ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
----------------------------
ಸಂಚಿಕೆ -08
ಆಕಾಶರೋಹಣ
-------------
ನುಬುವ್ವತಿನ ಹನ್ನೊಂದನೇ ವರ್ಷ ನೆಬಿ ಸ.ಅ ರವರನ್ನು ಅಲ್ಲಾಹು ಇತರ ಅಂಬಿಯಾಗಳಿಗೆ ನೀಡದ ವಿಶಿಷ್ಟವಾದ ಕಾರ್ಯಕ್ರಮದ ಮೂಲಕ ತನ್ನೆಡೆಗೆ ಆಹ್ವಾನಿಸಿ ಗೌರವಿಸಿದನು.ರಜಬ್ ಇಪ್ಪತ್ತೇಳನೆಯ ರಾತ್ರಿ ಸೋಮವಾರದಂದು ಇಸ್ರಾಹ್ ಮಿಹ್ರಾಜ್ ಎಂಬ ಮಹೋನ್ನತ ಚಾರಿತ್ರಿಕ ಸಂಭವ ಉಂಟಾಯಿತು.ಮಕ್ಕಾದ ಮಸ್ಜಿದುಲ್ ಹರಾಮಿನಿಂದ ಪ್ಯಾಲೆಸ್ತೀನಿನಲ್ಲಿರುವ ಮಸ್ಜಿದುಲ್ ಅಖ್ಸಾ ವರೆಗಿನ ಪ್ರಯಾಣಕ್ಕೆ ಇಸ್ರಾಹ್ ಎಂದೂ ಅಲ್ಲಿಂದ ಏಳನೇ ಆಕಾಶ ದಾಟಿ ಆಚೆಗಿರುವ ಸಿದ್ರತುಲ್ ಮುಂತಹಾ ವರೆಗಿನ ಪ್ರಯಾಣಕ್ಕೆ ಮಿಹ್ರಾಜ್ ಎಂದೂ ಹೇಳಲಾಗುತ್ತದೆ.
ನೆಬಿ ಸ.ಅ ರವರು ಉಮ್ಮು ಹಾನೀ ರವರ ಮನೆಯಲ್ಲಿ ರಾತ್ರಿಯ ನಿದ್ದೆಯಲ್ಲಿರುವಾಗ ಜಿಬ್ರೀಲ್ ಅ.ಸ ಬುರಾಖ್ ಎಂಬ ವಿಶಿಷ್ಠ ವಾಹನದೊಂದಿಗೆ ಬಂದರು. ( ಬುರಾಖ್ ಎಂಬ ವಾಹನದ ವೇಗವು ಅದ್ಬುತವಾಗಿದೆ.ಅದರ ಪ್ರತಿಯೊಂದು ಹೆಜ್ಜೆಯು ಮನುಷ್ಯನ ಕಣ್ಣು ದ್ರಷ್ಠಿಗೆ ಎಷ್ಟು ವಿದೂರದ ತನಕವಿರುವ ವಸ್ತುಗಳು ಗೋಚರಿಸುತ್ತವೆಯೋ ಅಲ್ಲಿಯ ತನಕವಾಗಿದೆ ) ನೆಬಿ ಸ.ಅ ಅದರಲ್ಲಿ ಏರಿ ಬೈತುಲ್ ಮುಖದ್ದಸ್ ( ಮಸ್ಜಿದುಲ್ ಅಖ್ಸಾ ) ಗೆ ಹೋದರು.ಅಲ್ಲಿ ಇಬ್ರಾಹಿಂ ನೆಬಿ ಅ.ಸ, ಮೂಸಾ ನೆಬಿ ಅ.ಸ, ಈಸಾ ನೆಬಿ ಅ.ಸ ಮೊದಲಾದ ಒಂದು ಗುಂಪು ಪ್ರವಾದಿಗಳನ್ನು ಕಂಡರು.ಅವರು ನೆಬಿ ಸ.ಅ ರವರನ್ನು ಆದರದಿಂದ ಸ್ವಾಗತಿಸಿದರು.ಅವರಿಗೆ ನೆಬಿ ಸ.ಅ ಇಮಾಮಾಗಿ ನಿಂತು ನಮಾಜು ನಿರ್ವಹಿಸಿದರು.ಬಳಿಕ ಅಲ್ಲಿಂದ ( ಮಿಹ್ರಾಜ್ ) ಆಕಾಶರೋಹಣ ಯಾತ್ರೆ ಪ್ರಾರಂಭವಾಯಿತು.ಮಿಂಚಿನ ವೇಗದಲ್ಲಿ ಯಾತ್ರೆಗೈದು ಒಂದನೇ ಆಕಾಶ,ಎರಡನೇ ಆಕಾಶ ಹೀಗೆ ಏಳನೇ ಆಕಾಶ ತಲುಪಿದರು.ಪ್ರತಿಯೊಂದು ಆಕಾಶದಲ್ಲಿಯೂ ಮಲಕುಗಳು ಮತ್ತು ಪ್ರವಾದಿಗಳು ನೆಬಿ ಸ.ಅ ರವರನ್ನು ಸ್ವಾಗತಿಸಿದರು.ಒಂದನೇ ಆಕಾಶದಲ್ಲಿ ಆದಂ ನೆಬಿ ಅ.ಸ, ಎರಡನೇ ಆಕಾಶದಲ್ಲಿ ಈಸಾ ನೆಬಿ ಅ.ಸ, ಮೂರನೇ ಆಕಾಶದಲ್ಲಿ ಯೂಸುಫ್ ನೆಬಿ ಅ.ಸ, ನಾಲ್ಕರಲ್ಲಿ ಇದ್ರೀಸ್ ನೆಬಿ ಅ.ಸ, ಐದರಲ್ಲಿ ಹಾರೂನ್ ನೆಬಿ ಅ.ಸ, ಆರರಲ್ಲಿ ಮೂಸಾ ನೆಬಿ ಅ.ಸ, ಏಳರಲ್ಲಿ ಇಬ್ರಾಹಿಂ ನೆಬಿ ಅ.ಸ ನೆಬಿ ಸ.ಅ ರವರನ್ನು ಸ್ವೀಕರಿಸಿದರು.ಏಳನೇ ಆಕಾಶದಲ್ಲಿ ಬೈತುಲ್ ಮಹ್ಮೂರ್ ಎಂಬ ವಿಶೇಷ ಭವನಕ್ಕೆ ಇಬ್ರಾಹಿಮ್ ನೆಬಿ ಅ.ಸ ಒರಗಿ ಕುಳಿತಿರುವುದನ್ನು ನೆಬಿ ಸ.ಅ ಕಂಡರು.ಪ್ರತೀದಿನ ಆ ಭವನದೊಳಗೆ ಎಪ್ಪತ್ತು ಸಾವಿರ ಮಲಕುಗಳು ಪ್ರವೇಶಿಸುತ್ತಾರೆ.ಒಮ್ಮೆ ಪ್ರವೇಶಿಸಿದ ಮಲಕುಗಳು ಮತ್ತೆ ಪ್ರವೇಶಿಸುವುದಿಲ್ಲ.ಜಿಬ್ರೀಲ್ ಅ.ಸ ರವರ ನಿಜರೂಪದಲ್ಲಿ ಆರುನೂರು ರೆಕ್ಕೆಗಳೊಂದಿಗೆ ನೆಬಿ ಸ.ಅ ದರ್ಶಿಸಿದ್ದು ಅಲ್ಲಿಯಾಗಿತ್ತು.ಬೈತುಲ್ ಮಹ್ಮೂರಿನಿಂದ ಆಚೆಗೆ ಸಿದ್ರತುಲ್ ಮುಂತಹಾ ವರೆಗೆ ಜಿಬ್ರೀಲ್ ಅ.ಸ ಜೊತೆಯಾಗಿದ್ದರು.ಅದರ ಆಚೆಗೆ ಜಿಬ್ರೀಲ್ ಅ.ಸ ರವರ ಪ್ರವೇಶಕ್ಕೆ ಅನುಮತಿಯಿರಲಿಲ್ಲ.ಬಳಿಕ ನೆಬಿ ಸ.ಅ ಒಬ್ಬಂಟಿಗರಾಗಿ ಯಾತ್ರೆ ನಡೆಸಿ ಅಲ್ಲಾಹನನ್ನು ದರ್ಶಿಸಿ ಅಭಿಮುಖ ಸಂಭಾಷಣೆ ನಡೆಸಿದರು.ಕಡ್ಡಾಯಗೊಳಿಸಲ್ಪಟ್ಟ ಐವತ್ತು ವಖ್ತ್ ನಮಾಜಿನೊಂದಿಗೆ ನೆಬಿ ಸ.ಅ ಮರಳಿದರು.ಮರಳಿ ಬರುವಾಗ ಮೂಸಾ ನೆಬಿ ಅ.ಸ ರವರ ನಿರ್ದೇಶ ಮೇರೆಗೆ ಐವತ್ತು ವಖ್ತ್ ನಮಾಜಿನಲ್ಲಿ ಕಡಿತಗೊಳಿಸಲು ಅಲ್ಲಾಹನೊಂದಿಗೆ ಬೇಡಿಕೆಯಿಟ್ಟರು.ಅಲ್ಲಾಹು ಐವತ್ತರಿಂದ ಐದು ವಖ್ತನ್ನು ಕಡಿತಗೊಳಿಸಿದನು.ಒಂಭತ್ತು ಬಾರಿ ಇದು ಆವರ್ತನೆಯಾಯಿತು.ಹೀಗೆ ಐವತ್ತು ವಖ್ತ್ ನಮಾಜು ಐದು ವಖ್ತ್ ಆಯಿತು.
ನೆಬಿ ಸ.ಅ ಅಂದು ರಾತ್ರಿಯೇ ಮಕ್ಕಾಕ್ಕೆ ಮರಳಿ ತಲುಪಿದರು.ಕುರೈಶಿಗಳೊಂದಿಗೆ ನಡೆದ ಸತ್ಯಸಂಗತಿಯನ್ನು ವಿವರಿಸಿದರು.ಅವರು ನೆಬಿ ಸ.ಅ ರವರನ್ನು ಗೇಲಿಮಾಡಿ ಕೇಕೆಹಾಕಿ ಅಪಹಾಸ್ಯ ಮಾಡಿದರು.ಕೆಲವರು ಅಪಹಾಸ್ಯದೊಂದಿಗೆ ಚಪ್ಪಾಳೆ ತಟ್ಟಿದರು.ಇಸ್ಲಾಂ ಧರ್ಮ ಸ್ವೀಕರಿಸಿದ್ದ ಕೆಲವು ದುರ್ಬಲ ವಿಶ್ವಾಸಿಗಳು ಅವಿಶ್ವಾಸಿಗಳಾದರು.ನೈಜ ವಿಶ್ವಾಸಿಗಳಿಗೆ ಯಾವುದೇ ಸಂಶಯ ಉಂಟಾಗಲಿಲ್ಲ.ನೆಬಿ ಸ.ಅ ರವರ ಇಸ್ರಾಹ್ ಮಿಹ್ರಾಜನ್ನು ಪ್ರಪ್ರಥಮವಾಗಿ ಅಂಗೀಕರಿಸಿದ ಅಬೂಬಕರ್ ರ.ಅ. "ಸಿದ್ದೀಖ್" ಎಂಬ ಗೌರವ ನಾಮಕ್ಕೆ ಅರ್ಹರಾದರು.
ಅವಿಶ್ವಾಸಿಗಳು ನೆಬಿ ಸ.ಅ ರವರನ್ನು ಪರೀಕ್ಷಿಸಲು ಹಲವಾರು ಪ್ರಶ್ನೆಗಳನ್ನು ಕೇಳಿದರು.ನೆಬಿ ಸ.ಅ ಎಲ್ಲದಕ್ಕೂ ಸ್ಪಷ್ಟ ಉತ್ತರ ನೀಡಿದರು.ಬೈತುಲ್ ಮುಖದ್ದಸ್ ಮತ್ತು ಅದರ ಬಾಗಿಲುಗಳ ಕುರಿತು ಪ್ರಶ್ನಿಸಿದರು.ಸ್ಪಷ್ಟವಾಗಿ ಉತ್ತರಿಸಿದರು.ಮಾತ್ರವಲ್ಲ ಕುರೈಸಿಗಳ ವ್ಯಾಪಾರ ಸಂಘ ಅಲ್ಲಿ ತಲುಪಿದೆಯೆಂದೂ ಅದರಲ್ಲಿ ಎಷ್ಟು ಒಂಟೆಗಳಿವೆಯೆಂದೂ ಅವರು ಯಾವಾಗ ಊರಿಗೆ ಮರಳಿ ಬರುವರು ಎಂದೂ ವಿವರಿಸಿದರು.ನೆಬಿ ಸ.ಅ ರವರ ವಿವರಣೆ ಕೇಳಿ ಅವಿಶ್ವಾಸಿಗಳು ತಬ್ಬಿಬ್ಬಾದರು.ಮತ್ತೆ ಅವರಿಂದ ಮಾತು ಹೊರಡಲಿಲ್ಲ.
ಮುಂದುವರಿಯುವುದು...
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760
No comments:
Post a Comment