Saturday, 15 October 2016

ಸಯ್ಯಿದ್ ಮದನಿ ತಂಗಳ್ ಖ.ಸಿ ಜೀವನ ಚರಿತ್ರೆ ಚುಟುಕಾಗಿ

ಸಯ್ಯಿದ್ ಮದನಿ ತಂಗಳರ ಜೀವನ ಚರಿತ್ರೆ
ಚುಟುಕಾಗಿ....
*ಉಳ್ಳಾಲ ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ಖ.ಸಿ*

         

�� ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಅರಿಯಿರಿ.,ಅಲ್ಲಾಹನ ಇಷ್ಟದಾಸರುಗಳಿಗೆ ಯಾವುದೇ ತರದ ಭಯವೋ, ದುಃಖವೋ ಇಲ್ಲ. ( ಕುರಾನ್ )
ಐಹಿಕ ಜೀವನದಿಂದ ಸಂಪೂರ್ಣ ದೂರವಾಗಿ ಸದಾ ಇಬಾದತುಗಳ ಮೂಲಕ ತ್ಯಾಗಮಯ ಜೀವನ ನಡೆಸುವವರು.ಅಲ್ಲಾಹನ ಸಂಪ್ರೀತಿಗಾಗಿ ತಮ್ಮ ಶರೀರವನ್ನು,ಸಂಪತ್ತನ್ನು ಅರ್ಪಿಸಿದವರು,ಹ್ರದಯ ಶುದ್ಧಿಗಾಗಿ ಅಲ್ಲಾಹನ ಸ್ಮರಣೆಯ ಮೂಲಕ ಕಳಂಕ ರಹಿತ ಬದುಕನ್ನು ನಡೆಸಿದವರು.ಅಲ್ಲಾಹನು ಹೇಳುತ್ತಾನೆ.
ألا بذكرالله تطمئن القلوب

ಅರಿಯಿರಿ..ಅಲ್ಲಾಹನ ಸ್ಮರಣೆಯಿಂದ ಹ್ರದಯಗಳಿಗೆ ಸಮಾಧಾನ ಉಂಟಾಗುತ್ತದೆ....

ಈ ಅಲ್ಲಾಹನ ಇಷ್ಟದಾಸರುಗಳಲ್ಲಿ ಮುತ್ತು ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುಟುಂಬ ಪರಂಪರೆಯಲ್ಲಿ ಬರುವ ಅಹ್ಲು ಬೈತ್ ಗೆ ಅಲ್ಲಾಹು ಹೆಚ್ಚು ಪ್ರಾಧಾನ್ಯತೆಯನ್ನು ನೀಡಿ ಅವರನ್ನು ಅಲ್ಲಾಹು ಎಲ್ಲಾ ಕಳಂಕಗಳಿಂದ ವಿಮುಕ್ತಗೊಳಿಸಿದ್ದಾನೆ.

*إنما يريدالله ليذهب عنكم الرجس أهل البيت ويطهركم تطهيرا*
( ಪವಿತ್ರ ಕುರಾನ್ )

ಖಂಡಿತವಾಗಿಯೂ ಅಲ್ಲಾಹು ನೆಬಿ ಸ.ಅ ಮರ ಅಹ್ಲು ಬೈತನ್ನು ಕಳಂಕಗಳಿಂದ ವಿಮುಕ್ತಗೊಳಿಸಿ ಶುದ್ಧೀಕರಿಸಿದ್ದಾನೆ ಎಂಬ ಆಯತ್ ಅವತರಣೆಯಾದಾಗ ಅಲಿ (ರ.ಅ) ಫಾತಿಮ (ರ.ಅ) ಮತ್ತು ಮೊಮ್ಮಕ್ಕಳಾದ ಹಸನ್ ಹುಸೈನ್ (ರ.ಅ) ರವರನ್ನು  ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಹತ್ತಿರ ಕರೆದು ತನ್ನ ಸನಿಹ ಕೂರಿಸಿ ಒಂದು ವಸ್ತ್ರವನ್ನು ಅವರ ಮೇಲೆ ಹಾಸಿ ಹೇಳಿದರು *ಇವರು ನನ್ನ ಅಹ್ಲು ಬೈತ್ ಆಗಿದ್ದಾರೆ..*
ಪ್ರವಾದಿ ಸ.ಅ ಮರ ಈ ಪವಿತ್ರ ಅಹ್ಲು ಬೈತ್ ನ ಪರಂಪರೆಯಲ್ಲಿ ಜನ್ಮ ತಾಳಿದ ಅಲ್ಲಾಹನ ವಲಿಯ್ಯ್ ಆಗಿದ್ದಾರೆ. *ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ......*
ಮದೀನಃ ಮುನವ್ವರದಿಂದ ಕರ್ನಾಟಕದ ಕರಾವಳಿ ಪ್ರದೇಶವಾದ ಉಳ್ಳಾಲಕ್ಕೆ ಬಂದು ಇಡೀ ದಕ್ಷಿಣ ಭಾರತದ ಜನತೆಯ ಆಶಾ ಕಿರಣವಾಗಿ,ವಿಶ್ವ ಭೂಪಟದಲ್ಲಿ ಉಳ್ಳಾಲ ರಾರಾಜಿಸಲು ಕಾರಣೀಕರ್ತರಾದ ಮಹಾನ್ ವಲಿಯ್ಯ್  ಆಗಿದ್ದಾರೆ ಸಯ್ಯಿದ್ ಮದನಿ ಖ.ಸಿ.,
ಕ್ರಿ.ಶ ಹದಿನಾರನೇ ಶತಮಾನದಲ್ಲಿ ಪವಿತ್ರ ಮದೀನದಿಂದ ಉಳ್ಳಾಲಕ್ಕೆ ಸಯ್ಯಿದ್ ಮದನಿ ಖ.ಸಿ ಆಗಮಿಸಿದರು.ಅವರ ಆಗಮನವೇ ಕರಾಮತಿನ ಮೂಲಕವಾಗಿತ್ತು.ಭೋರ್ಗರೆಯುವ ಅರಬೀ ಸಮುದ್ರದ ಅಲೆಗಳ ಮೇಲೆ ತನ್ನ ನಮಾಜಿನ ಮುಸಲ್ಲಾವನ್ನು ಹಾಸಿ ಅದರ ಮೇಲೆ ಕುಳಿತು ವಿಶಾಲ ಸಾಗರದ ತೆರೆಮಾಲೆಗಳನ್ನು  ದಾಟಿ ಮಂಗಳೂರು ಕಡಲ ಕಿನಾರೆಗೆ ಬಂದು ತಲುಪಿದರು.ಅಲ್ಲಿಂದ ಉಳ್ಳಾಲ ಎಂಬ ಪ್ರಕ್ರತಿ ರಮಣೀಯವಾದ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದರು.ಅಧರ್ಮ ಅರಾಜಕತೆ ಅನ್ಯಾಯ ಅನೀತಿ ತಾಂಡವವಾಡುತ್ತಿದ್ದ ಉಳ್ಳಾಲದ ಚಿತ್ರಣ ಆ ಬಳಿಕ ಹಂತಹಂತವಾಗಿ ಬದಲಾವಣೆಯಾಯಿತು.ಉಳ್ಳಾಲದಲ್ಲಿ ಹೊಸ ಯುಗದ ಆರಂಭಕ್ಕೆ ಸಯ್ಯಿದ್ ಮದನಿ ಖ.ಸಿ ರವರ ಆಗಮನ ಕಾರಣವಾಯಿತು.ಜಾತಿ ಮತ ಭೇದವಿಲ್ಲದೆ ಉಳ್ಳಾಲ ಪ್ರದೇಶದ ಜನರ ಗೌರವ ಅಂಗೀಕಾರಕ್ಕೆ  ಪಾತ್ರರಾದರು.ಅವರ ಇಷ್ಟಾನುಸಾರ ಅವರ ವಾಸ್ತವ್ಯವನ್ನು ಹತ್ತಿರದ ಮಸೀದಿಗೆ ವರ್ಗಾಯಿಸಿದರು.ಹಗಲಿರುಳು ನಿರಂತರ ನಮಾಜು, ಪ್ರಾರ್ಥನೆ, ದ್ಸಿಕ್ರ್ ನಲ್ಲಿ ತಲ್ಲೀನರಾದರು.ಐಹಿಕ ಸುಖಾಡಂಭರಗಳನ್ನು ತ್ಯಜಿಸಿ ಸಂಪೂರ್ಣವಾಗಿ ತನ್ನನ್ನು ತಾನು ಅಲ್ಲಾಹನ ಸಂಪ್ರೀತಿಗಾಗಿ ತೊಡಗಿಸಿಕೊಂಡರು.ಅವರ ಉಪದೇಶ ನಿರ್ದೇಶಗಳನ್ನು ಆಲಿಸಿದ ಜನರು ಸಂಪೂರ್ಣವಾಗಿ ಇಸ್ಲಾಮಿನಲ್ಲಿ ಲೀನವಾಗಿ ಇಸ್ಲಾಮಿನ ಸುಂದರಾಶಯಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡರು.ಸಯ್ಯಿದ್ ಮದನಿ ತಂಗಳ್ ರವರ ಆಗಮನ ಅವರಿಗೆ ಕೆಡುಕಿನಿಂದ ವಿಮುಕ್ತಿ ಹೊಂದಿ ಒಳಿತಿನ ಹಾದಿಗೆ ಚಲಿಸಲು ಹೇತುವಾಯಿತು.

*
ಸಯ್ಯಿದ್ ಮದನಿ ಖ.ಸಿ ರವರ ಬಳಿ ಕಷ್ಟ ಕಾರ್ಪಣ್ಯಗಳನ್ನು ಹೇಳಿ ವಿವಿಧ ಊರುಗಳಿಂದ ಜನರು ಬರತೊಡಗಿದರು.ನಾನಾ ಸಮಸ್ಯೆಗಳನ್ನು ಹೊತ್ತ ಜನರು ಅವರ ಬಳಿ ಬಂದು ಪರಿಹಾರ ಪಡೆದು ಸಂತುಷ್ಟರಾಗಿ ಮರಳುತ್ತಿದ್ದರು.
ಅದ್ರಶ್ಯ ಜ್ಞಾನಗಳಿಂದ ಮತ್ತು ಕರಾಮತುಗಳಿಂದ ಸನ್ಮಾರ್ಗದ ಹಾದಿಗೆ ಜನರನ್ನು ಮರಳಿಸಿ ಇಸ್ಲಾಂ ಧರ್ಮಕ್ಕೆ ಶಕ್ತಿ ತಂಬಿದ ಅಲ್ಲಾಹನ ಇಷ್ಟದಾಸರುಗಳಾದ ಅವುಲಿಯಾಗಳ, ಸಯ್ಯಿದರುಗಳ ಪದವಿಗಳನ್ನು ಇನ್ನಷ್ಟು ಉನ್ನತಿಗೇರಿಸುತ್ತಾ ಅಲ್ಲಾಹನು ಅವರನ್ನು ಗೌರವಿಸುತ್ತಾನೆ.ಅವರು ಅಲ್ಲಾಹನಿಗೆ ಬಹಳಷ್ಟು ಹತ್ತಿರವಾಗುತ್ತಾರೆ.ಅಲ್ಲಾಹನ ಸಾಮೀಪ್ಯ ಬಯಸಿದಾಗ ಜನರಿಂದ ದೂರ ಸರಿದು ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸುತ್ತಾರೆ.
ಸದಾ ಪಾಪದ ಕೂಪದಲ್ಲಿ ಮುಳುಗಿರುವ ನಾವು ಅಲ್ಲಾಹನ ಸಜ್ಜನರಾದ ಅವುಲಿಯಾಗಳನ್ನು ಗೌರವಿಸುವವರಾಗೋಣ.ಅವರನ್ನು ನಮ್ಮ ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರೀತಿಸುವವರಾಗೋಣ.ಅವರ ಗುಣಗಾನ  ಮದಹ್ ಗಳನ್ನು ಪ್ರಶಂಸಿಸುವವರಾಗೋಣ.ಆ ಮೂಲಕ ಅಲ್ಲಾಹನಲ್ಲಿ ನಮ್ಮ ಪಾಪಗಳಿಗೆ ತೌಬ ಮತ್ತು ಇಸ್ತಿಗ್ಫಾರ್ ಮೂಲಕ ಕ್ಷಮೆ ಬೇಡುವವರಾಗೋಣ.ಅಲ್ಲಾಹನ ಇಷ್ಟದಾಸರುಗಳ ಮದಹ್ ಕೀರ್ತನೆಗಳನ್ನು ಹಾಡಿ ಹೊಗಳಿ ಅವರನ್ನು ತವಸ್ಸುಲ್ ಮಾಡುವ ಮೂಲಕ ಅಲ್ಲಾಹನ ರಹ್ಮತ್ ನಮಗೆ ಲಭಿಸುತ್ತದೆ.ಅವರನ್ನು ಅವರ ಪದವಿ,ಕರಾಮತುಗಳನ್ನು ವಿರೋಧಿಸುವವರಾದರೆ ಅಲ್ಲಾಹನ ಕಠಿಣವಾದ ಕ್ರೋಧಕ್ಕೆ ಮತ್ತು ಶಿಕ್ಷೆಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನಾನು ಇಲ್ಲಿ ಸಯ್ಯಿದ್ ಮದನಿ ತಂಗಳ್ ರವರ ಮದಹ್ ಪ್ರಕೀರ್ತನೆಯನ್ನು ಅವರ ಕರಾಮತು ಗಳನ್ನು ಚುಟುಕಾಗಿ ವಿವರಿಸುವೆನು.ಇಂಶಾ ಅಲ್ಲಾಹ್.
ಮದನಿ ತಂಗಳ್ ಉಳ್ಳಾಲ ಅವರು ಅಹ್ಲು ಬೈತ್ ಕುಟುಂಬ ಪರಂಪರೆಗೆ ಸೇರಿದ ಮತ್ತು ಮದೀನ ಮುನವ್ವರದಿಂದ ಬಂದವರಾಗಿದ್ದಾರೆ ಎಂಬುದು ನಿಸ್ಸಂದೇಹ ದ್ರಢಪಟ್ಟ ಕಾರ್ಯವಾಗಿದೆ.ಪ್ರವಾದಿ ಸ.ಅ ಮರ ಕುಟುಂಬ ಪರಂಪರೆಯಾದ ಅಹ್ಲು ಬೈತನ್ನು ಸ್ನೇಹಿಸುವುದು ನಮ್ಮ ಮೇಲೆ ಕಡ್ಡಾಯವಾಗಿದೆ ಎಂದು ಶಾಫಿ ಇಮಾಂ ( ರ.ಅ ) ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಪ್ರವಾದಿ ( ಸ.ಅ ) ಹೇಳುತ್ತಾರೆ

*مثل أهل بيتي كسفينة نوح عليه السلام فمن ركب فيها نجا ومن تخلف عنها غرق*

ನನ್ನ ಅಹ್ಲುಬೈತಿನ ಉದಾಹರಣೆ ನೂಹ್ ನೆಬಿ ( ಅ.ಸ ) ರವರ ಹಡಗಿನಂತೆ.ಅದರಲ್ಲಿ ಹತ್ತಿದವರು ರಕ್ಷಣೆ ಹೊಂದಿದರು.ಹಡಗಿಗೆ ಹತ್ತದೇ ಯಾರು ದೂರ ಸರಿದರೋ ಅವರು ನಾಶ ಹೊಂದಿದರು.
ಸತ್ಯ ವಿಶ್ವಾಸಿಗಳನ್ನು ರಕ್ಷಿಸಲು ಮತ್ತು ಅಸತ್ಯ ವಿಶ್ವಾಸಿಗಳನ್ನು ನಾಶಪಡಿಸಲು ನೂಹ್ ನೆಬಿ ( ಅ.ಸ ) ರವರ ಕಾಲದಲ್ಲಿ ಅಲ್ಲಾಹನು ಜಲಪ್ರಳಯ ಸ್ರಷ್ಟಿಸಿದನು.ಅಲ್ಲಾಹನ ಆದೇಶದ ಮೇರೆಗೆ ಮೊದಲೇ ರೆಡಿ ಮಾಡಿಟ್ಟಿದ್ದ ಹಡಗಿನಲ್ಲಿ ನೂಹ್ ನೆಬಿ ಅ.ಸ ಮರ ಅನುಯಾಯಿಗಳಾದ ಸತ್ಯವಿಶ್ವಾಸಿಗಳು ಹಡಗನ್ನೇರಿ ಜಲಪ್ರಳಯದಿಂದ ರಕ್ಷಣೆ ಪಡೆದರು.ಅಸತ್ಯ ವಿಶ್ವಾಸಿಗಳು ಆ ಜಲಪ್ರಳಯದಲ್ಲಿ ಮುಳುಗಿ ಅಲ್ಲಾಹನ ಶಿಕ್ಷೆಗೆ ಗುರಿಯಾದರು.
ತನ್ನ ಅಹ್ಲುಬೈತನ್ನು ಸ್ನೇಹಿಸುವುದರಿಂದ ಅವರನ್ನು ತವಸ್ಸುಲ್ ಮಾಡುವುದರಿಂದ ರಕ್ಷೆ ಇದೆ.ಅವರನ್ನು ಕಡೆಗಣಿಸುವುದರಿಂದ ವಿನಾಶ ಇದೆಯೆಂಬ ಸ್ಪಷ್ಟವಾದ ಮುನ್ನೆಚ್ಚರಿಕೆಯನ್ನು  ಪ್ರವಾದಿ ಸ.ಅ ತನ್ನ ಅಹ್ಲು ಬೈತನ್ನು ನೂಹ್ ನೆಬಿ ( ಅ.ಸ ) ಮರ ಹಡಗಿಗೆ ಹೋಲಿಕೆ ಮಾಡಿ ಉದಾಹರಿಸಿದ್ದಾರೆ.
ಮದನಿ ತಂಗಳ್ ಖ.ಸಿ ಅಹ್ಲುಬೈತ್ ಕುಟುಂಬದ ಶ್ರೇಷ್ಠ ಮನೆತನದ ಉಳ್ಳಾಲದ ಓರ್ವ ಮಹಿಳೆಯನ್ನು ಮದುವೆಯಾದರು.ಆದರೆ ಅವರ ದಾಂಪತ್ಯ ಜೀವನದಲ್ಲಿ ಮಕ್ಕಳುಂಟಾಗಲಿಲ್ಲ...

*

*ಸಯ್ಯಿದ್ ಮದನಿ ಖ.ಸಿ ರವರ ಕೆಲವೊಂದು ಕರಾಮತುಗಳು*

ವ್ಯಾಪಾರ ನಿಮಿತ್ತ ಸರಕುಗಳೊಂದಿಗೆ ಮಂಗಳೂರು ಬಂದರು ಬಂದಿಳಿದ ತಂಡವೊಂದು ಸರಕುಗಳನ್ನು  ಇಳಿಸುತ್ತಿದ್ದಾಗ ಹಣದ ಚೀಲ ಸಮುದ್ರಕ್ಕೆ ಬಿದ್ದು ಬಿಟ್ಟಿತು.ತಂಡ ಬೆಚ್ಚಿ ಬಿದ್ದಿತು.ಇನ್ನೇನು ಮಾಡುವುದು ? ವ್ಯಾಪಾರದ ನಿಮಿತ್ತ ತಂದ ಹಣವೆಲ್ಲವೂ ಸಮುದ್ರ ಪಾಲಾಗಿದೆ.ಇದೇ ಬೇಸರದಲ್ಲಿ ಮಂಗಳೂರು ಪಟ್ಟಣ ತಲುಪಿದರು.ಅಲ್ಲಿರುವ ಜನರೊಂದಿಗೆ ತಮ್ಮ ಅಹವಾಲನ್ನು ತೋಡಿಕೊಂಡರು.ಆಗ ಅವರು ಹೇಳಿದರು.ಇಲ್ಲಿಯೇ ಹತ್ತಿರದಲ್ಲಿ ಉಳ್ಳಾಲ ಎಂಬ ಪ್ರದೇಶದಲ್ಲಿ ಮದನಿ ತಂಗಳ್ ಎಂಬ ಪ್ರಸಿದ್ಧ ಸಯ್ಯಿದರು ಇದ್ದಾರೆ.ಅವರಲ್ಲಿ ನಿಮ್ಮ ವಿಷಯವನ್ನು ತಿಳಿಸಿ.ಅವರೇನಾದರೂ ಪರಿಹಾರವನ್ನು ತಿಳಿಸುವರು.ವ್ಯಾಪಾರ ತಂಡ ಮದನಿ ತಂಗಳ್ ರವರ ಬಳಿ ತಮ್ಮ ವಿಷಯವನ್ನು ಮುಟ್ಟಿಸಲು ತಕ್ಷಣ ಉಳ್ಳಾಲಕ್ಕೆ ಬಂದರು.ಮದನಿ ತಂಗಳ್ ರೊಂದಿಗೆ ತಮ್ಮ ದುಃಖವನ್ನು ಸವಿವರವಾಗಿ ತಿಳಿಸಿದರು.ಇದನ್ನು ಆಲಿಸಿಕೊಂಡ ಮದನಿ ತಂಗಳ್ ಅಲ್ಪ ಸಮಯ ಮೌನದಿಂದಿದ್ದು ಬಳಿಕ ಹೇಳಿದರು.ನೀವೀಗ ಹೋಗಿ.ನಾಳೆ ಬನ್ನಿ..ಅಂತೆಯೇ ವ್ಯಾಪಾರ ತಂಡ ತಂಗಳ್ ಸನ್ನಿಧಿಯಿಂದ ಹಿಂದಿರುಗಿ ಮರುದಿನ ಬಂದರು.ಏನಾಶ್ಚರ್ಯ !!
ಸಯ್ಯಿದ್ ಮದನಿ ತಂಗಳ್ ರವರು ಹಣದ ಚೀಲವನ್ನು ಎತ್ತಿ ತೋರಿಸುತ್ತಾ ಕೇಳಿದರು.ನಿಮ್ಮ ಹಣದ ಚೀಲ ಇದುವೇನಾ ?.ಚೀಲದಿಂದ ನೀರಿನ ಹನಿ ತೊಟ್ಟಿಕ್ಕುತ್ತಿತ್ತು.ವ್ಯಾಪಾರ ತಂಡ ಬಹಳ ಆವೇಶಭರಿತರಾಗಿ ಹೇಳಿದರು.ಹೌದೌದು.ನಮ್ಮ ಚೀಲ ಇದುವೇ ?.ಮದನಿ ತಂಗಳ್ರವರಿಂದ ಹಣದ ಚೀಲವನ್ನು ಪಡೆದು ಬಹಳ ಸಂತೋಷದಿಂದ ಸಂತ್ರಪ್ತರಾಗಿ ಮರಳಿದರು.

ಕರಾಮತ್ - 2

ಸಯ್ಯಿದ್ ಮದನಿ ತಂಗಳ್ ರವರು ಉಳ್ಳಾಲದಲ್ಲಿದ್ದ ಪುಟ್ಟ ಮಸೀದಿಯಲ್ಲಿ ಇಅತಿಕಾಫಿನ ನಿಯ್ಯತ್ ನೊಂದಿಗೆ ಆರಾಧನಾ ನಿರತರಾಗಿದ್ದರು.ಹೀಗಿರಲು ಒಂದು ದಿವಸ ಮಸೀದಿಯ ಹತ್ತಿರದಿಂದಲೇ ಅಮುಸ್ಲಿಮರ ಆರಾಧನಾಲಯದಿಂದ ಭಜನೆಗಳು,ಗಂಟೆಗಳ ಶಬ್ದಗಳು,ಚೆಂಡೆ ವಾದ್ಯಗಳ ಮಿಶ್ರಿತ ಶಬ್ದ ಕಿವಿಗಡಚ್ಚಿಕ್ಕುವಂತೆ ಕೇಳಿಸಿದವು.ಸನಿಹವಿದ್ದವರಲ್ಲಿ ವಿಷಯವನ್ನು ಕೇಳಿದರು.ಅವರು ಹೇಳಿದರು.ವರ್ಷಕ್ಕೊಮ್ಮೆ ಇಲ್ಲಿ ಅಮುಸ್ಲಿಮರು ಸೇರುತ್ತಾರೆ.ಅವರ ಪೂಜೆ ಉತ್ಸವ ಇಲ್ಲಿ ನಡೆಯುತ್ತದೆ..ಅದರ ಶಬ್ದವಾಗಿದೆ ಇದು.ವಿಷಯವನ್ನು ಅರಿತ ಮದನಿ ತಂಗಳ್ ಖ.ಸಿ 'ಇದು ಇಲ್ಲಿ ಮಸೀದಿಗೆ ಸಮೀಪ ಸರಿಯಾಗದು' ಎಂದು ಮನಗಂಡ ಮದನಿ ತಂಗಳ್ ಹೇಳಿದರು.ಶೈತಾನ್ ಗಳೇ ಇಲ್ಲಿಂದ ಜಾಗ ಖಾಲಿ ಮಾಡಿ.ಹೇಳಿದ್ದೇ ತಡ..ಅಮುಸ್ಲಿಮರು ಆರಾಧಿಸುತ್ತಿದ್ದ ಶೈತಾನ್ ಗಳು ಅಪ್ರತ್ಯಕ್ಷರಾದರು.ಪೂಜೆಗಳು ನಿಂತವು.ಉತ್ಸವ ಸ್ತಬ್ದವಾಯಿತು.
ಅಮುಸ್ಲಿಮರ ನಾಯಕ ಮತ್ತು ಅನುಯಾಯಿಗಳು ಮದನಿ ತಂಗಳ್ ರವರ ಬಳಿ ಬಂದು ಕ್ಷಮೆಯಾಚಿಸಿದರು.ಮಸೀದಿಗೆ ಸಮೀಪ ಇದು ಸರಿಯಲ್ಲ ಎಂದ ಮದನಿ ತಂಗಳ್ ಹೇಳಿದರು.ಒಂದು ಕಲ್ಲನ್ನು ನಾನು ಎಸೆದು ಬಿಡುತ್ತೇನೆ.ಆ ಎಸೆಯಲ್ಪಟ್ಟ ಕಲ್ಲು ಎಲ್ಲಿ ಹೋಗಿ ಬೀಳುತ್ತದೋ ಅಲ್ಲಿ ತಮ್ಮ ದೇವಸ್ಥಾನವನ್ನು ನಿರ್ಮಿಸಿ.ಅಂತೆಯೇ ಮದನಿ ತಂಗಳ್ ಮಸೀದಿಯ ಮುಂಭಾಗದಿಂದ ಕಲ್ಲನ್ನು ಎಸೆದರು.ಆ ಕಲ್ಲು ಹೋಗಿ ಮುಟ್ಟಿದ ಸ್ಥಳದಲ್ಲಿ ಅವರು ಅವರ ದೇವಸ್ಥಾನವನ್ನು ಕಟ್ಟಿಸಿದರು.ಇಂದಿಗೂ ಅವರ ಆ ದೇವಸ್ಥಾನ ಮಸೀದಿಯ ಅನತಿ ದೂರದಲ್ಲಿ ಕಾಣಬಹುದು.

ಕರಾಮತ್ -3

ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ವಫಾತಿನ ನಂತರ ನಡೆದ ಒಂದು ಘಟನೆ.
ಒಂದು ದಿನ ರಾತ್ರಿ ಕಳ್ಳನೊಬ್ಬ ದರ್ಗಾದ ಹರಕೆಯ ಡಬ್ಬಿಯಿಂದ ಹಣ ಕದಿಯಲು ದರ್ಗಾದೊಳಗೆ ಪ್ರವೇಶಿಸಿ ಹರಕೆಯ ಡಬ್ಬಿಯನ್ನೇ ಎಗರಿಸಿ ಓಡಲೆತ್ನಿಸಿದಾಗ ಕಣ್ಣಿಗೆ ಕತ್ತಲು ಆವರಿಸಿತು.ಹೊರ ಬರಲು ದಾರಿ ಕಾಣದೇ ಚಡಪಡಿಸಿದ.ಸುಬಹಿ ಬಾಂಗ್ ಕೊಡಲು ಮುಅದ್ಸಿನ್ ಮಸೀದಿಗೆ ಬರುವ ತನಕ ನಿಸ್ಸಹಾಯಕನಾಗಿ ನಿಂತಿದ್ದ...ಮುಅದ್ಸಿನ್ ಕಳ್ಳನನ್ನು ಹಿಡಿದು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟನು.ಮುಅದ್ಸಿನ್ ಅವನಿಗೆ ಉಪದೇಶವನ್ನು ನೀಡಿ ಹರಕೆ ಡಬ್ಬಿಯನ್ನು ಯಥಾ ಸ್ಥಾನದಲ್ಲಿಡಲು ಸೂಚಿಸಿದರು.ಕಳವುಗೈಯ್ಯಲು ಯತ್ನಿಸಿದ್ದ ಹರಕೆ ಡಬ್ಬಿಯನ್ನು ಯಥಾ ಸ್ಥಾನದಲ್ಲಿರಿಸಿ ಅವನು ಪಶ್ಚಾತಾಪಪಟ್ಟನು..ಇನ್ನೆಂದಿಗೂ ಇಂತಹ ಕ್ರತ್ಯಕ್ಕಿಳಿಯಲಾರೆನೆಂದು ದ್ರಢನಿಶ್ಚಯ ಮಾಡಿದನು.ಮುಂದಕ್ಕೆ ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕಿ ಬಾಳಿದನು.

ಕರಾಮತ್ -4
ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ವಫಾತ್ ಸಮೀಪಿಸಿದಾಗ ತನ್ನ ಪ್ರಿಯ ಪತ್ನಿ ಯಾದ ಬೀವಿಯವರು ಉಮ್ಮಳಿಸಿ ಬರುವ ದುಃಖದೊಂದಿಗೆ ಕೇಳಿದರು.ಓ ನನ್ನ ಪ್ರಿಯ ಪತಿಯವರೇ....
ತಾವು ನನ್ನನ್ನು ಬಿಟ್ಟು ಹೋದರೆ ನನ್ನ ಗತಿಯೇನು? ನಾನು ವಿಧವೆಯಾದರೆ ನನ್ನ ದೈನಂದಿನ ಆವಶ್ಯಕತೆಗಳಿಗೆ ನಾನು ಏನು ಮಾಡಲಿ?ನನ್ನ ಜೀವನ ನಿರ್ವಹಣೆಗೆ ನಾನು ಏನು ಮಾಡಲಿ?
ಸಯ್ಯಿದರು ಹೇಳಿದರು.ನೀನು ದುಃಖಿಸಬೇಡ.ಸಹನಾಶೀಲಳಾಗು.
ಅಲ್ಲಾಹನ ಅನುಗ್ರಹದಿಂದ ನಿನ್ನ ದೈನಂದಿನ ಖರ್ಚು ನಿಭಾಯಿಸಲು ಬೇಕಾಗುವಷ್ಟು ಹಣ ನಿನಗೆ ಸಿಗಲಿದೆ.ನನ್ನ ಮರಣದ ಬಳಿಕ ಪ್ರತೀದಿನ ಬೆಳಿಗ್ಗೆ ನನ್ನ ಖಬರಿನ ಹಿಂಬದಿಯಲ್ಲಿ ನಿನಗೆ ದೈನಂದಿನ ಖರ್ಚಿಗೆ ಬೇಕಾಗುವಷ್ಟು ಹಣ ಸಿಗಲಿರುವುದು ಇಂಶಾ ಅಲ್ಲಾಹ್...
ಸಯ್ಯಿದರು ವಫಾತಾದರು.ಇನ್ನಾಲಿಲ್ಲಾಹ್...ಮಯ್ಯಿತ್ ಪರಿಪಾಲನೆ ಎಲ್ಲವೂ ಸುಸೂತ್ರವಾಗಿ ನಡೆಯಿತು.ಮರುದಿನ ಬೆಳಿಗ್ಗೆ ಬೀವಿಯವರು ತನ್ನ ಪ್ರಿಯ ಪತಿ ಮದನಿ ತಂಗಳರ ಖಬರ್ ಬಳಿ ಬಂದರು.....ಏನಾಶ್ಚರ್ಯ....ಮದನಿ ತಂಗಳ್ ರವರ ಅದ್ಭುತ ಕರಾಮತು ಪ್ರತ್ಯಕ್ಷವಾಯಿತು....ತನ್ನ ಅಂದಿನ ಜೀವನ ನಿರ್ವಹಣೆಗೆ ಒಂದು ರೂಪಾಯಿ ಹಣ ಖಬರ್ ಬಳಿ ಇತ್ತು..( 300 ವರ್ಷಗಳ ಹಿಂದಿನ ಚರಿತ್ರೆಯಾಗಿದೆ....ಅಂದಿನ ಒಂದು ರೂಪಾಯಿ ಇಂದಿನ ಎಷ್ಟು ರೂಪಾಯಿಗಳಿಗೆ ಸಮಾನವಾಗಬಹುದು ಎಂದು ನೀವೇ ಊಹಿಸಿ ನೋಡಿ ) ಹೀಗೆ ಪ್ರತಿನಿತ್ಯವೂ ಖರ್ಚಿಗೆ ಒಂದು ರೂಪಾಯಿ ಸಿಗುತ್ತಲಿತ್ತು....ಹೀಗಿರಲು ಒಂದು ದಿವಸ ಊರಿನ ತನ್ನ ಮನೆಯ ಹತ್ತಿರದ ಸ್ತ್ರೀ ಬೀವಿಯವರಲ್ಲಿ ಹೇಳಿದರು.ನಿನಗೆ ದೈನಂದಿನ ಸಿಗುವ ಒಂದು ರೂಪಾಯಿ ಪೂರ್ತಿ ಯಾಕೆ ಖರ್ಚು ಮಾಡುತ್ತಿರುವೆ.....ಅದರಲ್ಲಿ ಅರ್ಧ ರೂಪಾಯಿಯಷ್ಟು ಹಣ ತೆಗೆದಿಡು....ನಿನಗೆ ಯಾವಾಗಲಾದರೂ ಉಪಯೋಗಕ್ಕೆ ಬರಬಹುದು...( ಸ್ತ್ರೀಯರ ಬುದ್ಧಿ ಇಂದೂ ಅಂದೂ ಎಂದೆಂದೂ ವಕ್ರಬುದ್ಧಿ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ ) ತನ್ನ ಮನೆಯ ಹತ್ತಿರದ ಮಹಿಳೆಯ ಮಾತನ್ನು ಕೇಳಿ ಬೀವಿಯವರು ಅಂದು ಅರ್ಧದಷ್ಟು ರೂಪಾಯಿಯನ್ನು ಖರ್ಚು ಮಾಡಿ ಅರ್ಧದಷ್ಟನ್ನು ತೆಗೆದಿರಿಸಿದರು...ಮರುದಿನ ಬೀವಿಯವರು ಖಬರ್ ಬಳಿ ಸಾಗಿ ನೋಡಿದಾಗ ಅರ್ಧ ರೂಪಾಯಿಯಷ್ಟು ಹಣ ಮಾತ್ರ ಕಂಡು ಅವಕ್ಕಾದರು.ನೆರೆಮನೆ ಸ್ತ್ರೀಯ ಮಾತಿಗೆ ಶರಣಾಗಿ ಮುಂದೆ ಪ್ರತಿನಿತ್ಯವೂ ಖಬರ್ ಬಳಿ ಅರ್ಧ ರೂಪಾಯಿಯೇ ಬೀವಿಗೆ ಸಿಗುವಂತಾಯಿತು...ಈ ಒಂದು ಕರಾಮತು ಇಂದು ನಾವೂ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ...ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ದರ್ಬಾರಿನ ಮೂಲಕವೇ ಎಷ್ಟೋ ಮಸೀದಿ ಮದ್ರಸ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.ಇವೆಲ್ಲದರ ಖರ್ಚು ವೆಚ್ಚಗಳಿಗೆ ಬೇಕಾಗುವಷ್ಟು ಸಾವಿರಾರು  ರೂಪಾಯಿಗಳು ಮದನಿ ತಂಗಳ್ ಖ.ಸಿ ರವರ ಕರಾಮತ್ ಮೂಲಕವೇ ಹರಿದು ಬರುತಿದೆ..

*ಕರಾಮತ್ -05*

ಒಂದು ದಿನ ಮದನಿ ತಂಗಳ್ ಖ.ಸಿ ಉಳ್ಳಾಲದ ಅಳೇಕಲ ಮಸೀದಿ ಸಮೀಪವಿರುವ ಕೊಲವೊಂದರಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು.ವುಲೂವಿನ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೇ ಚಿಮ್ಮುತ್ತಲಿದ್ದರು...ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು..ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯಚಕಿತರಾಗಿ ಕೇಳಿದರು...ಮದನಿ ತಂಗಳರೇ..ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ....ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆ.ಅಲ್ಲಾಹನ ಆಜ್ಞೆಯಂತೆ ಅದನ್ನು  ನಂದಿಸಲು ನೀರನ್ನು ಚಿಮ್ಮಿಸಿದೆ..ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು....ಎಂದರು....ಸಯ್ಯಿದ್ ಮದನಿ ತಂಗಳ್ ರವರ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು.ಆ ವರ್ಷ ಪವಿತ್ರ ಹಜ್ ಗೆ ಹೋದ ಊರಿನ ಕೆಲ ಹಜ್ಜಾಜ್ ಗಳು ಮರಳಿ ಬಂದು ಅಲ್ಲಿ ನಡೆದ ಸಂಗತಿಯನ್ನು ವಿವರಿಸಿದ್ದು ಹೀಗೆ...ಮಕ್ಕಾದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸುತ್ತಿತ್ತು.ನಾವು ಸಯ್ಯಿದ್ ಮದನಿ ತಂಗಳ್ ರವರನ್ನು ತವಸ್ಸುಲ್ ಮಾಡಿ ಅಲ್ಲಾಹನಲ್ಲಿ ಬೇಡಿದೆವು....ಅಷ್ಟರಲ್ಲಿ ಮೇಲಿನಿಂದ ನೀರು ಎಸೆಯಲ್ಪಟ್ಟು ಬೆಂಕಿ ನಂದಿತು..ಭಾರೀ ಅನಾಹುತ ಸಂಭವಿಸುವುದು ತಪ್ಪಿತು.

*ಸಯ್ಯಿದ್ ಮದನಿ ತಂಗಳ್ ವಫಾತಿನ ನಂತರ ನಡೆದ ಮತ್ತೊಂದು ಘಟನೆ*

ಒಂದು ದಿನ ಜನ್ಮನಾ ಮೂಕನಾಗಿದ್ದ ವ್ಯಕ್ತಿ ಸಯ್ಯಿದ್ ಮದನಿ ತಂಗಳ್ ರವರ ಸನ್ನಿಧಿಗೆ ಬಂದು ತನ್ನ ದುಃಖವನ್ನು ತೋಡಿಕೊಂಡನು. ಸಯ್ಯಿದ್ ಮದನಿ ತಂಗಳ್ ರವರನ್ನು ಮಧ್ಯವರ್ತಿಯನ್ನಾಗಿಸಿ ತನಗೆ ಮಾತು ಬರಿಸಲು ಅಲ್ಲಾಹನಲ್ಲಿ ಬೇಡಿಕೊಂಡನು.ಅಷ್ಟರಲ್ಲಿ ಭಾರೀ ಬಿರುಗಾಳಿಯೊಂದಿಗೆ ಧಾರಾಕಾರ ಮಳೆಯು ಸುರಿಯಲಾರಂಭಿಸಿತು.ಪ್ರಕ್ರತಿಯ ರೌದ್ರಾವತಾರ ಮುಂದುವರಿದಾಗ ಜನರು ರಕ್ಷಣೆಗಾಗಿ ಅಲ್ಲಿಂದಿಲ್ಲಿಗೆ ಓಡಲು ಆರಂಭಿಸಿದರು.ಈ ಮೂಕ ವ್ಯಕ್ತಿಯೂ ಓಡುವ ರಭಸದಲ್ಲಿ ಕಾಲಿಗೆ ಕಲ್ಲು ಎಡವಿ ಬಿದ್ದು ಬಿಟ್ಟನು.ಏನಾಶ್ಚರ್ಯ!....ಬಿದ್ದಲ್ಲಿಂದ ಮೇಲೇಳಲಾಗದೆ ರಕ್ಷಣೆಗಾಗಿ ಇತರರೊಂದಿಗೆ ಸ್ಪಷ್ಟ ಮಾತಿನಿಂದ ಸಹಾಯಕ್ಕೆ ಅಂಗಲಾಚುತ್ತಿದ್ದನು.ಇತರರು ಅವನಿಗೆ ಮೇಲೇಳಲು ಸಹಾಯ ಮಾಡಿದರು.ಒಟ್ಟಿನಲ್ಲಿ ಜನ್ಮನಾ  ಮೂಕನಾಗಿದ್ದ ವ್ಯಕ್ತಿ ಅಂದಿನಿಂದ ಮಾತನಾಡಲು ಆರಂಭಿಸಿದನು....
ಇಂತಹ ಹಲವಾರು ಕರಾಮತುಗಳು ತನ್ನ ನಿಜ ಜೀವನದಲ್ಲೂ ವಫಾತಿನ ನಂತರವೂ ನಡೆದಿದೆ.ನಡೆಯುತ್ತಲೂ ಇದೆ....ಅಲ್ಲಾಹನ ಅವುಲಿಯಾಗಳ ಕರಾಮತ್ ಮರಣದ ನಂತರವೂ ನಿರಂತರ ಮುಂದುವರಿಯುತ್ತದೆ ಎಂಬುದಕ್ಕೆ  ಸ್ಪಷ್ಟ ಉದಾಹರಣೆಯಾಗಿದೆ ಇದು...ಸಯ್ಯಿದ್ ಮದನಿ ತಂಗಳ್ ರವರ ಭಕ್ತಿಪೂರ್ಣ ಆಧ್ಯಾತ್ಮಿಕ ಜೀವನ ಜನಮನದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.ಪ್ರತೀ ಐದು ವರ್ಷಕ್ಕೊಮ್ಮೆ ಉಳ್ಳಾಲದಲ್ಲಿ ಮದನಿ ತಂಗಳರ ಉರೂಸ್ ಹಲವಾರು ದೀನೀ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ನಡೆದು ಬರುತ್ತಿದೆ....ತಾಜುಲ್ ಉಲಮಾ ಖ.ಸಿ ರವರ ಹಯಾತ್ ಕಾಲದಲ್ಲಿ ಉರೂಸ್ ಕಾರ್ಯಕ್ರಮದ ನೇತ್ರತ್ವ ತಾಜುಲ್ ಉಲಮಾ ಖ.ಸಿ ವಹಿಸುತ್ತಿದ್ದರು..ವಫಾತಿನ ಬಳಿಕ ಉರೂಸ್ ಕಾರ್ಯಕ್ರಮದ ನೇತ್ರತ್ವವನ್ನು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯೂ ಉಳ್ಳಾಲ ತಂಗಳರ ಸುಪುತ್ರರೂ ಆದ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ನಿರ್ವಹಿಸುತ್ತಿದ್ದಾರೆ.....
ಸಯ್ಯಿದ್ ಮದನಿ ದರ್ಗಾ ಸಮಿತಿಯ ಅಧೀನದಲ್ಲಿ ಹಲವಾರು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಗಳು ನಡೆದು ಬರುತ್ತಿದೆ...ಇದಕ್ಕೆ ಭರಿಸುವ ಸಂಪೂರ್ಣ ಖರ್ಚುವೆಚ್ಚಗಳು ಸಯ್ಯಿದ್ ಮದನಿ ಖ.ಸಿ ದರ್ಬಾರಿನಿಂದ ಹರಿದು ಬರುತ್ತಿದೆ....ಈ ಸಂಸ್ಥೆಗಳ ಸುಸೂತ್ರ ನಿರ್ವಹಣೆಗಾಗಿ 1982 ರಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಹಾಗೂ 1986 ರಲ್ಲಿ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟನ್ನೂ ರಚಿಸಲಾಯಿತು.
ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ನ ಅಧೀನದಲ್ಲಿ 28 ಮಸೀದಿಗಳು , 33 ಮದ್ರಸಗಳು,ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜು,ಹಿಫಲ್ ಕಾಲೇಜು ಹಾಗೂ ದಅವಾ ಕಾಲೇಜು ನಡೆದುಬರುತಿದೆ.
ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ 3 ವಿಮೆನ್ಸ್ ಕಾಲೇಜು, 1 ಡಿಗ್ರಿ ಕಾಲೇಜು, 1 ಐಟಿಐ ಸಹಿತ ಕನ್ನಡ ಉರ್ದು ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರೈಮರಿ ಹಾಗೂ ಹೈಸ್ಕೂಲ್ ಶಾಲೆಗಳನ್ನೊಳಗೊಂಡು 16 ಸಂಸ್ಥೆಗಳು ನಡೆದು ಬರುತಿದೆ...ಈ ಎರಡು ಟ್ರಸ್ಟ್ ನ ಅಧೀನದಲ್ಲಿ ಸುಮಾರು 8,000 ಕ್ಕೂ ಮಿಕ್ಕ ವಿದ್ಯಾರ್ಥಿಗಳು ಕಲಿಯುತ್ತಿದ್ದು 450 ಕ್ಕೂ ಮಿಕ್ಕ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.....
ಅಧರ್ಮ ಅರಾಜಕತೆ ಅನ್ಯಾಯ ಅನೀತಿ ತುಂಬಿ ತುಳುಕಾಡುತ್ತಿದ್ದ ಹದಿನಾರನೇ ಶತಮಾನದಲ್ಲಿ ಉಳ್ಳಾಲಕ್ಕೆ ಬಂದು ಇಸ್ಲಾಮಿನ ಸುಂದರಾಶಯಾದರ್ಶಗಳನ್ನು ಜನರೆಡೆಯಲ್ಲಿ ಬಿತ್ತಿ ಜನರನ್ನು ಸಂಪೂರ್ಣವಾಗಿ ಇಸ್ಲಾಮಿನಲ್ಲಿ ಲೀನವಾಗಿಸಿ ಕೆಡುಕಿನಿಂದ ವಿಮುಕ್ತಿ ಹೊಂದಿ ಒಳಿತಿನೆಡೆಗೆ ಕೊಂಡೊಯ್ದು ಉಳ್ಳಾಲವನ್ನು ಬೆಳಗಿಸಿ ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದವರಾಗಿದ್ದಾರೆ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ......
ಬಳಿಕ ಕಾಲಕ್ರಮೇಣ ಇಪ್ಪತ್ತನೇ ಶತಮಾನದಲ್ಲಿ ನೂತನವಾದದ ಸೋಂಕು ಕೇರಳ ಹಾಗೂ ಕರ್ನಾಟಕದ ಕೆಲ ಪ್ರದೇಶಗಳಿಗೆ ಹಬ್ಬಿದಾಗ ನೈಜ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಜನರೆಡೆಯಲ್ಲಿ ಪಸರಿಸಿ ಇಸ್ಲಾಮಿಗೆ ಶಕ್ತಿ ತುಂಬಿದ ಇನ್ನೋರ್ವ ಉಳ್ಳಾಲದ ಮಹಾನರಾಗಿದ್ದಾರೆ ಸಯ್ಯಿದ್ ತಾಜುಲ್ ಉಲಮಾ ಉಳ್ಳಾಲ ತಂಗಳ್....ಅಲ್ಲಾಹು ಈ ಎರಡು ಮಹಾನರುಗಳ ಪದವಿಯನ್ನು ಉನ್ನತಿಗೇರಿಸಲಿ..ಆಮೀನ್...
ಸಯ್ಯಿದ್ ಮದನಿ ತಂಗಳ್ ಹಾಗೂ ತಾಜುಲ್ ಉಲಮಾ ಉಳ್ಳಾಲ ತಂಗಳ್ ನಮಗೆ ತೋರಿಸಿ ಕೊಟ್ಟ ಇಸ್ಲಾಮಿನ ನೈಜ ಹಾದಿಯನ್ನು ನಾವು ಅನುಸರಿಸುವವರಾಗೋಣ..ಆ ಮೂಲಕ ನಾವು ಇಹಪರ ವಿಜಯಿಗಳ ಸಾಲಿಗೆ ಸೇರೋಣ....ಅಲ್ಲಾಹು ತೌಫೀಖ್ ನೀಡಲಿ..ಆಮೀನ್.....

ದುವಾ ವಸಿಯ್ಯತಿನೊಂದಿಗೆ ವಿರಾಮ..
*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*,ಮತ್ತು *ಉಳ್ಳಾಲವನ್ನು ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ತಂಗಳ್ ಖ.ಸಿ* ಈ ಎರಡು ಲೇಖನಗಳ ಸಂಪೂರ್ಣ ಭಾಗಗಳು ಬೇಕಾದವರು ವಾಟ್ಸಪ್ ಮೂಲಕ ಸಂಪರ್ಕಿಸಿ.....

✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...