ರ.ಅ ರವರನ್ನು ಕುರೈಶಿಗಳು ಬಿಟ್ಟು ಹೋದರು.ಮತ್ತೆ ಅವರಿಗೆ ಪ್ರಜ್ಞೆ ಮರಳಿ ಬಂದದ್ದು ಸಂಜೆಯ ಸಮಯದಲ್ಲಾಗಿತ್ತು.ಅಬೂಬಕರ್ ಸಿದ್ದೀಖ್ ರ.ಅ ಇಸ್ಲಾಮಿನ ಪ್ರಥಮ ಪ್ರಭಾಷಕರಾಗಿದ್ದರು.
        ಉಸ್ಮಾನ್ ರ.ಅ ರವರನ್ನು ಹಕಮುಬ್ನುಲ್ ಆಸಿ ಎಂಬ ದುಷ್ಟ ಕಟ್ಟಿಹಾಕಿ ಹಿಂಸಿಸಿದನು.ಅವರ ಇಸ್ಲಾಮಿನ ಮೇಲಿದ್ದ ಅಚಲ ವಿಶ್ವಾಸವನ್ನು ಕಂಡು ನಿರ್ವಾಹವಿಲ್ಲದೆ ಆತ ಬಿಡುಗಡೆ ಮಾಡಿದನು.
ಝುಬೈರುಬ್ನುಲ್ ಅವಾಮ್ಮ್ ರ.ಅ ರವರನ್ನು ತನ್ನ ಪಿತ್ರ ಸಹೋದರ ಒಂದು ರೂಮಿನಲ್ಲಿ ಬಂಧನದಲ್ಲಿಟ್ಟು ಹೊಗೆ ಹಾಕಿದನು.
      ಬಿಲಾಲ್ ರ.ಅ ರವರನ್ನು ತನ್ನ ಯಜಮಾನ ಉಮಯ್ಯತುಬ್ನು ಖಲಫ್ ನಡು ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಕಾದ ಮರಳಿನಲ್ಲಿ ಮಲಗಿಸಿ ಎದೆಯ ಮೇಲೆ ಭಾರವಾದ ಬಂಡೆಕಲ್ಲನ್ನು ಇಟ್ಟನು.ಬಿಲಾಲ್ ರ.ಅ "ಅಹದ್ ಅಹದ್" ಅಲ್ಲಾಹನು ಏಕೈಕನು ಏಕೈಕನು ಎನ್ನುತ್ತಾ ಇಸ್ಲಾಮಿನ ಮೇಲಿರುವ ತನ್ನ ಗಟ್ಟಿ ನಿರ್ಧಾರವನ್ನು ತೋರ್ಪಡಿಸಿದರು.ಇಸ್ಲಾಂ ಧರ್ಮ ಸ್ವೀಕರಿಸಿದ ಬಿಲಾಲ್ ರ.ಅ ರವರಿಗೆ ತನ್ನ ಯಜಮಾನ ಕ್ರೂರವಾಗಿ ಹಿಂಸೆ ನೀಡುತ್ತಿದ್ದುದ್ದನ್ನು ಗಮನಿಸಿದ ಆ ದಾರಿಯಲ್ಲಿ ಸಾಗುತ್ತಿದ್ದ ಅಬೂಬಕರ್ ಸಿದ್ದೀಖ್ ರ.ಅ ಬಿಲಾಲ್ ರ.ಅ ರವರನ್ನು ಬೆಲೆ ಕೊಟ್ಟು ಖರೀದಿಸಿ ದಾಸ್ಯಮುಕ್ತಿಗೊಳಿಸಿ ಸ್ವತಂತ್ರ ಗೊಳಿಸಿದರು.
       ಯಾಸಿರ್ ರ.ಅ,ಅವರ ಪ್ರಿಯ ಪತ್ನಿ ಸುಮಯ್ಯ ರ.ಅ ಹಾಗು ಮಗ ಅಮ್ಮಾರ್ ರ.ಅ ಶತ್ರುಗಳಿಂದ ಕ್ರೂರ ಹಿಂಸೆಗೆ ಗುರಿಯಾದರು.ಸುಡು ಬಿಸಿಲಿನಲ್ಲಿ ಕಾದ ಮರಳಿನಲ್ಲಿ ಅವರನ್ನು ಶಿಕ್ಷಿಸಿದರು.ಇದನ್ನು ಕಂಡ ನೆಬಿ ಸ.ಅ ತೀವ್ರ ದುಃಖದಿಂದ ಅವರಲ್ಲಿ ಹೇಳಿದರು : ಯಾಸಿರ್ ಕುಟುಂಬವೇ.ಸಹನೆ ಕೈಗೊಳ್ಳಿರಿ.ತಾಳ್ಮೆಯಿಂದಿರಿ.ನಿಮಗೆ ಸ್ವರ್ಗವಿದೆ.
ಸುಮಯ್ಯ ರ.ಅ ರವರನ್ನು ಇಸ್ಲಾಮಿನ ಶತ್ರು ಅಬೂಜಹಲ್ ಕಬ್ಬಿಣದ ಸಲಾಕೆಯಿಂದ ಗುಪ್ತಾಂಗಕ್ಕೆ ಕುತ್ತಿ ಅತಿಕ್ರೂರವಾಗಿ ಹಿಂಸಿಸಿದನು.ಸುಮಯ್ಯ ರ.ಅ ರಕ್ತ ಸಾಕ್ಷಿಯಾದರು.ಇಸ್ಲಾಮಿನ ಚರಿತ್ರೆಯಲ್ಲಿ ಪ್ರಥಮವಾಗಿ ರಕ್ತ ಸಾಕ್ಷಿಯಾದ ವನಿತೆ ಸುಮಯ್ಯ ರ.ಅ ಆಗಿದ್ದರು.ಯಾಸಿರ್ ರ.ಅ ರವರಿಗೆ ಬೆಂಕಿಯಿಂದ ಕಾದ ಯುದ್ಧ ಅಂಗಿಯನ್ನು ತೊಡಿಸಿದರು.ಅವರೂ ಶಹೀದಾದರು.ಅಮ್ಮಾರ್ ರ.ಅ ರವರನ್ನು ಕ್ರೂರವಾಗಿ ಶತ್ರುಗಳು ಹಿಂಸಿಸುತ್ತಿದ್ದಾಗ ಶಿಕ್ಷೆ ತಾಳಲಾರದೆ ಅವರ ಬಾಯಿಯಿಂದ ಅವಿಶ್ವಾಸವನ್ನು ಪ್ರಕಟಿಸುವ ಮಾತುಗಳು ಹೊರಬಿದ್ದವು.ಆದುದರಿಂದ ಶತ್ರುಗಳು ಅವರನ್ನು  ಬಿಟ್ಟು ಬಿಟ್ಟರು.ಅವರು ನೇರವಾಗಿ ನೆಬಿ ಸ.ಅ ರವರನ್ನು ಸಮೀಪಿಸಿ ನಾನು ಅನಿರೀಕ್ಷಿತವಾಗಿ ಅವಿಶ್ವಾಸವನ್ನು ತಿಳಿಯಪಡಿಸುವ ಮಾತನ್ನು ಹೇಳಿದುದರಿಂದ ಶತ್ರುಗಳು ನನ್ನನ್ನು ಬಿಟ್ಟು ಬಿಟ್ಟರು.ನಾನು ಇಸ್ಲಾಮಿನಲ್ಲಿ ದ್ರಢವಾಗಿದ್ದೇನೆ.ಇಸ್ಲಾಮಿನ ಅಚಂಚಲ ವಿಶ್ವಾಸ ನನ್ನ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ಸಮಜಾಯಿಷಿ ನೀಡಿದರು.ಅವರು ಮಸ್ಲಿಮರಾಗಿಯೇ ಮುಂದುವರಿದರು.
    ಝಿನ್ನೀರಃ ರ.ಅ ಪೀಡನೆಗೆ ಗುರಿಯಾಗಿ ಶಾಶ್ವತ ಅಂಧರಾದರು.ಖಬ್ಬಾಬ್ ರ.ಅ ರವರನ್ನು ಬೆಂಕಿಯಿಂದ ಹಿಂಸಿಸಿದರು.ಮಿಸ್ಅಬ್ ರ.ಅ ರವರನ್ನು ಬಂಧಿಸಿದರು.ಸಅದುಬ್ನು ಅಬೀ ವಖ್ಖಾಸ್ ರ.ಅ ರವರಿಗೆ ಹೊಡೆದು ಅನ್ನಪಾನೀಯವನ್ನು ನಿಷೇಧಿಸಿದರು.ಹೀಗೆ ನಾನಾತರದ ಹಿಂಸೆಗೆ ಗುರಿಯಾದರೂ ಯಾರೂ ಕಿಂಚಿತ್ತೂ ಸತ್ಯಧರ್ಮದಿಂದ ಹಿಂದೆ ಸರಿಯಲಿಲ್ಲ.ಹಿಂಸೆಯನ್ನು ಸಹಿಸಿ ಇಸ್ಲಾಂ ಧರ್ಮದಲ್ಲಿ ದ್ರಢ ವಿಶ್ವಾಸದೊಂದಿಗೆ ಮುಂದುವರಿದರು.

ಮುಂದುವರಿಯುವುದು..

®ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob -+918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...