ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
----------------------------------
ಸಂಚಿಕೆ -03
ಲೋಕಾನುಗ್ರಹಿ ನೆಬಿ ಸ.ಅ ರವರ ವಿವಾಹ ಸಂಭ್ರಮ.
ಖುವೈಲಿದರ ಮಗಳು ಖದೀಜ ರ.ಅ ಕುಲೀನೆಯೂ,ವ್ಯಾಪಾರಸ್ಥೆಯೂ ಆಗಿದ್ದರು.ಆಳುಗಳನ್ನು ವೇತನ ನಿಗದಿಪಡಿಸಿ ವ್ಯಾಪಾರಕ್ಕಾಗಿ ಕಳುಹಿಸಿ ಕೊಡುವುದು ಅವರ ರೂಢಿಯಾಗಿತ್ತು.ಒಮ್ಮೆ ತನ್ನ ದಾಸನಾದ ಮೈಸರ ನೊಂದಿಗೆ ಸಿರಿಯಾ ದೇಶಕ್ಕೆ ವ್ಯಾಪಾರಕ್ಕೆ ಹೋಗಲು ನೆಬಿ ಸ.ಅ ರವರನ್ನು ಆಹ್ವಾನಿಸಿದರು.ಅಬೂತಾಲಿಬ್ ಆಗ ತೀರಾ ಬಡವರಾಗಿದ್ದರು.ಅವರ ಬಡತನ,ಸಂಕಷ್ಟ ಸಡಿಲೀಕರಿಸುವ ಉದ್ದೇಶದೊಂದಿಗೆ ನೆಬಿ (ಸ.ಅ) ಖದೀಜ ರ.ಅ ರವರ ಆಹ್ವಾನವನ್ನು ಸ್ವೀಕರಿಸಿದರು.ಅಂತೆಯೇ ನೆಬಿ ಸ.ಅ ಮತ್ತು ಮೈಸರ ವ್ಯಾಪಾರಕ್ಕಾಗಿ ಹೊರಟರು.ಅವರು ಬುಸ್ರಾ ಎಂಬ ಪಟ್ಟಣಕ್ಕೆ ತಲುಪಿದಾಗ ನಸ್ತೂರ ಎಂಬ ಪಾದ್ರಿಯನ್ನು ಕಾಣಲು ಸಾಧ್ಯವಾಯಿತು.ಪರಿಚಯ ವಿನಿಮಯದ ಬಳಿಕ ಮೈಸರನ ಮುಖಾಂತರ ನೆಬಿ ಸ.ಅ ರವರ ಶರೀರ ವಿಶೇಷತೆಗಳನ್ನು ಕೇಳಿ ತಿಳಿದುಕೊಂಡ ಪಾದ್ರಿ ನಿನ್ನ ಜತೆಯಲ್ಲಿರುವ ಯುವಕ ಪ್ರವಾದಿಯಾಗಿದ್ದಾರೆ ಎಂದು ಮೈಸರನಿಗೆ ತಿಳಿಸಿದನು.ಅವರ ಯಾತ್ರೆಯಲ್ಲಿ ಮೋಡ ನೆಬಿ ಸ.ಅ ರವರಿಗೆ ನೆರಳು ನೀಡಿದ ಮತ್ತು ಆ ಸಲದ ವ್ಯಾಪಾರದಲ್ಲಿ ನಿರೀಕ್ಷೆಗಿಂತಲೂ ಮಿಗಿಲು ಲಾಭಗಳಿಸಿದ್ದು ಮೈಸರನನ್ನು ಆಶ್ಚರ್ಯ ಚಕಿತಗೊಳಿಸಿತು.ಈ ಸಂಗತಿಯನ್ನು ಮೈಸರ ತನ್ನ ಯಜಮಾನಿಯಾದ ಖದೀಜ ರ.ಅ ರವರಿಗೆ ತಿಳಿಸಿದನು.ನೆಬಿ ಸ.ಅ ರವರು ಒಬ್ಬ ಅಸಾಮಾನ್ಯ ಮಹಾನ್ ಆಗಿದ್ದಾರೆ ಎಂದು ತಿಳಿದ ಖದೀಜ ರ.ಅ ವಿವಾಹಾಲೋಚನೆಯೊಂದಿಗೆ ನೆಬಿ ಸ.ಅ ರವರನ್ನು ಸಮೀಪಿಸಿದರು.ನೆಬಿ (ಸ.ಅ) ಖದೀಜ ರ.ಅ ರವರ ಮನದ ಇಂಗಿತವನ್ನು ಸ್ವೀಕರಿಸಿದರು.ಖದೀಜ ರ.ಅ ರವರ ಮನೆಯಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು.ಖದೀಜ ರ.ಅ ರವರ ಪಿತ್ರ ಸಹೋದರನಾದ ಅಮ್ರುಬ್ನು ಅಸದ್ ವಿವಾಹ ನಡೆಸಿಕೊಟ್ಟರು.ಅಂದು ನೆಬಿ ಸ.ಅ ರವರಿಗೆ 25 ವರ್ಷ ಪ್ರಾಯವೂ ಖದೀಜ ರ.ಅ ರವರಿಗೆ 40 ವರ್ಷ ಪ್ರಾಯವೂ ಆಗಿತ್ತು.
ಸಾಮೂಹಿಕ ಜೀವನ.
ನೆಬಿ ಸ.ಅ ಸಂಶುದ್ಧನಾಗಿ ಬೆಳೆದರು.ಅಲ್ಲಾಹನ ಸಂರಕ್ಷಣೆಯಲ್ಲಿ ಉತ್ತಮ ಸ್ವಭಾವಿಯೂ ಉತ್ತಮ ಗುಣ ನಡತೆಯುಳ್ಳವರಾಗಿಯೂ ಜೀವಿಸಿದರು.ಸತ್ಯಸಂಧತೆ,ವಾಗ್ದಾನ ಪಾಲಿಸುವಿಕೆ,ಕ್ರತಜ್ಞತಾ ಮನೋಭಾವ,ಲಜ್ಜೆ,ತಾಳ್ಮೆ,ಸಹನೆ,ನ್ಯಾಯ ನೀತಿ,ಧೀರತೆ,ವಿಶ್ವಾಸಾರ್ಹತೆ,ಮಾನವೀಯತೆ ಮೊದಲಾದ ಉತ್ತಮ ನಡತೆಗಳು ನೆಬಿ ಸ.ಅ ರವರಲ್ಲಿ ಮೇಲೈಸಿತ್ತು.ಪರಿಶ್ರಮಿಸಿ ಗಳಿಸಿದುದರಿಂದ ಜೀವಿಸಿದರು.ಆಡುಗಳನ್ನು ಮೇಯಿಸಿಯೂ ವ್ಯಾಪಾರದಲ್ಲಿ ತೊಡಗಿಸಿಕೊಂಡೂ ಬದುಕಿದರು.ಬಡ ನಿರ್ಗತಿಕರನ್ನು ಸಹಾಯಿಸಲು,ಕುಟುಂಬ ಸಂಬಂಧ ಬೆಳೆಸಲು,ಯಾತನಾ ಬದುಕನ್ನು ಅನುಭವಿಸುವರ ಆಶಾಕಿರಣವಾಗಲು,ವಿಪತ್ತುಗಳು ಸಂಭವಿಸಿದಾಗ ಸಹಾಯ ತಲುಪಿಸಲು ಮುಂದೆ ಇದ್ದರು.ಹೀಗೆ ನೆಬಿ ಸ.ಅ ರವರಿಗೆ ಸತ್ಯವಂತ,ನಂಬಿಗಸ್ಥ ಮೊದಲಾದ ಬಿರುದುನಾಮಗಳು ಲಭಿಸಿದವು.ಜಾಹಿಲಿಯ್ಯ (ತಿಳುವಳಿಕೆ ಇಲ್ಲದ) ಕಾಲದ ಕೆಡುಕುಗಳಿಂದ ಸಂಪೂರ್ಣವಾಗಿ ಮುಕ್ತನಾಗಿ ಜೀವಿಸಿದರು.ಮದ್ಯಪಾನ,ವಿಗ್ರಹರಾಧನೆ ಮುಂತಾದ ಕೆಡುಕುಗಳಿಂದ ದೂರ ನಿಂತರು.ಉತ್ಸವಗಳಲ್ಲಿ ಭಾಗವಹಿಸುವುದೋ ನಗ್ನತೆ ( ಔರತ್ ) ತೋರ್ಪಡಿಸುವುದೋ ಮಾಡಲಿಲ್ಲ.ಸರ್ವ ಕೆಡುಕುಗಳಿಂದ ನೆಬಿ ಸ.ಅ ರವರನ್ನು ಅಲ್ಲಾಹು ಸಂರಕ್ಷಿಸಿದನು.(ಇದಕ್ಕೊಂದು ಉದಾಹರಣೆ ) ನೆಬಿ ಸ.ಅ ಚಿಕ್ಕ ಬಾಲಕನಾಗಿದ್ದಾಗ ಒಂದು ವಿವಾಹ ಸತ್ಕಾರ ಕೂಟಕ್ಕೆ ರಾತ್ರಿ ಹೋದರು.ಅಲ್ಲಿ ಇಸ್ಲಾಮಿನಲ್ಲಿ ನಿಷಿದ್ಧವಿರುವ ಕಾರ್ಯಕ್ರಮ ಅಚಾನಕ್ ಪ್ರಾರಂಭವಾಯಿತು.ವೀಣೆ ಊದಲು ಪ್ರಾರಂಭವಾಯಿತು.ಅದಾಗಲೇ ಅಲ್ಲಾಹು ನೆಬಿ ಸ.ಅ ರವರಿಗೆ ಗಾಢವಾದ ನಿದ್ರೆಯನ್ನು ಬರಿಸಿ ಹರಾಮಾದ ಕಾರ್ಯ ಕೇಳುವುದರಿಂದ ಸಂರಕ್ಷಿಸಿದನು.ನೆಬಿ ಸ.ಅ ಮತ್ತೆ ಎಚ್ಚರವಾದದ್ದು ಬೆಳಿಗ್ಗೆ ಸೂರ್ಯೋದಯದ ಬಳಿಕವಾಗಿದೆ.
ಪವಿತ್ರ ಕಾಬಾ ಪುನರ್ ನಿರ್ಮಾಣ ವೇಳೆ ಜನರು ತಮ್ಮ ತಮ್ಮ ಲುಂಗಿಯನ್ನು ಕಳಚಿ ಅದನ್ನು ಮಡಚಿ ತಲೆ ಮೇಲಿಟ್ಟು ಕಲ್ಲುಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು.ಲುಂಗಿಯನ್ನು ಕಳಚಿದಾಗ ಔರತ್ ಕಾಣುತ್ತಿತ್ತು.ಅದು ಅವರಿಗೆ ದೊಡ್ಡ ವಿಷಯವಾಗಿರಲಿಲ್ಲ.ಪಿತ್ರ ಸಹೋದರ ಅಬ್ಬಾಸ್ ರ.ಅ ರವರ ನಿರ್ದೇಶ ಪ್ರಕಾರ ನೆಬಿ ಸ.ಅ ಲುಂಗಿ ಕಳಚಲು ರೆಡಿಯಾದಾಗ ಪ್ರಜ್ಞೆ ತಪ್ಪಿ ಬಿದ್ದರು.ಇದರಿಂದ ಕಲ್ಲು ಹೊರುವ ಕೆಲಸ ಇಲ್ಲವಾಯಿತು.ಕಲ್ಲು ಹೊರಲು ಲುಂಗಿ ಕಳಚುವುದು ಇಲ್ಲವಾಯಿತು.ನಗ್ನತೆ ಗೋಚರಿಸುವುದೂ ಇಲ್ಲವಾಯಿತು.
ಕಅಬಃ ಪುನರ್ ನಿರ್ಮಾಣ.
ಇಬ್ರಾಹಿಮ್ ನೆಬಿ ಅ.ಸ ಮತ್ತು ಪುತ್ರ ಇಸ್ಮಾಇಲ್ ನೆಬಿ ಅ.ಸ ಕಾಬಾ ಪುನರ್ ನಿರ್ಮಾಣಗೊಳಿಸಿದ ಬಳಿಕ ನೆಬಿ ಸ.ಅ ರವರ ಕಾಲದವರೆಗೆ ಹಾಗೆನೇ ಇತ್ತು.ಇದರ ಮಧ್ಯೆ ಅಗ್ನಿ ಬಾಧೆ ಮತ್ತು ಜಲ ಪ್ರವಾಹದ ಕಾರಣ ಪವಿತ್ರ ಕಾಬಾ ಅಲ್ಲಲ್ಲಿ ಜರಿದು ಬಿದ್ದಿತ್ತು.ಕಾಬಾದ ಗೋಡೆಗಳು ಹಾಳಾಗಿದ್ದವು.ನೆಬಿ ಸ.ಅ ರವರಿಗೆ ಈಗ ಪ್ರಾಯ 35.
ಕುರೈಶಿಗಳು ಪವಿತ್ರ ಕಾಬಾವನ್ನು ಪುನರ್ ನಿರ್ಮಿಸಲು ತೀರ್ಮಾನಿಸಿದರು.ಅದಕ್ಕಾಗಿ ಶುದ್ಧವಾದ ಹಣವನ್ನು ಮಾತ್ರ ಶೇಖರಿಸಿದರು.ಹದಿನೆಂಟು ಮೊಳದಷ್ಟು ಕಾಬಾವನ್ನು ಎತ್ತರಿಸಿ ಕಟ್ಟಿದರು.ಆದರೆ ಇಬ್ರಾಹಿಮ್ ನೆಬಿ ಅ.ಸ ನಿರ್ಮಿಸಿದ ಫೌಂಡೇಶನ್ ಸಂಪೂರ್ಣವಾಗಿ ಪೂರ್ತೀಕರಿಸಲು ಹಣ ಸಾಕಾಗಲಿಲ್ಲ.ಆದುದರಿಂದ ಹಿಜ್ರ್ ಇಸ್ಮಾಇಲನ್ನು ಕಾಬಾ ಕಟ್ಟಡದಿಂದ ಹೊರ ಭಾಗದಲ್ಲಾಗುವಂತೆ ಮಾಡಿ ನಿರ್ಮಾಣ ಕಾರ್ಯ ಪೂರ್ತಿಗೊಳಿಸಿದರು.ಅಲ್ಲಿ ನಿಶಾನೆಗಾಗಿ ಒಂದು ಚಿಕ್ಕ ಗೋಡೆಯನ್ನು ನಿರ್ಮಿಸಿದರು.
ಕಾಬಾದಲ್ಲಿರುವ ಹಜರುಲ್ ಅಸ್ವದ್ ಅದರ ಯಥಾಸ್ಥಾನದಲ್ಲಿರಿಸಬೇಕಾದ ವೇಳೆ ಗೋತ್ರಗಳ ನಾಯಕರೆಡೆಯಲ್ಲಿ ಭಾರೀ ತರ್ಕ ಉಂಟಾಯಿತು.ತರ್ಕ ಉಲ್ಫಣಿಸುವ ಸಾಧ್ಯತೆಯನ್ನು ಮನಗಂಡ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಯಾದ ಅಬೂ ಉಮಯ್ಯ ರವರ ನಿರ್ದೇಶ ಸ್ವೀಕರಿಸಿ ಪ್ರಥಮವಾಗಿ ಹಾದು ಬರುವ ವ್ಯಕ್ತಿ ಯಾರೋ ಅವರನ್ನು ಈ ವಿಷಯದಲ್ಲಿ ತೀರ್ಪುಗಾರನನ್ನಾಗಿಸುವ ಎಂದು ತೀರ್ಮಾನಿಸಿದರು.ಅಷ್ಟರಲ್ಲಿ ನೆಬಿ (ಸ.ಅ) ಪ್ರಥಮವಾಗಿ ಹಾದು ಬಂದರು.ಎಲ್ಲರಿಗೂ ತ್ರಪ್ತಿಯಾಯಿತು.ನೆಬಿ ಸ.ಅ ತನ್ನ ಶಾಲನ್ನು ನೆಲದಲ್ಲಿ ಹಾಸಿ ಹಜರುಲ್ ಅಸ್ವದ್ ಕಲ್ಲನ್ನು ಅದರಲ್ಲಿ ಇಟ್ಟರು.ಪ್ರತೀ ಗೋತ್ರಗಳ ನಾಯಕರೊಂದಿಗೆ ಆ ಶಾಲಿನ ಪ್ರತಿಯೊಂದು ತುದಿಯನ್ನು ಹಿಡಿದು ಎತ್ತಲು ಸೂಚಿಸಿದರು.ಅವರು ಎತ್ತಿ ಕೊಂಡು ಬಂದ ಪವಿತ್ರ ಹಜರುಲ್ ಅಸ್ವದ್ ಕಲ್ಲನ್ನು ನೆಬಿ ಸ.ಅ ತನ್ನ ಪವಿತ್ರ ಕೈಗಳಿಂದ ಅದರ ಯಥಾ ಸ್ಥಾನದಲ್ಲಿ ಸ್ಥಾಪಿಸಿದರು.ಇದರಿಂದ ಯುದ್ಧದ ಸನಿಹಕ್ಕೆ ತಲುಪಿದ ಭಾರೀ ತರ್ಕವೊಂದನ್ನು ಸುಲಳಿತವಾಗಿ ಇತ್ಯರ್ಥ ಮಾಡಿದರು ಅಲ್ಲದೆ ತನ್ನ ಪವಿತ್ರ ಕೈಗಳಿಂದ ಹಜರುಲ್ ಅಸ್ವದನ್ನು ಪವಿತ್ರ ಕಾಬಾಲಯದಲ್ಲಿ ಸ್ಥಾಪಿಸಿದರು.
ಮುಂದುವರಿಯುವುದು..
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.
Mob -+918105745760
ಮೂಲ : ಅರಬಿ ಮಲಯಾಳ
No comments:
Post a Comment