ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
----------------------------------
ಸಂಚಿಕೆ -05
ಪ್ರಬೋಧನೆ
ಅಲ್ಲಾಹನ ಪ್ರಪ್ರಥಮ ವಹ್ಯ್ ಲಭಿಸಿದ ಬಳಿಕ ಅಲ್ಪ ಕಾಲ ಅಲ್ಲಾಹನ ದಿವ್ಯ ಸಂದೇಶ ಅವತೀರ್ಣವಾಗುವುದು ಸ್ಥಗಿತವಾಯಿತು.ನೆಬಿ ಸ.ಅ ರವರಿಗೆ ಅತೀವ ದುಃಖವಾಯಿತು.ಪ್ರಪ್ರಥಮವಾಗಿ ಅಲ್ಲಾಹನ ದಿವ್ಯ ಸಂದೇಶ ತಲುಪಿಸಿದ ಜಿಬ್ರೀಲ್ ಅ.ಸ ರವರನ್ನು ಮಗದೊಮ್ಮೆ ದರ್ಶಿಸಲು ಮನವು ಆಗ್ರಹಿಸಿತು.ಹೀಗಿರುವಾಗ ಒಂದು ದಿನ ಭೂಮಿ ಆಕಾಶಗಳ ಮಧ್ಯೆ ಅಂತರೀಕ್ಷದಲ್ಲಿ ಒಂದು ಕುರ್ಚಿಯಲ್ಲಿ ಜಿಬ್ರೀಲ್ ಅ.ಸ ಕುಳಿತಿರುವುದನ್ನು ಕಂಡರು.ನೆಬಿ ಸ.ಅ ಮಗದೊಮ್ಮೆ ಭಯಭೀತಗೊಂಡು ಪ್ರಿಯ ಪತ್ನಿ ಖದೀಜ ರ.ಅ ರವರ ಬಳಿ ಸಾಗಿ ತನ್ನ ಮೇಲೆ ಹೊದಿಕೆ ಹಾಸಲು ಹೇಳಿದರು.ಖದೀಜ ರ.ಅ ನೆಬಿ ಸ.ಅ ರವರಿಗೆ ಹೊದಿಕೆ ಹಾಸಿದರು.ನೆಬಿ ಸ.ಅ ಹೊದಿಕೆ ಹೊದ್ದು ಮಲಗಿದ್ದ ಸಮಯದಲ್ಲಿ ಎರಡನೇ ಬಾರಿಗೆ ಅಲ್ಲಾಹನ ದಿವ್ಯ ಸಂದೇಶ ಜಿಬ್ರೀಲ್ ಅ.ಸ ತಲುಪಿಸಿದರು.
ياأيهاالمدثر. قم فأنذر.
ಎಂಬ ಮುದ್ದಸ್ಸಿರ್ ಸೂರತಿನ ಆರಂಭದ ಕೆಲವು ಆಯತುಗಳು ಅವತೀರ್ಣವಾಯಿತು.ಓ ಹೊದಿಕೆ ಹೊದ್ದು ಮಲಗಿರುವ ನೆಬಿಯೇ.ಎದ್ದೇಳಿರಿ.ಇಸ್ಲಾಂ ಧರ್ಮ ಧಿಕ್ಕಾರಿಗಳಿಗೆ ಶಿಕ್ಷೆಯ ಭಯಾನಕತೆಯನ್ನು ವಿವರಿಸಿರಿ ಎಂಬ ಅರ್ಥ ಬರುವ ಆಯತುಗಳು ಅವತೀರ್ಣವಾಯಿತು.ಇದು ಇಸ್ಲಾಂ ಧರ್ಮದ ಪ್ರಬೋಧನೆಯನ್ನು ಆರಂಭಿಸಲಿಕ್ಕಿರುವ ಆಹ್ವಾನವಾಗಿತ್ತು.ಆ ಬಳಿಕ ನೆಬಿ ಸ.ಅ ಜನರನ್ನು ರಹಸ್ಯವಾಗಿ ಅಲ್ಲಾಹನ ಧರ್ಮದೆಡೆಗೆ ಆಹ್ವಾನಿಸಲು ಪ್ರಾರಂಭಿಸಿದರು.ವಿಶ್ವಾಸಯೋಗ್ಯರನ್ನು ಮಾತ್ರ ಮೊದಲು ಆಹ್ವಾನಿಸಿದರು.ಕೆಲವರು ಇಸ್ಲಾಂ ಧರ್ಮ ಸ್ವೀಕರಿಸಿದರು.
ಪ್ರಪ್ರಥಮವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದವರು.
ಪುರುಷರಲ್ಲಿ ತನ್ನ ಸಹಪಾಠಿ ಅಬೂಬಕರ್ ಸಿದ್ದೀಖ್ ರ.ಅ. ಸ್ತ್ರೀಯರಲ್ಲಿ ತನ್ನ ಪ್ರಿಯ ಪತ್ನಿ ಖದೀಜ ರ.ಅ. ಮಕ್ಕಳಲ್ಲಿ ಅಲಿಯ್ಯುಬ್ನು ಅಬೀ ತಾಲಿಬ್ ರ.ಅ. ದಾಸ್ಯಮುಕ್ತಿ ಪಡೆದವರಲ್ಲಿ ಝೈದುಬ್ನು ಹಾರಿಸಃ ರ.ಅ. ದಾಸರಲ್ಲಿ ಬಿಲಾಲುಬ್ನು ರಬಾಹ್ ರ.ಅ ಆಗಿದ್ದಾರೆ.
ತನ್ನ ಜತೆಗಾರ ಅಬೂಬಕರ್ ಸಿದ್ದೀಕ್ ರ.ಅ ರವರ ಆಹ್ವಾನದ ಮೇರೆಗೆ ಉಸ್ಮಾನ್ ರ.ಅ, ಝಬೈರುಬ್ನುಲ್ ಅವಾಮ್ಮ್ ರ.ಅ, ತ್ವಲ್ಹತು ಬ್ನು ಉಬೈದಿಲ್ಲಾಹ್ ರ.ಅ, ಅಬ್ದುರ್‍ರಹ್ಮಾನು ಬ್ನು ಔಫ್ ರ.ಅ, ಸಅದು ಬ್ನು ಅಬೀ ವಖ್ಖಾಸ್ ರ.ಅ, ಅಬೂ ಉಬೈದತಿ ಆಮಿರು ಬ್ನುಲ್ ಜರ್‍ರಾಹ್ ರ.ಅ ಎಂಬವರು ಇಸ್ಲಾಂ ಧರ್ಮ ಸ್ವೀಕರಿಸಿದರು.
ಜನರು ಇಸ್ಲಾಮಿಗೆ ಬರಲು ಶುರುಮಾಡಿದರು.ಅವರಲ್ಲಿ ಮಕ್ಕಳು,ಹಿರಿಯರು,ದಾಸರು,ಸ್ವತಂತ್ರರು,ಸ್ತ್ರೀಗಳು,ಪುರುಷರು ಹಾಗು ಕುಲೀನರು ಇದ್ದರು.ಇದರ ನಂತರ ಅವಿಶ್ವಾಸಿಗಳು ಮುಸ್ಲಿಮರ ಶತ್ರುಗಳಾಗಿ ಬದಲಾವಣೆಯಾದರು.ಧರ್ಮ ಧಿಕ್ಕಾರಿಗಳಾದ ಅವಿಶ್ವಾಸಿಗಳ ಉಪಟಳ ಕ್ಕೆ ಮುಸ್ಲಿಮರು ವಿಧೇಯರಾದರು.ಬಹಿರಂಗವಾಗಿ ಅಲ್ಲಾಹನನ್ನು ಆರಾಧಿಸಲು ಮುಸ್ಲಿಮರಿಗೆ ಅಸಾಧ್ಯವಾದಾಗ ಪರ್ವತ ಪ್ರದೇಶಗಳಲ್ಲಿ ರಹಸ್ಯವಾಗಿ ಆರಾಧನೆ ನಿರ್ವಹಿಸುವ ಪರಿಸ್ಥಿತಿಯೂ ಬಂದೆರಗಿತು.ಅಲ್ಲಿಯೂ ಅಕ್ರಮಿಗಳು ಬಿಡಲಿಲ್ಲ.ಅಲ್ಲಿಯೂ ತಮ್ಮ ಆಕ್ರಮಣವನ್ನು ಮುಂದುವರಿಸಿದರು.ಕೊನೆಗೆ ನೆಬಿ ಸ.ಅ ತನ್ನ ವಿಶ್ವಾಸೀ ಸಮೂಹದೊಂದಿಗೆ ದಾರುಲ್ ಅರ್‍ಖಮಿನಲ್ಲಿ ಅಡಗಿ ಕೂತರು.ಅಲ್ಲಿ ನೆಬಿ ಸ.ಅ ವಿಶ್ವಾಸಿಗಳಿಗೆ ಇಸ್ಲಾಮ್ ಧರ್ಮದ ಆಚಾರ ವಿಚಾರಗಳನ್ನು ಕಲಿಸಿಕೊಡುತ್ತಾ ಅವರೊಂದಿಗೆ ಇಬಾದತ್ ನಿರ್ವಹಿಸುತ್ತಿದ್ದರು.
ಮೂರು ವರ್ಷಗಳ ಕಾಲ ರಹಸ್ಯ ಪ್ರಬೋಧನೆ ಮುಂದುವರಿಯಿತು.ಇಸ್ಲಾಮಿನ ಮಹೋನ್ನತ ಸಂದೇಶ ಎಲ್ಲಾ ಕುರೈಶೀ ಕುಟುಂಬಗಳಿಗೆ ತಲುಪಿತು.ಮಕ್ಕಾದಲ್ಲಿ ಇಸ್ಲಾಮಿನ ಸಂದೇಶ ವ್ಯಾಪಕ ಪ್ರಚಾರ ಪಡೆಯಿತು.ಆಗ ಅಲ್ಲಾಹು ಬಹಿರಂಗ ಪ್ರಚಾರಕ್ಕೆ ನೆಬಿ ಸ.ಅ ರವರಿಗೆ ಆದೇಶಿಸಿದನು.ನೆಬಿ ಸ.ಅ ಸ್ವಫಾ ಪರ್ವತಕ್ಕೆ ಹತ್ತಿ ನಿಂತು ಕುರೈಶಿಗಳನ್ನು ಕರೆದರು.ಅವರೊಂದಿಗೆ ನೆಬಿ ಸ.ಅ ಕೇಳಿದರು : ಈ ಸ್ವಫಾ ಪರ್ವತದ ಆಚೆ ಬದಿಯಿಂದ ಒಂದು ಸೈನ್ಯ ನಿಮ್ಮನ್ನು ಆಕ್ರಮಿಸಲು ಧಾವಿಸಿ ಬರುತ್ತಿದೆ ಅಂತ ನಾನು ನಿಮ್ಮಲ್ಲಿ ಹೇಳಿದರೆ ನೀವು ನನ್ನ ಮಾತನ್ನು ನಂಬುವಿರೇ ?.
ಕುರೈಶಿಗಳು ಹೇಳಿದರು : ಹಾ. ನಾವು ನಂಬುತ್ತೇವೆ.ಕಾರಣ ನೀನು ಇದುವರೆಗೂ ಯಾರೊಂದಿಗೂ ಸುಳ್ಳು ಹೇಳಿದ್ದು ಕೇಳಿಲ್ಲ.
ನನ್ನ ಮಾತನ್ನು ಕುರೈಶಿಗಳು ನಂಬುತ್ತಾರೆ ಎಂದು ನೆಬಿ ಸ.ಅ ರವರಿಗೆ ಮನದಟ್ಟಾದ ಬಳಿಕ ಹೇಳಿದರು : ಹಾಗಾದರೆ ಕೇಳಿರಿ ಕುರೈಶಿಗಳೇ..
ನಿಮಗೆ ಬರಲಿರುವ ಕಠೋರವಾದ ಶಿಕ್ಷೆಯ ಕುರಿತು ಮುನ್ಸೂಚನೆ ನೀಡಲು ನಾನು ನೆಬಿಯಾಗಿ ನಿಯೋಗಿಸಲ್ಪಟ್ಟಿದ್ದೇನೆ.
ಬಳಿಕ ನೆಬಿ ಸ.ಅ ಅವರನ್ನು ತೌಹೀದಿನೆಡೆಗೆ ಆಹ್ವಾನಿಸಿದರು.
ಆಗ ಅಬೂಲಹಬ್ ದ್ವೇಷದಿಂದ ಹೇಳಿದನು : ನಿನಗೆ ನಾಶವಾಗಲು ....ನಮ್ಮನ್ನು ಇಲ್ಲಿ ನೀನು ಒಗ್ಗೂಡಿಸಿದ್ದು ಇದಕ್ಕಾಗಿಯಾ ?
ಆಗ ನೆಬಿ ಸ.ಅ ರವರಿಗೆ ಅಲ್ಲಹಬ್ ಎಂಬ ಸೂರತ್ ಅವತೀರ್ಣವಾಯಿತು.ಆ ಸೂರತಿನಲ್ಲಿ ಅಬೂಲಹಬ್ ಮತ್ತು ಆತನ ಕುಟುಂಬ ಸರ್ವನಾಶವಾಗಲಿವೆ ಎಂದು ಅಲ್ಲಾಹನು ಪ್ರಖ್ಯಾಪಿಸಿದನು.
ಮುಂದುವರಿಯುವುದು..
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob - +918105745760
No comments:
Post a Comment