Saturday, 15 October 2016

ತಾಜುಲ್ ಉಲಮಾ ಖ.ಸಿ ಜೀವನ ಚರಿತ್ರೆ ಚುಟುಕಾಗಿ....

*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*
           ಒಂದೇ ನೋಟದಲ್ಲಿ

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
-----------—-—-------
ಇತಿಹಾಸ ಪ್ರಸಿದ್ಧ ಊರು ಎಂಬ ಹೆಗ್ಗಳಿಕೆ ಗಳಿಸಿದ ರಾಜ್ಯ ಕೇರಳ.ಇಸ್ಲಾಂ ಬಂದಂದಿನಿಂದ ಹಲವಾರು ವಿದ್ವಾಂಸರನ್ನು,ಅವುಲಿಯಾಗಳನ್ನು ಮುಸ್ಲಿಂ ಸಮೂಹಕ್ಕೆ ಸಮರ್ಪಿಸಲ್ಪಟ್ಟ ರಾಜ್ಯ ಕೇರಳ.ಕೇರಳ ಮತ್ತು ಸುತ್ತಮುತ್ತ ರಾಜ್ಯದ ಪ್ರದೇಶಗಳಲ್ಲಿ ಈ ಅವುಲಿಯಾ,ವಿದ್ವಾಂಸರುಗಳಿಂದಾಗಿದೆ ಅಜ್ಞಾನದ ಇರುಳು ಇಲ್ಲವಾಗಿದ್ದು ಮತ್ತು ಸುಜ್ಞಾನದ ಪ್ರಭೆ ಹರಡಿದ್ದು.ಇವರುಗಳಲ್ಲಿ ಆಧ್ಯಾತ್ಮಿಕ ಜಗತ್ತಿನ ಅಗ್ರಗಣ್ಯ ನಾಯಕರಾಗಿ ಗುರುತಿಸಲ್ಪಟ್ಟ ಓರ್ವ ಮಹಾನರಾಗಿದ್ದಾರೆ *ತಾಜುಲ್ ಉಲಮಾ* ಎಂಬ ಗೌರವ ನಾಮದೊಂದಿಗೆ ಜಗತ್ಪ್ರಸಿದ್ದರಾದ *ಆಲಿಮುಲ್ ಅಲ್ಲಾಮಃ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಅಲ್ ಬಾಖವಿ ಖ.ಸಿ.*ಹಿಜರಿ 1341 ರಬೀವುಲ್ ಅವ್ವಲ್ ತಿಂಗಳ 25 ಶುಕ್ರವಾರದಂದು ಕೋಯಿಕ್ಕೋಡು ಜಿಲ್ಲೆಯ ಫರೋಖ್ ಸಮೀಪದ ಕರುವಂತುರುತ್ತಿ ಎಂಬ ಪ್ರದೇಶದಲ್ಲಿ *ಅಬೂಬಕರ್ ಚೆರುಕುಞ್ಞಿ ಕೋಯ ಅಲ್ ಬುಖಾರಿ ಮತ್ತು ಸಯ್ಯಿದತ್ ಹಲೀಮ ಕುಞ್ಞಿ ಬೀವಿ (ರ.ಅ)* ರವರ ಪ್ರೀತಿಯ ಪುತ್ರನಾಗಿ ತಾಜುಲ್ ಉಲಮಾ ಖ.ಸಿ ಜನಿಸಿದರು.ಬಾಲ್ಯ ಪ್ರಾಯದಲ್ಲಿಯೇ ಕಠಿಣ ಪರಿಶ್ರಮಿಯಾಗಿದ್ದ ತಾಜುಲ್ ಉಲಮಾ ಖ.ಸಿ ಪ್ರಾಥಮಿಕ ಶಿಕ್ಷಣವನ್ನು ಧಾರ್ಮಿಕ ವಿದ್ವಾಂಸರಾಗಿದ್ದ ಪುತ್ತನ್ ವೀಟ್ಟಿಲ್ ಮುಹಮ್ಮದ್ ಮುಸ್ಲಿಯಾರ್ ರವರಿಂದ ಕರಗತ ಮಾಡಿ ಉನ್ನತ ಶಿಕ್ಷಣವನ್ನು ಜಾಮಿಅಃ ಬಾಖಿಯಾತುಸ್ಸ್ವಾಲಿಹಾತ್ ನಲ್ಲಿ ಪೂರ್ತಿಗೊಳಿಸಿದರು.ರಈಸುಲ್ ಮುಹಖ್ಖಿಖೀನ್ ಅಶ್ಶೈಖ್ ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್,ಶಂಸುಲ್ ಉಲಮಾ ಇ.ಕೆ ಅಬೂಬಕರ್ ಮುಸ್ಲಿಯಾರ್,ಶೈಖ್ ಹಸನ್ ಹಝ್ರತ್ ಖದ್ದಸಲ್ಲಾಹು ಅಸ್ರಾರಹುಂ *ತಾಜುಲ್ ಉಲಮಾ ಖ.ಸಿ*ರವರ ಪ್ರಮುಖ ಗುರುವರ್ಯರುಗಳಾಗಿದ್ದರು.

ತಾಜುಲ್ ಉಲಮಾ ಖ.ಸಿ ಮತ್ತು ಅವರ ಉಸ್ತಾದರುಗಳ ಬರ್ಕತಿನಿಂದ ನಮ್ಮ ಎಲ್ಲಾ ಕಾರ್ಯಗಳಲ್ಲಿ ಅಲ್ಲಾಹು ಒಳಿತನ್ನು ನೀಡಲಿ.ಅವರೊಂದಿಗೆ ಸ್ವರ್ಗದಲ್ಲಿ ನಮ್ಮನ್ನು ಒಗ್ಗೂಡಿಸಲಿ.ಆಮೀನ್.

ಜ್ಞಾನ ಭಂಡಾರದ ಎಲ್ಲಾ ವಿಷಯಗಳ ಸರ್ವ ಮಜಲುಗಳಲ್ಲಿಯೂ ಅಗ್ರಗಣ್ಯ ವಿದ್ವಾಂಸರಾಗಿದ್ದರು.ಮಾತ್ರವಲ್ಲ ತನ್ನಲ್ಲಿರುವ ವಿದ್ಯೆಯನ್ನು ಇತರರಿಗೆ ಪಸರಿಸಲು ತುಂಬಾನೇ ಉತ್ಸುಕರಾಗಿದ್ದರು.ಇದೇ ಕಾರಣದಿಂದ 1951 ರಲ್ಲಿ ಕರ್ನಾಟಕದ ಮಂಗಳೂರು ತಾಲೂಕಿನ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ಅಂತ್ಯವಿಶ್ರಮ ಹೊಂದಿರುವ ಉಳ್ಳಾಲಕ್ಕೆ ಬಂದು ಅವರ ಆಶೀರ್ವಾದ ಪಡೆದು  *ಕಂಝುಲ್ ಉಲೂಂ* ಎಂಬ ಹೆಸರಿನಲ್ಲಿ ಪಳ್ಳಿ ದರ್ಸನ್ನು ಪ್ರಾರಂಭಿಸಿದರು.ವಿಜ್ಞಾನ ದಾಹಿಗಳಾದ ಮುತಅಲ್ಲಿಮರು ಕರ್ನಾಟಕ ಮತ್ತು ಕೇರಳದ ವಿವಿಧ ಊರುಗಳಿಂದ ಹರಿದು ಬರಲಾರಂಭಿಸಿದರು.ಬಳಿಕ ಸಯ್ಯಿದ್ ಮದನಿ ಶರೀಅತ್ ಕಾಲೇಜು ಆಗಿ ಪರಿವರ್ತಿತಗೊಂಡಿತು.ಇದರಿಂದ ಕರ್ನಾಟಕ ಭಾಗದಲ್ಲಿ ಇಸ್ಲಾಮಿನ ಸುಂದರ ಆಶಯಾದರ್ಶಗಳು ಹರಡಿದವು.ಪ್ರಗಲ್ಭ ವಿದ್ವಾಂಸರುಗಳ ಸ್ರಷ್ಟಿಯಾಯಿತು.ಅನ್ಯಾಯ,ಅಕ್ರಮ,ಅಜ್ಞಾನ ಅಂಧಕಾರದ ಕಗ್ಗತ್ತಲು ಇಲ್ಲವಾಯಿತು.
ತಾಜುಲ್ ಉಲಮಾ ಖ.ಸಿ ತನ್ನ ಆಯುಷ್ಯದ ಕೊನೆ ಗಳಿಗೆವರೆಗೂ ಸಯ್ಯಿದ್ ಮದನಿ ಶರೀಅತ್ ಕಾಲೇಜು ಇದರ ಪ್ರಾಂಶುಪಾಲರಾಗಿಯೂ ಮುದರ್ರಿಸರಾಗಿಯೂ ಉಳ್ಳಾಲ ಹಾಗೂ ಕರ್ನಾಟಕದ ನೂರಾರು ಮೊಹಲ್ಲಾಗಳ ಖಾಝಿಯಾಗಿಯೂ ಮುಂದುವರಿದಿದ್ದರು.1956 ಸೆಪ್ಟೆಂಬರ್ 20 ರಂದು ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಸದಸ್ಯರಾದರು.1976 ರಲ್ಲಿ ಉಪಾಧ್ಯಕ್ಷರಾದರು.1989 ರಲ್ಲಿ ಸುನ್ನೀ ಜಂಇಯ್ಯತುಲ್ ಉಲಮಾ ದ ಅಧ್ಯಕ್ಷರಾದರು.ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶ ನಾಯಕರಾಗಿ ಮುಸ್ಲಿಂ ಸಮೂಹಕ್ಕೆ ಇಸ್ಲಾಮಿನ ನೈಜ ಸುನ್ನೀ ಆಶಯಾದರ್ಶಗಳನ್ನು ತಿಳಿಸಿಕೊಡುತ್ತಾ ಮುಂದೆ ಸಾಗಿದರು.ಇದರೊಂದಿಗೆ ಎಲ್ಲಾ ತರದ ನೂತನವಾದಿಗಳ ನೀಚ ಕುಟಿಲ ತಂತ್ರಗಳ ಕಪಿಮುಷ್ಟಿಯಿಂದ ಮುಸ್ಲಿಂ ಸಮೂಹವನ್ನು ಸಡಿಲಿಸಿ ಅವರಿಗೆ ಸುನ್ನತ್ ಜಮಾಅತಿನ ನೈಜ ವಿಶ್ವಾಸಾಚಾರಗಳನ್ನು ತಿಳಿಸಿ ಇಸ್ಲಾಮನ್ನು ಭದ್ರಗೊಳಿಸಿದರು.ಧಾರ್ಮಿಕ ವಿಷಯದಲ್ಲಿ ಯಾವುದೇ ಆಕ್ಷೇಪ,ಆರೋಪಗಳಿಗೆ ಎದೆಗುಂದಲಿಲ್ಲ.ತಾಜುಲ್ ಉಲಮಾ ಹೇಳಿದಂತಹ ಮಾತು
*أنا على الحق ولو كنت وحدي*
ನಾನು ಸತ್ಯದ ಹಾದಿಯಲ್ಲಿದ್ದೇನೆ.ನಾನು ಏಕಾಂಗಿಯಾದರೂ ಸರಿ,ಇಸ್ಲಾಮಿನ, ಸುನ್ನತ್ ಜಮಾಅತಿನ ವಿಷಯದಲ್ಲಿ ಕಿಂಚಿತ್ತೂ ಸಡಿಲ ಮನೋಭಾವ ನನಗಿಲ್ಲ.
ವಿವಿಧ ಕಡೆಗಳಿಂದ ತಾಜುಲ್ ಉಲಮಾರ ಸನ್ನಿಧಿಗೆ ಜನರು ತಾಳ್ಮೆಯಿಂದ ಬಂದು ಅವರ ಮಾತು,ಕಲ್ಪನೆಯನ್ನು ಕೇಳಿ ಜೀವನದಲ್ಲಿ ಅನುಸರಿಸುತ್ತಿದ್ದರು.ತಾಜುಲ್ ಉಲಮಾ ಖ.ಸಿ ರವರ ಸನ್ನಿಧಿಗೆ ತಮ್ಮ ಕಷ್ಟ ಕಾರ್ಪಣ್ಯ ಗಳನ್ನು ಹೇಳಿ ಬರುತ್ತಿದ್ದ ಭಕ್ತಾದಿಗಳಿಗೆ ಅದಕ್ಕೆ ಪರಿಹಾರವನ್ನು ತಿಳಿಸುತ್ತಿದ್ದರು.ಉತ್ತಮ ಧರ್ಮಿಷ್ಟರೂ ಉತ್ತಮ ಸ್ವಭಾವದವರೂ ಆಗಿದ್ದರು.

------------------------------
ತಾಜುಲ್ ಉಲಮಾ ಖ.ಸಿ ಕಡ್ಡಾಯವಾದ ಇಬಾದತ್ ಗಳನ್ನು ನಿರ್ವಹಿಸುವುದರೊಂದಿಗೆ ಸುನ್ನತ್ತಾದ ಇಬಾದತ್ ಗಳಲ್ಲಿ ಅಧಿಕವಾಗಿ ಮಗ್ನರಾಗುತ್ತಿದ್ದರು.ಸದಾ ಸಮಯ ಅಲ್ಲಾಹನ ದ್ಸಿಕ್ರ್ ,ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸ್ವಲಾತ್ ಹೇಳುವುದರಲ್ಲಿ ತಲ್ಲೀನರಾಗುತ್ತಿದ್ದರು.ತನ್ನ ಜೀವನದ ಕೊನೆ ತನಕವೂ ರಾತ್ರಿಯ ವಿತ್ರ್ ನಮಾಜು *ಹನ್ನೊಂದು* ರಕ್ಅತ್ ನಿರ್ವಹಿಸುತ್ತಿದ್ದರು.ಸಯ್ಯಿದ್ ಮದನಿ ಉಳ್ಳಾಲ ಜುಮಾ ಮಸೀದಿಯಲ್ಲಿ ರಮಳಾನಿನ ಇಶಾ ಮತ್ತು ತರಾವೀಹ್ ನಮಾಜು ಮುಗಿದ ತಕ್ಷಣ ಎದ್ದು ಹೊರ ಮಸೀದಿಗೆ ಹೋಗಿ ತಾಜುಲ್ ಉಲಮಾ ಖ.ಸಿ ವಿತ್ರ್ ನಮಾಜು ಹನ್ನೊಂದು ರಕ್ಅತ್ ನಿರ್ವಹಿಸುವಾಗ ಅವರ ಹಿಂದೆ ಜಮಾಅತ್ತಾಗಿ ಹಲವಾರು ಮಂದಿ ಸೇರುತ್ತಿದ್ದರು.ತಾಜುಲ್ ಉಲಮಾ ಖ.ಸಿ ರವರ ತನ್ನ ಬದುಕಿನ ಕೊನೆಯ ಆ ಇಳಿ ವಯಸ್ಸಿನಲ್ಲೂ ವಿತ್ರ್ ನಮಾಜು ಹನ್ನೊಂದು ರಕ್ಅತ್ ನಿಂತು ನಿರ್ವಹಿಸುತ್ತಿದ್ದುದನ್ನು ಕಾಣುತ್ತಿದ್ದಾಗ ಸುನ್ನತ್ತಾದ ಇಬಾದತ್ತಿಗೆ ಎಷ್ಟೊಂದು ಪ್ರಾಮುಖ್ಯತೆಯನ್ನು ತಾಜುಲ್ ಉಲಮಾ ಖ.ಸಿ ನೀಡುತ್ತಿದ್ದರು ಎಂದು ತಿಳಿದುಕೊಳ್ಳಬಹುದು.
ಹೀಗೆ ಧಾರಾಳವಾಗಿ ಅಲ್ಲಾಹನಿಗೆ ಇಬಾದತ್ ನಿರ್ವಹಿಸುವ ಮೂಲಕ ಸಾಮೀಪ್ಯ ಬಯಸಿದಾಗ ಅಲ್ಲಾಹನು ತಾಜುಲ್ ಉಲಮಾ ಖ.ಸಿ ರವರನ್ನು ಅವನ ಇಷ್ಟದಾಸರುಗಳಿಗೆ ನೀಡುವಂತಹ *ಕರಾಮತ್* ಎಂಬ ಮಹೋನ್ನತ ಪದವಿಯನ್ನು ನೀಡಿ ಗೌರವಿಸಿದನು.ಅವನು ತಾಜುಲ್ ಉಲಮಾ ಖ.ಸಿ ರವರ ಮೂಲಕ ಹಲವಾರು ಸಂದರ್ಭಗಳಲ್ಲಿ ಕರಾಮತ್ ತೋರ್ಪಡಿಸುವ ಮೂಲಕ ಅವರ ಸ್ಥಾನವನ್ನು ಇನ್ನಷ್ಟು ಉತ್ತುಂಗಕ್ಕೇರಿಸಿದನು.ತಾಜುಲ್ ಉಲಮಾ ಖ.ಸಿ ರವರ ಕಲ್ಪನೆಯ ಮೇರೆಗೆ ಹಲವು ಸಂದರ್ಭಗಳಲ್ಲಿ ಆಕಾಶವು ಅವರ ಆದೇಶವನ್ನು ಪಾಲಿಸಿದೆ.
ಒಮ್ಮೆ ತನ್ನ ಅಹ್ಲುಸ್ಸುನ್ನಃದ ಅನುಯಾಯಿಗಳು ಒಂದು ಸ್ಥಳದಲ್ಲಿ ಬ್ರಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದರು.ಆದರೆ ಅಂದು ಮಳೆಯ ವಾತಾವರಣ ಆಗಿತ್ತು.ನೋಡನೋಡುತ್ತಿದ್ದಂತಯೇ ಧಾರಾಕಾರ ಮಳೆಯೂ ಸುರಿಯಲಾರಂಭಿಸಿತು. ಎಡೆಬಿಡದೆ ಮಳೆ ಮುಂದುವರಿದಿತ್ತು.ಸುನ್ನೀ ಸಮೂಹ ಆತಂಕಕ್ಕೊಳಗಾದರು.ನಮ್ಮ ಇಂದಿನ ಸಮಾವೇಶಕ್ಕೆ ಮಳೆಯು ಅಡ್ಡಿಯಾಗಬಹುದೋ ಎಂಬ ಬೇಸರ ಮಡುಗಟ್ಟಿತು.ತಾಜುಲ್ ಉಲಮಾ ಖ.ಸಿ ರವರೊಂದಿಗೆ ತಮ್ಮ ಆತಂಕವನ್ನು ತೋರಿಕೊಂಡರು.ತಾಜುಲ್ ಉಲಮಾ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ದುವಾ ಮಾಡಿದರು.
*أللهم حوالينا ولاعلينا* *أللهم حوالينا ولاعلينا* *أللهم حوالينا ولاعلينا*
ಓ ಅಲ್ಲಾಹುವೇ ನಿನ್ನ ಇಸ್ಲಾಂ ದೀನಿನ ಸುಂದರ ಆಶಯಾದರ್ಶಗಳನ್ನು ಸಮೂಹಕ್ಕೆ ಮನದಟ್ಟು ಮಾಡಿಕೊಡಲು ನಿನ್ನ ಅಹ್ಲುಸ್ಸುನ್ನಃದ ದಾಸರು ಇಲ್ಲಿ ಸುನ್ನೀ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.ಆದುದರಿಂದ ನಿನ್ನ ಕಾರುಣ್ಯದ ಮಳೆಯು ಇಂದು ಇಲ್ಲಿಗೆ ಬೇಡ.ಅದನ್ನು ಸುತ್ತ ಮುತ್ತಲ ಪ್ರದೇಶಕ್ಕೆ ಸುರಿಸು. *ಏನದ್ಭುತ* ಸಮಾವೇಶ ಹಮ್ಮಿಕೊಂಡ ಪ್ರದೇಶದಲ್ಲಿ ಮಳೆಯು ನಿಂತಿತು.ಸುತ್ತಮುತ್ತಲ ಊರಿಗೆ ಮಳೆಯೂ ಶಿಫ್ಟ್ ಆಯಿತು.ಸುನ್ನೀ ಸಮೂಹ ಹರ್ಷೋಲ್ಲಸಿತರಾದರು.ಸಮಾವೇಶ ಉನ್ನತ ವಿಜಯವಾಗಿ ಮಾರ್ಪಟ್ಟಿತು.

------------------------------

ತಾಜುಲ್ ಉಲಮಾ ಖ.ಸಿ ರವರ ನೇತ್ರತ್ವದಲ್ಲಿ ತನ್ನ ಊರಾದ ಕರುವಂತುರುತ್ತಿ ಯಲ್ಲಿ ಬ್ರಹತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ವಿವಿಧ ಊರುಗಳಿಂದ ಜನರು ಹರಿದು ಬಂದಿದ್ದರು.ಪ್ರಗಲ್ಭ ವಿದ್ವಾಂಸರುಗಳು ಅಲ್ಲಿ ಸೇರಿದ್ದರು.ಇನ್ನೇನು ಕಾರ್ಯಕ್ರಮ ಪ್ರಾರಂಭವಾಗಲಿಕ್ಕೆ ಕೆಲವು ನಿಮಿಷಗಳು ಬಾಕಿ ಉಳಿದಿತ್ತು.ಅಷ್ಟರಲ್ಲಿ ಅನಿರೀಕ್ಷಿತವಾಗಿ ಧಾರಾಕಾರ ಮಳೆಯ ಆಗಮನವಾಯಿತು.ರಸ್ತೆಗಳೆಲ್ಲಾ ನೀರಿನಿಂದ ತುಂಬಿ ಹರಿಯತೊಡಗಿತು.ಸ್ವಲಾತ್ ಮಜ್ಲಿಸ್ ಗೆ ಬಂದ ಕೆಲವರು ಮಳೆಯಿಂದ ರಕ್ಷಣೆ ಪಡೆಯಲು ಚದುರಿ ನಿಂತರು.ಎಲ್ಲರಲ್ಲೂ ಆತಂಕ,ನಿರಂತರ ಮಳೆ ಸುರಿಯುತಿದೆ.ಬಹುಮಾನ್ಯ ತಾಜುಲ್ ಉಲಮಾ ಖ.ಸಿ ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವ ನೀಡಲಿದ್ದಾರೆ.ಅದೋ ಶೈಖುನಾ ತಾಜುಲ್ ಉಲಮಾ ಮನೆಯಿಂದ ಹೊರಟು ನಿಂತು ಆಕಾಶವನ್ನು ನೋಡುತ್ತಾ ಅಲ್ಲಾಹನ ಪವಿತ್ರ ಕುರಾನಿನ ವಚನವಾದ
*يا أرض ابلعي مائك ويا سماع أقلعي.......*
ಎಂದು ಓದಿದರು.ಓ ಭೂಮಿಯೆ ನಿನ್ನ ನೀರನ್ನು ಇಂಗಿಸು.ಓ ಆಕಾಶವೇ ಮಳೆಯನ್ನು ನಿಲ್ಲಿಸು.ನಾವು ಇಲ್ಲಿ ಮುತ್ತು ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಸ್ವಲಾತ್ ಹೇಳುವ ಮಜ್ಲಿಸ್ ಹಮ್ಮಿಕೊಂಡಿದ್ದೇವೆ.ಏನದ್ಬುತ.ಮಳೆಯು ನಿಂತಿತು.ತಾಜುಲ್ ಉಲಮಾ ಖ.ಸಿ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.ಸ್ವಲಾತ್ ಮಜ್ಲಿಸ್ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಡೆಯಿತು.
*ಮತ್ತೊಂದು ಘಟನೆ*
ತಾಜುಲ್ ಉಲಮಾ ಖ.ಸಿ ರವರ ಕಾರು ಯಾತ್ರೆ ಮಧ್ಯೆ ಪೆಟ್ರೋಲ್ ಮುಗಿದು ನಿಂತುಬಿಟ್ಟಿತು.ಶೈಖುನಾರೊಂದಿಗೆ ಕಾರು ಚಾಲಕ ಹೇಳಿದ.ಕಾರಿನ ಪೆಟ್ರೋಲ್ ಮುಗಿದಿದೆ.ಕಾರು ಸ್ಟಾರ್ಟ್ ಆಗುತ್ತಿಲ್ಲ.ತಾವು ಉದ್ದೇಶಿಸಿದ ಸ್ಥಳ ಮುಟ್ಟುವುದಾದರೂ ಹೇಗೆ......ತಾಜುಲ್ ಉಲಮಾ ಹೇಳಿದರು....ಏನು ಹೇಳ್ತಿದ್ದೀಯಾ?!
ಕಾರಿನ ಪೆಟ್ರೋಲ್ ಮುಗಿದಿದೆಯೆಂದೋ? ಇಲ್ಲ.ನಾವು ಉದ್ದೇಶಿಸಿದ ಸ್ಥಳ ಮುಟ್ಟಿಯೇ ತೀರುತ್ತೇವೆ.ಈಗ ಮತ್ತೊಮ್ಮೆ ಸ್ಟಾರ್ಟ್ ಮಾಡು.ತಾಜುಲ್ ಉಲಮಾ ರ ಕರಾಮತ್ ಮಗದೊಮ್ಮೆ ಪ್ರತ್ಯಕ್ಷವಾಯಿತು.ಕಾರು ಚಾಲಕ ಸ್ಟಾರ್ಟ್ ಮಾಡಿದ..ಏನದ್ಬುತ..ಕಾರು ಸ್ಟಾರ್ಟ್ ಆಯಿತು.ಅವರು ಉದ್ದೇಶಿಸಿದ ಸ್ಥಳದವರೆಗೂ ಯಾವುದೇ ತೊಂದರೆಯಿಲ್ಲದೆ ಕಾರು ಚಲಿಸಿತು.
------------------------------

ಒಮ್ಮೆ *ನೂರುಲ್ ಉಲಮಾ ಅಶ್ಶೈಖ್ ಅಬ್ದುಲ್ ಖಾದಿರ್ ಎಂ.ಎ ಉಸ್ತಾದ್ ಖ.ಸಿ ತೀವ್ರ ರೋಗ ಶಯ್ಯೆಯಲ್ಲಿದ್ದಂತಹ ಸಂದರ್ಭದಲ್ಲಿ ತಾಜುಲ್ ಉಲಮಾ ಖ.ಸಿ ರವರೊಂದಿಗೆ ಹೇಳಿದರು.ನಾನು ಅತೀವ ಅನಾರೋಗ್ಯ ಪೀಡಿತನಾಗಿದ್ದೇನೆ.ನನ್ನ ಮರಣ ಸಮೀಪಿಸುತ್ತಿದೆ.ನನ್ನ ಆಖಿಬತ್ ಉತ್ತಮವಾಗಲು ತಾವು ಅಲ್ಲಾಹನೊಂದಿಗೆ ದುವಾ ಮಾಡಿರಿ.ತಾಜುಲ್ ಉಲಮಾ ಖ.ಸಿ ಹೇಳಿದರು.ತಾವು ಏನು ಹೇಳ್ತಿದ್ದೀರಿ.ತಾವು ಈಗ ಮರಣ ಹೊಂದುವುದಿಲ್ಲ.ತಮ್ಮ ಮರಣದ ಸಮಯ ಹತ್ತಿರವಾಗಲಿಲ್ಲ.ಇಲ್ಲಿ ತಾವು ಇಸ್ಲಾಂ ದೀನಿಗಾಗಿ,ಸುನ್ನತ್ ಜಮಾಅತ್ ಗಾಗಿ ನಿರ್ವಹಿಸಬೇಕಾದ ಹಲವಾರು ಕೆಲಸಗಳು ಇನ್ನೂ ಬಾಕಿ ಇವೆ.ತಮ್ಮ ಮರಣ ಸಮೀಪಸಿದೆಯೆಂದೋ ?!! ಇಲ್ಲ.ತಾವೀಗ ಮರಣ ಹೊಂದಲಾರಿರಿ..ತಾಜುಲ್ ಉಲಮಾ ಖ.ಸಿ ರವರ ಕರಾಮತಿನ ಮೂಲಕ ಹೇಳಿದಂತಹ ಮಾತು ಇಲ್ಲಿ ಸತ್ಯವಾಯಿತು. ನೂರುಲ್ ಉಲಮಾ ಖ.ಸಿ ರವರ ಅನಾರೋಗ್ಯ ಕಡಿಮೆಯಾಯಿತು.ಅದರ ನಂತರ ಹಲವು ವರ್ಷಗಳ ಕಾಲ ಜೀವಿಸಿದರು.ಸುನ್ನತ್ ಜಮಾಅತಿನ ಕಾರ್ಯಕ್ರಮಗಳಿಗೆ ನವ ಹುರುಪು ಹುಮ್ಮಸ್ಸಿನೊಂದಿಗೆ ನೇತ್ರತ್ವ ನೀಡಿದರು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ನಂತರ ಮತ್ತೂ ಒಂದು ವರ್ಷ ಜೀವಿಸಿದರು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ ವಿದ್ವಾಂಸ ಸಭೆಯ ಸಾರಥಿಯಾಗಿ ಮುನ್ನಡೆಸುವ ಭಾಗ್ಯ ಕೂಡಾ ನೂರುಲ್ ಉಲಮಾ ಖ.ಸಿ ರವರಿಗೆ ಲಭಿಸಿತು.
ಇಂತಹ ಹಲವಾರು ಕರಾಮತುಗಳು ತಾಜುಲ್ ಉಲಮಾ ಖ.ಸಿ ರವರ ಜೀವಿತ ಕಾಲದಲ್ಲಿ ನಡೆದಿದೆ.ಅದನ್ನು ಬರೆದು ಮುಗಿಸಲೋ ಹೇಳಿ ಮುಗಿಸಲೋ ಸಾಧ್ಯವಿಲ್ಲ..ವಫಾತಿನ ಬಳಿಕದ ಹ್ರಸ್ವ ಸಮಯದಲ್ಲಿನ ಕೆಲವು ಕರಾಮತುಗಳು ತಾಜುಲ್ ಉಲಮಾ ಖ.ಸಿ ರವರಿಂದ ಪ್ರಕಟಗೊಂಡಿದೆ.

ಅಲ್ಲಾಹು ನಮ್ಮನ್ನು,ನಮ್ಮ ತಂದೆ ತಾಯಂದಿರು,ನಮ್ಮ ಪತ್ನಿ ಮಕ್ಕಳು,ಉಸ್ತಾದರುಗಳನ್ನು ತಾಜುಲ್ ಉಲಮಾ ಖ.ಸಿ ರವರ ಮಹಿಮೆಯಿಂದ ಎಲ್ಲಾ ವಿಧದ ಆಪತ್ತು ಮುಸೀಬತ್ತುಗಳಿಂದ ಕಾಪಾಡಲಿ...ಆಮೀನ್..

ತಾಜುಲ್ ಉಲಮಾ ಖ.ಸಿ ಜ್ಞಾನ ಸಾಗರವಾಗಿದ್ದರು.ಇಹಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ತನ್ನ ಪಾರತ್ರಿಕ ವಿಜಯದ ಗುರಿಯೊಂದಿಗೆ ತಖ್ವಾ ದೊಂದಿಗೆ ಜೀವಿಸಿದರು.ಧಾರ್ಮಿಕ ವಿದ್ಯೆ, ವಿದ್ಯೆ ಕಲಿಸುವ ವಿದ್ವಾಂಸರು ಹಾಗೂ ವಿದ್ಯೆ ಕಲಿಯುವ ಮುತಅಲ್ಲಿಮರನ್ನು ಅತೀವ ಇಷ್ಟಪಡುತ್ತಿದ್ದರು.ತನ್ನ ಜೀವನದ ಪೂರ್ಣ ಭಾಗವನ್ನು ಇಲ್ಮ್ ಕಲಿಯುವುದರಲ್ಲಿ ಮತ್ತು ಅದನ್ನು ಇತರರಿಗೆ ಪಸರಿಸುವಲ್ಲಿ ವ್ಯಯಿಸಿದರು.ತಾಜುಲ್ ಉಲಮಾ ಖ.ಸಿ ತನ್ನ ಪ್ರಮುಖ ಉಸ್ತಾದರಲ್ಲೊಬ್ಬರಾದ ಪರವಣ್ಣ ಮುಹ್ಯಿದ್ದೀನ್ ಕುಟ್ಟಿ ಮುಸ್ಲಿಯಾರ್ ರವರ ಶಿಷ್ಯತ್ವವನ್ನು ಸ್ವೀಕರಿಸಿ ಕಲಿಯುತ್ತಿದ್ದಾಗ ಉಸ್ತಾದರು ತನ್ನ ಶಿಷ್ಯನಾದ ತಾಜುಲ್ ಉಲಮಾ ಖ.ಸಿ ರವರನ್ನು ಕರೆದು ಕೇಳುತ್ತಾರೆ.ನೀನು ಯಾವ ಇಲ್ಮನ್ನು ಕಲಿಯಲು ಬಯಸಿರುವೆ ?.
ವಿದ್ಯೆಯ ಎಲ್ಲಾ ವಿಭಾಗಗಳ ಸಂಪೂರ್ಣ ವಿದ್ಯೆಯನ್ನು ಕಲಿಯುವ ಮುಸ್ಲಿಯಾರ್ ವಿದ್ಯೆಯನ್ನು ಕಲಿಯುವೆಯಾ? ಅಲ್ಲ ಅತ್ಯಾವಶ್ಯಕ ಕೆಲವೊಂದು ದ್ಸಿಕ್ರ್ ದುವಾಗಳನ್ನು ಮಾತ್ರ ಕಲಿಯುವೆಯಾ ?
ತಾಜುಲ್ ಉಲಮಾ ಹೇಳಿದರು.ನಾನು ಮುಸ್ಲಿಯಾರ್ ( ವಿದ್ವಾಂಸ ) ಆಗುವ ವಿದ್ಯೆ ಕಲಿಯಲು ಬಯಸುತ್ತೇನೆ..ನಾನೊಬ್ಬ ಉನ್ನತ ವಿದ್ವಾಂಸ ನಾಗಬೇಕು.ವಿಜ್ಞಾನ ದಾಹಿಗಳು ಜ್ಞಾನವನ್ನು ಅರಸುತ್ತಾ ನನ್ನ ಬಳಿ ಬರಬೇಕು.ಅಂತಹ ಒಬ್ಬ ಆಲಿಂ ಆಗಬೇಕು.ಅದೇ ರೀತಿ ಆಯಿತೂ ಕೂಡಾ ! ಅವರಿಂದ ಧಾರ್ಮಿಕ ವಿದ್ಯೆ ಪಡೆದು ಸಾವಿರಾರು ವಿದ್ವಾಂಸರು ವಿವಿಧ ಬಿರುದುದಾರಿಗಳಾಗಿಯೂ ಅಲ್ಲದೆಯೂ ಹೊರಹೊಮ್ಮಿದರು.ತಾಜುಲ್ ಉಲಮಾ ಖ.ಸಿ ರವರ ಬಳಿ ಸಾಮಾನ್ಯರಿಂದ ಹಿಡಿದು ಘನವೆತ್ತ ಉಲಮಾಗಳ,ವಿದ್ವಾಂಸರ ದಂಡೇ ಹರಿದು ಬರುತ್ತಿತ್ತು.ನಿಜವಾಗಿಯೂ ತಾಜುಲ್ ಉಲಮಾ ಖ.ಸಿ ಉಲಮಾಗಳ ಕಿರೀಟ ( ವಿದ್ವಾಂಸರ ಸರದಾರ ) ಆಗಿದ್ದರು.ಗಾಂಭೀರ್ಯತೆಯಿಂದ ಕೂಡಿದ ಪ್ರಶೋಭಿತ ಮುಖಭಾವ ಹೊಂದಿದವರಾಗಿದ್ದರು.ಕಷ್ಟ ಕಾರ್ಪಣ್ಯಗಳನ್ನು ಹೇಳಿ ಅವರನ್ನು ಸಂದರ್ಶಿಸಲು ಬರುತ್ತಿದ್ದ ಕೆಲವರೊಂದಿಗೆ  ಮಂದಹಾಸದದೊಂದಿಗೆ ಮಾತನಾಡಿ ಕುರಾನ್,ದ್ಸಿಕ್ರ್ ಮುಖಾಂತರ ಮಂತ್ರಿಸಿ ಅವರಿಗೆ ಪರಿಹಾರ ನೀಡುತ್ತಿದ್ದರು.ಇನ್ನೂ ಕೆಲ ಸಂದರ್ಶಕರಿಗೆ ತಾಜುಲ್ ಉಲಮಾ ಖ.ಸಿ  ಒಂದೇಟು ಕೊಟ್ಟು ಕಳುಹಿಸುತ್ತಿದ್ದರು.ಆ ಏಟೇ ತುಂಬಾ ಮಂದಿಯ ತೊಂದರೆಗಳಿಗೆ ಪರಿಹಾರವಾದ ಮತ್ತು ಕೆಲವರ ಉನ್ನತಿಗೆ ಕಾರಣವಾದ  ಸಂಭವಗಳೂ ಧಾರಾಳ ಉಂಟಾಗಿವೆ.ತಾಜುಲ್ ಉಲಮಾ ಖ.ಸಿ ತನ್ನ ಎಲ್ಲಾ ಕಾರ್ಯಗಳಲ್ಲಿ ಅಲ್ಲಾಹನೊಂದಿಗೆ ಪರಿಪೂರ್ಣವಾಗಿ ಅರ್ಪಿಸುತ್ತಿದ್ದರು.ಸುನ್ನತ್ ಜಮಾಅತಿನ ಸರ್ವ ಕಾರ್ಯಕ್ರಮಗಳು,ಸಭೆಗಳು ತಾಜುಲ್ ಉಲಮಾರ ಜೀವಿತ ಕಾಲದಲ್ಲಿ ಅವರ ನೇತ್ರತ್ವದಲ್ಲಿಯೇ ನಡೆಯುತ್ತಿತ್ತು.ಆ ಎಲ್ಲಾ ಕಾರ್ಯಕ್ರಮ ,ಸಮ್ಮೇಳನ ಗಳಲ್ಲಿ ಸುನ್ನೀ ಸಮೂಹದೊಂದಿಗೆ ಅಧಿಕವಾಗಿ ಅವರು ಮಾಡುತ್ತಿದ್ದ ವಸಿಯ್ಯತ್ 'ಸುನ್ನತ್ ಜಮಾಅತ್ ಬಿಗಿಯಾಗಿ ಹಿಡಿಯಿರಿ.ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಮತ್ತು ಸ್ವಹಾಬಿಗಳು ತೋರಿಸಿಕೊಟ್ಟ ಸುನ್ನತ್  ಜಮಾಅತಿನ ವಿಶ್ವಾಸಾಚಾರಗಳನ್ನು ಗಟ್ಟಿಯಾಗಿ ಹಿಡಿಯಿರಿ' ಎಂದಾಗಿತ್ತು.ಸ್ವಹೀಹುಲ್ ಬುಖಾರಿ ಹದೀಸ್ ಗ್ರಂಥವನ್ನು ತನ್ನ ಆಯುಷ್ಯದ ಮುಕ್ಕಾಲು ಭಾಗ ದರ್ಸ್ ನಡೆಸಿದರು.ಅತೀ ಹೆಚ್ಚು ಸಲ ಹಜ್ ಉಮ್ರಾ ನಿರ್ವಹಿದರು.
ತಾಜುಲ್ ಉಲಮಾ ಖ.ಸಿ ಈ ಕೆಳಗಿನ ಮಹತ್ತರವಾದ ಸ್ವಲಾತ್ ಇಜಾಝತ್ ನೀಡುತ್ತಿದ್ದರು

*اَللَّهُمَّ صَلِّ عَلَى مُحَمَّدٍ النَّبِيِّ الْاُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهٖ وَصَحْبِهٖ وَسَلِّم*

ತಾಜುಲ್ ಉಲಮಾ ಖ.ಸಿ ಪ್ರಸಿದ್ಧ ತ್ವರೀಖತಿನ ಶೈಖ್ ಆಗಿದ್ದರು.ಅವರ ಬಳಿ ಇಜಾಝತಿಗಾಗಿ ಎಲ್ಲಾ ಭಾಗಗಳಿಂದಲೂ ಜನರು ಬರುತ್ತಿದ್ದರು.ಹಣ ಸಂಪತ್ತು ಲಭಿಸಿದಾಗ ಸಂತೋಷ ಪಡುವವರಾಗಿರಲಿಲ್ಲ.ಅದು ಇಲ್ಲವಾದಾಗ ದುಃಖಿಸುವವರೂ ಆಗಿರಲಿಲ್ಲ......

ತಾಜುಲ್ ಉಲಮಾ ಖ.ಸಿ ಅತೀವ ಬುದ್ಧಿಶಾಲಿಯೂ ಗ್ರಹಣ ಶಕ್ತಿಯೂ ಉಳ್ಳವರಾಗಿದ್ದರು.ಜ್ಞಾನದ ವಿಷಯದಲ್ಲಿ ಅವರನ್ನು ಮೀರಿ ನಿಲ್ಲುವ ವಿದ್ವಾಂಸರು ಅವರ ಕಾಲದಲ್ಲಿರಲಿಲ್ಲ.ಅವರ ಪ್ರಗಲ್ಭ ಶಿಷ್ಯ ವ್ರಂದದವರೇ ಹೇಳುವಂತೆ ಅವರಿಗೆ ಸರಿಸಾಟಿ ಯಾರೂ ಇಲ್ಲ.ಅವರು ವಿದ್ಯಾ ಸಾಗರವಾಗಿದ್ದರು.ಎಲ್ಲಾ ವಿಧದ ವಿದ್ಯೆಯಲ್ಲೂ ಅವರು ನೈಪುಣ್ಯತೆ ಪಡೆದಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ಯ ಎಂಬ ಮೊಹಲ್ಲಾದ ಖಾಝಿಯಾಗಿದ್ದ ಎಸ್ ಕೆ ಸಮಸ್ತದ ವಿದ್ವಾಂಸರಾದ *ಇಬ್ನುಲ್ ಖುತುಬಿ* ಹೇಳುತ್ತಾರೆ
ಈ ಕಾಲದಲ್ಲಿ ಅಗಾಧ ಪಾಂಡಿತ್ಯದ ವಿದ್ವಾಂಸರಿದ್ದರೆ ಅದು ಎರಡು ಮಂದಿ ಮಾತ್ರ. ಒಂದು ಇ ಕೆ ಅಬೂಬಕರ್ ಮುಸ್ಲಿಯಾರ್, ಮತ್ತೊಬ್ಬರು ತಾಜುಲ್ ಉಲಮಾ ಆಗಿದ್ದರು.ಸ್ವಹೀಹುಲ್ ಬುಖಾರಿ ತರಗತಿಗೆ ಕಿತಾಬಿನೊಂದಿಗೆ ಹಾಜರಾಗುತ್ತಿದ್ದರು.ಮುತಅಲ್ಲಿಮರ ಮನಮುಟ್ಟುವ ರೀತಿಯಲ್ಲಾಗಿತ್ತು ಅವರ ಹದೀಸ್ ವಿವರಣೆ.ಮಧ್ಯೆ ಮಧ್ಯೆ ತನ್ನ ಉಸ್ತಾದರುಗಳು ವಿವರಿಸಿದ ತಹಖೀಖಾತುಗಳನ್ನು ಆ ವಿಷಯಕ್ಕೆ ಸಂಬಂಧಿಸಿ ಮುತಅಲ್ಲಿಮರಿಗೆ ತಿಳಿಸುತ್ತಿದ್ದರು. ಒಂದು ವೇಳೆ ತರಗತಿಗೆ ಕಿತಾಬ್ ಇಲ್ಲದೆ ತಾಜುಲ್ ಉಲಮಾ ಬಂದರೆ ಅಂದು ಹದೀಸಿನ ವಿವರಣೆ ಕಿತಾಬ್ ಕೊಂಡು ಬಂದ ದಿವಸಕ್ಕಿಂತ ಹೆಚ್ಚಿರುತ್ತದೆ..
ತಾಜುಲ್ ಉಲಮಾ ಖ.ಸಿ ಉಳ್ಳಾಲದಲ್ಲಿ ಸಾಮಾನ್ಯ ವಾದ ಪುಟ್ಟ ಮನೆಯಂತಿರುವ ರೂಮಿನಲ್ಲಿ ವಾಸಿಸುತ್ತಿದ್ದರು.ಮಂಚದಲ್ಲಿ ನಿದ್ರಿಸುತ್ತಿರಲಿಲ್ಲ.ಯಾವಾಗಲೂ ಕಿತಾಬ್ ನೋಡುವುದರಲ್ಲಿ ತಲ್ಲೀನರಾಗುತ್ತಿದ್ದರು.ನಿದ್ರೆ ಬಂದರೆ ಗೋಡೆಗೆ ಒರಗಿ ಕುಳಿತು ನಿದ್ರಿಸುತ್ತಿದ್ದರು.ಎಚ್ಚರವಾದಾಗಲೆಲ್ಲಾ ಪುನಃ ಕಿತಾಬ್ ನ ಕಡೆ ಗಮನ ಹರಿಸುತ್ತಿದ್ದರು.
*ಇಮಾಮ ಖುಶೈರಿ ರಹಿಮಹುಲ್ಲಾಹ್ ತನ್ನ ಗ್ರಂಥದಲ್ಲಿ ವಿವರಿಸುತ್ತಾರೆ.*
ಅವುಲಿಯಾಗಳಿಗೆ ಅಲ್ಲಾಹನು ನೀಡುವಂತಹ ಕರಾಮತುಗಳಲ್ಲಿ ಅತ್ಯಂತ ಉನ್ನತವಾದ ಕರಾಮತು *ಅಲ್ಲಾಹನಿಗೆ ತಖ್ವಾದೊಂದಿಗೆ ನಿರಂತರವಾಗಿ ಇಬಾದತ್ ಮಾಡುವ ತೌಫೀಖ್ ( ಸೌಭಾಗ್ಯ ) ಲಭಿಸುವುದು,* ಮತ್ತು *ಅಲ್ಲಾಹನು ವಿರೋಧಿಸಿದ ಕಾರ್ಯಗಳಿಂದ,ನಿಷಿದ್ಧವಾದ ಕಾರ್ಯಗಳಿಂದ ಮುಕ್ತನಾಗಿ ಜೀವಿಸುವುದು* ಇಂತಹ ಒಂದು ಉನ್ನತವಾದ ಕರಾಮತು ಲಭಿಸಿದ ಸೌಭಾಗ್ಯವಂತರಾಗಿದ್ದಾರೆ ನಮ್ಮ ಶೈಖುನಾ ತಾಜುಲ್ ಉಲಮಾ ಖ.ಸಿ.
ತನ್ನ ಬದುಕು ಪೂರ್ತಿ ಅಲ್ಲಾಹನಿಗಾಗಿ ಮೀಸಲಿಟ್ಟರು.ಇಲ್ಮ್ ಕಲಿಯುವಿಕೆ,ಇಲ್ಮ್ ಹೇಳಿ ಕೊಡುವಿಕೆ,ಕುರಾನ್ ಓದುವಿಕೆ,ದ್ಸಿಕ್ರ್ ಸ್ವಲಾತ್ ಹೇಳುವಿಕೆ ಹಾಗೂ ಹಲವಾರು ಸುನ್ನತ್ ಜಮಾತಿನ ಸಂಘಟನೆಗಳಿಗೆ ನೇತ್ರತ್ವ ನೀಡುವಿಕೆ ಹೀಗೆ ತನ್ನ ಜೀವನ ಪೂರ್ತಿ ಅಲ್ಲಾಹನ ಮಾರ್ಗದಲ್ಲಿ ವ್ಯಯಿಸಿದರು.

------------------------------

*يا تاج العلماء قدس الله سره العزيز أنت حي في قلوبنا*

ಕಣ್ಮರೆಯಾದರೂ ಮನ್ಮರೆಯಾಗದ ತಾಜುಲ್ ಉಲಮಾ

ತಾಜುಲ್ ಉಲಮಾ ಖ.ಸಿ ರವರ ಬದುಕಿನ ಕೊನೆಯ ಹಂತದಲ್ಲಿ ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಉಂಟಾಗುವ ಏರುಪೇರು ಅವರ ಆರೋಗ್ಯದಲ್ಲಿ ಉಂಟಾಯಿತು.ಆದರೆ ಅದ್ಯಾವುದನ್ನು ತಾಜುಲ್ ಉಲಮಾ ಗಣನೆಗೆ ತೆಗೆದುಕೊಳ್ಳಲಿಲ್ಲ.ತನ್ನ ದಿನನಿತ್ಯದ ಇಬಾದತ್ತುಗಳಿಗೆ ಯಾವುದೇ ಚ್ಯುತಿ ಉಂಟಾಗಲಿಲ್ಲ.ತಾಜುಲ್ ಉಲಮಾ ರವರ ಬಳಿಯಿದ್ದವರು ಮುತ್ತು ಮುಹಮ್ಮದ್ ಮುಸ್ತಫ ಸ.ಅ ರವರ ಮದಹ್ ಕಾವ್ಯವಾದ ಬುರ್ದಾ ಬೈತನ್ನು ಕೇಳಿಸುತ್ತಿದ್ದರು.ನೆಬಿ ಸ.ಅ ಮರ ಮದಹನ್ನು ಆಸ್ವಾದಿಸುತ್ತಾ ದ್ಸಿಕ್ರ್ ನಲ್ಲಿ ತಲ್ಲೀನರಾಗುತ್ತಿದ್ದರು.ಮರಣ ಸಮೀಪಿಸಿದಾಗ ಝಂ ಝಂ ನೀರನ್ನು ಹೀರಿ ತೌಹೀದಿನ ಕಲಿಮತ್ ಲಾಇಲಾಹ ಇಲ್ಲಲ್ಲಾಹ್ ಉಚ್ಛರಿಸುತ್ತಾ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಪಾತ್ರರಾಗಿ ಇಹಲೋಕ ತ್ಯಜಿಸಿದರು.ಹಿಜಿರಾ ವರ್ಷ 1435 ರಬೀವುಲ್ ಆಖಿರ್ 01 ಶನಿವಾರ, ಇಸವಿ ವರ್ಷ 2014 ಫೆಬ್ರವರಿ ತಿಂಗಳ ಒಂದರಂದು ವಫಾತಾದರು. *ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್* ತಾಜುಲ್ ಉಲಮಾ ಖ.ಸಿ ರವರ ಮರಣ ವಾರ್ತೆ ಹರಡುತ್ತಿದ್ದಂತೆ ಜಗತ್ತಿನಾದ್ಯಂತವಿರುವ ಸುನ್ನೀ ಸಮೂಹ ಸ್ತಬ್ದರಾದರು.ಎಲ್ಲರ ಮನಸ್ಸಿನಲ್ಲೂ ಉದ್ಭವಿಸಿದ ಒಂದು ಪ್ರಶ್ನೆ !
*ಇನ್ನು ನಮಗೆ ಯಾರು* ಹೌದು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ವಾರ್ತೆ ಕೇಳಿ ಸುನ್ನೀ ಸಮೂಹ ಅತೀವ ದುಃಖಿತರಾದರು.ಊರಿಗೆ ಊರೇ ಮೌನವಾಯಿತು.ಸುನ್ನೀ ಜಂಇಯ್ಯತುಲ್ ಉಲಮಾ ವಿದ್ವಾಂಸ ಸಭೆಯ ಅಧ್ಯಕ್ಷರಾಗಿದ್ದರು.ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದರು.ಸಾವಿರಾರು ಶಿಷ್ಯರನ್ನು ಸಮೂಹಕ್ಕೆ ಅರ್ಪಿಸಿದ ಮಹಾನ್ ತ್ಯಾಗಿ ಅವರು.ಎಸ್ ಎಸ್ ಎಫ್ ನಿಂದ ಹಿಡಿದು ಸುನ್ನತ್ ಜಮಾಅತಿನ ಸರ್ವ ಸಂಘಟನೆಗಳ ನೇತಾರರಾಗಿದ್ದರು.ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು.ಹಲವಾರು ರಾಜ್ಯಗಳಿಂದ ತಾಜುಲ್ ಉಲಮಾ ಖ.ಸಿ ರವರ ಅಂತಿಮ ದರ್ಶನ ಪಡೆಯಲು ಅವರು ವಫಾತಾದ ಕೇರಳದ ಎಟ್ಟಿಕುಳಂ ಗೆ  ನಾಲ್ದೆಸೆಯಿಂದಲೂ ಜನರು ಹರಿದು ಬಂದರು.ಜನಸಾಗರವೇ ಅಲ್ಲಿ ತುಂಬಿಹೋಯಿತು.ಎಷ್ಟೋ ಕಿಲೋ ಮೀಟರ್ ತನಕ ರಸ್ತೆಗಳು ಜನರಿಂದ ತುಂಬಿ ತುಳುಕಿದವು.ಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯ ಉಲಮಾ ಉಮರಾಗಳ ದಂಡೇ ಅಲ್ಲಿ ಆಗಮಿಸಿತ್ತು.ಹೀಗೆ ಒಬ್ಬರ ಮಯ್ಯಿತ್ ಸಂದರ್ಶಿಸಲು ಸೇರಿದ ಜನಸಾಗರವನ್ನು ಅದಕ್ಕಿಂತ ಮುಂಚೆ ಜಗತ್ತು ಕಂಡಿರಲಿಕ್ಕಿಲ್ಲ.ಅಷ್ಟೊಂದು ಜನಸಮೂಹ ಅಲ್ಲಿ ಸೇರಿತ್ತು.ಇದುವೇ ಜನರೆಡೆಯಲ್ಲಿ ತಾಜುಲ್ ಉಲಮಾ ಖ.ಸಿ ರವರ ಅಂಗೀಕಾರಕ್ಕೆ ಉತ್ತಮ ಉದಾಹರಣೆಯಾಗಿದೆ.ತಾಜುಲ್ ಉಲಮಾ ಖ.ಸಿ ರವರ ಮೇಲೆ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತ್ರತ್ವದಲ್ಲಿ ಮಯ್ಯಿತ್ ನಮಾಜು ಮುಗಿಸಿ ಎಟ್ಟಿಕುಲಂ ನ ಮಸ್ಜಿದು ತ್ತಖ್ವಾ ಸಮೀಪ ಅವರನ್ನು ದಫನ ಮಾಡಲಾಯಿತು.ಹಂತಹಂತವಾಗಿ ಅವರ ಮೇಲೆ ಮಯ್ಯಿತ್ ನಮಾಜು ನಿರ್ವಹಿಸಲಾಯಿತು.ಇಂದು ಎಟ್ಟಿಕ್ಕುಳಂ ಪ್ರಸಿದ್ಧ ಝಿಯಾರತ್ ಕೇಂದ್ರವಾಗಿ ಮಾರ್ಪಟ್ಟಿದೆ.ಹಂತಹಂತವಾಗಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯೂ ತಾಜುಲ್ ಉಲಮಾ ಸುಪುತ್ರರೂ ಆದ ಸಯ್ಯಿದ್ ಫಝಲ್ ಕೋಯಮ್ಮ ನೇತ್ರತ್ವದಲ್ಲಿ ಬೆಳೆದು ಬರುತ್ತಿದೆ.ವಾರ್ಷಿಕ ಉರೂಸ್ ಕಾರ್ಯಕ್ರಮ ನಡೆದು ಬರುತ್ತಿದೆ.
ತಾಜುಲ್ ಉಲಮಾ ಖ.ಸಿ ರವರ ಪದವಿ ಉನ್ನತಿಗೇರಿಸು ಅಲ್ಲಾಹ್.ಅವರ ಬರ್ಕತಿನಿಂದ ನಮ್ಮ ಇಹಪರ ವಿಜಯಗೊಳಿಸು ಅಲ್ಲಾಹ್..ಆಮೀನ್..........
*ಮುಗಿಯಿತು*
ಪ್ರೀತಿಯ ವಾಚಕರೇ....ನನಗೆ ತಿಳಿದಿರುವಷ್ಟು ಮಟ್ಟಿಗೆ ಬರೆದಿದ್ದೇನೆ.ಇಂಶಾಅಲ್ಲಾಹ್...
ಶೀಘ್ರದಲ್ಲಿ ನಿರೀಕ್ಷಿಸಿ......
*ಉಳ್ಳಾಲವನ್ನು ಬೆಳಗಿಸಿದ ಮಹಾ ಪುರುಷ ಸಯ್ಯಿದ್ ಮದನಿ ಖ.ಸಿ*

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...